ದಾವಣಗೆರೆ ಏ.28
ಜಿಲ್ಲೆಯಲ್ಲಿ ಕೊರೊನಾ ವೈರಸ್ ನಿಯಂತ್ರಣದೊಂದಿಗೆ
ಲಾಕ್‍ಡೌನ್ ಹಿನ್ನೆಲೆಯಲ್ಲಿ ಆಹಾರ ವಿತರಣೆ ಸೇರಿದಂತೆ ಇನ್ನಿತರೆ ಎಲ್ಲ
ಅಗತ್ಯ ಚಟುವಟಿಕೆಗಳನ್ನು ಅಧಿಕಾರಿಗಳು ಶಾಸಕರು,
ಸಂಸದರು ಮತ್ತು ಜನಪ್ರತಿನಿಧಿಗಳ
ಸಹಯೋಗದೊಂದಿಗೆ ಸಮರ್ಪಕವಾಗಿ ನಿರ್ವಹಿಸಲಾಗಿದೆ ಎಂದು
ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ
ವ್ಯವಹಾರಗಳ ಸಚಿವ ಕೆ.ಗೋಪಾಲಯ್ಯ ಹೇಳಿದರು.
ಇಂದು ಜಿಲ್ಲಾಡಳಿತ ಭವನದ ತುಂಗಭದ್ರ ಸಭಾಂಗಣದಲ್ಲಿ
ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಏರ್ಪಡಿಸಲಾಗಿದ್ದ ಪ್ರಗತಿ
ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಪ್ರಸ್ತುತ ಇಡೀ ದೇಶ
ಸಂಕಷ್ಟದಲ್ಲಿದ್ದು, ಯಾವುದೇ ಒಬ್ಬ ವ್ಯಕ್ತಿ ಊಟ ಇಲ್ಲದೇ
ಉಪವಾಸ ಇರಬಾರದೆಂಬ ಸರ್ಕಾರದ ಆಶಯದಂತೆ ಕೇಂದ್ರ
ಮತ್ತು ರಾಜ್ಯ ಸರ್ಕಾರ ಬಡವರಿಗೆ ಮೂರು ತಿಂಗಳ
ಪಡಿತರವನ್ನು ಉಚಿತವಾಗಿ ನೀಡುತ್ತಿದ್ದು, ಇದು ಅವಶ್ಯಕತೆ
ಇರುವವರೆಲ್ಲರಿಗೆ ಸಮರ್ಪಕವಾಗಿ ತಲುಪಬೇಕು. ರಾಜ್ಯದಲ್ಲಿ
ಏಪ್ರಿಲ್ ಮತ್ತು ಮೇ ತಿಂಗಳಿನ ಪಡಿತರ ಶೇ.94.33
ವಿತರಣೆಯಾಗಿದ್ದು, ಇದು ದಾಖಲೆಯ ವಿತರಣೆ ಎನ್ನಬಹುದು.
ಜೊತೆಗೆ ಪೋರ್ಟಬಲಿಟಿ ನಿರ್ವಹಿಸಿ ಎಲ್ಲಿ ಬೇಕಾದರೂ
ರೇಷನ್‍ಕಾರ್ಡ್‍ದಾರರು ಪಡಿತರ ಪಡೆಯುವಂತೆ ವ್ಯವಸ್ಥೆ
ಮಾಡಲಾಗಿದ್ದು, ಪಡಿತರ ಅಂಗಡಿಯವರು ಒಂದು
ರೂಪಾಯಿಯನ್ನೂ ಪಡಿತರದಾರರಿಂದ ಪಡೆಯದೇ

ತೂಕದಲ್ಲೂ ವ್ಯತ್ಯಾಸವಾಗದಂತೆ ಪಡಿತರ
ವಿತರಿಸಬೇಕೆಂದರು.
ಆಹಾರ ಇಲಾಖೆಯವರು ಪ್ರತಿ ಅಂಗಡಿ ಮುಂದೆ
ಪಡಿತರದಾರರಿಗೆ ನೀಡುವ ಪಡಿತರ ಮತ್ತು ದರದ
ಪಟ್ಟಿಯನ್ನು ಎದ್ದುಕಾಣುವಂತೆ ಹಾಕಬೇಕು.
ಮುಖ್ಯಮಂತ್ರಿ ಅನಿಲಭಾಗ್ಯ ಮತ್ತು ಪ್ರಧಾನ ಮಂತ್ರಿ
ಉಜ್ವಲ ಯೋಜನೆಯ ಫಲಾನುಭವಿಗಳಿಗೆ 3 ತಿಂಗಳ ಎಲ್‍ಪಿಜಿ
ಗ್ಯಾಸ್‍ನ್ನು ಉಚಿತವಾಗಿ ನೀಡಲಾಗುತ್ತಿದೆ. ಅನಿಲಭಾಗ್ಯ
ಯೋಜನೆಯಡಿ ರಾಜ್ಯದಲ್ಲಿ 31.5 ಲಕ್ಷ ಜನರಿಗೆ ಮತ್ತು
ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಒಂದು ಲಕ್ಷ
ಕುಟುಂಬಗಳಿಗೆ ಮೂರು ತಿಂಗಳ ಗ್ಯಾಸ್‍ನ್ನು ಉಚಿತವಾಗಿ
ನೀಡಲಾಗುತ್ತಿದೆ.
ರಾಗಿ, ಭತ್ತ, ಜೋಳಗಳನ್ನು ಸಮರ್ಪಕವಾಗಿ ಸಂಗ್ರಹಿಸಿ
ವಿತರಣೆ ಮಾಡುವ ವ್ಯವಸ್ಥೆ ಮಾಡಿಕೊಳ್ಳಬೇಕು. ಅಲೆಮಾರಿ
ಜನಾಂಗಗಳು ಮತ್ತು ರೇಷನ್ ಕಾರ್ಡ್ ಇಲ್ಲದವರಿಗೆ ಎಸ್‍ಡಿಆರ್‍ಎಫ್
ಅನುದಾನದಲ್ಲಿ ಆಹಾರ ಧಾನ್ಯ ಕೊಡಿಸುವ ವ್ಯವಸ್ಥೆ
ಮಾಡಬೇಕು.
ಜಿಲ್ಲಾ ಕೇಂದ್ರದಲ್ಲಿ ಡಿಸಿ ಯವರಿಗೆ ಮನವಿ ಮಾಡಿ ಸುಮಾರು 3 ರಿಂದ
5 ಎಕರೆ ಜಾಗ ಗುರುತಿಸಿ ಆಹಾರ ಇಲಾಖೆ ಸ್ವಂತ ಗೋದಾಮು
ಕಟ್ಟಡ ನಿರ್ಮಿಸಲು ವ್ಯವಸ್ಥೆ ಮಾಡಿಕೊಳ್ಳಬೇಕು. ಜೊತೆಗೆ
ಪ್ರತಿ ತಾಲ್ಲೂಕುಗಳಲ್ಲೂ ಸ್ವಂತ ಗೋದಾಮಿಗೆ ಜಾಗ
ಗುರುತಿಸಬೇಕೆಂದರು.
ಸಂಸದರಾದ ಜಿ.ಎಂ.ಸಿದ್ದೇಶ್ವರ ಮಾತನಾಡಿ, ಜಿಲ್ಲೆಯಲ್ಲಿ
ಪಡಿತರ ಸಮರ್ಪಕವಾಗಿ ವಿತರಣೆಯಾಗಬೇಕು. ನಕಲು
ರೇಷನ್ ಕಾರ್ಡ್‍ದಾರರು ಪಡಿತರ ಪಡೆಯುತ್ತಿದ್ದಾರೆಂಬ
ದೂರುಗಳಿದ್ದು, ಅಧಿಕಾರಿಗಳು ತಾಲ್ಲೂಕುಗಳ ಪ್ರತಿ
ಪಡಿತರ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕ್ರಮ
ಕೈಗೊಳ್ಳಬೇಕು. ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ
ಯೋಜನೆಯಡಿ ಮೇ 5 ರಿಂದ ಪ್ರತಿ ಕುಟುಂಬಕ್ಕೆ 10 ಕೆ.ಜಿ ಅಕ್ಕಿ
ಮತ್ತು 2 ಕೆ ಜಿ ತೊಗರಿಬೇಳೆ ವಿತರಣೆ ಮಾಡಲು
ಸೂಚಿಸಿಲಾಗಿದ್ದು, ತೊಗರಿಬೇಳೆ ದಾಸ್ತಾನು ಕಡಿಮೆ
ಇರುವುದರಿಂದ 1 ಕೆ ಜಿ ತೊಗರಿಬೇಳೆ ನೀಡಲಾಗುವುದು. ಈ
ಪಡಿತರ ವಿತರಣೆಯಲ್ಲಿ ಯಾವುದೇ ವ್ಯತ್ಯಾಸ ಆಗಬಾರದು.
ಪಡಿತರ ಅವ್ಯವಹಾರ, ಲೀಕೇಜ್ ಹೀಗೆ ಎಲ್ಲವನ್ನು ಅಧಿಕಾರಿಗಳು
ಗಮನ ಹರಿಸಿ ಈ ಸಮಯದಲ್ಲಿ ಯಾವುದೇ ರೀತಿ ಅವ್ಯವಹಾರ

ಆಗದಂತೆ ಅವಶ್ಯಕತೆ ಇರುವವರಿಗೆ ಪಡಿತರ ಸಮರ್ಪಕವಾಗಿ
ತಲುಪಬೇಕೆಂದರು.
ಶಾಸಕರಾದ ಮಾಡಾಳ್ ವಿರೂಪಾಕ್ಷಪ್ಪ ಮಾತನಾಡಿ, ಚನ್ನಗಿರಿ
ತಾಲ್ಲೂಕಿನ ಗೋಪನಾಳು, ಅಸ್ತಾಪನಹಳ್ಳಿಯಲ್ಲಿ ಹಕ್ಕಿಪಿಕ್ಕಿ
ಅಲೆಮಾರಿ ಜನಾಂಗದವರು ಇದ್ದು ಇವರ ಬಳಿ ಪಡಿತರ ಚೀಟಿ ಇಲ್ಲ.
ಹಾಗೂ ಇನ್ನೂ ಹಲವರಿಗೆ ಪಡಿತರ ಚೀಟಿ ಇಲ್ಲ ಈ ತರದವರು
ಸುಮಾರು 800 ಹೆಚ್ಚು ಜನರಿದ್ದು ಇವರಿಗೆ ಪಡಿತರ ನೀಡುವ
ವ್ಯವಸ್ಥೆಯಾಗಬೇಕು. ಹಾಗೂ ಚನ್ನಗಿರಿ ಸೇರಿದಂತೆ ಹಲವೆಡೆ
ಅನೇಕ ಕಾರ್ಡ್‍ಗಳನ್ನು ಹೊಂದಿರುವ ಪಡಿತರ
ಅಂಗಡಿಗಳಿದ್ದು ದೂರ ದೂರದಿಂದ ಬಂದು ಪಡಿತರ
ತೆಗೆದುಕೊಂಡು ಹೋಗಬೇಕಿದೆ. ಆದ್ದರಿಂದ ಕಾರ್ಡುಗಳ
ಸಂಖ್ಯೆಯನ್ನು ವಿಭಜಿಸಿ ಹೊಸ ಪಡಿತರ ಅಂಗಡಿಗಳನ್ನು
ಸ್ಥಾಪಿಸಬೇಕೆಂದು ಮನವಿ ಮಾಡಿದರು.
ಶಾಸಕರಾದ ಎಸ್.ವಿ.ರಾಮಚಂದ್ರ ಮಾತನಾಡಿ, ಜಗಳೂರಿನಲ್ಲಿ ಈ ರೀತಿ
ಸಮಸ್ಯೆ ಇದೆ, ಅಲ್ಲಿಯೂ ಹೊಸ ಪಡಿತರ ಅಂಗಡಿಗಳನ್ನು
ತೆರೆಯಬೇಕೆಂದರು. ಶಾಸಕರದ ಪ್ರೊ.ಲಿಂಗಣ್ಣ ಮಾತನಾಡಿ,
ತಮ್ಮ ಕ್ಷೇತ್ರದಲ್ಲಿಯೂ ಅನೇಕ ಬಡವರಿಗೆ ರೇಷನ್ ಕಾರ್ಡ್
ಇಲ್ಲ. ಅವರಿಗೆ ಪಡಿತರ ವ್ಯವಸ್ಥೆ ಜೊತೆಗೆ ಹೊಸ ಪಡಿತರ
ಅಂಗಡಿಗಳನ್ನು ತೆರೆಯಬೇಕೆಂದರು.
ಆಹಾರ ಸಚಿವರು, ಈ ಕುರಿತು ಕೊರೊನಾ ಹಾವಳಿ ಮುಗಿದ
ನಂತರ ಶಾಸಕರು, ಸಂಸದರು, ಅಧಿಕಾರಿಗಳೊಂದಿಗೆ ಸಭೆ
ನಡೆಸಿ, ಆಹಾರ ಸಮರ್ಪಕ ವಿತರಣೆ, ಪಡಿತರ ಚೀಟಿ, ಅಂಗಡಿ ಇತರೆ
ಬಗ್ಗೆ ಕೂಲಂಕಷವಾಗಿ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು
ಎಂದರು.
ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ, ಜಿಲ್ಲೆಯಲ್ಲಿ
ದಾಖಲಾಗಿದ್ದ ಮೂರು ಪ್ರಕರಣಗಳ ಸೋಂಕಿತರು
ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು,
ಪ್ರಕರಣ ದಾಖಲಾಗಿ 28 ದಿನಗಳು ಕಳೆದರೂ ಹೊಸ
ಸೋಂಕು ಪ್ರಕರಣ ದಾಖಲಾಗದ ಕಾರಣ ನಿಯಮಾನುಸಾರ
ಜಿಲ್ಲೆಯನ್ನು ಇದೀಗ ಗ್ರೀನ್ ವಲಯಕ್ಕೆ
ಸೇರ್ಪಡೆಗೊಳಿಸಲಾಗಿದೆ. ಜಿಲ್ಲೆಯಲ್ಲಿ 145 ವಿದೇಶ ಪ್ರಯಾಣ
ಇತಿಹಾಸ ಇರುವುವವರು ಸೇರಿದಂತೆ ಇತರೆ ಎಪಿಸೆಂಟರ್‍ಗಳಿಂದ
ಬಂದ ಒಟ್ಟು 624 ಜನರನ್ನು ಕ್ವಾರಂಟೈನ್ ಮಾಡಿ ಕ್ರಮ
ಕೈಗೊಳ್ಳಲಾಗಿದೆ. ದುರ್ಬಲ ಆರೋಗ್ಯವಿರುವವರ
ಸಮೀಕ್ಷೆಯನ್ನು ಆರೋಗ್ಯ ಇಲಾಖೆ ನಡೆಸಿದೆ. ಪ್ರತಿದಿನ

ಸರ್ವೇ ಮೂಲಕ ಪತ್ತೆಯಾದ ತೀವ್ರ ಉಸಿರಾಟದ ತೊಂದರೆ
ಮತ್ತು ಶೀತ ಕೆಮ್ಮು ಜ್ವರದಂತಹ ಪ್ರಕರಣಗಳಲ್ಲಿ
ಗಂಟಲು ದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆಗೆ
ಕಳುಹಿಸಿಕೊಡಲಾಗುತ್ತಿದೆ ಇದುವರೆಗೆ ಜಿಲ್ಲೆಯಲ್ಲಿ 611
ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಿದ್ದು 564 ಮಾದರಿಗಳು
ನೆಗೆಟಿವ್ ಎಂದು ವರದಿ ಬಂದಿವೆ.
ಲಾಕ್‍ಡೌನ್ ಹಿನ್ನೆಲೆಯಲ್ಲಿ ದಾನಿಗಳ ಮೂಲಕ ನೀಡಲಾದ 21,495
ಆಹಾರದ ಕಿಟ್‍ಗಳ ಪೈಕಿ ಬಡವರಿಗೆ ಇದುವರೆಗೆ 19465
ಕಿಟ್‍ಗಳನ್ನು ವಿತರಣೆ ಮಾಡಲಾಗಿದೆ. ವಿವಿಧ ಸಂಘ
ಸಂಸ್ಥೆಗಳು, ಶಾಸಕರು, ಸಂಸದರು ಮತ್ತು ದಾನಿಗಳು
ಸಹ ಆಹಾರದ ಕಿಟ್‍ಗಳನ್ನು ನೀಡುತ್ತಿದ್ದಾರೆ.
ಎಪಿಎಂಸಿ ಮೂಲಕ ದರ ನಿಗದಿಗೊಳಿಸಿ ತರಕಾರಿಗಳನ್ನು 300
ತಳ್ಳುಗಾಡಿಗಳ ಮೂಲಕ ಗ್ರಾಹಕರ ಮನೆ ಬಾಗಿಲಿಗೆ
ಹೋಗುವಂತೆ ವ್ಯವಸ್ಥೆ ಮಾಡಲಾಗಿದೆ. ಎಪಿಎಂಸಿ ಯಲ್ಲಿ ರೈತರಿಂದ
ಕೃಷಿ ಉತ್ಪನ್ನಗಳಾದ ಭತ್ತ, ರಾಗಿ, ಶೇಂಗಾ ಮತ್ತು
ಮೆಕ್ಕೆಜೋಳ ಆವಕ ದುಪ್ಪಟ್ಟಾಗಿದ್ದು, ಮಾರುಕಟ್ಟೆ
ವ್ಯವಸ್ಥೆ ಚೆನ್ನಾಗಿ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.
ಆಹಾರ ಇಲಾಖೆ ಉಪ ನಿರ್ದೇಶಕ ಮಂಟೇಸ್ವಾಮಿ ಮಾತನಾಡಿ,
ಜಿಲ್ಲೆಯಲ್ಲಿ 681 ನ್ಯಾಯಬೆಲೆ ಅಂಗಡಿಗಳಿದ್ದು, 10
ಗೋದಾಮುಗಳಿವೆ. 45536 ಅಂತ್ಯೋದಯ, 334702 ಬಿಪಿಎಲ್
ಮತ್ತು 31915 ಎಪಿಎಲ್ ಸೇರಿ ಒಟ್ಟು 412153 ಪಡಿತರ ಚೀಟಿಗಳಿವೆ.
ಎಎವೈ ಮತ್ತು ಬಿಪಿಎಲ್ ಸೇರಿ 379955 ಪಡಿತರ ಚೀಟಿದಾರರಿದ್ದು
ಅವರಲ್ಲಿ 368174 ಪಡಿತರ ಚೀಟಿದಾರರು ಆಹಾರಧಾನ್ಯವನ್ನು
ಪಡೆದಿರುತ್ತಾರೆ ಹಾಗೂ 8437 ಎಪಿಎಲ್ ಪಡಿತರ ಚೀಟಿದಾರರಿದ್ದು
ಅವರಲ್ಲಿ 2888 ಪಡಿತರದಾರರು ಪಡಿತರ ಪಡೆದಿದ್ದು, ಶೇ.96
ಪಡಿತರ ವಿತರಣೆಯಾಗಿದೆ.
ಪ್ರಧಾನ ಮಂತ್ರಿ ಉಜ್ವ ಯೋಜನೆಯಡಿ ಒಟ್ಟು 85564
ಫಲಾನುಭವಿಗಳಿದ್ದು 80430 ಫಲನುಭವಿಗಳ ಖಾತೆಗೆ ಹಣ
ಪಾವತಿಯಾಗಿರುತ್ತದೆ. ಜಿಲ್ಲೆಗೆ ಹಂಚಿಕೆಯಾಗಿರುವ 14238
ಮೆಟ್ರಿಕ್ ಅಕ್ಕಿ ಮತ್ತು 1340 ಮೆಟ್ರಿಕ್ ಟನ್ ಗೋಧಿಯನ್ನು
ಆಹಾರ ನಿಗಮದ ಗೋದಾಮುಗಳಿಗೆ ಕರ್ನಾಟಕ ಆಹಾರ
ನಿಗಮದ ಗೋದಾಮುಗಳಿಗೆ ಎತ್ತುವಳಿ ಮಾಡಿಸಿ ನ್ಯಾಯಬೆಲೆ
ಅಂಗಡಿಗಳಿಗೆ ಸಾಗಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು ಎಎವೈ ಮತ್ತು
ಬಿಪಿಎಲ್ ಸೇರಿ 379955 ಪಡಿತರ ಚೀಟಿಗಳಿದ್ದು ಇದರಲ್ಲಿ 368174
ಪಡಿತರ ಚೀಟಿಗಳಿಗೆ ಆಹಾರಧಾನ್ಯ ವಿತರಣೆ ಆಗಿರುತ್ತದೆ

ಹಾಗೂ ಒಟ್ಟು 8437 ಎನ್‍ಪಿಹೆಚ್‍ಹೆಚ್ (ಎಪಿಎಲ್)ಪಡಿತರ ಚೀಟಿದಾರರಿದ್ದು
ಇದರಲ್ಲಿ 2888 ಪಡಿತರ ಚೀಟಿಗಳಿಗೆ ಆಹಾರಧಾನ್ಯ ವಿತರಣೆ
ಆಗಿರುತ್ತದೆ. ಪಡಿತರ ಚೀಟಿಗಾಗಿ ಹೊಸದಾಗಿ 3144 ಅರ್ಜಿ ಸಲ್ಲಿಸಿದ್ದು,
ಅದರಲ್ಲಿ 824 ಅರ್ಜಿದಾರರಿಗೂ ಸಹ 10.ಕೆ.ಜಿ ಯಂತೆ ಅಕ್ಕಿಯನ್ನು
ಈಗಾಗಲೇ ವಿತರಿಸಲಾಗಿದೆ.
ಏಪ್ರಿಲ್ ಮತ್ತು ಮೇ ಮಾಹೆಗಳಿಗೆ ಕೇಂದ್ರ ಸರ್ಕಾರದಿಂದ
ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ ಜಿಲ್ಲೆಗೆ
13037 ಮೆಟ್ರಿಕ್ ಟನ್ ಅಕ್ಕಿ ಮತ್ತು 380 ಮೆ.ಟನ್ ತೊಗರಿಬೇಳೆ
ಬಿಡುಗಡೆಯಾಗಿದ್ದು ಎರಡೂ ತಿಂಗಳ ಪಡಿತರವನ್ನು ಮೇ
ಮಾಹೆಯಲ್ಲಿ ಪ್ರತಿ ಬಿಪಿಎಲ್ ಪಡಿತರ ಚೀಟಿಯಲ್ಲಿನ ಪ್ರತಿ
ಸದಸ್ಯರಿಗೆ 10 ಕೆ.ಜಿ. ಅಕ್ಕಿ ಹಾಗೂ ಪ್ರತಿ ಪಡಿತರ ಚೀಟಿಗೆ 1
ಕೆ.ಜಿ.ಯಂತೆ ತೊಗರಿಬೇಳೆಯನ್ನು ಉಚಿತವಾಗಿ
ವಿತರಿಸಲಾಗುವುದು. ಎಎವೈ ಪಡಿತರ ಚೀಟಿದಾರರಿಗೆ ಪ್ರತಿ
ಸದಸ್ಯರಿಗೆ 10 ಕೆ.ಜಿ. ಅಕ್ಕಿ ಹಾಗೂ ಪ್ರತಿ ಎಎವೈ ಪಡಿತರ ಚೀಟಿಗೆ 1
ಕೆ.ಜಿ ಯಂತೆ ತೊಗರಿಬೇಳೆಯನ್ನು ಉಚಿತವಾಗಿ
ವಿತರಿಸಲಾಗುತ್ತದೆ ಹಾಗೂ ಎಪಿಎಲ್ ಪಡಿತರ ಚೀಟಿದಾರರಿಗೆ ಒಬ್ಬ
ಸದಸ್ಯನಿಗೆ 5 ಕೆ.ಜಿ ಅಕ್ಕಿ ಹಾಗೂ ಎರಡು ಮತ್ತು ಎರಡಕ್ಕಿಂತ
ಹೆಚ್ಚು ಸದಸ್ಯರಿರುವ ಪಡಿತರ ಚೀಟಿಗೆ 10 ಕೆ.ಜಿ.ಅಕ್ಕಿಯನ್ನು
ರೂ.15 ರಂತೆ ವಿತರಿಸಲಾಗುವುದು ಎಂದರು.
ಜಿಲ್ಲೆಯ ವಿವಿಧ ನ್ಯಾಯಬೆಲೆ ಅಂಗಡಿಗಳಿಗೆ ಡಿಸಿ, ಎಸ್‍ಪಿ, ಸಿಇಓ,
ಅಧಿಕಾರಿಗಳು, ಸಂಸದರು, ಶಾಸಕರು ಅನೇಕ ವೇಳೆ
ಆಕಸ್ಮಿಕ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ರೀತಿ ಆಕಸ್ಮಿಕ ಭೇಟಿ
ವೇಳೆ ಲೋಪದೋಷ ಕಂಡು ಬಂದ ಒಟ್ಟು 8 ನ್ಯಾಯಬೆಲೆ
ಅಂಗಡಿಗಳನ್ನು ಅಮಾನತ್ತುಪಡಿಸಲಾಗಿದೆ. 4 ನ್ಯಾಯಬೆಲೆ
ಅಂಗಡಿಗಳಿಗೆ ನೋಟಿಸ್ ನೀಡಲಾಗಿದೆ. ಹಾಗೂ ಕಾಳಸಂತೆಯಲ್ಲಿ
ಪಡಿತರ ಮಾರಾಟ ಮಾಡುತ್ತಿದ್ದವರ ವಿರುದ್ದ 5
ಪ್ರಕರಣಗಳನ್ನು ದಾಖಲಿಸಲಾಗಿದೆ.
ಜಿಲ್ಲೆಯಲ್ಲಿ ಮುಖ್ಯಮಂತ್ರಿ ಅನಿಲಭಾಗ್ಯ ಯೋಜನೆಯಡಿ 629
ಫಲಾನುಭವಿಗಳಿಗೆ ಅಡುಗೆ ಅನಿಲ ಸಂಪರ್ಕ ಒದಗಿಸಲು ಗುರಿ
ನಿಗದಿಪಡಿಸಲಾಗಿದ್ದು, ಎಲ್ಲಾ 629 ಫಲಾನುಭವಿಗಳಿಗೆ ಅಡುಗೆ
ಅನಿಲ ಸಂಪರ್ಕ ಒದಗಿಸಲಾಗಿದ್ದು ಶೇ.100 ಗುರಿ ಸಾಧಿಸಲಾಗಿದೆ.
ರಾಗಿ ಖರೀದಿಸಲು ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ
ಜಲ್ಲೆಯಲ್ಲಿ 4 ಖರೀದಿ ಕೇಂದ್ರಗಳನ್ನು ದಾವಣಗೆರೆ, ಹರಿಹರ,
ಜಗಳೂರು ಮತ್ತು ಹೊನ್ನಾಳಿ ತಾಲ್ಲೂಕುಗಳಲ್ಲಿ
ತೆರೆಯಲಾಗಿದ್ದು, ಒಟ್ಟು 676 ರೈತರು ನೋಂದಣಿ ಮಾಡಿಸಿದ್ದು

ಇದಲ್ಲಿ 649 ರೈತರಿಂದ 1352.352 ಮೆ.ಟನ್ ರಾಗಿ ಖರೀದಿಸಲಾಗಿದೆ. ಉಳಿದ
212 ರೈತರಿಂದ 1060 ಮೆ.ಟನ್ ರಾಗಿ ಖರೀದಿ ಪ್ರಗತಿಯಲ್ಲಿದೆ ಎಂದು
ಮಾಹಿತಿ ನೀಡಿದರು.
ಸಭೆಯಲ್ಲಿ ಶಾಸಕರಾದ ಎಸ್.ಎ.ರವೀಂದ್ರನಾಥ, ವಿಧಾನಪರಿಷತ್
ಶಾಸಕರಾದ ಅಬ್ದುಲ್ ಜಬ್ಬಾರ್, ಪಾಲಿಕೆ ಮಹಾಪೌರರಾದ
ಬಿ.ಜಿ.ಅಜಯಕುಮಾರ್, ದೂಡಾ ಅಧ್ಯಕ್ಷ ಶಿವಕುಮಾರ್, ಎಸ್‍ಪಿ
ಹನುಮಂತರಾಯ, ಎಎಸ್‍ಪಿ ರಾಜೀವ್, ಜಿಲ್ಲಾ ಮಟ್ಟದ ಅಧಿಕಾರಿಗಳು
ಹಾಜರಿದ್ದರು.

Leave a Reply

Your email address will not be published. Required fields are marked *