ದಾವಣಗೆರೆ ನ.10
ಈ ಬಾರಿಯ ದೀಪಾವಳಿ ಹಬ್ಬವನ್ನು ಅತ್ಯಂತ ಎಚ್ಚರಿಕೆಯಿಂದ ಪರಿಸರ
ಸ್ನೇಹಿಯಾಗಿ ಭಕ್ತಿಭಾವದೊಂದಿಗೆ ಆಚರಿಸುವ ಮೂಲಕ ಪರಿಸರ
ಮಾಲಿನ್ಯವನ್ನು ತಡೆಗಟ್ಟಲು ಸಾರ್ವಜನಿಕರು ಸಹಕರಿಸಬೇಕು ಎಂದು
ಪರಿಸರ ಅಧಿಕಾರಿ ಕೊಟ್ರೇಶ್ ಅವರು ಮನವಿ ಮಾಡಿದ್ದಾರೆ.
ಎಚ್ಚರ ವಹಿಸದಿದ್ದರೆ ಅಪಾಯ: ಅಪಾರ್ಟ್ಮೆಂಟ್, ವಠಾರ,
ನೆರೆಹೊರೆಯ ಮನೆಯವರು ಒಂದೆಡೆ ಕಲೆತು ಪರಿಸರ ಸ್ನೇಹಿ
ದೀಪಾವಳಿ ಹಬ್ಬವನ್ನು ಆಚರಿಸಬೇಕು. ಹಬ್ಬದ ಆಚರಣೆಯಲ್ಲಿ ಬೆಳಕೇ
ಪ್ರಧಾನವಾಗಿರಲಿ. ಗಿಡಮರಗಳು ಮತ್ತು ಪ್ರಾಣಿ ಪಕ್ಷಿಗಳಿಗೆ
ಯಾವುದೇ ಹಾನಿಯಾಗದಂತೆ ಎಚ್ಚರವಹಿಸಬೇಕು. ಶಾಶ್ವತ
ಕುರುಡತನ, ಕಿವುಡುತನಗಳಿಗೆ ಎಡೆಮಾಡಿಕೊಡಬಾರದು.
ಪಟಾಕಿಗಳನ್ನು ಖರೀದಿಸುವ ಮುನ್ನ ಲೇಬಲ್ಗಳನ್ನು ಪರಿಶೀಲಿಸಿ,
ಗುಣಮಟ್ಟದ ಬಗ್ಗೆ ಖಾತರಿ ಮಾಡಿಕೊಳ್ಳಬೇಕು. ಹಸಿರು
ಪಟಾಕಿಗಳನ್ನು ಮಾತ್ರ ಖರೀದಿಸಬೇಕು.
ಪಟಾಕಿಗಳಿಂದಾಗುವ ಅಪಾಯಗಳು: ಕಳೆದ ದಶಕದಲ್ಲಿ
ಸುಮಾರು ಸಾವಿರಾರು ಮಂದಿ ಪಟಾಕಿ ಸಿಡಿತದಿಂದ ಗಾಯಗೊಂಡಿದ್ದು, ಈ
ಪೈಕಿ ಶೇ.70 ರಷ್ಟು ಕಣ್ಣಿಗೆ ಸಂಬಂಧಿಸಿದ ಗಾಯಗಳಾಗಿವೆ. ದೀಪಾವಳಿ
ಹಬ್ಬದ ಸಂದರ್ಭದಲ್ಲಿ ವಾಯು ಹಾಗೂ ಶಬ್ದಮಾಲಿನ್ಯ ಮಟ್ಟ ಶೇ.10
ರಿಂದ 15 ರಷ್ಟು ಹೆಚ್ಚಾಗುತ್ತದೆ. ಪಟಾಕಿಗಳು ಹೊರಸೂಸುವ
ವಿಷಯುಕ್ತ ಅನಿಲ ಆರೋಗ್ಯ ಸಂಬಂಧಿತ ಕಾಯಿಲೆಗಳು ಹಾಗೂ
ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತವೆ. ಪಟಾಕಿಗಳ ಸಿಡಿತದ ನಂತರ
ಉತ್ಪತ್ತಿಯಾಗುವ ಘನತ್ಯಾಜ್ಯದ ಹೆಚ್ಚಳದಿಂದ ನಗರದ
ಶುಚಿತ್ವದ ಸಮಸ್ಯೆ ಉಲ್ಬಣವಾಗುವುದು.
ಪಟಾಕಿ ಸಿಡಿತದ ದುಷ್ಪರಿಣಾಮಗಳು: ಶಬ್ದ ಮತ್ತು ವಾಯು
ಮಾಲಿನ್ಯಗಳಲ್ಲಿ ವೈಪರೀತ್ಯ, ಶಾಶ್ವತ
ಕುರುಡುತನ/ಕಿವುಡುತನ, ಅಸ್ವಸ್ಥರು, ಮಕ್ಕಳು,
ಗರ್ಭಿಣಿಯರು ಮತ್ತು ವೃದ್ದರ ಆರೋಗ್ಯದಲ್ಲಿ ಏರು-ಪೇರು.
ಗಿಡ-ಮರಗಳು ಮತ್ತು ಪ್ರಾಣಿ-ಪಕ್ಷಿಗಳಿಗೆ ಸಂಚಕಾರ.
ಸ್ಪೋಟಕ-ಪಟಾಕಿಗಳ ಸದ್ದಿನಿಂದ ಒತ್ತಡ, ನಿದ್ರಾಹೀನತೆ,
ಕಿವುಡುತನ, ರಕ್ತದೊತ್ತಡ, ಹೃದಯಘಾತ ಮುಂತಾದ
ಅಪಾಯಗಳು ಉಂಟಾಗುತ್ತದೆ. ಬೆಂಕಿಯ ಅವಘಾಡಗಳಿಗೆ
ಕಾರಣವಾಗಿರುತ್ತದೆ.
125 ಡೆಸಿಬಲ್ಗೂ(ಶಬ್ದದ ಪ್ರಮಾಣ) ಮೇಲ್ಪಟ್ಟ ಪಟಾಕಿಗಳ ಸಿಡಿತವನ್ನು
ನಿಷೇಧಿಸಲಾಗಿದೆ. ರಾತ್ರಿ 10 ರಿಂದ ಬೆಳಿಗ್ಗೆ 6 ಗಂಟೆ ನಡುವೆ ಪಟಾಕಿ
ಸಿಡಿಸುವುದನ್ನು ನಿಷೇಧಿಸಿದೆ. ಆಸ್ಪತ್ರೆ, ವೃದ್ದಾಶ್ರಮಗಳ ಹತ್ತಿರ
ಪಟಾಕಿ ಸಿಡಿಸಬಾರದು.
ಪಟಾಕಿ ಸಿಡಿಸುವುದರಿಂದ ಸಾರ್ವಜನಿಕರ ಆರೋಗ್ಯದ ಮೇಲೆ
ದುಷ್ಪರಿಣಾಮ ಬೀರುವುದಲ್ಲದೆ, ಪರಿಸರದ ಮಾಲಿನ್ಯವೂ
ಹೆಚ್ಚಾಗುತ್ತದೆ. ಹೀಗಾಗಿ ಎಲ್ಲರೂ ಪಟಾಕಿಗೆ ವಿದಾಯ ಹೇಳಿ, ಪರಿಸರ
ಸ್ನೇಹಿ ದೀಪಾವಳಿಯನ್ನು ಆಚರಿಸಬೇಕು ಎಂದು ಪರಿಸರ ಅಧಿಕಾರಿ
ಕೊಟ್ರೇಶ್ ಅವರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.