ದಾವಣಗೆರೆ ನ.30
ಮೆಕ್ಕೆಜೋಳ ಬೆಳೆದ ಜಿಲ್ಲೆಯ ರೈತರ ಹಿತ ಕಾಯಲು ಎಲ್ಲ
ಶಾಸಕರುಗಳು, ಜಿಲ್ಲಾಧಿಕಾರಿಗಳು, ಮೆಕ್ಕೆಜೋಳ ಉತ್ಪನ್ನಕ್ಕೆ
ಸಂಬಂಧಿಸಿದ ಉದ್ಯಮಿಗಳೊಂದಿಗೆ ಸಭೆ ನಡೆಸಿ, ರೈತರಿಗೆ
ಲಾಭದಾಯಕವಾಗುವಂತೆ ಮಾಡಲು ಅಗತ್ಯ ಕ್ರಮ
ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ದೀಪಾ
ಜಗದೀಶ್ ಭರವಸೆ ನೀಡಿದರು.
ಜಿಲ್ಲಾ ಪಂಚಾಯತ್‍ನ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ
ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು
ಮಾತನಾಡಿದರು.
ಸೋಮವಾರದ ಜಿ.ಪಂ. ಸಾಮಾನ್ಯ ಸಭೆ
ಆರಂಭಗೊಳ್ಳುತ್ತಿದ್ದಂತೆಯೇ, ವಿಷಯ ಪ್ರಸ್ತಾಪಿಸಿದ ಜಿ.ಪಂ.
ಸದಸ್ಯ ಸುರೇಂದ್ರ ನಾಯ್ಕ ಅವರು, ಜಿಲ್ಲೆಯಲ್ಲಿ ಮೆಕ್ಕೆಜೋಳ
ಬೆಳೆ ಉತ್ತಮವಾಗಿ ಬಂದಿದೆ. ರೈತರು ಈಗಾಗಲೆ ಬೆಳೆ ಕಟಾವು
ಮಾಡುತ್ತಿದ್ದಾರೆ. ಬೆಂಬಲ ಬೆಲೆಯಲ್ಲಿ ಮೆಕ್ಕೆಜೋಳ
ಖರೀದಿಸುವುದಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಇದುವರೆಗೂ ಖರೀದಿ
ಕೇಂದ್ರ ಆರಂಭವಾಗಿಲ್ಲ, ಇದರಿಂದ ರೈತರು ಸಂಕಷ್ಟಕ್ಕೆ
ಸಿಲುಕುವಂತಾಗಿದೆ. ಈ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಬೇಕು ಎಂದು
ಒತ್ತಾಯಿಸಿದರು. ಜಂಟಿಕೃಷಿ ನಿರ್ದೇಶಕ ಶ್ರೀನಿವಾಸ್ ಚಿಂತಾಲ್ ಪ್ರತಿಕ್ರಿಯಿಸಿ,
ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಇತ್ತೀಚೆಗಷ್ಟೇ ಜಿಲ್ಲಾ
ಕಾರ್ಯಪಡೆ ಸಮಿತಿ ಸಭೆ ನಡೆಸಿ, ಮೆಕ್ಕೆಜೋಳವನ್ನು ಖರೀದಿಸಲು
ಅನುಮತಿ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ
ಮೆಕ್ಕೆಜೋಳವನ್ನು ಪಡಿತರ ವ್ಯವಸ್ಥೆಯಲ್ಲಿ ವಿತರಿಸಲು
ಅವಕಾಶವಿಲ್ಲದ ಕಾರಣದಿಂದಾಗಿ, ಬೆಂಬಲ ಬೆಲೆಯಲ್ಲಿ ಖರೀದಿಸಲು ಅನುಮತಿ
ದೊರೆತಿಲ್ಲ. ಸರ್ಕಾರದ ಮಟ್ಟದಲ್ಲಿ ಈ ಬಗ್ಗೆ ತೀರ್ಮಾನ
ಕೈಗೊಳ್ಳಬೇಕಿದೆ ಎಂದರು. ಜಿ.ಪಂ. ಸದಸ್ಯ ವಿಶ್ವನಾಥ್ ಮಾತನಾಡಿ,
ಬೆಂಬಲ ಬೆಲೆಯಲ್ಲಿ ಖರೀದಿಸಲು ಸಾಧ್ಯವಿಲ್ಲದ ಮೇಲೆ ಕೇಂದ್ರ ಸರ್ಕಾರ
ರೂ. 1800 ಗಳ ಬೆಂಬಲ ಬೆಲೆ ಏಕೆ ನಿಗದಿಪಡಿಸಬೇಕು, ರೈತರಿಗೆ ಬಿತ್ತನೆ
ಬೀಜ ಏಕೆ ವಿತರಿಸಬೇಕು. ಮದ್ಯವರ್ತಿಗಳು, ಉದ್ಯಮಿಗಳು ಇದರ
ಲಾಭ ಪಡೆಯುತ್ತಿದ್ದು, 1200 ರೂ. ದರಕ್ಕೆ ಕಡಿಮೆ ಬೆಲೆಯಲ್ಲಿ
ರೈತರು ಮಾರಾಟ ಮಾಡಿ ಈಗಾಗಲೆ ತೀವ್ರ ನಷ್ಟ
ಅನುಭವಿಸುತ್ತಿದ್ದಾರೆ, ಮೆಕ್ಕೆಜೋಳವನ್ನು ಬೆಂಬಲ ಬೆಲೆಯಲ್ಲಿ ಈ
ಹಿಂದೆ ಸರ್ಕಾರ ಖರೀದಿಸಿದ್ದು, ಈಗೇಕೆ ಸಾಧ್ಯವಾಗುತ್ತಿಲ್ಲ ಎಂದು
ಅಸಮಾಧಾನ ವ್ಯಕ್ತಪಡಿಸಿ, ರೈತರ ಹಿತಕಾಯಲು ಜಿಲ್ಲಾ ಪಂಚಾಯತ್
ಮುಂದಾಗಬೇಕಿದೆ ಎಂದರು. ಇದಕ್ಕೆ ಪಕ್ಷಬೇಧ ಮರೆತು ಜಿ.ಪಂ.
ಎಲ್ಲ ಸದಸ್ಯರು ದನಿಗೂಡಿಸಿದರು. ಇದಕ್ಕೆ ಸ್ಪಂದಿಸಿದ ಜಿ.ಪಂ.
ಅಧ್ಯಕ್ಷರು, ಜಿಲ್ಲೆಯಲ್ಲಿ ಮೆಕ್ಕೆಜೋಳಕ್ಕೆ ಸಂಬಂಧಿಸಿದಂತೆ ಹಲವು
ಉದ್ಯಮಗಳಿವೆ, ಇವರೂ ಕೂಡ ಮೆಕ್ಕೆಜೋಳವನ್ನು ಸರಿಯಾದ
ಬೆಲೆಯಲ್ಲಿ ಖರೀದಿಸಲು ಅವಕಾಶವಿದೆ. ಹೀಗಾಗಿ ಜಿಲ್ಲಾಧಿಕಾರಿಗಳ
ನೇತೃತ್ವದಲ್ಲಿ ಎಲ್ಲ ಶಾಸಕರುಗಳು, ಜಿ.ಪಂ. ಸದಸ್ಯರು,
ಉದ್ಯಮಿಗಳೊಂದಿಗೆ ಸಭೆ ನಡೆಸಿ, ರೈತರ ಹಿತದೃಷ್ಟಿಯಿಂದ ಸೂಕ್ತ
ನಿರ್ಣಯ ಕೈಗೊಳ್ಳೋಣ ಎಂದು ಹೇಳಿದರು.
ಗ್ರಾಮಗಳಿಗೆ ಸ್ವಚ್ಛತಾ ಸಿಬ್ಬಂದಿ : ಸ್ವಚ್ಛ ಭಾರತ ನಿರ್ಮಾಣ
ಮಾಡಬೇಕು ಎನ್ನುವುದು ಈ ದೇಶದ ಪ್ರಧಾನಿಗಳ
ಆಶಯವಾಗಿದೆ. ನಗರ, ಪಟ್ಟಣಗಳಲ್ಲಿ ಜನಸಂಖ್ಯೆ ಆಧಾರದಲ್ಲಿ ಪೌರ
ಕಾರ್ಮಿಕರನ್ನು ನೇಮಕ ಮಾಡಿಕೊಂಡಿದ್ದು, ಇದರಿಂದಾಗಿ ನಗರ,
ಪಟ್ಟಣಗಳ ರಸ್ತೆ, ಚರಂಡಿಗಳ ಸ್ವಚ್ಛತಾ ಕಾರ್ಯ ನಿತ್ಯ
ನಡೆಯುತ್ತದೆ. ಆದರೆ ಗ್ರಾಮಗಳ ಸ್ವಚ್ಛತೆಗೆ ಯಾವುದೇ
ಸಿಬ್ಬಂದಿಗಳು ಇಲ್ಲ. ಆಗಾಗ್ಗೆ ಗ್ರಾಮದ ಸ್ವಚ್ಛತೆಗೆಂದು ಲಕ್ಷ ಲಕ್ಷ
ರೂ. ಖರ್ಚು ಮಾಡಿದ್ದೇವೆ ಎಂದು ಗ್ರಾಮ ಪಂಚಾಯತ್‍ಗಳು ಬಿಲ್
ತೋರಿಸುತ್ತಾರೆ. ಆದರೆ ಸ್ವಚ್ಛತೆ ಮಾತ್ರ ನಡೆಯುವುದಿಲ್ಲ.
ಇದಕ್ಕೆ ಶಾಶ್ವತ ಪರಿಹಾರವೆಂದರೆ, ನಗರ, ಪಟ್ಟಣಗಳಂತೆಯೇ
ಗ್ರಾಮಗಳಲ್ಲಿಯೂ ಸ್ವಚ್ಛತೆಗೆ ಸಿಬ್ಬಂದಿಯನ್ನು ಜನಸಂಖ್ಯೆಗೆ
ಅನುಗುಣವಾಗಿ ನೇಮಕ ಮಾಡಬೇಕು ಎಂದು ಜಿ.ಪಂ. ಸದಸ್ಯ ಕೆ.ಎಸ್.
ಬಸವಂತಪ್ಪ ಪ್ರಸ್ತಾಪಿಸಿದರು. ಸದಸ್ಯೆ ಶೈಲಜಾ ಬಸವರಾಜ್ ಕೂಡ
ಮಾತನಾಡಿ, ಗ್ರಾಮಗಳಲ್ಲಿ ಸ್ವಚ್ಛತೆಗೆಂದೇ ಸಿಬ್ಬಂದಿಗಳನ್ನು
ನೇಮಿಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು. ಇದಕ್ಕುತ್ತರಿಸಿದ
ಜಿ.ಪಂ. ಸಿಇಒ ಪದ್ಮಾ ಬಸವಂತಪ್ಪ ಅವರು, ಸದ್ಯ ಯಾವುದೇ ನೇಮಕಾತಿ
ಮಾಡಿಕೊಳ್ಳದಂತೆ ಸರ್ಕಾರ ಸುತ್ತೋಲೆ ಹೊರಡಿಸಿದೆ.
ಹೊರಗುತ್ತಿಗೆ ಆಧಾರದಲ್ಲಿ ಗ್ರಾಮಗಳಿಗೆ ಸ್ವಚ್ಛತಾ
ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳುವುದಕ್ಕೆ ಸಂಬಂಧಿಸಿದಂತೆ
ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಿ, ನಿಯಮಾನುಸಾರ ಕ್ರಮ
ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಬಿಸಿಎಂ ಟೆಂಡರ್ ತನಿಖೆ : ಹಿಂದುಳಿದ ವರ್ಗಗಳ ಅಭಿವೃದ್ಧಿ
ಇಲಾಖೆಯಿಂದ ಈ ಬಾರಿ ಆಹಾರ ಸಾಮಗ್ರಿ ಪೂರೈಕೆಗಾಗಿ ಟೆಂಡರ್
ಕರೆಯಲಾಗಿದ್ದು, 2018-19 ನೇ ಸಾಲಿನಲ್ಲಿ ನೀಡಿದ ಸಂಸ್ಥೆಯೊಂದಕ್ಕೆ
ನೀಡಬೇಕು ಎಂಬ ಹುನ್ನಾರ ಇಟ್ಟುಕೊಂಡು, ಮಾನದಂಡ ರಚಿಸಲಾಗಿದೆ.
ಹೀಗಾಗಿ ಇದನ್ನು ತನಿಖೆಗೆ ಒಳಪಡಿಸಬೇಕು ಹಾಗೂ ಟೆಂಡರ್
ಪ್ರಕ್ರಿಯೆ ನಿಯಮಬದ್ಧ ಹಾಗೂ ಪಾರದರ್ಶಕವಾಗಿರಬೇಕು ಎಂದು
ಜಿ.ಪಂ. ಸದಸ್ಯರು ಸಭೆಯ ಗಮನಕ್ಕೆ ತಂದರು. ಇದಕ್ಕೆ
ಪ್ರತಿಕ್ರಿಯಿಸಿದ ಜಿಲ್ಲಾ ಬಿಸಿಎಂ ಅಧಿಕಾರಿ, ಪ್ರಸಕ್ತ ವರ್ಷಕ್ಕೆ ಈಗಾಗಲೆ
ಟೆಂಡರ್ ಕರೆಯಲಾಗಿದ್ದು, ನಿಯಮಾನುಸಾರ ಟೆಂಡರ್
ಪ್ರಕ್ರಿಯೆ ನಡೆಸಲಾಗುವುದು ಎಂದರು. ಜಿಪಂ ಸಿಇಒ ಮಾತನಾಡಿ,
ಟೆಂಡರ್ ಪ್ರಕ್ರಿಯೆ ಬಗ್ಗೆ ಅಧಿಕಾರಿಗಳಿಂದ ಪರಿಶೀಲಿಸಿ ಸೂಕ್ತ ಕ್ರಮ
ಜರುಗಿಸುವುದಾಗಿ ಭರವಸೆ ನೀಡಿದರು.
ಜಿಲ್ಲಾ ಆಸ್ಪತ್ರೆ ಅವ್ಯವಸ್ಥೆ ಸರಿಪಡಿಸಿ : ಚಿಗಟೇರಿ ಜಿಲ್ಲಾ ಆಸ್ಪತ್ರೆಯಲ್ಲಿ
ಇದುವರೆಗೂ ಹೊರರೋಗಿ ವಿಭಾಗವನ್ನು ಸರಿಯಾಗಿ ಪ್ರಾರಂಭಿಸಿಲ್ಲ.
ಯಾವುದೇ ಶಸ್ತ್ರಚಿಕಿತ್ಸೆ ನಡೆಸುತ್ತಿಲ್ಲ. ಹೀಗಾಗಿ ಬಡವರು
ಅನಿವಾರ್ಯವಾಗಿ ಖಾಸಗಿ ಆಸ್ಪತ್ರೆಗೆ ತೆರಳಿ ದುಬಾರಿ ಬೆಲೆ ತೆರುತ್ತಿದ್ದಾರೆ.
ಜಿಲ್ಲಾ ಆಸ್ಪತ್ರೆ ದುರಾವಸ್ಥೆ ಹೇಳತೀರದಾಗಿದೆ. ಸಣ್ಣಪುಟ್ಟ ಕೆಲಸಕ್ಕೂ
ಹಣ ನೀಡದೇ ಇದ್ದರೆ ವೈದ್ಯರು, ಸಿಬ್ಬಂದಿ ಸ್ಪಂದಿಸುವುದಿಲ್ಲ. ಇಲ್ಲಿ
ಗೂಂಡಾಗಿರಿ ನಡೆಯುತ್ತಿದೆ, ಮಧ್ಯವರ್ತಿಗಳ ಹಾವಳಿ ಜಿಲ್ಲಾ
ಆಸ್ಪತ್ರೆಯಲ್ಲಿ ತಾಂಡವವಾಡುತ್ತಿದೆ. ಉನ್ನತ ಅಧಿಕಾರಿಗಳು
ಇನ್ನಾದರೂ ಆಸ್ಪತ್ರೆಗೆ ಭೇಟಿ ನೀಡಿ, ಅಲ್ಲಿನ ಸಮಸ್ಯೆ ಪರಿಹರಿಸಿ ಬಡವರಿಗೆ
ಅನುಕೂಲ ಮಾಡಿಕೊಡಿ ಎಂದು ಜಿ.ಪಂ. ಸದಸ್ಯ ಬಸವಂತಪ್ಪ,
ಸುರೇಂದ್ರನಾಯ್ಕ ಮುಂತಾದವರು ಸಭೆಯಲ್ಲಿ ಆಗ್ರಹಿಸಿದರು.
ಜಿ.ಪಂ. ಸದಸ್ಯೆ ಮಂಜುಳಾ ಟಿ.ವಿ. ರಾಜು ಮಾತನಾಡಿ, ಖಾಸಗಿ ಆಸ್ಪತ್ರೆಗಳಲ್ಲಿ
ಪ್ರತಿಯೊಂದು ಚಿಕಿತ್ಸೆ, ಶಸ್ತ್ರಚಿಕಿತ್ಸೆಗೆ ನಿಗದಿಪಡಿಸಿರುವ
ದರಪಟ್ಟಿಯನ್ನು ಆಸ್ಪತ್ರೆಯಲ್ಲಿ ಎಲ್ಲರಿಗೆ ಕಾಣುವಂತೆ
ಪ್ರದರ್ಶಿಸಬೇಕು ಎಂಬ ನಿಯಮವಿದೆ. ಆದರೆ ಜಿಲ್ಲೆಯಲ್ಲಿ ಇದನ್ನು
ಯಾರೂ ಪಾಲಿಸುತ್ತಿಲ್ಲ. ಅಧಿಕಾರಿಗಳು ಗೊತ್ತಿದ್ದೂ ಸುಮ್ಮನಿದ್ದಾರೆ
ಎಂದು ಆರೋಪಿಸಿದರು. ಇದಕ್ಕೆ ಸ್ಪಂದಿಸಿದ ಡಿಹೆಚ್‍ಒ ಡಾ. ನಾಗರಾಜ್, ಈ
ಕುರಿತು ಎಲ್ಲ ಖಾಸಗಿ ಆಸ್ಪತ್ರೆಗಳಿಗೆ ಪತ್ರವನ್ನು ಕಳುಹಿಸಿ,
ಮತ್ತೊಮ್ಮೆ ಪರಿಶೀಲಿಸಿ, ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮ
ಕೈಗೊಳ್ಳಲಾಗುವುದು. ಖಾಸಗಿ ಆಸ್ಪತ್ರೆಗಳಲ್ಲಿ ಆಯುಷ್ಮಾನ್
ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ ಉಚಿತವಾಗಿ ಚಿಕಿತ್ಸೆ
ಪಡೆಯಲು ಅವಕಾಶವಿದೆ. ಜನರಿಗೆ ಮಾಹಿತಿ ನೀಡುವ ಸಲುವಾಗಿಯೇ
ಇಂತಹ ಖಾಸಗಿ ಆಸ್ಪತ್ರೆಗಳಲ್ಲಿ ಇಲಾಖೆ ಆರೋಗ್ಯ ಮಿತ್ರರನ್ನು
ನೇಮಿಸಿದೆ. ಸಾರ್ವಜನಿಕರು ಖಾಸಗಿ ಆಸ್ಪತ್ರೆಗಳಲ್ಲಿ ಆರೋಗ್ಯ
ಮಿತ್ರರನ್ನು ಸಂಪರ್ಕಿಸಿ ನೆರವು ಪಡೆಯಬಹುದು ಎಂದರು.
ಬ್ಯಾಂಕ್ ಶಾಖೆ ಮುಚ್ಚಲು ಹುನ್ನಾರ : ಜಿಲ್ಲೆಯ ಗ್ರಾಮೀಣ
ಪ್ರದೇಶಗಳಲ್ಲಿ ಕೆಲವು ಬ್ಯಾಂಕ್ ಶಾಖೆಗಳನ್ನು ಮುಚ್ಚುವ
ಪ್ರಯತ್ನ ನಡೆದಿದೆ. ಇದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆ
ಉಂಟಾಗಲಿದೆ ಎಂದು ಜಿ.ಪಂ. ಸದಸ್ಯ ವಿಶ್ವನಾಥ್, ಬಸವಂತಪ್ಪ ಹೇಳಿದರು.
ಇದಕ್ಕೆ ಉತ್ತರಿಸಿದ ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್, ಕೆಲವು ಸಣ್ಣ ಪುಟ್ಟ
ಬ್ಯಾಂಕ್‍ಗಳನ್ನು ರಾಷ್ಟ್ರೀಕೃತ ಬ್ಯಾಂಕ್‍ಗಳೊಂದಿಗೆ
ವಿಲೀನಗೊಳಿಸುವ ಪ್ರಕ್ರಿಯೆ ಜಾರಿಯಲ್ಲಿದ್ದು, ಈ ಸಂದರ್ಭದಲ್ಲಿ
ರಾಷ್ಟ್ರೀಕೃತ ಬ್ಯಾಂಕ್‍ಗಳು, ಕೆಲವು ಶಾಖೆಗಳನ್ನು ಆರ್‍ಬಿಐ
ಅನುಮತಿ ಪಡೆದು ರದ್ದುಪಡಿಸಲು ಪ್ರಕ್ರಿಯೆ ಪ್ರಾರಂಭಿಸಿವೆ.
ಹೀಗಾಗಿ ಇದಕ್ಕೆ ಜನಪ್ರತಿನಿಧಿಗಳ ಆಕ್ಷೇಪಣೆಯಿದ್ದು, ಬ್ಯಾಂಕ್
ಶಾಖೆಗಳನ್ನು ಮುಚ್ಚದಂತೆ ಶಿಫಾರಸ್ಸು ಮಾಡಲಾಗುವುದು
ಎಂದರು.
ಸಭೆಯಲ್ಲಿ ಜಿ.ಪಂ. ಸಿಇಒ ಪದ್ಮಾ ಬಸವಂತಪ್ಪ, ಜಿಲ್ಲಾ ಪಂಚಾಯತ್
ಉಪಾಧ್ಯಕ್ಷೆ ಸಾಕಮ್ಮ ಗಂಗಾಧರನಾಯಕ್, ಕೃಷಿ ಮತ್ತು
ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಫಕೀರಪ್ಪ, ಶಿಕ್ಷಣ ಮತ್ತು
ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಶೇಖರಪ್ಪ, ಸಾಮಾಜಿಕ ನ್ಯಾಯ
ಸ್ಥಾಯಿ ಸಮಿತಿ ಅಧ್ಯಕ್ಷ ಲೋಕೇಶ್, ಜಿ.ಪಂ. ಉಪಕಾರ್ಯದರ್ಶಿ ಆನಂದ್
ಸೇರಿದಂತೆ ಜಿ.ಪಂ. ಸದಸ್ಯರುಗಳು, ವಿವಿಧ ಇಲಾಖೆ ಜಿಲ್ಲಾ ಮಟ್ಟದ
ಅಧಿಕಾರಿಗಳು ಭಾಗವಹಿಸಿದ್ದರು.