ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶ್ರೀನಿವಾಸ್ ಮಾತನಾಡಿ, ಜಿಲ್ಲೆಯಲ್ಲಿ 4.78 ಲಕ್ಷ ಹೆ. ನಷ್ಟು ಬೆಳೆ ಸಮೀಕ್ಷೆ ನಡೆಸಬೇಕಿದ್ದು, ಈಗಾಗಲೆ 3.08 ಲಕ್ಷ ಹೆ. ಸಮೀಕ್ಷೆಯಾಗಿದೆ, ರಾಜ್ಯದಲ್ಲಿ ದಾವಣಗೆರೆ ಜಿಲ್ಲೆ ಎರಡನೇ ಸ್ಥಾನದಲ್ಲಿದೆ. ಜಿಲ್ಲೆಯಲ್ಲಿ ಈ ವರ್ಷ ವಾಡಿಕೆಗಿಂತ ಶೇ. 41 ರಷ್ಟು ಹೆಚ್ಚು ಮಳೆಯಾಗಿದೆ. ಜಿಲ್ಲೆಯಲ್ಲಿ 442 ಮಿ.ಮೀ. ವಾಡಿಕೆಗೆ 624 ಮಿ.ಮೀ ಮಳೆಯಾಗಿದೆ. ಚನ್ನಗಿರಿ 590 ವಾಡಿಕೆಗೆ 642 ಮಿ.ಮೀ. ಹರಿಹರ ತಾಲ್ಲೂಕಿನಲ್ಲಿ 409 ವಾಡಿಕೆಗೆ 518 ಮಿ.ಮೀ. ಹೊನ್ನಾಳಿ ತಾಲ್ಲೂಕಿನಲ್ಲಿ 417 ವಾಡಿಕೆಗೆ 609 ಮಿ.ಮೀ. ಜಗಳೂರು ತಾಲ್ಲೂಕಿನಲ್ಲಿ 340 ವಾಡಿಕೆಗೆ 568 ಮಿ.ಮೀ. ದಾವಣಗೆರೆ ತಾಲ್ಲೂಕಿನಲ್ಲಿ 412 ವಾಡಿಕೆಗೆ 683 ಮಿ.ಮೀ. ನ್ಯಾಮತಿ 595 ವಾಡಿಕೆಗೆ 716 ಮಿ.ಮೀ ಮಳೆಯಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಈ ವೇಳೆ ಪ್ರತಿಕ್ರಿಯಿಸಿದ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಜಗಳೂರು ಶಾಸಕ ರಾಮಚಂದ್ರಪ್ಪ ಮಾತನಾಡಿ, ಅತಿವೃಷ್ಟಿ ತಾಲ್ಲೂಕುಗಳ ಘೋಷಣೆಗೆ ಸಂಬಂಧಿಸಿದಂತೆ ವಾಡಿಕೆಗಿಂತ ಶೇ. 67 ರಷ್ಟು ಹೆಚ್ಚು ಮಳೆಯಾಗಿದ್ದರೂ ಜಗಳೂರು ತಾಲ್ಲೂಕು ಹೆಸರು ಬಿಟ್ಟು ಹೋಗಿದೆ ಎಂದು ಪ್ರಶ್ನಿಸಿದರು. ಇದಕ್ಕೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಪ್ರತಿಕ್ರಿಯಿಸಿ, ಆಗಸ್ಟ್ 31 ರವರೆಗಿನ ವರದಿಯನ್ವಯ ತಾಲ್ಲೂಕುಗಳ ಘೋಷಣೆಯಾಗಿದೆ. ಈವರೆಗಿನ ವರದಿಯಂತೆ ಜಿಲ್ಲೆಯ ಎಲ್ಲ ತಾಲ್ಲೂಕುಗಳೂ ಅತಿವೃಷ್ಟಿ ತಾಲ್ಲೂಕುಗಳ ಪಟ್ಟಿಗೆ ಸೇರ್ಪಡೆಗೊಳಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿಕೊಡಲಾಗುವುದು. ಜಿಲ್ಲೆಯಲ್ಲಿ ಹೆಚ್ಚು ಮಳೆಯಿಂದಾಗಿ 255 ಮನೆಗಳು ಹಾನಿಯಾಗಿವೆ. ಎಬಿಸಿ ಕೆಟಗರಿ ಅನ್ವಯ ಪರಿಹಾರ ಪಾವತಿಗೆ ಕ್ರಮ ಕೈಗೊಳ್ಳಲಾಗುವುದು. 1025 ಹೆ. ತೋಟಗಾರಿಕೆ ಹಾಗೂ 145 ಹೆ. ಕೃಷಿ ಬೆಳೆ ಹಾನಿಯಾಗಿದೆ. ಜಿಲ್ಲೆಯಲ್ಲಿ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳ ಯಾವುದೇ ಕೊರತೆ ಇಲ್ಲ. ಸದ್ಯ 25 ಸಾವಿರ ಟನ್ ರಸಗೊಬ್ಬರ ದಾಸ್ತಾನಿದೆ ಎಂದರು.
ಮಹಾನಗರಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿ ಮಾತನಾಡಿ, ದಾವಣಗೆರೆ ಉತ್ತರ ಕ್ಷೇತ್ರಕ್ಕೆ ರೂ. 10 ಕೋಟಿ ವಿಶೇಷ ಅನುದಾನಡಿ 15 ಕೆಲಸ ಕೈಗೊಳ್ಳಲಾಗಿದೆ. ಅದರಲ್ಲಿ ಈಗಾಗಲೇ 11 ಕೆಲಸ ಮಾಡಲಾಗುತ್ತಿದೆ. 1 ಎಲೆಕ್ಟ್ರಿಕಲ್ ಕೆಲಸ ಮುಗಿದಿದ್ದು, 10 ಕೆಲಸಗಳು ಪ್ರಗತಿಯಲ್ಲಿವೆ ಎಂದರು.