ದಾವಣಗೆರೆ. ಫೆ.16
ಪೊಲೀಸ್ ವೃತ್ತಿಯಲ್ಲಿ ಆಸಕ್ತಿ ಬಹು ಮುಖ್ಯ ಪಾತ್ರ ವಹಿಸುತ್ತದೆ. ಆಸಕ್ತಿಯೊಂದಿಗೆ ಅನ್ವೇಷಣಾ ಗುಣ ಮತ್ತು ವೈಜ್ಞಾನಿಕ ಮನೋಧರ್ಮಗಳನ್ನು ಹೊಂದಿ ತನಿಖೆಯನ್ನು ಸರಳೀಕರಿಸಿದಲ್ಲಿ ಪ್ರಕರಣವನ್ನು ಸಾಬೀತುಪಡಿಸಲು ಸಾಧ್ಯ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಸಲಹೆ ನೀಡಿದರು.
ಇಂದು ಜಿಲ್ಲಾ ಪೊಲೀಸ್ ಕಚೇರಿಯ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ವಲಯಮಟ್ಟದ ಪೊಲೀಸ್ ಕರ್ತವ್ಯ ಕೂಟ-2019 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪೊಲೀಸ್ ಇಲಾಖೆಯ ಪ್ರತಿ ಸಿಬ್ಬಂದಿಗೆ ಅತಿ ಅವಶ್ಯಕವಾಗಿ ಇರಬೇಕಾದ ಗುಣ ಆಸಕ್ತಿ. ಒಂದು ಪ್ರಕರಣದ ಕುರಿತು ಆಸಕ್ತಿಯೊಂದಿಗೆ ಅನ್ವೇಷಣೆಯಲ್ಲಿ ತೊಡಗಿಕೊಂಡರೆ ಎಂತಹ ತನಿಖೆಯನ್ನಾದರೂ ಮಾಡಬಹುದು. ಇದರ ಜೊತೆಗೆ ವೈಜ್ಞಾನಿಕ ಮನೋಧರ್ಮ ಮತ್ತು ತಂತ್ರಜ್ಞಾನ ಬಳಸಿಕೊಂಡಲ್ಲಿ ತನಿಖೆಯನ್ನು ಸುಲಭವಾಗಿ ಮತ್ತು ಸರಳವಾಗಿ ಮಾಡಬಹುದು. ಇಂದು ತಂತ್ರಜ್ಞಾನ ಸಾಕಷ್ಟು ಮುಂದುವರೆದಿದೆ. ಆದರೆ ಅದನ್ನು ಉಪಯೋಗಿಸಿಕೊಳ್ಳುವ ಆಸಕ್ತಿ ಬೇಕಿದೆ ಎಂದರು.
ಬತ್ತಿ ಬಳಸಿ ದೀಪ ಹೇಗೆ ಹಚ್ಚಬೇಕು, ಗಿಡಕ್ಕೆ ಎಷ್ಟು ಮತ್ತು ಹೇಗೆ ನೀರು ಹಾಕಬೇಕು ಎನ್ನುವುದರಿಂದ ಹಿಡಿದು ಪ್ರತಿನಿತ್ಯ ವಿಜ್ಞಾನ ನಮ್ಮ ಜೀವನದ ಹಾಸುಹೊಕ್ಕಾಗಿದೆ. ಹೀಗೆ ವಿಜ್ಞಾನ ಬಳಕೆ ಮತ್ತು ತೀಕ್ಷ್ಣವಾದ ಅವಲೋಕನದಿಂದ ಮಾತ್ರ ತನಿಖೆಯಲ್ಲಿ ಯಶಸ್ಸು ಪಡೆಯಬಹುದಾಗಿದೆ ಎಂದರು.
ಪೊಲೀಸ್ ಇಲಾಖೆಯ ಅಧಿಕಾರಿ/ಸಿಬ್ಬಂದಿಗಳು ಪ್ರತಿನಿತ್ಯ ಜನರೊಂದಿಗೆ ವ್ಯವಹರಿಸಿ ಒಡನಾಡುತ್ತಾರೆ. ಆದಷ್ಟು ಕೆಟ್ಟ ಮನಸ್ಥಿತಿಯನ್ನು ಹೊಂದಿರುವವರೊಂದಿಗೆ ವ್ಯವಹರಿಸುವ ಪೊಲೀಸರು ಅಗತ್ಯವಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ಬಳಕೆ ಮಾಡಿಕೊಳ್ಳಬೇಕಾಗುತ್ತದೆ.
ಒಂದು ಅಪರಾಧ ಪ್ರಕರಣದ ಸ್ಥಳದಲ್ಲಿ ನಮಗೆ ನೂರಾರು ಸಾಕ್ಷ್ಯ ಸಿಗುತ್ತದೆ. ಇದನ್ನು ಸಂಗ್ರಹಿಸಲು, ಅಪರಾಧಿಗಳ ಮನೋಭಾವ ತಿಳಿಯಲು ಹಾಗೂ ಅಪರಾಧದ ಜಾಡು ಹಿಡಿಯಲು ಬೆರಳಚ್ಚು, ಡಾಗ್ ಸ್ಕ್ಯಾಡ್, ವಿಧಿ ವಿಜ್ಞಾನ ಪ್ರಯೋಗಾಲಯಗಳು ಸೇರಿದಂತೆ ಇತರೆ ತಂತ್ರಜ್ಞಾನದ ಸಹಾಯ ಪಡೆದು ತನಿಖೆ ಕೈಗೊಂಡು ಕೋರ್ಟ್‍ನಲ್ಲಿ ಹಾಜರುಪಡಿಸಬೇಕಾಗುತ್ತದೆ.
ತನಿಖೆ ಸಮಯದಲ್ಲಿ ಶೀಘ್ರವಾಗಿ ಬೆರಳಚ್ಚು (ಫಿಂಗರ್‍ಪ್ರಿಂಟ್), ಡಾಗ್ ಸ್ಕ್ವಾಡ್, ವಿಧಿ ವಿಜ್ಞಾನ ಪ್ರಯೋಗಾಲಯಗಳ ಸಹಾಯ ಪಡೆಯಬೇಕು. ಇದನ್ನೆಲ್ಲಾ ಮಾಡಲು ಎಸ್.ಪಿ ಯವರ ಅನುಮತಿ ಬೇಡ. ಒಬ್ಬ ಪೊಲೀಸ್ ಕಾನ್‍ಸ್ಟೇಬಲ್ ಕೂಡ ಇಂತಹ ಸಂದರ್ಭದಲ್ಲಿ ಯಾರ ಅನುಮತಿಗೂ ಕಾಯದೆ, ವೈಜ್ಞಾನಿಕ ತನಿಖೆಗೆ ಮುಂದಾಗಬಹುದು. ಬೇಡದ ಕಾರಣ ಹೇಳಿ ತನಿಖೆಯನ್ನು ವಿಳಂಬ ಮಾಬಾರದು. ಎಲ್ಲ ಹಂತಗಳಲ್ಲಿ ನಾವು ನಿಗದಿತ ಕ್ರಮಗಳನ್ನು ಕೈಗೊಂಡು ಆಸಕ್ತಿಯಿಂದ ತನಿಖೆ ಕೈಗೊಳ್ಳಬೇಕೆಂದರು.
ಎಲ್ಲಾ ಇಲಾಖೆಯಲ್ಲೂ ಪ್ರತಿಭಾವಂತ ಸಿಬ್ಬಂದಿಗಳಿರುತ್ತಾರೆ. ಅಂತೆಯೇ ಆಸಕ್ತಿ, ಕೌಶಲ್ಯಗಳ ಮುಖೇನ ನಮ್ಮ ಯೋಚನಾ ಸಾಮಥ್ರ್ಯವನ್ನು ಹೆಚ್ಚಿಸಿಕೊಂಡು, ಪ್ರತಿ ಹಂತದಲ್ಲೂ ಪ್ರಶ್ನೆ ಹಾಕಿಕೊಂಡು ತನಿಖೆ ಸರಳೀಕರಣಗೊಳಿಸಬೇಕು. ಇದಕ್ಕೆ ವಿಜ್ಞಾನದ ಅಡಿಪಾಯವೇ ಮೂಲಬೇರು.
ಒಂದು ಪೊಲೀಸ್ ಸ್ಟೋರಿಯು ಸರಳವಾದ ತನಿಖೆಯಿಂದ ನ್ಯಾಯಾಧೀಶರ ಮುಂದೆ ಹಾಜರಾಗಿ ಸಾಬೀತಾದಾಗ ಪಬ್ಲಿಕ್ ಸ್ಟೋರಿಯಾಗುತ್ತದೆ ಎಂದ ಅವರು ಜಿಲ್ಲಾ ಕಚೇರಿಯಲ್ಲಿ ರುದ್ರೇಶ್ ಎಂಬ ಸಿಬ್ಬಂದಿ ತಮ್ಮ ಆಸಕ್ತಿ ಹಾಗೂ ಅನ್ವೇಷಣಾಶೀಲ ಗುಣದಿಂದ ಐದಾರು ತಿಂಗಳಿನಲ್ಲಿ 7 ಫಿಂಗರ್ ಪ್ರಿಂಟ್ ಪ್ರಕರಣ ತನಿಖೆ ಮಾಡಲು ಸಹಕರಿಸಿದ್ದಾರೆ. ಇಂತಹ ಸಿಬ್ಬಂದಿ/ಅಧಿಕಾರಿಗಳು ಎಲ್ಲೆಡೆ ಇದ್ದಾರೆ. ಪ್ರತಿ ವ್ಯಕ್ತಿಯಲ್ಲಿಯೂ ಒಂದೊಂದು ಸಾಮಥ್ರ್ಯ ಇದ್ದು ಇದನ್ನು ಗುರುತಿಸಿಕೊಂಡು ಸಮರ್ಥವಾಗಿ ಕಾರ್ಯ ನಿರ್ವಹಿಸಬೇಕು. ಹಾಗೂ ಈ ಎರಡು ದಿನಗಳ ಕೂಟವನ್ನು ಯಶಸ್ವಿಗೊಳಿಸಬೇಕೆಂದರು.


ಕಾರ್ಯಕ್ರಮ ಉದ್ಘಾಟಿಸಿದ ಮಹಾನಗರಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿ ಮಾತನಾಡಿ, ಪೂರ್ವವಲಯದ ನಾಲ್ಕು ಜಿಲ್ಲೆಗಳ ಸಿಬ್ಬಂದಿಗಳಿಗಾಗಿ ಇಂದಿನಿಂದ ಎರಡು ದಿನಗಳ ಕಾಲ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಇಂತಹ ಕಾರ್ಯಕ್ರಮಗಳ ಮೂಲಕ ಪೊಲೀಸ್ ಇಲಾಖೆಯ ತನಿಖೆಯ ಸಾಮಥ್ರ್ಯವನ್ನು ಹೆಚ್ಚಿಸಬಹುದಾಗಿದೆ. ಸಾಮಾನ್ಯ ಜನರ ದೃಷ್ಟಿಯಲ್ಲಿ ಫೋಟೋಗ್ರಫಿ, ವಿಡಿಯೋಗ್ರಫಿ ಒಂದು ತೆರನಾಗಿದ್ದರೆ, ಪೊಲೀಸ್ ಇಲಾಖೆಯಲ್ಲಿ ಅದಕ್ಕೆ ವಿಶೇಷ ಅರ್ಥವಿರುತ್ತದೆ. ಒಂದು ಫೋಟೋಗ್ರಾಫ್‍ಗೆ ಅವರು ನೀಡುವ ವಿವರಣೆ ದೊಡ್ಡದು ಮತ್ತು ವಿಭಿನ್ನವಾದುದು. ಇಂತಹ ಕೌಶಲ್ಯ ವೃದ್ಧಿ ಕೆಲಸಗಳು ಹೆಚ್ಚೆಚ್ಚು ನಡೆಯಲಿ ಎಂದು ಆಶಿಸಿದರು.
ಎಸ್‍ಸಿಆರ್‍ಬಿ ಬೆಂಗಳೂರು ಇದರ ಹಿರಿಯ ಕಾರ್ಯಕ್ರಮಾಧಿಕಾರಿ ನಾಗೇಶ್.ಎನ್ ಪ್ರಾಸ್ತಾವಿಕವಾಗಿ ಮಾತನಾಡಿ, ಇದು ಪೂರ್ವ ವಲಯದ ನಾಲ್ಕು ಜಿಲ್ಲೆಗಳ 63ನೇ ಕರ್ತವ್ಯ ಕೂಟವಾಗಿದೆ. ವಿಧಿ ವಿಜ್ಞಾನ, ಫಿಂಗರ್ ಪ್ರಿಂಟ್, ವಿಡೀಯೋಗ್ರಫಿ, ಫೋಟೋಗ್ರಫಿ ಸ್ಪರ್ಧೆಗಳಿದ್ದು, ಅಧಿಕಾರಿ/ಸಿಬ್ಬಂದಿಗಳು ಆಸಕ್ತಿಯಿಂದ ಭಾಗವಹಿಸಿ ಕೌಶಲ್ಯ ಅಭಿವೃದ್ಧಿಗೊಳಿಸಿಕೊಂಡು ಮುಂದಿನ ಹಂತಕ್ಕೆ ಆಯ್ಕೆಯಾಗಲೆಂದು ಅಭಿನಂದಿಸಿದರು.
ಇದೇ ಸಂದರ್ಭದಲ್ಲಿ ಕಳೆದ ಸಾಲಿನಲ್ಲಿ ಕರ್ತವ್ಯ ಕೂಟದಲ್ಲಿ ಭಾಗವಹಿಸಿ ರಾಷ್ಟ್ರ್ರಮಟ್ಟದಲ್ಲಿ ವಿಜೇತರಾದ ದುಗ್ಗೇಶ್ ಹಾಗೂ ಕಿರಣ್ ಕುಮಾರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಅಭಿಯೋಗ ಉಪನಿರ್ದೇಶಕರಾದ ಕೆ.ಜೆ ಕಲ್ಪನಾ, ವಿಧಿ ವಿಜ್ಞಾನ ವಿಭಾಗದ ಉಪನಿರ್ದೇಶಕಿ ಛಾಯಾಕುಮಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಡಿಎಆರ್ ಉಪಅಧೀಕ್ಷಕ ಪ್ರಕಾಶ್ ಬಿ.ಪಿ ಸ್ವಾಗತಿಸಿದರು. ಮಲ್ಲಿಕಾರ್ಜುನ ಶಾನುಭೋಗ ಪ್ರಾರ್ಥಿಸಿದರು. ದೇವರಾಜ್ ಕಾರ್ಯಕ್ರಮ ನಿರೂಪಿಸಿದರು. ಚಂದ್ರಶೇಖರ್ ವಂದಿಸಿದರು. ವಿವಿಧ ಜಿಲ್ಲೆಗಳಿಂದ ಪೊಲೀಸ್ ಸಿಬ್ಬಂದಿ, ಹಿರಿಯ ವೈಜ್ಞಾನಿಕ ಅಧಿಕಾರಿಗಳು, ನ್ಯಾಯಾಧೀಶರು ಕಾರ್ಯಕ್ರಮದಲ್ಲಿ ಹಾಜರಿದ್ದರು.

Leave a Reply

Your email address will not be published. Required fields are marked *