ಅನನ್ಯ : ಹೆಚ್.ಬಿ.ಮಂಜುನಾಥ್
ಸ್ವಾತಂತ್ರ್ಯ ಹೋರಾಟಕ್ಕೆ ದಾವಣಗೆರೆ ಜಿಲ್ಲೆ ಅದರಲ್ಲಿಯೂ
ದಾವಣಗೆರೆ ನಗರದ ಕೊಡುಗೆ ತುಂಬ ಮಹತ್ತರವಾದದ್ದು
ಎಂದು ಪತ್ರಕರ್ತ, ವ್ಯಂಗ್ಯ ಚಿತ್ರಕಾರ ಹಾಗೂ ಚಿಂತಕರಾದ
ಹೆಚ್.ಬಿ.ಮಂಜುನಾಥ್ ಅಭಿಪ್ರಾಯ ಪಟ್ಟರು.
ಶುಕ್ರವಾರ ದಾವಣಗೆರೆ ಮಹಾನಗರ ಪಾಲಿಕೆ ಆವರಣದಲ್ಲಿ
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಕನ್ನಡ
ಮತ್ತು ಸಂಸ್ಕøತಿ ಇಲಾಖೆ ಹಾಗೂ ಯುವ ಸಬಲೀಕರಣ ಮತ್ತು
ಕ್ರೀಡಾ ಇಲಾಖೆ ಇವರ ವತಿಯಿಂದ ಆಯೋಜಿಸಲಾಗಿದ್ದ
ಸ್ವಾತಂತ್ರ್ಯದ ಅಮೃತ ಮಹೋತ್ಸವ
ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಸ್ವಾತಂತ್ರ್ಯ ಹೋರಾಟದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಲ್ಲಿ
ಬಾಲಗಂಗಾಧರ ತಿಲಕರು ಸ್ವತಂತ್ರ್ಯ ಹೋರಾಟಕ್ಕೆ
ಸಾರ್ವಜನಿಕರನ್ನು ಸೇರಿಸಲು ಗಣೇಶೋತ್ಸವ ಆಯೋಜಿಸಿದ್ದ
ಮಾದರಿಯಲ್ಲಿ ದಾವಣಗೆರೆಯ ಹೋರಾಟಗಾರರು ಬಸವ
ಜಯಂತಿ ಆಚರಿಸುವ ಮೂಲಕ ಸ್ವಾತಂತ್ರ್ಯ ಪ್ರೇಮಿಗಳನ್ನ
ಒಗ್ಗೂಡಿಸಲು ಶ್ರಮಿಸಿದ್ದು ಇತಿಹಾಸದಲ್ಲಿ ದಾಖಲಾಗಿದೆ.
ಹರ್ಡೇಕರ್ ಮಂಜಪ್ಪ ಅವರ ನೇತೃತ್ವದಲ್ಲಿ ಚೌಕಿಪೇಟೆಯ
ಮುಂಭಾಗ ದೊಡ್ಡಪೇಟೆಯಲ್ಲಿ ಉದ್ಘಾಟನೆಗೊಂಡ ಬಸವ
ಜಯಂತಿ ನಗರದಲ್ಲಿ ಸ್ವತಂತ್ರ್ಯ ಚಳುವಳಿಗೆ ಭದ್ರ
ಬುನಾದಿಯನ್ನು ಹಾಕಿತ್ತು. ಸಾರ್ವಜನಿಕರನ್ನು ಒಗ್ಗೂಡಿಸಲು
ವಿರಕ್ತ ಮಠದಲ್ಲಿ ನಡೆದ ಕಾರ್ಯಕ್ರಮಗಳು
ಸಹಕಾರಿಯಾದವು.
1932ರಲ್ಲಿ ಆರಂಭವಾದ ಕಾನೂನುಭಂಗ ಚಳುವಳಿಯ
ಸ್ವದೇಶಿ ಚಳುವಳಿ ಜವಳಿ ಅಂಗಡಿಗಳಲಿದ್ದ ವಿದೇಶಿ
ಬಟ್ಟೆಗಳನ್ನು ಸುಡುವ ಮೂಲಕ ವಸ್ತ್ರದಹನ
ಚಳುವಳಿಗೆ ಪ್ರೇರಕವಾಯ್ತು. ಹಾಗೂ
ಮಂದಗಾಮಿಗಳು ಮತ್ತು ಪುರೋಗಾಮಿಗಳು
ಆರಂಭಿಸಿದ ಪ್ರಭಾತ್ ಪೇರಿ ನಗರದ ಬೆಳ್ಳುಡಿ ಗಲ್ಲಿಯಿಂದ
ಪ್ರಾರಂಭವಾಗಿ ಕಾಸಲ್ ಶ್ರೀನಿವಾಸ ಶೆಟ್ಟಿ ಭವನದ ಆವರಣದಲ್ಲಿ
ಕೊನೆಗೊಳ್ಳುತ್ತಿತ್ತು.
ಮಹಾತ್ಮ ಗಾಂಧೀಜಿಯವರು ದಾವಣಗೆರೆಗೂ ಭೇಟಿ
ನೀಡಬೇಕು ಎಂಬುದು ಸ್ವಾತಂತ್ರ್ಯ ಹೋರಾಟಗಾರರಾಗಿದ್ದ
ಕಾಸಲ್ ಶ್ರೀನಿವಾಸ್ ಶೆಟ್ಟಿ ಅವರ ಬಹು ದೊಡ್ಡ ಆಶಯವಾಗಿದ್ದು,
ಗಾಂಧೀಜಿಯವರಿಗೆ ದಾವಣಗೆರೆಗೆ ಬರಬೇಕು ಎಂದು ಪತ್ರ
ಬರೆದರಂತೆ. ಆಗ ಗಾಂಧೀಜಿ ಮೂರು ಪ್ರಶ್ನೆಗಳನ್ನು
ಕೇಳಿದರಂತೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಕ್ರಿಯವಾಗಿ
ಭಾಗವಹಿಸುತ್ತಿದ್ದಿರಾ? ಸ್ವತಃ ಖಾದಿ ಬಟ್ಟೆಯನ್ನು
ತೊಡುತ್ತಿದ್ದಿರಾ? ಹರಿಜನರನ್ನು ನಿಮ್ಮ ಮನೆಗೆ ಪ್ರವೇಶಿಸಲು
ಅವಕಾಶ ಕಲ್ಪಿಸಿದ್ದಿರಾ? ಎಂದು ಕೇಳಿದ ಪ್ರಶ್ನೆಗೆ ಸಮಂಜಸವಾಗಿ
ಉತ್ತರಿಸಿದ ಶ್ರೀನಿವಾಸ್ ಶೆಟ್ಟಿ ಅವರಿಗೆ ಗಾಂಧೀಜಿಯವರು ಮತ್ತೆ
ಮೂರು ಷರತ್ತುಗಳನ್ನು ಬರೆದು ಇದಕ್ಕೆ
ಒಪ್ಪುವುದಾದರೆ ದಾವಣಗೆರೆಗೆ ಬರುತ್ತೇನೆ ಎಂದು
ಮರುಪತ್ರ ಬರೆದರಂತೆ.
ಗಾಂಧೀಜಿಯವರು ಕಾಸಲ್ ಶ್ರೀನಿವಾಸ ಶೆಟ್ಟಿ ಅವರಿಗೆ ನಾನು
ದಾವಣಗೆರೆಯ ಯಾವ ಭಾಗದಲ್ಲಿ ಬಂದು ನಿಲ್ಲುತ್ತೇನೋ
ಅಥವಾ ಅದರ ಹತ್ತಿರದ ಜಾಗದಲ್ಲಿ ಹರಿಜನರಿಗೆ ಶಿಕ್ಷಣಕ್ಕೆ
ಅನುಕುಲವಾಗುವ ಒಂದು ಶಾಸ್ವತವಾದ ಕೆಲಸ ಆಗಬೇಕು.
ಹರಿಜನರು ವಾಸ ಮಾಡುವ ಜಾಗಕ್ಕೆ ಕರೆದುಕೊಂಡು
ಹೋಗಬೇಕು. ದಾವಣಗೆರೆಗೆ ಬಂದು ಹೋಗುವವರೆಗೂ
ನನ್ನೊಂದಿಗೆ ಇರಲು ಮೂರು ಜನ ಹರಿಜನ
ಸ್ವಯಂಸೇವಕರು ಆಗಬೇಕು ಎಂದು ಸೂಚಿಸಿದರು. ಈ
ಷರತ್ತುಗಳನ್ನು ಈಡೇರಿಸುತ್ತೇವೆ ಎಂದು ತಿಳಿಸಿದ್ದು, 1934
ಮಾ.2 ರಂದು ಗಾಂಧೀಜಿ ದಾವಣಗೆರೆಗೆ ಭೇಟಿ ನೀಡಿದರು. ಅವರ
ಷರತ್ತಿನಂತೆ ಹರಿಜನ ವಿದ್ಯಾರ್ಥಿ ನಿಲಯದ ಶಂಕು
ಸ್ಥಾಪನೆಯನ್ನು ಗಾಂಧಿಯವರಿಂದ ನೆರವೇರಿಸಿದ್ದು ಐತಿಹಾಸಿಕ.
ಭಾರತದ ಇತಿಹಾಸದಲ್ಲಿ ಗಾಂಧಿಯವರು ಶಂಕು ಸ್ಥಾಪನೆ
ನೇರವೇರಿಸಿರುವುದು 2 ಕಾರ್ಯಕ್ರಮಗಳಲ್ಲಿ ಮಾತ್ರ.
ಅದರಲ್ಲಿ ದಾವಣಗೆರೆಯೂ ಒಂದೆಂಬುದು ಹೆಗ್ಗಳಿಕೆ. ನಂತರ
ಚನ್ನಗಿರಿ ರಂಗಪ್ಪನವರು ಗಾಂಧೀಜಿಯವರನ್ನು ಹರಿಜನ
ಕಾಲೋನಿ ಈಗಿನ ಗಾಂಧಿ ನಗರಕ್ಕೆ ಕರೆದುಕೊಂಡು
ಹೋಗಿದ್ದರು.
1942ರಲ್ಲಿ ಕ್ವಿಟ್ ಇಂಡಿಯಾ ಚಳುವಳಿ ಆರಂಭವಾದಾಗ ಇಲ್ಲಿನ
ಹೋರಾಟಗಾರರು ತಾಲ್ಲೂಕು ಆಫೀಸಿನ ಖಜಾನೆ ಲೂಟಿಗೆ ಹುನ್ನಾರ
ಮಾಡಿದಾಗ ಗೌಪ್ಯ ಸ್ಥಳಗಳಲ್ಲಿದ್ದ ಬ್ರಿಟಿಷ್ ಪೊಲೀಸರು ಅವರ
ಮೇಲೆ ಗೋಲಿಬಾರ್ ನಡೆಸಿದರು. ಆ ಸಂದರ್ಭದಲ್ಲಿ ಇಬ್ಬರು
ಸ್ವಾತಂತ್ರ್ಯ ಹೋರಾಟಗಾರರು ಗೋಲಿಬಾರ್ನಲ್ಲಿ ಮಡಿದು
ತೀವ್ರಗಾಯ ಗೊಂಡ ಮೂರು ಹೋರಾಟಗಾರರು ಮುಂದಿನ
ದಿನಗಳಲ್ಲಿ ಅಸುನೀಗಿದರು. ಇಂತಹ ಹಲವಾರು ಹೋರಾಟಗಳಿಗೆ
ದಾವಣಗೆರೆ ಸಾಕ್ಷಿ ಆಗಿದೆ ಎಂದರು.
ದಾವಣಗೆರೆ ಪುರಸಭಾ ಭವನದ ಹಿಂಭಾಗದಲ್ಲಿ ಆಗ ಸ್ಟೇಷನ್
ಕೋರ್ಟ್ನಲ್ಲಿ ಅರಣ್ಯ ಸತ್ಯಾಗ್ರಹಿಗಳ ವಿಚಾರಣೆ ನಡೆಸಿದಾಗ
ಸತ್ಯಾಗ್ರಹಿಗಳ ಹೇಳಿಕೆಗಳು ದಂಡಾಧಿಕಾರಿಗಳಿಗೆ ಅಚ್ಚರಿ
ತಂದವು. ವಯಸ್ಸು ಕೇಳಿ ಪ್ರಶ್ನಿಸಿದರೆ ಸ್ವತಂತ್ರ್ಯ
ಪ್ರಜ್ಞೆ ಬಂದಿದ್ದರಿಂದ ಲೆಕ್ಕಾ ಹಾಕಿ ವಯಸ್ಸು ಹೇಳುತ್ತಿದ್ದರು.
ಕೆಲಸ ಏನೆಂದು ಪ್ರಶ್ನಿಸಿದರೆ ದೇಶ ಸೇವೆ ಎಂಬ ಉತ್ತರ
ನೀಡುತ್ತಿದ್ದರು. ಇದಕ್ಕೆ ಸಿಟ್ಟಿಗೆದ್ದ ದಂಡಾಧಿಕಾರಿ ಅವರಿಗೆ ಆಗಿನ
ಕಾಲದಲ್ಲೆ ರೂ. 500 ದಂಡ ತೆರದಿದ್ದರೆ 48 ತಿಂಗಳು ಕಾಲ ಕಠಿಣ
ಶಿಕ್ಷೆ ಅನುಭವಿಸಬೇಕು ಎಂದು ಸೂಚಿಸಿದ್ದರು. ಶಿಕ್ಷೆಗೆ
ಒಳಗಾದ ರಾಜಕೀಯ ಬಂಧಿಗಳನ್ನು ಛಡಿ ಏಟಿನಿಂದ
ಶಿಕ್ಷಿಸುತ್ತಿದ್ದರು ಎಂದರು.
ಕಾರ್ಯಕ್ರಮದಲ್ಲಿ ಉಧ್ಘಾಟನಾ ಮಾತುಗಳನ್ನಾಡಿದ ಜಿಲ್ಲಾಧಿಕಾರಿ
ಮಹಾಂತೇಶ್ ಬೀಳಗಿ, ಇತ್ತೀಚಿನ ಮಕ್ಕಳಲ್ಲಿ
ಸ್ವಾತಂತ್ರ್ಯೋತ್ಸವದ ಹುರುಪು, ಹುಮ್ಮಸ್ಸು
ಕಡಿಮೆಯಾಗುತ್ತಿದೆ. ಸ್ವಾತಂತ್ರ್ಯ ಹೇಗೆ ಬಂತು ಎಂದು
ತಿಳಿದುಕೊಳ್ಳುವ ವ್ಯವದಾನವಿಲ್ಲ. ಕೇವಲ ಪರೀಕ್ಷೆಗಳಲ್ಲಿ
ಅಂಕ ಪಡೆಯಲು ಮಾತ್ರ ಓದುತ್ತಿದ್ದಾರೆ ವಿನಃ ಆದರೆ
ಅದರಲ್ಲಿರುವ ಸ್ವಾತಂತ್ರ್ಯದ ಕುರಿತಾದ ಜ್ವಾಲೆಯನ್ನು
ಅರಿತುಕೊಳ್ಳುವಲ್ಲಿ ಅಸಡ್ಡೆತನ ತೋರುತ್ತಿದ್ದಾರೆ. ಅವರಲ್ಲಿ
ದೇಶ ಪ್ರೇಮದ ಕಿಚ್ಚು ಕಡಿಮೆಯಾಗುತ್ತಿದೆ ಎಂದರು.
ನಮಗೆ ಸ್ವಾತಂತ್ರ್ಯ ಹಾಗೆ ಬಂದಿಲ್ಲ. ನಾವು ಈಗ
ಅನುಭವಿಸುತ್ತಿರುವ ಸ್ವಾತಂತ್ರ್ಯಕ್ಕೆ ಸಾಕಷ್ಟು
ಬೆಲೆಯನ್ನು ತೆತ್ತಿದ್ದೇವೆ. ಯಾರು ದೇಶದ
ಸ್ವಾತಂತ್ರ್ಯಕ್ಕಾಗಿ ಪ್ರಾಣ ತೆತ್ತಿದ್ದಾರೆ ಎಂಬುದರ ಬಗ್ಗೆ ಇಂದಿನ
ಮಕ್ಕಳಿಗೆ ಅರಿವು ಮೂಡಿಸಬೇಕು. ಹಾಗೂ ದೇಶಕ್ಕೆ
ಸ್ವಾತಂತ್ರ್ಯ ಹೇಗೆ ಬಂತು ಅದನ್ನು ಹೇಗೆ
ಉಳಿಸಿಕೊಳ್ಳಬೇಕು ಎಂಬುದರ ಬಗ್ಗೆ ಇಂದಿನ ಯುವಜನತೆ
ಅರಿತುಕೊಳ್ಳಬೇಕು. ಮಕ್ಕಳಲ್ಲಿ ದೇಶ ಪ್ರೇಮ ಎಂಬುದು
ಕೇವಲ ಪ್ರಬಂಧ ಸ್ಪರ್ಧೆಗೆ ಸೀಮಿತವಾಗದೆ ಆಚರಣೆಗೂ
ತರುವಲ್ಲಿ ಪ್ರೇರೆಪಿಸುವ ಜವಬ್ದಾರಿ ನಮ್ಮೆಲ್ಲರದ್ದು ಎಂದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಸಿಇಒ ವಿಜಯ
ಮಹಾಂತೇಶ ದಾನಮ್ಮನವರ್, ಇಂದಿನ ಯುವಪೀಳಿಗೆ
ಆಧುನಿಕತೆ ಹಾಗೂ ಪಾಶ್ಚಿಮಾತ್ಯಕ್ಕೆ ಮಾರುಹೋಗಿದ್ದಾರೆ.
ಅವರ ಭಾವನೆಯಲ್ಲಿ ನಾವು ದೇಶಾಭಿಮಾನವನ್ನು ಭಿತ್ತುವ
ಕೆಲಸವಾಗಬೇಕು. ಹಾಗೂ ಅವರಲ್ಲಿ ಸಂಯಮ, ಸೌಹಾರ್ದತೆ,
ಸಹಬಾಳ್ವೆಯಂತಹ ಗುಣಗಳನ್ನು ರೂಪಿಸಬೇಕಾಗಿದೆ. ನಾಡು
ನನ್ನದು ಎನ್ನದ ಎದೆ ಸುಡುಗಾಡು ಎಂಬ ಕುವೆಂಪು ಅವರ
ನಾಣ್ಣುಡಿಯಂತೆ ನಾವು ಪ್ರತಿಯೊಬ್ಬರಲ್ಲೂ ದೇಶದ ಬಗ್ಗೆ
ಅಭಿಮಾನ ಮತ್ತು ನಾಡು-ನುಡಿಯ ಬಗ್ಗೆ ಒಲುಮೆಯನ್ನು
ಬೆಳೆಸಬೇಕು ಎಂದು ಸ್ವಾತಂತ್ರ್ಯ ಸಂಗ್ರಾಮದ ಕುರಿತು
ಸವಿಸ್ತಾರವಾಗಿ ತಿಳಿಸಿದರು.
ದೇಶದ 75 ನೇ ಸ್ವಾತಂತ್ರ್ಯೋತ್ಸವದ ಸ್ಮರಣಾರ್ಥಕ
ದಿನವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು
ಆದೇಶಿಸಿರುವ ಅಮೃತ ಮಹೋತ್ಸವ ಕಾರ್ಯಕ್ರಮದ
ಅಂಗವಾಗಿ ಇತರ ರಾಜ್ಯಗಳು ಹಾಗೂ ಕೇಂದ್ರಾಡಳಿತ
ಪ್ರದೇಶಗಳಲ್ಲಿ 75 ವಾರಗಳ ಕಾಲ ವಿವಿಧ
ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ. ಈ
ನಿಟ್ಟಿನಲ್ಲಿ ನಮ್ಮ ಜಿಲ್ಲೆಯಲ್ಲೂ ಸೈಕಲ್ ಜಾಥಾ, ಭಾಷಣ ಸ್ಪರ್ಧೆ,
ಗಾಯನ, ವಿಚಾರ ಸಂಕಿರಣ ಸೇರಿದಂತೆ ಸ್ವಾತಂತ್ರ್ಯ
ಸಂಗ್ರಾಮದ ಕುರಿತು ಯುವಜನರಲ್ಲಿ ಜಾಗೃತಿ
ಮೂಡಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಮಹಾನಗರಪಾಲಿಕೆ ಮಹಾಪೌರರಾದ
ಎಸ್.ಟಿ.ವೀರೇಶ್ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಹಾಗೂ ಕಲಾವಿದರಾದ ಐರಣಿ ಚಂದ್ರು, ಹೆಗ್ಗೆರೆ ರಂಗಪ್ಪ,
ಕೆ.ಪರಶುರಾಮ ಹೊನ್ನಾಳಿ, ಕೊಂಡಯ್ಯ ನ್ಯಾಮತಿ,
ಚಂದ್ರಪ್ಪ , ವಂಶತ್ ಹರಿಹರ ಇವರು ದೇಶಭಕ್ತಿ
ಗೀತೆಗಳನ್ನು ಹಾಡುವ ಮೂಲಕ ಸಂಗೀತ ಕಾರ್ಯಕ್ರಮ
ನಡೆಸಿಕೊಟ್ಟರು.
ಕಾರ್ಯಕ್ರಮಕ್ಕೂ ಮೊದಲು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ
ನೇತೃತ್ವದಲ್ಲಿ ಎಲ್ಲಾ ಅಧಿಕಾರಿಗಳನೊಳಗೊಂಡಂತೆ ಸೈಕಲ್
ಜಾಥಾದ ಮೂಲಕ ನಗರದ ಡಿಸಿ ಸರ್ಕಲ್, ಗುಂಡಿ ವೃತ್ತ,
ವಿದ್ಯಾನಗರ, ಎಸಿ ಕಚೇರಿ, ವಿದ್ಯಾರ್ಥಿ ಭವನ, ಜಯದೇವ ವೃತ್ತ
ಮಾರ್ಗವಾಗಿ ಪಾಲಿಕೆ ಆವರಣ ತಲುಪಿ ಗಾಂಧೀಜಿ ಮತ್ತು
ಹುತಾತ್ಮರ ಧ್ವಜ ಸ್ತಂಭ ಅಂಬೇಡ್ಕರ್ ಮತ್ತು ಭಗತ್ ಸಿಂಗ್
ಇವರುಗಳ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿದರು.
ಕಾರ್ಯಕ್ರಮದಲ್ಲಿ ಮಹಾನಗರಪಾಲಿಕೆ ಆಯುಕ್ತರಾದ
ವಿಶ್ವನಾಥ್ ಮುದಜ್ಜಿ, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ
ಎಲ್.ಡಿ.ಗೋಣಪ್ಪ, ನಗರ ಯೋಜನೆ ಸ್ಥಾಯಿ ಸಮಿತಿ ಅಧ್ಯಕ್ಷೆ
ಉಮಾ ಪ್ರಕಾಶ್, ಸೋಗಿ ಶಾಂತಕುಮಾರ್, ಉಪವಿಭಾಗಾಧಿಕಾರಿ
ಮಮತ ಹೊಸಗೌಡರ್, ಯೋಜನಾ ನಿರ್ದೇಶಕಿ ನಜ್ಮ, ನೌಕರರ
ಸಂಘದ ಅಧ್ಯಕ್ಷ ಪಾಲಕ್ಷಿ, ತಹಶೀಲ್ದಾರ್ ಗಿರೀಶ್, ಹಿಂದುಳಿದ
ವರ್ಗದ ಅಧಿಕಾರಿ ಗಂಗಪ್ಪ, ಡಿ.ಡಿ.ಪಿ.ಐ ಪರಮೇಶ್ವರಪ್ಪ, ಅಲ್ಪ
ಸಂಖ್ಯಾತ ಇಲಾಖೆ ಅಧಿಕಾರಿ ಅಮಿತ್, ಕನ್ನಡ ಮತ್ತು ಸಂಸ್ಕøತಿ
ಇಲಾಖೆಯ ಸಹಾಯಕ ನಿರ್ದೇಶಕ ರವಿಚಂದ್ರ, ಸೇರಿದಂತೆ
ಮತ್ತಿತರರು ಉಪಸ್ಥಿತರಿದ್ದರು.