ದಾವಣಗೆರೆ ನ.5
ಮುಂಬರುವ ಕೋವಿಡ್-19 ಲಸಿಕಾ ಕಾರ್ಯಕ್ರಮದಡಿ ಜಿಲ್ಲೆಯಲ್ಲಿ
ಮೊದಲ ಆದ್ಯತೆಯಲ್ಲಿ ಆರೋಗ್ಯ ಸಿಬ್ಬಂದಿಗಳಿಗೆ ಲಸಿಕೆ ನೀಡಲು
ಸರ್ಕಾರ ಸೂಚಿಸಿರುವನ್ವಯ ಜಿಲ್ಲೆಯಲ್ಲಿರುವ ಎಲ್ಲ ಕ್ಲಿನಿಕ್, ನರ್ಸಿಂಗ್
ಹೋಂ, ನರ್ಸಿಂಗ್ ಕಾಲೇಜು, ಪ್ಯಾರಾಮೆಡಿಕಲ್, ಲ್ಯಾಬ್‍ಗಳಿಂದ ಸಿಬ್ಬಂದಿಗಳ
ವಿವರವನ್ನು ನಿಗದಿತ ನಮೂನೆಯಲ್ಲಿ ಶೀಘ್ರದಲ್ಲಿ ಪಡೆದು
ಸಲ್ಲಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಮಹಾಂತೇಶ
ಬೀಳಗಿ ಸೂಚಿಸಿದರು.
ಕೇಂದ್ರ ಸರ್ಕಾರದ ನಿರ್ದೇಶನದಂತೆ ಮೊದಲ ಆದ್ಯತೆಯಲ್ಲಿ
ಆರೋಗ್ಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರಿಗೆ ಲಸಿಕೆ
ನೀಡುವ ಸಂಬಂಧ ಆರೋಗ್ಯ ಸಂಸ್ಥೆಗಳು ಮತ್ತು ಸಿಬ್ಬಂದಿಗಳ
ಮಾಹಿತಿ ಪಡೆಯುವ ಕುರಿತು ಪರಿಶೀಲಿಸಲು ಜಿಲ್ಲಾಡಳಿತ ಕಚೇರಿ
ಸಭಾಂಗಣದಲ್ಲಿ ಗುರುವಾರ ಏರ್ಪಡಿಸಲಾಗಿದ್ದ ಜಿಲ್ಲಾ ಟಾಸ್ಕ್‍ಫೋರ್ಸ್
ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಕೆಪಿಎಂಇ ಕಾಯ್ದೆಯಡಿ ಒಟ್ಟು 740 ಆರೋಗ್ಯ
ಸಂಸ್ಥೆಗಳು ನೋಂದಣಿ ಮಾಡಿಸಿಕೊಂಡಿದ್ದು, ಪ್ರಸ್ತುತ 560
ಸಕ್ರಿಯ ಸಂಸ್ಥೆಗಳಿವೆ. ಈಗಾಗಲೇ 422 ಸಂಸ್ಥೆಗಳ ವಿವರ ಪಡೆದು
ದೃಢೀಕರಣ(ವ್ಯಾಲಿಡೇಷನ್) ಕಾರ್ಯ ಪ್ರಗತಿಯಲ್ಲಿದೆ. ಇನ್ನುಳಿದ 110
ಲ್ಯಾಬ್ ಮತ್ತು ಸ್ಕ್ಯಾನಿಂಗ್ ಕೇಂದ್ರಗಳ ಮಾಹಿತಿಯನ್ನು
ಇನ್ನೊಂದೆರಡು ದಿನಗಳಲ್ಲಿ ಆರ್‍ಸಿಹೆಚ್‍ಓ ಹಾಗೂ ಅವರು ನಿಗದಿಪಡಿಸಿರುವ
ತಂಡಗಳು ಕಲೆ ಹಾಕಿ ನಿಗದಿತ ಟೆಂಪ್ಲೇಟ್‍ನಲ್ಲಿ ಅಪ್‍ಡೇಟ್
ಮಾಡಬೇಕು. ಇದಕ್ಕೆ ಅಗತ್ಯವಾದ ಪೂರ್ವ ತಯಾರಿ ಮಾಡಿಕೊಂಡು ಈ
ಕಾರ್ಯ ಪೂರ್ಣಗೊಳಿಸಬೇಕು. ನಂತರ ಸಿಬ್ಬಂದಿಗಳ ವಿವರನ್ನು
ನೀಡಬೇಕೆಂದರು.
ಆರ್‍ಸಿಹೆಚ್ ಅಧಿಕಾರಿ ಡಾ.ಮೀನಾಕ್ಷಿ ಮಾತನಾಡಿ, ಆರೋಗ್ಯ ಸಂಸ್ಥೆಗಳ
ಮಾಹಿತಿ ಕಲೆ ಹಾಕಲು 5 ತಂಡಗಳನ್ನು ನೇಮಿಸಿದ್ದು, ಪ್ರತಿದಿನ ಈ
ತಂಡಗಳು ಸಂಸ್ಥೆಗಳಿಗೆ ಭೇಟಿ ನೀಡಿ ಸಂಸ್ಥೆಯ ಮತ್ತು ಸಿಬ್ಬಂದಿ
ವಿವರ ಪಡೆಯುತ್ತಿದ್ದಾರೆ. ಅನೇಕ ಆಸ್ಪತ್ರೆ, ಸಂಸ್ಥೆಗಳು ಬಂದ್
ಆಗಿದ್ದು ಇವುಗಳ ಮಾಹಿತಿಯನ್ನೂ ಪಡೆಯಲಾಗುತ್ತಿದೆ. ಹಾಗು
ಲಸಿಕೆಯನ್ನು ನೀಡುವ ನುರಿತ ಸಿಬ್ಬಂದಿಗಳ ವಿವರವನ್ನು ಈಗಾಗಲೇ
ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ತರಬೇತಿ ಹೊಂದಿದ ಲಸಿಕಾಕಾರರು,
ಹಾಗೂ ಲಸಿಕಾ ಕಾರ್ಯಕ್ರಮಕ್ಕೆ ಪೂರಕವಾದ ಇನ್ನಿತರೆ
ಮೂಲಭೂತ ಸೌಲಭ್ಯಗಳನ್ನು ಜಿಲ್ಲೆಯಲ್ಲಿ ಹೊಂದಲಾಗಿದೆ ಎಂದರು.

ಕೋವಿಡ್ ಪರೀಕ್ಷೆ ಹೆಚ್ಚಿಸಿ : ಎಲ್ಲ ತಾಲ್ಲೂಕುಗಳಲ್ಲಿ ಕೋವಿಡ್
ಪರೀಕ್ಷೆಯ ಸಂಖ್ಯೆಯನ್ನು ಹೆಚ್ಚಿಸಬೇಕು. ಬಟ್ಟೆ ಅಂಗಡಿಗಳು,
ಬಂಗಾರದ ಅಂಗಡಿಗಳು, ಹೋಟೆಲ್‍ಗಳು ಹೀಗೆ ಜನ ನಿಭಿಡ
ಸ್ಥಳಗಳಲ್ಲಿ ಕೋವಿಡ್ ಪರೀಕ್ಷೆಯನ್ನು ಮಾಡಬೇಕು.
ಸಾರ್ವಜನಿಕರು ಸಹ ಸಹಕರಿಸಬೇಕು. ಅಸಹಕಾರ ತೋರಿದರೆ
ವಿಪತ್ತು ನಿರ್ವಹಣಾ ಕಾಯ್ದೆಯಡಿ ಅಂತಹವರ ವಿರುದ್ದ
ಅಧಿಕಾರಿಗಳು ಕ್ರಮ ಕೈಗೊಳ್ಳಬಹುದಾಗಿದ್ದು, ನಿಗದಿತ ಗುರಿಗಿಂತ
ತಾಲ್ಲೂಕು ಸೇರಿದಂತೆ ಜಿಲ್ಲೆಯಾದ್ಯಂತ ಕೋವಿಡ್ ಪರೀಕ್ಷೆಯನ್ನು
ಹೆಚ್ಚಿಸಬೇಕು. ಚಳಿಗಾಲದಲ್ಲಿ ಕೋವಿಡ್ ಸೋಂಕು ಹೆಚ್ಚಾಗುವ
ಸಂಭವವಿದ್ದು ಎಲ್ಲರೂ ಜಾಗೃತೆಯಿಂದರಬೇಕು. ಕಡ್ಡಾಯವಾಗಿ
ಮಾಸ್ಕ್ ಧರಿಸಬೇಕು ಹಾಗೂ ಸಾಮಾಜಿಕ ಅಂತರ, ಮತ್ತಿತರೆ
ಮುನ್ನಚ್ಚರಿಕೆ ಕ್ರಮ ವಹಿಸಬೇಕೆಂದರು.
ಪ್ರಸ್ತುತ ಜಿಲ್ಲೆಗೆ ಪ್ರತಿದಿನ 2200 ಕೊರೊನಾ ಪರೀಕ್ಷೆಯ ಗುರಿ
ನೀಡಲಾಗಿದ್ದು, 2500 ರಿಂದ 2800 ರವರೆಗೆ ಪರೀಕ್ಷೆ ನಡೆಸುವಂತೆ
ಡಿಹೆಚ್‍ಓ ಹಾಗೂ ತಾಲ್ಲೂಕು ವೈದ್ಯಾಧಿಕಾರಿಗಳಿಗೆ ಸೂಚಿಸಿದ ಅವರು
ಐಸಿಎಂಆರ್ ಪೋರ್ಟಲ್‍ನಲ್ಲಿ ಈ ಕುರಿತು ಡಾಟಾ ಎಂಟ್ರಿ ಮಾಡುವುದೂ ಮುಖ್ಯ
ಎಂದರು.

ಜಿಲ್ಲಾ ಪಂಚಾಯತ್ ಸಿಇಓ ಪದ್ಮ ಬಸವಂತಪ್ಪ ಮಾತನಾಡಿ, ಕೊರೊನಾ
ಪರೀಕ್ಷೆ ಸಂಬಂಧ ಆರೋಗ್ಯಾಧಿಕಾರಿಗಳು ತಾಲ್ಲೂಕು ಇಓ ಗಳಿಗೆ
ಮಾಹಿತಿ ನೀಡಬೇಕು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರವಾರು
ಗುರಿ ನಿಗದಿಪಡಿಸಬೇಕು ಎಂದರು.
ಇದೇ ವೇಳೆ ‘ಅನೀಮೀಯತೆ ಮುಕ್ತ ಭಾರತ’
ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ, ಸಿಇಓ ಸೇರಿದಂತೆ ಆರೋಗ್ಯ ಇಲಾಖೆ
ಅಧಿಕಾರಿಗಳು ಇದಕ್ಕೆ ಸಂಬಂಧಿಸಿದ ಪೋಸ್ಟರ್ ಬಿಡುಗಡೆ ಮಾಡುವ
ಮೂಲಕ ಚಾಲನೆ ನೀಡಿದರು.
ಸಭೆಯಲ್ಲಿ ಡಿಹೆಚ್‍ಓ ಡಾ.ನಾಗರಾಜ್, ಜಿಲ್ಲಾ ಶಸ್ತ್ರಚಿಕಿತ್ಸಕ
ಜಯಪ್ರಕಾಶ್, ಡಿಎಸ್‍ಓ ಡಾ.ರಾಘವನ್, ಜಿಲ್ಲಾ ಮಲೇರಿಯಾ ಅಧಿಕಾರಿ
ಡಾ.ನಟರಾಜ್, ಕುಟುಂಬ ಕಲ್ಯಾಣಾಧಿಕಾರಿ ಡಾ.ರೇಣುಕಾರಾಧ್ಯ, ಡಿಎಲ್‍ಓ
ಡಾ.ಮುರಳೀಧರ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ
ಇಲಾಖೆಯ ಉಪನಿರ್ದೇಶಕ ವಿಜಯಕುಮಾರ್, ತಾಲ್ಲೂಕು
ವೈದ್ಯಾಧಿಕಾರಿಗಳು, ಇತರೆ ಅಧಿಕಾರಿಗಳು ಇದ್ದರು.

Leave a Reply

Your email address will not be published. Required fields are marked *