“ಸಿದ್ದಗಂಗಾ ಸ್ಕೂಲ್ ಶಿವಣ್ಣ ಮೇಷ್ಟ್ರು’’- ಇವರ ಹೆಸರೇ ಒಂದು ಸ್ಪೂರ್ತಿ.
ಇವರು, ನಡೆದಾಡುವ ದೇವರಾದ ಶ್ರೀ ಸಿದ್ಧಗಂಗಾ ಶ್ರೀಗಳ ಆಶೀರ್ವಾದ
ಪಡೆದು, ಬರಿಗೈಯಲ್ಲಿ ದಾವಣಗೆರೆಗೆ ಆಗಮಿಸಿ ನಂತರ ಒಂದು ಬೃಹತ್
ವಿದ್ಯಾಸಂಸ್ಥೆಯನ್ನೇ ಸ್ಥಾಪಿಸಿದ ಅಪ್ರತಿಮ ಕನಸುಗಾರ. ಹಲವು ಏಳು
ಬೀಳುಗಳ, ಸಂಘರ್ಷಗಳ ನಡುವೆಯೂ ತಮ್ಮ ಕನಸನ್ನು
ಸಾಕಾರಗೊಳಿಸಿದ ಅದ್ವಿತೀಯ ಹೋರಾಟಗಾರ. ಲಕ್ಷಾಂತರ ಜನರಿಗೆ ಅಕ್ಷರ
ಫಲದ ಸವಿಯನ್ನು ಉಣಿಸಿದ ಶಿಕ್ಷಣ ಕ್ಷೇತ್ರದ ಹೆಮ್ಮರ. ಜಿಲ್ಲೆಯ
ಮಾತ್ರವಲ್ಲ ರಾಜ್ಯದ ಶಿಕ್ಷಣ ಸಾಧಕರ ಸಾಲಿನಲ್ಲಿ ಇವರ ಹೆಸರು ಅಜರಾಮರ.
ಅವರ ಕಾಯ ನಮ್ಮೊಂದಿಗಿಲ್ಲದಿದ್ದರೂ ಅವರ ಕಾರ್ಯ ಸದಾ ಅಮರ.
ಇವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮಾಗಡಿ ತಾಲ್ಲೂಕಿನ
ಮಳವಳ್ಳಿ ಗ್ರಾಮದ ಶ್ರೀ ಸಿದ್ಧಪ್ಪ ಮತ್ತು ಶ್ರೀಮತಿ ಬಸಮ್ಮ
ದಂಪತಿಗಳಿಗೆ ದ್ವಿತೀಯ ಪುತ್ರರಾಗಿ 17-08-1939ರಂದು ಜನಿಸಿದರು.
ಇವರದ್ದು ಒಂದು ಸಾಮಾನ್ಯ ಕುಟುಂಬ. ಇವರ ತಾತ ಗುಂಡಯ್ಯ ಗಿಡ
ಮೂಲಿಕೆ ಔಷಧಿಗಳನ್ನು ಕೊಡುತ್ತಿದ್ದರಂತೆ.
ನಡೆಯಲಾಗದವರನ್ನು ನಡೆಸುತ್ತಿದ್ದರಂತೆ. ಇಂತಹ
ಗುಂಡಯ್ಯನವರ ಮೊಮ್ಮಗನಾದ ಶಿವಣ್ಣ ಮೇಷ್ಟ್ರು ಅಕ್ಷರ ಮಾಲಿಕೆಯ
ಮೂಲಿಕೆಯನ್ನು ನೀಡಿ, ಲಕ್ಷಾಂತರ ಜನರಿಗೆ ಬದುಕನ್ನೇ ಕೊಟ್ಟದ್ದು
ಅದ್ಭುತ ಯಶೋಗಾಥೆ. ಅಮರ ಸಾಧಕನ ಅಕ್ಷರ ಲೋಕದ ಚರಿತೆ.
ಬಾಲ್ಯದಲ್ಲಿಯೇ ತಮ್ಮ ತಂದೆ-ತಾಯಿಗಳನ್ನು ಕಳೆದುಕೊಂಡ
ಇವರು ಪರರ ಆರೈಕೆಯಲ್ಲಿಯೇ ಬೆಳೆದರು. ಇವರು ಬಾಲ್ಯದಲ್ಲಿ
ಅನುಭವಿಸಿದ ಕಷ್ಟಗಳು ಒಂದೆರಡಲ್ಲ. ಅವೆಲ್ಲದರ ಮಧ್ಯದಲ್ಲೂ ಅವರಿಗೆ
ಓದುವ ಬಯಕೆ ಅದಮ್ಯವಾಗಿತ್ತು. ಇವರ ಪ್ರಾರಂಭದ ಶಿಕ್ಷಣ ಇವರ ಊರಿನ
ಪ್ರೈಮರಿ ಶಾಲೆಯಲ್ಲಿ ನಡೆಯಿತು. ಓದಿನಲ್ಲಿ ಸದಾ ಮುಂದಿದ್ದ ಇವರು,
ಲೋಯರ್ ಸೆಕೆಂಡರಿಯಲ್ಲಿ ಅಂದಿನ ಕಾಲಕ್ಕೆ ಫಸ್ಟ್ ಕ್ಲಾಸಲ್ಲಿ
ತೇರ್ಗಡೆಯಾಗಿದ್ದರು.
ಮುಂದೆ ಓದಬೇಕೆಂಬುದು ಇವರ ಅತೀವ ಬಯಕೆ. ಆದರೆ,
ಓದಿಸುವುವರು ಯಾರೂ ಸಿಗಲಿಲ್ಲ. ಆಗ ಅವರಿಗೆ ದೊರೆತದ್ದು ಸಿದ್ಧಗಂಗಾ
ಕ್ಷೇತ್ರದ ನಡೆದಾಡುವ ದೇವರಾದ ಶ್ರೀ ಶಿವಕುಮಾರ ಮಹಾಸ್ವಾಮಿಗಳ
ಆಶೀರ್ವಾದ ಮತ್ತು ಆಶ್ರಯ. ಶ್ರೀಗಳ ಆಶೀರ್ವಾದದಂತೆ ಸೆಂಟ್ರಲ್
ಕಾಲೇಜ್‍ನಲ್ಲಿ ಇಂಟರ್ ಮೀಡಿಯೇಟ್‍ಗೆ ಸೇರಿಕೊಂಡರು.
ಮುಂದೆ ಮಾಗಡಿಗೆ ಹೋದ ಇವರು ಅಲ್ಲಿ ತಮ್ಮ ಟ್ಯುಟೋರಿಯಲ್
ಪ್ರಾರಂಭಿಸಿದರು. ಎಸ್.ಎಸ್.ಎಲ್.ಸಿಯಲ್ಲಿ ಫೇಲಾದ ಮಕ್ಕಳಿಗೆ ಪಾಠ

ಮಾಡಲಾರಂಭಿಸಿದರು. ಕಡಿಮೆ ಅವಧಿಯಲ್ಲಿಯೇ ಇವರ ಈ ಟ್ಯುಟೋರಿಯಲ್
ದೊಡ್ಡದಾಗಿ ಬೆಳೆಯಿತು. ಆದರೆ 1966 ರಲ್ಲಿ ಮಾಗಡಿಗೆ ಭೀಕರ ಬರಗಾಲ
ಅಪ್ಪಳಿಸಿತು. ಅಲ್ಲಿ ಬದುಕುವುದೇ ದುಸ್ತರವಾಯಿತು. ಆಗ ಮುಂದೆ ಎಲ್ಲಿಗೆ
ಹೋಗ ಬೇಕೆಂದು ತಿಳಿಯದೆ, ಎಡಯೂರಿನ ಶ್ರೀ ಸಿದ್ದಲಿಂಗೇಶ್ವರ ದೇವರ
ಮುಂದೆ ಬೆಂಗಳೂರು, ಮೈಸೂರು ಮತ್ತು ದಾವಣಗೆರೆ ಈ ಮೂರು
ಊರುಗಳ ಹೆಸರನ್ನು ಬರೆದ ಚೀಟಿಯನ್ನಿಟ್ಟು ಕೇಳಿದರು. ಆಗ ಅವರಿಗೆ
ಪ್ರಸಾದವಾಗಿ ದೊರೆತದ್ದು ದಾವಣಗೆರೆ. ಹಾಗೆ ದಾವಣಗೆರೆಗೆ ಶಿವಣ್ಣನವರು
ಎಡಯೂರಿನ ಶ್ರೀ ಸಿದ್ದಲಿಂಗೇಶ್ವರ ದೇವರ ಪ್ರಸಾದವಾಗಿ ದೊರೆತರು!
ಒಬ್ಬರಿಂದ ಇಪ್ಪತ್ತೈದು ರೂಪಾಯಿ ಸಹಾಯವಾಗಿ ಕೇಳಿ ಪಡೆದು,
ದಾವಣಗೆರೆಗೆ ಬಂದಿಳಿದಾಗ ಇವರ ಜೇಬಿನಲ್ಲಿದ್ದುದು ಕೇವಲ ನಾಲ್ಕಾಣೆ!!. ಆದರೆ,
ಮುಂದಿನ ದಿನಗಳಲ್ಲಿ ಇವರು ಮಾಡಿದ ಸಾಧನೆ ನಾಲ್ಕು ದಿಕ್ಕುಗಳಿಗೂ
ವ್ಯಾಪಿಸಿದ್ದು ಇವರ ಹೆಗ್ಗಳಿಕೆ. ಇದಕ್ಕೆ ಇವರಿಗೆ ಇವರೇ ಹೋಲಿಕೆ.
ದಾವಣಗೆರೆಯಲ್ಲೂ ಇವರ ಸಾಧನೆ ಪ್ರಾರಂಭವಾದದ್ದು
ಟ್ಯೂಷನ್‍ನಿಂದಲೇ. ಇಬ್ಬರು ವಿದ್ಯಾರ್ಥಿಗಳಿಂದ ಪ್ರಾರಂಭವಾದ ಇವರ ಬೋಧನೆ
ಕ್ರಮೇಣ ವಿಸ್ತಾರವಾಯಿತು. ಶಿಲ್ಪಿಯ ಕೈಗೆ ಸಿಕ್ಕ ಪ್ರತಿ ಕಲ್ಲೂ
ಮೂರ್ತಿಯಾಗುವಂತೆ ಇವರ ಬಳಿ ಬಂದ ಫೇಲಾದ ಪ್ರತಿ ವಿದ್ಯಾರ್ಥಿಯೂ
ತೇರ್ಗಡೆಯಾಗುತ್ತಿದ್ದರು. ಇವರ ಬೋಧನೆಯಲ್ಲಿ ಅಷ್ಟು
ಸಾಮಥ್ರ್ಯವಿತ್ತು. ಅದರ ಫಲವಾಗಿ ಇವರು ತಮ್ಮ ಶಿವಾನಂದ ಟ್ಯುಟೋರಿಯಲ್
ಪ್ರಾರಂಭಿಸಿದರು. ಅಲ್ಲಿಯವರೆಗೆ ಶಿವಣ್ಣ ಮೇಷ್ಟ್ರಾಗಿದ್ದವರು ಪ್ರಿನ್ಸಿಪಾಲರಾಗಿ
ಬೆಳೆದರು.
ಒಬ್ಬ ಸೇನಾನಿ ಖಡ್ಗದಿಂದ ಒಂದು ಸಾಮ್ರಾಜ್ಯ ಸ್ಥಾಪಿಸಿದರೆ, ಒಬ್ಬ ಸಮರ್ಥ
ಶಿಕ್ಷಕ ಚಾಕ್‍ಪೀಸ್‍ನಿಂದಲೇ ತನ್ನ ಶೈಕ್ಷಣಿಕ ಸಾಮ್ರಾಜ್ಯವನ್ನು
ಸ್ಥಾಪಿಸುತ್ತಾನೆ. ಅದರಂತೆ ಇವರ ಟ್ಯುಟೋರಿಯಲ್ ಕೆಲವೇ ವರ್ಷಗಳಲ್ಲಿ
ಮಾದರಿಯಾಗಿ ಬೆಳೆದು ನಿಂತಿತು. ಸೀಮಿತ ಅವಧಿಗೆ ಮಕ್ಕಳನ್ನು
ಬೋಧಿಸುವುದಕ್ಕಿಂತ ಒಂದು ಶಾಲೆಯನ್ನು ಆರಂಭಿಸಿ ಬೇಕೆಂಬ ಹೆಬ್ಬಯಕೆ
ಅವರಲ್ಲಿ ಮೊಳೆಯಿತು, ಕ್ರಮೇಣ ಚಿಗುರಿತು. ಅದರ ಫಲವಾಗಿ ಜೂನ್ 1, 1970
ರಂದು ದಾವಣಗೆರೆಯಲ್ಲಿ ಇವರ ಶ್ರೀ ಸಿದ್ದಗಂಗಾ ವಿದ್ಯಾಸಂಸ್ಥೆ
ಆರಂಭವಾಯಿತು. ಆಗ ಈ ಶಾಲೆ ಇಂದಿನ ಶಿವಯೋಗಿ ಮಂದಿರದ ಸಮೀಪವಿತ್ತು.
ಮುಂದೆ, 1990 ರಲ್ಲಿ ಇಂದು ಸಿದ್ದಗಂಗಾ ಶಿಕ್ಷಣ ಸಂಸ್ಥೆ ಇರುವ
ನಿವೇಶನವನ್ನು ಖರೀದಿಸಿದರು. ಇದಕ್ಕಾಗಿ ಅವರು ಪಟ್ಟ ಪರಿಶ್ರಮ, ಎದುರಿಸಿದ
ಸವಾಲುಗಳು ಒಂದೆರಡಲ್ಲ. ಈ ನಿವೇಶನವನ್ನು ಖರೀದಿಸಿದ್ದು
ಸಾಧನೆಯಾದರೆ, ಇಂದು ಇಂತಹ ಬೃಹತ್ ವಿದ್ಯಾಸಂಸ್ಥೆಯನ್ನು ಸ್ಥಾಪಿಸುವಲ್ಲಿ
ಇವರು ಮತ್ತು ಇವರ ಕುಟುಂಬದವರು ಎದುರಿಸಿದ ವೇದ£ ಒಂದೆರಡಲ್ಲ.
“ಹರಿಯುವ ನದಿ ಎಂತಹ ಅಡಚಣೆ ಬಂದರೂ ಮುನ್ನುಗ್ಗುತ್ತದೆಯೇ
ಹೊರತು, ಹಿಮ್ಮುಖವಾಗಿ ಹರಿಯುವುದಿಲ್ಲ’’ ಎಂಬ ಮಾತಿದೆ. ಇವರ ಬದುಕಿಗೂ

ರಿವರ್ಸ್ ಗೇರ್ ಎಂಬುದೇ ಇಲ್ಲ. ಶ್ರಮವೇ ಇವರ ಬಲ, ಇವರಲ್ಲಿತ್ತು ಸಾಧಿಸುವ
ಛಲ, ಅದರ ಫಲವಾಗಿ ಇಂದು ಶ್ರೀ ಸಿದ್ದಗಂಗಾ ವಿದ್ಯಾ ಸಂಸ್ಥೆ
ಕಂಗೊಳಿಸುತ್ತಿದೆ. ಸರಿ ಸುಮಾರು 50 ವರ್ಷಗಳ ಕಾಲ ಈ ವಿದ್ಯಾಸಂಸ್ಥೆಯ
ಸಂಸ್ಥಾಪಕರಾಗಿ ಮೇಷ್ಟ್ರಾಗಿ, ಪ್ರಿನ್ಸಿಪಾಲರಾಗಿ, ಸಾರಥಿಯಾಗಿ, ಸ್ಪೂರ್ತಿಯ
ಚೇತನವಾಗಿ ಸಾರ್ಥಕ ಬದುಕನ್ನು ಇವರು ಕಳೆದರು.
ಇವರದ್ದು ಬಹುಮುಖ ಸಾಧನೆ. ಇವರ ಸಾಧನೆ ಕೇವಲ ಶಿಕ್ಷಣ
ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿಲ್ಲ. ಕನ್ನಡಕ್ಕಾಗಿ ನಡೆದ ಗೋಕಾಕ್
ಚಳವಳಿಯಲ್ಲಿ ಇವರು ಸಕ್ರಿಯವಾಗಿ ಹೋರಾಟ ನಡೆಸಿದ್ದಾರೆ. ನಮ್ಮ ದೇಶ,
ಕನ್ನಡ ಭಾಷೆ ಮತ್ತು ಸಂಸ್ಕøತಿಯ ಬಗ್ಗೆ ಇವರಿಗಿದ್ದ ಗೌರವ, ಪ್ರೀತಿ ಅಪಾರ.
ಹಾಗಾಗಿಯೇ 70ರ ದಶಕದಲ್ಲಿಯೇ ದಾವಣಗೆರೆಯಲ್ಲಿ ಕನ್ನಡ ಸೇನೆ,
ಕರ್ನಾಟಕ ದೌರ್ಜನ್ಯ ವಿರೋಧಿ ನಾಗರಿಕ ಸಮಿತಿಗಳನ್ನು ಸ್ಥಾಪಿಸಿದರು. ಹಲವು
ಪತ್ರಿಕೆಗಳನ್ನು ಸ್ಥಾಪಿಸಿದರು.
ಕಷ್ಟದಲ್ಲಿದ್ದವರಿಗೆ ನೆರವು ನೀಡುವುದು ಇವರ ರಕ್ತಗತ ಗುಣ.
ಇವರಿಂದ ನೆರವು ಪಡೆದು ಬೆಳೆದವರು ಅನೇಕರು. ಬೇರೆ ಬೇರೆ
ದೌರ್ಜನ್ಯಗಳಿಗೆ ಬಲಿಯಾದ ಅನೇಕರ ಪರವಾಗಿ ಇವರು ಹೋರಾಟ ನಡೆಸಿದ್ದಾರೆ.
ಹಲವರು ತಮ್ಮ ವಸತಿಯನ್ನು ಕಳೆದುಕೊಂಡಾಗ ಅವರಿಗೆ ವಸತಿ
ಕಲ್ಪಿಸಿಕೊಡಲು ದಿಟ್ಟ ಹೋರಾಟ ನಡೆಸಿದ್ದಾರೆ.
ಇವರ ಬದುಕೇ ಒಂದು ಸಾಧನೆ. ಇವರ ವಿದ್ಯಾಸಂಸ್ಥೆಯಿಂದ ಅರಳಿ
ಬೆಳೆಯುವ ಪ್ರತಿ ವಿದ್ಯಾರ್ಥಿ/ನಿಯೂ ಇವರ ನಿಜವಾದ ಪ್ರಶಸ್ತಿ. ಆದಾಗ್ಯೂ ಇವರ
ಶೈಕ್ಷಣಿಕ, ಸಾಂಸ್ಕøತಿಕ ಸಾಧನೆಯನ್ನು ಗುರುತಿಸಿ, ಶಿಕ್ಷಣ ಸೇವಾ
ಕಲ್ಪತರು ಪ್ರಶಸ್ತಿ, ಕಾರ್ಮಿಕ ಸೇವಾ ಧುರೀಣ, ಸುಬೋಧ ಶಿಕ್ಷಣ ಶಿಲ್ಪಿ,
ಸೋಮೇಶ್ವರ ಶಿಕ್ಷಣ ಸಿರಿ, ಸಾಧನೆಯ ಸಿದ್ಧಿ ಪುರುಷ ಮೊದಲಾದ
ಪ್ರಶಸ್ತಿಗಳು ಪ್ರಶಸ್ತಿಗಳು ಇವರನ್ನು ಅರಸಿ ಬಂದಿವೆ.
ಇವರು ಭೌತಿಕವಾಗಿ ನಮ್ಮನ್ನು ಅಗಲಿದರೂ, ಇವರು ಬೆಳಗಿಸಿದ
ಜ್ಞಾನದ ನಂದಾದೀಪ ಲಕ್ಷಾಂತರ ಜನರಿಗೆ ದಾರಿದೀಪವಾಗಿದೆ. ಇವರು ಕಲಿಸಿದ ವಿದ್ಯೆ,
ಸಂಸ್ಕಾರ, ದೇಶಪ್ರೇಮ, ನೈತಿಕ ಸ್ಥೈರ್ಯ, ಆತ್ಮವಿಶ್ವಾಸ,
ನಾಯಕತ್ವದ ಗುಣ, ಸಮಾಜಮುಖಿ ಮನೋಭಾವ ಮೊದಲಾದವುಗಳೂ
ಎಂದಿಗೂ ಜೀವಂತ ವiತ್ತು ಎಂದೆಂದಿಗೂ ಪ್ರಸ್ತುತ.

ಇವರ ಹೆಸರು ಎಂ. ಎಸ್. ಶಿವಣ್ಣ. ಎಂ.ಎಸ್ ಎಂದರೆ ಮಹಾನ್ ಸಾಧಕ ಎಂದು
ಬರೆದರೆ ಅತಿಶಯೋಕ್ತಿಯಾಗಲಾರದು. ಸಾಧನೆಗೆ ಅನ್ವರ್ಥನಾಮವೇ
ಶಿವಣ್ಣ. ಹಾಳು ಕೊಂಪೆಯಂತಿದ್ದ ನೆಲದಲ್ಲಿ ಶಿಕ್ಷಣದ ತೇರನ್ನು ಎಳೆಯಲು
ಇವರು ಬೆವರನ್ನು ಮಾತ್ರವಲ್ಲ ನೆತ್ತರನ್ನೂ ಹರಿಸಿದ್ದಾರೆ. ಅದರ
ಫಲವಾಗಿಯೇ ಇಂದು ಐದು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳ ಪಾಲಿಗೆ ಅದು

ಸರಸ್ವತಿಯ ನೆಲೆಯಾಗಿದೆ ಸ್ಪೂರ್ತಿಯ ನೆಲೆಯಾಗಿದೆ. ಖಂಡಿತವಾಗಿಯೂ
ಇವರು ಸಿದ್ದಗಂಗೆಯ ಸಿರಿ. ಶಿಕ್ಷಣ ಕ್ಷೇತ್ರದ ಸಾಧಕರಲ್ಲಿ ಅನುಪಮ ಗಿರಿ.
ದಿವ್ಯ ಜೀವನವನ್ನು ಮತ್ತು ದೀರ್ಘ ಜೀವನವನ್ನು ಕಳೆದ ಇವರ ಬದುಕು
ಶಿಕ್ಷಣ ಪ್ರೇಮಿಗಳಿಗೆ ಒಂದು ಮಾದರಿ.

Leave a Reply

Your email address will not be published. Required fields are marked *