ಬಳಕೆಗೆ ಸಮಿತಿ ಒತ್ತಾಯ
ಕನ್ನಡ ಸುದ್ದಿ ವಾಹಿನಿಗಳಲ್ಲಿ ಶುದ್ದ ಕನ್ನಡವನ್ನು
ಬಳಸಬೇಕೆಂದು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಜಿಲ್ಲಾ
ಮಟ್ಟದ ಕನ್ನಡ ಜಾಗೃತಿ ಸಮಿತಿ ಸಭೆ ಒತ್ತಾಯಿಸಿತು.
ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಮಹಾಂತೇಶ
ಬೀಳಗಿ ಇವರ ಅಧ್ಯಕ್ಷತೆಯಲ್ಲಿ ಸೋಮವಾರ
ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಕನ್ನಡ ಜಾಗೃತಿ ಸಮಿತಿ
ಸಭೆಯಲ್ಲಿ ಅಧ್ಯಕ್ಷರು ಸೇರಿದಂತೆ ಸದಸ್ಯರು, ಮಾಧ್ಯಮ
ವಾಹಿನಿಗಳಲ್ಲಿ ಇತ್ತೀಚಿನ ದಿನಗಳಲ್ಲಿ ಕನ್ನಡ ಪದಗಳ ಬಳಕೆ
ಸಮರ್ಪಕವಾಗಿ ಆಗುತ್ತಿಲ್ಲ, ಜೊತೆಗೆ ಕಂಗ್ಲಿಷ್ ಬಳಕೆ ಹೆಚ್ಚಾದ
ಹಿನ್ನೆಲೆಯಲ್ಲಿ ಮಕ್ಕಳು ಮತ್ತು ಸಮಾಜದ ಮೇಲೆ
ಒಳ್ಳೆಯ ಪರಿಣಾಮ ಬೀರುತ್ತಿಲ್ಲ. ಆದ ಕಾರಣ ಶುದ್ದ ಕನ್ನಡ
ಭಾಷೆ ಬಳಕೆ ಮಾಡಬೇಕೆಂದು ಒತ್ತಾಯಿಸಿದ ಅವರು ಸಭೆಯ
ಈ ನಿರ್ಣಯವನ್ನು ರಾಜ್ಯ ಸಮಿತಿಗೆ ಶಿಫಾರಸು ಮಾಡಲು ಸಮಿತಿ
ತೀರ್ಮಾನಿಸಿತು.
ಸಮಿತಿಯ ನಾಮನಿರ್ದೇಶಿತ ಸದಸ್ಯರಾದ ಎನ್.ಟಿ.ಎರ್ರಿಸ್ವಾಮಿ
ಮಾತನಾಡಿ, 2020-21 ನ್ನು ಸರ್ಕಾರ ‘ಕನ್ನಡ ಕಾಯಕ
ವರ್ಷ’ವೆಂದು ಘೋಷಿಸಿದ್ದು, ಈಗಾಗಲೇ 5 ತಿಂಗಳು ಕಳೆದು
ಹೋಗಿವೆ. ಇನ್ನುಳಿದ 7 ತಿಂಗಳಲ್ಲಿ ಕನ್ನಡ ಅಭಿವೃದ್ದಿ
ಕಾರ್ಯಕ್ರಮಗಳು, ಕನ್ನಡಕ್ಕೆ ಸಂಬಂಧಿಸಿದ
ಚಟುವಟಿಕೆಗಳು ಚುರುಕುಗೊಳ್ಳಬೇಕು. ಖಾಸಗಿ
ಉದ್ಯಮಗಳಲ್ಲಿ ಕನ್ನಡ ಬಳಕೆ, ಡಾ.ಸರೋಜಿನಿ ಮಹಿಷಿ ವರದಿ
ಪರಿಣಾಮಕಾರಿ ಜಾರಿಯಾಗಬೇಕು. ತ್ರಿಭಾಷಾ ಸೂತ್ರ ಬಳಸಿ
ಬ್ಯಾಂಕುಗಳಲ್ಲಿ ಮತ್ತು ಅಂಚೆ ಕಚೇರಿಯಲ್ಲಿ ಕನ್ನಡ ಬಳಕೆ
ಮತ್ತು ವಿವಿಧ ನಮೂನೆಗಳು ದೊರಕುವಂತಾಗಬೇಕು.
ಹಾಗೂ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಕನ್ನಡ
ಮಾಧ್ಯಮದ ಬಳಕೆ ಸಂಪೂರ್ಣ ಆಗಬೇಕು ಎಂದು ಒತ್ತಾಯಿಸಿದ
ಅವರು ಬ್ಯಾಂಕುಗಳಲ್ಲಿ ಕನ್ನಡ ಬಳಕೆ ಕುರಿತು ಲೀಡ್
ಬ್ಯಾಂಕ್‍ನಲ್ಲಿ ಸಭೆ ನಡಸಿ ಹಕ್ಕೊತ್ತಾಯ ಮಾಡಲಾಗಿದೆ. ಜನವರಿ
ತಿಂಗಳಲ್ಲಿ ಶುದ್ದ ಕನ್ನಡ ಫಲಕ ಬಳಕೆ ಅಭಿಯಾನ
ಕೈಗೊಂಡಿದ್ದು ರೈಲ್ವೆ, ಪಾಲಿಕೆ, ಅಂಚೆ ಕಚೇರಿ, ಇತ್ಯಾದಿ
ಕಚೇರಿಗಳಲ್ಲಿ ಕನ್ನಡ ಭಾಷೆ ನಾಮಫಲಕ ಮತ್ತು
ಕನ್ನಡ ಭಾಷೆ ಬಳಕೆ ಕುರಿತು ಮನವರಿಕೆ
ಮಾಡಲಾಗುತ್ತಿದೆ. ಫೆಬ್ರವರಿ ಮಾಹೆಯಲ್ಲಿ ನ್ಯಾಯಾಲಯದಲ್ಲಿ
ಕನ್ನಡ ಬಳಕೆ ಅಭಿಯಾನ ಆರಂಭಿಸಲಾಗಿದೆ.
ಕನ್ನಡ ಮಾಧ್ಯಮ ಶಾಲೆಗಳು ಮುಚ್ಚುವ
ಪರಿಸ್ಥಿತಿಯಲ್ಲಿದ್ದು ಈ ಕುರಿತು ಜಾಗೃತಿ ಮೂಡಿಸುವ ಕೆಲಸದ
ಜೊತೆಗೆ ಕನ್ನಡ ಸುಗಮ ಸಂಗೀತ, ಜಾನಪದ ಗೀತೆ
ಮತ್ತು ಹಳೆಯ ಚಲನಚಿತ್ರ ಗೀತೆಗಳನ್ನು ನಗರದ
ವಿವಿಧೆಡೆ ಪ್ರಸ್ತುತಪಡಿಸಲು ಕ್ರಮ ವಹಿಸಬೇಕೆಂದ ಅವರು
ಕನ್ನಡ ಫಲಕ ಅಳವಡಿಕೆ ಮೇಲುಸ್ತುವಾರಿ ಅಧಿಕಾರವನ್ನು
ಕಾರ್ಮಿಕ ಇಲಾಖೆಗೆ ನೀಡಿರುವಂತೆ ಪಾಲಿಕೆ, ನಗರಸಭೆ
ಸೇರಿದಂತೆ ಸ್ಥಳೀಯ ಸಂಸ್ಥೆಗಳಿಗೆ ನೀಡಿದಲ್ಲಿ ಉಸ್ತುವಾರಿ
ಮತ್ತು ಅನುಷ್ಟಾನ ಪರಿಣಾಮಕಾರಿ ಆಗಲಿದೆ ಎಂದರು.
ಕಸಾಪ ಅಧ್ಯಕ್ಷರು ಹಾಗೂ ಸಮಿತಿ ಸದಸ್ಯರಾದ
ಮಂಜುನಾಥ ಕುರ್ಕಿ ಮಾತನಾಡಿ, ಕನ್ನಡ ಸುಗಮ ಸಂಗೀತ,
ಜಾನಪದ, ಚಲನಚಿತ್ರ ಗೀತೆಗಳನ್ನು ಕಲಾವಿದರಿಂದ ಹಾಡಿಸುವ
ಉದ್ದೇಶದಿಂದಲೇ ಪಾಲಿಕೆ ಆವರಣದಲ್ಲಿ ಪುಟ್ಟಣ್ಣ ಕಣಗಲ್
ರಂಗಮಂಟಪವನ್ನು ಸ್ಥಾಪನೆ ಮಾಡಿ ಗೀತ ಗಾಯನ
ಚಟುವಟಿಕೆ ನಡೆಯುತ್ತಿತ್ತು. ಆದರೆ ಕಳೆದ 7 ರಿಂದ 8
ವರ್ಷಗಳಿಂದ ಕಾರ್ಯಕ್ರಮ ನಡೆಯುತ್ತಿಲ್ಲ. ಇದಕ್ಕೆ
ಮತ್ತೆ ಚಾಲನೆ ನೀಡಬೇಕೆಂದರು.
ಸದಸ್ಯರಾದ ಸತ್ಯಭಾಮಾ ಮತ್ತು ದೇವಿಕಾ ಸುನೀಲ್
ಮಾತನಾಡಿ, ಸ್ಥಳೀಯ ಕಲಾವಿದರಿಗೆ ಆದ್ಯತೆ ನೀಡಿ ಸಂಗೀತ
ಕಾರ್ಯಕ್ರಮ ನಡೆಸಬೇಕು. ಖಾಸಗಿ ಮತ್ತು ಸರ್ಕಾರಿ
ಕಚೇರಿ ಫಲಕಗಳಲ್ಲಿ ಮೊದಲಿಗೆ ಕನ್ನಡ ನಂತರ ಆಂಗ್ಲ
ಭಾಷೆಯನ್ನು ಬಳಸಬೇಕೆಂದರು. ಸದಸ್ಯರಾದ
ಪ್ರೊ.ಹೆಚ್.ಎ.ಭಿಕ್ಷಾವರ್ತಿಮಠ್ ತಾಲ್ಲೂಕು ಕೇಂದ್ರಗಳಲ್ಲೂ
ತಹಶೀಲ್ದಾರರ ಅಧ್ಯಕ್ಷತೆಯಲ್ಲಿ ಸಭೆ ನಡೆದು ಕನ್ನಡ
ಅಭಿವೃದ್ದಿ ಚಟುವಟಿಕೆಗಳು ಆಗಬೇಕೆಂದರು.
ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ, ಸದ್ಯಕ್ಕೆ ಸಾರ್ವಜನಿಕವಾಗಿ
ಹೆಚ್ಚು ಜನರನ್ನು ಸೇರಿಸಿ ಕನ್ನಡ ಸಂಗೀತ ಕಾರ್ಯಕ್ರಮ
ಆಯೋಜನೆ ಬೇಡ. ಕೊರೊನಾ ಹಿನ್ನೆಲೆಯಲ್ಲಿ ಸಮಯ
ಪೂರಕವಾಗಿಲ್ಲ. ಅದರ ಬದಲಾಗಿ ಜನರು ವಾಯುವಿಹಾರಕ್ಕೆ
ಬರುವ ಉದ್ಯಾನವನಗಳನ್ನು ಗುರುತಿಸಿ ತಿಂಗಳಲ್ಲಿ ವಿವಿಧೆಡೆ
ಎರಡು ಮೂರು ಕಾರ್ಯಕ್ರಮಗಳನ್ನು ಸಂಜೆ 6 ರಿಂದ 7
ಗಂಟೆ ಸುಮಾರು ಒಂದು ಗಂಟೆ ಕಾಲ ಸುಗಮ, ಜಾನಪದ
ಮತ್ತು ಹಳೆಯ ಕನ್ನಡ ಚಲನಚಿತ್ರಗೀತೆಗಳನ್ನು
ಪ್ರಸ್ತುತಪಡಿಸಲು ಕಲಾವಿದರಿಗೆ ಒಂದು ಅವಕಾಶ ಅಥವಾ
ವೇದಿಕೆ ಒದಗಿಸುವಂತೆ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ
ಸಹಾಯಕ ನಿರ್ದೇಶಕರಿಗೆ ತಿಳಿಸಿದರು. ಜಿ.ಪಂ. ಸಿಇಓ
ಡಾ.ವಿಜಯಮಹಾಂತೇಶ ದಾನಮ್ಮನವರ್, ಸ್ಥಳೀಯ
ಕಲಾವಿದರನ್ನು ಗುರುತಿಸಿ ಕಾರ್ಯಕ್ರಮ ನೀಡುವಂತೆ
ತಿಳಿಸಿದರು.
ಕನ್ನಡ ಕಲಿಸುವ ಅಭಿಯಾನ : ಡಿಸಿಯವರು ಮಾತನಾಡಿ,
ಜಿಲ್ಲೆಯಲ್ಲಿ ತಾಂತ್ರಿಕ, ವೈದ್ಯಕೀಯ
ಮಹಾವಿದ್ಯಾಲಯಗಳಿದ್ದು ಬೇರೆ ಬೇರೆ ರಾಜ್ಯಗಳ
ವಿದ್ಯಾರ್ಥಿಗಳು ಇಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಅವರು
ಇಲ್ಲಿಂದ ವಿದ್ಯಾಭ್ಯಾಸ ಮುಗಿಸಿ ಹೋಗುವಷ್ಟರೊಳಗೆ ಒಬ್ಬೊಬ್ಬ
ವಿದ್ಯಾರ್ಥಿಯನ್ನು ಕನ್ನಡ ಕಲಿಸುವ ಸಲುವಾಗಿ ದತ್ತು
ತೆಗೆದುಕೊಂಡು ಕನ್ನಡ ಕಲಿಸುವ ಅಭಿಯಾನವನ್ನು
ಸಮಿತಿ ಸದಸ್ಯರು ಕೈಗೊಂಡಲ್ಲಿ ಇದೊಂದು ವಿಶಿಷ್ಟ
ಕಾರ್ಯಕ್ರಮವಾಗುವುದು ಎಂದು ಸಲಹೆ ನೀಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ,
ಸಮಿತಿ ಸದಸ್ಯರಾದ ಸಿದ್ದರಾಜು, ಡಿಡಿಪಿಐ ಸಿ.ಆರ್.ಪರಮೇಶ್ವರಪ್ಪ,
ವಾರ್ತಾಧಿಕಾರಿ ಡಿ.ಅಶೋಕ್‍ಕುಮಾರ್, ಕನ್ನಡ ಮತ್ತು ಸಂಸ್ಕøತಿ
ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ ಇತರೆ
ಅಧಿಕಾರಿಗಳು ಇದ್ದರು.