ದಾವಣಗೆರೆ ನ. 26
ಕೋವಿಡ್-19 ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಕೋವಿಡ್
ಲಸಿಕೆಯನ್ನು ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ ವಿತರಿಸಲು ಬೇಕಿರುವ
ಎಲ್ಲ ಸಿದ್ಧತೆಗಳನ್ನು ಕೈಗೊಂಡು ದಾವಣಗೆರೆ ಜಿಲ್ಲೆ ಸರ್ವ
ಸನ್ನದ್ಧವಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ವಿಶ್ವಾಸ
ವ್ಯಕ್ತಪಡಿಸಿದರು.
ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಲಾಗಿದ್ದ
ಜಿಲ್ಲಾ ಆರೋಗ್ಯ ಅಭಿಯಾನ ಕಾರ್ಯಕಾರಿ ಸಮಿತಿ ಸಭೆ ಹಾಗೂ
ಆರೋಗ್ಯ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ
ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲಾ ಆರ್‍ಸಿಹೆಚ್ ಅಧಿಕಾರಿ ಡಾ. ಮೀನಾಕ್ಷಿ ಅವರು ಕೋವಿಡ್ ಲಸಿಕೆ
ವಿತರಣೆಗೆ ಕೈಗೊಳ್ಳಲಾದ ಸಿದ್ಧತೆಗಳ ಕುರಿತು ಸಭೆಯ
ಪ್ರಾರಂಭದಲ್ಲಿ ವಿವರಣೆ ನೀಡಿದರು. ಬಳಿಕ ಮಾತನಾಡಿದ
ಜಿಲ್ಲಾಧಿಕಾರಿಗಳು, ಕೋವಿಡ್ ತಡೆಗೆ ಎಲ್ಲ ಹಂತಗಳ ಪ್ರಯೋಗದ
ಬಳಿಕ ಯಶಸ್ವಿಯಾಗಿ ಬಳಸಬಹುದಾದ ಲಸಿಕೆ ಶೀಘ್ರ
ಪೂರೈಕೆಯಾಗುವ ಸಾಧ್ಯತೆಗಳಿದ್ದು, ಸರ್ಕಾರದ
ನಿರ್ದೇಶನದಂತೆ ಲಸಿಕೆಯನ್ನು ಮೊದಲ ಹಂತದಲ್ಲಿ ಆರೋಗ್ಯ
ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ನೀಡಬೇಕಿದೆ. ಹೀಗಾಗಿ
ಜಿಲ್ಲೆಯಲ್ಲಿ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳು, ಮೆಡಿಕಲ್ ಕಾಲೇಜು,
ನರ್ಸಿಂಗ್ ಹೋಂಗಳು, ಪ್ಯಾರಾಮೆಡಿಕಲ್ ಸೇರಿದಂತೆ ಆರೋಗ್ಯ
ಕ್ಷೇತ್ರದಲ್ಲಿ ಸೇವೆ ಸಲ್ಲಿಸುವ ವೈದ್ಯರು, ನರ್ಸ್‍ಗಳು, ಸಿಬ್ಬಂದಿಗಳು,
ಪ್ರಯೋಗಶಾಲಾ ತಂತ್ರಜ್ಞರು ಸೇರಿದಂತೆ ಎಲ್ಲ ಆಶಾ
ಕಾರ್ಯಕರ್ತರಿಗೆ ಮೊದಲು ಲಸಿಕೆ ನೀಡಲು ಅಂಕಿ ಅಂಶಗಳನ್ನು
ಸಂಗ್ರಹಿಸುವುದು, ಲಸಿಕೆ ದಾಸ್ತಾನು ಹಾಗೂ ವಿತರಣೆಗೆ ಬೇಕಾದ ಎಲ್ಲ
ಸಿದ್ಧತೆಗಳನ್ನು ನಿಗದಿತ ಕಾಲಮಿತಿಯೊಳಗೆ ಮಾಡಿಕೊಳ್ಳಲಾಗಿದೆ.
ಹೀಗಾಗಿ ಕೋವಿಡ್ ಲಸಿಕೆ ಮೊದಲ ಹಂತದ ವಿತರಣೆಗೆ ದಾವಣಗೆರೆ ಜಿಲ್ಲೆ
ಈಗ ಸನ್ನದ್ಧವಾಗಿದೆ ಎಂದು ಜಿಲ್ಲಾಧಿಕಾರಿಗಳು ವಿಶ್ವಾಸ
ವ್ಯಕ್ತಪಡಿಸಿದರು. ಆರೋಗ್ಯ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವ
ಖಾಸಗಿ ಹಾಗೂ ಸರ್ಕಾರಿ ಸಂಸ್ಥೆಗಳ ಒಟ್ಟು 10115 ಜನರನ್ನು ಮೊದಲ
ಹಂತದ ಫಲಾನುಭವಿಗಳೆಂದು ಗುರುತಿಸಲಾಗಿದೆ. ಅಲ್ಲದೆ 2872
ಲಸಿಕಾಕರ್ತರನ್ನು ಗುರುತಿಸಿ, ಹೆಸರು ಸಹಿತ ಪಟ್ಟಿ ಸಿದ್ಧಪಡಿಸಿ
ಸರ್ಕಾರಕ್ಕೆ ಸಲ್ಲಿಸಲಾಗಿದೆ. ಜಿಲ್ಲೆಗೆ ಪೂರೈಸಲಾಗುವ ಲಸಿಕೆ

ಸಂಗ್ರಹಕ್ಕೆ ಹಾಗೂ ವಿತರಣೆಗೂ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಇದೀಗ ತಹಸಿಲ್ದಾರರ ನೇತೃತ್ವದಲ್ಲಿ ತಾಲ್ಲೂಕು ಮಟ್ಟದ
ಕಾರ್ಯಪಡೆ ರಚಿಸಲು ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿಗಳು
ಹೇಳಿದರು.
ಜಿಲ್ಲಾ ಆರ್‍ಸಿಹೆಚ್ ಅಧಿಕಾರಿ ಡಾ. ಮೀನಾಕ್ಷಿ ಮಾಹಿತಿ ನೀಡಿ, ಕೋವಿಡ್‍ಗೆ
ಬಳಸಬಹುದಾದ ಲಸಿಕೆ ಪೂರೈಕೆ ಹಾಗೂ ವಿತರಣೆಗೆ ಸಂಬಂಧಿಸಿದಂತೆ
ಸರ್ಕಾರದ ನಿರ್ದೇಶನದಂತೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಜಿಲ್ಲಾ
ಮಟ್ಟದ ಕಾರ್ಯಪಡೆ ರಚಿಸಿ, ಹಲವು ಸುತ್ತಿನ ಸಭೆಗಳನ್ನು
ನಡೆಸಲಾಗಿದೆ. ಆರೋಗ್ಯ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವ
ಜಿಲ್ಲೆಯ 100 ಸರ್ಕಾರಿ ಆಸ್ಪತ್ರೆಗಳು, 450 ಖಾಸಗಿ ಆಸ್ಪತ್ರೆಗಳು,
ನರ್ಸಿಂಗ್ ಹೋಂಗಳು, ಮೆಡಿಕಲ್ ಕಾಲೇಜುಗಳ ಬೋಧಕರು,
ವಿದ್ಯಾರ್ಥಿಗಳು, ಸಿಬ್ಬಂದಿ, ಪ್ರಯೋಗಶಾಲಾ ತಂತ್ರಜ್ಞರು, ಗ್ರೂಪ್-ಡಿ,
ಚಾಲಕರು, ಆಶಾ ಕಾರ್ಯಕರ್ತೆಯರು ಸೇರಿದಂತೆ
ಖಾಸಗಿಸಂಸ್ಥೆಗಳ 6230 ಜನ ಹಾಗೂ ಸರ್ಕಾರಿ ಸಂಸ್ಥೆಗಳ 3885
ಸೇರಿದಂತೆ ಒಟ್ಟು 10115 ಜನರ ಪಟ್ಟಿಯನ್ನು ಮೊದಲ ಹಂತದ
ಫಲಾನುಭವಿಗಳೆಂದು ಗುರುತಿಸಿ, ಸರ್ಕಾರಕ್ಕೆ ಪಟ್ಟಿ ಸಲ್ಲಿಸಲಾಗಿದೆ.
ಅಲ್ಲದೆ ಲಸಿಕೆಯನ್ನು ನೀಡಲು ಲಸಿಕಾಕರ್ತರನ್ನು ಕೂಡ
ಗುರುತಿಸಲಾಗಿದ್ದು, ಸರ್ಕಾರಿ ಸಂಸ್ಥೆಗಳ 983, ಖಾಸಗಿ ಸಂಸ್ಥೆಗಳ
1889 ಜನ ಲಸಿಕಾಕರ್ತರ ಪಟ್ಟಿ ಸಿದ್ಧವಾಗಿದೆ. ಲಸಿಕೆ ದಾಸ್ತಾನು ಮಾಡಲು
ಸರ್ಕಾರಿ ಸಂಸ್ಥೆಗಳ 105 ಡೀಪ್ ಕೋಲ್ಡ್ ಸ್ಟೋರೇಜ್‍ಗಳನ್ನು ಕೂಡ
ಸಿದ್ಧವಾಗಿರಿಸಲಾಗಿದೆ. ಪಶುಸಂಗೋಪನೆ ಇಲಾಖೆಗೆ ಸಂಬಂಧಿಸಿದ 09
ಕೋಲ್ಡ್ ಸ್ಟೋರೇಜ್‍ಗಳು ಹಾಗೂ 02 ವಾಕ್ ಇನ್ ಕೂಲರ್‍ಗಳು
ಕೂಡ ಲಭ್ಯವಿದ್ದು, ಅಗತ್ಯವೆನಿಸಿದರೆ ಬಳಕೆಗೆ ನೀಡಲು ಇಲಾಖೆ
ಸಿದ್ಧವಿದೆ. ದಾವಣಗೆರೆ ಜಿಲ್ಲೆಗೆ ಚಿತ್ರದುರ್ಗ ಜಿಲ್ಲೆಯಿಂದ ಲಸಿಕೆ
ಪೂರೈಕೆಯಾಗುವಂತೆ ಆರೋಗ್ಯ ಇಲಾಖೆ ವ್ಯವಸ್ಥೆ ಮಾಡಿಕೊಂಡಿದೆ
ಎಂದು ತಿಳಿಸಿದರು.
ಅಪೌಷ್ಠಿಕ ಮಕ್ಕಳ ಆರೋಗ್ಯ : ಜಿಲ್ಲೆಯಲ್ಲಿ ಈ ವರ್ಷ ಅಕ್ಟೋಬರ್
ತಿಂಗಳ ಅಂತ್ಯದವರೆಗೆ 118312 ಅಂಗನವಾಡಿ ಮಕ್ಕಳ ಆರೋಗ್ಯ
ತಪಾಸಣೆ ಮಾಡಲಾಗಿದ್ದು, ಇದರಲ್ಲಿ 108914 ಮಕ್ಕಳ ತೂಕ
ಸಾಮಾನ್ಯ, 9166 ಮಕ್ಕಳು ಸಾಧಾರಣ ತೂಕ ಹೊಂದಿದ್ದರೆ, 232
ಮಕ್ಕಳು ಅತಿ ಕಡಿಮೆ ತೂಕ ಹೊಂದಿದ್ದರು. 232 ಅಪೌಷ್ಠಿಕ
ಮಕ್ಕಳನ್ನು ನಿಯಮಾನುಸಾರ ಆಸ್ಪತ್ರೆಗೆ ದಾಖಲಿಸಿ, ಮಕ್ಕಳ
ಆರೋಗ್ಯ ಸುಧಾರಣೆಗೆ ಕ್ರಮ ಕೈಗೊಳ್ಳದಿರಲು ಲಾಕ್‍ಡೌನ್
ಕಾರಣವಾಗಿರುವ ಸಾಧ್ಯತೆ ಹೆಚ್ಚಾಗಿದೆ ಎಂದು ಜಿಲ್ಲಾ ಆರ್‍ಸಿಹೆಚ್ ಅಧಿಕಾರಿ ಡಾ.
ಮೀನಾಕ್ಷಿ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು,
ಅಪೌಷ್ಠಿಕ ಮಕ್ಕಳನ್ನು ಕೂಡಲೆ ಸಂಬಂಧಪಟ್ಟ ಸರ್ಕಾರಿ
ಆಸ್ಪತ್ರೆಗಳಿಗೆ ನಿಯಮಾನುಸಾರ ಕರೆದುಕೊಂಡು ಹೋಗಿ,
ದಾಖಲಿಸುವ ಜವಾಬ್ದಾರಿ ಆಯಾ ಅಂಗನವಾಡಿ ಕಾರ್ಯಕರ್ತರು ಹಾಗೂ
ಮೇಲ್ವಿಚಾರಕರ ಜವಾಬ್ದಾರಿಯಾಗಿದೆ. ಹೀಗೆ ದಾಖಲಿಸುವ ಮಕ್ಕಳ
ಆರೋಗ್ಯ ಸುಧಾರಣೆಯಾಗುವವರೆಗೂ ಇದರ
ಮೇಲುಸ್ತುವಾರಿಯನ್ನು ಇವರು ನೋಡಿಕೊಳ್ಳಬೇಕು. ಇದಕ್ಕೆ
ವಿಫಲರಾಗುವ ಅಂಗನವಾಡಿ ಕಾರ್ಯಕರ್ತೆ, ಮೇಲ್ವಿಚಾರಕರ
ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು
ಸೂಚನೆ ನೀಡಿದರು.
1500 ಕ್ಷಯರೋಗಿಗಳ ಪತ್ತೆ : ಜಿಲ್ಲೆಯಲ್ಲಿ ಕ್ಷಯರೋಗ
ನಿಯಂತ್ರಣ ಕಾರ್ಯಕ್ರಮದಡಿ ಈ ವರ್ಷ ಒಟ್ಟು 1500 ಹೊಸ
ಕ್ಷಯರೋಗಿಗಳನ್ನು ಪತ್ತೆ ಮಾಡಲಾಗಿದ್ದು ಅವರ
ಮನೆಗಳಿಗೆ ಔಷಧಿ ವಿತರಿಸುವ ಕಾರ್ಯ ನಡೆದಿದೆ. ಅಲ್ಲದೆ ಈ ವರ್ಷ

ಜಿಲ್ಲೆಯ ಜನಸಂಖ್ಯೆಯಲ್ಲಿ ಶೇ. 30 ರಷ್ಟು ಅಂದರೆ ಸುಮಾರು 4
ಲಕ್ಷ ಜನರನ್ನು ಪರೀಕ್ಷೆಗೆ ಒಳಪಡಿಸಲು ಕಾರ್ಯಕ್ರಮ
ರೂಪಿಸಲಾಗಿದೆ. ಜಿಲ್ಲೆಯ ಕ್ಷಯರೋಗಿಗಳಲ್ಲಿ 16 ಜನರಿಗೆ ಕೋವಿಡ್
ಸೋಂಕು ದೃಢಪಟ್ಟು, ಈ ಪೈಕಿ 15 ಜನರು ಗುಣಮುಖರಾಗಿ, ಒಬ್ಬರು
ಮಾತ್ರ ಮೃತಪಟ್ಟಿದ್ದಾರೆ ಎಂದು ಕ್ಷಯರೋಗ
ನಿಯಂತ್ರಣಾಧಿಕಾರಿ ಡಾ. ಗಂಗಾಧರ್ ಹೇಳಿದರು. ಜಿಲ್ಲಾಧಿಕಾರಿಗಳು
ಪ್ರತಿಕ್ರಿಯಿಸಿ ಜಿಲ್ಲೆಯಲ್ಲಿನ ಎಲ್ಲ ಕ್ಷಯರೋಗಿಗಳು, ಏಡ್ಸ್
ರೋಗಿಗಳಿಗೆ ಕೋವಿಡ್ ಟೆಸ್ಟ್ ಮಾಡಿ ಎಂದು ಸೂಚನೆ ನೀಡಿದರು.
ಖಾಸಗಿ ಆಸ್ಪತ್ರೆಗಳಿಗೆ ಶಿಫಾರಸು ಬೇಡ : ಜಿಲ್ಲೆಯಲ್ಲಿ ಕೋವಿಡ್
ಸೋಂಕಿತರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದ್ದು, ಸರ್ಕಾರಿ
ಆಸ್ಪತ್ರೆಗಳಲ್ಲಿ ಕೋವಿಡ್ ರೋಗಿಗಳಿಗಾಗಿ ಕಾಯ್ದಿರಿಸಲಾಗಿರುವ
ಹಾಸಿಗೆಗಳು ಖಾಲಿ ಇವೆ. ಅಲ್ಲದೆ ಸರ್ಕಾರಿ ಆಸ್ಪತ್ರೆಗಳಲ್ಲಿಯೇ ಕೋವಿಡ್
ರೋಗಿಗಳ ಚಿಕಿತ್ಸೆಗೆ ಅತ್ಯುತ್ತಮ ವ್ಯವಸ್ಥೆ ಲಭ್ಯವಿದೆ. ಸರ್ಕಾರಿ
ಆಸ್ಪತ್ರೆಯಲ್ಲಿ ಕೋವಿಡ್ ಸೋಂಕು ದೃಢಪಟ್ಟ ರೋಗಿಗಳನ್ನು
ಸರ್ಕಾರಿ ಆಸ್ಪತ್ರೆಗಳಲ್ಲಿಯೇ ದಾಖಲಿಸಿ ಚಿಕಿತ್ಸೆ ನೀಡಬೇಕು. ಈ ಕುರಿತು
ರೋಗಿಗಳಿಗೆ, ಅವರ ಕುಟುಂಬದವರಿಗೆ ಮನವರಿಕೆ
ಮಾಡಿಕೊಡಬೇಕು. ಅನಗತ್ಯವಾಗಿ ಖಾಸಗಿ ಆಸ್ಪತ್ರೆಗಳಿಗೆ ಸರ್ಕಾರಿ
ವೈದ್ಯರು ಶಿಫಾರಸು ಮಾಡುವುದು ಬೇಡ ಎಂದು ಜಿಲ್ಲಾಧಿಕಾರಿಗಳು
ನಿರ್ದೇಶನ ನೀಡಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.
ನಾಗರಾಜ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ನಜ್ಮಾ,
ಜಿಲ್ಲಾ ಕುಷ್ಟರೋಗ ನಿಯಂತ್ರಣಾಧಿಕಾರಿ ಡಾ. ಮುರಳಿಧರ್,
ಮಲೇರಿಯಾ ನಿಯಂತ್ರಣಾಧಿಕಾರಿ ಡಾ. ನಟರಾಜ್ ಸೇರಿದಂತೆ ವಿವಿಧ
ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳು, ತಾಲ್ಲೂಕು
ವೈದ್ಯಾಧಿಕಾರಿಗಳು ಭಾಗವಹಿಸಿದ್ದರು. ಕ್ಷಯರೋಗ ನಿಯಂತ್ರಣ
ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಆರೋಗ್ಯ ಇಲಾಖೆ ಸಿದ್ಧಪಡಿಸಲಾದ
ಪೋಸ್ಟರ್ ಬ್ಯಾನರ್‍ಗಳನ್ನು ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು
ಬಿಡುಗಡೆ ಮಾಡಿದರು.

Leave a Reply

Your email address will not be published. Required fields are marked *