ದಾವಣಗೆರೆ ಮಾ.20
ಕೊರೊನಾ ವೈರಸ್ ಸೋಂಕನ್ನು ತಡೆಯುವ ಮತ್ತು ನಿಯಂತ್ರಿಸುವ ಹಿನ್ನೆಲೆಯಲ್ಲಿ ವ್ಯಕ್ತಿಗಳ ನಡುವೆ ಅಂತರ ಕಾಯ್ದುಕೊಳ್ಳುವುದು ಅತ್ಯವಶ್ಯವಾಗಿದೆ. ಈ ನಿಟ್ಟಿನಲ್ಲಿ ಸಾಮೂಹಿಕ ಪ್ರಾರ್ಥನೆಯನ್ನು ಮನೆಯಲ್ಲೇ ಸಲ್ಲಿಸುವ ಬಗ್ಗೆ ಅಥವಾ ಸಾಮೂಹಿಕ ಪ್ರಾರ್ಥನೆಯ ವೇಳೆ ಜನಸಂದಣಿ ಆಗದಂತೆ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ವಿವಿಧ ಧಾರ್ಮಿಕ ಮುಖಂಡರಿಗೆ ಮನವಿ ಮಾಡಿದರು.
ಇಂದು ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಕೊರೊನಾ ವೈರಸ್ ಸೋಂಕು ನಿಯಂತ್ರಣಕ್ಕಾಗಿ ಸಮುದಾಯದಲ್ಲಿ ವೈಯಕ್ತಿಕ ಅಂತರ ಕಾಯ್ದುಕೊಳ್ಳುವ ಕುರಿತು ವಿವಿಧ ಧಾರ್ಮಿಕ ಮುಖಂಡರ ಸಲಹೆ ಸೂಚನೆಗಳನ್ನು ಆಲಿಸಲು ಕರೆಯಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿವಿಧ ಧರ್ಮದ ಪ್ರಾರ್ಥನೆಗಳನ್ನು ಸಾಮೂಹಿಕವಾಗಿ ಮಾಡಲಾಗುತ್ತಿದೆ. ಕೊರೊನಾ ವೈರಸ್ ಸೋಂಕು ಹರಡುವ ಭೀತಿ ಹಿನ್ನೆಲೆಯಲ್ಲಿ ದೊಡ್ಡ ಮಟ್ಟದ ಸಮೂಹಗಳಲ್ಲಿ ಪ್ರಾರ್ಥನೆಯನ್ನು ಕೈಬಿಟ್ಟು ಪರ್ಯಾಯವಾಗಿ ತಮ್ಮ ತಮ್ಮ ಮನೆಗಳಲ್ಲಿ ಅಥವಾ ಅಂತರ ಕಾಯ್ದುಕೊಂಡು ಪ್ರಾರ್ಥಿಸುವ ಬಗ್ಗೆ ಧಾರ್ಮಿಕ ಮುಖಂಡರು ತಮ್ಮ ಸಲಹೆ ಸೂಚನೆಗಳನ್ನು ನೀಡಬೇಕೆಂದು ಕೇಳಿದರು.
ಜಿಲ್ಲಾ ವಕ್ಫ್ ಮಂಡಳಿ ಅಧ್ಯಕ್ಷ ಸಿರಾಜ್ ಅಹ್ಮದ್ ಮಾತನಾಡಿ, ಜಿಲ್ಲೆಯಲ್ಲಿ ಸುಮಾರು 300 ಮಸೀದಿಗಳು, 45 ದರ್ಗಾಗಳು, ಅನೇಕ ಅಶೂರ್‍ಖಾನಾಗಳಿದ್ದು ಮಸೀದಿಗಳಲ್ಲಿ ಇಂದಿನಿಂದಲೇ ಪ್ರಾರ್ಥನೆಯನ್ನು ಒಂದು ಗಂಟೆಯಿಂದ 20 ನಿಮಿಷಕ್ಕೆ ಮೊಟಕುಗೊಳಿಸಲಾಗಿದೆ. ಮೂರು ವಾರಗಳ ಕಾಲ ಪ್ರಾರ್ಥನೆಯನ್ನು ಮೊಟಕುಗೊಳಿಸಲಾಗುವುದು ಹಾಗೂ ಜಿಲ್ಲಾಡಳಿತದ ಸೂಚನೆಗಳನ್ನು ಪಾಲಿಸಲಾಗುವುದು ಎಂದರು.
ಮುಸ್ಲಿಂ ಸಮಾಜದ ಮುಖಂಡ ಸಾಧಿಕ್ ಪೈಲ್ವಾನ್ ಮಾತನಾಡಿ, ಕೊರೊನಾ ಕುರಿತು ಜಾಗೃತಿ ಮೂಡಿಸುವುದು ಅತ್ಯಗತ್ಯವಾಗಿದೆ. ಸ್ವಚ್ಚತೆ ಕಾಪಾಡುವುದು, ಹಸ್ತಲಾಘವ ಮಾಡದಿರುವುದು ಹಾಗೂ ಎಲ್ಲೆಡೆ ಜಾಗೃತಿ ಮೂಡಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಭಾನುವಾರ ನಮ್ಮ ಧರ್ಮದ ವತಿಯಿಂದ ಜಾಗರಣೆ(ಫರ್ಜ್) ಇದ್ದು, ನಾವೆಲ್ಲ ಶಾಂತಿ ರೀತಿಯಲ್ಲಿ ಇದನ್ನು ನೆರವೇರಿಸುತ್ತೇವೆ. ಹೆಚ್ಚು ಜನ ಒಂದೆಡೆ ಸೇರದಂತೆ ನಮ್ಮ ಧಾರ್ಮಿಕ ಮುಖಂಡರ ಸಭೆ ಕರೆದು ತೀರ್ಮಾನಿಸುತ್ತೇವೆ. ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಗೆ ಸಹಕರಿಸುತ್ತೇವೆ. ಹಾಗೂ ಅಲ್ಲಾಹು ಎಲ್ಲರಿಗೆ ಒಳಿತು ಮಾಡಲೆಂದು ಪ್ರಾರ್ಥಿಸುತ್ತೇವೆ ಎಂದರು.
ಮುಸ್ಲಿಂ ಸಮಾಜದ ಮುಖಂಡ ಅಮಾನುಲ್ಲಾ ಖಾನ್ ಮಾತನಾಡಿ, ಭಾನುವಾರ ಶೆಬೆ-ಮೆಹರಬ್ ಇದ್ದು ಶಾಂತ ರೀತಿಯಲ್ಲಿ ಆಚರಿಸಲು ಕ್ರಮ ವಹಿಸಲಾಗುವುದು. ಪ್ರಪಂಚದಾದ್ಯಂತ ಕೊರೊನಾ ಸೋಂಕಿನ ದುಷ್ಪರಿಣಾಮ ಇದ್ದು, ವಕ್ಫ್ ಮಂಡಳಿ, ಮುಸ್ಲಿಂ ಗಣ್ಯರು ಎಲ್ಲರೂ ಸೇರಿ ಸಭೆ ನಡೆಸಿ ಪ್ರಾರ್ಥನೆ, ಜಾಗರಣೆಯನ್ನು ಹೇಗೆ ಆಚರಿಸಬೇಕೆಂದು ತೀರ್ಮಾನಿಸುತ್ತೇವೆ. ಈಗಾಗಲೇ ಪ್ರಾರ್ಥನೆ ಅವಧಿಯನ್ನು ಮೊಟಕುಗೊಳಿಸಿದ್ದು, ಮಸೀದಿಗಳಲ್ಲಿ ಮಾಸ್ಕ್ ಮತ್ತು ಸ್ಯಾನಿಟೈಸರ್‍ಗಳನ್ನು ಇಡಲಾಗುವುದು. ಹಾಗೂ ಜಿಲ್ಲಾಡಳಿತ ಸೂಚಿಸಿದ ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದರು.
ಧಾರ್ಮಿಕ ಗುರು ಹನೀಫ್ ಮೌಲಾನಾ ಮಾತನಾಡಿ, ಇಂದು ಶುಕ್ರವಾರ ನಮಾಜ್‍ನ ಅವಧಿಯನ್ನು ಮೊಟಕುಗೊಳಿಸಿದ್ದೇವೆ. ಭಾನುವಾರದ ಜಾಗರಣೆಯನ್ನೂ ರಾತ್ರಿ ಪೂರ್ತಿ ಮಾಡದೇ ಮೊಟಕುಗೊಳಿಸಿ ಶಾಂತ ರೀತಿಯಲ್ಲಿ ಆಚರಿಸಲಾಗುವುದು. ಆದರೆ ಮುಸ್ಲಿಂ ಬಾಂಧವರು ನೆಲೆಸುವ ಕೆಲವು ಏರಿಯಾಗಳಲ್ಲಿ ಸ್ವಚ್ಚತೆ ಬಗ್ಗೆ ಪಾಲಿಕೆಯವರು ಗಮನ ಹರಿಸಿ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಕೋಳಿ ಅಂಗಡಿಗಳ ಸಂಘದ ಜಿಲ್ಲಾಧ್ಯಕ್ಷ ಕೋಳಿ ಇಬ್ರಾಹಿಂ ಸಾಬ್ ಮಾತನಾಡಿ, ನಗರದಲ್ಲಿ ಹಂದಿ ಹಾವಳಿ ಹೆಚ್ಚಿದ್ದು, ನಿಯಂತ್ರಿಸಬೇಕೆಂದು ಮನವಿ ಮಾಡಿದರು.
ಜಿಲ್ಲಾಧಿಕಾರಿಗಳು, ದೊಡ್ಡ ಗುಂಪುಗಳು ಸೇರಬಾರದು. ಸಾರ್ವಜನಿಕ ಸ್ಥಳಗಳಾದ ಉದ್ಯಾನವನ, ವ್ಯಾಯಾಮ ಶಾಲೆ, ಜಿಮ್‍ಗಳ ಪ್ರವೇಶವನ್ನು ಬಂದ್ ಮಾಡಲಾಗಿದೆ. ಸಾರ್ವಜನಿಕರು ಸ್ವಲ್ಪ ಕಾಲ ಮನೆಯಲ್ಲೇ ವ್ಯಾಯಾಮ ಮಾಡಿರೆಂದು ಸಲಹೆ ನೀಡಲಾಗಿದೆ. ಅದೇ ರೀತಿಯಲ್ಲಿ ತಾವು ಕೂಡ ಸ್ವಲ್ಪ ಕಾಲ ಮನೆಯಲ್ಲೇ ಪ್ರಾರ್ಥನೆಯನ್ನು ಮಾಡಬಹುದಲ್ಲವೇ ಎಂದು ಕೇಳಿದರು.
ವಕೀಲರಾದ ನಜೀರ್ ಮಾತನಾಡಿ, ದೇಶದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಕೊರೊನಾ ವೈರಸ್‍ನಂತಹ ಆಘಾತಕಾರಿ ಸೋಂಕಿನಿಂದ ಇಡೀ ಪ್ರಪಂಚ ತಲ್ಲಣಗೊಂಡಿದೆ. ಎಲ್ಲೆಡೆ ಇದರ ಚರ್ಚೆ ನಡೆದಿದೆ. ಮುಖ್ಯವಾಗಿ ಸ್ಲಂ ಪ್ರದೇಶಗಳಲ್ಲಿ ವಿವಿಧ ಸಂಘಟನೆಗಳ ಮೂಲಕ ಜಾಗೃತಿ ಮೂಡಿಸಬೇಕು. ಆಗ ಮಾತ್ರ ಜಾಗೃತಿ ಸಾಧ್ಯವಾಗುತ್ತದೆ. ಮಸೀದಿಯಲ್ಲಿ ಪ್ರಾರ್ಥನೆ ದಿನಗಳಂದು ಅತ್ಯಂತ ಸ್ವಚ್ಚತೆ ಕಾಪಾಡಲಾಗುವುದು. ಈ ಹಿನ್ನೆಲೆಯಲ್ಲಿ ಪ್ರಾರ್ಥನೆ ಮಾಡುವುದರಿಂದ ತೊಂದರೆ ಇಲ್ಲ ಎಂದರು.
ಟಿಪ್ಪು ಸುಲ್ತಾನ್ ಸಂಘದ ಅಧ್ಯಕ್ಷ ಮುಜಾಹಿದ್ ಖಾನ್, ಸಯೀದ್ ಚಾರ್ಲಿ ಮಾತನಾಡಿ ಸ್ವಚ್ಚತೆ ಬಗ್ಗೆ ಪಾಲಿಕೆ ನಿಗಾ ವಹಿಸುವಂತೆ ಮನವಿ ಮಾಡಿದರು.
ಜಿಲ್ಲಾಧಿಕಾರಿಗಳು ಮಾತನಾಡಿ, ಆರೋಗ್ಯ ತುರ್ತಿನ ಹಿನ್ನೆಲೆ ಹಾಗೂ ಕೊರೊನಾ ವೈರಸ್ ಸೋಂಕು ನಿಯಂತ್ರಣ ಮತ್ತು ತಡೆ ದೇಶದ ಆದ್ಯತೆಯಾಗಿರುವುದರಿಂದ ಸಮುದಾಯದಲ್ಲಿ ಎಲ್ಲ ವ್ಯಕ್ತಿಗಳು ಅಂತರವನ್ನು ಕಾಯ್ದುಕೊಳ್ಳಬೇಕು. ದೊಡ್ಡ ದೊಡ್ಡ ಗುಂಪುಗಳು ಸೇರುವ ಹಾಗಿಲ್ಲ. ಶುಕ್ರವಾರದಂದು ಮಸೀದಿಗಳಲ್ಲಿ, ಭಾನುವಾರದಂದು ಚರ್ಚ್‍ಗಳಲ್ಲಿ ಹೆಚ್ಚು ಜನರು ಗುಂಪಿನಲ್ಲಿ ಬಂದು ಪ್ರಾರ್ಥನೆ ಸಲ್ಲಿಸದೇ ಪೂರಕ ವ್ಯವಸ್ಥೆಯಾಗಿ ಮನೆಯಲ್ಲಿ ಅಥವಾ ಕಡಿಮೆ ಸಂಖ್ಯೆ ಮತ್ತು ಹೆಚ್ಚಿನ ಅಂತರದಲ್ಲಿ ಪ್ರಾರ್ಥನೆ ಸಲ್ಲಿಸಬೇಕೆಂದು ಹೇಳಿದರು.
ಹಕ್ಕಿಜ್ವರ :
ಹರಿಹರ ತಾಲ್ಲೂಕಿನ ಬನ್ನಿಕೋಡು ಗ್ರಾಮದಲ್ಲಿ ಮಾ.16 ರಂದು ಹಕ್ಕಿಜ್ವರ ಇದೆ ಎಂದು ದೃಢಪಟ್ಟಿದ್ದು, ಮಾ.17 ರಿಂದ ವೈಜ್ಞಾನಿಕವಾಗಿ ಕೋಳಿಗಳನ್ನು ನಾಶಪಡಿಸಲು ಪಶುಸಂಗೋಪನೆ ಇಲಾಖೆಯಿಂದ ಕ್ರಮ ವಹಿಸಲಾಗಿದೆ. ಹಾಗೂ ಹರಿಹರ ಮತ್ತು ದಾವಣಗೆರೆ ನಗರದಲ್ಲಿ ಕೋಳಿ ಮಾಂಸ, ಮೊಟ್ಟೆ ಮತ್ತು ಕೋಳಿ ಮಾಂಸದ ಆಹಾರದ ಬಳಕೆಯನ್ನು ನಿಷೇಧಿಸಲಾಗಿದೆ. ಮತ್ತು ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಪರಿಣಾಮಕಾರಿಯಾಗಿ ಸೂಕ್ತ
ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳುವ ಉದ್ದೇಶದಿಂದ ಬನ್ನಿಕೋಡು ಗ್ರಾಮದ ಸುತ್ತಮುತ್ತ 10 ಕಿ.ಮೀ ವ್ಯಾಪ್ತಿ ಪ್ರದೇಶವನ್ನು ಜಾಗೃತಿ ವಲಯ ಎಂದು ಘೋಷಿಸಲಾಗಿದೆ.
ಮಾ.21 ರಂದು ಕಲ್ಕತ್ತಾದಿಂದ ಕೇಂದ್ರದಿಂದ ಒಂದು ತಂಡ ಬನ್ನಿಕೋಡಿಗೆ ಭೇಟಿ ನೀಡಿ, ಇಲಾಖೆಯಿಂದ ಕೈಗೊಳ್ಳಲಾದ ಕಲ್ಲಿಂಗ್ ಮತ್ತು ಇತರೆ ಕ್ರಮಗಳ ಕುರಿತು ಪರಿಶೀಲನೆ ನಡೆಸಲಿದೆ. ಹಾಗೂ ಮುಂದೆ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಸೂಚನೆಗಳನ್ನು ನೀಡಲಿದೆ ಎಂದರು.
ಇಂದು 304 ಕೋಳಿಗಳನ್ನು ಕಲ್ಲಿಂಗ್ ಮಾಡಲಾಗಿದೆ. 2667 ಕೋಳಿಗಳನ್ನು ವೈಜ್ಞಾನಿಕವಾಗಿ ನಾಶಪಡಿಸುವ ಗುರಿ ಹೊಂದಿದ್ದು ಇದುವರೆಗೆ 2162 ಕಲ್ಲಿಂಗ್ ಮಾಡಲಾಗಿದೆ. ಹಾಗೂ ಕಲ್ಲಿಂಗ್‍ನಲ್ಲಿ ಭಾಗಿಯಾದ ಸಿಬ್ಬಂದಿಗಳನ್ನು ನಿಗಾವಣೆಯಲ್ಲಿ ಇರಿಸಲಾಗುವುದು ಎಂದರು.
ಕಾಗೆ, ಕೊಕ್ಕರೆ ಸೇರಿದಂತೆ ಸಾಕು ಮತ್ತು ಕಾಡು ಪಕ್ಷಿಗಳು ಅಸಹಜವಾಗಿ ಸತ್ತರೂ ಇಂತಹ ಪಕ್ಷಿಗಳ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗುತ್ತಿದೆ. ಹೀಗೆ ಕೋಳಿ ಮತ್ತು ಪಕ್ಷಿಗಳ ಮಾದರಿಯನ್ನು 15 ದಿನಗಳಿಗೊಮ್ಮ ಮೂರು ತಿಂಗಳ ಅವಧಿಯವರೆಗೆ ಪರೀಕ್ಷೆಗಾಗಿ ಕಳುಹಿಸಲಾಗುವುದು ಎಂದು ಮಾಹಿತಿ ನೀಡಿದರು.
ಇದುವರೆಗೆ ಜಿಲ್ಲೆಯಲ್ಲಿ ಕೊರೊನಾ ವೈರಸ್ ಸೋಂಕಿನ ಯಾವುದೇ ಪ್ರಕರಣಗಳು ವರದಿಯಾಗಿಲ್ಲ. ಕೊರೊನಾ ನಿಯಂತ್ರಣ ಮುನ್ನೆಚ್ಚರಿಕೆ ಕ್ರಮವಾಗಿ ಜನಸಂದಣಿಯಾಗುವಂತಹ ಎಲ್ಲ ಸಾರ್ವಜನಿಕ ಸ್ಥಳಗಳು, ಕಚೇರಿಗಳನ್ನು ಮುಚ್ಚಲಾಗುತ್ತಿದೆ. ಆಧಾರ್, ಅಟಲ್ ಕೇಂದ್ರ, ಸಬ್ ರಿಜಿಸ್ಟ್ರಾರ್ ಕಚೇರಿ, ಆರ್‍ಟಿಓ ಸೇರಿದಂತೆ ಅನೇಕ ಕಚೇರಿಗಳನ್ನು ಮುಚ್ಚಲಾಗುತ್ತಿದೆ. ಜಿಲ್ಲಾ ಆಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ಕೇವಲ ಓಪಿಡಿ, ಇತರೆ ಸಣ್ಣ ಪುಟ್ಟ ಸಮಸ್ಯೆಗಳಿಗೆ ಆಸ್ಪತ್ರೆಗೆ ಸಾರ್ವಜನಿಕರು ಬರಬಾರದು. ಹಾಗೂ ಜಿಲ್ಲಾಸ್ಪತ್ರೆಯಲ್ಲಿ ಕ್ಯೂ ವ್ಯವಸ್ಥೆಯನ್ನು ಸೂಕ್ತವಾಗಿ ನಿರ್ವಹಿಸಿ ಟೋಕನ್ ನೀಡುವ ಅಥವಾ ಅಂತರ ಕಾಯ್ದುಕೊಳ್ಳುವಂತಹ ವ್ಯವಸ್ಥೆ ಮಾಡಲಾಗುವುದು.
ಮಹಾಂತೇಶ ಬೀಳಗಿ, ಜಿಲ್ಲಾಧಿಕಾರಿ
ಸಭೆಯಲ್ಲಿ ಜಿ.ಪಂ.ಸಿಇಓ ಪದ್ಮಾ ಬಸವಂತಪ್ಪ, ಎಎಸ್‍ಪಿ ರಾಜೀವ್, ಎಸಿ ಮಮತಾ ಹೊಸಗೌಡರ್, ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕಿ ನಜ್ಮಾ, ಪಶುಸಂಗೋಪನೆ ಇಲಾಖೆ ಉಪ ನಿರ್ದೇಶಕ ಭಾಸ್ಕರ್ ನಾಯಕ್, ಡಿಹೆಚ್‍ಓ ಡಾ.ರಾಘವೇಂದ್ರಸ್ವಾಮಿ, ಡಾ.ನಾಗರಾಜ್, ಡಾ.ರಾಘವನ್, ಡಾ.ನಟರಾಜ್ ಇತರೆ ಅಧಿಕಾರಿಗಳು ಹಾಜರಿದ್ದರು.