ದಾವಣಗೆರೆ ಜ.13
ಜಿಲ್ಲೆಯಲ್ಲಿ ರಾಷ್ಟ್ರೀಯ ಮಹಾತ್ಮಾಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಅನುಷ್ಟಾನ ಹಾಗೂ ಜಿಲ್ಲಾ ಚಿಗಟೇರಿ ಆಸ್ಪತ್ರೆಯ ಕಾರ್ಯ ವೈಖರಿ ಬಗ್ಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲು ಜ.27 ರಂದು ಜಿ.ಪಂ.ತುರ್ತು ಸಭೆ ಕರೆಯಲಾಗುವುದು ಎಂದು ಜಿ.ಪಂ.ಅಧ್ಯಕ್ಷೆ ಯಶೋಧಮ್ಮ ಮರುಳಪ್ಪ ತಿಳಿಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜ.13 ರಂದು ಏರ್ಪಡಿಸಲಾಗಿದ್ದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಗಳೂರು ತಾಲ್ಲೂಕಿನ 22 ಗ್ರಾಮ ಪಂಚಾಯ್ತಿಗಳಲ್ಲಿ ತನಿಖೆ ನಡೆಯುತ್ತಿರುವ ಕಾರಣ ಕೆಲಸ ಕಾರ್ಯಗಳು ಸ್ಥಗಿತಗೊಂಡಿವೆ. ನರೇಗಾದಡಿಯೂ ಕೆಲಸ ನಡೆಯುತ್ತಿಲ್ಲ. ಇದು ಬರಪೀಡಿತ ತಾಲ್ಲೂಕಾಗಿದ್ದು ಜನರು ಜಿ.ಪಂ ಸದಸ್ಯರ ಬಾಗಿಲಿಗೆ ಬರುತ್ತಿದ್ದಾರೆ ಎಂದು ಜಗಳೂರು ತಾಲ್ಲೂಕಿನ ಸದಸ್ಯರು ಸಭೆಯಲ್ಲಿ ದೂರಿದರು.
ಸದಸ್ಯೆ ಶಾಂತಕುಮಾರಿ ಮಾತನಾಡಿ, ಜಗಳೂರು ತಾಲ್ಲೂಕಿನ ಗ್ರಾ.ಪಂ ಗಳಲ್ಲಿ ಅವ್ಯವಹಾರ ನಡೆದಿದ ಎನ್ನುವ ಕಾರಣಕ್ಕೆ 22 ಗ್ರಾ.ಪಂ ಗಳಲ್ಲಿ ತನಿಖೆ ನಡೆಯುತ್ತಿರುವ ಕಾರಣ ಕೆಲಸಗಳು ಕಾರ್ಯಗಳು ನಿಂತಿವೆ. ಪಿಡಿಓಗಳು ಬೇರೆಡೆ ವರ್ಗಾವಣೆ ಆಗಿ ಹೋಗುತ್ತಿದ್ದಾರೆ. ಹೀಗಾದರೆ ತಾಲ್ಲೂಕಿನಲ್ಲಿ ಕೆಲಸ ಹೇಗೆ ಆಗಬೇಕು ಎಂದು ಪ್ರಶ್ನಿಸಿದರು.
ಅಣಬೂರು ಕ್ಷೇತ್ರದ ಸದಸ್ಯೆ ಸವಿತಾ ಮಾತನಾಡಿ, ಒಬ್ಬ ಪಿಡಿಓ ಮಾಡಿದ ತಪ್ಪಿಗೆ ಇಡೀ ತಾಲ್ಲೂಕಿಗೆ ಅನಾನುಕೂಲವಾಗಿದೆ. ಜನರು ಸದಸ್ಯರ ಮನೆ ಬಾಗಿಲಿಗೆ ಬಂದು ಸಮಸ್ಯೆ ಹೇಳುತ್ತಿದ್ದಾರೆ. ರಾಷ್ಟ್ರೀಯ ಮಹಾತ್ಮಾಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯೂ ಕೆಲಸ ನೀಡಲಾಗುತ್ತಿಲ್ಲ. ಆದ್ದರಿಂದ ತಾಲ್ಲೂಕಿನಲ್ಲಿ ಎಲ್ಲ ಕೆಲಸಗಳನ್ನು ಪುನರಾರಂಭಿಸಬೇಕು ಎಂದರು.
ಸೊಕ್ಕೆ ಕ್ಷೇತ್ರದ ಸದಸ್ಯರಾದ ಎಸ್.ಕೆ.ಮಂಜುನಾಥ್, ತನಿಖೆ ಕೈಗೊಂಡ 22 ಗ್ರಾ.ಪಂ ಗಳ ಪೈಕಿ ಕೆಲವು ಪಿಡಿಓ ಗಳ ಮೇಲೆ ಕ್ರಮ ಕೈಗೊಂಡರೆ, ಕೆಲವರ ಮೇಲೆ ಕ್ರಮ ಜರುಗಿಸಿಲ್ಲ. ಕೆಲವರ ಬಗ್ಗೆ ಶಿಸ್ತು ಕ್ರಮ ಕೈಗೊಳ್ಳುವಂತೆ ನಾನು ಹಾಗೂ ಸದಸ್ಯೆ ಸವಿತಾ ಅವರು ಪತ್ರ ಬರೆದಿದ್ದೆವು. ಆದರೆ ಕೆಲ ನಿರಪರಾಧಿಗಳನ್ನು ಅಮಾನತ್ತುಗೊಳಿಸಲಾಗಿದೆ. ಹಾಗೂ ಅವ್ಯವಹಾರ ನಡೆದಿರುವೆಡೆ ತನಿಖಾ ತಂಡ ಅಂತಹ ತನಿಖೆಯೇ ಕೈಗೊಂಡಿಲ್ಲ ಬದಲಾಗಿ ಅವ್ಯವಹಾರ ಹೆಚ್ಚು ಆಗದ ಗ್ರಾ.ಪಂ ಗಳಲ್ಲಿ ಸುದೀರ್ಘ ತನಿಖೆ ಕೈಗೊಳ್ಳಲಾಗಿದೆ. ನಮ್ಮ ತಾಲ್ಲೂಕಿನಲ್ಲಿ ಕೆಲಸ ಮಾಡಲು ಅಧಿಕಾರಿಗಳು ಹೆದರುತ್ತಿದ್ದಾರೆ ಅಂತಹ ಸ್ಥಿತಿ ಬಂದಿದೆ ಎಂದರು.
ಪಿಡಿಓ ಗಳನ್ನು ಯಾವ ಆದೇಶದ ಮೇಲೆ ಅಥವಾ ಯಾವ ರೀತಿ ಸಸ್ಪೆಂಡ್ ಮಾಡಲಾಗಿದೆ ಹಾಗೂ ಅವರನ್ನು ಹಿಂತೆಗೆದುಕೊಳ್ಳಲಾಗಿದೆ ಎಂಬ ಮಾಹಿತಿಯನ್ನು ದಾಖಲೆ ಸಮೇತ ಒದಗಿಸಬೇಕು, ಗ್ರಾ.ಪಂ ಗಳ ತನಿಖೆ ವರದಿ ನೀಡಬೇಕೆಂದು ಒತ್ತಾಯಿಸಿದರು. ಹಾಗೂ ನರೇಗಾದಡಿ ಏಕೆ ಕೆಲಸ ನಿಲ್ಲಿಸಲಾಗಿದೆ ಎಂದು ಕೇಳಿದರು.
ಸಿಇಓ ಪದ್ಮಾ ಬಸವಂತಪ್ಪ ಮಾತನಾಡಿ, ಜಗಳೂರು ತಾಲ್ಲೂಕಿನಲ್ಲಿ ನರೇಗಾ ಕಾಮಗಾರಿಗಳನ್ನು ನಿಲ್ಲಿಸುವಂತೆ ಜಿ.ಪಂ ನಿಂದ ನಿರ್ದೇಶನ ನೀಡಿಲ್ಲ. ಫಾರ್ಮ್ 6 ನೀಡಿದ ಕಡೆ ಕೆಲಸ ನೀಡಲಾಗಿದೆ. ಹಾಗೂ ಪಿಡಿಓಗಳನ್ನು ನಿಯಮಾನುಸಾರ ಅಮಾನತ್ತು ಮಾಡಲಾಗಿದೆ. ಹಾಗೂ ಅದೇ ರೀತಿ ನಿಯಮಾನುಸಾರ ಅವರನ್ನು ಹಿಂತೆಗೆದುಕೊಳ್ಳಲಾಗಿದೆ. ಇದರಲ್ಲಿ ಯಾವುದೇ ಮುಚ್ಚು ಮರೆ ಇಲ್ಲ ಎಂದಾಗ ಸದಸ್ಯ ಎಸ್.ಕೆ.ಮಂಜುನಾಥ್ ಕೆಲವರನ್ನು ಹಿಂತೆಗೆದುಕೊಳ್ಳಬಾರದೆಂದು ನಾವು ನಿಮಗೆ ಪತ್ರ ಬರೆದರೂ ಹಿಂತೆಗೆದುಕೊಂಡಿರುವುದು ಏಕೆ ಎಂದು ಪ್ರಶ್ನಿಸಿದರು.
ಸಿಇಓ ಉತ್ತರಿಸಿ, ಅವರನ್ನು ಹಾಗೆ ಸುಮ್ಮನೆ ಕೂಡಲು ಬಿಡಲು ಬರುವುದಿಲ್ಲ. ನಿಯಮಾನುಸಾರ ಅವರನ್ನು ಹಿಂತೆಗೆದುಕೊಳ್ಳಬೇಕು. ಈ ರೀತಿಯಲ್ಲಿ ಹಿಂತೆಗೆದುಕೊಂಡು ಅವರನ್ನು ಬೇರೆ ಗ್ರಾ.ಪಂ ಗಳಿಗೆ ನಿಯೋಜಿಸಲಾಗಿದೆ ಹಾಗೂ ಅವರ ವಿರುದ್ದ ವಿಚಾರಣೆ ನಡೆಯುತ್ತಿದೆ. ಈ ಬಗ್ಗೆ ಸದಸ್ಯರಿಗೆ ದಾಖಲೆಗಳನ್ನು ನೀಡಲಾಗುವುದು ಎಂದರು.
ಸದಸ್ಯರಾದ ವಾಗೀಶ್‍ಸ್ವಾಮಿ ಮಾತನಾಡಿ, ಜಗಳೂರು ತಾಲ್ಲೂಕಿನ ಕ್ಯಾಸನಹಳ್ಳಿ ಮತ್ತು ಹನುಮಂತಾಪುರದ ಪಿಡಿಓ ಗಳು ಹಗರಣಗಳಲ್ಲಿ ಪಾಲ್ಗೊಂಡಿದ್ದಾರೆ. ಪಿಡಿಓ ಜಯಕುಮಾರ್ ಎಂಬವವರು ಉದ್ಯೋಗ ಖಾತ್ರಿ ಯೋಜನೆಯಡಿ 2018-19 ನೇ ಸಾಲಿನಲ್ಲಿ ಕ್ಯಾಸನಹಳ್ಳಿ ಮತ್ತು ಹನುಮಂತಾಪುರದಲ್ಲಿ ಉದ್ದೇಶಪೂರ್ವಕವಗಿ ಸಾವಿರಾರು ಜಾಬ್‍ಕಾರ್ಡ್‍ಗಳನ್ನು ರದ್ದು ಮಾಡಿದ್ದಾರೆ. ಇಲ್ಲೆಲ್ಲೂ 60:40 ಅನುಪಾತ ಅನುಸರಿಸಿಲ್ಲ. ಹಾಗೂ ಸುಮಾರು 6 ಕೋಟಿ ಹಗರಣ ಮಾಡಿದ್ದು ಈ ಪಿಡಿಓ ವಿರುದ್ದ ಕ್ರಿಮಿನಲ್ ಮೊಕದ್ದಮೆ ಹೂಡಬೇಕೆಂದು ಒತ್ತಾಯಿಸಿದರು.
ಲೋಕಿಕೆರೆ ಕ್ಷೇತ್ರದ ಸದಸ್ಯರಾದ ಓಬಳಪ್ಪ ಮಾತನಾಡಿ, ನಾವು ಹೇಳುತ್ತಲೇ ಇರುತ್ತೇವೆ. ಹಗರಣಗಳು ಹೆಚ್ಚುತ್ತಲೇ ಇವೆ. ಆದ್ದರಿಂದ ಇಂದೇ ಆ ಅಧಿಕಾರಿ ವಿರುದ್ದ ಕ್ರಿಮಿನಲ್ ಮೊಕದ್ದಮೆ ಹೂಡಬೇಕೆಂದರು. ಇದಕ್ಕೆ ಅನೇಕ ಸದಸ್ಯರು ದನಿಗೂಡಿಸಿದರೆ, ಸದಸ್ಯ ಜೆ.ಸಿ.ನಿಂಗಣ್ಣ ಯಾವಾಗ, ಎಷ್ಟು ಸಮಯದಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಬೇಕೆಂದು ಒತ್ತಾಯಿಸಿದರು.
ಸಿಇಓ ಪ್ರತಿಕ್ರಿಯಿಸಿ, ಜಗಳೂರು ತಾಲ್ಲೂಕಿನಲ್ಲಿ ಸಾಕಷ್ಟು ಕ್ರಿಮಿನಲ್ ಪ್ರಕರಣ ಬುಕ್ ಆಗಿವೆ. ಎಸ್‍ಪಿ ಯವರು ಸಹ ಈ ಪ್ರಕರಣಗಳಲ್ಲಿ ಸಹಕರಿಸುತ್ತಿದ್ದಾರೆ. ಈಗ ದೂರಲಾದ ಪಿಡಿಓ ಬಗ್ಗೆ ತಕ್ಷಣವೇ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಇನ್ನೊಂದು ವಾರದಲ್ಲಿ ಕ್ರಿಮಿನಲ್ ದಾವೆ ಹೂಡುವ ಬಗ್ಗೆ ಮಾಹಿತಿ ನೀಡುತ್ತೇನೆ ಎಂದರು.
ಸದಸ್ಯರಾದ ಬಸವರಾಜಪ್ಪನವರು ನರೇಗಾದಡಿ ಪಾವತಿ ಬಾಕಿ ಇದೆ. ಅನುದಾನದ ಕೊರತೆ ಇದೆ. ಆದ್ದರಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಅನುದಾನ ತರಿಸಿಕೊಳ್ಳಬೇಕೆಂದರು.
ಜಿ.ಪಂ. ಉಪಾಧ್ಯಕ್ಷ ಸುರೇಂದ್ರ ನಾಯ್ಕ ಮಾತನಾಡಿ, ನರೇಗಾದಡಿ ಕೂಲಿ ಮತ್ತು ಸಾಮಗ್ರಿ ಘಟಕದಡಿ 60:40 ಅನುಪಾತ ಅನುಸರಿಸದ ಗ್ರಾಮಗಳ ಬಿಲ್ಲನ್ನು ಬಾಕಿ ಇಡಬೇಕು ಎಂದರು. 80 ಲಕ್ಷ ಕೂಲಿ ಪಾವತಿ ಬಾಕಿ
ಜಿ.ಪಂ.ಉಪ ಕಾರ್ಯದರ್ಶಿ ಬಿ.ಆನಂದ್ ಪ್ರತಿಕ್ರಿಯಿಸಿ ನವೆಂಬರ್ 10 ರವರೆಗೆ ಕೂಲಿ ಪಾವತಿಯಾಗಿದೆ.
ರೂ.80 ಲಕ್ಷ ಮಾತ್ರ ಬಾಕಿ ಇದ್ದು, ಶೇ.90 ಕಾರ್ಮಿಕ ವೇತನ ಪಾವತಿಯಾಗಿದೆ. ಸಾಮಗ್ರಿ ಘಟಕದಡಿ 16.65 ಕೋಟ
ಿ ಪಾವತಿಯು ಬಾಕಿ ಇದ್ದು ಕೇಂದ್ರ ಸರ್ಕಾರದಿಂದ ಈ ತಿಂಗಳಲ್ಲಿ ಬಿಡುಗಡೆಯಾಗಲಿದೆ. ಹಾಗೂ ಅನುದಾನ ಬಿಡುಗಡೆಗೊಳಿಸುವಂತೆ ಜಿ.ಪಂ ಯಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ನರೇಗಾ ಕುರಿತು ತುರ್ತು ಸಭೆ : ಜಿ.ಪಂ ಉಪಾಧ್ಯಕ್ಷ ಸುರೇಂದ್ರನಾಯ್ಕ ಮಾತನಾಡಿ, ನರೇಗಾದಡಿ ಹೊನ್ನಾಳಿ ಮತ್ತು ಚನ್ನಗಿರಿ ತಾಲ್ಲೂಕುಗಳ ಕೊಳಗೆಬಾವಿ ಅಥವಾ ಬೋರ್ ಇಲ್ಲದ ಒಂದು ಹೆಕ್ಟೇರ್ ಅಡಿಕೆ ಬೆಳೆಗೆ ರೂ.2.25 ಲಕ್ಷ ಅನುದಾನಕ್ಕೆ ಆರು ತಿಂಗಳಿನಿಂದ ಹೋರಾಟ ಮಾಡಲಾಗುತ್ತಿದೆ. ಆದರೆ ವೆಂಡರ್‍ಗಳಿಗೆ ಮಿತಿಯೇ ಇಲ್ಲದೇ ಹಣ ಪಾವತಿಸಲಾಗುತ್ತಿದೆ. ನರೇಗಾ ಕುರಿತು ತುರ್ತು ಸಭೆ ನಡೆಸಬೇಕೆಂದರು.
ಸದಸ್ಯರಾದ ಎಸ್.ಕೆ.ಮಂಜುನಾಥ್, ನರೇಗಾದಡಿ ವೆಂಡರ್ ಮಿತಿ ಎಷ್ಟು? ಹಿಂದೆ 17 ರಿಂದ 18 ಕೋಟಿ ವರೆಗೆ ಒಬ್ಬ ವೆಂಡರ್‍ಗೆ ಪಾವತಿಸಲಾಗಿದೆ ಎಂದರು.
ಜಿ.ಪಂ. ಸಹಾಯಕ ಕಾರ್ಯಕ್ರಮ ಅಧಿಕಾರಿ ಆನಂದ್ ಪ್ರತಿಕ್ರಿಯಿಸಿ, ವೆಂಡರ್ ಪಾವತಿಗೆ ಮಿತಿ ಇಲ್ಲ. ನಿಯಮಾನುಸಾರ ದರಪಟ್ಟಿ ಕರೆದು ಕಡಿಮೆ ದರ ನಮೂದಿಸಿದ ಸರಬರಾಜುದಾರರಿಗೆ(ವೆಂಡರ್) ನಿಗದಿತ ಅವಧಿಯೊಳಗೆ ಜಿಎಸ್‍ಟಿ ಪಾವತಿಸುವ ಷರತ್ತಿಗೊಳಪಟ್ಟು ಕಾರ್ಯಾದೇಶ ನೀಡಲಾಗುತ್ತದೆ. ಜಿಎಸ್‍ಟಿ ನಿಗದಿತ ಸಮಯದಲ್ಲಿ ಕಟ್ಟದಿದ್ದರೆ ಅವರ ಖಾತೆ ಡಿಆಕ್ಟಿವ್ ಆಗುತ್ತದೆ ಎಂದರು.
ಜಿ.ಪಂ. ಅಧ್ಯಕ್ಷರು ಮಾತನಾಡಿ, ಜ.27 ರಂದು ನರೇಗಾ ಯೋಜನೆಗೆ ಸಂಬಂಧಿಸಿದಂತೆ ಚರ್ಚಿಸಲು ಜಿ.ಪಂ ನಲ್ಲಿ ಸಭೆ ಕರೆಲಾಗಿದೆ ಎಂದರು.
ಸದಸ್ಯ ಜಿ.ಸಿ.ನಿಂಗಪ್ಪ ವಸತಿ ಯೋಜನೆಗಳಡಿ 38 ಫಲಾನುಭವಿಗಳಿಗೆ ಎರಡು ಕಂತಿನ ಪಾವತಿ ಮಾತ್ರ ಆಗಿದೆ. ಮೂರನೇ ಪಾವತಿಯಾಗದ ಕಾರಣ ಮನೆಯೂ ಅರ್ಧಕ್ಕೆ ನಿಂತಿವೆ. ಈ ಬಗ್ಗೆ ಕ್ರಮ ವಹಿಸುವಂತೆ ಮನವಿ ಮಾಡಿದರು.
ಸಿಇಓ ಪ್ರತಿಕ್ರಿಯಿಸಿ ರಾಜ್ಯಾದ್ಯಂತ ಈ ಸಮಸ್ಯೆ ಇದೆ. ಹಲವೆಡೆ ವಸತಿ ಯೋಜನೆಯಡಿ ಆದ ಅವ್ಯವಹಾರಕ್ಕಾಗಿ ವಸತಿ ವಿಜಿಲ್ ಆ್ಯಪ್ ಜಾರಿ ಮಾಡಿ ಪರಿಶೀಲಿಸುತ್ತಿದೆ. ಗ್ರಾಮ ಮಟ್ಟದಲ್ಲಿ ಪಿಡಿಓ ಫೋಟೊ ತೆಗೆದು ಇಓ ಗೆ ಕಳುಹಿಸುತ್ತಾರೆ. ಇಓ ಪರಿಶೀಲಿಸಿ ಸಿಇಓ ಲಾಗಿನ್‍ಗೆ ಬರುತ್ತದೆ. ಸಿಇಓ ಅನುಮೋದಿಸಿ ಸರ್ಕಾರಕ್ಕೆ ಕಳುಹಿಸಿಕೊಡತ್ತಾರೆ ಎಂದರು.
ಕಿಸಾನ್ ಸಮ್ಮಾನ್ ಯೋಜನಯಡಿ ಬಿಡುಗಡೆಯಾದ ರೂ.2 ಸಾವಿರಗಳನ್ನು ಬ್ಯಾಂಕಿನವರು ಸಾಲಕ್ಕೆ ಪಾವತಿಸಿಕೊಂಡಿರುತ್ತಾರೆಂದು ದೂರಿದರು. ಸಿಇಓ ಪ್ರತಿಕ್ರಿಯಿಸಿ, ಬ್ಯಾಂಕ್‍ನವರು ಹಾಗೆ ಮಾಡಲು ಬರುವುದಿಲ್ಲ. ಅವರ ಮಾಹಿತಿ ನೀಡಿದಲ್ಲಿ ಅದನ್ನು ವಾಪಸ್ಸು ಹಾಕಿಸುತ್ತೇವೆ ಎಂದರು.
ಸರ್ಕಾರಿ ಪ್ರೌಢಶಾಲೆಗಳಿಗೆ ರಾಜ್ಯ ಮಟ್ಟದಿಂದ ನೀಡಲಾಗಿರುವ ಕಂಪ್ಯೂಟರ್‍ಗಳು ಹಾಳಾಗಿರುವ ಬಗ್ಗೆ ಹಿಂದಿನ ಸಭೆಯಲ್ಲಿ ಸದಸ್ಯ ಓಬಳಪ್ಪನವರು ಚರ್ಚಿಸಿದ್ದು, ಈ ಕಂಪ್ಯೂಟರ್‍ಗಳ ರಿಪೇರಿ ಮಾಡಿಸಲು 54.42 ಲಕ್ಷ ಅವಶ್ಯಕತೆ ಇದೆ ಎಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಹಾಗೂ ಜಗಳೂರು ತಾಲ್ಲೂಕಿನ ತೋರಣಘಟ್ಟ ಶಾಲೆ ಶಿಥಿಲಗೊಂಡಿದ್ದು ಬೇರೆಡೆ ಸ್ಥಳಾಂತರಿಸುವಂತೆ ತಿಳಿಸಲಾಗಿತ್ತು ಇನ್ನು 15 ದಿನಗಳಲ್ಲಿ ಶಾಲೆಯನ್ನು ಸ್ಥಳಾಂತರಿಸಲಾಗುವುದು ಎಂದು ಡಿಡಿಪಿಐ ಮಾಹಿತಿ ನೀಡಿದರು.
ಸದಸ್ಯ ಬಸವರಾಜ್ ಕೆ.ಎಸ್. ಮಾತನಾಡಿ, ಸರ್ಕಾರಿ ಜಮೀನನ್ನು ವಿದ್ಯಾಸಂಸ್ಥೆ ಆರಂಭಿಸುವ ಉದ್ದೇಶದಿಂದ ಖರೀದಿಸಿದ ಖಾಸಗಿಯವರು, ಆ ಜಾಗವನ್ನು ಬೇರೆಯವರಿಗೆ ಮಾರಾಟ ಮಾಡಿರುವ ಪ್ರಕರಣ ನಗರದ ಇಂಡಸ್ಟ್ರಿಯಲ್ ಏರಿಯಾದಲ್ಲಿ ನಡೆದಿದೆ. ಈ ಬಗ್ಗೆ ಡಿಡಿಪಿಐ ರವರು ಶಿಸ್ತಿನ ಕ್ರಮ ಕೈಗೊಂಡಿರುವುದಲ್ಲ ಏಕೆ, ಈ ಬಗ್ಗೆ ಸೂಕ್ತ ಕ್ರಮ ಆಗಬೇಕೆಂದರು.
ಡಿಡಿಪಿಐ ಪರಮೇಶ್ವರಪ್ಪ ಮಾತನಾಡಿ, ನಾನು ಆ ಸ್ಥಳಕ್ಕೆ ಭೇಟಿ ನೀಡಿ, ಈ ಜಮೀನಿನ ಕುರಿತಾಗಿ ಮಾಹಿತಿ ನೀಡುವಂತೆ ತಹಶೀಲ್ದಾರರಿಗೂ ಪತ್ರ ಬರೆದಿದ್ದೇನೆ. ಇನ್ನು 10 ದಿನಗಳ ಒಳಗಾಗಿ ಈ ಬಗ್ಗೆ ಮಾಹಿತಿ ನೀಡುತ್ತೇನೆ ಎಂದರು. ಸಿಇಓ ಪ್ರತಿಕ್ರಿಯಿಸಿ, ಈ ಜಮೀನಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಿರಿ ಎಂದರು.
ಜಿ.ಪಂ.ಉಪಾಧ್ಯಕ್ಷ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಲ್ಲಿ ಕೊಠಡಿಗಳನ್ನು ನೀಡದಿದ್ದರೂ ಪರವಾಗಿಲ್ಲ. ಮರದ ನೆರಳಲ್ಲಿ ಕೂತು ಓದಬಹುದು. ಹೆಣ್ಣುಮಕ್ಕಳಿಗೆ ಶೌಚಾಲಯದ ತುಂಬಾ ಅವಶ್ಯಕತೆ. ಆದ್ದರಿಂದ ನರೇಗಾದಡಿ ಶೌಚಾಲಯ ಕಟ್ಟಿಸಬೇಕೆಂದರು. ಸಿಇಓ ಪ್ರತಿಕ್ರಿಯಿಸಿ ನರೇಗಾದಡಿ ಅನುಪಾತ ಸಮಸ್ಯೆ ಇರುವುದರಿಂದ ಸ್ವಚ್ಚ ಭಾರತ ಮಿಷನ್ ಯೋಜನೆಯಡಿ ಅನುದಾನ ಬಂದಿದ್ದು ಮುಂದಿನ ಶೈಕ್ಷಣಿಕ ವರ್ಷಕ್ಕೆ ಶೌಚಾಲಯಗಳು ಸಿದ್ದಗೊಳ್ಳಲಿವೆ ಎಂದರು.
ಜಿ.ಪಂ ಉಪಾಧ್ಯಕ್ಷ ಸುರೇಂದ್ರನಾಯ್ಕ ಮಾತನಾಡಿ, ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಕಾರ್ಡ್‍ಗಳ ಕುರಿತು ಸಾರ್ವಜನಿಕರಿಗೆ ಸರಿಯಾದ ಮಾಹಿತಿಯನ್ನು ಜಿಲ್ಲಾಸ್ಪತ್ರೆಗಳು ನೀಡುತ್ತಿಲ್ಲ. ಕಾರ್ಡ್ ನೀಡುವಾಗ ಸರಿಯಾದ ಮಾಹಿತಿಯನ್ನು ಜನತೆಗೆ ಒದಗಿಸಬೇಕು. ರೋಗಿಗಳು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡುವುದನ್ನು ತಪ್ಪಿಸಬೇಕು ಎಂದು ಸೂಚನೆ ನೀಡಿದರು.
ಸದಸ್ಯ ಬಸವಂತಪ್ಪ , ತುರ್ತು ಸಮಯದಲ್ಲಿ ಸಹ ಆಯುಷ್‍ಮಾನ್ ಕಾರ್ಡ್ ಸಾರ್ವಜನಿಕರ ಉಪಯೋಗಕ್ಕೆ ಬರುತ್ತಿಲ್ಲ. ಹಾರ್ಟ್ ಅಟ್ಯಾಕ್ ಆಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೊಳಗಾದವರನ್ನು ಡಿಸ್‍ಚಾರ್ಜ್ ಮಾಡಿಸಿಕೊಂಡು ಬಂದು ಜಿಲ್ಲಾಸ್ಪತ್ರೆಯಲ್ಲಿ ರೆಫರೆನ್ಸ್ ತೆಗೆದಕೊಳ್ಳುವುದು ದುಬಾರಿ ಮತ್ತು ಜೀವದ ಜೊತೆ ಆಟ ಆಡಿದಂತೆ ಆದ್ದರಿಂದ ಈ ನಿಯಮವನ್ನು ಸಡಿಲಗೊಳಿಸಬೇಕೆಂದರು.
ಜಿಲ್ಲಾ ಚಿಗಟೇರಿ ಆಸ್ಪತ್ರೆಯ ಅಧೀಕ್ಷಕರು ಉತ್ತರಿಸಿ, ತುರ್ತು ಚಿಕಿತ್ಸೆಯಲ್ಲಿ ಯಾವುದೇ ಪತ್ರವನ್ನು ಆಸ್ಪತ್ರೆಯವರು ಕೇಳುವಂತಿಲ್ಲ. ಪ್ರೊಸಿಜರ್ 4ರಲ್ಲಿ ಇದರ ವಿವರಣೆಯನ್ನು ನೀಡಲಾಗಿದ್ದು, ರೆಫರಲ್ ಆಸ್ಪತ್ರೆಯವರೇ ಪ್ರೀ ಆಥರೈಸೇಷನ್ ಮಾಡಿಬಹುದು. ಎಮರ್ಜೆನ್ಸಿ ಕೋಡ್ ಹಾಕಿ ಚಿಕಿತ್ಸೆ ಮಾಡಬಹುದು ಎಂದಾಗ ಸಿಇಓ ಈ ಬಗ್ಗೆ ಎಲ್ಲರಿಗೂ ಮಾಹಿತಿ ನೀಡಿರಿ ಎಂದರು.
ಸದಸ್ಯ ಬಸವರಾಜ್.ಕೆ.ಎಸ್ ಮಾತನಾಡಿ, ಪ್ರತಿ ವರ್ಷ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಜಿ.ಪಂ ವಲಯದಡಿ ಅನುದಾನ ಬಿಡುಗಡೆ ಆಗುತ್ತಿದೆ. ಆದರೆ ವೈದ್ಯರೇ ಯಾವುದಕ್ಕೆ ಖರ್ಚು ಮಾಡಬೇಕೆಂದು ನಿರ್ಧರಿಸಿ ಮನ ಬಂದಂತೆ ಖರ್ಚು ಮಾಡುತ್ತಿದ್ದಾರೆ. ಆ ಭಾಗದ ಸದಸ್ಯರ ಸಭೆ ಕರೆದು ಚರ್ಚಿಸುವುದಿಲ್ಲ. ಕಳೆದ ಎರಡು ಸಾಲಿನಲ್ಲಿ ಈ ಅನುದಾನÀ ಯಾವುದಾಕ್ಕಗಿ ಖರ್ಚಾಗಿದೆ ಎಂಬ
ಮಾಹಿತಿಯನ್ನು ಡಿಹೆಚ್‍ಓ ಸಭೆಗೆ ನೀಡಬೇಕು ಎಂದರು.
ಡಿಹೆಚ್‍ಓ, ಯಾವ ಉದ್ದೇಶಗಳಿಗೆ ಅನುದಾನ ಬಂದಿದೆಯೋ ಅದೇ ಉದ್ದೇಶಗಳಿಗೆ ಅನುದಾನವನ್ನು ಉಪಯೋಗಿಸಲಾಗಿದೆ. ಗ್ರಾಮ ಪಂಚಾಯಿತಿಯ ಅಧ್ಯಕ್ಷರ ನೇತೃತ್ವದಲ್ಲಿ ಸಭೆ ನಡೆಸಿ ಅನುದಾನವನ್ನು ಉಪಯೋಗಿಸಲಾಗುತ್ತಿದ್ದು, ಇನ್ನು ಮುಂದೆ ಜಿ.ಪಂ ಸದಸ್ಯರನ್ನು ಕರೆಸುವಂತೆ ತಿಳಿಸುತ್ತೇನೆ ಎಂದರು.
ಜಿ.ಪಂ ನ ಉಪಧ್ಯಾಕ್ಷ ಸುರೇಂದ್ರ ನಾಯ್ಕ ಮಾತನಾಡಿ, ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳಿಗೆ ಯಾವುದೇ ಸೌಲಭ್ಯಗಳನ್ನು ಸರಿಯಾಗಿ ನೀಡುತ್ತಿಲ್ಲ. ಕೀಳು ಮೂಳೆ ವಿಭಾಗದಲ್ಲಿ ರೋಗಿಗಳನ್ನು ಆಪರೇಷನ್‍ಗೂ ಮುನ್ನ ಒಂದು ವಾರ ಇಟ್ಟುಕೊಳ್ಳಲಾಗುತ್ತದೆ. ಆದರೆ ಅವರಿಗೆ ಒಂದು ಕಮೋಡ್ ವ್ಯವಸ್ಥೆ ಇಲ್ಲ. ಕೀಲು ಮೂಳೆ ಮುರಿದ ರೋಗಿಗಳಿಗೆ ತುಂಬಾ ತೊಂದರೆಯಾಗುತ್ತಿದೆ. ಜಿಲ್ಲಾಸ್ಪತ್ರೆಯಲ್ಲಿ ಯಾವ ವ್ಯವಸ್ಥೆಯೂ ಸರಿ ಇಲ್ಲ. ಈ ಬಗ್ಗೆ ಆಸ್ಪತ್ರೆ ಅಧೀಕ್ಷಕರು ವಿವರಣೆ ನೀಡಬೇಕು ಎಂದರು.
ಸಭೆಯಲ್ಲಿ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಫಕೀರಪ್ಪ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಲೋಕೇಶ್ವರ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಜಿ.ವೀರಶೇಖರಪ್ಪ, ಜಿಲ್ಲಾ ಪಂಚಾಯತ್ ಸದಸ್ಯರು, ಮುಖ್ಯ ಲೆಕ್ಕಾಧಿಕಾರಿ ಮಧು.ಡಿ.ಆರ್, ಮುಖ್ಯ ಯೋಜನಾಧಿಕಾರಿ ಎನ್.ಲೋಕೇಶ್, ಜಿಲ್ಲಾ ಮಟ್ಟದ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.