ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ
ಮೆಕ್ಕೆಜೋಳ ಖರೀದಿಸುವಂತೆ
ಸದಸ್ಯರ ಒತ್ತಾಯ
ಜಿಲ್ಲೆಯಲ್ಲಿ ಅತಿ ಹೆಚ್ಚು ಮೆಕ್ಕೆಜೋಳ
ಬೆಳೆಯಲಾಗುತ್ತಿದ್ದು ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ
ಮೆಕ್ಕೆಜೋಳವನ್ನು ಖರೀದಿಸುವಂತೆ ಹಾಗೂ ಪಡಿತರ
ವಿತರಣೆಯಲ್ಲಿ(ಪಿಡಿಎಸ್) ಮೆಕ್ಕಜೋಳವನ್ನು
ಸೇರ್ಪಡೆಗೊಳಿಸುವಂತೆ ಸರ್ಕಾರಕ್ಕೆ ಒತ್ತಾಯಿಸಬೇಕೆಂದು
ಜಿಲ್ಲಾ ಪಂಚಾಯತ್ ಸದಸ್ಯರು ಒತ್ತಾಯಿಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತ್
ಅಧ್ಯಕ್ಷೆ ಕೆ.ವಿ.ಶಾಂತಕುಮಾರಿ ಇವರ ಅಧ್ಯಕ್ಷತೆಯಲ್ಲಿ
ಇಂದು ಏರ್ಪಡಿಸಲಾಗಿದ್ದ ಸಾಮಾನ್ಯ ಸಭೆಯಲ್ಲಿ ಸದಸ್ಯರಾದ
ಡಿ.ಜಿ.ವಿಶ್ವನಾಥ್ ಮಾತನಾಡಿ, ಜಿಲ್ಲೆಯ ಮುಕ್ಕಾಲು ಭಾಗದಲ್ಲಿ
ಮೆಕ್ಕೆಜೋಳ ಬೆಳೆಯಲಾಗುತ್ತಿದೆ. ಪ್ರಸ್ತುತ
ಮಾರುಕಟ್ಟೆ ಬೆಲೆಗಿಂತ ಕಡಿಮೆ ಬೆಲೆಗೆ ರೈತರು
ಮೆಕ್ಕೆಜೋಳ ಮಾರಾಟ ಮಾಡುತ್ತಿದ್ದು, ಪ್ರತಿ ಕ್ವಿಂಟಾಲ್‍ಗೆ
ಸುಮಾರು ರೂ.500 ನಷ್ಟ ಅನುಭವಿಸುವಂತಾಗಿದೆ. ರೈತರ
ಬಗ್ಗೆ ಸರ್ಕಾರಕ್ಕೆ ಕಾಳಜಿ ಇಲ್ಲವಾಗಿದ್ದು, ರೈತರು ನಷ್ಟಕ್ಕೆ
ಗುರಿಯಾಗುತ್ತಿದ್ದಾರೆ. ಆದ ಕಾರಣ ಕನಿಷ್ಟ ಬೆಂಬಲ ಬೆಲೆ
ಯೋಜನೆಯಡಿ ಮೆಕ್ಕೆಜೋಳ ಖರೀದಿಗೆ ಸರ್ಕಾರದ ಮೇಲೆ
ಒತ್ತಡ ತಂದು ಅವಕಾಶ ಮಾಡಿಕೊಡಬೇಕು ಎಂದರು.
ಸದಸ್ಯರಾದ ಬಸವರಾಜಪ್ಪ ಮಾತನಾಡಿ, ಮೆಕ್ಕೆಜೋಳಕ್ಕೆ
ದರ ನಿಗದಿಪಡಿಸಿ ಎಪಿಎಂಸಿ ಆವರ್ತನಿಧಿಯಲ್ಲಿ ಖರೀದಿಸುವ ವ್ಯವಸ್ಥೆ
ಮಾಡಬೇಕು ಎಂದರು.
ಸದಸ್ಯರಾದ ಎ.ಆರ್. ಮಹೇಶ್ ಮಾತನಾಡಿ, ಕೇಂದ್ರ ಸರ್ಕಾರ
ತಂದಿರುವ ಎಪಿಎಂಸಿ ತಿದ್ದುಪಡಿಯನ್ನು ಜನರು ಒಪ್ಪುತ್ತಿಲ್ಲ.
ನಮ್ಮ ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿ ಇರುವುದರಿಂದಲೇ
ರೈತರ ಕಾಯ್ದೆಗಳನ್ನು ಜಾರಿಗೆ ತಂದಿದೆ ಎಂದಾಗ ಸದಸ್ಯರ
ನಡುವೆ ಮಾತಿನ ಚಕಮಕಿ ಏರ್ಪಟ್ಟಿತು.
ಸದಸ್ಯೆ ಶೈಲಜಾ ಬಸವರಾಜ್ ಮಾತನಾಡಿ, ಕೇಂದ್ರ ನೀತಿ ಜಿಲ್ಲಾ
ಪಂಚಾಯತ್ ವ್ಯಾಪ್ತಿ ಮೀರಿದ್ದಾಗಿದ್ದು, ನಮ್ಮ ವ್ಯಾಪ್ತಿಗೆ ಸಂಬಂಧಿಸಿದ
ಚರ್ಚೆ ಮಾಡಿದರೆ ಒಳಿತು ಎಂದು ಸಲಹೆ ನೀಡಿದರು.
ಕೃಷಿ ಜಂಟಿ ನಿರ್ದೇಶಕ ಶ್ರೀನಿವಾಸ ಚಿಂತಾಲ್ ಮಾತನಾಡಿ, ಜಿಲ್ಲಾ
ಮಟ್ಟದ ಟಾಸ್ಕ್‍ಫೋರ್ಸ್ ಸಮಿತಿ ಸಭೆ ನಡೆಸಿ ಜಿಲ್ಲೆಯಲ್ಲಿನ
ಮೆಕ್ಕೆಜೋಳ ಉತ್ಪಾದನೆ ಕುರಿತು ಮಾಹಿತಿ ಪಡೆದು
ಜಿಲ್ಲಾಧಿಕಾರಿಗಳು ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ
ಮೆಕ್ಕೆಜೋಳ ಖರೀದಿ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ.
ಜಿಲ್ಲೆಯಲ್ಲಿ ಸುಮಾರು 5.5 ಲಕ್ಷ ಟನ್ ಮೆಕ್ಕೆಜೋಳ ಉತ್ಪಾದನೆ
ಇದ್ದು, ರೂ.1825 ಮಾರುಕಟ್ಟೆ ದರ ನಿಗದಿಪಡಿಸಲಾಗಿದೆ. ಆದರೆ
ಮಾರುಕಟ್ಟೆಯಲ್ಲಿ ಬೇಡಿಕೆಗಿಂತ ಹೆಚ್ಚನ ಪೂರೈಕೆ
ಇರುವುದರಿಂದ ದರ ಕಡಿಮೆ ಆಗಿದೆ. ಈ ಹಿನ್ನೆಲೆಯಲ್ಲಿ
ಮೆಕ್ಕೆಜೋಳ ಬಳಕೆ ಮಾಡುವ
ಕೈಗಾರಿಕೋದ್ಯಮಿಗಳನ್ನು ಕರೆದು ಸಭೆ ನಡೆಸಿ,
ಮಾರುಕಟ್ಟೆ ದರದಲ್ಲಿ ಮೆಕ್ಕೆಜೋಳ ಖರೀದಿಸುವಂತೆ
ಮನವೊಲಿಸುವ ಪ್ರಯತ್ನ ಮಾಡಲಾಗಿತ್ತು.
ಮೊದಲಿನಿಂದಲೂ ಮೆಕ್ಕೆಜೋಳ ಪಡಿತರ (ಪಿಡಿಎಸ್-ಪಬ್ಲಿಕ್
ಡಿಸ್ಟ್ರಿಬ್ಯೂಷನ್ ಸಿಸ್ಟಂ) ವಾಗಿ ಪಡಿತರ ಅಂಗಡಿಗಳಲ್ಲಿ
ವಿತರಣೆಯಾಗುತ್ತಿಲ್ಲ. ಇದಕ್ಕೆ ಕೇಂದ್ರ ಸರ್ಕಾರ ಅವಕಾಶ
ನೀಡಿಲ್ಲ. ಆದ ಕಾರಣ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಇದನ್ನು
ಖರೀದಿಸುತ್ತಿಲ್ಲ. ಆದರೂ ಜಿಲ್ಲಾಡಳಿತದ ವತಿಯಿಂದ ಪ್ರಸ್ತಾವನೆ
ಹೋಗಿದೆ ಎಂದರು.
ಎಪಿಎಂಸಿ ಸಹಾಯಕ ನಿರ್ದೇಶಕ ಪ್ರಭು ಮಾತನಾಡಿ, ಕಳೆದ
ಆರು ವರ್ಷಗಳಿಂದ ಮೆಕ್ಕೆಜೋಳವನ್ನು ಬೆಂಬಲ ಬೆಲೆ
ಯೋಜನೆಯಡಿ ಖರೀದಿಸುತ್ತಿಲ್ಲ. ಆವರ್ತ ನಿಧಿ ರಾಜ್ಯ ವ್ಯಾಪ್ತಿಗೆ
ಬರಲಿದ್ದು, ಸರ್ಕಾರ ಆದೇಶಿಸಿದರೆ ಕೆಎಂಎಫ್ ಮೂಲಕ
ಖರೀದಿಸಬಹುದು ಎಂದರು.
ಸದಸ್ಯ ಬಸವರಾಜಪ್ಪ, ರೈತರ ಹಿತದೃಷ್ಟಿಯಿಂದ ಇದೊಂದು
ವಿಶೇಷ ಪ್ರಕರಣವೆಂದು ಪರಿಗಣಿಸಿ, ಆವರ್ತ ನಿಧಿ ಬಳಕೆ
ಮಾಡಿಕೊಂಡು ಮೆಕ್ಕೆಜೋಳ ಖರೀದಿ ಮಾಡಬೇಕು. ಪಕ್ಕದ
ಶಿಕಾರಿಪುರದಲ್ಲಿ ಕೆಎಂಎಫ್ ಮೂಲಕ ಖರೀದಿ ಮಾಡುತ್ತಿದ್ದಾರೆ
ಎಂದರು.
ಸದಸ್ಯ ಮಹೇಶ್ ಪ್ರತಿಕ್ರಿಯಿಸಿ, ಮೆಕ್ಕೆಜೋಳ
ಸೋಮಾರಿಗಳ ಬೆಳೆ ಎಂಬ ಹಣೆಪಟ್ಟಿ ಹೊತ್ತಿದ್ದು,
ಮೆಕ್ಕೆಜೋಳ ಕಡಿಮೆ ಮಾಡಿ ತೋಟಗಾರಿಕೆ ಬೆಳೆಗಳಿಗೆ ಒತ್ತು
ನೀಡಬೇಕೆಂದರು.
ಕೃಷಿ ಜಂಟಿ ನಿರ್ದೇಶಕ ಶ್ರೀನಿವಾಸ ಚಿಂತಾಲ್, ಜಿಲ್ಲೆಯಲ್ಲಿ
ಮೆಕ್ಕೆಜೋಳ ಬೆಳೆಗೆ ಪೂರಕ ವಾತಾವರಣವಿದ್ದು ಸಂಪೂರ್ಣ
ಯಾಂತ್ರೀಕೃತವಾಗಿರುವುದರಿಂದ ಎಲ್ಲರೂ ಮೆಕ್ಕೆಜೋಳ
ಬೆಳೆಯುತ್ತಿದ್ದಾರೆ. ಚನ್ನಗಿರಿ ಮತ್ತು ಹೊನ್ನಾಳಿಯಲ್ಲಿ ಅಡಿಕೆ
ಹೆಚ್ಚು ಬೆಳೆಯುತ್ತಿದ್ದಾರೆ. ಇಲಾಖೆಯಿಂದ ಜೋಳ ಇಳುವರಿ
ಕಡಿಮೆ ಮಾಡಲು ಅಂತರ ಬೆಳೆ ಬಗ್ಗೆ ಜಾಗೃತಿ
ಮೂಡಿಸಲಾಗುತ್ತಿದೆ. ಆಯ್ದ ಕೃಷಿಕರಿಗೆ ಗೂಗಲ್ ಮೀಟ್
ಮೂಲಕ 6:1 ಅನುಪಾತ ಅಂದರೆ ಆರು ಸಾಲಿಗೆ ಒಂದು ಸಾಲು
ತೊಗರಿ ಬೆಳೆಯಂತೆ ಬೆಳೆಯಲು ಉತ್ತೇಜನ
ನೀಡಲಾಗುತ್ತಿದೆ. ಇದರಿಂದ ರೈತರ ಆದಾಯವೂ ಹೆಚ್ಚಲಿದೆ.
ತೊಗರಿಗೆ ರೂ.6 ಸಾವಿರ ಬೆಂಬಲ ಬೆಲೆ ಇದ್ದು
ಪೂರ್ವನಿಯೋಜಿತವಾಗೇ ಖರೀದಿ ಕೇಂದ್ರದ ವ್ಯಾಪ್ತಿಗೆ
ಬರುವುದು. ಮುಂಬರುವ ದಿನಗಳಲ್ಲಿ ಸಿರಿಧಾನ್ಯಗಳು ಕೂಡ
ಪಿಡಿಎಸ್ ವ್ಯವಸ್ಥೆಗೆ ಒಳಪಡುವ ಸಾಧ್ಯತೆ ಇದೆ. ಹಾಗೂ ಮುಂದಿನ
ದಿನಗಳಲ್ಲಿ ಜಿಲ್ಲೆಯಲ್ಲಿ ದ್ವಿದಳ ಧಾನ್ಯ ಬೆಳೆ ಹೆಚ್ಚುವ
ಸಂಭವ ಇದೆ ಎಂದ ಅವರು ಬೀಜ ಲಭ್ಯತೆ ಹೆಚ್ಚಿಸಬೇಕಾಗಿದೆ.
ಒಂದೇ ಬೆಳೆಗೆ ಜೋತು ಬೀಳದೆ ನಮ್ಮ ಪೂರ್ವಜರಂತೆ
ಅಂತರ ಬೆಳೆ, ಮಿಶ್ರ ಬೆಳೆಗೆ ಒಲವು ತೋರಬೇಕೆಂದರು.
ಸದಸ್ಯರಾದ ತೇಜಸ್ವಿ ಪಟೇಲ್ ಮಾತನಾಡಿ, ಇಲಾಖೆ ರೈತರಿಗೆ
ಒಂದು ಬೆಳೆ ಬಗ್ಗೆ ಸಂಪೂರ್ಣ ಯೋಜನೆ ಹಾಕಿಕೊಡಬೇಕು.
ಕ್ರಾಪ್ ಪ್ರಾಜೆಕ್ಟ್ ಜೊತೆಗೆ ಬೀಜ, ಬೆಲೆ ಸೇರಿದಂತೆ ‘ಸೀಡ್ ಟು
ಮಾರ್ಕೆಟ್’ ವ್ಯವಸ್ಥೆ ಮಾಡಿದಲ್ಲಿ ರೈತರಿಗೆ ಅನುಕೂಲವಾಗಲಿದೆ
ಎಂದರು.
ಕೃಷಿ ಜಂಟಿ ನಿರ್ದೇಶಕರು, ಕೃಷಿಕರು ಒಂದು ನಿರ್ದಿಷ್ಟ
ಪ್ರಾಜೆಕ್ಟ್ ತಯಾರಿಸಿ ಕೇಂದ್ರ ಸರ್ಕಾರದ ವೆಬ್‍ಸೈಟ್‍ನಲ್ಲಿ
ಅಪ್‍ಲೋಡ್ ಮಾಡಿದಲ್ಲಿ ರೂ.2 ಕೋಟಿವರೆಗೆ ರಿಯಾಯತಿ
ಲಭಿಸಲಿದೆ ಎಂದರು.
ಸದಸ್ಯ ಸುರೇಂದ್ರನಾಯ್ಕ, ಬೆಳೆ ಸುಟ್ಟು, ಫಂಗಸ್ ಇತರೆ
ರೀತಿಯಲ್ಲಿ ನಷ್ಟವಾದರೆ ಪ್ರತಿ ಎಕರೆಗೆ ನೀಡುವ ರೂ.20
ಸಾವಿರ ಮರು ಬಿತ್ತನೆ ಮಾಡಲು ಬೀಜ, ಗೊಬ್ಬರಕ್ಕೂ
ಸಾಕಾಗುವುದಿಲ್ಲ. ಇದನ್ನು ಹೆಚ್ಚಿಸಬೇಕೆಂದರೆ, ಸದಸ್ಯ
ವಿಶ್ವನಾಥ್ ಮೊನ್ನೆ ಬಿದ್ದ ಅಕಾಲಿಕ ಮಳೆಗೆ ಹೊನ್ನಾಳಿಯಲ್ಲಿ
ಸುಮಾರು 4 ರಿಂದ 5 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ
ಬೆಳೆಯಲಾಗಿದ್ದ ಬಿಳಿ ಜೋಳ ಪೂರ್ತಿ ಕಪ್ಪಾಗಿದ್ದು ಹಾಳಾಗಿದೆ. ಈ
ಬಗ್ಗೆ ಸಮೀಕ್ಷೆ ನಡೆಸಿ ಪರಿಹಾರ ಒದಗಿಸಬೇಕೆಂದರು.
ಸದಸ್ಯರಾದ ಮಂಜುನಾಥ್ ಮಾತನಾಡಿ, ಜಗಳೂರು ಹಿಂದುಳಿದ
ತಾಲ್ಲೂಕಾಗಿದ್ದು ಇಲ್ಲಿ ಮೆಕ್ಕೆಜೋಳ ಮುಖ್ಯ ಬೆಳೆ. ತೋಟಗಾರಿಕೆ
ಬೆಳೆ ಬೆಳೆಯಲು ಹೋಗಿ ತಾವೇ ಸ್ವತಃ
ಕೈಸುಟ್ಟುಕೊಂಡಿದ್ದೇನೆ. ತೋಟಗಾರಿಕೆಗೆ ಇಲ್ಲಿನ ವಾತಾವರಣ
ಪೂರಕವಾಗಿಲ್ಲ ಎಂದರು.
ಜಿ.ಪಂ. ಸಿಇಓ ಡಾ.ವಿಜಯ ಮಹಾಂತೇಶ ದಾನಮ್ಮನವರ್
ಮಾತನಾಡಿ, ಹಿಂದೆಯೂ ಮೆಕ್ಕೆಜೋಳದ ಬಗ್ಗೆ ಚರ್ಚೆ ನಡೆದಿದೆ.
ಮೆಕ್ಕೆಜೋಳವನ್ನು ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ
ಖರೀದಿ ಮತ್ತು ಪಿಡಿಎಸ್ ವ್ಯವಸ್ಥೆಗೆ ಒಳಪಡಿಸುವ ಕುರಿತು
ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದರು.
ಸದಸ್ಯೆ ಮಂಜುಳ ಟಿ.ವಿ.ರಾಜು ಮಾತನಾಡಿ, ತಾಲ್ಲೂಕು ಮಟ್ಟದ
ತೋಟಗಾರಿಕೆ ಅಧಿಕಾರಿಗಳು ಮೀಟಿಂಗ್ ಇನ್ನಿತರೆ ಕಚೇರಿ
ಕೆಲಸದಲ್ಲಿ ಅತಿ ಹೆಚ್ಚಾಗಿ ನಿರತರಾಗಿರುತ್ತಾರೆ. ಆದರೆ ಅವರ
ಅವಶ್ಯಕತೆ ರೈತರ ಕ್ಷೇತ್ರದಲ್ಲಿ ಹೆಚ್ಚಾಗಿದೆ. ತಾವೇ ತಮ್ಮ
ತೋಟಕ್ಕೆ ಕರೆಸಲು ಕಷ್ಟಪಡುತ್ತಿದ್ದು, ಸಹಾಯಕ
ನಿರ್ದೇಶಕರು ರೈತರ ಬಳಿಗೆ ಹೋಗಲು ಅವಕಾಶ
ಮಾಡಿಕೊಡಬೇಕು. ತಮ್ಮದೇ ತೋಟದಲ್ಲಿ ಅಡಿಕೆ ಗೊಳ್ಳು
ಉದುರುತ್ತಿದೆ. ಮಣ್ಣು ಆರೋಗ್ಯ ಚೀಟಿ ಮಾಡಿಸುವ ಬಗ್ಗೆ
ರೈತರಿಗೆ ಸಮರ್ಪಕ ಮಾಹಿತಿ ಇಲ್ಲ. ಆದ ಕಾರಣ
ಅಧಿಕಾರಿ/ಸಿಬ್ಬಂದಿಗಳು ರೈತರ ತೋಟಗಳಿಗೆ ಭೇಟಿ ನೀಡಿ ಪರಿಶೀಲಿಸಿ
ಸಮಸ್ಯೆಗೆ ಪರಿಹಾರ ಒದಗಿಸಬೇಕೆಂದರೆ, ಸದಸ್ಯರಾದ ತೇಜಸ್ವಿ
ಪಟೇಲ್ ಮತ್ತಿತರರು ತಾಲ್ಲೂಕು ಮಟ್ಟದಲ್ಲಿ ಮಣ್ಣು
ಆರೋಗ್ಯ ಕೇಂದ್ರದ ಅವಶ್ಯಕತೆ ಇದ್ದು,
ತಾಲ್ಲೂಕುಗಳಲ್ಲಿ ತರೆಯಲು ಸೂಕ್ತ ವ್ಯವಸ್ಥೆ
ಮಾಡುವಂತೆ ಕೋರಿದರು.
ಸಿಇಓ ಮಾತನಾಡಿ, ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ
ಜರುಗಿಸಲಾಗುವುದು. ಹಾಗೂ ಪಿಆರ್‍ಇಡಿ ವಿಭಾಗದ
ಕಾಮಗಾರಿಗಳನ್ನು ಆದಷ್ಟು ಶೀಘ್ರದಲ್ಲಿ ಮುಗಿಸಬೇಕು.
ಹಾಗೂ ಸದಸ್ಯ ಹದಡಿ ನಿಂಗಪ್ಪನವರು ಹೇಳಿದ ಜವಳಘಟ್ಟದ
ಸ್ಕೂಲ್ ಕಾಮಗಾರಿ ಬದಲಾವಣೆ ಬಗ್ಗೆ ತಾವು ಶಿಕ್ಷಣ ಇಲಾಖೆ ಸಿಪಿಐ
ರವರೊಂದಿಗೆ ಮಾತನಾಡುವುದಾಗಿ ತಿಳಿಸಿದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶಾಂತಕುಮಾರಿ,
ಚಿಕ್ಕಮ್ಮನಟ್ಟಿಯ ಅಂಗನವಾಡಿಯಲ್ಲಿ ನೀರು ನುಗ್ಗುತ್ತಿದ್ದು
ಇದನ್ನು ಸರಿಸಪಡಿಸುವಂತೆ ಇಓ ರವರಿಗೆ ಸೂಚಿಸಿದರು.
ಸದಸ್ಯ ವಿಶ್ವನಾಥ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ
ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಅನೇಕ
ಯೋಜನೆಗಳಿದ್ದು ಜನರಿಗೆ ಇದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲವಾಗಿ
ಜನರಿಗೆ ತಲುಪುತ್ತಿಲ್ಲ. ತಮ್ಮ ತಾಲ್ಲೂಕಿನಲ್ಲಿ ಅನೇಕ ಬಾಲ್ಯ
ವಿವಾಹಗಳಾಗಿದ್ದು ಬಾಲ್ಯ ವಿವಾಹ ತಡೆ ಕುರಿತು ಸರಿಯಾದ ಜಾಗೃತಿ
ಇಲ್ಲವಾಗಿ ಜಾಗೃತಿ ಮೂಡಿಸುವ ಕೆಲಸ ಆಗಬೇಕು ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ
ಉಪನಿರ್ದೇಶಕ ವಿಜಯಕುಮಾರ್ ಮಾತನಾಡಿ, ಬಾಲ್ಯ ವಿವಾಹ
ತಡೆಯಲು ಸಕ್ರಿಯವಾಗಿ ಎಲ್ಲ ತಾಲ್ಲೂಕುಗಳಲ್ಲಿ ಕೆಲಸ
ಮಾಡಲಾಗುತ್ತಿದೆ. ಬಾಲ್ಯ ವಿವಾಹವಾದ ನಂತರೂ ಪತ್ತೆ ಹಚ್ಚಿ
ಪ್ರಕರಣ ದಾಖಲಿಸಲಾಗಿದೆ. ಬಾಲ್ಯ ವಿವಾಹ ತಡೆಯಲು
ಸ್ಥಳೀಯರೂ ಕೂಡ ಸಹಕರಿಸಬೇಕು ಎಂದರು.
ಸಿಇಓ ಪ್ರತಿಕ್ರಿಯಿಸಿ, ಅಂಗನವಾಡಿ ಮತ್ತು ಶಾಲೆಯಿಂದ
ಹೊರಗುಳಿದ ಮಕ್ಕಳ ಸಮೀಕ್ಷೆ ನಡೆಸಲಾಗುತ್ತಿದೆ.
ಅಂಗನವಾಡಿ ಸೇರಿದಂತೆ ಎಲ್ಲೆಡೆ ಆನ್‍ಲೈನ್ ವ್ಯವಸ್ಥೆ ಮಾಡಲಾಗಿದೆ.
ಹಾಗೂ ಸದಸ್ಯರು ಹೇಳಿದಂತೆ ಅಂಗನವಾಡಿ
ಕಾರ್ಯಕರ್ತೆಯರಿಗೆ ಮೀಟಿಂಗ್‍ಗಳನ್ನು ಕಡಿಮೆ
ಮಾಡಲಾಗುವುದು. ಮಕ್ಕಳ ಸಹಾಯವಾಣಿ 1098
ಸಂಖ್ಯೆಯನ್ನು ಗ್ರಾ.ಪಂ ಕಚೇರಿ ಕಟ್ಟಡಗಳು ಇತರೆಡೆ
ಬರೆಸಿ ಹಾಗೂ ಮಹಿಳಾ ಮತ್ತು ಮಕ್ಕಳ ಅಬಿವೃದ್ದಿ ಇಲಾಖೆಯಿಂದ
ಸಹ ಜಾಗೃತಿ ಮೂಡಿಸಲಾಗುವುದು ಎಂದರು.
ಗ್ರಾ.ಪಂ ನಿರ್ವಹಣೆ ಟೆಂಡರ್ : ಸದಸ್ಯರಾದ ನಟರಾಜ್ ಮಾತನಾಡಿ,
ಗ್ರಾ.ಪಂ ಗಳಿಗೆ 15 ನೇ ಹಣಕಾಸು ಯೋಜನೆಯಡಿ ಸಾಕಷ್ಟು
ಅನುದಾನ ಬರುತ್ತಿದೆ. ಇದನ್ನು
ದುರುಪಯೋಗಪಡಿಸುತ್ತಿರುವುದು ಸಹ ಎಲ್ಲರಿಗೆ ತಿಳಿದಿದೆ.
ಇದರ ನಿರ್ವಹಣೆಗೆ ಟೆಂಡರ್ ಕರೆದಿಲ್ಲ. ಈ ಹಣಕಾಸು ನಿರ್ವಹಣೆಗೆ
ಟೆಂಡರ್ ಕರೆಯಬೇಕು. ಈ ಬಗ್ಗೆ ಜಿ.ಪಂ ನಿಂದ
ಆದೇಶಿಸಬೇಕೆಂದರು. ಬೇರೆ ಜಿಲ್ಲೆಗಳಲ್ಲಿ ಹಣಕಾಸು ನಿರ್ವಹಣೆಗೆ
ಪ್ರತ್ಯೇಕ ಟೆಂಡರ್ ಕರೆದಿದ್ದು, ನಮ್ಮ ಜಿಲ್ಲೆಯಲ್ಲಿಯೂ
ಕರೆಯಬೇಕು. ಹಣ ದುರುಪಯೋಗ ನಿಲ್ಲಿಸಬೇಕೆಂದರು.
ಸದಸ್ಯರಾದ ಸುರೇಂದ್ರನಾಯ್ಕ, ಗ್ರಾಮದಲ್ಲಿ ಸುಮಾರು
8 ರಿಂದ 10 ಬೋರ್ ಪಂಪ್‍ಗಳಿದ್ದು ಅದರ ನಿರ್ವಹಣೆಗೆ ಟೆಂಡರ್
ಕರೆಯಬೇಕು ಎಂದರು.
ಸಿಇಓ ಪ್ರತಿಕ್ರಿಯಿಸಿ, ಪಂಚಾಯತ್ ರಾಜ್ ವಿಕೇಂದ್ರೀಕರಣ
ವ್ಯವಸ್ಥೆಯಲ್ಲಿ ಗ್ರಾ.ಪಂಗಳಿಗೆ ಪ್ರಮಾಧಿಕಾರ
ನೀಡಲಾಗಿದ್ದು, ಜಿ.ಪಂ ಹಣಕಾಸು ನಿರ್ವಹಣೆ ಕುರಿತು ಟೆಂಡರ್
ಕರೆಯುವಂತೆ ಆದೇಶಿಸುವ ಬಗ್ಗೆ ಚರ್ಚಿಸಿ
ತೀರ್ಮಾನಿಸಲಾಗುವುದು. ಈ ಹಣಕಾಸಿನಲ್ಲಿ ಶೇ.25 ಕುಡಿಯುವ
ನೀರು, ಶೇ.25 ಸ್ವಚ್ಚತೆ ಈ ರೀತಿ ವರ್ಗೀಕರಣ ಇದ್ದು, ಈ ಬಗ್ಗೆ
ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಸದಸ್ಯ ತೇಜಸ್ವಿ ಪಟೇಲ್, ನೇರ ನಿರ್ವಹಣೆ ಮತ್ತು
ಟೆಂಡರ್ ಎರಡೂ ಕಳಪೆಯಾಗಿರುವುದನ್ನು ಸಹ
ನೋಡಿದ್ದು, ನಿರ್ವಹಣೆ ವಿಧಾನ ಹೇಗಿರಬೇಕು ಎಂಬುದಕ್ಕಿಂತ
ಸಮರ್ಪಕ ಫಲಿತಾಂಶದ ಬಗ್ಗೆ ಗಮನಹರಿಸಬೇಕು ಎಂದರು.
ಸದಸ್ಯೆ ಮಂಜುಳಾ ಟಿ ವಿ ರಾಜು, ಗ್ರಾ.ಪಂ 15 ನೇ ಹಣಕಾಸಿನಲ್ಲಿ
ಸದಸ್ಯರು ಹಣ ಹಂಚಿಕೆ ಮಾಡಿಕೊಳ್ಳುತ್ತಿದ್ದು, ಸಿಇಓ ಈ ಬಗ್ಗೆ
ಗ್ರಾ.ಪಂ ವಾರು ಪರಿಶೀಲನೆ ನಡೆಸಿ ಕ್ರಮ ಕೈಗೊಂಡು ಹಣ
ಸದ್ಬಳಕೆ ಆಗುವಂತೆ ಮಾಡಬೇಕೆಂದರು.
ಸದಸ್ಯ ಓಬಳಪ್ಪ ಮಾತನಾಡಿ, ಗ್ರಾ.ಪಂ ಯಲ್ಲಿ
ಪರಮಾಧಿಕಾರ ಇದೆ. ಜೊತೆಗೆ ಹಣ ಕೂಡ ದುರುಪಯೋಗ
ಆಗುತ್ತಿರುವುದು ಎಲ್ಲರಿಗೆ ತಿಳಿದ ವಿಷಯ. ಇದಕ್ಕೆ ಕಡಿವಾಣ
ಹಾಕಲು ಸಿಇಓ ಸಲಹೆ ನೀಡಬೇಕೆಂದರು.
ಸದಸ್ಯೆ ಸವಿತಾ ಮಾತನಾಡಿ ತಮ್ಮ ಕ್ಷೇತ್ರ ಜಗಳೂರಿನಲ್ಲಿ
ಕುಡಿಯುವ ನೀರಿಗೆ ತುಂಬಾ ಸಮಸ್ಯೆ ಇದೆ. ಅದರಲ್ಲಿ
ಮುಸ್ಟೂರು, ಹನುಮಂತಾಪುರ ಇತರೆ ಗ್ರಾ.ಪಂ
ಯವರು 6 ತಿಂಗಳಲ್ಲಿ 56 ಲಕ್ಷ ಹಣ ದುರುಪಯೋಗ
ಮಾಡಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮ ಆಗಬೇಕೆಂದರು.
ಸದಸ್ಯ ವಾಗೀಶ್‍ಸ್ವಾಮಿ, 15 ಹಣಕಾಸು ಬಂದಿರೋದೇ ತಪ್ಪು
ಎನ್ನುವಂತಾಗಿದ್ದು, ಅವೈಜ್ಞಾನಿಕವಾಗಿ ಕೆಲಸಗಳು ಆಗುತ್ತಿವೆ.
ಈ ಕುರಿತು ಬಿಸಿ ಮುಟ್ಟಿಸುವ ಕೆಲಸ ಆಗಬೇಕು ಎಂದರೆ ಸದಸ್ಯ
ಸುರೇಂದ್ರನಾಯ್ಕ ಇನ್ನು ಒಂದು ತಿಂಗಳಲ್ಲಿ ಈ ಬಗ್ಗೆ ಸೂಕ್ತ
ಕ್ರಮದ ಫಲಿತಾಂಶ ತಮಗೆ ಲಭಿಸಬೇಕೆಂದರು.
ಸದಸ್ಯ ತೇಜಸ್ವಿ ಪಟೇಲ್, ಜಿ.ಪಂ ಸದಸ್ಯರು ಆಕ್ಷೇಪ
ವ್ಯಕ್ತಪಡಿಸಿರುವ ಎಲ್ಲ ಗ್ರಾ.ಪಂ ವಾರು ಸಿಇಓ ಭೇಟಿ ನೀಡಿ ಎಲ್ಲ
ಖರ್ಚುಗಳನ್ನು ಪರಿಶೀಲನೆ ಮಾಡಿದರೆ ಒಳಿತು ಎಂದರು.
ಸಿಇಓ ಪ್ರತಿಕ್ರಿಯಸಿ, ಕಾಯ್ದೆ ಉಲ್ಲಂಘನೆ ಯಾರೇ
ಮಾಡಿದ್ದರೂ ಕ್ರಮ ವಹಿಸಲಾಗುವುದು. ಸೋಷಿಯಲ್
ಆಡಿಟ್‍ನಲ್ಲಿ ವರದಿಯಾಗಿರುತ್ತದೆ. ಜೊತೆಗೆ ತಮ್ಮ ಸಲಹೆ
ಮೇರೆಗೆ ಪರಿಶೀಲನೆ ನಡೆಸಲಾಗುವುದು. ಪ್ರಾಥಮಿಕವಾಗಿ
ತಾಲ್ಲೂಕಿನ ಇಓ ನನಗೆ ವರದಿ ನೀಡಿದ ನಂತರ ಕ್ರಮ
ಕೈಗೊಳ್ಳುತ್ತೇನೆ ಎಂದರು.
ಕೊನೆಯ ಸಾಮಾನ್ಯ ಸಭೆ..
ಇದು ಜಿ.ಪಂ ನ ಈ ಅವಧಿಯ ಕೊನೆಯ ಸಾಮಾನ್ಯ
ಸಭೆಯಾಗಿದ್ದು, ಎಲ್ಲ ಸದಸ್ಯರು ಕೊನೆಯ ಸಾಮಾನ್ಯ
ಸಭೆಯ ಪ್ರಸ್ತಾಪ ಮಾಡಿದರು. ಕೊನೆಯ ಸಾಮಾನ್ಯ
ಸಭೆಯನ್ನಾದರೂ ಅಜೆಂಡಾ ಪ್ರಕಾರ ಮಾಡಬೇಕೆಂದು
ಹಲವು ಸದಸ್ಯರು ಒತ್ತಾಯಿಸಿದರು. ಸದಸ್ಯರ ಹಾಸ್ಯ ಚಟಾಕಿ
ಮತ್ತು ತಿಳಿ ವಾತಾವರಣ ಸಭೆಯಲ್ಲಿ ಕಂಡುಬಂತು.
ಸಭೆಯಲ್ಲಿ ಉಪಾಧ್ಯಕ್ಷೆ ಸಾಕಮ್ಮ ಗಂಗಾಧರನಾಯ್ಕ,
ಕೃಷಿ ಮತ್ತು ಕೈಗಾರಿಕೆ ಸಮಿತಿ ಅಧ್ಯಕ್ಷ ಫಕೀರಪ್ಪ, ಶಿಕ್ಷಣ
ಮತ್ತು ಆರೋಗ್ಯ ಸಮಿತಿ ಅಧ್ಯಕ್ಷ ವೀರಶೇಖರಪ್ಪ,
ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಲೋಕೇಶ್, ಸದಸ್ಯರು,
ತಾ.ಪಂ ಅಧ್ಯಕ್ಷರು, ಜಿ.ಪಂ ಉಪ ಕಾರ್ಯದರ್ಶಿ ಆನಂದ್, ಜಿಲ್ಲಾ
ಮಟ್ಟದ ಅಧಿಕಾರಿಗಳು ಹಾಜರಿದ್ದರು.