ದಾವಣಗೆರೆ ಡಿ.10
ಪ್ರಸ್ತುತ ದಿನಮಾನಗಳಲ್ಲಿ ಮಾನವ ಹಕ್ಕುಗಳ
ಉಲ್ಲಂಘನೆ ಸಾಮಾನ್ಯವಾಗಿದ್ದು ಇದನ್ನು ಪ್ರಶ್ನಿಸಲು ಮತ್ತು
ನ್ಯಾಯ ಪಡೆಯಲು ಮಾನವ ಹಕ್ಕುಗಳ ಬಗ್ಗೆ
ತಿಳಿಯುವುದು ಅವಶ್ಯಕ. ಹಾಗೂ ಇತರರ ಹಕ್ಕುಗಳನ್ನು
ಗೌರವಿಸುದು ಕೂಡ ಅಷ್ಟೇ ಮುಖ್ಯ ಎಂದು ಒಂದನೇ
ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ
ಕೆಂಗಬಾಲಯ್ಯ ಹೇಳಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ,
ಮಾನವ ಹಕ್ಕುಗಳ ವೇದಿಕೆ, ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ
ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘ
ದಾವಣಗೆರೆ ಇವರ ಸಂಯುಕ್ತಾಶ್ರಯದಲ್ಲಿ ಗುರುವಾರ ಜಿಲ್ಲಾ
ಕಾನೂನು ಸೇವಾ ಪ್ರಾಧಿಕಾರ, ಹಳೇ ನ್ಯಾಯಾಲಯ ಸಂಕೀರ್ಣ,
ಎಡಿಆರ್ ಕಟ್ಟಡ ಇಲ್ಲಿ ಏರ್ಪಡಿಸಲಾಗಿದ್ದ ವಿಶ್ವ ಮಾನವ ಹಕ್ಕುಗಳ
ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು
ಮಾತನಾಡಿದರು.
ಸಂವಿಧಾನ ನಮ್ಮೆಲ್ಲರಿಗೂ ಸಮಾನವಾದ ಹಕ್ಕುಗಳನ್ನು
ನೀಡಿದೆ. ಈ ಹಕ್ಕುಗಳನ್ನು ಯಾರೂ ಕಸಿಯಬಾರದು ಹಾಗೂ
ಹಕ್ಕುಗಳಿಗೆ ಚ್ಯುತಿ ತರಬಾರದು. ಈ ಮಾನವ ಹಕ್ಕುಗಳಿಗೆ
ಚ್ಯುತಿ ಬಂದಲ್ಲಿ ಅದರ ವಿರದ್ದ ಕಾನೂನಿನ ಮೂಲಕ
ನ್ಯಾಯಾಲಯದಲ್ಲಿ ನ್ಯಾಯ ಪಡೆಯಬಹುದಾಗಿದೆ. ಪ್ರತಿ
ನಾಗರೀಕರಿಗೂ ಇರುವ ಆದ್ಯ ಹಕ್ಕು ಮಾನವ ಹಕ್ಕುಗಳ
ವಿರುದ್ದ ನ್ಯಾಯ ಪಡೆಯುವುದಾಗಿದೆ ಎಂದರು.
ಮಾನವ ಹಕ್ಕುಗಳ ಉಲ್ಲಂಘನೆ ಹೆಚ್ಚಾಗಿ ಪೊಲೀಸ್
ಇಲಾಖೆಯಲ್ಲಿ ಆಗುತ್ತಿದೆ. ಒಬ್ಬ ಆಪಾದಿತನ ವಿರುದ್ದ ಎಫ್‍ಐಆರ್ ಆದ
ಮೇಲೆ ಪೊಲೀಸನವರು 24 ಗಂಟೆಗಳಲ್ಲಿ ನ್ಯಾಯಾಧೀಶರ
ಮುಂದೆ ಹಾಜರುಪಡಿಸಬೇಕು. ಬಂಧಿಸುವ ವೇಳೆ ಸಹ ಕೆಲ
ನಿಯಗಳನ್ನು ಪೊಲೀಸರು ಅನುಸರಿಸಬೇಕು. ಬಂಧನದ
ಬಗ್ಗೆ ಸಂಬಂಧಿಕರಿಗೆ ತಿಳಿಸಬೇಕು. ಆಪಾದಿತ ವಕೀಲರನ್ನು
ನೇಮಕ ಮಾಡಲು ಕೋರಿದರೆ ಅದರ ವ್ಯವಸ್ಥೆ
ಮಾಡಬೇಕು. ಕಾನೂನುಬಾಹಿರವಾಗಿ ಆತನನ್ನು ಬಂಧನದಲ್ಲಿ
ಇಡಬಾರದು. ಹೀಗೆ ಪೊಲೀಸರು ನಿಯಮಗಳನ್ನು
ಪಾಲಿಸದಿದ್ದರೆ ಮಾನವ ಹಕ್ಕುಗಳ
ಉಲ್ಲಂಘನೆಯಾಗುತ್ತದೆ.
ಸಾರ್ವಜನಿಕರಿಗೆ ತಮ್ಮ ಹಕ್ಕುಗಳ ಬಗ್ಗೆ ಜ್ಞಾನ ಇರಬೇಕು.
ಹಕ್ಕುಗಳಿಗೆ ಚ್ಯುತಿ ಬಂದಾಗ ಪೊಲೀಸ್ ಪ್ರಾಧಿಕಾರ ಅಥವಾ
ಕಾನೂನು ಸೇವಾ ಪ್ರಾಧಿಕಾರಕ್ಕೆ ದೂರು ನೀಡಬಹುದು.
ಹಾಗೂ ನ್ಯಾಯಾಲಯದಲ್ಲಿ ಈ ಬಗ್ಗೆ ನ್ಯಾಯ ಪಡೆಯಬಹುದು
ಎಂದರು.
ನಮ್ಮ ಸುತ್ತಮುತ್ತಲಿನ ಪರಿಸರ, ಗಾಳಿ, ಬೆಳಕು, ಅರಣ್ಯ,
ನೀರು ಹೀಗೆ ಸ್ವಾಭಾವಿಕ ಸಂಪತ್ತನ್ನು ಎಲ್ಲರೂ ಅನುಭವಿಸುವ
ಹಕ್ಕಿದೆ. ಈ ಸ್ವಾಭಾವಿಕ ಸಂಪತ್ತನ್ನು ದುರಾಸೆಯಿಂದ
ಯಾರಾದರೂ ದುರ್ಬಳಕೆ ಮಾಡಿಕೊಂಡರೆ ಇದು ಕೂಡ
ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೆ. ಸ್ವಾಭಾವಿಕ
ಸಂಪತ್ತನ್ನು ಉಳಿಸುವ ಹೊಣೆ ನಮ್ಮೆಲ್ಲರದ್ದಾಗಿದೆ ಹಾಗೂ
ಮಾನವ ಹಕ್ಕುಗಳ ಬಗ್ಗೆ ತಿಳಿಯುವ ಹಾಗೂ ಈ ಹಕ್ಕನ್ನು
ಗೌರವಿಸುವ ಜವಾಬ್ದಾರಿ ನಮ್ಮೆಲರ ಮೇಲಿದೆ ಎಂದರು.
ವಕೀಲರು ಹಾಗೂ ರಾಜ್ಯ ಕಾನೂನು ಸೇವಾ ಪ್ರಾಧಿಕರದ
ಸದಸ್ಯರಾದ ಎಲ್.ಹೆಚ್.ಅರುಣಕುಮಾರ್ ಮಾನವ ಹಕ್ಕುಗಳ
ಬಗ್ಗೆ ಉಪನ್ಯಾಸ ನೀಡಿ ಮಾನವ ಹಕ್ಕುಗಳ ಪರಿಕಲ್ಪನೆ ಅನಾದಿ
ಕಾಲದಿಂದಲೂ ಇದ್ದು ಇದರ ವ್ಯಾಪ್ತಿ ದೊಡ್ಡದಿದೆ. ಜಾತಿ, ಧರ್ಮ
ವರ್ಗ, ಲಿಂಗದ ಆಧಾರದ ಮೇಲೆ ದೌರ್ಜನ್ಯ ನಡೆದರೆ ಅಲ್ಲಿ
ಮಾನವ ಹಕ್ಕುಗಳ ಸಂಸ್ಥೆ ನೇರವಾಗಿ ಭಾಗವಹಿಸುತ್ತಿದೆ.
ರಾಷ್ಟ್ರ ರಾಷ್ಟ್ರಗಳ ನಡುವ ಶಾಂತಿ, ಸಹಕಾರ ಹಾಗೂ
ಮಾನವ ಹಕ್ಕುಗಳ ರಕ್ಷಣೆಗಾಗಿ ವಿಶ್ವದ ಬಹುತೇಕ
ರಾಷ್ಟ್ರಗಳು ಒಡಂಬಡಿಕೆಗೆ 1950 ರ ಡಿಸೆಂಬರ್ 10 ರಂದು ಸಹಿ
ಹಾಕುವ ಮೂಲಕ ವಿಶ್ವ ಮಾನವ ಹಕ್ಕುಗಳ
ದಿನಾಚರಣೆಯನ್ನು ಪ್ರತಿ ವರ್ಷ ಡಿಸೆಂಬರ್ 10 ರಂದು
ಆಚರಿಸುತ್ತಿದ್ದೇವೆ.
ಪ್ರಾಚೀನ ಕಾಲದಿಂದಲೂ ಸಂತರು, ತತ್ವಜ್ಞಾನಿಗಳು
ಮನುಷ್ಯನ ಘನತೆ ಸ್ಥಾಪಿಸಲು, ದ್ವೇಷ ತೊರೆದು
ಸೌಹಾರ್ದತೆಯಿಂದ ಬದುಕಲು ಉದಾತ್ತ ಕಲ್ಪನೆಯಡಿ ಮಾನವ
ಹಕ್ಕುಗಳಿಗೆ ಒತ್ತು ನೀಡಿದ್ದರು.
ನಾಗರೀಕ ಸ್ವಾತಂತ್ರ್ಯವೇ ನಾಗರೀಕ ಹಕ್ಕು. ನಮ್ಮಂತೇ
ಇತರರು ಸಹ ಎಂದು ತಿಳಿದಾಗ ಮಾನವ ಹಕ್ಕುಗಳ
ಸಂರಕ್ಷಣೆ ಆಗುತ್ತದೆ. 6 ದಶಕಗಳಿಂದ ಮಾನವ
ಹಕ್ಕುಗಳ ಸಂಸ್ಥೆ ವಿಶ್ವದಾದ್ಯಂತ ಶಾಂತಿ ಸ್ಥಾಪಿಸುವ
ಪ್ರಯತ್ನದ ಮೂಲಕ ಮಹತ್ವದ ಕಾರ್ಯದಲ್ಲಿ ತೊಡಗಿದೆ.
‘ಇಡೀ ಜಗತ್ತು ಒಂದು. ಎಲ್ಲರಿಗೂ ಮಾನವ ಹಕ್ಕು’ ಎಂಬಂತೆ ಕೆಲಸ
ಮಾಡುತ್ತಿದೆ. ಜಗತ್ತಿಗೇ ಒಂದು ಸಂವಿಧಾನ ಅಂತ ಇದ್ದರೆ ಅದು
ಮಾನವ ಹಕ್ಕುಗಳ ಸಂಸ್ಥೆ.
- ಎಲ್.ಹೆಚ್.ಅರುಣ್‍ಕುಮಾರ್, ವಕೀಲರು
ಪೊಲೀಸ್ ಇಲಾಖೆಯಲ್ಲಿ ಶೇ.5 ಮಾನವ ಹಕ್ಕುಗಳ
ಉಲ್ಲಂಘನೆಯಾದರೆ ಸರ್ಕಾರದ ಇತರೆ ಇಲಾಖೆಗಳಲ್ಲಿ ಶೇ.95
ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು
ತಜ್ಞರು ಹೇಳುತ್ತಾರೆ. ಜನಸಾಮಾನ್ಯರಿಗೆ ತಲುಪಬೇಕಾದ
ಸೌಲಭ್ಯ, ಯೋಜನೆಗಳು ತಲುಪದಿದ್ದರೂ ಅದು ಮಾನವ
ಹಕ್ಕುಗಳ ಉಲ್ಲಂಘನೆಯಾಗುತ್ತದೆ. ಆಡಳಿತ
ನಡೆಸುವವರಿಂದಲೂ ಮಾನವ ಹಕ್ಕುಗಳ ಉಲ್ಲಂಘನೆ
ಆಗುತ್ತಿದ್ದು, ಈ ಬಗ್ಗೆ ಶಿಕ್ಷಣ, ಅರಿವು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ
ಮಾನವ ಹಕ್ಕುಗಳ ರಕ್ಷಣಾ ಆಯೋಗಗಳು ಉತ್ತಮ
ಕೆಲಸ ಮಾಡುತ್ತಿದೆ. ನಮ್ಮ ಹಕ್ಕುಗಳ ರಕ್ಷಣೆಗೆ
ಆಯೋಗಗಳು, ಪ್ರಾಧಿಕಾರಿಗಳು, ನ್ಯಾಯಾಲಯಗಳು
ಇವೆ. ಈ ಬಗ್ಗೆ ಜನಸಾಮಾನ್ಯರಲ್ಲಿ ಅಷ್ಟು ತಿಳುವಳಿಕೆ ಇಲ್ಲ.
ಆದ್ದರಿಂದ ಮಾನವ ಹಕ್ಕು ಉಲ್ಲಂಘನೆ ಪ್ರಕರಣಗಳು
ಕೂಡ ಹೆಚ್ಚಿಲ್ಲ ಎಂದ ಅವರು ನಾವೆಲ್ಲರೂ ಎಚ್ಚೆತ್ತು ಅರಿವು
ಮೂಡಿಸಬೇಕಿದೆ ಎಂದರು.
ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು
ಒಡೆಯುವ ಕ್ವಾರಿ ಕಾರ್ಮಿಕ ಸಂಘದ ರಾಜ್ಯ ಕಾರ್ಯಾಧ್ಯಕ್ಷ
ಹೆಚ್.ಜಿ.ಉಮೇಶ್ ಮಾತನಾಡಿ, ಹಲವಾರು ಹಂತಗಳಲ್ಲಿ ಮಾನವ
ಹಕ್ಕುಗಳ ಉಲ್ಲಂಘನೆ ಆಗುತ್ತಲೇ ಇರುತ್ತದೆ.
ಮಹಿಳೆಯರು, ಮಕ್ಕಳು, ರೈತರು, ಕಾರ್ಮಿಕರ ಹಕ್ಕು
ಚ್ಯುತಿಯಾಗುತ್ತಿದೆ. ಜಾತಿ ನಿಂದನೆ ಕೂಡ ಮಾನವ
ಹಕ್ಕುಗಳ ಉಲ್ಲಂಘನೆಯಾಗಿದೆ. ಆದರೆ ಉಲ್ಲಂಘನೆ ಬಗ್ಗೆ
ಪ್ರಶ್ನಿಸುವಂತಹ ಕ್ರಿಯೆ ನಶಿಸುತ್ತಿರುವುದು ವಿಷಾಧನೀಯ
ಎಂದರು.
ಇಂದು ರಾಜಕಾರಣದಲ್ಲಿ ಕಾಣುವಷ್ಟು ಮಾನವ ಹಕ್ಕುಗಳ
ಉಲ್ಲಂಘನೆ ಮತ್ತೆಲ್ಲೂ ಕಾಣಲು ಸಾಧ್ಯವಿಲ್ಲ. ರೈತರು ಇಂದು
ಬೀದಿಗಿಳಿದು ತಮ್ಮ ಹಕ್ಕುಗಳಿಗೆ ಹೋರಾಡುತ್ತಿದ್ದರೆ
ಆಳುವ ಸರ್ಕಾರಕ್ಕೆ ಈ ಬಗ್ಗೆ ಕೇಳುವ ಸಂಯಮವಿಲ್ಲದಾಗಿದೆ.
ಬಿಎಸ್‍ಎನ್‍ಎಲ್, ಎಪಿಎಂಸಿ ಖಾಸಗಿಕರಣದ ಬಗ್ಗೆ ಒಂದು ಚರ್ಚೆಯೇ ಇಲ್ಲದೆ
ಸರ್ಕಾರ ನಿರ್ಧರಿಸುತ್ತಿದೆ. ಕಟ್ಟಡ ಕಾರ್ಮಿಕರ
ಶ್ರೇಯೋಭಿವೃದ್ದಿಗೆ ಮೀಸಲಿರಿಸಿದ್ದ ಹಣವನ್ನು ಸಹ
ವಾಮಮಾರ್ಗ ಬಳಸಿ
ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂದ ಅವರು
ದುರಾಡಳಿ ಕೂಡ ಮಾನವ ಹಕ್ಕುಗಳ
ಉಲ್ಲಂಘನೆಯಾಗಿದ್ದು, ಹಕ್ಕುಗಳ ಚ್ಯುತಿ ವಿರುದ್ದ
ಪ್ರಶ್ನಿಸುವ, ಬೀದಿಗಿಳಿದು ಹೋರಾಟ ಮಾಡಬೇಕಿದೆ. ಅನ್ನದಾತರಿಗೆ
ನಾವೆಲ್ಲಾ ಸ್ಥೈರ್ಯ ತುಂಬಬೇಕಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ
ಎನ್.ಟಿ.ಮಂಜುನಾಥ್ ಮಾತನಾಡಿ, ಹಕ್ಕು ಮತ್ತು ಕರ್ತವ್ಯಗಳು
ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಸಂವಿಧಾನ
ಹಕ್ಕುಗಳ ಜೊತೆಗೆ ಕರ್ತವ್ಯದ ಬಗ್ಗೆಯೂ ಹೇಳಿದೆ.
ನಾವೆಲ್ಲರೂ ನಮ್ಮ ಕರ್ತವ್ಯಗಳನ್ನು ನಿರ್ವಹಿಸಿ
ಬೇರೆಯವರ ಹಕ್ಕುಗಳನ್ನು ಗೌರವಿಸಿದಲ್ಲಿ ಮಾನವ
ಹಕ್ಕುಗಳ ಉಲ್ಲಂಘನೆಯ ಪ್ರಶ್ನೆಯೇ
ಬರುವುದಿಲ್ಲವೆಂದರು.
ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು
ಒಡೆಯುವ ಕ್ವಾರಿ ಕಾರ್ಮಿಕ ಸಂಘದ ಜಿಲ್ಲಾ ಪ್ರಧಾನ
ಕಾರ್ಯದರ್ಶಿ ಪಿ.ಕೆ.ಲಿಂಗರಾಜ್ ಮಾತನಾಡಿ, ಅಂಬೇಡ್ಕರ್ ಮತ್ತು
ಬಸವಣ್ಣನಂತಹವರು ನಮಗೆ ಸಮಾನ ಹಕ್ಕುಗಳನ್ನು
ನೀಡಿದ್ದು, ಅವರನ್ನು ಜಾತಿ ಹೆಸರಲ್ಲಿ ದುರುಪಯೋಗ
ಮಾಡಬಾರದು. ಅವರು ಜಾತ್ಯಾತೀತರು. ಮಾನವ
ಹಕ್ಕುಗಳು ಅನೇಕ ರೀತಿಯಲ್ಲಿ ಮಾನವರಿಂದಲೇ
ಉಲ್ಲಂಘನೆಯಾಗುತ್ತಿದೆ. ಅದರ ವಿರುದ್ದ ನಾವೆಲ್ಲ
ಹೋರಾಡಬೇಕು. ಹಾಗು ನೈಸರ್ಗಿಕ ಸಂಪತ್ತನ್ನು
ರಕ್ಷಿಸಬೇಕು. ಪ್ರತಿಯೊಬ್ಬರೂ ಒಂದು ಗಿಡವನ್ನಾದರೂ
ನೆಡಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಒಂದನೇ ಹೆಚ್ಚುವರಿ ಹಿರಿಯ ಸಿವಿಲ್
ನ್ಯಾಯಾಧೀಶರು ಮತ್ತು ಜೆಎಂಎಫ್‍ಸಿ ಪ್ರೀತಿ ಎಸ್.ಜೋಷಿ,
ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ
ಕ್ವಾರಿ ಕಾರ್ಮಿಕ ಸಂಘದ ಜಿಲ್ಲಾಧ್ಯಕ್ಷ ವಿ.ಲಕ್ಷ್ಮಣ್, ಕಟ್ಟಡ
ಕಾರ್ಮಿಕರು ಪಾಲ್ಗೊಂಡಿದ್ದರು.