ಕ್ರಿಯಾ ಯೋಜನೆಗೆ ಅಸ್ತು:
ಅಭಿಯಾನ ಯಶಸ್ವಿಗೊಳಿಸಲು ಡಿಸಿ ಕರೆ
ಜಲಶಕ್ತಿ ಅಭಿಯಾನ 2021 ಕಾರ್ಯಕ್ರಮದಡಿ ಜಿಲ್ಲೆಯಲ್ಲಿ
ಮಳೆ ನೀರನ್ನು ಸಂಗ್ರಹಿಸಿ, ಶೇಖರಿಸಿ, ಬಳಕೆ ಮಾಡುವ ಹಾಗೂ
ನೀರಿನ ಮೂಲಗಳನ್ನು ಸಂರಕ್ಷಿಸುವ ಸಂಬಂಧ
ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಜಿಲ್ಲಾ ಮಟ್ಟದ ಸಮಿತಿಯು
100 ದಿನಗಳ ಕ್ರಿಯಾ ಯೋಜನೆಗೆ ಅನುಮೋದನೆ ನೀಡಿತು.
ಮಂಗಳವಾರ ಸಂಜೆ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ
‘ಜಲಶಕ್ತಿ ಅಭಿಯಾನ 2021’ ಕಾರ್ಯಕ್ರಮ ಅನುಷ್ಟಾನದ
ಹಿನ್ನೆಲೆ ಕ್ರಿಯಾಯೋಜನೆಗೆ ಅನುಮೋದನೆ ನೀಡುವ ಹಾಗೂ
ಕಾರ್ಯಕ್ರಮ ಯಶಸ್ವಿಗೊಳಿಸುವ ಕುರಿತು ಸಂಬಂಧಿಸಿದ
ಅಧಿಕಾರಿಗಳೊಂದಿಗೆ ಚರ್ಚಿಸಲು ಕರೆಯಲಾಗಿದ್ದ ಸಭೆಯಲ್ಲಿ
ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅಧ್ಯಕ್ಷತೆ ವಹಿಸಿ,
ಅಭಿಯಾನದ ಸುಮಾರು 2442 ಕಾರ್ಯಕ್ರಮಗಳ 100
ದಿನಗಳ ಕ್ರಿಯಾ ಯೋಜನೆಗೆ ಅನುಮೋದನೆ ನೀಡಿದರು.
ಈ ವೇಳೆ ಅವರು ಮಾತನಾಡಿ, ಭಾರತ ಸರ್ಕಾರವು ಜಲಶಕ್ತಿ
ಅಭಿಯಾನ 2021 ಕ್ಕೆ ‘ಕ್ಯಾಚ್ ದಿ ರೈನ್ – ವೇರ್ ಇಟ್ ಫಾಲ್ಸ್, ವೆನ್ ಇಟ್
ಫಾಲ್ಸ್’, ಅಂದರೆ ಮಳೆ ಬಂದಾಗ ನೀರನ್ನು ಸಂಗ್ರಹಿಸುವ
ಧ್ಯೇಯ ವಾಕ್ಯದೊಂದಿಗೆ ಮಾನ್ಯ
ಪ್ರಧಾನಮಂತ್ರಿಯವರು ಮಾರ್ಚ್ 22 ರಂದು ಚಾಲನೆ
ನೀಡಿದ್ದು, ಎಲ್ಲ ರಾಜ್ಯಗಳಲ್ಲಿ ಮಾ.22 ರಿಂದ ನ.30 ರವರೆಗೆ ನೀರಿನ
ತೇವಾಂಶ ಮತ್ತು ಅಂತರ್ಜಲ ಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಮಳೆ
ನೀರು ಸಂಗ್ರಹಣೆ, ಶೇಖರಣೆ ಮತ್ತು ಬಳಕೆ ಹಾಗೂ ಜಲ
ಮೂಲ ಸಂರಕ್ಷಣೆ ಮಾಡಲು ಹಾಗೂ ಶುದ್ದ ನೀರಿನ ಬಗ್ಗೆ
ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಅಭಿಯಾನವನ್ನು
ಕೈಗೊಳ್ಳಲಾಗಿದೆ ಎಂದರು.
ಜಿಲ್ಲೆಯ ನಗರ ಮತ್ತು ಗ್ರಾಮೀಣ ಸ್ಥಳೀಯ
ಸಂಸ್ಥೆಗಳ ವ್ಯಾಪ್ತಿಯ ಸರ್ಕಾರಿ ಕಟ್ಟಡಗಳು, ಶಾಲೆಗಳು,
ಹಾಸ್ಟೆಲ್‍ಗಳು, ಖಾಸಗಿ ದೊಡ್ಡ ದೊಡ್ಡ ಕಟ್ಟಡಗಳಲ್ಲಿ ಮಳೆ
ನೀರನ್ನು ಸಂಗ್ರಹಿಸಿ ಭೂಮಿಯಲ್ಲಿ ಇಂಗಿಸುವ ಅಥವಾ ಬಳಸುವ
ಬಗ್ಗೆ ಹಾಗೂ ಕೆರೆ, ಕಲ್ಯಾಣಿ ಅಭಿವೃದ್ದಿ, ಹಸುರೀಕರಣ ಕಾರ್ಯ
ಕೈಗೊಳ್ಳಲು ತಾ.ಪಂ ಇಓ ಗಳು, ವಿವಿಧ ಇಲಾಖೆಗಳು
ಕ್ರಿಯಾ ಯೋಜನೆಯನ್ನು ಸಿದ್ದಪಡಿಸಿದ್ದಾರೆ. ನಗರ ಭಾಗದ
ದೊಡ್ಡ ಕಟ್ಟಡಗಳಲ್ಲಿ ಮಳೆ ನೀರು ಸದ್ಬಳಕೆ ಹಾಗೂ
ನೀರಿನ ಮೂಲಕ ಸಂರಕ್ಷಣೆ ಕುರಿತು ಪಾಲಿಕೆ ಆಯುಕ್ತರು
ಹಾಗೂ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕರು
ಕ್ರಮ ವಹಿಸಬೇಕು. ಹಾಗೂ ಡಿಡಿಪಿಐ ರವರು ಶಾಲಾ
ಕಟ್ಟಡಗಳಲ್ಲಿ ನರೇಗಾದಡಿ ಮಳೆ ಕೊಯ್ಲು ಅಥವಾ ಮಳೆ
ನೀರು ಇಂಗಿಸಲು ಕ್ರಮ ವಹಿಸಬೇಕು. ಹಾಗೂ ಸಂಬಂಧಿಸಿದ ಎಲ್ಲ
ಅಧಿಕಾರಿಗಳು ಕೈಗೊಂಡ ಕ್ರಮಗಳ ಬಗ್ಗೆ ಪ್ರತಿವಾರ
ನನಗೆ ವರದಿ ನೀಡಬೇಕೆಂದರು.
ಕೆರೆಗಳ ಅಭಿವೃದ್ದಿ ಸೇರಿದಂತೆ ಮಳೆ ನೀರು ಹಾಗೂ ನೀರಿನ
ಮೂಲ ಸಂರಕ್ಷಣೆ ಕಾಮಗಾರಿಗಳನ್ನು ದಾನಿಗಳ ಸಹಾಯ
ಪಡೆದು ಕೂಡ ಮಾಡಬಹುದು. ದಾನಿಗಳಿಂದ ಜೆಸಿಬಿ, ಡೀಸೆಲ್
ಇತ್ಯಾದಿ ಅಭಿಯಾನದ ಯಶಸ್ಸಿಗೆ ಪೂರಕ ಸಹಾಯ
ಪಡೆಯಬಹುದು ಎಂದರು.
ಸಾಮಾಜಿಕ ಅರಣ್ಯ ವಿಭಾಗದಿಂದ ಜಿಲ್ಲೆಯ ಸರ್ಕಾರಿ ಶಾಲೆಗಳು
ಮತ್ತು ಇತರೆ ಕಚೇರಿ ಕಟ್ಟಗಳ ಆವರಣದಲ್ಲಿ ಜೂನ್ 5 ರ
ವನಮಹೋತ್ಸವದಂದು ನೆಡಲು 50 ಸಾವಿರಕ್ಕೂ ಹೆಚ್ಚು
ಗಿಡಗಳನ್ನು ನೀಡುವಂತೆ ಅರಣ್ಯ ಅಧಿಕಾರಿಗೆ ಸೂಚನೆ ನೀಡಿದ
ಅವರು ಎಲ್ಲ ವಿದ್ಯಾರ್ಥಿಗಳು ಅಂದು ಒಂದೊಂದು ಗಿಡ ದತ್ತು
ಪಡೆದು ಗಿಡಕ್ಕೆ ನೀರು ಹಾಕಿ ಬೆಳೆಸುವಂತೆ
ಪ್ರೇರೇಪಿಸಬೇಕೆಂದು ಡಿಡಿಪಿಐ ರವರಿಗೆ ತಿಳಿಸಿದರು.
ಜಗಳೂರಿನಲ್ಲಿ ಬಿಳಿಚೋಡು ಕೆರೆ, ಸಂಗೇನಹಳ್ಳಿ,
ತುಪ್ಪದಹಳ್ಳಿ ಮತ್ತು ಜಗಳೂರು ಪಟ್ಟಣದಲ್ಲಿ ದೊಡ್ಡ
ಕೆರೆಗಳಿದ್ದು ಕೆರೆ ಅಭಿವೃದ್ದಿ ಸೇರಿದಂತೆ ಇಂಗುಗುಂಡಿ,
ಗೋಕಟ್ಟೆ ನಿರ್ಮಾಣ, ಹಸಿರೀಕರಣ ಮತ್ತು ಮಳೆ ಕೊಯ್ಲು
ಯೋಜನೆಗೆ ಕ್ರಿಯಾ ಯೋಜನೆ ಸಿದ್ದಪಡಿಸಲಾಗಿದೆ ಎಂದು
ತಾ.ಪಂ ಇಓ ತಿಳಿಸಿದರು.
ಚನ್ನಗಿರಿಯಲ್ಲಿ 6 ಮತ್ತು ಹೊನ್ನಾಳಿಯಲ್ಲಿ 18 ಮಳೆ
ಕೊಯ್ಲು ಯೋಜನೆ ಸೇರಿ ಒಟ್ಟು 66 ಮಳೆಕೊಯ್ಲು,
ಇಂಗುಗುಂಡಿ, ಕಲ್ಯಾಣಿ, ಕೆರೆ ಅಭಿವೃದ್ದಿ ಹಾಗೂ ವಿವಿಧ ನೀರಿನ
ಮೂಲ ಸಂರಕ್ಷಣೆ ಕುರತು ಎಲ್ಲ ತಾಲ್ಲೂಕುಗಳು
ಮತ್ತು ನಗರ ಸ್ಥಳೀಯ ಸಂಸ್ಥೆಗಳು ಸೇರಿ ಒಟ್ಟು 2442
ಕಾಮಗಾರಿಗಳಿಗೆ ಸಮಿತಿಯು ಇಂದು ಅನುಮೋದನೆ ನೀಡಿದ್ದು,
ಸಂಬಂಧಿಸಿದ ಎಲ್ಲ ಸ್ಥಳೀಯ ಸಂಸ್ಥೆಗಳು, ಶಿಕ್ಷಣ, ಕೃಷಿ,
ತೋಟಗಾರಿಕೆ ಸೇರಿದಂತೆ ವಿವಿಧ ಇಲಾಖೆಗಳು ಸೇರಿ ಈ
ಅಭಿಯಾನವನ್ನು ಯಶಸ್ವಿಗೊಳಿಸಬೇಕೆಂದು ತಿಳಿಸಿದರು.
ಜಿ.ಪಂ. ಸಿಇಓ ಡಾ.ವಿಜಯ ಮಹಾಂತೇಶ ದಾನಮ್ಮನವರ್
ಮಾತನಾಡಿ, ಸಮಗ್ರ ಕೆರೆ ಅಭಿವೃದ್ದಿ ಯೋಜನೆಯಡಿ ವಿವಿಧ
ತಾಲ್ಲೂಕುಗಳ ಕೆರೆಗಳಲ್ಲಿ ಹೂಳೆತ್ತೆಸಿ
ಅಭಿವೃದ್ದಿಪಡಿಸಬೇಕು. ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಒತ್ತು
ನೀಡಿ, ಭೂಮಿ ಲಭ್ಯತೆ ಇದ್ದರೆ ತಹಶೀಲ್ದಾರರು ಜಿಲ್ಲೆಯಲ್ಲಿ
ಹೊಸ ಕೆರೆಗಳನ್ನು ಸಹ ಮಾಡಬೇಕು ಎಂದರು.
ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಅಭಿಯಾನಕ್ಕೆ ಚಾಲನೆ ಈ
ಅಭಿಯಾನ ಕಾರ್ಯಕ್ರಮದ ಚಾಲನೆಯನ್ನು ತಾಲ್ಲೂಕು
ಮತ್ತು ಜಿಲ್ಲಾ ಮಟ್ಟದಲ್ಲಿ ಕ್ರಮವಾಗಿ ಶಾಸಕರು ಮತ್ತು
ಉಸ್ತುವಾರಿ ಮಂತ್ರಿಗಳಿಂದ ಮಾಡಿಸಬೇಕಿದ್ದು, ಜಗಳೂರು
ತಾಲ್ಲೂಕಿನ ಗುತ್ತಿದುರ್ಗದ ಕೊಣಚಗಲ್‍ಗುಡ್ಡದ
ಕಲ್ಯಾಣಿಯನ್ನು ಅಭಿವೃದ್ದಿಪಡಿಸಿ ಇಲ್ಲಿಯೇ ಜಿಲ್ಲಾ ಮಟ್ಟದ
ಕಾರ್ಯಕ್ರಮವನ್ನು ಚಾಲನೆ ನೀಡಲು ಡಿಪಿಆರ್ ಮತ್ತಿತರೆ
ತಯಾರಿ ನಡೆಸುವಂತೆ ತಾ.ಪಂ ಇಓ ಮತ್ತು ತಹಶೀಲ್ದಾರರಿಗೆ
ಸೂಚನೆ ಜಿ.ಪಂ ಸಿಇಓ ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಆನಂದ್,
ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ಧೂಡಾ ಆಯುಕ್ತ
ಕುಮಾರಸ್ವಾಮಿ, ನಗರಾಭಿವೃದ್ದಿ ಕೋಶದ ಯೋಜನಾ
ನಿರ್ದೇಶಕಿ ನಜ್ಮಾ, ಡಿಡಿಪಿಐ ಸಿ.ಆರ್.ಪರಮೇಶ್ವರಪ್ಪ, ಕೃಷಿ ಜಂಟಿ
ನಿರ್ದೇಶಕ ಶ್ರೀನಿವಾಸ ಚಿಂತಾಲ್, ತೋಟಗಾರಿಕೆ ಇಲಾಖೆ ಡಿಡಿ
ಲಕ್ಷ್ಮೀಕಾಂತ್ ಬೊಮ್ಮನ್ನಾರ್, ಸಮಾಜ ಕಲ್ಯಾಣ ಇಲಾಖೆಯ
ಉಪನಿರ್ದೇಶಕಿ ರೇಷ್ಮಾ ಕೌಸರ್, ಹಿಂದುಳಿದ ವರ್ಗಗಳ
ಕಲ್ಯಾಣಾಧಿಕಾರಿ ಎಸ್.ಆರ್.ಗಂಗಪ್ಪ ಸೇರಿದಂತೆ ತಾ.ಪಂ ಇಓ ಗಳು,
ಅಧಿಕಾರಿಗಳು ಹಾಜರಿದ್ದರು.