ದಾವಣಗೆರೆ ಸೆ.08
ಸೆ.8 ರಿಂದ 30 ರವರೆಗೆ ಪೋಷಣ್ ಮಾಸಾಚರಣೆ ಕಾರ್ಯಕ್ರಮ
ಹಮ್ಮಿಕೊಳ್ಳಲಾಗುತ್ತಿದ್ದು, ತೀವ್ರ ಅಪೌಷ್ಠಿಕ ಮಕ್ಕಳನ್ನು
ಗುರುತಿಸುವುದು ಮತ್ತು ಶಿಫಾರಸ್ಸು ಸೇವೆಗಳನ್ನು
ನೀಡುವುದು ಈ ವರ್ಷದ ಮಾಸಚರಣೆಯ ಮುಖ್ಯ ಉದ್ದೇಶವಾಗಿದೆ
ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ
ಉಪನಿರ್ದೇಶಕ ಕೆ.ಎಚ್.ವಿಜಯ ಕುಮಾರ್ ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ
ಮಂಗಳವಾರ ಸುದ್ದಿಗಾರರರೊಂದಿಗೆ ಮತನಾಡಿದ ಅವರು,
ಕೋವಿಡ್ ಹಿನ್ನೆಲೆಯಲ್ಲಿ ಜಿಲ್ಲಾಮಟ್ಟ, ತಾಲ್ಲೂಕುಮಟ್ಟ ಹಾಗೂ ಗ್ರಾಮ
ಮಟ್ಟದಲ್ಲಿ ಜನರನ್ನು ಒಗ್ಗೂಡಿಸಿ ಕಾರ್ಯಕ್ರಮ ಮಾಡುವುದು
ಕಷ್ಟ ಸಾಧ್ಯವಾಗಿದೆ. ಈ ಹಿನ್ನೆಲೆಯಲ್ಲಿ ವಾಟ್ಸಾಪ್, ಟಿವಿ ಮೂಲಕ ಸಂದೇಶ
ಹಾಗೂ ಭಿತ್ತಿ ಪತ್ರ, ಕರಪತ್ರ ನೀಡುವ ಮೂಲಕ
ಕಾರ್ಯಕ್ರಮದ ಕುರಿತು ಜನರಿಗೆ ಪ್ರಚಾರದೊಂದಿಗೆ ಅರಿವು
ಮೂಡಿಸಲಾಗುವುದು ಎಂದರು.
ಅಂಗನವಾಡಿ ಕೇಂದ್ರಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ
ಮಹಿಳೆಯರು ಮತ್ತು ಮಕ್ಕಳಿಗೆ ಅಪೌಷ್ಠಿಕತೆ ತಡೆಗಟ್ಟುವ
ಕುರಿತು, ಉತ್ತಮ ಆರೋಗ್ಯ ಹಾಗೂ ಸ್ವಚ್ಛತೆ ವಿಚಾರವಾಗಿ ಮನೆ
ಮನೆಗೆ ತೆರಳಿ ವಿಷಯ ಮುಟ್ಟಿಸುವ ಪ್ರಯತ್ನ
ಮಾಡಲಾಗುವುದು. ಇದರೊಂದಿಗೆ ಆರೋಗ್ಯ ತಪಾಸಣೆ, ಉತ್ತಮ
ಪೌಷ್ಠಿಕ ಆಹಾರ ಸೇವನೆ ಹಾಗೂ ರಕ್ತ ಹೀನತೆ ಕುರಿತು
ತಿಳಿಸಲಾಗುವುದು ಎಂದರು.
  ಮಾಸಾಚರಣೆ ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆ, ಶಿಕ್ಷಣ
ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ
ಸೇರಿಕೊಂಡು ಅಪೌಷ್ಠಿಕತೆ ಕೊರತೆ ಇರುವ ಮಕ್ಕಳನ್ನು
ಗುರುತಿಸುವುದು ಮತ್ತು ಅಗತ್ಯವಾದ ಮೂಲ ಸೌಲಭ್ಯಗಳನ್ನು
ಒದಗಿಸುವುದು ಪ್ರಮುಖ ಉದ್ದೇಶವಾಗಿದೆ. ಅಪೌಷ್ಠಿಕತೆಯಿಂದ
ಮಕ್ಕಳು ಅಸ್ವಸ್ಥಗೊಳ್ಳುವುದು ಮತ್ತು ಮರಣ
ಹೊಂದುವುದು ಮುಖ್ಯ ಕಾರಣವಾಗಿದೆ. ಈ ನಿಟ್ಟಿನಲ್ಲಿ ಮಕ್ಕಳಲ್ಲಿ ಈ

ಲಕ್ಷಣಗಳನ್ನು ಪ್ರಾರಂಭದಲ್ಲಿ ಗುರುತಿಸಿ, ಉನ್ನತ ಚಿಕಿತ್ಸೆಗೆ
ಶಿಫಾರಸ್ಸು ಸೇವೆಗಳನ್ನು ನೀಡುವ ಮೂಲಕ ಮಕ್ಕಳು
ಗಂಭೀರ ಸ್ಥಿತಿಗೆ ತಲುಪುವುದನ್ನು ಕಡಿಮೆಗೊಳಿಸಬಹುದಾಗಿದೆ
ಎಂದರು.
2019 ರಲ್ಲಿ ಶೇ.10.91 ಅಪೌಷ್ಠಿಕತೆ ಇತ್ತು. ಈ ಬಾರಿ ಶೇ. 8.59 ರಷ್ಟು
ಆಗುವ ಮೂಲಕ ಜಿಲ್ಲೆಯಲ್ಲಿ ಶೇ. 2.30 ರಷ್ಟು ಅಪೌಷ್ಠಿಕತೆ
ಕಡಿಮೆಯಾಗಿದೆ ಎಂದ ಅವರು, ಡಿಜಿಟಲ್ ಕಾರ್ಯಕ್ರಮ ಅಡಿಯಲ್ಲಿ
ಅಂಗನವಾಡಿ ಕೆಂದ್ರದ ಕಾರ್ಯಕರ್ತೆಯರಿಗೆ ಮೊಬೈಲ್ ಕೊಡುವ
ವ್ಯವಸ್ಥೆ ಮಾಡಲಾಗಿದ್ದು, ಸಿಮ್ ಬರಬೇಕಿದೆ. ಅಕ್ಟೋಬರ್ 2 ರಂದು
ಕಾರ್ಯಕ್ರಮ ಹಮ್ಮಿಕೊಂಡು ವಿತರಿಸಲಾಗುವುದು ಎಂದು
ತಿಳಿಸಿದರು.
ಪೌಷ್ಠಿಕ ಕೈತೋಟಗಳ ಅಭಿವೃದ್ಧಿಗೆ ಒತ್ತು: ಗ್ರಾಮ ಪಂಚಾಯಿತಿ
ವ್ಯಾಪ್ತಿಯಲ್ಲಿ ಮತ್ತು ತಾಲ್ಲೂಕು ಮಟ್ಟದಲ್ಲಿ 428 ಅಂಗನವಾಡಿ
ಕೇಂದ್ರಗಳ ಕಟ್ಟಡ ಮತ್ತು ಕಾಂಪೌಡ್‍ಗಳನ್ನು
ಗುರುತಿಸಲಾಗಿದೆ. ಇತಂಹ ಅಂಗನವಾಡಿ ಕೇಂದ್ರಗಳಲ್ಲಿ ಪೌಷ್ಠಿಕ
ಕೈತೋಟದಲ್ಲಿ ಪಪ್ಪಾಯಿ, ಮೆಂತೆ, ಪಾಲಕ್, ಕೊತ್ತಂಬರಿ, ಅವರೆ
ಸೋಪ್ಪು, ಕರಿಬೇವು, ಸೀಬೆ, ಬಾಳೆ ಗಿಡ ಮುಂತಾದ ಬೆಳೆಯನ್ನು
ಬೆಳೆಯಬಹುದಾಗಿದೆ. ಪೋಷಣ್ ಮಾಸಾಚರಣೆಯಲ್ಲಿ ಅಗಂಗನವಾಡಿ
ಆವರಣದಲ್ಲಿ ಕೈತೋಟ ನೀರ್ಮಿಸಲು 1000 ಅನುದಾನ ನೀಡಲಾಗುವುದು.
ಇದರಲ್ಲಿ ಅಗತ್ಯವಾದ ಸಿಸಿಗಳು, ಬೀಜಗಳು ಹಾಗೂ
ರಸಗೋಬ್ಬರಗಳನ್ನು ಖರೀದಿಸಬಹುದಾಗಿದೆ ಎಂದು ತಿಳಿಸಿದರು.
ಡ್ಯಾಶ್ ಬೋರ್ಡ್ ದಾಖಲಾತಿ : ಪ್ರತಿಯೊಂದು ಗ್ರಾಮ ಪಂಚಾಯಿತಿ
ವ್ಯಾಪ್ತಿಯಲ್ಲಿ ಮತ್ತು ತಾಲ್ಲೂಕಿನ ಮಟ್ಟದಲ್ಲಿ ಸಭೆಯನ್ನು ನಡೆಸಿ
ನಂತರ ಮಾಹಿತಿಯನ್ನು ಡ್ಯಾಶ್ ಬೋರ್ಡ್ ದಾಖಲಾತಿನಲ್ಲಿ ಫೋಟೋ
ಸಹಿತ ಹಾಕಲಾಗುವುದು. ಇದರಲ್ಲಿ ಅಪೌಷ್ಠಿಕತೆ ಹೊಂದಿರುವ
ಮಕ್ಕಳನ್ನು ಯಾವ ಅಂಗನವಾಡಿಯ ಟೀಚರ್, ಸಿಡಿಪಿಗಳನ್ನು
ಗುರುತಿಸಿ ಉತ್ತಮ ಕಾರ್ಯ ನಿರ್ವಹಿಸಿರುತ್ತಾರೋ ಅಂತವರನ್ನು
ಪ್ರಶಸ್ತಿಗೆ ಶಿಫಾರಸ್ಸು ಮಾಡುವ ಮೂಲಕ ಸನ್ಮಾನಿಸಲಾಗುವುದು
ಎಂದರು.
ಇದೇ ಸಂದರ್ಭದಲ್ಲಿ ಡ್ಯಾಶ್ ಬೋರ್ಡ್‍ನಲ್ಲಿ ದಾಖಲಿಸಿದ ದಾಖಲಾತಿಗಳನ್ನು
ಲ್ಯಾಪ್‍ಟಾಪ್ ಮೂಲಕ ತೋರಿಸಿಕೊಟ್ಟರು. ಸುದ್ದಿಗೋಷ್ಠಿಯಲ್ಲಿ ಮಹಿಳಾ
ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಿಬ್ಬಂದಿಗಳು ಹಾಜರಿದ್ದರು.

Leave a Reply

Your email address will not be published. Required fields are marked *