ದಾವಣಗೆರೆ ಏ.24
ಕೋವಿಡ್-19 ನಿಯಂತ್ರಣ ಹಿನ್ನೆಲೆಯಲ್ಲಿ ನಗರದ ಚಿಗಟೇರಿ
ಜಿಲ್ಲಾ ಆಸ್ಪತ್ರೆಗೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹಾಗೂ ಜಿಲ್ಲಾ
ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಭೇಟಿ ನೀಡಿ ಪರಿಶೀಲನೆ
ನಡೆಸಿದರು.
ಜಿಲ್ಲೆಯಲ್ಲಿ ಈಗಾಗಲೇ ಖಚಿತಪಟ್ಟ ಮೂರು ಪ್ರಕರಣದಲ್ಲಿ
ಮೂವರೂ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ
ತೆರಳಿದ್ದಾರೆ. ಈ ಹಿನ್ನೆಲೆಯಲ್ಲಿ ಕೊರೊನಾ ವೈರಸ್
ನಿಯಂತ್ರಿಸುವ ನಿಟ್ಟಿನಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ
ಮುಂಜಾಗ್ರತ ಕ್ರಮವಾಗಿ ಹೆಚ್ಚಿನ ಕ್ರಮ ಕೈಗೊಳ್ಳಲು
ವೈದ್ಯರಿಗೆ ಸಲಹೆ ಸೂಚನೆಗಳನ್ನು ನೀಡಿ ವೈದ್ಯರಿಂದ ಕೋವಿಡ್
ಕುರಿತು ಮಾಹಿತಿ ಪಡೆದರು.
ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ, ಜಿಲ್ಲಾ
ಆಸ್ಪತ್ರೆಯಲ್ಲಿರುವ ಐಸೋಲೇಷನ್ ವಾರ್ಡ್‍ನ್ನು 100 ಬೆಡ್‍ಗಳ
ವಾರ್ಡ್‍ಗಳಾಗಿ ಸಿದ್ಧಪಡಿಸಿಕೊಳ್ಳಬೇಕು. ಕಾಮಗಾರಿಗೆ
ಸಂಬಂಧಿಸಿದಂತೆ ಎಷ್ಟೇ ಅನುದಾನ ಬೇಕಿದ್ದರೂ ಕೇಳಿ ಎಂದರು.
ಜೊತೆಗೆ ಪ್ರತಿ ತಾಲ್ಲೂಕುಗಳಲ್ಲಿ ಐಸೊಲೇಷನ್ ವಾರ್ಡ್‍ಗಳಲ್ಲಿ
ಅಗತ್ಯಕ್ಕಿಂತ ಹೆಚ್ಚುವರಿ ಬೆಡ್‍ಗಳ ವ್ಯವಸ್ಥೆ
ಮಾಡಿಕೊಳ್ಳಬೇಕು ಎಂದು ವೈದ್ಯರಿಗೆ ಸೂಚಿಸಿದ ಅವರು,
ಆಸ್ಪತ್ರೆಯಲ್ಲಿ ಸ್ಯಾನಿಟೈಸರ್ ಫ್ಯಾನ್ ತಯಾರಿಸಲಾಗಿದೆ.
ಜಿಲ್ಲೆಯಲ್ಲಿ ಇದೊಂದು ಹೊಸ ಅನ್ವೇಷಣೆಯಾಗಿದೆ ಎಂದು
ಶ್ಲಾಘಿಸಿದರು.


ಬಳಿಕ ಆಸ್ಪತ್ರೆಯ ತುರ್ತು ಚಿಕಿತ್ಸಾ ಕೇಂದ್ರ,
ಪ್ರಯೋಗಾಲಯಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಆಸ್ಪತ್ರೆಯಲ್ಲಿನ ರೋಗಿಗಳನ್ನು ಮಾತನಾಡಿಸಿ ಆರೋಗ್ಯ
ವಿಚಾರಿಸಿದರು. ಆಸ್ಪತ್ರೆಯ ಶುಚಿತ್ವಕ್ಕೆ ಒತ್ತು ನೀಡಬೇಕು
ಎಂದು ಅಲ್ಲಿನ ಸಿಬ್ಬಂದಿಗಳಿಗೆ ಸೂಚಿಸಿದರು. ಹಾಗೂ ಕೋವಿಡ್ 19 ರ
ನಿಯಂತ್ರಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಕರೋನ
ಸೈನಿಕರು ನೀವು ಎಂದು ವೈದ್ಯಕೀಯ ಸಿಬ್ಬಂದಿಗಳನ್ನು
ಶ್ಲಾಘಿಸಿದರು.
ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಅವರ ಸಮ್ಮುಖದಲ್ಲಿ
ಮಾಧ್ಯಮ ವರದಿಗಾರರಿಗೆ ಕೋವಿಡ್-19 ಪರೀಕ್ಷೆ ತಪಾಸಣೆ
ನಡೆಸಲಾಯಿತು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ
ಡಾ.ರಾಘವೇಂದ್ರಸ್ವಾಮಿ, ಜಿಲ್ಲಾಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕ
ಡಾ.ನಾಗರಾಜ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ರಾಘವನ್,
ಡಾ.ಶಶಿಧರ್ ಇದ್ದರು.

Leave a Reply

Your email address will not be published. Required fields are marked *