ದಾವಣಗೆರೆ ಫೆ. 11
ಮೆಕ್ಕೆಜೋಳ ಬೆಳೆಗಾರರನ್ನು ಆರ್ಥಿಕ ಸಂಕಷ್ಟದಿಂದ
ಪಾರು ಮಾಡಲು ಹಾಗೂ ಮಣ್ಣಿನ ಫಲವತ್ತತೆಯನ್ನು
ಉಳಿಸಿಕೊಳ್ಳಲು ಮೆಕ್ಕೆಜೋಳದೊಂದಿಗೆ ತೊಗರಿಯನ್ನು
ಅಂತರ ಬೆಳೆಯಾಗಿ ಬೆಳೆಯುವಂತೆ ಕೃಷಿ ಇಲಾಖೆ
ಅಧಿಕಾರಿಗಳು ರೈತರಲ್ಲಿ ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾ
ಪಂಚಾಯತ್ ಅಧ್ಯಕ್ಷೆ ಕೆ. ಶಾಂತಕುಮಾರಿ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಲಾದ
ಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ
ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಮೆಕ್ಕೆಜೋಳ ಬೆಳೆದಿರುವ ರೈತರು
ಸಂಕಷ್ಟದಲ್ಲಿದ್ದಾರೆ. ಮಾರುಕಟ್ಟೆಯಲ್ಲಿ ದರ
ಕುಸಿತವಾಗಿದ್ದು, ಸದ್ಯ ಕ್ವಿಂಟಾಲ್‍ಗೆ ರೂ. 1400 ರಿಂದ 1600
ರವರೆಗೆ ಮಾತ್ರ ಇದೆ. ಬೆಂಬಲ ಬೆಲೆಯಲ್ಲಿ ಖರೀದಿಸಲೂ
ಸಾಧ್ಯವಾಗಿಲ್ಲ. ಈ ರೀತಿ ಆದರೆ ಮೆಕ್ಕೆಜೋಳ ಬೆಳೆಗಾರರಿಗೆ
ತೀವ್ರ ಆರ್ಥಿಕ ನಷ್ಟವಾಗಲಿದೆ ಎಂದು ಜಿ.ಪಂ. ಉಪಾಧ್ಯಕ್ಷೆ
ಸಾಕಮ್ಮ ಗಂಗಾಧರನಾಯಕ್ ಅವರು ಸಭೆಯಲ್ಲಿ
ಕಳವಳ ವ್ಯಕ್ತಪಡಿಸಿದರು. ಜಂಟಿಕೃಷಿ ನಿರ್ದೇಶಕ ಶ್ರೀನಿವಾಸ
ಚಿಂತಾಲ್ ಪ್ರತಿಕ್ರಿಯಿಸಿ, ಜಿಲ್ಲೆಯಲ್ಲಿ ಸುಮಾರು 1.34 ಲಕ್ಷ
ಹೆಕ್ಟೇರ್‍ನಲ್ಲಿ ಮೆಕ್ಕೆಜೋಳ ಬೆಳೆಯಲಾಗುತ್ತಿದೆ. ಮಳೆ
ಉತ್ತಮವಾಗಿ ಆಗಿದ್ದರಿಂದ ಇಳುವರಿಯೂ ಚೆನ್ನಾಗಿ ಬಂದಿದೆ. ಆವಕ
ಹೆಚ್ಚಾಗಿರುವುದರಿಂದ, ಬೆಲೆ ಕಡಿಮೆಯಿದೆ, ಅಲ್ಲದೆ ಬೇಡಿಕೆಯೂ
ಕುಸಿದಿದೆ. ಸುಮಾರು 5 ಲಕ್ಷ ಟನ್ ನಷ್ಟು ಮೆಕ್ಕೆಜೋಳಕ್ಕೆ
ಆಂತರಿಕ ಬೇಡಿಕೆ ಇಲ್ಲದ ಕಾರಣ ಹೊರಗಡೆ ಮಾರಾಟವಾಗುವ ಸ್ಥಿತಿ
ಇದೆ. ರೈತರು ಸತತವಾಗಿ ಮೆಕ್ಕೆಜೋಳವನ್ನು ಪ್ರಧಾನ
ಬೆಳೆಯಾಗಿ ಬೆಳೆಯುತ್ತಿರುವುದರಿಂದ ಮಣ್ಣಿನ
ಫಲವತ್ತತೆಯೂ ಕಡಿಮೆಯಾಗುತ್ತಿದ್ದು, ಹೊಸ ಹೊಸ
ಕೀಟ, ರೋಗಬಾಧೆ ಬೆಳೆಗೆ ಕಾಣಿಸುತ್ತಿದೆ. ಆರ್ಥಿಕ ನಷ್ಟದಿಂದ
ಪಾರಾಗಲು, ಮಣ್ಣಿನ ಫಲವತ್ತತೆ ಉಳಿಸಿಕೊಂಡು ಭವಿಷ್ಯದಲ್ಲಿ
ಉತ್ತಮ ಬೆಳೆಗಳನ್ನು ಕಂಡುಕೊಳ್ಳಲು ರೈತರು
ಮೆಕ್ಕೆಜೋಳದ ಜೊತೆಗೆ ತೊಗರಿಯನ್ನು ಅಂತರ
ಬೆಳೆಯಾಗಿ ಬೆಳೆಯುವುದು ಸೂಕ್ತವಾಗಿದೆ. ತೊಗರಿಗೆ
ಸಾಮಾನ್ಯವಾಗಿ ಉತ್ತಮ ಬೇಡಿಕೆ ಹಾಗೂ ದರ ಸಿಗುತ್ತದೆ. ಸದ್ಯ
ತೊಗರಿ ಕ್ವಿಂಟಾಲ್‍ಗೆ 5600 ರಿಂದ 6500 ರೂ. ದರ
ದೊರೆಯುತ್ತಿದೆ. ಹೀಗೆ ಮಾಡುವುದರಿಂದ ರೈತರಿಗೆ
ಆರ್ಥಿಕವಾಗಿ ಲಾಭವಾಗಿ, ಕೀಟ ಹಾಗೂ ರೋಗಬಾಧೆ
ತಡೆಯಬಹುದು. ಅಂತರ ಬೆಳೆಯಾಗಿ ಬೆಳೆಯಲು
ಅನುಕೂಲವಾಗುವಂತೆ ತೊಗರಿ ಬಿತ್ತನೆ ಬೀಜವನ್ನು 01 ಕೆ.ಜಿ.
ಪಾಕೆಟ್‍ನಲ್ಲಿಯೂ ದೊರೆಯುವಂತೆ ಮಾಡಬೇಕಿದೆ.
ಜಿಲ್ಲೆಯಲ್ಲಿ ಸದ್ಯ ಶೇ. 98.20 ರಷ್ಟು ಬೆಳೆ ಸಮೀಕ್ಷೆ
ಪೂರ್ಣಗೊಂಡಿದ್ದು, ಅತಿವೃಷ್ಟಿಯಿಂದ 294.34 ಹೆ. ಪ್ರದೇಶದಲ್ಲಿ
ಹಾನಿಯಾಗಿತ್ತು. 32.27 ಲಕ್ಷ ಪರಿಹಾರ ಮೊತ್ತ ಬಿಡುಗಡೆ
ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಜಿ.ಪಂ. ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ
ಲೋಕೇಶ್ವರ ಮಾತನಾಡಿ, ರೈತರಿಗೆ ಈ ಕುರಿತು ಮನವಿ
ಮಾಡಿದರೆ ಆಗುವುದಿಲ್ಲ. ಅವರಲ್ಲಿ ಜಾಗೃತಿ ಮೂಡಿಸಿ
ಮನಪರಿವರ್ತನೆ ಮಾಡಿಸುವ ಕಾರ್ಯವನ್ನು ಕೃಷಿ ಇಲಾಖೆ
ಅಧಿಕಾರಿಗಳು ಮಾಡಬೇಕು ಎಂದರು. ಜಿ.ಪಂ. ಅಧ್ಯಕ್ಷೆ
ಶಾಂತಕುಮಾರಿ ಮಾತನಾಡಿ, ತೊಗರಿಯನ್ನು
ಮೆಕ್ಕೆಜೋಳದೊಂದಿಗೆ ಅಂತರ ಬೆಳೆಯಾಗಿಸಲು ರೈತರಲ್ಲಿ
ಜಾಗೃತಿ ಮೂಡಿಸಿ, ಜೊತೆಗೆ ಸಿರಿಧಾನ್ಯ ಬೆಳೆಗೂ ರೈತರಿಗೆ
ಶಿಫಾರಸು ಮಾಡಬೇಕು ಎಂದು ಕೃಷಿ ಅಧಿಕಾರಿಗಳಿಗೆ ಸೂಚನೆ
ನೀಡಿದರು. ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಲಕ್ಮೀಕಾಂತ್
ಮಾತನಾಡಿ, ಕೋವಿಡ್ ಕಾರಣದಿಂದ ಹಣ್ಣು, ತರಕಾರಿ ಬೆಳೆಯಲ್ಲಿ
ನಷ್ಟ ಅನುಭವಿಸಿದ ರೈತರಿಗೆ 4.25 ಕೋಟಿ ರೂ. ಪರಿಹಾರಧನ
ವಿತರಣೆ ಮಾಡಲಾಗಿದೆ. ಇನ್ನೂ ಸುಮಾರು 2.60 ಕೋಟಿ ರೂ.
ಪರಿಹಾರ ಬಿಡುಗಡೆಯಾಗಬೇಕಿದೆ. ಬೆಳೆ ಸಮೀಕ್ಷೆಯಲ್ಲಿ
ಬಿಟ್ಟುಹೋದ ರೈತರ ಮಾಹಿತಿಯನ್ನು ಸಂಗ್ರಹಿಸಿ
ಪರಹಾರಕ್ಕಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು. ಜಿ.ಪಂ. ಸಿಇಒ
ಪದ್ಮಾ ಬಸವಂತಪ್ಪ ಮಾತನಾಡಿ, ಆಸಕ್ತ ರೈತ ಮಹಿಳೆಯರ
ಗುಂಪುಗಳನ್ನು ರಚಿಸಿ, ಅವರಿಗೆ ಅಣಬೆ ಬೇಸಾಯ,
ಜೇನುಕೃಷಿ, ತಾರಸಿ ಕೈತೋಟದಂತಹ ಚಟುವಟಿಕೆಗಳ
ತರಬೇತಿ ನೀಡಲು ಕ್ರಮ ವಹಿಸುವಂತೆ ಸೂಚನೆ ನೀಡಿದರು.
ಅನರ್ಹ ಬಿಪಿಎಲ್ ಕಾರ್ಡ್ ರದ್ದುಪಡಿಸಿ : ಜಿಲ್ಲೆಯಲ್ಲಿ ಬಹುತೇಕ
ಹೋಟೆಲ್‍ಗಳು ಪಡಿತರ ಅಕ್ಕಿ ಆಧಾರದಿಂದಲೇ
ನಡೆಯುತ್ತಿವೆ, ಬಿಪಿಎಲ್ ಕಾರ್ಡ್ ಕೊಡುವಾಗ ಕುಟುಂಬದ ಆರ್ಥಿಕ
ಸ್ಥಿತಿಗತಿಯನ್ನು ಸಮರ್ಪಕವಾಗಿ ಪರಿಶೀಲಿಸಿಯೇ ನೀಡಬೇಕು,
ಅನರ್ಹ ಪಡಿತರ ಚೀಟಿದಾರರ ಕಾರ್ಡ್ ರದ್ದುಪಡಿಸಿ, ದಂಡ ವಸೂಲಿ
ಮಾಡಬೇಕು ಎಂದು ಜಿ.ಪಂ. ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ
ಸಮಿತಿ ಅಧ್ಯಕ್ಷ ವೀರಶೇಖರಪ್ಪ ಆಗ್ರಹಿಸಿದರೆ, ಸಾಮಾಜಿಕ
ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಲೋಕೇಶ್ವರ ಮಾತನಾಡಿ,
ನೂರಾರು ಕೋಟಿ ಆಸ್ತಿ ಇರುವವರು ಕೂಡ ಬಿಪಿಎಲ್ ಕಾರ್ಡ್
ಹೊಂದಿದ್ದಾರೆ. ಅಧಿಕಾರಿಗಳಿಗೆ ಮಾಹಿತಿ ಇದ್ದರೂ ಏನೂ
ಮಾಡಲಾಗುತ್ತಿಲ್ಲ ಎಂದು ಆರೋಪಿಸಿದರು. ಆಹಾರ ಇಲಾಖೆ
ಸಹಾಯಕ ನಿರ್ದೇಶಕ ಸೈಯದ್ ಖಲೀಮುಲ್ಲ ಉತ್ತರಿಸಿ, ಬಿಪಿಎಲ್
ಕಾರ್ಡ್ ಹೊಂದಿರುವ ಅನರ್ಹರನ್ನು ಪತ್ತೆಹಚ್ಚಿ ಕ್ರಮ
ಜರುಗಿಸಲು ಇಲಾಖೆ ಆಂದೋಲನ ಪ್ರಾರಂಭಿಸಿದೆ. ಈವರೆಗೆ
ಅಕ್ರಮವಾಗಿ ಬಿಪಿಎಲ್ ಕಾರ್ಡ್ ಹೊಂದಿದ್ದ 25 ಸರ್ಕಾರಿ ನೌಕರರು
ಹಾಗೂ ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿರುವವರನ್ನು
ಪತ್ತೆಹಚ್ಚಿ 2891 ಕಾರ್ಡ್ ರದ್ದುಪಡಿಸಿದೆ, ಅಲ್ಲದೆ 3.21 ಲಕ್ಷ ರೂ.
ದಂಡ ವಸೂಲಿ ಮಾಡಲಾಗಿದೆ. ಪ್ರತಿದಿನ ಕನಿಷ್ಟ 5 ನ್ಯಾಯಬೆಲೆ
ಅಂಗಡಿಗಳಿಗೆ ಭೇಟಿ ನೀಡಬೇಕು, ಕನಿಷ್ಟ 10 ಅಕ್ರಮ ಬಿಪಿಎಲ್
ಕಾರ್ಡ್ ಪತ್ತೆಹಚ್ಚುವಂತೆ ಜಿಲ್ಲೆಯ ಎಲ್ಲ ಆಹಾರ ಶಿರಸ್ತೆದಾರರು,
ಆಹಾರ ನಿರೀಕ್ಷಕರಿಗೆ ಗುರಿ ನಿಗದಿಪಡಿಸಲಾಗಿದೆ. ಸರ್ಕಾರಿ
ನೌಕರರಾಗಿದ್ದು, ತಮ್ಮ ಪತ್ನಿ ಅಥವಾ ಕುಟುಂಬದ ಇತರೆ
ಸದಸ್ಯರ ಹೆಸರಿನಲ್ಲಿ ಬಿಪಿಎಲ್ ಕಾರ್ಡ್ ಹೊಂದಿದವರನ್ನು ಹೆಚ್‍ಆರ್‍ಎಂಎಸ್
ದತ್ತಾಂಶದಿಂದ ಮಾಹಿತಿ ಪಡೆದು, ಅಕ್ರಮ ಕಾರ್ಡ್ ರದ್ದುಪಡಿಸಿ,
ನೌಕರರ ವಿರುದ್ಧ ಕ್ರಮ ಜರುಗಿಸಲಾಗುತ್ತಿದೆ ಎಂದರು.
ಜಿ.ಪಂ. ಅಧ್ಯಕ್ಷೆ ಮಾತನಾಡಿ, ಎಲ್ಲ ನ್ಯಾಯಬೆಲೆ ಅಂಗಡಿಗಳು
ನಿಗದಿತ ದಿನಾಂಕ ಹಾಗೂ ಸಮಯಗಳಲ್ಲಿ ತೆರೆದಿರಬೇಕು, ಈ
ಕುರಿತ ಬೋರ್ಡ್ ಅನ್ನು ಅಂಗಡಿಯಲ್ಲಿ ಅಳವಡಿಸಬೇಕು ಎಂದು
ತಾಕೀತು ಮಾಡಿದರು.
ಅಂಗನವಾಡಿ, ಶಾಲೆ ಕಾಲೇಜುಗಳಿಗೆ ನೀರು : ಜಿ.ಪಂ. ಅಧ್ಯಕ್ಷರು
ಮಾತನಾಡಿ, ಜಿಲ್ಲೆಯ ಕೆಲವು ಅಂಗನವಾಡಿ, ಹಾಗೂ ಶಾಲೆಗಳಲ್ಲಿ
ನಿರ್ಮಿಸಲಾಗಿರುವ ಶೌಚಾಲಯಗಳನ್ನು ನೀರು ಪೂರೈಕೆ
ಇಲ್ಲದ ಕಾರಣಕ್ಕಾಗಿ ಬಳಸಲಾಗುತ್ತಿಲ್ಲ. ಶೌಚಾಲಯಗಳನ್ನು
ನೀರು ಪೂರೈಕೆಗೆ ವ್ಯವಸ್ಥೆ ಮಾಡಿಕೊಂಡೇ ಕಟ್ಟುವುದು
ಸೂಕ್ತ ಎಂದರು. ಸಿಇಒ ಪದ್ಮಾ ಬಸವಂತಪ್ಪ ಮಾತನಾಡಿ, ಜಲಜೀವನ್
ಮಿಷನ್ ಯೋಜನೆ ಜಾರಿಗೊಳಿಸುವ ಗ್ರಾಮಗಳ ವ್ಯಾಪ್ತಿಯ ಎಲ್ಲ
ಅಂಗನವಾಡಿ ಕೇಂದ್ರಗಳು, ಸರ್ಕಾರಿ ಶಾಲೆಗಳು ಹಾಗೂ
ಪದವಿಪೂರ್ವ ಕಾಲೇಜುಗಳಿಗೆ ನೀರು ಪೂರೈಸುವ ಸಂಪರ್ಕ
ಕಲ್ಪಿಸಲು ಯೋಜನೆ ರೂಪಿಸಲಾಗಿದೆ. ಜಿಲ್ಲೆಯಲ್ಲಿ ಇದುವರೆಗೂ
ಶೌಚಾಲಯ ಇಲ್ಲದೇ ಇರುವ ಅಂಗನವಾಡಿ ಕೇಂದ್ರ ಹಾಗೂ
ಶಾಲೆಗಳ ಗ್ರಾಮವಾರು ವಿವರವನ್ನು ಸಿದ್ಧಪಡಿಸಿ ಜಿ.ಪಂ. ಗೆ
ಸಲ್ಲಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಶಾಲಾ ಮಕ್ಕಳ ಆರೋಗ್ಯ ತಪಾಸಣೆ ನಡೆಸಿ : ಕೋವಿಡ್
ಕಾರಣದಿಂದಾಗಿ ಇತ್ತೀಚೆಗಷ್ಟೇ ಶಾಲೆಗಳು ಪ್ರಾರಂಭವಾಗಿವೆ.
ಶಾಲಾ ಮಕ್ಕಳು, ಶಿಕ್ಷಕರಿಗೆ ಕೋವಿಡ್ ತಪಾಸಣೆ
ನಡೆಸುವುದು ಕಡ್ಡಾಯವೆಂದು ಸರ್ಕಾರ ಮಾರ್ಗಸೂಚಿ
ಪ್ರಕಟಿಸಿತ್ತು. ಆದರೆ ಇತ್ತೀಚೆಗೆ ಪರೀಕ್ಷೆ ಕಡ್ಡಾಯವಲ್ಲ,
ಕೋವಿಡ್ ಲಕ್ಷಣ ಇರುವವರಿಗೆ ಆರೋಗ್ಯ ಮಾತ್ರ ಆರ್‍ಟಿಪಿಸಿಆರ್
ಪರೀಕ್ಷೆ ನಡೆಸುವಂತೆ ಸರ್ಕಾರ ನಿರ್ದೇಶನ ನೀಡಿದೆ ಎಂದು
ಡಿಹೆಚ್‍ಒ ಡಾ. ನಾಗರಾಜ್ ಹೇಳಿದರು. ಜಿ.ಪಂ. ಅಧ್ಯಕ್ಷರು
ಪ್ರತಿಕ್ರಿಯಿಸಿ, ಶಾಲಾ ಮಕ್ಕಳ ಆರೋಗ್ಯ ಕಾಪಾಡುವುದು
ಸರ್ಕಾರದ ಜವಾಬ್ದಾರಿ, ಹೀಗಾಗಿ ಎಲ್ಲ ಶಾಲೆ ಮಕ್ಕಳು ಹಾಗೂ
ಹಾಸ್ಟೆಲ್‍ಗಳಲ್ಲಿರುವ ಮಕ್ಕಳ ಆರೋಗ್ಯವನ್ನು ಆಯಾ
ವ್ಯಾಪ್ತಿಯ ಆಸ್ಪತ್ರೆಗಳ ವೈದ್ಯರು ಕನಿಷ್ಟ 15
ದಿನಗಳಿಗೊಮ್ಮೆ ತಪಾಸಣೆ ನಡೆಸುವ ಕಾರ್ಯ ಆಗಬೇಕು
ಎಂದು ಸೂಚನೆ ನೀಡಿದರು. ಅಲ್ಲದೆ ದೊಡ್ಡಪೇಟೆ ನಗರ
ಆರೋಗ್ಯ ಕೇಂದ್ರದ ವೈದ್ಯ ಡಾ. ನಾಗರಾಜ್ ಎನ್ನುವವರು
ಆಸ್ಪತ್ರೆಗೆ ಹಾಜರಾಗದೆ, ಖಾಸಗಿ ಆಸ್ಪತ್ರೆಯಲ್ಲಿ ಕರ್ತವ್ಯ
ಮಾಡುತ್ತಿದ್ದಾರೆ, ಆರೋಗ್ಯ ಕೇಂದ್ರಕ್ಕೆ ಬರುವ
ರೋಗಿಗಳನ್ನು ಜಿಲ್ಲಾಸ್ಪತ್ರೆಗೆ ಕಳುಹಿಸುತ್ತಿದ್ದಾರೆ ಎಂಬ
ದೂರು ಬಂದಿದೆ, ಈ ಕುರಿತು ಡಿಹೆಚ್‍ಒ ಪರಿಶೀಲಿಸಿ ಸೂಕ್ತ ಕ್ರಮ
ಜರುಗಿಸಬೇಕು ಎಂದು ಸೂಚನೆ ನೀಡಿದರು. ಸ್ಥಾಯಿಸಮಿತಿ
ಅಧ್ಯಕ್ಷ ಲೋಕೇಶ್ವರ ಮಾತನಾಡಿ, ಎಲ್ಲ ಪ್ರಾಥಮಿಕ
ಆರೋಗ್ಯ ಕೇಂದ್ರಗಳಲ್ಲಿಯೂ ಜನರಿಕ್ ಔಷಧಿ ಮಳಿಗೆ
ತೆರೆಯಲು ಪ್ರಸ್ತಾವನೆ ಸಲ್ಲಿಸುವಂತೆ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಸಾಕಮ್ಮ
ಗಂಗಾಧರನಾಯಕ್, ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ
ಅಧ್ಯಕ್ಷ ಬಿ. ಫಕೀರಪ್ಪ, ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ
ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು. ಸಭೆಯಲ್ಲಿ ಜಿ.ಪಂ.
ವ್ಯಾಪ್ತಿಯ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು.