ದಾವಣಗೆರೆ: ಮಾ.10
ಜನರು ಯಾವುದೇ ಭಯವಿಲ್ಲದೇ ನಿರಾತಂಕವಾಗಿ ಕೋವಿಡ್
ಲಸಿಕೆಯನ್ನು ಪಡೆಯುವಂತೆ ಮುಂದಾಗಲು ಅಧಿಕಾರಿಗಳು
ಜಿಲ್ಲೆಯಲ್ಲಿ ವಿಶೇಷ ಅಭಿಯಾನ ಕೈಗೊಂಡು ಲಸಿಕೆಯ ಗುರಿ
ಸಾಧಿಸಬೇಕೆಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಸಂಬಂಧಿಸಿದ
ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಕೋವಿಡ್ -19 ಟೆಸ್ಟಿಂಗ್ ಮತ್ತು ಕೋವಿಡ್
ಲಸಿಕಾಕರಣದ ಬಗ್ಗೆ ಕ್ರಮಗಳನ್ನು ಕೈಗೊಳ್ಳುವ ಸಲುವಾಗಿ
ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ
ಕಾರ್ಯಪಡೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು
ಮಾತನಾಡಿದರು.
ಕೋವಿಡ್ ಲಸಿಕಾರಣದಲ್ಲಿ ಜಿಲ್ಲೆಯ ಪ್ರಗತಿ ಕುಂಠಿತವಾಗಿದೆ.
ಶೇ.1 ಕ್ಕಿ ಕಡಿಮೆ ಪ್ರಗತಿಯಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದ
ಮುಖ್ಯ ಕಾರ್ಯದರ್ಶಿಗಳು ಮತ್ತು ಅಪರ ಮುಖ್ಯ
ಕಾರ್ಯದರ್ಶಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ಕೋವಿಡ್
ಪರೀಕ್ಷೆ ಮತ್ತು ಲಸಿಕಾಕರಣಕ್ಕೆ ಸಂಬಂಧಿಸಿದಂತೆ ಅನೇಕ ಸಲಹೆ
ಸೂಚನೆಗಳನ್ನು ನೀಡಿದ್ದಾರೆ. ಪ್ರತಿ ದಿನ ಕೋವಿಡ್ ಪರೀಕ್ಷೆಗೆ
ಜಿಲ್ಲೆಗೆ ನೀಡಲಾದ ನಿಗದಿತ ಗುರಿಯನ್ನು ಸಾಧಿಸಬೇಕಿದೆ.
ಆರೋಗ್ಯ ಕಾರ್ಯಕರ್ತರು ಮತ್ತು ಫ್ರಂಟ್‍ಲೈನ್
ವರ್ಕರ್ಸ್ 2ನೇ ಡೋಸ್‍ನ್ನು ತಪ್ಪದೇ ತೆಗೆದುಕೊಳ್ಳಬೇಕು
ಎಂದರು.
ಕೋವಿಡ್ ಲಸಿಕಾಕರಣವನ್ನು ಯುದ್ದದ ರೀತಿಯಲ್ಲಿ ವಿಶೇಷ
ಅಭಿಯಾನ ಕೈಗೊಂಡು ಯಶಸ್ವಿಗೊಳಿಸಬೇಕು. ಗ್ರಾಮ
ಸಹಾಯಕರು, ನೀರಗಂಟಿಯಿಂದ ಹಿಡಿದು ಡಿಸಿ ವರೆಗೆ ಶ್ರಮ ವಹಿಸಿ
ಲಸಿಕಾಕರಣವನ್ನು ಯಶಸ್ವಿಗೊಳಿಸಬೇಕು. ಕೋವಿಡ್ ಬಂದಾಗ
ಯಾವ ರೀತಿಯಲ್ಲಿ ಕ್ಷೇತ್ರ ಮಟ್ಟದಲ್ಲಿ ಅರಿವು ಮೂಡಿಸಿ
ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಗಿತ್ತೋ ಅದೇ
ರೀತಿಯಲ್ಲಿ ಆರೋಗ್ಯ ಇಲಾಖೆ ಜೊತೆ ಆರ್‍ಡಿಪಿಆರ್, ಕಂದಾಯ,
ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಸೇರಿದಂತೆ
ಎಲ್ಲರೂ ಸೇರಿ ಕೋವಿಡ್ ಲಸಿಕಾಕರಣದಲ್ಲಿ ಜನರು ಹೆಚ್ಚಿನ
ಸಂಖ್ಯೆಯಲ್ಲಿ ಭಾಗವಹಿಸಲು ಅರಿವು ಮೂಡಿಸಿ, ಮನವೊಲಿಸಬೇಕು
ಎಂದರು.
ಲಸಿಕಾಕರಣದ ಪ್ರಗತಿಗೆ ಎಸಿ, ಇಓ, ತಹಶೀಲ್ದಾರ್, ಟಿಹೆಚ್‍ಓ
ಸೇರಿದಂತೆ ಸಂಬಂಧಿಸಿದ ಎಲ್ಲ ಅಧಿಕಾರಿಗಳು
ಜವಾಬ್ದಾರರಾಗಿರುತ್ತಾರೆ. ಕೊರೊನಾ ಪರೀಕ್ಷೆ ಮಾಡಿಸುವುದು
ತುಂಬಾ ಮುಖ್ಯವಾಗಿದ್ದು ದಾವಣಗೆರೆ ಜಿಲ್ಲೆಗೆ ದಿನಕ್ಕೆ 2863 ಗುರಿ
ನೀಡಲಾಗಿದೆ. ಈ ಗುರಿಯ ಪ್ರಗತಿ ಕುರಿತಾಗಿ ಪ್ರತಿ ದಿನ
ಅಧಿಕಾರಿಗಳು ಸಿಇಓ ಗೆ ವರದಿ ನೀಡಬೇಕು.
ಐಎಲ್‍ಯ ಮತ್ತು ಎಸ್‍ಎಆರ್‍ಐ(ಸಿವಿಯರ್ ಅಕ್ಯೂಟ್ ರೆಸ್ಪಿರೇಟರಿ
ಇಲ್‍ನೆಸ್) ಪರೀಕ್ಷಿಸಿ ಸ್ವಾಬ್ ಪರೀಕ್ಷೆಗೆ ಕಳುಹಿಸಬೇಕು ಹಾಗೂ
ಸಮರ್ಪಕವಾಗಿ ಡಾಟಾ ಎಂಟ್ರಿ ಮಾಡಬೇಕು. ಪಿಹೆಚ್‍ಸಿ ಗೆ 15
ಮತ್ತು ಸಿಹೆಚ್‍ಸಿ ಗೆ 100 ಕೊರೊನಾ ಪರೀಕ್ಷೆ ಗುರಿ ನೀಡಲಾಗಿದ್ದು
ವೈದ್ಯಾಧಿಕಾರಿಗಳು ಈ ಗುರಿಯನ್ನು ತಲುಪುವಲ್ಲಿ ಕೊರೊನಾ
ವೇಳೆ ಇದ್ದ ಹುಮ್ಮಸ್ಸಿನಿಂದ ಕೆಲಸ ಮಾಡಬೇಕು.
ಯುಪಿಹೆಚ್‍ಸಿ ಮತ್ತು ಪಿಹೆಚ್‍ಸಿಯಲ್ಲಿ ಪ್ರತಿ ದಿನ 100 ಜನರ, ಸಿಹೆಚ್‍ಸಿ
ಯಲ್ಲಿ 150 ಖಾಸಗಿ ಆಸ್ಪತ್ರೆಗಳಲ್ಲಿ 200, ಜಿಲ್ಲಾಸ್ಪತ್ರೆಯಲ್ಲಿ 300
ಮತ್ತು ಮೆಡಿಕಲ್ ಕಾಲೇಜುಗಳಲ್ಲಿ 500 ರಿಂದ 1000
ಲಸಿಕೆಯನ್ನು ನೀಡಬೇಕು.
ಪ್ರತಿ ದಿನ ತಹಶೀಲ್ದಾರರು ಸಭೆ ಕರೆದು ತಾಲ್ಲೂಕು
ವೈದ್ಯಾಧಿಕಾರಿಗಳು ಸ್ಥಳೀಯ ಸಂಸ್ಥೆಗಳ
ಮುಖ್ಯಾಧಿಕಾರಿಗಳೊಂದಿಗೆ ಚರ್ಚಿಸಿ, ಕೊರೊನಾ ಟೆಸ್ಟ್ ಮತ್ತು
ಲಸಿಕಾಕರಣಕ್ಕೆ ಜನರು ಮುಂದಾಗಲು ಐಇಸಿ ಚಟುವಟಿಕೆಗಳನ್ನು
ಪರಿಣಾಮಕಾರಿಯಾಗಿ ಕೈಗೊಂಡು ಜನರು ನಿರಾತಂಕವಾಗಿ ಲಸಿಕೆ
ಹಾಕಿಸಿಕೊಳ್ಳಲು ಮುಂದೆ ಬರುವಂತೆ ಕ್ರಮ ವಹಿಸಬೇಕು
ಎಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆಯಲ್ಲಿ ಪಾಲ್ಗೊಂಡ
ತಹಶೀಲ್ದಾರ್ ಮತ್ತು ಇತರೆ ಅಧಿಕಾರಿಗಳಿಗೆ ಸೂಚನೆ
ನೀಡಿದರು.
ಜಿಲ್ಲೆಯಲ್ಲಿ 60 ವರ್ಷ ಮೇಲ್ಪಟ್ಟವರು ಶೇ.7.5 ರಷ್ಟು ಅಂದರೆ
ಸುಮಾರು 1.6 ಲಕ್ಷ ಜನರನ್ನು ಗುರಿಯಾಗಿಸಿಕೊಂಡು ಲಸಿಕೆ
ನೀಡಲು ವ್ಯಾಪಕ ಪ್ರಚಾರ ಮಾಡಿ, ಯಾವುದೇ
ಭಯಕ್ಕೀಡಾಗದೇ ಲಸಿಕೆಗೆ ಮುಂದಾಗುವಂತೆ ಅರಿವು
ಮೂಡಿಸಬೇಕು. ಇಡೀ ದೇಶ ಕೊರೊನಾದಿಂದ ರಕ್ಷಣೆ
ಪಡೆಯಲು ಲಸಿಕೆ ಹಾಕಿಸಿಕೊಳ್ಳಬೇಕು. ಕೇವಲ ಆಧಾರ್ ಕಾರ್ಡ್
ತೆಗೆದುಕೊಂಡು ಬಂದು ಆಸ್ಪತ್ರೆಯಲ್ಲಿ ಲಸಿಕೆ
ಹಾಕಿಸಿಕೊಳ್ಳಬಹುದೆಂದು ತಿಳಿಸಿ ಹೇಳಬೇಕು ಎಂದರು.
ಟೆಸ್ಟಿಂಗ್ ಮತ್ತು ಲಸಿಕಾಕರಣಕ್ಕೆ ಗ್ರಾಮೀಣ ಮತ್ತು
ನಗರ ಪ್ರದೇಶಗಳಿಗೆ ಪ್ರತ್ಯೇಕ ಮೈಕ್ರೋ ಪ್ಲಾನ್
ತಯಾರಿಸಿ ಗುರಿ ಸಾಧಿಸಬೇಕು. ಜನ ನಿಬಿಡ ಪ್ರದೇಶದಲ್ಲಿ
ಟೆಸ್ಟಿಂಗ್ ಹೆಚ್ಚಿಸಬೇಕು. ಕಲ್ಯಾಣ ಮಂದಿರಗಳು,
ಹೋಟೆಲ್‍ಗಳಲ್ಲಿ ಟೆಸ್ಟಿಂಗ್ ಹೆಚ್ಚಿಸಬೇಕು. ಹಾಗೂ ಹಳೇ
ದಾವಣಗೆರೆ ಭಾಗದಲ್ಲಿ ಟೆಸ್ಟಿಂಗ್ ಹೆಚ್ಚಿಸಲು ಕ್ರಮ ವಹಿಸಬೇಕು
ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೊರೊನಾ ವೇಳೆ ರಚಿಸಲಾಗಿದ್ದ ನಗರ ಮತ್ತು ಗ್ರಾಮೀಣ
ಮಟ್ಟದ ಟಾಸ್ಕ್‍ಫೋರ್ಸ್ ಸಮಿತಿಗಳನ್ನು ಚುರುಕುಗೊಳಿಸಿ
ಲಸಿಕಾಕರಣ ಯಶಸ್ವಿಗೊಳಸಿಲು ಸಕ್ರಿಯಗೊಳಿಸಬೇಕು.
ಬಿಎಲ್‍ಓ ಗಳಿಂದ 60 ವರ್ಷ ಮೇಲ್ಪಟ್ಟವರ ಪಟ್ಟಿ ಪಡೆದು ಲಸಿಕೆಗೆ
ಅವರ ಮನವೊಲಿಸಬೇಕು. ಒಂದು ವಾರದ ಒಳಗೆ
ತಹಶೀಲ್ದಾರ ನೇತೃತ್ವದ ತಂಡಗಳು ಉತ್ತಮ
ಪ್ರಗತಿಯನ್ನು ತೋರಬೇಕು. ಮುಂದಿನ ವಾರ ಮತ್ತೆ
ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ಕರೆಯಲಾಗುವುದು.
ರಜಾ ದಿನಗಳು ಸೇರಿದಂತೆ ಎಲ್ಲ ದಿನಗಳು ಆಸ್ಪತ್ರೆಗಳಲ್ಲಿ
ಲಸಿಕೆ ನೀಡಲು ಕ್ರಮ ವಹಿಸಬೇಕು. ಕೇಬಲ್ ಟಿವಿಗಳ ಮೂಲಕ,
ಡಂಗೂರ ಹೊಡೆಸುವ ಮೂಲಕ ಲಸಿಕೆ ಬಗ್ಗೆ ಅರಿವು
ಮೂಡಿಸಬೇಕು. ಜೊತೆಗೆ ಆಶಾ, ಅಂಗನವಾಡಿ ಮತ್ತು ಎಎನ್‍ಎಂ
ಕಾರ್ಯಕರ್ತೆಯರು ಮನೆ ಮನೆ ಭೇಟಿ ವೇಳೆ ಲಸಿಕೆ ಬಗ್ಗೆ
ತಿಳಿಸಿ ಹೇಳಬೇಕು ಎಂದರು.
ಸಿಇಓ ಡಾ.ವಿಜಯ ಮಹಾಂತೇಶ ಬಿ ದಾನಮ್ಮನವರ ಮಾತನಾಡಿ,
ಲಭ್ಯವಿರುವ ಹಿರಿಯ ನಾಗರೀಕರ ಪಟ್ಟಿಯನ್ನು ಪರಿಶೀಲಿಸಿ
ಅವರನ್ನು ಸರ್ಕಾರಿ ವಾಹನಗಳಲ್ಲಿ ಲಸಿಕಾ ಕೇಂದ್ರಕ್ಕೆ
ಕರೆತಂದು ಲಸಿಕೆ ನೀಡಬಹುದು. ಹಾಗೂ ಪ್ರಸ್ತುತ ಶಾಲೆ ಬಿಟ್ಟ
ಮಕ್ಕಳ ಸರ್ವೇ ಕಾರ್ಯ ಜಿಲ್ಲೆಯಾದ್ಯಂತ
ನಡೆಯುತ್ತಿದ್ದು ಈ ವೇಳೆ ಕಾರ್ಯಕರ್ತೆಯರು
ಲಸಿಕಾಕರಣದ ಬಗ್ಗೆಯೂ ಅರಿವು ಮೂಡಿಸುವ ಕಾರ್ಯ
ಮಾಡಬೇಕೆಂದರು.
ಮೂರನೇ ಹಂತದ ಲಸಿಕಾಕರಣ : ಜಿಲ್ಲೆಯಲ್ಲಿ ಮಾರ್ಚ್ 1 ರಿಂದ
ಮೂರನೇ ಹಂತದ ಕೋವಿಡ್ 19 ಲಸಿಕಾಕರಣವನ್ನು
ಹಮ್ಮಿಕೊಳ್ಳಲಾಗಿದ್ದು ಎಲ್ಲಾ ತಾಲ್ಲೂಕು ಸರ್ಕಾರಿ
ಆಸ್ಪತ್ರೆಗಳಲ್ಲಿ ಮತ್ತು ಮಹಿಳಾ ಮತ್ತು ಮಕ್ಕಳ
ಆಸ್ಪತ್ರೆಯಲ್ಲಿ ಸೋಮವಾರದಿಂದ ಶನಿವಾರದವರೆಗೆ ಹಾಗೂ
ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸೋಮವಾರ,
ಬುಧವಾರ ಶುಕ್ರವಾರಗಳಂದು ಉಚಿತವಾಗಿ ಅರ್ಹ
ಫಲಾನುಭವಿಗಳಾದ 45 ರಿಂದ 59 ವರ್ಷದವರೆಗಿನ ಇತರೆ
ಖಾಯಿಲೆಯಿಂದ ಬಳಲುತ್ತಿರುವ, 60 ವರ್ಷ
ಮೇಲ್ಪಟ್ಟಿರುವವರು, ಆರೋಗ್ಯ ಮತ್ತು ಮುಂಚೂಣಿ
ಕಾರ್ಯಕರ್ತರಿಗೆ ಕೋವಿಡ್ 19 ಲಸಿಕೆಯನ್ನು
ನೀಡಲಾಗುವುದು.
ಹಾಗೂ ಎಪಿಎಆರ್‍ಕೆ ನೋಂದಾಯಿಸಲ್ಪಟ್ಟ ಖಾಸಗಿ ಆಸ್ಪತ್ರೆಗಳಾದ
ವೈದ್ಯಕೀಯ ಮಹಾವಿದ್ಯಾಲ ಆಸ್ಪತ್ರೆಗಳಾದ ಜೆಜೆಎಂಸಿ
ವೈದ್ಯಕೀಯ ವಿದ್ಯಾಲಯ, ಎಸ್‍ಎಸ್‍ಐಎಂಎಸ್ ಆಸ್ಪತ್ರೆ, ಸಿಟಿ ಸೆಂಟ್ರಲ್
ಹಾಗೂ ಆರೈಕೆ ಆಸ್ಪತ್ರೆಗಳಲ್ಲಿ ಪ್ರತಿ ಡೋಸ್‍ಗೆ ರೂ.250
ನ್ನು ಪಾವತಿಸಿ ಮೊದಲನೇ ಹಾಗೂ ಎರಡನೇ ಡೋಸ್
ಲಸಿಕೆಗಳನ್ನು ಪಡೆಯಬೇಕಾಗಿದ್ದು ಸಾರ್ವಜನಿಕರಿಗೆ ಈ ಬಗ್ಗೆ
ಹೆಚ್ಚಿನ ಪ್ರಚಾರ ನೀಡಬೇಕೆಂದರು.
ಸಭೆಯಲ್ಲಿ ಎಸಿ ಮಮತಾ ಹೊಸಗೌಡರ್, ಪಾಲಿಕೆ ಆಯುಕ್ತ
ವಿಶ್ವನಾಥ ಮುದಜ್ಜಿ, ನಗರಾಭಿವೃದ್ದಿ ಕೋಶದ ಯೋಜನಾ
ನಿರ್ದೇಶಕಿ ನಜ್ಮಾ, ಡಿಹೆಚ್‍ಓ ಡಾ.ನಾಗರಾಜ್, ಡಿಎಸ್‍ಓ ಡಾ.ರಾಘವನ್,
ಆರ್‍ಸಿಹೆಚ್‍ಓ ಡಾ.ಮೀನಾಕ್ಷಿ, ದಾವಣಗೆರೆ ತಹಶೀಲ್ದಾರ್ ಗಿರೀಶ್,
ಜಗಳೂರು ತಹಶೀಲ್ದಾರ್ ಡಾ.ನಾಗವೇಣಿ, ಜಿಲ್ಲಾ ಕಾರ್ಯಕ್ರಮ
ಅನುಷ್ಟಾನಾಧಿಕಾರಿಗಳಾದ ಡಾ.ನಟರಾಜ್,ಡಾ.ಗಂಗಾಧರ್,
ಡಾ.ರೇಣುಕಾರಾಧ್ಯ, ತಾಲ್ಲೂಕು ವೈದ್ಯಾಧಿಕಾರಿಗಳು, ಎಸ್‍ಎಸ್‍ಐಎಂಎಸ್
ವೈದ್ಯಾಧಿಕಾರಿಗಳು, ಇತರೆ ಜಿಲ್ಲಾ ಮಟ್ಟದ ಅಧಿಕಾರಿಗಳು
ಹಾಜರಿದ್ದರು.