ರಾಮ ರಾಜ್ಯದ ಪರಿಕಲ್ಪನೆ ಯಾರಿಗೆ ತಾನೇ ರೋಚಿಸುವುದಿಲ್ಲ.ಅಲ್ಲಿ ಅನೇಕ ರೋಚಕ ಪ್ರಸಂಗಗಳು ನಡೆದಿರುವುದನ್ನು ಕೇಳಿ ತಿಳಿದಿರುತ್ತೇವೆ. ಅಂತಹ ಒಂದು ಪ್ರಸಂಗ ನೆನಪಿಗೆ ಬರುತ್ತದೆ. ರಾಮರಾಜ್ಯವು ಸುಭಿಕ್ಷವಾಗಿತ್ತು.ಪಂಡಿತ ಕೋವಿದರಿಗಂತೂ ಸ್ವರ್ಗವೇ ಆಗಿತ್ತು. ಎಲ್ಲಾ ಜೀವಿಗಳಿಗೂ ಪ್ರತ್ಯಕ್ಷ ಮತ್ತು ಅಪ್ರತ್ಯಕ್ಷವಾದ ಬೌದ್ಧಿಕತೆ ವಿರಾಜಮಾನವಾಗಿರುವುದು ಸಹಜ. ಮಾನವನಾದರು ತನ್ನ ಮಾತುಗಳಿಂದ ಸಂವಹಿಸಬಲ್ಲ. ಆದರೆ ಪ್ರಾಣಿಗಳ ಸಂವಹನ ಕ್ರಿಯೆ ಅರ್ಥಮಾಡಿಕೊಳ್ಳುವವರು ವಿರಳ. ಶ್ರೀರಾಮನಿಗೆ ಇದು ಸಿದ್ಧ ಹಸ್ತವಾಗಿತ್ತು.ಅದೊಂದು ದಿನ ಮಹಾಕಾರ್ಯೊಂದು ಸಂಪನ್ನವಾದ ದಿನವಾಗಿತ್ತು. ಕೊನೆಯಲ್ಲಿ ಭೂರಿ ಭೋಜನದ ವ್ಯವಸ್ಥೆ ಇತ್ತು. ಕಂಡು ಕೇಳರಿಯದ ಭಕ್ಷ್ಯಭೋಜ್ಯಗಳ ಉಪಚಾರದಿಂದ ಸಂತುಷ್ಟರಾದ ಕೆಲ ಅಧಿಕಾರಿಮಟ್ಟದ ಜನರು ತಮ್ಮ ಮನೆಗೆ ಮರುಳುತ್ತಿರುವಾಗ ಒಂದು ರೋಚಕ ಪ್ರಸಂಗ ನಡೆದೇ ಹೋಯಿತು. ಅದೇನೆಂದರೆ, ಬೂದಿರಾಶಿಯೊಂದರ ಮೇಲೆ ಮೈ ಮರೆತು ಹೊರಳಾಡಿ ಬಂದ ನಾಯಿಯಂದು ಆ ಅಧಿಕಾರಿಗಳು ಬರುತ್ತಿರುವ ಮಾರ್ಗಮಧ್ಯದಲ್ಲಿ ಹೊರಳಾಡುವುದರಲ್ಲಿ ತಲ್ಲೀನವಾಗಿತ್ತು.ರಾಜ್ಯಾಡಳಿತದಿಂದ ಕೊಡಮಾಡಿದ ಸುಖಭೋಗಗಳಿಂದ ಅಧಿಕಾರಿಗಳ ಮನಸ್ಥಿತಿಯು ದರ್ಪದಿಂದ ಕೂಡಿರುವುದು ಸಹಜವೇ ಆಗಿತ್ತು. ಆ ಅಧಿಕಾರದ ದರ್ಪ ಬೀದಿ ನಾಯಿಯ ಮೇಲೆ ತೋರುವ ಪೌರುಷತ್ವಕ್ಕೆ ಹಿಂದು
ಮುಂದು ನೋಡಲಿಲ್ಲ. ಎಂದಿನ ತಮ್ಮ ಅಧಿಕಾರ ವಾಣಿಯಿಂದ ಘರ್ಜಿಸಿ ನಾಯಿಯನ್ನು ಅಲ್ಲಿಂದ ದೂರ ಓಡಿಸಲು ಅಸಮರ್ಥವಾಯಿತು. ಅಧಿಕಾರಿಗಳ ಕೋಪ ಪ್ರತಿಷ್ಠೆಯಾಗಿ ತಿರುಗಿತು.ಸಿಕ್ಕ ಕಲ್ಲುಗಳಿಂದ ಬಡಿದು ಮುನ್ನಡೆದರು. ಇತ್ತ ನಾಯಿಯ ತಲೆ ಹ
ಒಡೆದು ರಕ್ತ ಸೋರಲು ಆರಂಭಿಸಿತು.ಅದು ಅಧಿಕಾರಿಗಳು ಬರುತ್ತಿದ್ದ ದಾರಿಯ ಮೂಲ ಪ್ರದೇಶವನ್ನು ಮೂಸಿ ಮೂಸಿ ನೋಡುತ್ತಾ ಮೂಲ ಪ್ರದೇಶವನ್ನು ಮುಟ್ಟಿತು.ಅದು ರಾಮನ ರಾಜಗೃಹದ ಸಭಾಂಗಣದ ಮುಖ್ಯ ದ್ವಾರವಾಗಿತ್ತು. ನ್ಯಾಯದ ಘಂಟೆಯನ್ನು ಹಲ್ಲಿನಿಂದ ಕಚ್ಚಿ ಎಳೆದಾಡಿತು. ರಾಜಭಟಟರು ಓಡೋಡಿ ಬಂದರು.ರಾಮನಲ್ಲಿ ಅರಿಕೆಯನ್ನು ಮಾಡಿಕಂಡರು. ನಾಯಿಯೊಂದು ನ್ಯಾಯದ ಗಂಟೆಯನ್ನು ಭಾರಿಸುತ್ತಿರುವ ಸುದ್ದಿಯನ್ನು ಮುಟ್ಟಿಸಿದರು. ರಾಮನು ಅಲ್ಲಿಗೆ ಬಂದು ಗಮನಿಸಿದಾಗ ನಾಯಿಯು ತನ್ನ ದಾರಣಾವಸ್ಥೆಗೆ ಕಾರಣರಾದವರನ್ನು ತಿಳಿಸಿತು. ಕೂಡಲೇ ಅವರನ್ನು ಕರೆಯಿಸಿ ವಿಚಾರಿಸಿ ಆದ ಪ್ರಮಾದಕ್ಕೆ ಶಿಕ್ಷೆಯ ವಿಧಾನವನ್ನು ನಾಯಿಯೇ ತಿಳಿಸಬಹುದೆಂದು ಅನುಮತಿ ನೀಡಿದನು. ಅದನ್ನ ಒಪ್ಪಿಕೊಂಡ ನಾಯಿಯು ತನಗೆ ಕೇಡು ಬಯಸಿದ ಈ ಅಧಿಕಾರಿಗಳಿಗೆ ಸಾರ್ವಜನಿಕ ವಲಯದ ಯಾವುದಾದರೊಂದು ಮಹತ್ತರವಾದ ಸ್ಥಾನ ನೀಡಬೇಕೆಂದು ಅರುಹಿತು. ಇದನ್ನು ಕೇಳಿದ ಅಧಿಕಾರಿಗಳು ಪರಿಹಾಸ ಮಾಡುತ್ತಾ ಕೊನೆಗೂ ನಾಯಿಯ ಬುದ್ದಿಯನ್ನೇ ತೋರಿಸಿತು. ಎಂದು ಗಹಗಹಿಸಿ ನಕ್ಕು ಅಲ್ಲಿಂದ ತೆರಳಿದರು. ನಾಯಿಯಿಂದ ದೊರೆತ ವಿಶೇಷ ಅಧಿಕಾರದ ಕನಸಿನಲ್ಲಿ ತೇಲುತ್ತಾ ಅಲ್ಲಿಂದ ತೆರಳಿದರು. ಅನಂತರ ರಾಮನು ನಾಯಿಯಲ್ಲಿ ಈ ರೀತಿ ನಿನಗೆ ನೋವುಂಟು ಮಾಡಿದವರಿಗೆ ಇನ್ನಷ್ಟು ಉತ್ತಮ ಅಧಿಕಾರವನ್ನು ನೀಡುವಂತಹ ನ್ಯಾಯವನ್ನು ಕೋರಿಕೊಂಡಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಕೇಳಿದನು. ಅದಕ್ಕೆ ಪ್ರತ್ಯುತ್ತರವಾಗಿ ನಾಯಿಯ ಮಾತು ಮಾರ್ಮಿಕವಾಗಿರುವುದನ್ನು ಇಲ್ಲಿ ಗ್ರಹಿಸಬಹುದಾಗಿದೆ.ಅದೆಂದರೆ,
ರಾಜ ನಾನೂ ಕೂಡ ಹಿಂದಿನ ಜನ್ಮದಲ್ಲಿ ಸಾರ್ವಜನಿಕ ವಲಯದ ಉನ್ನತ ಅಧಿಕಾರಿಯಾಗಿದ್ದೆನು. ಆ ಮಟ್ಟದ ಅಧಿಕಾರವು ಮಾನವನ ಪಿತ್ತವನ್ನು ಕೆರಳಿಸಿ ಮಾಡಬಾರದ ಕಾರ್ಯಗಳಲೆಲ್ಲಾ ಮಗ್ನವಾಗುವಂತಹ ಸನ್ನಿವೇಶಗಳು ಮೇಲಿಂದ ಮೇಲೆ ಬರುತ್ತಲೇ ಇರುತ್ತವೆ. ಸೂಕ್ತ ಸಂಸ್ಕಾರ ಇಲ್ಲದಿದ್ದರೆ, ಅಥವಾ ಜೊತೆಗಾರರು ದುರಾಸೆವುಳ್ಳವರಾಗಿದ್ದರೆ ಮಾಡುವ ಪಾಪ ಕಾರ್ಯಗಳಿಗೇನು ಕೊರತೆ ಇರುವುದಿಲ್ಲ. ಇಂತಹ ಹೀನ ಸುಳಿಗಳಲ್ಲಿ ಸಿಲುಕಿದರಿಂದ ಇಂದು ನಾನು ನಾಯಿ ಜನ್ಮದಲ್ಲಿ ಗೋಚರವಾಗುತ್ತಿದ್ದೇನೆ. ಇದಕ್ಕಿಂತ ಹೆಚ್ಚಿನ ಶಿಕ್ಷೆ ಇನ್ಯಾವುದಿದೆ ಹೇಳು ರಾಜನ್. ಈಗ ಚಿಂತಿಸುವ ಸರದಿ ಶ್ರೀರಾಮನದಾಗಿತು.
ಶ್ರೀಮತಿ ದೀಪಶ್ರೀ. ಎಸ್ . ಸಂಸ್ಕೃತ ಶಿಕ್ಷಕರು, ಶ್ರೀಜಗದ್ಗುರು ಗುರುಬಸವ ಸಂಸ್ಕೃತ ಪಾಠ ಶಾಲೆ, ಶ್ರೀ ಬೆಕ್ಕಿನಕಲ್ಮಠ, ಶಿವಮೊಗ್ಗ.