ದಾವಣಗೆರೆ ನ.17
ಜಿಲ್ಲಾ ಕೈಗಾರಿಕಾ ಕೇಂದ್ರ, ದಾವಣಗೆರೆ ಇಲ್ಲಿ ಮಂಗಳವಾರ
ಜಿಲ್ಲಾ ಮಟ್ಟದ ರಫ್ತು ಉದ್ದಿಮೆದಾರರ ಸಭೆಯು ಜಿಲ್ಲಾ
ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಾದ
ಹೆಚ್.ಎಸ್.ಜಯಪ್ರಕಾಶ್ ನಾರಾಯಣ್ ಇವರ ಅಧ್ಯಕ್ಷತೆಯಲ್ಲಿ
ನಡೆಯಿತು.
ಅಧ್ಯಕ್ಷತೆ ವಹಿಸಿದ್ದ ಜಂಟಿ ನಿರ್ದೇಶಕ ಹೆಚ್.ಎಸ್.ಜಯಪ್ರಕಾಶ್
ಮಾತನಾಡಿ, ನ.19 ರಂದು ರಾಜ್ಯ ರಫ್ತು ನಿರ್ದೇಶಕರು
ಜಿಲ್ಲಾಡಳಿತ ಕಚೇರಿಯಲ್ಲಿ ಸಭೆ ನಡೆಸಿ ರಫ್ತುದಾರರ
ಕುಂದು ಕೊರತೆ ಇತರೆ ಸೌಲಭ್ಯಗಳ ಕುರಿತು
ರಫ್ತುದಾರರೊಂದಿಗೆ ಸಭೆ ನಡೆಸಲಿದ್ದು, ಅದಕ್ಕೆ
ಪೂರ್ವಭಾವಿಯಾಗಿ ಜಿಲ್ಲೆಯ ರಫ್ತುದಾರರ
ಕುಂದುಕೊರತೆಗಳ ಬಗ್ಗೆ ಚರ್ಚಿಸಲು ಈ ಸಭೆ
ಕರೆಯಲಾಗಿದೆ ಎಂದರು.
ಮೆಕ್ಕೆಜೋಳ ಕೈಗಾರಿಕೆಯ ಮಾಲೀಕರಾದ ಬಸವರಾಜಪ್ಪ
ತುರ್ಚಘಟ್ಟ ಮಾತನಾಡಿ, ರೈತರ ಉತ್ಪಾದನೆಯೇ ಎಲ್ಲರ
ಉಸಿರಾಗಿದ್ದು ರೈತರ ಪರ ಕಾಳಜಿ ಇಲ್ಲವಾಗಿದೆ. ಕೃಷಿ ಆಧಾರಿತ
ಉತ್ಪನ್ನಗಳ ಬಗ್ಗೆ ನಿಲ್ರ್ಯಕ್ಷ್ಯ ಸಲ್ಲದು. ಕೃಷಿ ಆಧಾರಿತ
ಉತ್ಪನ್ನಗಳಿಗೆ ಪ್ರೋತ್ಸಾಹ ನೀಡಬೇಕು. ಹಾಗೂ ಗ್ರಾಮೀಣ
ಕೈಗಾರಿಕೆಗಳ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು ಎಂದರು.
ಅಲ್ಲದೇ ನಮಗೆ ಬ್ಯಾಂಕ್ ಸಾಲ ಪಡೆಯುವಲ್ಲಿ ಅತ್ಯಂತ
ಸಮಸ್ಯೆಗಳು ತಲೆದೋರುತ್ತಿವೆ. ಬ್ಯಾಂಕ್‍ನಿಂದ ಸಮರ್ಪಕ
ಸಹಕಾರವಿಲ್ಲ. ಪ್ರಸ್ತುತ ಮೆಕ್ಕೆಜೋಳದ ಸೀಸನ್ ಆಗಿದ್ದು
ಈಗ ಬ್ಯಾಂಕಿನ ಸಾಲದ ಅವಶ್ಯಕತೆ ಇದೆ. ಆದರೆ ಬ್ಯಾಂಕಿನವರು
ಇನ್ನೆರಡು ತಿಂಗಳು ಬಿಟ್ಟು ಸಾಲ ಕೊಡುವುದಾಗಿ
ಹೇಳುತ್ತಿದ್ದಾರೆ. ವರ್ಕಿಂಗ್ ಕ್ಯಾಪಿಟಲ್ ಪಡೆಯುವಾಗ ತುಂಬಾ
ತೊಂದರೆ ಅನುಭವಿಸುತ್ತಿದ್ದೀವಿ ಎಂದರು.
ತಾವು ಮತ್ತು ಇತರೆ ಮೆಕ್ಕೆಜೋಳ ಕೈಗಾರಿಕೆಗಳವರು
ಮೆಕ್ಕೆಜೋಳವನ್ನು ದುಬೈ, ಈಜಿಪ್ಟ್ ಇತರೆ ದೇಶಗಳಿಗೆ
ರಫ್ತು ಮಾಡುತ್ತಿದ್ದೇವೆ. ಇಲ್ಲಿಯೇ ಮೆಕ್ಕೆಜೋಳ ಪರೀಕ್ಷಾ
ಕೇಂದ್ರ ಆದಲ್ಲಿ ಸ್ಥಳೀಯ ಮೆಕ್ಕೆಜೋಳ ರಫ್ತುದಾರರಿಗೆ
ಅನುಕೂಲವಾಗಲಿದೆ ಎಂದರು.
ಹರಿಹರದ ಹಿರಿಯ ಕೈಗಾರಿಕೋದ್ಯಮಿ ಸತ್ಯನಾರಾಯಣ
ಮಾತನಾಡಿ, ಮೊದಲಿಗೆ ಹೋಲಿಸಿದರೆ ಕೈಗಾರಿಕಾ ನೀತಿಯಲ್ಲಿ
ಅನೇಕ ಬದಲಾವಣೆಯಾಗಿ, ನಿಯಮಗಳು ಸರಳವಾಗಿವೆ.
ಈಗೆಲ್ಲ ಆನ್‍ಲೈನ್‍ನಲ್ಲಿ ನಾವು ಅನುಮತಿ, ಇನ್ನಿತರೆ ಸೌಲಭ್ಯ
ಪಡೆಯಬಹುದಾಗಿದೆ. ಆದರೆ ಬ್ಯಾಂಕಿನ ಸಾಲದಲ್ಲಿ ತೊಡಕು
ನಿವಾರಣೆ ಅವಶ್ಯಕವಾಗಿದೆ ಎಂದರು.
ಪ್ರಸ್ತುತ ರಫ್ತುದಾರಿಕೆಯಲ್ಲಿ ಸಾಕಷ್ಟು
ಸುಧಾರಣೆಯಾಗಿದೆ. ರಫ್ತುದೇಶಗಳಲ್ಲಿರುವ ನಮ್ಮ
ರಾಜ್ಯ ರಾಯಭಾರಿಗಳು ಸಹ ಉತ್ತಮವಾಗಿ
ಸ್ಪಂದಿಸುತ್ತಿದ್ದಾರೆಂದರು.
ಇಂಡಸ್ ವೆಜ್ ಪ್ರೊ ಪ್ರೈ.ಲಿ ನ ಮಾಲೀಕರಾದ
ಮಹಾದೇವಯ್ಯ ಮಾತನಾಡಿ, ತಾವು ಮಿಡಿಸೌತೆ ಮತ್ತು ಇತರೆ
ತರಕಾರಿಗಳನ್ನು ಯುಎಸ್‍ಎ, ಯೂರೋಪ್‍ಗಳಿಗೆ ರಫ್ತು
ಮಾಡುತ್ತಿದ್ದು, ತಮಗೆ ರಫ್ತು ಮಾಡುವಲ್ಲಿ ಅಂತಹ
ತೊಡಕುಗಳಿಲ್ಲ. ಬದಲಾಗಿ ಸ್ಥಳೀಯವಾಗಿ ಮಾಲಿನ್ಯ
ನಿಯಂತ್ರಣ ಮಂಡಳಿ, ಕಾರ್ಮಿಕ ಇಲಾಖೆಯಿಂದ ಕಾರ್ಮಿಕ
ನಿರೀಕ್ಷಕರು, ಸಹಾಯಕ ಅಧಿಕಾರಿಗಳು, ಆಯುಕ್ತರು
ಹೀಗೆ ಪ್ರತ್ಯೇಕವಾಗಿ ಕಾರ್ಮಿಕರ ವೇತನ, ಬೋನಸ್
ಇತರೆಗಾಗಿ ಪರಿವೀಕ್ಷಿಸಲು, ತಪಾಸಣೆ ನಡೆಸಲು
ಬರುತ್ತಿರುತ್ತಾರೆ ಎಂದ ಅವರು ತರಕಾರಿಗಳನ್ನು ವರ್ಷದಲ್ಲಿ
ಎರಡು ಬಾರಿ ಪರೀಕ್ಷೆಗಾಗಿ ಬೆಂಗಳೂರಿಗೆ ಕಳುಹಿಸಬೇಕಾಗಿದ್ದು
ರೂ. 3 ರಿಂದ 5 ಲಕ್ಷದವರೆಗೆ ಖರ್ಚು ಬರುತ್ತದೆ ಎಂದರು.
ಜಂಟಿ ನಿರ್ದೇಶಕು ಪ್ರತಿಕ್ರಿಯಿಸಿ, ಪ್ರಸ್ತುತ ಕೈಗಾರಿಕಾ
ನೀತಿಯಿಂದ ಕೈಗಾರಿಕೆಗೆ ಸಂಬಂಧಿಸಿದ ವ್ಯವಹಾರಗಳು
ಸರಳವಾಗಿವೆ. ತಾವು ಕೈಗಾರಿಕಾ ನೀತಿ ಮತ್ತು
ಕಾಯ್ದೆಗಳನ್ನು ತಿಳಿದುಕೊಂಡು ಅದಕ್ಕೆ ಸಂಬಂಧಿಸಿದಂತೆ
ವಹಿ ಮತ್ತು ವರದಿಗಳನ್ನು ಇಟ್ಟುಕೊಂಡಲ್ಲಿ ಯಾರು
ತಪಾಸಣೆಗೆ ಬಂದರೂ ತೊಂದರೆ ಆಗುವುದಿಲ್ಲವೆಂದ ಅವರು,
ತರಕಾರಿ ಪರೀಕ್ಷಾ ಕೇಂದ್ರ ತೆರೆಯಲು ಜಿಲ್ಲಾ ಉದ್ದಿಮೆದಾರರು
ಆಸಕ್ತಿ ತೋರಿದಲ್ಲಿ ಇಲ್ಲಿಯೇ ತೆರೆಯಬಹುದೆಂದರು.
ಸೋಪ್ ಕೈಗಾರಿಕೆಯ ಉದ್ದಿಮೆದಾರರಾದ ರೇಖಾ ಸುರೇಶ್
ಮಾತನಾಡಿ, ನಾವು ಉತ್ಪಾದಿಸುವ ಉತ್ಪನ್ನಕ್ಕೆ ಮಾರ್ಕೆಟ್ ಇಲ್ಲ.
ಆಮದಾಗುವ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಿದೆ. ಸ್ಥಳೀಯ
ಉತ್ಪನ್ನಗಳಿಗೆ ಇಲ್ಲಿ ಮಾರುಕಟ್ಟೆ ಸಮಸ್ಯೆ ಇದೆ. ಜೊತೆಗೆ
ಬ್ಯಾಂಕಿನಿಂದ ಸಾಲ ಸಿಗುವುದು ಸಹ ಕಷ್ಟಸಾಧ್ಯವಾಗಿದೆ ಎಂದರು.
ಸಭೆಯಲ್ಲಿ ಹಾಜರಿದ್ದ ಬಹುತೇಕ ರಫ್ತು ಉದ್ದಿಮೆದಾರರು
ಉದ್ದಿಮೆಗಳಿಗೆ ಸಾಲ ನೀಡಲು ಪ್ರತ್ಯೇಕ ಬ್ಯಾಂಕ್ ವ್ಯವಸ್ಥೆ
ಮಾಡಿದರೆ ಅನುಕೂಲವಾಗುತ್ತದೆ ಎಂದು
ಅಭಿಪ್ರಾಯಪಟ್ಟರು.
ಜಂಟಿ ನಿರ್ದೇಶಕರು ಮಾತನಾಡಿ, ಕೇಂದ್ರ ಮತ್ತು ರಾಜ್ಯ
ಸರ್ಕಾರಗಳು ಆಹಾರ ಆಧಾರಿತ ಕೈಗಾರಿಕೆಗಳಿಗೆ ಹೆಚ್ಚಿನ
ಒತ್ತು ನೀಡಿದೆ. ಆತ್ಮ ನಿರ್ಭರ್ ಯೋಜನೆ ಸಹ ಇದಕ್ಕೆ
ಪ್ರಾಮುಖ್ಯತೆ ನೀಡಿದ್ದು, ಮುಂದಿನ ದಿನಗಳಲ್ಲಿ
ಬ್ಯಾಂಕುಗಳಿಂದ ಇಂತಹ ಉದ್ದಿಮೆಗಳಿಗೆ ಶೀಘ್ರವಾಗಿ ಸಾಲ
ಲಭ್ಯವಾಗುವಂತೆ ಮಾಡಲಾಗುವುದು ಎಂದ ಅವರು
ಜಿಲ್ಲೆಯನ್ನು ಎಕ್ಸ್‍ಪೊರ್ಟ್ ಹಬ್ ಮಾಡಬೇಕೆಂಬುದು ಇಲಾಖೆಯ
ಆಶಯವಾಗಿದೆ. ಇದಕ್ಕೆ ಪೂರಕವಾಗಿ ರಫ್ತುದಾರರು ತಮ್ಮ
ಕುಂದುಕೊರತೆ ಮತ್ತು ಇತರೆ ಸೌಲಭ್ಯದ ಕುರಿತು ನ.19
ರಂದು ಜಿಲ್ಲಾಡಳಿತದಲ್ಲಿ ನಡೆಯುವ ಸಭೆಯಲ್ಲಿ ರಫ್ತು
ನಿರ್ದೇಶಕರೊಂದಿಗೆ ಚರ್ಚಿಸಿ ತಮ್ಮ ಸಮಸ್ಯೆಗಳಿಗೆ ಪರಿಹಾರ
ಕಂಡುಕೊಳ್ಳುವ ಪ್ರಯತ್ನ ಮಾಡಬಹುದು ಎಂದರು.
ಸಭೆಯಲ್ಲಿ ಯುಎಸ್‍ಎ, ಸ್ಪೈನ್, ದುಬೈ, ಈಜಿಪ್ಟ್, ಕೆನಡಾ, ಜಪಾನ್,
ಯೂರೋಪ್ ಹೀಗೆ ವಿವಿಧ ದೇಶಗಳಿಗೆ ತಮ್ಮ
ಉತ್ಪನ್ನಗಳನ್ನು ರಫ್ತು ಮಾಡುವ ಮಿಡಿಸೌತೆ ರಫ್ತುದಾರ
ಕಂಪೆನಿಯ ಸಂದೀಪ್, ಶ್ರೀ ಕಲ್ಲೇಶ್ವರ ಮೆಕ್ಕೆಜೋಳ
ಕೈಗಾರಿಕೆಯ ಚೇತನ್ ಪಾಟಿಲ್, ಪೈವುಡ್ ಉದ್ದಿಮೆದಾರ ನಂದೀಶ್,
ಮಿಡಿಸೌತೆ ಮತ್ತು ಇತರೆ ತರಕಾರಿ ರಫ್ತುದಾರ ಮನೋಜ್, ಶಾ
ಇನ್ಫ್ರಾಟವರ್ ಪ್ರೈ ಲಿ.ನ ನಂದಕುಮಾರ್, ಅಲ್ ಅರ್ಹಾನ್
ಮೆಕ್ಕೆಜೋಳ ಕೈಗಾರಿಕೆ ಮಾಲೀಕರು, ಶ್ರೀ ಬಸವರೇಶ್ವರ
ಮೆಕ್ಕೆಜೋಳ ಕೈಗಾರಿಕೆಯ ಪಾಟಿಲ್, ಶಾ ಐ ಕೇರ್‍ನ ಹರೀಶ್
ಸೇರಿದಂತೆ ಹಲವು ರಫ್ತು ಉದ್ದೆಮೆದಾರರು ಪಾಲ್ಗೊಂಡು
ತಮ್ಮ ಕುಂದುಕೊರತೆ ಬಗ್ಗೆ ಚರ್ಚೆ ನಡೆಸಿದರು.