ಮುಂಜಾಗ್ರತಾ ಕ್ರಮ

ಜಿಲ್ಲೆಯ ಗಡಿ ಪ್ರವೇಶಿಸುವ ಮಾರ್ಗಗಳಲ್ಲಿ ಜನರಿಗೆ
ಕೋವಿಡ್ ತಪಾಸಣೆ ನಡೆಸಿ- ಬಿ.ಎ. ಬಸವರಾಜ

ದಾವಣಗೆರೆ ಜಿಲ್ಲೆಯಲ್ಲಿ ಕೋವಿಡ್ ವ್ಯಾಪಕವಾಗಿ ಹರಡುವುದನ್ನು
ತಡೆಗಟ್ಟಲು ಪರಿಣಾಮಕಾರಿಯಾದ ಕ್ರಮಗಳನ್ನು
ತೆಗೆದುಕೊಳ್ಳುವುದು ಅನಿವಾರ್ಯವಾಗಿದ್ದು, ಈ ದಿಸೆಯಲ್ಲಿ
ಜಿಲ್ಲೆಯ ಗಡಿ ಪ್ರವೇಶಿಸುವ ಮಾರ್ಗಗಳಲ್ಲಿ ಜನರಿಗೆ ಕೋವಿಡ್
ತಪಾಸಣೆ ನಡೆಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಜಾತ್ರೆ,
ರಥೋತ್ಸವ, ದೇವಸ್ಥಾನ ಮುಂತಾದ ಪ್ರದೇಶಗಳಲ್ಲಿ
ಜನಸಂದಣಿಯನ್ನು ನಿರ್ದಾಕ್ಷಿಣ್ಯವಾಗಿ ತಡೆಗಟ್ಟಬೇಕು ಎಂದು
ನಗರಾಭಿವೃದ್ಧಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಎ.
ಬಸವರಾಜ ಅವರು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಜಿಲ್ಲೆಯಲ್ಲಿನ ಕೋವಿಡ್ ಪರಿಸ್ಥಿತಿ ಹಾಗೂ ಲಸಿಕೆ ಅಭಿಯಾನ
ಕುರಿತಂತೆ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ
ಬುಧವಾರ ಏರ್ಪಡಿಸಲಾದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ
ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಸದ್ಯ ಕೋವಿಡ್‍ನ 854 ಸಕ್ರಿಯ
ಪ್ರಕರಣಗಳಿದ್ದು, ಕೋವಿಡ್ ವ್ಯಾಪಕವಾಗಿ ಹರಡುವುದನ್ನು
ತಡೆಗಟ್ಟುವುದು ಅವಶ್ಯವಾಗಿದೆ. ಇದಕ್ಕಾಗಿ ಅಗತ್ಯ ಎಲ್ಲ
ಮುಂಜಾಗ್ರತಾ ಕ್ರಮಗಳನ್ನು ಅಧಿಕಾರಿಗಳು
ಕೈಗೊಳ್ಳುವುದರ ಜೊತೆಗೆ, ಎಲ್ಲರಿಗೂ ಲಸಿಕೆ ನೀಡುವುದು ಅತಿ
ಮುಖ್ಯವಾಗಿದೆ. ಜಿಲ್ಲೆಯ ಗಡಿ ಪ್ರದೇಶಗಳಲ್ಲಿ ತಪಾಸಣೆ
ನಡೆಸುವ ಕಾರ್ಯ ತಕ್ಷಣದಿಂದಲೇ ಆಗಬೇಕು. ರಾಷ್ಟ್ರೀಯ
ಹೆದ್ದಾರಿ ಮೂಲಕ ದಾವಣಗೆರೆ ನಗರದೊಳಗೆ ಪ್ರವೇಶಿಸುವ
ವಾಹನಗಳಲ್ಲಿನ ಜನರ ತಪಾಸಣೆ ನಡೆಸಲು ಕ್ರಮ ವಹಿಸಬೇಕು.
ಜಿಲ್ಲೆಯ ಗಡಿ ಸಂಪರ್ಕಿಸುವ ಮಾರ್ಗಗಳಲ್ಲಿ ಬ್ಯಾರಿಕೇಡ್ ನಿರ್ಮಿಸಿ,
ಇತರೆ ರಾಜ್ಯ ಮತ್ತು ಜಿಲ್ಲೆಗಳಿಂದ ಆಗಮಿಸುವ ವಾಹನಗಳಲ್ಲಿನ
ಜನರಿಗೆ ಥರ್ಮಲ್‍ಸ್ಕ್ಯಾನರ್, ಪಲ್ಸ್‍ಆಕ್ಸಿಮೀಟರ್ ಉಪಕರಣ ಬಳಸಿಕೊಂಡು
ಕೋವಿಡ್ ತಪಾಸಣೆ ನಡೆಸಿ, ಸೋಂಕು ಲಕ್ಷಣ ಕಂಡುಬರುವವರಿಗೆ
ಕೋವಿಡ್ ಪರೀಕ್ಷೆ ನಡೆಸಬೇಕು, ಅಲ್ಲದೆ ಅಂತಹವರಿಗೆ ಸೂಕ್ತ
ಚಿಕಿತ್ಸೆ ಕೊಡಿಸಬೇಕು. ಹೀಗಾದಲ್ಲಿ ಸೋಂಕು ಇತರರಿಗೆ

ಹರಡದಂತೆ ಪ್ರಾಥಮಿಕ ಹಂತದಲ್ಲೇ ತಡೆಗಟ್ಟಿದಂತಾಗಲಿದೆ
ಎಂದು ಸಚಿವರು ಸೂಚನೆ ನೀಡಿದರು.
ಎಲ್ಲರಿಗೂ ಲಸಿಕೆ ನೀಡಿ : ಈವರೆಗೆ 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ
ನೀಡಲು ಅವಕಾಶ ಒದಗಿಸಲಾಗಿತ್ತು. ಕೇಂದ್ರ ಸರ್ಕಾರದ
ಸೂಚನೆಯಂತೆ ಮೇ. 01 ರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ
ನೀಡಲು ನಿರ್ದೇಶನ ಬಂದಿದೆ. ಹೀಗಾಗಿ ಜಿಲ್ಲೆಯಲ್ಲಿ ಲಸಿಕೆ ನೀಡುವ
ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ
ಅನುಷ್ಠಾನಗೊಳಿಸಬೇಕು. ಜಿಲ್ಲೆಯಲ್ಲಿ 45 ವರ್ಷ ಮೇಲ್ಪಟ್ಟ 4.17
ಲಕ್ಷ ಜನರಿಗೆ ಲಸಿಕೆ ನೀಡುವ ಗುರಿಯ ಬದಲಿಗೆ 1.30 ಲಕ್ಷ ಜನರಿಗೆ
ಮಾತ್ರ ಲಸಿಕೆ ನೀಡಲಾಗಿದ್ದು ಕೇವಲ ಶೇ. 31 ರಷ್ಟು ಮಾತ್ರ
ಸಾಧನೆಯಾಗಿರುವುದು ತೃಪ್ತಿದಾಯಕವಲ್ಲ ಎಂದು
ಅಸಮಾಧಾನ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ
ಅವರು ಪ್ರತಿಕ್ರಿಯಿಸಿ, ಕಳೆದ ಮಾರ್ಚ್ 01 ರಿಂದ ಈವರೆಗೆ ಜಿಲ್ಲೆಯಲ್ಲಿ
15639 ಆರೋಗ್ಯ ಕಾರ್ಯಕರ್ತರು, 5384 ಜನ ಮುಂಚೂಣಿ
ಕಾರ್ಯಕರ್ತರಿಗೆ ಲಸಿಕೆ ನೀಡಿದ್ದು, ಶೇ. 92 ರಷ್ಟು
ಸಾಧನೆಯಾಗಿದೆ. 45 ವರ್ಷ ಮೇಲ್ಪಟ್ಟ 417428 ಜನರಿಗೆ ಲಸಿಕೆ ನೀಡುವ
ಗುರಿಗೆ ಈವರೆಗೆ 130793 ಜನರಿಗೆ ಲಸಿಕೆ ನೀಡಿದ್ದು ಶೇ. 31 ರಷ್ಟು
ಸಾಧನೆಯಾಗಿದೆ. ಮೊದಮೊದಲು ಲಸಿಕೆ ಪಡೆಯಲು ಹಿಂದೇಟು
ಹಾಕುತ್ತಿದ್ದ ಪರಿಸ್ಥಿತಿ ಇತ್ತು. ಆದರೆ ಇದೀಗ ಜಿಲ್ಲೆಯ ಎಲ್ಲ
ಜನಪ್ರತಿನಿಧಿಗಳು, ಉನ್ನತ ಅಧಿಕಾರಿಗಳು ಜನರಲ್ಲಿದ್ದ ತಪ್ಪು
ಕಲ್ಪನೆಗಳನ್ನು ತೊಡೆದುಹಾಕಿ, ಖುದ್ದಾಗಿ ಲಸಿಕೆ ಪಡೆಯುವ
ಮೂಲಕ ಜನರಲ್ಲಿ ವಿಶ್ವಾಸ ಮೂಡಿಸುವ ಕಾರ್ಯ ಮಾಡಿದ್ದೇವೆ.
ಹೀಗಾಗಿ ಜನರು ಇದೀಗ ಸ್ವಯಂ ಪ್ರೇರಣೆಯಿಂದ ಲಸಿಕೆ
ಪಡೆಯಲು ಮುಂದೆ ಬರುತ್ತಿದ್ದಾರೆ. ಬರುವ ದಿನಗಳಲ್ಲಿ ಲಸಿಕೆ
ಅಭಿಯಾನವನ್ನು ಇನ್ನಷ್ಟು ಪರಿಣಾಮಕಾರಿಯಾಗಿ
ಕೈಗೊಳ್ಳಲಾಗುವುದು ಎಂದರು.
ಲಸಿಕೆ ಡೋಸ್ ಕೊರತೆಯಾಗುವಂತಿಲ್ಲ : ಕೋವಿಡ್
ನಿಯಂತ್ರಣಕ್ಕಾಗಿ ನೀಡಲಾಗುತ್ತಿರುವ ಕೋವ್ಯಾಕ್ಸಿನ್ ಹಾಗೂ
ಕೋವಿಶೀಲ್ಡ್ ಲಸಿಕೆಯ ಡೋಸ್‍ಗಳನ್ನು ಅಗತ್ಯಕ್ಕೆ ಅನುಗುಣವಾಗಿ
ಮೊದಲೇ ಇಲಾಖೆಯಿಂದ ಪಡೆದು ದಾಸ್ತಾನು ಮಾಡಿಕೊಂಡು, ಹಂಚಿಕೆ
ಮಾಡಬೇಕು. ಯಾವುದೇ ಕಾರಣಕ್ಕೂ ಲಸಿಕೆ ಕೊರತೆ ಕಾರಣ
ಹೇಳಿ ಜನರನ್ನು ಹಿಂದಕ್ಕೆ ಕಳುಹಿಸುವ ಪರಿಸ್ಥಿತಿ
ನಿರ್ಮಾಣವಾಗಬಾರದು. ಒಂದು ವೇಳೆ ಇಂತಹ ದೂರುಗಳು
ಬಂದಲ್ಲಿ, ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ
ತೆಗೆದುಕೊಳ್ಳಬೇಕಾಗುತ್ತದೆ ಎಂದು ಸಚಿವರು ಎಚ್ಚರಿಕೆ
ನೀಡಿದರು. ಸಂಸದ ಜಿ.ಎಂ. ಸಿದ್ದೇಶ್ವರ ಅವರು ಇದಕ್ಕೆ ಪೂರಕವಾಗಿ
ಮಾತನಾಡಿ, ಮಲೆಬೆನ್ನೂರು, ಹರಿಹರ ನಂತಹ ದೊಡ್ಡ ಊರಿನಲ್ಲಿ
ದಿನಕ್ಕೆ ಕೇವಲ 30 ಜನರಿಗೆ ಲಸಿಕೆ ಹಾಕಲಾಗುತ್ತಿದ್ದು, ಈ ರೀತಿಯಾದರೆ
ಲಸಿಕೆ ಅಭಿಯಾನಕ್ಕೆ ಹಿನ್ನಡೆಯಾಗುತ್ತದೆ ಎಂದರು. ಡಿಹೆಚ್‍ಒ ಡಾ.
ನಾಗರಾಜ್ ಉತ್ತರಿಸಿ, ಜಿಲ್ಲೆಯಲ್ಲಿ ಈವರೆಗೆ ಕೋವಿಶೀಲ್ಡ್-148990,
ಕೋವ್ಯಾಕ್ಸಿನ್-21120, ಒಟ್ಟು 170110 ವಯಲ್ಸ್ ಪೂರೈಸಲಾಗಿತ್ತು. ಈ
ಪೈಕಿ 163100 ವಯಲ್ಸ್ ಲಸಿಕೆ ಬಳಕೆಯಾಗಿದ್ದು, 7010 ಬಾಕಿ ಉಳಿದಿದೆ.
ಮಂಗಳವಾರದಂದು ಸರ್ಕಾರದಿಂದ 6600 ವಯಲ್ಸ್ ಲಸಿಕೆ ಬಂದಿದೆ.
ಲಸಿಕೆ ಪೂರೈಕೆಗೆ ಅನುಗುಣವಾಗಿ ವಿವಿಧ ಕೇಂದ್ರಗಳಿಗೆ ಹಂಚಿಕೆ
ಮಾಡಲಾಗುತ್ತಿದೆ. ಕೊರತೆಯಾಗದಂತೆ ಸೂಕ್ತ ಕ್ರಮ
ವಹಿಸಲಾಗುವುದು. ಸದ್ಯ ಜಿಲ್ಲೆಯಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ 438,

ಖಾಸಗಿ ಆಸ್ಪತ್ರೆಯಲ್ಲಿ 24 ರೆಮ್‍ಡೆಸಿವರ್ ಔಷಧಿ ದಾಸ್ತಾನು ಲಭ್ಯವಿದೆ
ಎಂದರು.
ಖಾಸಗಿ ಆಸ್ಪತ್ರೆಗಳ ಶೇ. 50 ಬೆಡ್ ಸರ್ಕಾರಕ್ಕೆ : ಕೋವಿಡ್
ಪ್ರಕರಣಗಳಿಗೆ ಚಿಕಿತ್ಸೆ ಒದಗಿಸುವ ನಿಟ್ಟಿನಲ್ಲಿ ಖಾಸಗಿ
ಆಸ್ಪತ್ರೆಗಳಲ್ಲಿನ ಶೇ. 50 ರಷ್ಟು ಬೆಡ್‍ಗಳನ್ನು
ಮೀಸಲಿಡಬೇಕು. ಅಧಿಕಾರಿಗಳು ಇದನ್ನು
ಖಚಿತಪಡಿಸಿಕೊಳ್ಳಬೇಕು. ಇದರಲ್ಲಿ ಯಾವುದೇ ಆಸ್ಪತ್ರೆಗಳಿಗೆ
ವಿನಾಯಿತಿ ಇಲ್ಲ. ಯಾವುದೇ ಒತ್ತಡ ಅಥವಾ ಪ್ರಭಾವಕ್ಕೆ
ಅಧಿಕಾರಿಗಳು ಒಳಗಾಗುವ ಅಗತ್ಯವಿಲ್ಲ. ಸಹಕರಿಸದ ಖಾಸಗಿ
ಆಸ್ಪತ್ರೆಗಳ ಮಾನ್ಯತೆ ರದ್ದುಪಡಿಸುವ ಕಠಿಣ ಕ್ರಮ
ಕೈಗೊಳ್ಳಲು ಹಿಂಜರಿಯಬೇಡಿ ಎಂದು ಸಚಿವರು ಜಿಲ್ಲಾಧಿಕಾರಿಗಳಿಗೆ
ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ 09 ಸರ್ಕಾರಿ ಆಸ್ಪತ್ರೆಗಳಲ್ಲಿ 1450 ಬೆಡ್
ಹಾಗೂ 11 ಖಾಸಗಿ ಆಸ್ಪತ್ರೆಗಳಲ್ಲಿ 2273 ಬೆಡ್ ಸೇರಿದಂತೆ ಒಟ್ಟು 3723
ಬೆಡ್‍ಗಳು ಜಿಲ್ಲೆಯಲ್ಲಿ ಕೋವಿಡ್ ರೋಗಿಗಳಿಗೆ ಚಿಕಿತ್ಸೆಗೆ
ಮೀಸಲಿದ್ದು, ಈ ಪೈಕಿ ಸದ್ಯ 293 ಬೆಡ್‍ಗಳಲ್ಲಿ ಕೋವಿಡ್ ರೋಗಿಗಳು
ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ
6000 ಲೀ. ಸಾಮಥ್ರ್ಯದ ಆಕ್ಸಿಜನ್ ಘಟಕ ಲಭ್ಯವಿದ್ದು, ಇದರ ಜೊತೆಗೆ
ಖಾಸಗಿಯಲ್ಲಿಯೂ ಆಕ್ಸಿಜನ್ ಪೂರೈಕೆಗೆ ವ್ಯವಸ್ಥೆ
ಮಾಡಿಕೊಳ್ಳಲಾಗಿದೆ. ಹೀಗಾಗಿ ಜಿಲ್ಲೆಯಲ್ಲಿ ಆಕ್ಸಿಜನ್‍ನ ಯಾವುದೇ
ತೊಂದರೆ ಇಲ್ಲ ಎಂದರು.
ಜನಸಂದಣಿ ಹೆಚ್ಚಳ ತಡೆಗಟ್ಟಿ : ಕೋವಿಡ್ ಹರಡುವುದನ್ನು
ತಡೆಗಟ್ಟುವ ನಿಟ್ಟಿನಲ್ಲಿ, ಜನ ಹೆಚ್ಚು ಹೆಚ್ಚು ಒಂದೆಡೆ
ಸೇರುವುದನ್ನು ತಪ್ಪಿಸಬೇಕಿದೆ. ಹೀಗಾಗಿ ಜಾತ್ರೆ,
ರಥೋತ್ಸವಗಳನ್ನು ರದ್ದುಪಡಿಸಬೇಕು.
ಮದುವೆಗಳನ್ನು ಜನರು ಆದಷ್ಟು ಮುಂದೂಡುವುದು
ಒಳ್ಳೆಯದು ಎಂದು ಈ ಮೂಲಕ ಮನವಿ ಮಾಡಿಕೊಳ್ಳುತ್ತೇನೆ
ಎಂದು ಹೇಳಿದ ಸಚಿವರು, ಮದುವೆ ನಿಶ್ಚಯವಾಗಿದ್ದಲ್ಲಿ,
ಅಂತಹವರು ಕೋವಿಡ್ ನಿಯಂತ್ರಣಕ್ಕೆ ಅಗತ್ಯ ಮುಂಜಾಗ್ರತಾ
ಕ್ರಮಗಳೊಂದಿಗೆ 50 ಕ್ಕಿಂತ ಕಡಿಮೆ ಸಂಖ್ಯೆಯಲ್ಲಿ ಸೇರಿಸಿ
ನಡೆಸಬೇಕು. ಜನನಿಬಿಡ ಸ್ಥಳಗಳಲ್ಲಿ ಪ್ರತಿಯೊಬ್ಬರೂ ಮಾಸ್ಕ್
ಧರಿಸುವುದರ ಜೊತೆಗೆ ಅಂತರ ಕಾಯ್ದುಕೊಂಡು
ಇರಬೇಕು. ನಿಯಮಗಳ ಉಲ್ಲಂಘನೆಗೆ ದಂಡ ವಿಧಿಸುವುದರ
ಜೊತೆಗೆ ಜಾಗೃತಿ ಮೂಡಿಸುವ ಕಾರ್ಯಕ್ಕೆ ಜಿಲ್ಲಾಡಳಿತ ಹಾಗೂ
ಪೊಲೀಸ್ ಇಲಾಖೆ ಅಧಿಕಾರಿಗಳು ಹೆಚ್ಚಿನ ಒತ್ತು ನೀಡಬೇಕು
ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ
ಅವರು, ಜಿಲ್ಲೆಯಲ್ಲಿ ತಾವೇ ಖುದ್ದಾಗಿ ಜನನಿಬಿಡ ಸ್ಥಳಗಳಿಗೆ ಭೇಟಿ
ನೀಡಿ, ಮಾಸ್ಕ್ ಅಭಿಯಾನ ನಡೆಸುತ್ತಿದ್ದು, ಜನರು ಏನೂ ಆಗಿಯೇ
ಇಲ್ಲದಂತೆ ನಿರ್ಭೀತಿಯಿಂದ ಮಾಸ್ಕ್ ಇಲ್ಲದಂತೆ ಸಾಮಾಜಿಕ ಅಂತರ
ಮರೆತು ವರ್ತಿಸುತ್ತಿರುವುದು ಕಂಡುಬಂದಿದೆ. ನಿಯಮ
ಉಲ್ಲಂಘಿಸುವ ಅಂಗಡಿಗಳಿಗೆ ಹಾಗೂ ಕಲ್ಯಾಣ ಮಂಟಪಗಳಿಗೆ ದಂಡ
ವಿಧಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನೂ ಕಠಿಣ ಕ್ರಮ
ಕೈಗೊಳ್ಳಲಾಗುವುದು ಎಂದರು.
ಸಭೆಯಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕರುಗಳಾದ ಎಸ್.ಎ.
ರವೀಂದ್ರನಾಥ್, ಎಸ್.ವಿ. ರಾಮಚಂದ್ರಪ್ಪ, ಜಿ.ಪಂ. ಅಧ್ಯಕ್ಷೆ
ಶಾಂತಕುಮಾರಿ, ಮಹಾನಗರಪಾಲಿಕೆ ಮಹಾಪೌರ ಎಸ್.ಟಿ. ವೀರೇಶ್, ಜಿಲ್ಲಾ

ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಜಿಲ್ಲಾ ಸರ್ವೇಕ್ಷಣಾಧಿಕಾರಿ
ಡಾ. ರಾಘವನ್, ಜಿಲ್ಲಾ ಆರ್‍ಸಿಹೆಚ್ ಅಧಿಕಾರಿ ಡಾ. ಮೀನಾಕ್ಷಿ, ಜಿಲ್ಲಾಸ್ಪತ್ರೆ ಜಿಲ್ಲಾ
ಸರ್ಜನ್ ಡಾ. ಜಯಪ್ರಕಾಶ್, ಅಪರ ಜಿಲ್ಲಾಧಿಕಾರಿ ಪೂಜಾರ್
ವೀರಮಲ್ಲಪ್ಪ, ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್,
ಮಹಾನಗರಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ಸೇರಿದಂತೆ
ವಿವಿಧ ಇಲಾಖೆಗಳ ಅಧಿಕಾರಿಗಳು, ತಹಸಿಲ್ದಾರರು
ಭಾಗವಹಿಸಿದ್ದರು.

Leave a Reply

Your email address will not be published. Required fields are marked *