ಮಂಡಳಿ ತಂಡ ಭೇಟಿ

ಜೀವವೈವಿಧ್ಯ ಪುನಶ್ಚೇತನಕ್ಕೆ ಶಿಫಾರಸು

ಕುಂದುವಾಡ ಕೆರೆ ಅಭಿವೃದ್ಧಿ ಯೋಜನೆಯಿಂದ ಕೆರೆ
ಪರಿಸರದ ಜೀವ ಸಂಕುಲ ಆಪತ್ತಿಗೆ ಸಿಲುಕಿದೆ ಎಂಬ ವ್ಯಾಪಕ
ಸಾರ್ವಜನಿಕ ಆಕ್ಷೇಪಗಳ ಹಿನ್ನೆಲೆಯಲ್ಲಿ ಕರ್ನಾಟಕ
ಜೀವವೈವಿಧ್ಯ ಮಂಡಳಿ ಅಧ್ಯಕ್ಷರಾದ ಅನಂತ ಹೆಗಡೆ
ಅಶೀಸರ ನೇತೃತ್ವದ ತಂಡ ಏ.21 ರಂದು ಕುಂದುವಾಡ ಕೆರೆ
ಪ್ರದೇಶಕ್ಕೆ ಭೇಟಿ ನೀಡಿ ಪರಿಸರ ಪರಿಸ್ಥಿತಿ ವೀಕ್ಷಣೆ ಮಾಡಿ ವರದಿ
ಸಲ್ಲಿಸಿದ್ದಾರೆ.
ದಿನದಿಂದ ದಿನಕ್ಕೆ ಕೊರೊನ ಸೋಂಕು ವ್ಯಾಪಕವಾಗಿ
ಹರಡುತ್ತಿರುವ ನಿಟ್ಟಿನಲ್ಲಿ ಸಾರ್ವಜನಿಕ ಸಭೆ ಏರ್ಪಡಿಸದೆ
ತಂಡವು ಅರಣ್ಯ ಅಧಿಕಾರಿಗಳು, ಮಹಾನಗರಪಾಲಿಕೆ, ಸ್ಮಾರ್ಟ್ ಸಿಟಿ
ಅಧಿಕಾರಿಗಳೊಂದಿಗೆ ಕೆರೆ ವೀಕ್ಷಣೆ ಮಾಡಲಾಯಿತು. ಹಾಗೂ
ಕೆರೆ ಅಭಿವೃದ್ಧಿ ಯೋಜನೆ ಜಾರಿ ಮಾಡುವ ಪೂರ್ವದಲ್ಲಿ ಪರಿಸರ
ಅಧಿಕಾರಿ, ಜೀವವೈವಿಧ್ಯ ಸಮಿತಿ, ಜಿಲ್ಲಾ ಅರಣ್ಯಾಧಿಕಾರಿಗಳ
ಅಭಿಪ್ರಾಯ ಪಡೆದಿಲ್ಲ ಎಂದು ಜೀವವೈವಿಧ್ಯ ಮಂಡಳಿ ತಂಡ
ತಿಳಿಸಿದೆ.
ಕುಂದವಾಡ ಕೆರೆ ಅಭಿವೃದ್ಧಿ ಯೋಜನೆ ಅರ್ಧದಷ್ಟು ಜಾರಿ
ಆಗಿದೆ. ಕುಂದವಾಡ ಕೆರೆ ಪಾರಂಪರಿಕವಾಗಿ ಹಾಗೂ
ನೈಸರ್ಗಿಕವಾಗಿರುವ ಕೆರೆಯಾಗಿದ್ದು, ಚಾನೆಲ್‍ನಿಂದ ನೀರು
ತುಂಬಿಸಿ ವಿತರಿಸುವ ಕೃತಕ ಜಲಾಶಯ ಎಂದು
ಪರಿಗಣಿಸಬಾರದು. ಇಲ್ಲಿ ಅಪಾರ ಜೌಗು ಪ್ರದೇಶವಿದೆ. ಆದ್ದರಿಂದ
ಕೆರೆ ಸುತ್ತಲ ಪ್ರದೇಶದಲ್ಲಿ ವ್ಯಾಪಕ ವನೀಕರಣ ಯೋಜನೆ
ಜಾರಿ ಮಾಡಬೇಕು ಹಾಗೂ ಕುಬ್ಜ ಗಿಡಗಳನ್ನು ನೆಡಬೇಕು.
ಕೆರೆದಂಡೆಯ ಹೊರಗಿನ ಇಳಿಜಾರು ಪ್ರದೇಶದಲ್ಲಿ ಹುಲ್ಲು
ಬೆಳೆಸಬೇಕು ಎಂದು ಸಲಹೆ ನೀಡಿತು.
ಕೆರೆದಂಡೆ ಪ್ರದೇಶದಲ್ಲಿ ಕಾಂಕ್ರೀಟ್ ಕಾಮಗಾರಿ ಕಡಿಮೆ
ಮಾಡಬೇಕು. ಕೆರೆದಂಡೆ ಬಲಪಡಿಸುವ ಹೆಸರಲ್ಲಿ ಕೆರೆಯ
ಪಾತ್ರವನ್ನು ಕಿರಿದಾಗಿಸಲಾಗಿದೆ ಎಂಬ ಅಂಶವನ್ನು ತಂಡ
ಗಮನಿಸಿದೆ. ಕುಡಿಯುವ ನೀರಿನ ಉದ್ದೇಶ
ಮುಖ್ಯವಾಗಿರುವುದರಿಂದ ಇಲ್ಲಿ ಬೋಟಿಂಗ್ ಇತ್ಯಾದಿ ಸೇರಿದಂತೆ
ಪ್ರವಾಸೋದ್ಯಮಕ್ಕೆ ಉತ್ತೇಜನ ಸಲ್ಲದು. ನಿಯಮಿತ
ಅವಧಿಯಲ್ಲಿ ಮಾತ್ರ ಕೆರೆದಂಡೆಯಲ್ಲಿ ವಾಕಿಂಗ್‍ಗೆ ಅವಕಾಶ
ಕಲ್ಪಿಸಬೇಕು. ಪಕ್ಷಿಗಳು, ಜಲಚರಗಳು ಮೊದಲಿನಂತೆ

ಜೀವಿಸಲು ಪ್ರಶಾಂತ, ನೈಸರ್ಗಿಕ ವಾತಾವರಣ
ನಿರ್ಮಿಸಬೇಕು. ಈಗಾಗಲೇ ದಾವಣಗೆರೆ ಉಪ ಅರಣ್ಯ
ಸಂರಕ್ಷಣಾಧಿಕಾರಿಗಳು ಜೀವವೈವಿಧ್ಯ ಕಾಯಿದೆ, ವನ್ಯಜೀವಿ
ಕಾಯಿದೆ ಅಡಿ ಆಗಿರುವ ಲೋಪದೋಷಗಳ ಪಟ್ಟಿ ಮಾಡಿದ್ದನ್ನು
ತಂಡ ಎತ್ತಿ ಹೇಳಿದೆ.
ಕುಂದವಾಡ ಕೆರೆ ಅಭಿವೃದ್ಧಿ ಯೋಜನೆ ಕಾಮಗಾರಿ
ಪೂರ್ಣಗೊಳಿಸಿದ ನಂತರ ನಿರಂತರ ಕೆರೆ ಪರಿಸರ ರಕ್ಷಣೆ
ಮತ್ತು ಅಭಿವೃದ್ಧಿಗೆ ವಿಶೇಷ ನಿರ್ವಹಣಾ ಸಮಿತಿ ರಚಿಸಬೇಕು
ಮತ್ತು ಅದಕ್ಕಾಗಿ ಅಗತ್ಯ ಅನುದಾನ ನೀಡುವ ಬಗ್ಗೆ ಕೆರೆ
ಅಭಿವೃದ್ಧಿ ಯೋಜನೆಯಲ್ಲಿ ಅವಕಾಶ ಕಲ್ಪಿಸಬೇಕು ಎಂದು ಈ
ಸಂದರ್ಭದಲ್ಲಿ ಜೀವವೈವಿಧ್ಯ ಮಂಡಳಿ ತಂಡ ಶಿಫಾರಸು
ಮಾಡಿದೆ.
ಈ ಕುರಿತು ಮಹಾನಗರಪಾಲಿಕೆ ಜೀವವೈವಿಧ್ಯ ಸಮಿತಿ ಸಭೆ
ನಡೆಸಿ, ಸ್ಮಾರ್ಟ್‍ಸಿಟಿ ಯೋಜನೆಯವರು, ಉಪ ಅರಣ್ಯ
ಸಂರಕ್ಷಣಾಧಿಕಾರಿ (ಟೆರಿಟೋರಿಯಲ್) ಜಿಲ್ಲಾ ಪರಿಸರ
ಅಧಿಕಾರಿಗಳನ್ನು ಆಹ್ವಾನಿಸಬೇಕು. ಜೀವವೈವಿಧ್ಯ ಮಂಡಳಿ
ಸೂಚಿಸಿರುವ ಶಿಫಾರಸು ಹಾಗೂ ಮಹಾನಗರಪಾಲಿಕೆ
ಜೀವವೈವಿಧ್ಯ ಸಮಿತಿ ಸಭೆ ನೀಡುವ ಸಲಹೆಗಳನ್ನು ಆಧರಿಸಿ
ಕೆರೆ ಅಭಿವೃದ್ಧಿ ಯೋಜನೆಯನ್ನು ಪರಿಸರಸ್ನೇಹಿ
ಯೋಜನೆಯನ್ನಾಗಿ ಮಾರ್ಪಡಿಸಬೇಕು. ಈವರೆಗೆ ಆಗಿರುವ
ಜೀವವೈವಿಧ್ಯ-ವನ್ಯಜೀವಿ ಕಾಯಿದೆ ಲೋಪಗಳನ್ನು ಸರಿಪಡಿಸಲು
ಸ್ಮಾರ್ಟ್‍ಸಿಟಿ ಯೋಜನೆಯವರು ಕೆರೆ ಅಭಿವೃದ್ಧಿ
ಯೋಜನೆಯಲ್ಲಿ ಅವಶ್ಯ ಬದಲಾವಣೆ ಮಾಡಬೇಕು ಎಂದು
ಕರ್ನಾಟಕ ಜೀವವೈವಿಧ್ಯ ಮಂಡಳಿ ತಂಡ ತಿಳಿಸಿದೆ ಎಂದು
ಮಂಡಳಿ ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಪ್ರಕಟಣೆಯಲ್ಲಿ
ತಿಳಿಸಿದ್ದಾರೆ.

Leave a Reply

Your email address will not be published. Required fields are marked *