ದಾವಣಗೆರೆ: ನ.26 ನಾಗರಿಕರಿಗೆ ನಿಗಧಿತ ಕಾಲ ಮಿತಿಯಲ್ಲಿ ಸೇವೆಗಳನ್ನು ಒದಗಿಸುವ
ಉದ್ದೇಶದಿಂದ ಜಾರಿಗೆ ತರಲಾಗಿರುವ ಸಕಾಲ ಯೋಜನೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು
ವಿವಿಧ ಇಲಾಖೆಗಳಲ್ಲಿ ಬಾಕಿ ಉಳಿದಿರುವ ಸಕಾಲ ಅರ್ಜಿಗಳು ಹಾಗೂ ಮೇಲ್ಮನವಿಗಳನ್ನು ತ್ವರಿತ ವಿಲೇವಾರಿಗಾಗಿ ಇದೇ
ನವೆಂಬರ್ 30 ರಿಂದ ಡಿಸೆಂಬರ್ 19 ವರೆಗೆ ಸಕಾಲ ಸಪ್ತಾಹ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಸಕಾಲ ಮಿಷನ್ ನಿರ್ದೇಶಕಿ
ಡಾ.ಬಿ.ಆರ್.ಮಮತ ಅವರು ತಿಳಿಸಿದರು.
ಅವರು ಇಂದು ರಾಜ್ಯದ ಎಲ್ಲಾ ಜಿಲ್ಲೆಗಳ ಅಪರ ಜಿಲ್ಲಾಧಿಕಾರಿಗಳು ಹಾಗೂ ಸಕಾಲ ವ್ಯಾಪ್ತಿಗೆ ಒಳಪಡುವ ಇಲಾಖೆಗಳ
ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ರಾಜ್ಯದ 98 ಇಲಾಖೆಗಳಲ್ಲಿ 1025
ಸೇವೆಗಳನ್ನು ಸಕಾಲ ವ್ಯಾಪ್ತಿಯಲ್ಲಿವೆ ಎಂದು ತಿಳಿಸಿದರು.
ನವೆಂಬರ್ 30 ರಿಂದ ಡಿಸೆಂಬರ್ 05 ರವರೆಗೆ ಕಂದಾಯ ಇಲಾಖೆ, ನಗರಾಭಿವೃದ್ಧಿ ಇಲಾಖೆ, ಆಹಾರ, ನಾಗರಿಕ ಸರಬರಾಜು
ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಹಾಗೂ ಸಾರಿಗೆ ಇಲಾಖೆ ಒಳಗೊಂಡಂತೆ ನಾಲ್ಕು ಇಲಾಖೆಗಳಿಗೆ ಸಂಬಂಧಿಸಿದ
ಪ್ರಕರಣಗಳ ವಿಲೇವಾರಿ, ಡಿಸೆಂಬರ್ 07 ರಿಂದ 11 ರವರೆಗೆ ಗ್ರಾಮೀಣಾಭಿವೃದ್ಧಿ ಇಲಾಖೆಗೆ ಸಂಬಂಧಿಸಿದಂತೆ ಪ್ರಕರಣಗಳ
ವಿಲೇವಾರಿ ಹಾಗೂ ಡಿಸೆಂಬರ್ 14 ರಿಂದ 19ರವರೆಗೆ ಸಕಾಲ ವ್ಯಾಪ್ತಿಗೆ ಒಳಪಡುವ ಉಳಿದ ಎಲ್ಲ ಇಲಾಖೆಗಳ ಪ್ರಕರಣಗಳ
ಅರ್ಜಿ ವಿಲೇವಾರಿಗಳ ಕುರಿತಂತೆ ಸಪ್ತಾಹ ಆಚರಿಸಲಾಗುವುದು ಎಂದರು
ಸಪ್ತಾಹದಲ್ಲಿ ಬಾಕಿ ಅರ್ಜಿಗಳ ವಿಲೇವಾರಿ, ಅವಧಿ ಮೀರಿ ಬಾಕಿ ಉಳಿಸಿಕೊಂಡ ಅರ್ಜಿಗಳ ವಿಲೇವಾರಿಮಾಡುವುದು,
ಸಕಾಲದಲಿ ಸ್ವೀಕರಿಸಿದ ಎಲ್ಲ ಹೊಸ ಹಾಗೂ ಹಳೆಯ ಪ್ರಕರಣಗಳ ವಿಲೇವಾರಿಗೆ ಕ್ರಮಕೈಗೊಳ್ಳುವುದಾಗಿದೆ. ಸಂಬಂಧಿಸಿದ
ಇಲಾಖೆಗಳಲ್ಲಿ ಸಕಾಲದಡಿ ಸ್ವೀಕೃತಿಯಾಗಿರುವ ಅರ್ಜಿಗಳ ವಿಲೇವಾರಿಗೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದ ಅವರು
ಸಕಾಲ ಯೋಜನೆಯಡಿ ಬರುವ ಅರ್ಜಿಗಳನ್ನು ಸಕಾಲದಡಿಯಲ್ಲಿಯೇ ಸ್ವೀಕರಿಸಬೇಕು. ಕೆಲವು ಇಲಾಖೆಗಳಲ್ಲಿ
ಅರ್ಜಿಗಳನ್ನು ಸಕಾಲದಡಿ ಸ್ವೀಕರಿಸದೇ ಇರುವುದರಿಂದ ಶೂನ್ಯ ಸ್ವೀಕೃತಿ ಆಗುತ್ತಿರುವುದು ಕಂಡು ಬರುತ್ತಿದೆ.
ಆದ್ದರಿಂದ ಸಕಾಲದಲ್ಲಿ ಬರುವ ಅರ್ಜಿಗಳನ್ನು ಕಡ್ಡಾಯವಾಗಿ ನೊಂದಾಯಿಸಬೇಕು ಎಂದರು.
ಈಗಾಗಲೇ ಸ್ವೀಕರಿಸಿ ವಿಲೇಯಾಗದ ಅರ್ಜಿಗಳು ಹಾಗೂ ಹೊಸದಾಗಿ ಸ್ವೀಕರಿಸಿದ ಅರ್ಜಿಗಳನ್ನು ಈ ಸಪ್ತಾಹದಲ್ಲಿ ವಿಲೇ
ಮಾಡಬೇಕು. ಸಕಾಲ ಸಪ್ತಾಹ ಕಾರ್ಯಕ್ರಮ ಕುರಿತಂತೆ ವ್ಯಾಪಕ ಪ್ರಚಾರ ಕಾರ್ಯಗಳನ್ನು ಕೈಗೊಳ್ಳಬೇಕು, ಸಕಾಲ ಯೋಜನೆ
ಕುರಿತಂತೆ ಸಾರ್ವಜನಿಕರಿಗೆ ಮಾಹಿತಿ ಮತ್ತು ಜಾಗೃತಿ ಮೂಡಿಸಬೇಕು. ಆಯಾ ಇಲಾಖೆಗಳು ಕಡ್ಡಾಯವಾಗಿ ಸಪ್ತಾಹ
ಅಂಗವಾಗಿ ಇಲಾಖೆಯ ಸೇವೆಗಳು, ವಿಲೇವಾರಿ ಸಮಯ ಕುರಿತಂತೆ ಇಲಾಖೆಗಳಲ್ಲಿ ನಾಮಫಲಕ ಅಳವಡಿಸಬೇಕು.
ಇದರೊಂದಿಗೆ ಸಪ್ತಾಹದ ಬ್ಯಾನರ್ ಅಳವಡಿಸಬೇಕು. ಕಚೇರಿಯ ಪ್ರವೇಶ ದ್ವಾರದಲ್ಲಿ ಹೆಲ್ಪ್ ಡೆಸ್ಕ್ ಸ್ಥಾಪಿಸಿ ಜನರಿಗೆ ಮಾಹಿತಿ
ನೀಡಬೇಕು ಎಂದು ಸೂಚನೆ ನೀಡಿದರು.
ಜಿಲ್ಲಾ ಮಟ್ಟದಲ್ಲಿ ತಪಾಸಣಾ ತಂಡಗಳನ್ನು ರಚಿಸಿ ಸಪ್ತಾಹ ಕಾರ್ಯಕ್ರಮದಲ್ಲಿ ಅರ್ಜಿಗಳ ವಿಲೇವಾರಿ ಕ್ರಮಗಳ ಕುರಿತಂತೆ
ತಪಾಸಣೆಗಳನ್ನು ಕೈಗೊಳ್ಳಬೇಕು. ಅಪರ ಜಿಲ್ಲಾಧಿಕಾರಿಗಳು ಪ್ರತಿನಿತ್ಯದ ಸಕಾಲ ವಿಲೇವಾರಿ ಪ್ರಕರಣಗಳು, ಚಟುವಟಿಕೆಗಳ
ಕುರಿತಂತೆ ನಿಗಾ ವಹಿಸಬೇಕು. ಆಯ್ದ ಕಚೇರಿಗಳಿಗೆ ಭೇಟಿ ನೀಡಬೇಕು. ಜಿಲ್ಲಾಧಿಕಾರಿಗಳು ಸಹ ಕಚೇರಿಗಳಿಗೆ ಭೇಟಿ ಸಪ್ತಾಹದ
ಚಟುವಟಿಕೆ ಕುರಿತಂತೆ ತಪಾಸಣೆ ನಡೆಸಬೇಕು ಎಂದು ಹೇಳಿದರು.
ಸಕಾಲದಡಿ ಉತ್ತಮವಾಗಿ ಸೇವೆ ಒದಗಿಸುವ ಅಧಿಕಾರಿಗಳನ್ನು ಗುರುತಿಸಿ ಈ ಬಾರಿ ಸರ್ವೋತ್ತಮ ಸೇವಾ ಪ್ರಶಸ್ತಿಗೆ ಆಯ್ಕೆ
ಮಾಡಲು ಶಿಫಾರಸ್ಸು ಮಾಡಲಾಗುವುದು. ಸಕಾಲದಡಿ ದೊರೆಯುವ ಸೇವೆಗಳಡಿ ಸಾರ್ವಜನಿಕರು ಅರ್ಜಿ ಸಲ್ಲಿಸಿ ತಮ್ಮ
ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಈ
ಸಂದರ್ಭದಲ್ಲಿ ಮನವಿ ಮಾಡಿಕೊಂಡರು.
ವಿಡಿಯೋ ಸಂವಾದದಲ್ಲಿ ಅಪರ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ,
ನಗರಾಭಿವೃದ್ದಿ ಕೋಶದ ಯೋಜÀನಾ ನಿರ್ದೇಶಕಿ ನಜ್ಮಾ,
ಮಹಾನಗರ ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ವಾರ್ತಾಧಿಕಾರಿ
ಅಶೋಕ್ ಕುಮಾರ್ ಸೇರಿದಂತೆ ಇತರ ಇಲಾಖಾ ಅಧಿಕಾರಿಗಳು ಭಾಗವಹಿಸಿದ್ದರು