ದಾವಣಗೆರೆ ಮಾ.25
ಇಂದು ನಡೆದ ವಿಡಿಯೋ ಕಾನ್ಫರೆನ್ಸ್‍ನಲ್ಲಿ ಕಂದಾಯ ಸಚಿವರಾದ ಆರ್.ಅಶೋಕ್‍ರವರು ಮಾತನಾಡಿ, ಕೊರೊನಾ ವೈರಸ್(ಕೋವಿಡ್-19) ಒಂದು ಹೊಸ ವೈರಸ್ ಆಗಿರುವ ಕಾರಣ ಸಿಬ್ಬಂದಿಗಳಿಗೆ ಅಗತ್ಯ ತರಬೇತಿ ನೀಡಬೇಕಿದೆ ಹಾಗೂ ಎಲ್ಲೆಡೆ ಅಗತ್ಯ ಮೂಲಭೂತ ಸೌಕರ್ಯಗಳ ವ್ಯವಸ್ಥೆ ಮಾಡಿಕೊಂಡು ಕೊರೊನಾ ವಿರುದ್ದ ಹೋರಾಡಲು ಯುದ್ದೋಪಾದಿಯಲ್ಲಿ ಸನ್ನದ್ದರಾಗಬೇಕಿದೆ ಎಂದು ಎಲ್ಲ ಜಿಲ್ಲೆಗಳ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅಗತ್ಯ ಥರ್ಮಲ್ ಸ್ಕ್ಯಾನರ್‍ಗಳು, ಇತರೆವೈದ್ಯಕೀಯ ಸಾಮಗ್ರಿಗಳನ್ನು ಸಿದ್ದವಿರಿಸಿಕೊಳ್ಳಬೇಕು. ಎಲ್ಲ ಜಿಲ್ಲೆಗಳಲ್ಲಿ ಫಿವರ್ ಕ್ಲಿನಿಕ್‍ಗಳು ಮತ್ತು ಕೋವಿಡ್ ಆಸ್ಪತ್ರೆಗಳಿಗೆ ಸಿದ್ದತೆ ಮಾಡಿಕೊಳ್ಳಬೇಕು ಎಂದರು.
ವಸತಿರಹಿತರು, ಭಿಕ್ಷುಕರಿಗೆ 21 ದಿನಗಳ ಊಟದ ವ್ಯವಸ್ಥೆಯನ್ನು ಅವರು ಇರುವಲ್ಲಿಯೇ ಹೋಗಿ ಪ್ಯಾಕೆಟ್‍ಗಳಲ್ಲಿ ಕೆಡದಂತಹ ಆಹಾರವನ್ನು ಬೆಳಿಗ್ಗೆಯಿಂದ ರಾತ್ರಿವರೆಗೆ ಸರಬರಾಜು ಮಾಡುವ ವ್ಯವಸ್ಥೆ ಮಾಡಬೇಕು. ಹಸಿವಿನಿಂದ ಯಾರೂ ಕಂಗೆಡಬಾರದು ಎಂದರು.
ಅಗತ್ಯ ಸಾಮಗ್ರಿಗಳನ್ನು ಕಾಳಸಂತೆಯಲ್ಲಿ ಮಾರುವುದು ಹಾಗೂ ಅಕ್ರಮ ದಾಸ್ತಾನು ಇಟ್ಟುಕೊಳ್ಳುವುದು ಕಂಡುಬಂದಲ್ಲಿ ತಕ್ಷಣ ಅವರನ್ನು ಬಂಧಿಸಿ ಕ್ರಮ ಕೈಗೊಳ್ಳಬೇಕು. ರಸ್ತೆ ಖಾಲಿ ಇದೆ ಎಂದು ವ್ಹೀಲಿಂಗ್ ಮಾಡುವ ಯುವಕರು ಆರಕ್ಷಕ ಸಿಬ್ಬಂದಿಯ ಮೇಲೆ ಕೈಮಾಡಿರುವುದು ಕಂಡು ಬಂದಿದೆ. ಅಂತಹ ಯುವಕರು ಮತ್ತು ಅವರ ಪೋಷಕರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.
ಕೆಲವೆಡೆ ಸ್ಟಾಫ್ ನರ್ಸ್‍ಗಳು, ಅರೆ ವೈದ್ಯಕೀಯ ಸಿಬ್ಬಂದಿಗಳು ಕೆಲಸ ಬಿಟ್ಟು ಹೋಗಿದ್ದು, ಅಂತಹವರನ್ನು ನಿಯಮಾನುಸಾರ ವಾಪಾಸ್ಸು ಕರೆಸಿಕೊಳ್ಳಬೇಕು. ವಾಪಸ್ಸು ಬರದಿದ್ದರೆ ಕಾಯ್ದೆಯನ್ವಯ ಕ್ರಮ ಕೈಗೊಳ್ಳಲು ಸೂಚಿಸಿದರು.
ವಿಡಿಯೋ ಕಾನ್ಫರೆನ್ಸ್ ನಂತರ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅಧಿಕಾರಿಗಳೊಂದಿಗೆ ಮಾತನಾಡಿ ಕೊರೊನಾ ವೈರಸ್ ನಿಯಂತ್ರಣ ಹಿನ್ನೆಲೆಯಲ್ಲಿ ಕೋವಿಡ್ ಆಸ್ಪತ್ರೆ ತೆರೆಯಲು ನಗರದ ಉತ್ತಮ ಸಾರ್ವಜನಿಕ ಸ್ಥಳಗಳು, ಲಾಡ್ಜ್, ಶಾಲಾ-ಕಾಲೇಜು, ರೆಸಾರ್ಟ್‍ಗಳು, ಆಯುರ್ವೇದಿಕ್ ಆಸ್ಪತ್ರೆಗಳು, ಕಲ್ಯಾಣ ಮಂಟಪಗಳು, ಸಮುದಾಯ ಭವನಗಳನ್ನು ಹಾಗೂ ತಾಲ್ಲೂಕು ಮಟ್ಟದಲ್ಲಿ ವಸತಿ ಶಾಲೆಗಳು, ಹಾಸ್ಟೆಲ್‍ಗಳನ್ನು ಅಧಿಗ್ರಹಣಗೊಳಿಸಲು ಪರಿಶೀಲನೆ ನಡೆಸಿ ಪಟ್ಟಿಯನ್ನು ಸಿದ್ದವಿರಿಸಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಸರ್ಕಾರಿ ಆಸ್ಪತ್ರೆಗೆ ಹೊರೆ ಜಾಸ್ತಿಯಾಗುತ್ತಿದ್ದು, ವೈದ್ಯರು, ಸ್ಟಾಫ್‍ನರ್ಸ್‍ಗಳ ಸಂಖ್ಯೆ ಕಡಿಮೆ ಇರುವ ಕಾರಣ ಬಾಪೂಜಿ ಮತ್ತು ಇತರೆ ಖಾಸಗಿ ಆಸ್ಪತ್ರೆಯಿಂದ ಸ್ಟಾಫ್‍ನರ್ಸ್‍ಗಳನ್ನು ಸರ್ಕಾರಿ ಆಸ್ಪತ್ರೆಗೆ ನಿಯೋಜಿಸಿದ್ದರೂ ಅವರು ಎನ್-95 ಮಾಸ್ಕ್ ನೀಡುತ್ತಿಲ್ಲವೆಂದು ಕಾರ್ಯನಿರ್ವಹಿಸಲು ನಿರಾಕರಿಸುತ್ತಾರೆಂಬ ಅಂಶ ಗಮನಕ್ಕೆ ಬಂದಿದೆ. ಆದರೆ ಪ್ರೊಟೊಕಾಲ್ ಪ್ರಕಾರ ಎಲ್ಲ ವಾರ್ಡುಗಳಲ್ಲಿ ಕೆಲಸ ಮಾಡಲು ಎನ್-95 ಮಾಸ್ಕ್ ಅವಶ್ಯಕತೆ ಇಲ್ಲ. ಕೇವಲ ಫ್ರಂಟ್‍ಲೈನ್‍ನಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಮಾತ್ರ ಇದರ ಅವಶ್ಯಕತೆ ಇದ್ದು, ಹೀಗೆ ಕರ್ತವ್ಯ ನಿರಾಕರಿಸುವವರ ವಿರುದ್ದ ಕಾಯ್ದೆಗಳನ್ವಯ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು. ಈ ಬಗ್ಗೆ ಐಎಂಎ ದವರು ಸಭೆ ಕರೆದು ವೈದ್ಯರು, ಶುಶ್ರೂಷಕರಿಗೆ ಪ್ರೊಟೊಕಾಲ್ ಬಗ್ಗೆ ತಿಳಿ ಹೇಳಬೇಕು.
ಖಾಸಗಿ ಆಸ್ಪತ್ರೆ ತೆರೆಯಿರಿ : ಜಿಲ್ಲೆ ಎಲ್ಲ ಖಾಸತಿ ಆಸ್ಪತ್ರೆಗಳನ್ನು ತೆರೆಯಲು ಸರ್ಕಾರ ಸೂಚಿಸಿದ್ದು, ಸಾರ್ವಜನಿಕರಿಗೆ ಅಗತ್ಯ ವೈದ್ಯಕೀಯ ನೆರವು ನೀಡಲು ಎಲ್ಲ ಖಾಸಗಿ ಆಸ್ಪತ್ರೆಗಳನ್ನು ತೆರೆಯಲು ಐಎಂಎ ಸೂಚಿಸಬೇಕೆಂದು ಡಿಸಿ ತಿಳಿಸಿದರು.
ಪಿಪಿಇ(ಪರ್ಸನಲ್ ಪ್ರೊಟೆಕ್ಷನ್ ಇಕ್ವಿಪ್‍ಮೆಂಟ್) : ನಗರದ ಮುಖ್ಯ ಆಸ್ಪತ್ರೆಗಳಾದ ಸಿಜಿ ಆಸ್ಪತ್ರೆ, ಬಾಪೂಜಿ ಹಾಗೂ ಎಸ್‍ಎಸ್ ಹೈಟೆಕ್ ಆಸ್ಪತ್ರೆಗಳು ಸೇರಿದಂತೆ ತಾಲ್ಲೂಕು ಮಟ್ಟದ ವೈದ್ಯರು ಮತ್ತು ಸಿಬ್ಬಂದಿಗಳಿಗೆ ಪಿಪಿಇ ಅತ್ಯಂತ ಅವಶ್ಯಕತೆ ಇದೆ. ಪಿಪಿಎ ಖರೀದಿಗೆ ನೇರವಾಗಿ ಫ್ಯಾಕ್ಟರಿ ಮತ್ತು ಉತ್ಪಾದಕರಿಗೆ ಆರ್ಡರ್ ಪ್ಲೇಸ್ ಮಾಡಿ ತರಿಸಿಕೊಳ್ಳಿರಿ ಎಂದರು.
ಡಿಸಿ ಕಚೇರಿಯಲ್ಲಿ ಸಹಾಯವಾಣಿ : ಕೋವಿಡ್ ಸಂಬಂಧಿಸಿದಂತೆ ಸಲಹೆ, ಸಂದೇಹಗಳಿಗಾಗಿ ಅಥವಾ ಸಹಾಯಕ್ಕಾಗಿ ಡಿಸಿ ಕಚೇರಿಯಲ್ಲಿ ಸಹಾಯವಾಣಿ ಸಂಖ್ಯೆ 1077 ಅಥವಾ 08192-234034 ಗೆ ಕರೆ ಸಾರ್ವಜನಿಕರು ಕರೆ ಮಾಡಬಹುದು.
ಎಸ್‍ಪಿ ಹನುಮತರಾಯ ಮಾತನಾಡಿ, ಹರಿಹರದ ಎಸ್‍ಪಿಎಸ್ ಫಾರ್ಮಾ ಇವರು ಡಿಎಸ್‍ಇನ್‍ಫೆಕ್ಟೆಟೆಂಟ್ ಮತ್ತು ಪಿಪಿಇ ಗಳನ್ನು ಸರಬರಾಜು ಮಾಡುತ್ತಾರೆ. ಇವರಿಂದ ತರಿಸಿಕೊಳ್ಳಬಹುದು ಎಂದರು.
ಸಭೆಯಲ್ಲಿ ಜಿ.ಪಂ.ಸಿಇಓ ಪದ್ಮಾ ಬಸವಂತಪ್ಪ, ಎಡಿಸಿ ಪೂಜಾರ ವೀರಮಲ್ಲಪ್ಪ, ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ಐಎಂಎ ಅಧ್ಯಕ್ಷರು, ಪದಾಧಿಕಾರಿಗಳು, ಎಸ್‍ಎಸ್‍ಐಎಂಎಸ್ ನಿರ್ದೇಶಕ ಕಾಳಪ್ಪನವರ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

Leave a Reply

Your email address will not be published. Required fields are marked *