ದಾವಣಗೆರೆ ಏ.11
ದೇಶದ ಅರ್ಥ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸುವ
ರೈತರ ಕೃಷಿ ಸಂಬಂಧಿತ ಎಲ್ಲಾ ಸೇವೆಗಳು ನಿರಾಂತಕವಾಗಿ
ನಡೆಯಲಿದ್ದು, ರೈತರಿಗಾಗಲೀ, ಕೃಷಿ ಪರಿಕರ
ಮಾರಾಟಗಾರರಿಗಾಗಲೀ ಯಾವುದೇ ಆತಂಕ ಬೇಡ. ನಿಮ್ಮ
ಜೊತೆ ಜಿಲ್ಲಾಡಳಿತದ ಸಂಪೂರ್ಣ ಬೆಂಬಲ ಸದಾ ಇರಲಿದೆ ಎಂದು
ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ರೈತರಿಗೆ ಭರವಸೆ ನೀಡಿದರು.
ಕೋವಿಡ್ -19 ನಿಯಂತ್ರಣದ ಹಿನ್ನೆಲೆ ಘೋಷಣೆಯಾಗಿರುವ
ಲಾಕ್‍ಡೌನ್ ಪ್ರಯುಕ್ತ ಏ.12 ರಂದು ಜಿಲ್ಲಾಡಳಿತ ಭವನದ
ತುಂಗ ಭದ್ರ ಸಭಾಂಗಣದಲ್ಲಿ ಕೃಷಿ ಪರಿಕರ
ಮಾರಾಟಗಾರರೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು
ಸದ್ಯದಲ್ಲೇ ಕಾರಿಫ್ ಸೀಸನ್ ಆರಂಭವಾಗಲಿದ್ದು, ರೈತರಿಗೆ
ಬೇಕಾದ ಬಿತ್ತನೆ ಬೀಜ, ರಾಸಾಯನಿಕ ಗೊಬ್ಬ,
ಕೀಟನಾಶಕಗಳು, ಯಂತ್ರೋಪಕರಣಗಳು ಸೇರಿದಂತೆ
ಎಲ್ಲಾ ದಾಸ್ತಾನನ್ನು ಮೇ 15 ರೊಳಗಾಗಿ ದಾಸ್ತಾನು
ಮಾಡಿಕೊಳ್ಳುವಂತೆ ತಿಳಿಸಿದರು.
ದಿನದಲ್ಲಿ ಅಗತ್ಯವಿರುವಷ್ಟು ಸಮಯ ಸೇವೆ ನೀಡುವ
ಮೂಲಕ ಕೃಷಿ ಚಟುವಟಿಕೆಗೆ ಯಾವುದೇ ರೀತಿಯಲ್ಲಿ
ತೊಂದರೆಯಾಗದಂತೆ ಹಾಗೂ ಸಾಮಾಜಿಕ ಅಂತರವನ್ನು
ಕಾಯ್ದುಕೊಂಡು ಕಾರ್ಯ ನಿರ್ವಹಿಸುವ ಸ್ಥಳದಲ್ಲಿ ಆದಷ್ಟು
ಕಡಿಮೆ ಸಿಬ್ಬಂದಿಯಿಂದ ಕಾರ್ಯ ನಿರ್ವಹಿಸುವುದು. ಹಾಗೂ
ಸುರಕ್ಷತೆಗೆ ಮತ್ತು ಸ್ವಚ್ಚತೆಗೆ ಆದ್ಯತೆ ನೀಡಿ ಸಿಬ್ಬಂದಿಗಳಿಗೆ
ಸ್ಯಾನಿಟೈಸರ್, ಮಾಸ್ಕ್ ಮುಂತಾದ ಸುರಕ್ಷಾ ಪರಿಕರಗಳನ್ನು
ನೀಡಬೇಕು. ಇದಕ್ಕಾಗಿ ಕೃಷಿ ಇಲಾಖೆಯಿಂದ ಅಗತ್ಯವಿರುವ
ಪಾಸ್‍ಗಳನ್ನು ನೀಡಲಾಗುವುದು. ಹಾಗೂ ತಮ್ಮಲ್ಲಿ ಕಾರ್ಯ
ನಿರ್ವಹಿಸುವ ಹಮಾಲಿಗಳಿಗೆ ತಮ್ಮ ಅಂಗಡಿ ವತಿಯಿಂದಲೇ ಐಡಿ
ಕಾರ್ಡ್‍ನ್ನು ಅಥವಾ ಅನುಮತಿ ಪತ್ರವನ್ನು ನೀಡಿರಿ ಎಂದರು.
ಒಬ್ಬ ವ್ಯಕ್ತಿ ಒಂದು ಎಕರೆ ಜಾಗದಲ್ಲಿ ಏನಾದರೂ ಬಿತ್ತಿ
ಬೆಳೆದು ಮಾರುಕಟ್ಟೆಯಲ್ಲಿ ಮಾರಿ ಅದರಿಂದ ಬಂದಂತಹ
ಹಣದಿಂದ ಅವನು ಜೀವನ ಮಾಡಬೇಕೆಂದರೆ ಎಷ್ಟು ದೊಡ್ಡ
ಸರಪಳಿ ಇದೆ ಎಂಬುದನ್ನು ಅರಿಯಬೇಕು. ಆ ಸರಪಳಿಯಲ್ಲಿ
ಭಾಗವಹಿಸುವಂತಹ ಪ್ರತಿಯೊಬ್ಬ ವ್ಯಕ್ತಿ, ಸಂಸ್ಥೆ ಹಾಗೂ
ಅವರಿಗೆ ಬೇಕಾದಂತಹ ಅವಶ್ಯಕವಿರುವ ಎಲ್ಲ ವಸ್ತುಗಳಿಗೆ ಈ
ಕ್ಷಣದಿಂದ ನಿರ್ಬಂಧ ಇರುವುದಿಲ್ಲ. ಕೃಷಿಕರು ಮತ್ತು ಕೃಷಿ
ಸಂಬಂಧಿತರನ್ನು ಲಾಕ್‍ಡೌನ್ ಕ್ರಮದಿಂದ ಸಡಿಲಗೊಳಿಸಲಾಗಿದೆ.
21 ದಿನದಿಂದ ಜಿಲ್ಲಾಡಳಿತ ಬಹಳ ಶಿಸ್ತುಬದ್ಧವಾಗಿ ಕ್ರಮ
ಕೈಗೊಂಡಿರುವುದು ಎಲ್ಲರಿಗೂ ಗೊತ್ತಿರುವ
ವಿಷಯವಾಗಿದ್ದು, ಎಲ್ಲರೂ ಸಹಕರಿಸಬೇಕೆಂದರು.
ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹನುಮಂತರಾಯ ಮಾತನಾಡಿ,
ರೈತರ ಕೃಷಿ ಚಟುವಟಿಕೆಗಳಿಗೆ ಯಾವುದೇ
ತೊಂದರೆಯಾಗದಂತೆ ನಿಮ್ಮ ವತಿಯಿಂದಲೇ ಗುರುತಿನ ಚೀಟಿ
ನೀಡಿರಿ. ಈ ಕುರಿತು ಚೆಕ್‍ಪೋಸ್ಟ್‍ಗಳಲ್ಲಿ ತಮ್ಮನ್ನು ತಡೆಯುವ
ಪೊಲೀಸರಿಗೆ ಸೂಚನೆ ನೀಡಲಾಗುವುದು. ಆದರೆ ಈ
ಗುರುತಿನ ಚೀಟಿಗಳು ದುರುಪಯೋಗವಾಗಬಾರದು.
ಕೃಷಿಗೆ ಪೂರಕವಾದ ಟ್ರಾಕ್ಟರ್ ರಿಪೇರಿ, ಬಿಡಿ ಭಾಗಗಳ
ಮಾರಾಟಕ್ಕೆ ಅನುಮತಿ ಇದ್ದು, ಹಾಗೂ ಕೆಲವೊಂದು ಕೊಯ್ಲು
ಯಂತ್ರಗಳನ್ನು ಆಂಧ್ರ ಪ್ರದೇಶದಿಂದ
ತರಿಸಿಕೊಳ್ಳಬೇಕಾಗುತ್ತದೆ. ಅದಕ್ಕಾಗಿ ಅಲ್ಲಿನ
ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಲಾಗುವುದು ಎಂದರು.
ಕೃಷಿ ಪರಿಕರ ವರ್ತಕರ ಸಂಘದ ಅಧ್ಯಕ್ಷ ನಾಗರಾಜು
ಮಾತನಾಡಿ, ನಮ್ಮಲ್ಲಿ 500 ಸರಬರಾಜುದಾರರಿದ್ದು, ಅವರ ಬಳಿ
ಸಹಾಯಕರಾಗಿ ಒಂದಿಬ್ಬರು ಕೆಲಸ ಮಾಡಬೇಕಾಗುತ್ತದೆ.
ಅವರಿಗೆ ಪಾಸ್ ವ್ಯವಸ್ಥೆ ಮಾಡಬೇಕು. ಹಾಗೂ ಟ್ರಾಕ್ಟರ್ ರಿಪೇರಿಗೆ
ಗ್ಯಾರೇಜ್‍ಗಳ ಅವಶ್ಯಕತೆ ಇದ್ದು, ಗ್ಯಾರೇಜ್‍ಗಳನ್ನು
ಒಂದು ನಿರ್ದಿಷ್ಟ ಅವಧಿಯಲ್ಲಿ ಅಥವಾ ದಿನ ಪೂರ್ತಿ
ತೆರೆಯುವಂತೆ ನೋಡಿಕೊಳ್ಳಬೇಕು. ಅಮರಾವತಿ ಬಳಿ
ಇರುವ ರೈಲ್ವೇ ಗೂಡ್ಸ್‍ನಲ್ಲಿ ಕನಿಷ್ಟ 600 ಜನ ಹಮಾಲಿಗಳು
ಕಾರ್ಯ ನಿರ್ವಹಿಸುತ್ತಿದ್ದು, 9 ಗಂಟೆಯೊಳಗಾಗಿ ಸರಕನ್ನು
ಖಾಲಿ ಮಾಡಬೇಕಾಗಿರುತ್ತದೆ. ಅದರಿಂದ ಎಲ್ಲಾ ಹಮಾಲಿಗಳಿಗೂ
ಗುರುತಿನ ಚೀಟಿ ವಿತರಿಸಬೇಕು. ಬಿತ್ತನೆ ಬೀಜ ಹೊರರಾಜ್ಯದಿಂದ
ಬರಬೇಕಾಗಿದ್ದು, ಇದಕ್ಕೆ ಅವಕಾಶ ಮಾಡಿಕೊಡಬೇಕೆಂದರು.
ಕೃಷಿ ಪರಿಕರ ಮಾರಾಟ ಮಳಿಗೆಗಳ ಮುಂದೆ ಸಾರ್ವಜನಿಕರು
ಅಂತರ ಕಾಯ್ದುಕೊಳ್ಳಬೇಕು. ಈ ಸಾಮಾಜಿಕ ಅಂತರ
ಕಾಯ್ದುಕೊಳ್ಳುವ ವ್ಯವಸ್ಥೆಯನ್ನು ಸಂಬಂಧಿಸಿದ
ಅಂಗಡಿಯವರು ಶಿಸ್ತಿನಿಂದ ಮಾಡಬೇಕು. ಒಂದು ವೇಳೆ
ಜನಜಂಗುಳಿ ಕಂಡುಬಂದರೆ ಅಂಡಿಯನ್ನು ಸೀಜ್
ಮಾಡಲಾಗುವುದು.
1077 ಸಹಾಯವಾಣಿಗೆ ಕರೆ ಮಾಡಿ : ಕೃಷಿಗೆ ಸಂಬಂಧಿಸಿದ
ಯಾವುದೇ ರೀತಿಯ ತೊಂದರೆಗಳಿದ್ದಲ್ಲಿ,
ಚೆಕ್‍ಪೋಸ್ಟ್‍ಗಳಲ್ಲಿ ಕೃಷಿಗೆ ಸಂಬಂಧಿಸಿದ ಗಾಡಿಗಳನ್ನು
ತಡೆದರೆ ಸಹಾಯವಾಣಿ 1077 ಗೆ ಕರೆ ಮಾಡಿ ತಿಳಿಸಿದಲ್ಲಿ
ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದರು.
ಹಮಾಲರಿಗೆ 1 ಸಾವಿರ ಆಹಾರದ ಕಿಟ್ : ಜಿಲ್ಲಾಧಿಕಾರಿಗಳ ಕೋರಿಕೆ
ಮೇರೆಗೆ ಕೃಷಿ ಪರಿಕರ ವರ್ತಕರ ಸಂಘದ ಅಧ್ಯಕ್ಷ
ನಾಗರಾಜು ಇವರು ಈಗಾಗಲೇ ಹಮಾಲಿ ಕೆಲಸ ಮಾಡುವವರಿಗೆ
ಅಕ್ಕಿ ದೊರೆತಿದ್ದು, ಉಳಿದ ಆಹಾರ ಪದಾರ್ಥಗಳ ಒಂದು ಸಾವಿರ
ಕಿಟ್‍ಗಳನ್ನು ಸಂಘದ ವತಿಯಿಂದ ನೀಡಲಾಗುವುದು
ಎಂದರು.
ಕೃಷಿ ಜಂಟಿ ನಿರ್ದೇಶಕ ಶರಣಪ್ಪ ಮುದಗಲ್ ಮಾತನಾಡಿ,
ಕೃಷಿ ಪರಿಕರ ಮಾರಾಟಗಾರರು, ರಾಸಾಯನಿಕ ಗೊಬ್ಬರಗಳ
ಮಾರಾಟಗಾರರು, ಬಿತ್ತನೆ ಬೀಜ, ಕೊಯ್ಲು ಯಂತ್ರಗಳು,
ರೇಕ್ ಮೂವ್‍ಮೆಂಟ್, ಬಾಡಿಗೆ ಯಂತ್ರೋಪಕರಣ, ಕೃಷಿ
ಪ್ಯಾಕೇಜಿಂಗ್ ಇಂಡಸ್ಟ್ರಿ, ಕೃಷಿ ಉಪಕರಣಗಳ ದುರಸ್ತಿ ಹಾಗೂ
ಕೃಷಿ ಚಟುವಟಿಕೆಗಳಿಗೆ ಯಾವುದೇ
ತೊಂದರೆಯಾಗುವುದಿಲ್ಲವೆಂದರು.
ಸಭೆಯಲ್ಲಿ ಜಿ.ಪಂ.ಸಿಇಓ ಪದ್ಮಾ ಬಸವಂತಪ್ಪ, ಎಡಿಸಿ ಪೂಜಾರ
ವೀರಮಲ್ಲಪ್ಪ, ಜಿಲ್ಲಾ ಕೋವಿಡ್ ನೋಡಲ್ ಅಧಿಕಾರಿ ಪ್ರಮೋದ್
ನಾಯಕ್, ಎಸಿ ಮಮತಾ ಹೊಸಗೌಡರ್, ಜಿ.ಪಂ ಉಪಕಾರ್ಯದರ್ಶಿ
ಆನಂದ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಲಕ್ಷ್ಮೀಕಾಂತ್
ಬೊಮ್ಮನ್ನಾರ್, ಡಿಹೆಚ್‍ಓ ಡಾ.ರಾಘವೇಂದ್ರಸ್ವಾಮಿ, ಜಿಲ್ಲಾ
ಸರ್ವೇಕ್ಷಣಾಧಿಕಾರಿ ಡಾ.ರಾಘವನ್ ಇತರೆ ಜಿಲ್ಲಾ ಮಟ್ಟದ
ಅಧಿಕಾರಿಗಳು ಹಾಜರಿದ್ದರು.