ಸವಾಲಿನ ಕೆಲಸ ಶಿಕ್ಷಕರ ಮೇಲಿದೆ : ಡಿಸಿ
ದಾವಣಗೆರೆ ಫೆ.06
ಜಗತ್ತಿನಾದ್ಯಂತ ವಿಶಿಷ್ಟ ಅನುಭವ ನೀಡಿದ ಕೊರೊನಾ
ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಈ ಬಾರಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಯನ್ನು
ಸಮರ್ಥವಾಗಿ ಎದುರಿಸಿ ಉತ್ತಮ ಫಲಿತಾಂಶ ಪಡೆಯುವಂತೆ
ಶಿಕ್ಷಕರು ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವ ಸವಾಲಿನ
ಸಮಯ ಇದಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ
ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ
ಇವರ ಸಂಯುಕ್ತಾಶ್ರಯದಲ್ಲಿ ಶನಿವಾರದಂದು ಜಿಲ್ಲಾಡಳಿತ
ಭವನದ ತುಂಗಭದ್ರ ಸಭಾಂಗಣದಲ್ಲಿ ಶಿಕ್ಷಣ ಆಯುಕ್ತರ
ನಿರ್ದೇಶನದ ಮೇರೆಗೆ ಎಸ್‍ಎಸ್‍ಎಲ್‍ಸಿ ಫಲಿತಾಂಶ ಸುಧಾರಣೆ
ಪ್ರಯುಕ್ತ ಪ್ರೌಢಶಾಲಾ ಮುಖ್ಯ ಶಿಕ್ಷಕರಿಗೆ
ಮಾರ್ಗದರ್ಶನ ನೀಡಲು ಏರ್ಪಡಿಸಲಾಗಿದ್ದ ಸಭೆಯನ್ನು
ಉದ್ಘಾಟಿಸಿ ಅವರು ಮಾತನಾಡಿದರು.
ಕೊರೊನಾ ಹಿನ್ನೆಲೆ ಲಾಕ್‍ಡೌನ್‍ನಿಂದಾಗಿ ಎಲ್ಲ ಶಾಲೆಗಳು ಬಂದ್
ಆಗಿದ್ದು, ಜನವರಿ 1 ರಿಂದ ಹತ್ತನೇ ತರಗತಿಗಳನ್ನು
ಆರಂಭಿಸಲಾಗಿದೆ. ಪ್ರಾರಂಭದಲ್ಲಿ ಹಾಜರಾತಿ ಕಮ್ಮಿ ಇದ್ದು ಈಗ
ಶೇ.75 ಇದೆ. ಇನ್ನುಳಿದ ಮಕ್ಕಳನ್ನೂ ಮನವೊಲಿಸಿ ಶಾಲೆಗೆ
ಕರೆತರುವ ಯತ್ನ ನಡೆಯುತ್ತಿದೆ. ನಾಲ್ಕು ತಿಂಗಳ
ಅವಧಿಯಲ್ಲಿ ಒಂದು ವರ್ಷದ ಪಾಠಗಳನ್ನು ಪೂರ್ಣಗೊಳಿಸಿ,
ಪರೀಕ್ಷೆಗೆ ಸಜ್ಜುಗೊಳಿಸುವ ಸವಾಲು ಶಿಕ್ಷಕರ ಮುಂದಿದ್ದು,
ಸರ್ಕಾರ ಈ ನಿಟ್ಟಿನಲ್ಲಿ ಶಿಕ್ಷಕರಿಗೆ ಸಹಕರಿಸಲು ಮತ್ತು
ಎಸ್‍ಎಸ್‍ಎಲ್‍ಸಿಯಲ್ಲಿ ಉತ್ತಮ ಫಲಿತಾಂಶ ತಂದುಕೊಡಲು
‘ಸಂಕಲ್ಪ-2021’ ಮಾರ್ಗಸೂಚಿಗಳನ್ನು ಪ್ರೌಢಶಿಕ್ಷಕರಿಗೆ
ಬಿಡುಗಡೆಗೊಳಿಸಿದೆ.
ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಕಷ್ಟವಾಗುವ ಇಂಗ್ಲಿಷ್
ಮತ್ತು ಗಣಿತ, ಉರ್ದು ಶಾಲೆ ಮಕ್ಕಳಿಗೆ ಕನ್ನಡ ಹೀಗೆ
ಕಷ್ಟವಾಗುವ ವಿಷಯಗಳನ್ನು ಸುಲಭವಾಗಿ
ಹೇಳಿಕೊಡುವ ತಂತ್ರಗಳು, ಕಡಿಮೆ ಅವಧಿಯಲ್ಲಿಯೇ
ಹೆಚ್ಚು ಪರಿಣಾಮಕಾರಿಯಾಗಿ ಹೇಗೆ ವಿಷಯಗಳನ್ನು
ಮನದಟ್ಟು ಮಾಡಿಸಬೇಕು ಎಂಬುದು ಸೇರಿದಂತೆ ಕಲಿಕೆಯಲ್ಲಿ
ಹಿಂದುಳಿದ ವಿದ್ಯಾರ್ಥಿಗಳಿಗೆ ವಿಶೇಷ ಗಮನ ಹರಿಸಿ ಪರೀಕ್ಷೆಗೆ
ಸಜ್ಜುಗೊಳಿಸುವ ಬಗ್ಗೆ ಅಂಶಗಳನ್ನು ಸಿದ್ದಪಡಿಸಿದ್ದು, ಈ
ಪ್ರಕಾರ ಶಿಕ್ಷಕರು ಕಾರ್ಯೋನ್ಮುಖರಾಗಬೇಕೆಂದರು.
ಕಳೆದ ಬಾರಿ ಜಿಲ್ಲೆಯಲ್ಲಿ ಎರಡು ಶಾಲೆಗಳಲ್ಲಿ ಶೇ.0
ಫಲಿತಾಂಶ ಬಂದಿತ್ತು. ಇದು ಸಲ್ಲದು. ಶಿಕ್ಷಕರು ಶ್ರದ್ದೆ
ಮತ್ತು ಬದ್ದತೆಯಿಂದ ಮಕ್ಕಳಿಗೆ ಕಲಿಸಿ ಉತ್ತಮ ಫಲಿತಾಂಶ
ಬರುವಲ್ಲಿ ಶ್ರಮಿಸಬೇಕು. ಈ ಬಾರಿ ಹೀಗೆ ಶೇ.0 ಬರುವ
ಶಾಲೆಗಳನ್ನು ಮುಚ್ಚಲು ಕ್ರಮ ವಹಿಸಿ ಅಂತಹ ಶಿಕ್ಷಕರ
ವಿರುದ್ದ ಶಿಸ್ತಿನ ಕ್ರಮ ವಹಿಸಲಾಗುವುದು ಎಂದು ಎಚ್ಚರಿಕೆ
ನೀಡಿದರು.
ಶಿಕ್ಷಕರ ವೃತ್ತಿ ಅತ್ಯಂತ ಪವಿತ್ರವಾಗಿದ್ದು, ಎಲ್ಲರಿಗೂ ಇದು
ಲಭಿಸುವುದಿಲ್ಲ. ಇದೊಂದು ಸೌಭಾಗ್ಯದ ಕೆಲಸವಾಗಿದೆ. ತಾವೂ
ಶಿಕ್ಷಕ ವೃತ್ತಿಯನ್ನು ನಿರ್ವಹಿಸಿ ಬಂದಿದ್ದು, ಆ ಅನುಭವ
ಅನನ್ಯವಾಗಿದೆ. ಈಗಲೂ ನನ್ನನ್ನು ರಾಜ್ಯದೆಲ್ಲೆಡೆ ಶಿಕ್ಷಕನಾಗಿ
ಗುರುತಿಸಿ, ಗೌರವಿಸುವ ಶಿಷ್ಯರಿದ್ದಾರೆ ಎಂಬುದು ಹೆಮ್ಮೆಯ
ವಿಚಾರ ಎಂದ ಅವರು ಒಬ್ಬ ಶಿಕ್ಷಕ ತನ್ನ ಕರ್ತವ್ಯವನ್ನು
ನಿಷ್ಟೆಯಿಂದ ಮಾಡಿದ್ದೇ ಆದಲ್ಲಿ ಅವನಿಗೆ ದೊರಕುವ ಗೌರವ
ಮತ್ತೊಬ್ಬರಿಗಿಲ್ಲ ಎಂದು ಅಭಿಪ್ರಾಯಪಟ್ಟರು.
ಕಳೆದ ಸಾಲಿನ ಮಾರ್ಚ್‍ನಿಂದ ಇಡೀ ಜಗತ್ತೇ ಕೊರೊನಾದಿಂದ
ವಿಶಿಷ್ಟವಾದ ಅನುಭವಕ್ಕೊಳಗಾಗಿ ಆರ್ಥಿಕ, ಶೈಕ್ಷಣಿಕ,
ಸಾಮಾಜಿಕ ವ್ಯವಸ್ಥೆ ಸೇರಿದಂತೆ ವೈಯಕ್ತಿಕ ಜೀವನವೂ ಒಂದು
ಪ್ರಯೋಗಕ್ಕೆ ಒಳಪಟ್ಟಂತಾಗಿತ್ತು. ಇದೀಗ ಕೊರೊನಾ
ವಿರುದ್ದ ನಮ್ಮಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿದ್ದು
ಎಲ್ಲರಲ್ಲಿ ಧೈರ್ಯ ಬಂದಿದೆ.
ಲಾಕ್‍ಡೌನ್ ವೇಳೆಯೂ ಶೈಕ್ಷಣಿಕವಾಗಿ ಮಕ್ಕಳನ್ನು
ತೊಡಗಿಸಲು ಅನೇಕ ಪ್ರಯತ್ನಗಳನ್ನು ಸರ್ಕಾರ
ಮಾಡಿತ್ತು. ಸರ್ಕಾರಿ ಶಾಲೆಗಳಲ್ಲಿ ಕೂಡ ಆನ್‍ಲೈನ್ ಶಿಕ್ಷಣಕ್ಕೆ
ಪ್ರಯತ್ನಿಸಲಾಗಿತ್ತು. ವಿದ್ಯಾಗಮ, ಓದುವ ಬೆಳಕು ಹೀಗೆ
ಅನೇಕ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗಿತ್ತು.
ಆದರೆ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಹತ್ತಿರವೇ ಇದ್ದು ಇದು ನಿಜವಾದ
ಸವಾಲಿನ ಸಮಯ ಆಗಿದೆ.
ಇನ್ನು ಎರಡು ತಿಂಗಳ ಒಳಗೆ ವಿದ್ಯಾರ್ಥಿಗಳನ್ನು ಎಸ್‍ಎಸ್‍ಎಲ್‍ಸಿ
ಪರೀಕ್ಷೆಗೆ ಸಜ್ಜುಗೊಳಿಸಬೇಕಿದ್ದು, ಮಕ್ಕಳು ಖುಷಿಯಿಂದ
ಕಲಿಯುವ ವಾತಾವರಣ ನಿರ್ಮಿಸಬೇಕು. ಯಾವ ವಿದ್ಯಾರ್ಥಿ ಯಾವ
ವಿಷಯದಲ್ಲಿ ಹಿಂದಿದ್ದಾನೆ ಎಂದು ತಿಳಿದು ಪಾಠ
ಹೇಳಿಕೊಡಬೇಕು ಎಂದ ಅವರು ಶಿಕ್ಷಕರು ರಾಷ್ಟ್ರ ಕಟ್ಟುವ
ಕೆಲಸ ಮಾಡುತ್ತಿದ್ದು, ಕೊರೊನಾ ಕಾಲದಲ್ಲಿಯೂ ಉತ್ತಮ
ಸೇವೆ ಸಲ್ಲಿಸಿರುವ ನಿಮ್ಮ ಬಗ್ಗೆ ನಮಗೆ ಹೆಮ್ಮೆ ಇದೆ. ನಾನು
ಮತ್ತು ಸಿಇಓ ಸದಾ ನಿಮ್ಮೊಟ್ಟಿಗಿದ್ದೇವೆ. ಅತ್ಯಂತ ಹುಮ್ಮಸ್ಸಿನಿಂದ
ಕೆಲಸ ಮಾಡಿ ಸರ್ಕಾರಕ್ಕೆ ಒಳ್ಳೆಯ ಹೆಸರು ತರಬೇಕು
ಹಾಗೂ ಎಸ್‍ಎಸ್‍ಎಲ್‍ಸಿ ಯಲ್ಲಿ ಶೇ.100 ಫಲಿತಾಂಶ ತರಲು ಹಗಲು
ಇರುಳು ಶ್ರಮಿಸುತ್ತೇನೆಂದು ನಿರ್ಧಾರ
ಕೈಗೊಳ್ಳಬೇಕೆಂದರು.
- ಎಸ್‍ಎಸ್‍ಎಲ್‍ಸಿ ಫಲಿತಾಂಶ ಸುಧಾರಣೆ ಹಿನ್ನೆಲೆಯಲ್ಲಿ ಇನ್ನು
ಮುಂದೆ ಪ್ರೌಢಶಾಲಾ ಮುಖ್ಯ ಶಿಕ್ಷಕರು ಜಿಲ್ಲಾ
ಕೇಂದ್ರಗಳಿಗೆ ಸಭೆ, ಇನ್ನಿತರೆ ಕಾರ್ಯಕ್ರಮ ಎಂದು
ಅಲೆದಾಡುವಂತಿಲ್ಲ. ಡಿಡಿಪಿಐ, ಬಿಇಓ, ಇಓ ಸೇರಿದಂತೆ ಜಿಲ್ಲಾ ಮಟ್ಟದ
ಅಧಿಕಾರಿಗಳೇ ತಾಲ್ಲೂಕುಗಳಿಗೆ ಮತ್ತು ಶಾಲೆಗಳಿಗೆ ಭೇಟಿ
ನೀಡಿ ಮಾರ್ಗದರ್ಶನ ನೀಡಬೇಕು.
- ಕಳೆದ ಬಾರಿ ಎಸ್‍ಎಸ್‍ಎಲ್‍ಸಿ ಯಲ್ಲಿ ಜಿಲ್ಲೆಯ 41 ಶಾಲೆಗಳಲ್ಲಿ ಶೇ.100
ಫಲಿತಾಂಶ ಬಂದಿತ್ತು. ಈ ಬಾರಿ ಇನ್ನೂ ಹೆಚ್ಚಿನ ಶಾಲೆಗಳಲ್ಲಿ ಶೇ.100
ಫಲಿತಾಂಶ ಬರಬೇಕು. ಹೀಗೆ ಶೇ.100 ಫಲಿತಾಂಶ ಕೊಡುವ
ಶಾಲೆಯ ಮುಖ್ಯೋಪಾಧ್ಯಾಯರನ್ನು ದೊಡ್ಡ
ಕಾರ್ಯಕ್ರಮ ಏರ್ಪಡಿಸಿ ಸನ್ಮಾನಿಸಿ ಗೌರವಿಸಲಾಗುವುದು. - ಶಿಕ್ಷಕ ಎಂದಿಗೂ ಕಲಿಯುವ ವಿದ್ಯಾರ್ಥಿ. ತರಗತಿಗೂ ಮುನ್ನ
ವಿಷಯದ ಬಗ್ಗೆ ಸಿದ್ದತೆ ನಡೆಸಿಕೊಂಡು ಮಕ್ಕಳಿಗೆ
ಹೇಳಿಕೊಡಬೇಕು. ನಾವೀನ್ಯ ತಂತ್ರಗಳನ್ನು ಬಳಸಿ
ಅರ್ಥವಾಗುವಂತೆ ಮಕ್ಕಳಿಗೆ ಪ್ರೀತಿಯಿಂದ ಪಾಠ ಹೇಳಿಕೊಟ್ಟಲ್ಲಿ
ಫಲಿತಾಂಶದಲ್ಲಿ ಹೆಚ್ಚಳ ಕಾಣಬಹುದು.
-ಮಹಾಂತೇಶ ಬೀಳಗಿ, ಜಿಲ್ಲಾಧಿಕಾರಿ
ಅಧ್ಯಕ್ಷತೆ ವಹಿಸಿದ್ದ ಜಿ.ಪಂ.ಸಿಇಓ ಪದ್ಮಾ ಬಸವಂತಪ್ಪ ಮಾತನಾಡಿ,
ಲಾಕ್‍ಡೌನ್‍ನಿಂದ ಶಾಲೆಗಳು ಬಂದ್ ಆದ ಹಿನ್ನೆಲೆಯಲ್ಲಿ ಅನೇಕ
ಮಕ್ಕಳು ಬಾಲ್ಯವಿವಾಹಕ್ಕೆ, ಬಾಲ ಕಾರ್ಮಿಕತೆಗೆ ಒಳಗಾಗಿದ್ದಾರೆ.
ಬಾಲ್ಯ ವಿವಾಹಗಳಿಂದ ಮಕ್ಕಳನ್ನು ತಡೆಯಲು ಸರ್ಕಾರದ
ಕಡೆಯಿಂದ ಹೆಚ್ಚಿನ ಪ್ರಯತ್ನಗಳು ನಡೆದಾಗ್ಯೂ ಬಾಲ್ಯ
ವಿವಾಹಗಳು ನಡೆದಿವೆ. ಯಾವುದೇ ಭದ್ರತೆ ಇಲ್ಲದೆಂತೆ
ಮಕ್ಕಳಿಗೆ ಕೆಲಸದಲ್ಲಿ ತೊಡಗಿಸಿದ್ದೂ ಕಂಡು ಬಂದಿದೆ. ಇನ್ನು
ಮುಂದೆ ಹೀಗಾಗಬಾರದು. ಈ ನಿಟ್ಟಿನಲ್ಲಿ ಮಕ್ಕಳನ್ನು ಶಾಲೆಗೆ
ಕರೆತರುವ ಕೆಲಸವನ್ನು ಶಿಕ್ಷಕರು ಮಾಡುತ್ತಿದ್ದಾರೆ.
ಶಾಲೆಗೆ ಬರಲು ಒಪ್ಪದಿರುವ ಪ್ರಕರಣಗಳಿದ್ದರೆ ನಮ್ಮ
ಗಮನಕ್ಕೆ ತರಬೇಕು ಎಂದರು.
ಶಿಕ್ಷಕರು ವಿದ್ಯಾಗಮ ಕಾರ್ಯಕ್ರಮ ಮೂಲಕ ಶಾಲಾ
ಆವರಣ, ಶಾಲೆ ಕಟ್ಟೆ, ಮರಗಳ ಕೆಳಗೆ ಮಕ್ಕಳಿಗೆ ಪಾಠ
ಹೇಳಿಕೊಡುತ್ತಿದ್ದಾರೆ. ಶಿಕ್ಷಕರ ಪರಿಣಾಮಕಾರಿ
ಪಾಲ್ಗೊಳ್ಳುವಿಕೆ ಇಲ್ಲದೇ ಫಲಿತಾಂಶ ಉತ್ತಮವಾಗಿ ಬರಲು
ಸಾಧ್ಯವಿಲ್ಲ. ಸಮಾಜ ಬದಲಾವಣೆಯಲ್ಲಿ ಮಕ್ಕಳ ಪಾತ್ರ
ಮುಖ್ಯವಾಗಿದ್ದು, ಅಂತಹ ಮಕ್ಕಳಲ್ಲಿ ಶಿಕ್ಷಕರು ಉತ್ತಮ
ಶಿಕ್ಷಣವನ್ನು ಬಿತ್ತಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಸಹ ನಿರ್ದೇಶಕರು
ಮತ್ತು ಚಿತ್ರದುರ್ಗದ ಸಿಟಿಇ ಪ್ರಾಂಶುಪಾಲರಾದ
ಹೆಚ್.ಮಂಜುನಾಥ್ ಮಾತನಾಡಿ, ಜಿಲ್ಲೆಯಲ್ಲಿ ಆಡಳಿತ ಮತ್ತು
ಅಭಿವೃದ್ದಿ ವಿಭಾಗದ ಡಿಡಿಪಿಐ ಇಬ್ಬರೂ ಸಹಯೋಗ ಮತ್ತು
ಸಹಕಾರದೊಂದಿಗೆ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ.
ಜಿಲಾಧಿಕಾರಿ ನೀಡಿರುವ ಆದೇಶದಂತೆÉ ಮುಖ್ಯೋಪಾಧ್ಯಾಯರಿಗೆ
ತಾಲ್ಲೂಕು ಕೇಂದ್ರಗಳು ಮತ್ತು ಶಾಲೆಗಳಲ್ಲಿಯೇ ಸಭೆ
ನಡೆಸಿ ಈ ವರ್ಷದ ಪರಿಸ್ಥಿತಿಯ ಬಗ್ಗೆ ಚರ್ಚಿಸಿ ಮಾರ್ಗದರ್ಶನ
ಮಾಡುತ್ತೇವೆ ಎಂದರು.
ಸಭೆಯಲ್ಲಿ ಪಾಲ್ಗೊಂಡ ಮುಖ್ಯೋಪಾಧ್ಯಯರಿಗೆ ಈ
ಸಭೆಯು ಉಪಯುಕ್ತವಾಗಿದ್ದು, ಕನಿಷ್ಠ ಅವಧಿಯಲ್ಲಿ
ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ಬೋಧಿಸಿ ಸಂಕಷ್ಟದ
ಸ್ಥಿತಿಯಲ್ಲಿ ಉತ್ತಮ ಫಲಿತಾಂಶವನ್ನು ಗಳಿಸಲು
ಪ್ರಯತ್ನಿಸುತ್ತೇವೆ ಎಂದು ತಿಳಿಸಿದರು.
ಕಳೆದ ಸಾಲಿನ ಎಸ್‍ಎಸ್‍ಎಲ್‍ಸಿ ಯಲ್ಲಿ ಶೇ.100 ಫಲಿತಾಂಶ ಪಡೆದ
ಹರಿಹರ ತಾಲ್ಲೂಕಿನ ಬೆಳವನೂರಿನ ಮಾಗನೂರು ಬಸಪ್ಪ
ಪ್ರೌಢಶಾಲೆಯ(ಅನುದಾನಿತ) ಮುಖ್ಯೋಪಾಧ್ಯಾಯಿನಿ
ಸ್ವಪ್ನ.ಯು ಮಾತನಾಡಿ, ಕಳೆದ ವರ್ಷ ನಮ್ಮ ಶಾಲೆಯಲ್ಲಿ
ಶೇ.100 ರಷ್ಟು ಉತ್ತಮ ಫಲಿತಾಂಶ ಬರಲು ಶಿಕ್ಷಕರ
ಸಹಕಾರ ಹಾಗೂ ನಿವೃತ್ತ ಮುಖ್ಯೋಪಾಧ್ಯಯರ
ಮಾರ್ಗದರ್ಶನ ಕಾರಣವಾಗಿದೆ. ಹಾಗೂ ಶಾಲೆಯಲ್ಲಿ
ಸ್ನೇಹಮಯ ವಾತಾವರಣ, ಹಾಜರಾತಿ ನಿರ್ವಹಣೆ, ಅಂದಿನ
ತರಗತಿಯ ಪಠ್ಯಗಳನ್ನು ಪುನರ್ ಮನನ
ಮಾಡುವುದು ಮತ್ತು ಮಕ್ಕಳ ಬಗ್ಗೆ ಪ್ರೀತಿ-ಕಾಳಜಿ ಉತ್ತಮ
ಫಲಿತಾಂಶಕ್ಕೆ ಸಹಕಾರಿಯಾಗಿತ್ತು. ಈ ಬಾರಿ ಆನ್‍ಲೈನ್ ಪಾಠಗಳು,
ವಿದ್ಯಾರ್ಥಿಗಳ ಮನೆ-ಮನೆ ಭೇಟಿ, ಸರಣಿ ಪರೀಕ್ಷೆ ನಡೆಸಲಾಗಿದೆ.
ಈ ಬಾರಿ ಜವಾಬ್ದಾರಿಯು ಮತ್ತಷ್ಟು ಹೆಚ್ಚಾಗಿದ್ದು ಉತ್ತಮ
ಫಲಿತಾಂಶವನ್ನು ಇದೇ ರೀತಿ ತರುತ್ತೇವೆ ಎಂದು ಭರವಸೆ
ನೀಡಿದರು.
ಜಗಳೂರು ತಾಲ್ಲೂಕಿನ ಹಿರೇಮಗಳೂರಿನ ಸರ್ಕಾರಿ
ಪ್ರೌಢಶಾಲೆ ಮುಖ್ಯಶಿಕ್ಷಕರು ಮಾತನಾಡಿ, ನಮ್ಮ ಶಾಲೆಯಲ್ಲಿ
23 ವಿದ್ಯಾರ್ಥಿಗಳಿದ್ದು ಶಿಕ್ಷಕರು ಅವರನ್ನು ಸಮಾನವಾಗಿ
ದತ್ತು ಪಡೆದು ಸಂಪೂರ್ಣ ಫಲಿತಾಂಶದ ಜವಾಬ್ದಾರಿಯನ್ನು
ಹೊತ್ತಿದ್ದರು. ಶಾಲೆಗೆ ಬಾರದ ವಿದ್ಯಾರ್ಥಿಗಳ ಮನೆಗೆ ಹೋಗಿ
ಪೋಷಕರಿಗೆ ಶಿಕ್ಷಣದ ಮಹತ್ವವನ್ನು ತಿಳಿಸಿ ಶಾಲೆಗೆ
ಕರೆತರುವ ಕೆಲಸ ಯಶಸ್ವಿಯಾಗಿದ್ದು, ಅಂದಿನ
ತರಗತಿಯ ಪಠ್ಯ ಕ್ರಮವನ್ನು ಗುಂಪು ಸಂವಹನದಲ್ಲಿ
ಮಕ್ಕಳೊಂದಿಗೆ ಚರ್ಚಿಸುತ್ತಿದ್ದರು. ಶಾಲೆಯಲ್ಲಿ ಶಿಕ್ಷಕರು
ಮಕ್ಕಳ ಶೈಕ್ಷಣಿಕ ಮಟ್ಟವನ್ನು ವೃದ್ಧಿಗೊಳಿಸಲು
ಪ್ರಾಮಾಣಿಕ ಪ್ರಯತ್ನ ಹಾಗೂ ಪೋಷಕರು, ಶಿಕ್ಷಕರು
ಮತ್ತು ಮಕ್ಕಳ ಸಹಕಾರದೊಂದಿಗೆ ಶೇ.100 ರಷ್ಟು
ಫಲಿತಾಂಶ ಗಳಿಸಲು ಸಾಧ್ಯವಾಯಿತು ಎಂದರು.
ಡಯಟ್ ಕಾಲೇಜಿನ ಪ್ರಾಂಶುಪಾಲರಾದ ಹೆಚ್.ಕೆ.ಲಿಂಗರಾಜು
ಮಾತನಾಡಿ, ಶಿಕ್ಷಕರಂತೆ ವಿದ್ಯಾರ್ಥಿಗಳು ಎನ್ನುವಂತೆ
ಶಿಕ್ಷಕರು ವಿದ್ಯಾರ್ಥಿಗಳನ್ನು ಅರ್ಥಮಾಡಿಕೊಂಡು ಉತ್ತಮವಾಗಿ
ಕಲಿಸಿದರೆ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ನೀಡಲು
ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳನ್ನು ಪರೀಕ್ಷೆಗೆ
ಸಜ್ಜುಗೊಳಿಸಬೇಕೆಂದರು.
ಹರಿಹರದ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಸವರಾಜಪ್ಪ ಮಾತನಾಡಿ,
ತುಂಬಾ ಚೆನ್ನಾಗಿ ಓದುವ ಮಕ್ಕಳಿಗೇ ಹೆಚ್ಚು ಪ್ರಾಮುಖ್ಯತೆ
ನೀಡದೇ, ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು
ವೈಯಕ್ತಿಕವಾಗಿ ಮಾತನಾಡಿಸಿ, ಆ ಮಗುವಿನ ಹಿನ್ನೆಲೆ ತಿಳಿದು
ಅಗತ್ಯ ಸಹಾಯ-ಸಹಕಾರ ನೀಡಿ ಆ ಮಗವೂ ಉತ್ತಮ
ಫಲಿತಾಂಶ ಪಡೆಯುವಂತೆ ಶಿಕ್ಷಕರು ಮಾಡಬೇಕೆಂದರು.
ಸಂಗೀತ ಶಿಕ್ಷಕ ಅಜಯನಾರಾಯಣ ಪ್ರಾರ್ಥಿಸಿದರು.
ಡಿಡಿಪಿಐ(ಆಡಳಿತ) ಸಿ.ಆರ್.ಪರಮೇಶ್ವರಪ್ಪ ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ
ಮಂಜುನಾಥ, ಎಂ.ನಿರಂಜನಮೂರ್ತಿ, ಜಿ.ಕೊಟ್ರೇಶ್, ರಾಜೀವ್,
ವೆಂಕಟೇಶ್, ಜಿಲ್ಲಾ ಪ್ರೌಢಶಾಲಾ ಮುಖ್ಯಶಿಕ್ಷಕರ ಸಂಘದ
ಅಧ್ಯಕ್ಷ ಡಿ.ಡಿ.ಹಾಲಪ್ಪ, ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ
ಸಂಘದ ಅಧ್ಯಕ್ಷ ಮಂಜುನಾಥಯ್ಯ ಹಾಜರಿದ್ದರು.