ಮನವಿ
ಏಪ್ರಿಲ್ 1 ರಿಂದ 45 ವರ್ಷ ತುಂಬಿದವರೆಲ್ಲ ಯಾವುದೇ
ಪೂರ್ವಾಗ್ರಹಗಳಿಗೀಡಾಗದೇ ಕಡ್ಡಾಯವಾಗಿ ಲಸಿಕೆ
ಪಡೆಯಬೇಕು. ಲಸಿಕೆ ಪಡೆದ ನಂತರವೂ ಕೋವಿಡ್
ಸೋಂಕು ತಗುಲಬಹುದು. ಆದರೆ ಲಸಿಕೆ ಸೋಂಕಿತರನ್ನು
ಸಾವಿನ ದವಡೆಯಿಂದ ರಕ್ಷಿಸುತ್ತದೆ. ಆದ ಕಾರಣ ಎಲ್ಲರೂ ಲಸಿಕೆ
ಪಡೆಯಬೇಕೆಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮನವಿ
ಮಾಡಿದರು.
ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಮಂಗಳವಾರ
ಏರ್ಪಡಿಸಲಾಗಿದ್ದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ
ಸಭೆಯ ಅಧ್ಯಕ್ಷತೆ ವಹಿಸಿ, ಸಂಬಂಧಿಸಿದ ಅಧಿಕಾರಿಗಳೊಂದಿಗೆ
ಬೇಸಿಗೆಯಲ್ಲಿ ಉದ್ಭವಿಸಬಹುದಾದ ಕುಡಿಯುವ ನೀರು, ಮೇವಿನ
ಕೊರತೆ ಮತ್ತು ಕೋವಿಡ್ 19 ಪರಿಸ್ಥಿತಿ ಅವಲೋಕನ ಮತ್ತು
ಇತರೆ ಸಮಸ್ಯೆಗಳ ಕುರಿತು ಚರ್ಚಿಸಿ ಮಾತನಾಡಿದರು.
ಲಸಿಕೆ ಬಗ್ಗೆ ಯಾರೂ ನಿರ್ಲಕ್ಷ್ಯ ವಹಿಸಬಾರದು. ಲಸಿಕೆ ಕುರಿತು
ಸುಳ್ಳು ಸುದ್ದಿ, ವದಂತಿಗಳನ್ನು ನಂಬದೇ ಅರ್ಹರೆಲ್ಲರೂ
ಉಚಿತ ಲಸಿಕೆಯನ್ನು ಪಡೆಯಬೇಕು. ಜೊತೆಗೆ ಇತರರ
ಮನವೊಲಿಸಿ ಲಸಿಕೆ ಹಾಕಿಸಬೇಕು ಎಂದರು.
ರೆಡ್ಕ್ರಾಸ್, ರೋಟರಿ, ಲಯನ್ಸ್ ಸೇರಿದಂತೆ ಸಮಾಜಮುಖಿ ಕಾರ್ಯ
ನಿರ್ವಹಿಸುವ ಎಲ್ಲ ಎನ್ಜಿಓಗಳು ಸ್ವಯಂ ಪ್ರೇರಿತರಾಗಿ ಕಳೆದ
ಲಾಕ್ಡೌನ್ನಲ್ಲಿ ಸೇವೆ ಸಲ್ಲಿಸಿದ ರೀತಿಯಲ್ಲೇ ಈಗಲೂ ಲಸಿಕೆ
ಪಡೆಯುವಲ್ಲಿ ಜನರ ಮನವೊಲಿಸಲು ಮುಂದಾಗಿ ಕೋವಿಡ್
ಯುದ್ದ ಗೆಲ್ಲಲು ಸಹಾಯ ಮಾಡಬೇಕೆಂದು ಮನವಿ
ಮಾಡುತ್ತೇನೆ
-ಮಹಾಂತೇಶ ಬೀಳಗಿ,
ಜಿಲ್ಲಾಧಿಕಾರಿಗಳು
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ರಾಘವನ್ ಮಾತನಾಡಿ, ಜಿಲ್ಲೆಯಲ್ಲಿ
ಪ್ರಸ್ತುತ 3200 ಪ್ರಕರಣಗಳಿಗೆ ಚಿಕಿತ್ಸೆ ನೀಡುವಷ್ಟು ಸಿದ್ದತೆ
ಮಾಡಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಕಳೆದ ಸೆಪ್ಟೆಂಬರ್ 17 ರಂದು
ಗರಿಷ್ಟ ಅಂದರೆ 3185 ಪ್ರಕರಣ ದಾಖಲಾಗಿತ್ತು. ಇದರನ್ವಯ
ಪ್ರಸ್ತುತ ಸಾಲಿನಲ್ಲಿ 3200 ರಷ್ಟು ಕೋವಿಡ್ ಪ್ರಕರಣಗಳು
ಒಂದೇ ದಿನ ಬಂದರೂ ಚಿಕಿತ್ಸೆ ನೀಡುವಷ್ಟು (3200 ಬೆಡ್-
ವರ್ಗವಾರು) ಸಿದ್ದತೆಯನ್ನು ಮಾಡಿಕೊಳ್ಳಲಾಗಿದೆ. ಚಿಗಟೇರಿ
ಆಸ್ಪತ್ರೆಯನ್ನು ಜಿಲ್ಲಾ ಮಟ್ಟದ 400 ಬೆಡ್ಗಳ ಕೋವಿಡ್
ಆಸ್ಪತ್ರೆಯೆಂದು ಗುರುತಿಸಲಾಗಿದೆ. ಮಾ.29 ರವರೆಗೆ 44
ಸಕ್ರಿಯ ಪ್ರಕರಣಗಳಿದ್ದು, 32 ಜನರು ಆಸ್ಪತ್ರೆಯಲ್ಲಿ
ಮತ್ತು 12 ಜನವರು ಹೋಂ ಐಸೋಲೇಷನ್ನಲ್ಲಿ ಚಿಕಿತ್ಸೆಗೆ
ಒಳಗಾಗಿದ್ದಾರೆ. ಜಿಲ್ಲೆಯಲ್ಲಿ ಪ್ರತಿ ದಿನ 2200 ರಿಂದ 2500 ರವೆಗೆ
ಸ್ವಾಬ್ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗುತ್ತಿದೆ. 0.41 ಪಾಸಿಟಿವಿಟಿ
ದರ ಇದೆ. ಈವರೆಗೆ 264 ಮರಣಗಳು ಸಂಭವಿಸಿದ್ದು, ಡಿಸೆಂಬರ್ 10
ರಂದು ಕೊನೆಯ ಮರಣ ಸಂಭವಿಸಿದೆ ಎಂದು ಮಾಹಿತಿ
ನೀಡಿದರು.
ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ನಟರಾಜ್ ಮಾತನಾಡಿ,
ಕೋವಿಡ್ ನಿಯಂತ್ರಣಕ್ಕಾಗಿ ಕಂಟಿಂಜೆನ್ಸಿ ಪ್ಲಾನ್ ಕುರಿತು ವಿವರಣೆ
ನೀಡಿ, ಜಿಲ್ಲೆಯಲ್ಲಿ 02 ಖಾಸಗಿ ಮತ್ತು 100 ಸರ್ಕಾರಿ ಆಸ್ಪತ್ರೆಗಳಲ್ಲಿ
ಫಿವರ್ ಕ್ಲಿನಿಕ್ಗಳಿವೆ. ಒಟ್ಟು 21 ಸ್ವಾಬ್ ಸಂಗ್ರಹಣಾ ಮೊಬೈಲ್
ಟೀಂಗಳಿವೆ. 13 ಹಾಸ್ಟೆಲ್ಗಳಲ್ಲಿ ಕೋವಿಡ್ ಕೇರ್ ಸೆಂಟರ್ಗಳನ್ನು
ಸ್ಥಾಪಿಸಿದ್ದು 1030 ಬೆಡ್ ಸಿದ್ದವಾಗಿವೆ. ಆರ್ಎಂಓ ಮತ್ತು ಎಎಂಓ
ಗಳನ್ನು ಜಿಲ್ಲೆ ಮತ್ತು ಪ್ರತಿ ತಾಲ್ಲೂಕುಗಳಲ್ಲಿ ಕೋವಿಡ್
ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ. ಖಾಸಗಿ ಮತ್ತು
ಸರ್ಕಾರಿ ಸೇರಿದಂತೆ ಒಟ್ಟು 113 ವೆಂಟಿಲೇಟರ್ಗಳಿವೆ. ಸಿಸಿಸಿ, ಡಿಸಿಹೆಚ್ಸಿ
ಮತ್ತು ಡಿಸಿಹೆಚ್ ಸೇರಿದಂತೆ ಒಟ್ಟು 1890 ಬೆಡ್ಗಳಿವೆ.
ಕೋವಿಡ್ ನಿರ್ವಹಿಸಲು ತಾಲ್ಲೂಕು ಮಟ್ಟದಲ್ಲಿ ತಹಶೀಲ್ದಾರ್, ಸಿಪಿಐ,
ಇಓ, ಟಿಹೆಚ್ಓ, ಎಎಂಓ, ಬಿಸಿಎಂ ಅಧಿಕಾರಿ, ಸಮಾಜ ಕಲ್ಯಾಣ
ಅಧಿಕಾರಿಗಳನ್ನು ಸೇರಿದಂತೆ ಒಂದು ಸಮಿತಿ ರಚಿಸಿ ನಿರ್ವಹಣಾ
ಕೆಲಸ ಮಾಡಲಾಗುವುದು ಎಂದರು.
ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ, ಕಳೆದ ಸಾಲಿನ ಡಿ.10 ರಂದು
ಕೋವಿಡ್ನ ಕೊನೆಯ ಸಾವಾಗಿದ್ದು, ನಂತರ ಕೋವಿಡ್ನಿಂದ
ಯಾವುದೇ ಸಾವು ಸಂಭವಿಸಿಲ್ಲ. ಇದಕ್ಕಾಗಿ ವೈದ್ಯರ ಶ್ರಮಕ್ಕೆ
ಅಭಿನಂದಿಸುತ್ತೇನೆ. ತಾಲ್ಲೂಕು ಮಟ್ಟದ ಸಮಿತಿಗಳು
ಪ್ರತಿದಿನ ಕೋವಿಡ್ ಪ್ರಗತಿ ಪರಿಶೀಲನೆ ಮಾಡಿ ಅಗತ್ಯ ಕ್ರಮ
ಕೈಗೊಳ್ಳಬೇಕು. ಐಎಲ್ಐ ಮತ್ತು ಎಸ್ಎಆರ್ಐ ಪ್ರಕರಣಗಳ
ಸ್ವಾಬ್ ಪರೀಕ್ಷೆ ಕಡ್ಡಾಯವಾಗಿ ಆಗಬೇಕು. ಹಳೇ ದಾವಣಗೆರೆ
ಭಾಗದಲ್ಲಿ ಹಾಗೂ ಜನನಿಭಿಡ ಪ್ರದೇಶಗಳನ್ನು ಟಾರ್ಗೆಟೆಡ್
ಗ್ರೂಪ್ ಎಂದು ಗುರುತಿಸಿ ಪರೀಕ್ಷೆ ಸಂಖ್ಯೆಯನ್ನು
ಹೆಚ್ಚಿಸಬೇಕು ಎಂದು ಸೂಚನೆ ನೀಡಿದರು.
ಕಳೆದ ಬಾರಿ ಕೋವಿಡ್ ಕೇರ್ ಸೆಂಟರ್ಗಳಲ್ಲಿ ಸೋಂಕಿತರು
ಹಾಸ್ಟೆಲ್ಗಳ ಮೂಲಭೂತ ಸೌಕರ್ಯವನ್ನು
ಹಾಳುಗೆಡವಿದ್ದು ಗಮನಕ್ಕೆ ಬಂದಿದ್ದು, ಇನ್ನು ಮುಂದೆ ಹಾಗೆ
ಮಾಡಿದರೆ ನೇರವಾಗಿ ಸಂಬಂಧಿಸಿದ ಟಿಹೆಚ್ಓ ಅಥವಾ ನೋಡಲ್
ಅಧಿಕಾರಿಗಳ ವಿರುದ್ದ ಕ್ರಮ ವಹಿಸಲಾಗುವುದು ಎಂದು
ಎಚ್ಚರಿಕೆ ನೀಡಿದರು.
ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಪರಿಶಿಷ್ಟ
ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ,
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿಗಳು ತಮ್ಮ ಹಾಸ್ಟೆಲ್
ಮಕ್ಕಳಿಗೆ ಕೋವಿಡ್ ಟೆಸ್ಟ್ ಮಾಡಿಸಬೇಕೆಂದರು.
ಆರ್ಸಿಹೆಚ್ ಅಧಿಕಾರಿ ಡಾ.ಮೀನಾಕ್ಷಿ ಮಾತನಾಡಿ, ಆರೋಗ್ಯ ಮತ್ತು
ಫ್ರಂಟ್ಲೈನ್ ವರ್ಕರ್ಸ್ ಲಸಿಕಾಕರಣ ಶೇ.60 ಆಗಿದೆ. ಆದರೆ 60
ವರ್ಷ ಮೇಲ್ಪಟ್ಟವರ 1,58,619 ಜನರ ಪೈಕಿ 42,304 ಶೇ.27
ಲಸಿಕಾಕರಣವಾಗಿದೆ. ದಾವಣಗೆರೆ ಅತಿ ಕಡಿಮೆ ಮತ್ತು ಜಗಳೂರು
ಅತಿ ಹೆಚ್ಚು ಲಸಿಕೆ ಆಗಿದೆ. ಏಪ್ರಿಲ್ 1 ರಿಂದ 45 ವರ್ಷ ಮೇಲ್ಪಟ್ಟ
ಎಲ್ಲರಿಗೂ ಲಸಿಕೆಯನ್ನು ಆನ್ಸ್ಪಾಟ್ ನೋಂದಣಿಯೊಂದಿಗೆ ಸಬ್
ಸೆಂಟರ್ಗಳಲ್ಲೂ ವಾರದಲ್ಲಿ ನಾಲ್ಕು ದಿನ ಲಸಿಕೆ ನೀಡಲಾಗುವುದು
ಎಂದರು.
ಕೋವಿಡ್ ನಿಯಂತ್ರಣ ಹಿನ್ನೆಲೆಯಲ್ಲಿ ಮಾಸ್ಕ್ ಕಡ್ಡಾಯ
ಧಾರಣೆ ಮತ್ತು ಸಾಮಾಜಿಕ ಅಂತರ
ಕಾಯ್ದುಕೊಳ್ಳುವಿಕೆ ನಿರ್ವಹಣೆಗಾಗಿ ದಾವಣಗೆರೆ
ನಗರದಲ್ಲೂ ವಾರ್ಡ್ವಾರು ಮಾರ್ಷಲ್ಗಳನ್ನು ನೇಮಕ
ಮಾಡಲು ಕ್ರಮ ವಹಿಸಲಾಗುವುದು.
ನಗರದ ಹಳೆಯ ದಾವಣಗೆರೆ ಭಾಗದಲ್ಲಿ ಮತ್ತು
ಗ್ರಾಮೀಣ ಭಾಗದಲ್ಲಿ ಸಹ ಮಾಸ್ಕ್ ಅಭಿಯಾನ ಕೈಗೊಂಡು
ಜನರು ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಜಾಗೃತಿ
ಮೂಡಿಸಲು ಕ್ರಮ ವಹಿಸಲಾಗುವುದು.
ಧಾರ್ಮಿಕ ಮುಖಂಡರ ಸಭೆ ಕರೆದು ಕೋವಿಡ್
ನಿಯಂತ್ರಣ ಹಾಗೂ ಲಸಿಕೆ ಹಾಕಿಸುವಲ್ಲಿ ಸಹಕಾರ
ಕೋರಲಾಗುವುದು.
-ಮಹಾಂತೇಶ ಬೀಳಗಿ,
ಜಿಲ್ಲಾಧಿಕಾರಿಗಳು
ಕುಡಿಯುವ ನೀರು-ಮೇವು ಕೊರತೆ ಇಲ್ಲ : ತಾಲ್ಲೂಕುಗಳ
ತಹಶೀಲ್ದಾರರು ಮಾತನಾಡಿ ತಮ್ಮ ತಾಲ್ಲೂಕುಗಳಲ್ಲಿ
ಪ್ರಸಕ್ತ ಸಾಲಿನಲ್ಲಿ ಕುಡಿಯುವ ನೀರಿನ ಕೊರತೆ ಇಲ್ಲ ಎಂದರು.
ತಹಶೀಲ್ದಾರ್ ಗಿರೀಶ್ ಮಾತನಾಡಿ, ದಾವಣಗೆರೆ ತಾಲ್ಲೂಕಿನಲ್ಲಿ
ಸದ್ಯಕ್ಕೆ ಕುಡಿಯುವ ನೀರಿನ ಕೊರತೆ ಇಲ್ಲವಾದರೂ ಹೆಬ್ಬಾಳು,
ಗುಡಾಳು ಮತ್ತು ಕಂದನಕೋವಿ ಗ್ರಾ.ಪಂ ವ್ಯಾಪ್ತಿಯ 10
ಗ್ರಾಮಗಳಲ್ಲಿ ಸಮಸ್ಯೆ ಉದ್ಭವಿಸಬಹುದೆಂದು 12 ಖಾಸಗಿ
ಕೊಳವೆ ಬಾವಿಗಳಿಂದ ನೀರು ಪೂರೈಸಲು ಯೋಜನೆ
ರೂಪಿಸಲಾಗಿದೆ ಎಂದರು. ಜಗಳೂರು ತಹಶೀಲ್ದಾರ್ ಗ್ರೇಡ್ 2
ಮಂಜಾನಂದ, 26 ಗ್ರಾಮಗಳನ್ನು ಹಾಗೂ ಚನ್ನಗಿರಿ
ತಹಶೀಲ್ದಾರ್ 7 ಗ್ರಾಮಗಳನ್ನು ಸಮಸ್ಯಾತ್ಮಕ
ಗ್ರಾಮಗಳೆಂದು ಗುರುತಿಸಿ, ಸಮಸ್ಯೆ ಬಂದಲ್ಲಿ ಖಾಸಗಿ
ಕೊಳವೆ ಬಾವಿ ಮೂಲಕ ನೀರಿಗೆ ವ್ಯವಸ್ಥೆ ಮಾಡಲಾಗುವುದು
ಎಂದರು.
ಮಹಾನಗರಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ಹಾಗೂ
ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕಿ ನಜ್ಮಾ
ಮಾತನಾಡಿ ನಗರ ಪ್ರದೇಶಗಳಲ್ಲಿ ಸಹ ಕುಡಿಯುವ ನೀರಿನ
ಕೊರತೆ ಇಲ್ಲ. ಒಂದು ಪಕ್ಷ ಸಮಸ್ಯೆ ಉದ್ಭವಿಸಿದರೆ ಟ್ಯಾಂಕರ್
ಮೂಲಕ ನೀರು ಸರಬರಾಜು ಮಾಡಲು ವ್ಯವಸ್ಥೆ
ಮಾಡಲಾಗುವುದು ಎಂದರು.
ಪಶು ಸಂಗೋಪನೆ ಇಲಾಖೆಯ ಉಪನಿರ್ದೇಶಕ
ಡಾ.ಭಾಸ್ಕರ್ನಾಯಕ್ ಮಾತನಾಡಿ, ಜಿಲ್ಲೆಯಲ್ಲಿ ಪ್ರಸ್ತುತ
ಮೇವಿನ ಕೊರತೆ ಇಲ್ಲ. ಚನ್ನಗಿರಿ ತಾಲ್ಲೂಕಿನಲ್ಲಿ 29 ವಾರಗಳಿಗೆ
ಆಗುವಷ್ಟು, ದಾವಣಗೆರೆಯಲ್ಲಿ 42 ವಾರ, ಹರಿಹರ 77 ವಾರ,
ಹೊನ್ನಾಳಿ 32 ವಾರ ಮತ್ತು ಜಗಳೂರಿನಲ್ಲಿ 23 ವಾರಗಳಿಗೆ
ಆಗುವಷ್ಟು ಮೇವು ಲಭ್ಯತೆ ಇದೆ. ಅಂದರೆ ಜಿಲ್ಲೆಯಲ್ಲಿ ಸರಾಸರಿ
39 ವಾರಗಳಿಗೆ ಆಗುವಷ್ಟು ಮೇವು ಲಭ್ಯತೆ ಇದೆ ಎಂದರು.
ಕೃಷಿ ಜಂಟಿ ನಿರ್ದೇಶಕ ಶ್ರೀನಿವಾಸ ಚಿಂತಾಲ್ ಮಾತನಾಡಿ, ಪ್ರಸಕ್ತ
ಸಾಲಿನಲ್ಲಿ ಮಳೆ-ಬೆಳೆ ಕೊರತೆ ಇಲ್ಲ.
49 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬಿತ್ತನೆಯಾಗಿದ್ದು
ಭತ್ತ ಚೆನ್ನಾಗಿ ಬಂದಿದೆ. 10 ಸಾವಿರ ಹೆಕ್ಟೇರ್ ಭೂಮಿಯಲ್ಲಿ
ಯಾಂತ್ರೀಕೃತ ಭತ್ತ ಬಿತ್ತನೆ ಮಾಡಲಾಗಿದೆ. ಹಾಗೂ 500
ಹೆಕ್ಟೇರ್ ಪ್ರದೇಶದಲ್ಲಿ ಪ್ರಾಯೋಗಿಕವಾಗಿ ಎರಚುವ
ಮೂಲಕ ಭತ್ತ ಬೆಳೆಯಲಾಗಿದ್ದು ಉತ್ತಮ ಇಳುವರಿ ಬಂದಿದೆ.
ಕೇಂದ್ರ ಕೃಷಿ ಮಂತ್ರಾಲಯದ ಆದೇಶದಂತೆ ಜಿಲ್ಲಾ
ಮಟ್ಟದಲ್ಲಿ ಸಮಿತಿಯನ್ನು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ
ರಚಿಸಿದ್ದು ಪ್ರತಿ ತಿಂಗಳು ಹೆಚ್ಚು ಯೂರಿಯಾ ಖರೀದಿಸುವವರ
ಸರ್ವೇ ಮಾಡಲಾಗುವುದು. ಯೂರಿಯಾ ಗೊಬ್ಬರವನ್ನು
ಕೃಷಿಯೇತರ ಚಟುವಟಿಕೆ ಅಂದರೆ ಕೈಗಾರಿಕೆಗಳು ಮತ್ತು
ಜವಳಿಯಲ್ಲಿ ಹೆಚ್ಚಾಗಿ ಬಳಕೆ ಮಾಡುತ್ತಿರುವ ಹಿನ್ನೆಲೆಯಲ್ಲಿ
ಇದನ್ನು ಪರಿಶೀಲಿಸಿ ಕ್ರಮ ವಹಿಸುವ ಉದ್ದೇಶದಿಂದ ಸಮಿತಿಯ
ಸದಸ್ಯರು ಗೊಬ್ಬರದ ಮಳಿಗೆಗಳಿಗೆ ಭೇಟಿ ನೀಡಿ ಪರಿಶೀಲನೆ
ನಡೆಸುತ್ತಾರೆಂದರು.
ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ ಸದಸ್ಯರು ಪ್ರತಿ ವಾರದ
ಕೊನೆಯಲ್ಲಿ ಗೊಬ್ಬರದ ಮಳಿಗೆಗಳಿಗೆ ಭೇಟಿ ನೀಡಿ ತಮಗೆ
ವರದಿ ಸಲ್ಲಿಸುವಂತೆ ತಿಳಿಸಿದರು.
ಹಾಗೂ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ
ಕಾರ್ಯಪಾಲಕ ಅಭಿಯಂತರರು ಇಡೀ ಜಿಲ್ಲೆಯಲ್ಲಿ ಅಂತರ್ಜಲ
ಮಟ್ಟದ ವರದಿ ನೀಡುವಂತೆ ತಿಳಿಸಿದ ಅವರು ಗ್ರಾಮಗಳಿಗೆ
ಯಾವ ಮೂಲದಿಂದ ಎಷ್ಟು ನೀರು ಕೊಡಲಾಗುತ್ತಿದೆ.
ಇಳುವರಿ ಎಷ್ಟಿದೆ ಎಂಬ ವರದಿಯನ್ನು ತಮಗೆ ಸಲ್ಲಿಸುವಂತೆ
ತಿಳಿಸಿದರು.
ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಲಕ್ಷ್ಮೀಕಾಂತ್
ಬೊಮ್ಮನ್ನಾರ್ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ 12 ಸಾವಿರ ಎಕರೆ
ತೋಟಗಾರಿಕೆ ಬೆಳೆಗಳನ್ನು ಅಭಿವೃದ್ದಿಪಡಿಸಲಾಗಿದೆ.
ಪ್ರಸ್ತುತ ಜಿಲ್ಲೆಯಲ್ಲಿ 75 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ,
150 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ನುಗ್ಗೆ ಮತ್ತು 50 ಸಾವಿರ
ಹೆಕ್ಟೇರ್ ಪ್ರದೇಶದಲ್ಲಿ ಗುಲಾಬಿ ಬೆಳೆಯಲಾಗಿದೆ. 2500
ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗಿದ್ದು
ಸಂತೇಬೆನ್ನೂರು ಒಂದರಲ್ಲೇ 2100 ಹೆಕ್ಟೇರ್ ಪ್ರದೇಶದಲ್ಲಿ
ಮಾವು ಇದ್ದು ಈ ಸಾಲಿನಲ್ಲಿ ಇಬ್ಬನಿಗೆ ಮಾವು ಗುರಿಯಾಗದೇ
ಉತ್ತಮ ಇಳುವರಿ ಇದೆ ಎಂದ ಅವರು ಅಂತರ್ಜಲ ಮಟ್ಟ ಮತ್ತು
ಹನಿ ನೀರಾವರಿ ಉತ್ತಮವಾಗಿದ್ದು ನೀರಿಗೆ ತೊಂದರೆಯಾಗಿಲ್ಲ
ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಎಎಸ್ಪಿ
ರಾಜೀವ್, ಎಸಿ ಮಮತಾ ಹೊಸಗೌಡರ್, ಜಿ.ಪಂ ಯೋಜನಾ ನಿರ್ದೇಶಕ
ಜಗದೀಶ್, ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ
ಕಾರ್ಯಪಾಲಕ ಅಭಿಯಂತರ ಗಂಗಪ್ಪ, ತಹಶೀಲ್ದಾರರು,
ಇತರೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.