ಪರಿಶೀಲನಾ ಸಭೆ

ಖಾಸಗಿ ಶಾಲೆಗಳು ಆರ್‍ಟಿಇ ನಡಿ ಮಕ್ಕಳ ಪ್ರವೇಶ

ನಿರಾಕರಿಸುವಂತಿಲ್ಲ- ಡಾ.ಆರ್.ಜಿ. ಆನಂದ್

ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ (ಆರ್‍ಟಿಇ) ನಡಿ ಹಂಚಿಕೆಯಾಗುವ
ಮಕ್ಕಳ ಪ್ರವೇಶವನ್ನು ಖಾಸಗಿ ಶಾಲೆಗಳು ಯಾವುದೇ ಕಾರಣಕ್ಕೂ
ನಿರಾಕರಿಸುವಂತಿಲ್ಲ, ಇಂತಹ ಪ್ರಕರಣಗಳು ಕಂಡುಬಂದಲ್ಲಿ,
ಕಾಯ್ದೆಯನ್ವಯ ಕಠಿಣ ಕ್ರಮ ಜರುಗಿಸಬೇಕು ಎಂದು ರಾಷ್ಟ್ರೀಯ
ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಡಾ. ಆರ್.ಜಿ.
ಆನಂದ್ ಅವರು ಡಿಡಿಪಿಐ ಪರಮೇಶ್ವರಪ್ಪ ಅವರಿಗೆ ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆ ಹಾಗೂ ಸಂಭವನೀಯ
ಕೋವಿಡ್ 3ನೇ ಅಲೆ ನಿಯಂತ್ರಣ ಕುರಿತಂತೆ ಜಿಲ್ಲಾಡಳಿತ ಭವನದ
ತುಂಗಭದ್ರಾ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಲಾದ ಪರಿಶೀಲನಾ
ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಡಿಡಿಪಿಐ ಪರಮೇಶ್ವರಪ್ಪ ಅವರು, ಜಿಲ್ಲೆಯಲ್ಲಿ ಒಟ್ಟು 565 ಖಾಸಗಿ
ಶಾಲೆಗಳಿದ್ದು, ಸರ್ಕಾರ ಜಾರಿಗೊಳಿಸಿರುವ ಶಿಕ್ಷಣ ಹಕ್ಕು
ಕಾಯ್ದೆಯನ್ವಯ ಎಲ್ಲ ಖಾಸಗಿ ಶಾಲೆಗಳು ಶೇ. 25 ರಷ್ಟು
ಸೀಟುಗಳಂತೆ ಮಕ್ಕಳಿಗೆ ಪ್ರವೇಶ ನೀಡುತ್ತಿವೆ. ಪ.ಜಾತಿ, ಶೇ. 7.5,
ಪ.ವರ್ಗ-ಶೇ. 1.5, ಉಳಿದಂತೆ ಒಬಿಸಿ ಹಾಗೂ ಸಾಮಾನ್ಯ ವರ್ಗದವರಿಗೆ ಆರ್‍ಟಿಇ
ನಡಿ ಪ್ರವೇಶ ದೊರೆಯುತ್ತಿವೆ ಎಂದು ಮಾಹಿತಿ ನೀಡಿದರು. ಇದಕ್ಕೆ
ಪ್ರತಿಕ್ರಿಯಿಸಿದ ಆಯೋಗದ ಸದಸ್ಯ ಡಾ. ಆನಂದ್ ಅವರು, ಶಿಕ್ಷಣವು
ಮಾನವನ ಮೂಲಭೂತ ಹಕ್ಕುಗಳಲ್ಲಿ ಒಂದಾಗಿದ್ದು, ಪ್ರತಿಯೊಂದು
ಮಗುವು ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು. ಆರ್‍ಟಿಇ
ನಡಿ ಹಂಚಿಕೆಯಾದ ಮಕ್ಕಳ ಶಾಲಾ ಪ್ರವೇಶವನ್ನು ಖಾಸಗಿ ಶಾಲೆಗಳು
ಯಾವುದೇ ಕಾರಣಕ್ಕೂ ನಿರಾಕರಿಸುವಂತಿಲ್ಲ, ಆರ್‍ಟಿಇ ನಡಿ ಪ್ರವೇಶ ಪಡೆದ
ಶಾಲಾ ಮಕ್ಕಳು ಅಥವಾ ಅವರ ಪಾಲಕರು, ಪೋಷಕರಿಗೆ ತೊಂದರೆ
ಕೊಡುವಂತಹ ದೂರುಗಳು ಕೇಳಿಬರುತ್ತವೆ, ಇಂತಹ ಯಾವುದೇ
ಪ್ರಕರಣಗಳು ಜಿಲ್ಲೆಯಲ್ಲಿ ವರದಿಯಾಗಬಾರದು. ಈ ನಿಟ್ಟಿನಲ್ಲಿ
ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸೂಚನೆ
ಹಾಗೂ ಕಾಯ್ದೆಯ ಪಾಲನೆ ಕುರಿತಂತೆ ಎಲ್ಲ ಶಾಲೆಗಳಿಗೆ
ಸುತ್ತೋಲೆಯನ್ನು ಕಳುಹಿಸುವಂತೆ ಡಿಡಿಪಿಐ ಅವರಿಗೆ ಸೂಚನೆ ನೀಡಿದರು.

ಜಿಲ್ಲಾ ಪಂಚಾಯತ್ ಸಿಇಒ ವಿಜಯ ಮಹಾಂತೇಶ ದಾನಮ್ಮನವರ್
ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು 19,45,497 ಲಕ್ಷ ಜನಸಂಖ್ಯೆಯ ಪೈಕಿ
12,49,362 ಲಕ್ಷ ವಯಸ್ಕರು, 6,96,144 ಲಕ್ಷ ಮಕ್ಕಳು ಇದ್ದಾರೆ.
ಕೋವಿಡ್‍ನ ಮೊದಲನೆ ಅಲೆಯಲ್ಲಿ 1875, ಎರಡನೆ ಅಲೆಯಲ್ಲಿ 2283
ಸೇರಿದಂತೆ ಒಟ್ಟು 4,158 ಮಕ್ಕಳು ಕೋವಿಡ್ ಸೊಂಕಿಗೆ ಒಳಗಾಗಿದ್ದು,
ಯಾವುದೇ ಗಂಭೀರ ಪ್ರಕರಣ ವರದಿಯಾಗಿಲ್ಲ. ಕೋವಿಡ್-19
ಸೋಂಕಿನಿಂದ 181 ಮಕ್ಕಳು ತಮ್ಮ ಒಬ್ಬ ಪೋಷಕರನ್ನು
ಕಳೆದುಕೊಂಡಿದ್ದು, 11 ವರ್ಷದ ಒಂದು ಬಾಲಕಿ ಕೋವಿಡ್ ಹಾಗೂ ಬೇರೆ
ಕಾರಣದಿಂದ ತಂದೆ ಹಾಗೂ ತಾಯಿಯನ್ನು ಕಳೆದುಕೊಂಡಿದೆ. ಈ
ಮಾಹಿತಿಯನ್ನು ಈಗಾಗಲೇ ಬಾಲ ಸ್ವರಾಜ್ ಪೋರ್ಟಲ್ ಅಲ್ಲಿ ದಾಖಲಿಸಲಾಗಿದೆ.
       ಬಾಲಸೇವಾ ಯೋಜನೆಯಡಿ ಮಕ್ಕಳ ಆರೈಕೆ ಮಾಡುವ
ಪೋಷಕರಿಗೆ ಅಥವಾ ಉಸ್ತುವಾರಿಗಳಿಗೆ ತಿಂಗಳಿಗೆ 3500 ರೂ.ಗಳನ್ನು
ನೀಡಲಾಗುವುದು. ಪಾಲಕರನ್ನು ಹೊಂದಿರದ ಮಕ್ಕಳನ್ನು ಆರೈಕೆ
ಸಂಸ್ಥೆಗಳಲ್ಲಿ ಪೋಷಿಸುತ್ತಿದ್ದು, ಅವರ ಉನ್ನತ ಅಥವಾ ವೃತ್ತಿಪರ
ಶಿಕ್ಷಣಕ್ಕಾಗಿ ಉಚಿತ ಲ್ಯಾಪ್‍ಟಾಪ್ ಅಥವಾ ಟ್ಯಾಬ್ ನೀಡಲಾಗುವುದು ಹಾಗೂ 21
ವರ್ಷ ಪೂರೈಸಿದ ಬಾಲಕಿಯರ ಮದುವೆ, ಉನ್ನತ ಶಿಕ್ಷಣ, ಸ್ವ-
ಉದ್ಯೋಗಕ್ಕಾಗಿ ಅವರಿಗೆ 1 ಲಕ್ಷ ರೂ. ನೆರವು ನೀಡಲಾಗುವುದು. ಈ
ಯೋಜನೆ ಬಗ್ಗೆ ಸರ್ಕಾರದಿಂದ ಇನ್ನಷ್ಟು ಮಾರ್ಗಸೂಚಿ ನಿರೀಕ್ಷಿಸಲಾಗಿದೆ
ಎಂದು ತಿಳಿಸಿದರು.
       ಏ.20 ರಿಂದ ಮಾ.21 ರವರೆಗೆ 1098 ಮಕ್ಕಳ ಸಹಾಯವಾಣಿಯಡಿ
ಮಕ್ಕಳ ರಕ್ಷಣೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಒಟ್ಟು 496
ಕರೆಗಳನ್ನು ಸ್ವೀಕರಿಸಿ, ನೆರವು ಕಲ್ಪಿಸಲಾಗಿದೆ. 2020-21 ರಲ್ಲಿ 6 ಬಾಲ್ಯ
ವಿವಾಹಗಳನ್ನು ನಿಲ್ಲಿಸಿದ್ದು, ನ್ಯಾಯಾಲಯದ ವಿಚಾರಣೆಯ ಹಂತದಲ್ಲಿದೆ.
ಹಾಗೂ 2021-22 ರಲ್ಲಿ 3 ಪ್ರಕರಣಗಳಿಗೆ ದಾಖಲಿಸಿದೆ. ಪೋಕ್ಸೊ ಅಡಿಯಲ್ಲಿ
ಮಾರ್ಚ್ 2020 ರಿಂದ ಮೇ 2021 ರವರೆಗೆ 1 ಪ್ರಕರಣ ವಿಲೇವಾರಿ
ಮಾಡಲಾಗಿದ್ದು, ಈ ಪ್ರಕರಣವನ್ನು ಖುಲಾಸೆಗೊಳಿಸಲಾಗಿದೆ. 2020-21 ರಲ್ಲಿ
ಒಟ್ಟು 49 ಪ್ರಕರರಣಗಳು, 2021-22 ರಲ್ಲಿ 15 ಪ್ರಕರಣಗಳು
ಪೋಕ್ಸೊ ಕಾಯ್ದೆಯಡಿ ನೋಂದಣಿಯಾಗಿದೆ ಎಂದು ತಿಳಿಸಿದರು.
ಆಯೋಗದ ಸದಸ್ಯ ಡಾ. ಆನಂದ್ ಪ್ರತಿಕ್ರಿಯಿಸಿ, ಮಕ್ಕಳ ಹಕ್ಕು
ರಕ್ಷಿಸಲು ಚಾಲ್ತಿಯಲ್ಲಿರುವ ಕಾನೂನುಗಳನ್ನು ಪರಿಶೀಲಿಸಿ
ಪರಿಣಾಮಕಾರಿಯಾಗಿ ಜಾರಿಗೆ ತರಲು ಶಿಫಾರಸು ಮಾಡುವುದು, ಮಕ್ಕಳ
ರಕ್ಷಣೆ ಹಾಗೂ ಹಕ್ಕುಗಳ ಉಲ್ಲಂಘನೆ ಬಗ್ಗೆ ಯಾವುದೇ
ದೂರುಗಳು ಬಂದಲ್ಲಿ, ಮೊದಲು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿ, ಬಳಿಕವೇ
ಕಾನೂನು ರೀತಿ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದರು.
ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ ಅಗತ್ಯ : ಕೋವಿಡ್ ಲಾಕ್‍ಡೌನ್
ಕಾರಣಗಳಿಂದ ಶಾಲೆಗಳು ಆರಂಭವಾಗಿಲ್ಲ, ತಂದೆ, ತಾಯಿಯರು ಆರ್ಥಿಕ
ಸಮಸ್ಯೆಯ ನೆಪವೊಡ್ಡಿ ಮಕ್ಕಳನ್ನು ದುಡಿಮೆಗೆ ಹಚ್ಚುವ
ಸಾಧ್ಯತೆಗಳಿರುತ್ತವೆ. ಹೀಗಾಗಿ ಕಾರ್ಮಿಕ ಇಲಾಖೆ ಹೆಚ್ಚು ಜಾಗೃತೆಯಿಂದ
ಕಾರ್ಯ ನಿರ್ವಹಿಸಬೇಕಿದೆ. ನಗರ, ಪಟ್ಟಣಗಳಲ್ಲಿ ಹೋಟೆಲ್ ಸೇರಿದಂತೆ
ಸಣ್ಣ ಪುಟ್ಟ ಅಂಗಡಿ, ಉದ್ಯಮಗಳ ಮೇಲೆ ನಿಗಾ ವಹಿಸಬೇಕು. ದಾಳಿ
ಪ್ರಕರಣಗಳನ್ನು ಹೆಚ್ಚಿಸಿ, ಬಾಲಕಾರ್ಮಿಕರು ಕಂಡುಬಂದಲ್ಲಿ ಕಾನೂನು
ರೀತ್ಯಾ ಕ್ರಮ ಕೈಗೊಳ್ಳಬೇಕು ಎಂದರು. ಜಿಲ್ಲಾ ಕಾರ್ಮಿಕ ಅಧಿಕಾರಿ
ಇಬ್ರಾಹಿಂ ಮಾತನಾಡಿ, ಜಿಲ್ಲೆಯಲ್ಲಿ ಈ ವರ್ಷ ಒಟ್ಟು 129 ಕಡೆಗಳಲ್ಲಿ ತಪಾಸಣೆ
ನಡೆಸಿ, 06 ಬಾಲಕಾರ್ಮಿಕರನ್ನು ಪತ್ತೆಹಚ್ಚಲಾಗಿದೆ. ಬರುವ ದಿನಗಳಲ್ಲಿ
ದಾಳಿ ಸಂಖ್ಯೆಯನ್ನು ಹೆಚ್ಚಿಸಿ, ಬಾಲಕಾರ್ಮಿಕ ಪತ್ತೆಗೆ ಹೆಚ್ಚಿನ ಆದ್ಯತೆ
ನೀಡಲಾಗುವುದು ಎಂದರು.

ಜಿಲ್ಲೆಯ ಸಾಧನೆಗೆ ಶ್ಲಾಘನೆ : ದಾವಣಗೆರೆ ಜಿಲ್ಲೆಯಲ್ಲಿ ಆರೋಗ್ಯ
ಸಂಸ್ಥೆಗಳಲ್ಲಿಯೇ ಅತಿ ಹೆಚ್ಚು ಸುರಕ್ಷಿತ ಹೆರಿಗೆ ಮಾಡಿಸಿರುವ ವರದಿ
ದಾಖಲಾಗಿದ್ದು, ಜಿಲ್ಲೆಯಲ್ಲಿನ ಅಂಗನವಾಡಿ ಹಾಗೂ ಆಶಾ
ಕಾರ್ಯಕರ್ತೆಯರು ಗರ್ಭಿಣಿಯರ ನೊಂದಣಿಯಿಂದ
ಮೊದಲುಗೊಂಡು, ಸುರಕ್ಷಿತ ಹೆರಿಗೆ ವರೆಗೂ ನಿಗಾ ವಹಿಸಿ, ತಾಯಿ,
ಮಗುವಿನ ರಕ್ಷಣೆಗೆ ಕಾರಣಕರ್ತರಾಗಿದ್ದಾರೆ. ಅಲ್ಲದೆ ಕೋವಿಡ್‍ನ
ಮೊದಲನೆ ಹಾಗೂ ಎರಡನೆ ಅಲೆ ಸಂದರ್ಭದಲ್ಲಿ ತಂದೆ, ತಾಯಿ
ಕಳೆದುಕೊಂಡ ಮಕ್ಕಳ ಬಗೆಗಿನ ವಿವರವನ್ನು ಬಾಲಸ್ವರಾಜ್
ಪೋರ್ಟಲ್‍ನಲ್ಲಿ ದಾಖಲಿಸುವ ಕಾರ್ಯ ಜಿಲ್ಲೆಯಲ್ಲಿ ಉತ್ತಮವಾಗಿ ನಡೆದಿದೆ.
ಜಿಲ್ಲೆಯಲ್ಲಿ ಸಂಭವನೀಯ 3ನೇ ಅಲೆ ತಡೆಗಟ್ಟುವ ನಿಟ್ಟಿನಲ್ಲಿ
ಸಿದ್ಧತೆಗಳನ್ನು ಉತ್ತಮವಾಗಿ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ಬೇರೆ
ಜಿಲ್ಲೆಗೆ ಹೋಲಿಸಿದಾಗ ದಾವಣಗೆರೆ ಜಿಲ್ಲೆಯಲ್ಲಿ ಉತ್ತಮ ಕೆಲಸಗಳಾಗುತ್ತಿವೆ
ಎಂದು ಡಾ. ಆನಂದ್ ಅವರು ಶ್ಲಾಘಿಸಿದರು.
 
ದೇಶಿಯ ಆಟಿಕೆಗಳ ಬಳಕೆ ಹೆಚ್ಚಾಗಲಿ : ಪರಿಶೀಲನಾ ಸಭೆಗೂ ಮುನ್ನ
ಸುದ್ದಿಗಾರರೊಂದಿಗೆ ಮಾತನಾಡಿದ ರಾಷ್ಟ್ರೀಯ ಮಕ್ಕಳ ಹಕ್ಕುಗಳ
ರಕ್ಷಣಾ ಆಯೋಗದ ಸದಸ್ಯ ಡಾ. ಆನಂದ್ ಅವರು, ಮಕ್ಕಳು
ಕೋವಿಡ್‍ನಿಂದಾಗಿ ಶಾಲೆಗಳಿಂದ ವಂಚಿತರಾಗಿದ್ದು, ಆನ್‍ಲೈನ್ ತರಗತಿ ಪಾಠ
ಪಡೆಯುವುದರ ಮೂಲಕ ಮನೆಗೆ ಸೀಮಿತರಾಗಿದ್ದಾರೆ. ಕೋವಿಡ್
ಲಾಕ್‍ಡೌನ್ ಪರಿಣಾಮ ಬದಲಾದ ಈ ವ್ಯವಸ್ಥೆಗೆ ಅಂಟಿಕೊಂಡ ಮಕ್ಕಳು
ಆಡುವುದನ್ನೇ ಮರೆತಿದ್ದಾರೆ. ಪೋಷಕರು ತಮ್ಮ ಮಕ್ಕಳ
ಮಾನಸಿಕ ಹಾಗೂ ಬೌದ್ಧಿಕ ಮಟ್ಟವನ್ನು ಹೆಚ್ಚಿಸಲು ದೇಶಿಯ
ಸಾಂಪ್ರದಾಯಿಕ ಆಟಿಕೆಗಳನ್ನು ಹೆಚ್ಚು ಹೆಚ್ಚು ಖರೀದಿಸಬೇಕು. ಈ
ಮೂಲಕ ಸಂಕಷ್ಟದಲ್ಲಿರುವ ದೇಶಿಯ ಆಟಿಕೆ ಉತ್ಪಾದಕರ ಆರ್ಥಿಕ
ಪ್ರಗತಿಗೂ ಸಹಾಯವಾಗುತ್ತದೆ.
       ದೇಶಿಯ ಆಟಿಕೆಗಳನ್ನು ಬಳಸುವುದರಿಂದ ಸಮುದಾಯದಲ್ಲಿ
ವೈಜ್ಞಾನಿಕ ಚಿಂತನೆ, ಯುವಶಕ್ತಿ ಸಹಯೋಗ ಮತ್ತು ಬುದ್ಧಿಶಕ್ತಿ
ಹೆಚ್ಚುತ್ತದೆ. ಅವರಲ್ಲಿ ಮಾನಸಿಕ ಆರೋಗ್ಯ ಸಂರಕ್ಷಣೆ,
ಪ್ರಾಯೋಗಿಕ ಮತ್ತು ವೈಜ್ಞಾನಿಕ ಚಿಂತನೆ, ಯೋಗ, ಪ್ರಾಣಾಯಾಮ
ಸೃಜಿಸಲು ಕಾರಣವಾಗುತ್ತದೆ. ಆದ್ದರಿಂದ ಮಕ್ಕಳ ಮಾನಸಿಕ ಮತ್ತು
ದೈಹಿಕ ಆರೋಗ್ಯ ರಕ್ಷಣೆಗಾಗಿ ದೇಶಿಯ ಆಟಿಕೆಗಳನ್ನು ಬಳಸುವಲ್ಲಿ
ಪೋಷಕರು ಮತ್ತು ಸಂಘ-ಸಂಸ್ಥೆಗಳು ಸಹಕರಿಸಬೇಕು ಎಂದು
ಮನವಿ ಮಾಡಿದರು.
ಸಂವೇದನ ಸಹಾಯವಾಣಿ ಬಳಕೆ : ಮಕ್ಕಳ ಆರೋಗ್ಯ ಆರೈಕೆ
ಕೇಂದ್ರದಲ್ಲಿ ಇರುವ ಮಕ್ಕಳಿಗೆ ಸಂವೇದನ ಸಹಾಯವಾಣಿ ಮೂಲಕ
ಆರೋಗ್ಯದ ಕುರಿತು ಮಾಹಿತಿ ನೀಡಲಾಗುವುದು. ಹಾಗೂ ರಾಷ್ಟ್ರೀಯ
ಸಂವೇದನಾ ಸಂಖ್ಯೆ ಉಚಿತ ಕರೆ 1800-121-2830 ನ್ನು ರಾಷ್ಟ್ರದಾದ್ಯಂತ
ಆಯಾ ಪ್ರಾದೇಶಿಕ ಭಾಷೆಗಳಲ್ಲಿ ಸಮರ್ಪಿಸಲಾಗಿದೆ. ಮಕ್ಕಳು ಕೋವಿಡ್‍ಗೆ
ತುತ್ತಾದರೆ ಅಥವಾ ಯಾವುದೇ ಸಮಸ್ಯೆಗಳಿಂದ ಬಳಲುತ್ತಿದ್ದರೆ ಈ
ಸಂಖ್ಯೆಗೆ ಕರೆ ಮಾಡಬಹುದು. ಮಕ್ಕಳಿಗೆ ಸಮಾಲೋಚನೆ
ನೀಡಲಾಗುವುದು. ಅಥವಾ ಟೆಲಿ ಕೌನ್ಸೆಲಿಂಗ್ ಮೂಲಕ ಸಮಸ್ಯೆಗಳನ್ನು
ನಿವಾರಿಸಲು ಚಿಂತನೆ ನಡೆಸಲಾಗುತ್ತಿದೆ. ಸಾಮಾನ್ಯ ವ್ಯಕ್ತಿಗಳೂ ಕೂಡ
ಸಂವೇದನಾ ಸಹಾಯವಾಣಿಗೆ ಕರೆ ಮಾಡಿ, ಮಾಹಿತಿ ಪಡೆಯಬಹುದು,
ಎಲ್ಲರಿಗೂ ಆಪ್ತ ಸಮಾಲೋಚನೆ, ಕೌನ್ಸಿಲಿಂಗ್ ಪಡೆಯಲು ಅವಕಾಶವಿದೆ
ಎಂದು ಡಾ. ಆನಂದ್ ಹೇಳಿದರು.

ಕೋವಿಡ್ ಮೊದಲನೆ ಹಾಗೂ ಎರಡನೆ ಅಲೆಯನ್ನು ದಾವಣಗೆರೆ
ಜಿಲ್ಲಾಡಳಿತ ಸಮರ್ಥವಾಗಿ ನಿಭಾಯಿಸಿದ್ದು, ಸಂಭವನೀಯ 3ನೇ
ಅಲೆಯನ್ನೂ ಕೂಡ ಸಮರ್ಪಕವಾಗಿ ನಿರ್ವಹಿಸುವ ವಿಶ್ವಾಸವಿದೆ. 3ನೇ ಅಲೆ
ಮಕ್ಕಳನ್ನು ಬಾಧಿಸುವ ಹಿನ್ನಲೆಯಲ್ಲಿ ಸರ್ಕಾರ ಕೈಗೊಂಡಿರುವ
ಕ್ರಮಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು. 3ನೇ
ಅಲೆಯಲ್ಲಿ ಮಕ್ಕಳು ಬೇಗ ಕೋವಿಡ್-19 ಸಾಂಕ್ರಮಿಕ ರೋಗಕ್ಕೆ
ತುತ್ತಾಗುವ ಸಾಧ್ಯತೆಗಳು ಹೆಚ್ಚಿದೆ ಎಂದು ತಜ್ಞರು ತಮ್ಮ
ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದು, ಜಿಲ್ಲಾಡಳಿತ ನಿರ್ಲಕ್ಷ್ಯವಹಿಸದೆ
ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.
ಸಾಮಾಜಿಕ ಅಂತರ, ಲಸಿಕೆ ಹಾಗೂ ಮಾಸ್ಕ್ ಗಳನ್ನು ಸಮರ್ಪಕವಾಗಿ
ಬಳಸಿದರೆ ಕೊರೊನಾ ಸಂಭವನೀಯ 3ನೇ ಅಲೆಯನ್ನು ಸಮರ್ಥವಾಗಿ
ನಿರ್ವಹಿಸಬಹುದು. ಅದೇನೆ ಇದ್ದರು ನಾವು ನಮ್ಮ ಮಕ್ಕಳನ್ನು
ಎಚ್ಚರದಿಂದ ನೋಡಿಕೊಳ್ಳಬೇಕು. ಕೋವಿಡ್ ಮಾರ್ಗಸೂಚಿಗಳನ್ನು
ಅನುಸರಿಸಬೇಕು ಎಂದರು.
       ಮಕ್ಕಳಿಗೆ ಶಿಕ್ಷಣದ ಜೊತೆಗೆ ಆರೋಗ್ಯವು ಮುಖ್ಯವಾಗಿದೆ. ಸಾಮಾಜಿಕ
ಅಂತರದ ಶಿಷ್ಟಾಚಾರ ಪಾಲನೆ ಮಕ್ಕಳಿಗೆ ಕಷ್ಟವಾಗಿದೆ. ಪೋಷಕರೂ
ಸಹ ಮಕ್ಕಳನ್ನು ಶಾಲೆಗೆ ಕಳಿಸಲು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಸರ್ಕಾರ ಕೊರೊನ ಪರಿಸ್ಥಿತಿ ಅಧ್ಯಯನ ನಡೆಸಿ ಸೂಕ್ತ ಕ್ರಮ
ತೆಗೆದುಕೊಳ್ಳಲಿದೆ ಎಂದರು.
ಬಾಲ್ಯವಿವಾಹ ತಡೆಗಾಗಿ ಮಕ್ಕಳ ರಕ್ಷಣಾ ಸಮಿತಿಗೆ ಪ್ರಕರಣ
ದಾಖಲಿಸುವ ಅಧಿಕಾರ ನೀಡಲಾಗಿದೆ. ದಾವಣಗೆರೆಯಲ್ಲಿ ಜಿಲ್ಲಾ ಹಂತದ ಉಸ್ತುವಾರಿ
ಸಮಿತಿ ಸೇರಿದಂತೆ ಮಕ್ಕಳ ರಕ್ಷಣೆಗೆ ಎಲ್ಲಾ ವ್ಯವಸ್ಥೆ ರೂಪಿಸಲಾಗಿದೆ.
ಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣಗಳಲ್ಲಿ ಎಫ್‍ಐಆರ್
ದಾಖಲಿಸುವಂತಹ ಕ್ರಮ ವಿಳಂಬವಾದರೆ ಆಯೋಗ ಮಧ್ಯ
ಪ್ರವೇಶಿಸಲಿದೆ. ಆದರೆ, ನ್ಯಾಯ ನಿರ್ಧರಿಸುವುದಕ್ಕೆ ತನ್ನದೇ ಆದ
ಪ್ರಕ್ರಿಯೆ ಇದೆ. ಅತ್ಯಾಚಾರ ಪ್ರಕರಣ ಕಂಡು ಬಂದಾಗ ಮಗುವಿಗೆ
ಅಗತ್ಯ ನೆರವು ಕಲ್ಪಿಸಲಾಗುವುದು ಎಂದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಜಿ.ಪಂ. ಸಿಇಒ ಡಾ. ವಿಜಯ
ಮಹಾಂತೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್, ಡಿಹೆಚ್‍ಒ ಡಾ. ನಾಗರಾಜ್,
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ
ವಿಜಯಕುಮಾರ್, ಸೇರಿದಂತೆ ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿಯ
ಅಧ್ಯಕ್ಷರು, ಸದಸ್ಯರು, ಸಿಡಿಪಿಒಗಳು ವಿವಿಧ ಇಲಾಖೆ ಅಧಿಕಾರಿಗಳು
ಉಪಸ್ಥಿತರಿದ್ದರು.
ಜುಲೈ 01 ವೈದ್ಯರ ದಿನಾಚರಣೆಯ ಅಂಗವಾಗಿ ಜಿಲ್ಲೆಯ ತಜ್ಞ
ವೈದ್ಯರುಗಳಿಗೆ ಇದೇ ಸಂದರ್ಭದಲ್ಲಿ ಸನ್ಮಾನಿಸಿ, ಗೌರವಿಸಲಾಯಿತು.

Leave a Reply

Your email address will not be published. Required fields are marked *