ಪರೀಕ್ಷೆ ಜರುಗಿಸಿ- ಡಾ. ವಿಜಯ ಮಹಾಂತೇಶ್
ಕೋವಿಡ್ ಭೀತಿಯ ನಡುವೆಯೂ ಕಳೆದ ಬಾರಿ ಎಸ್.ಎಸ್.ಎಲ್.ಸಿ ಪರೀಕ್ಷೆ
ಯಶಸ್ವಿಯಾಗಿ ಜರುಗಿಸಿದ್ದು, ಈ ಬಾರಿಯು ಕೋವಿಡ್ ನಿಯಂತ್ರಣಕ್ಕೆ
ಅಗತ್ಯ ಮುಂಜಾಗ್ರತಾ ಕ್ರಮಗಳೊಂದಿಗೆ ಎಸ್.ಎಸ್.ಎಲ್.ಸಿ
ಪರೀಕ್ಷೆಯನ್ನು ನಡೆಸಲು ಎಲ್ಲರೂ ಕೈ ಜೋಡಿಸಬೇಕು ಎಂದು ಜಿಲ್ಲಾ
ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ವಿಜಯ ಮಹಾಂತೇಶ
ದಾನಮ್ಮನವರ್ ಸೂಚನೆ ನೀಡಿದರು.
ನಗರದ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ 2021
ನೇ ಸಾಲಿನ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷಾ ಪೂರ್ವ ಸಿದ್ದತಾ ಸಭೆಗೆ ಜಿಲ್ಲಾಧಿಕಾರಿ
ಮಹಾಂತೇಶ ಬೀಳಗಿ ಹಾಗೂ ಜಿಲ್ಲಾ ಪಂಚಾಯತ್ ಸಿಇಒ ವಿಜಯ ಮಹಾಂತೇಶ
ದಾನಮ್ಮನವರ್ ಸಸಿಗೆ ನೀರು ಹಾಕುವ ಮೂಲಕ ಚಾಲನೆ ನೀಡಿದರು.
ನಂತರ ಸಿಇಒ ಮಾತನಾಡಿ, ಈ ವರ್ಷ ಒಟ್ಟು 21,720 ವಿದ್ಯಾರ್ಥಿಗಳು
ಪರೀಕ್ಷೆಗೆ ಹಾಜರಾಗಲಿದ್ದು, ಸುಗಮ ಪರೀಕ್ಷೆ ನಡೆಸಲು 120 ಪರೀಕ್ಷಾ
ಕೇಂದ್ರಗಳನ್ನು ಸ್ಥಾಪಿಸಲಾಗಿದೆ. 2021 ನೇ ಸಾಲಿನ ಎಸ್.ಎಸ್.ಎಲ್.ಸಿ ಮುಖ್ಯ
ಪರೀಕ್ಷೆಯನ್ನು ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ
ಸುರಕ್ಷತ ಕ್ರಮಗಳನ್ನು ಅನುಸರಿಸಿ, ಸರಳೀಕರಿಸಿ ಜು.19 ಮತ್ತು 22
ರಂದು ನಡೆಯುವ ಪರೀಕ್ಷೆಗೆ ಹೊಸ ಮಾರ್ಗಸೂಚಿ ಬಂದಿದ್ದು, ಪರೀಕ್ಷೆ
ನಡೆಸಲು ಸಕಲ ಸಿದ್ಧತೆಯನ್ನು ಕೈಗೊಳ್ಳಲಾಗಿದೆ. ಪರೀಕ್ಷೆ
ಬರೆಯುವ ಮಕ್ಕಳ ಆರೋಗ್ಯ ಹಿತದೃಷ್ಟಿಯಿಂದ ಯಾವುದೇ
ತೊಂದರೆಯಾಗದಂತೆ ಎಲ್ಲಾ ಪೂರ್ವ ತಯಾರಿಗಳಳನ್ನು
ಮಾಡಿಕೊಳ್ಳಬೇಕು. ಕೋವಿಡ್ ಶಿಷ್ಟಾಚಾರವನ್ನು ಕಡ್ಡಾಯವಾಗಿ
ಪಾಲಿಸಿಕೊಂಡು ಅಡ್ಡಿ ಆತಂಕಗಳು ಎದುರಾಗದಂತೆ ಪರೀಕ್ಷೆ ನಡೆಯಲು
ಎಲ್ಲರ ಸಹಕಾರವಿರಲಿ ಎಂದರು.
ಜಿಲ್ಲೆಯಲ್ಲಿ ಪರೀಕ್ಷೆ ಯಶಸ್ವಿಗೊಳ್ಳಲು ಹಾಗೂ ಸುಸೂತ್ರವಾಗಿ
ನಡೆಯಲು ಒಟ್ಟು 2500 ಸಿಬ್ಬಂದಿಗಳ ಅವಶ್ಯವಿದ್ದು, ಈಗಾಗಲೇ ಸಿಬ್ಬಂದಿಗಳ
ನೇಮಕ ಮಾಡಲಾಗಿದೆ. ವಿದ್ಯಾರ್ಥಿಗಳು ಪರೀಕ್ಷೆ ದಿನದಂದು ಪರೀಕ್ಷೆ
ಬರೆಯುವ ಆತಂಕದಿಂದ ಕೋವಿಡ್ ನಿಯಮಾವಳಿಗಳನ್ನು
ಮರೆಯುವ ಸಾಧ್ಯತೆ ಹೆಚ್ಚಾಗಿರುವುದರಿಂದ ಇದರತ್ತ
ಗಮನಹರಿಸಬೇಕು. ಮುಂಚಿತವಾಗೇ ಆಯಾ ಶಾಲೆಯ ಶಿಕ್ಷಕರು
ವಿದ್ಯಾರ್ಥಿಗಳಿಗೆ ಹಾಗೂ ಅವರ ಪೋಷಕರಿಗೆ ಅವರ ಕೊಠಡಿ ಸಂಖ್ಯೆ,
ರಿಜಿಸ್ಟರ್ ನಂಬರ್ ಕುರಿತು ಮಾಹಿತಿ ನೀಡಿದರೆ ವಿದ್ಯಾರ್ಥಿಗಳು ಪರೀಕ್ಷೆ ದಿನ
ಕೊಠಡಿ ಹುಡುಕಾಟದ ಆತಂಕ ತಪ್ಪುತ್ತದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಒಟ್ಟು 120 ಪರೀಕ್ಷಾ ಕೇಂದ್ರಗಳಿದ್ದು, ಪರೀಕ್ಷೆ
ಪ್ರಾರಂಭವಾಗುವ ಒಂದೆರೆಡು ದಿನಗಳ ಮುಂಚಿತವಾಗಿ ಸೋಂಕು
ನಿವಾರಕ ದ್ರಾವಣದಿಂದ ಎಲ್ಲಾ ಪರೀಕ್ಷಾ ಕೊಠಡಿಗಳು, ಶೌಚಾಲಯವನ್ನು
ಸ್ಯಾನಿಟೈಸ್ ಮಾಡಿರಬೇಕು. ಪರೀಕ್ಷೆಯ ಮುನ್ನ ಮತ್ತು ಪರೀಕ್ಷೆ
ನಂತರ ಪರೀಕ್ಷಾ ಕೇಂದ್ರದ ಎಲ್ಲಾ ಕೊಠಡಿಗಳು ಹಾಗೂ
ಪೀಠೋಪಕರಣಗಳನ್ನು ಮತ್ತು ಇನ್ನಿತರ ವಸ್ತುಗಳನ್ನು
ಸ್ನಾನಿಟೈಸ್ ಮಾಡಬೇಕು ಎಂದರು.
ಪರೀಕ್ಷಾ ಕೇಂದ್ರಗಳಲ್ಲಿ ಅವ್ಯವಹಾರ ತಡೆಗಟ್ಟಲು, ಶಿಸ್ತು ಮತ್ತು
ಶಾಂತಿ ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಪ್ರತಿ ಪರೀಕ್ಷಾ
ಕೇಂದ್ರಕ್ಕೆ ಸೂಕ್ತ ಪೊಲೀಸ್ ಸಿಬ್ಬಂದಿ ನೇಮಿಸಲಾಗಿದೆ. ಪರೀಕ್ಷೆ ಮುಗಿದ
ನಂತರ ಜಿಲ್ಲಾ ಕೇಂದ್ರದಲ್ಲಿ ಓಎಂಆರ್ ಶೀಟ್ ಸ್ವೀಕರಿಸಲು ಭದ್ರತಾ
ಕೊಠಡಿಯನ್ನು ಗುರುತಿಸಿದ್ದು ಸೂಕ್ತ ಭದ್ರತೆಗಾಗಿ ಪೊಲೀಸ್ ಸಿಬ್ಬಂದಿ
ನಿಯೋಜಿಸಲಾಗಿದೆ.
ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸರ್ಕಾರ ಜು.15 ಮತ್ತು
17 ರಂದು ಅಣಕು ಪರೀಕ್ಷೆಯನ್ನು ಏರ್ಪಡಿಸಲು ಅನುಮತಿ ನೀಡಿದ್ದು,
ಅಣುಕು ಪರೀಕ್ಷೆ ಕಡ್ಡಾಯವಲ್ಲ. ಮಕ್ಕಳಿಗೆ ಏನೇ ಅಣಕು ಪರೀಕ್ಷೆ
ಮಾಡಿದರೂ ಮುಖ್ಯ ಪರೀಕ್ಷೆಯ ಆತಂಕ ಅವರಲ್ಲಿರುತ್ತದೆ. ಹೀಗಾಗಿ
ಅವರಿಗೆ ಭೀತಿ ಉಂಟಾಗದಂತೆ ಆಯಾ ಶಾಲೆಯ ಮುಖ್ಯ ಶಿಕ್ಷಕರು
ಮಾರ್ಗದರ್ಶನ ನೀಡಬೇಕು ಎಂದು ತಿಳಿಸಿದರು.
ಇಲ್ಲಿಯವರೆಗೂ ಪರೀಕ್ಷೆ ಬರೆಯುವ ಮಕ್ಕಳಲ್ಲಿ ಕೋವಿಡ್ ಪಾಸಿಟಿವ್
ವರದಿ ಕಂಡುಬಂದಿಲ್ಲ. ಆದರೆ ಪರೀಕ್ಷೆ ಆರಂಭವಾಗಲು ಇನ್ನೂ 5-6
ದಿನಗಳಿದ್ದು, ಅಷ್ಟರೊಳಗಾಗಿ ಯಾವುದಾದರೂ ವಿದ್ಯಾರ್ಥಿಗಳಿಗೆ
ಕೋವಿಡ್ ಲಕ್ಷಣಗಳು ಕಂಡುಬಂದರೆ ಪ್ರತೀ ಪರೀಕ್ಷಾ ಕೇಂದ್ರಗಳಲ್ಲಿ
2 ಹೆಚ್ಚುವರಿ ಕೊಠಡಿಗಳನ್ನು ಗುರುತಿಸಬೇಕು. ಹಾಗೂ ಪ್ರತೀ
ತಾಲ್ಲೂಕುಗಳಲ್ಲೂ ಒಂದು ಕೋವಿಡ್ ಕೇರ್ ಸೆಂಟರ್ ತೆರೆಯಬೇಕು.
ಪಾಸಿಟಿವ್ ಬಂದ ವಿದ್ಯಾರ್ಥಿಗಳಿಗೆ ಕೇರ್ ಸೆಂಟರ್‍ನಲ್ಲಿ ಪರೀಕ್ಷೆ ಬರೆಸಬೇಕು. ಹಾಗೂ
ಪ್ರತಿ ತಾಲ್ಲೂಕಿಗೂ ಪ್ರತ್ಯೇಕವಾಗಿ ಆಂಬ್ಯುಲೆನ್ಸ್ ಕೊಡಬೇಕು ಎಂದು
ಸಿಇಒ ಡಾ. ವಿಜಯ ಮಹಾಂತೇಶ್ ಹೇಳಿದರು.
ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ, ಕಳೆದ ಬಾರಿ ಶಿಕ್ಷಣ
ಕ್ಷೇತ್ರ, ವೈದ್ಯಕೀಯ ಕ್ಷೇತ್ರ ಹಾಗೂ ಜಿಲ್ಲಾಡಳಿತದ ಎಲ್ಲಾ
ಸಿಬ್ಬಂದಿಗಳು ಹಾಗೂ ಅಧಿಕಾರಿಗಳು ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು
ಯಶಸ್ವಿಗೊಳಿಸಿದ್ದು, ಈ ಬಾರಿಯು ಅದೇ ಶಿಸ್ತಿನಿಂದ ಪರೀಕ್ಷೆ
ನಡೆಸಿಕೊಡುತ್ತೀರಿ ಎಂಬ ವಿಶ್ವಾಸವಿದೆ. ಪ್ರತೀ ಪರೀಕ್ಷಾ ಕೇಂದ್ರಗಳಿಗೂ
ಆರೋಗ್ಯ ತಪಾಸಣೆ ಕೌಂಟರ್ ತೆರೆಯಬೇಕು. ಪರೀಕ್ಷೆ ಕೆಲಸ
ನಿಭಾಯಿಸಲು ಹೋದವರು ನಿಮಗೆ ಗಂಡಾಂತರ ತಂದುಕೊಳ್ಳಬೇಡಿ.
ಕಡ್ಡಾಯವಾಗಿ ಲಸಿಕೆ ಪಡೆದುಕೊಳ್ಳಬೇಕು ಎಂದರು.
ಇಲಾಖೆಯು ತೆಗೆದುಕೊಂಡಿರುವ ಸುರಕ್ಷತಾ ಕ್ರಮಗಳ ಬಗ್ಗೆ
ಪೋಸ್ಟರ್‍ಗಳ ಮೂಲಕ ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ
ಜಾಗೃತಿ ಮೂಡಿಸಬೇಕು. ಪ್ರತೀ ಪರೀಕ್ಷೆ ಕೇಂದ್ರದಲ್ಲಿ
ಧ್ವನಿವರ್ದಕಗಳನ್ನು ಅಳವಡಿಸಬೇಕು. ಈ ಮೂಲಕ ವಿದ್ಯಾರ್ಥಿಗಳಿಗೆ
ಹಾಗೂ ಪೋಷಕರಿಗೆ ಸಲಹೆ ಸೂಚನೆಗಳನ್ನು ನೀಡಬೇಕು. ಪರೀಕ್ಷಾ
ಮಂಡಳಿಯ ಸುತ್ತೋಲೆಯಂತೆ ಎಸ್.ಒ.ಪಿ ನಿಯಮಗಳನ್ನು
ಕೇಂದ್ರದ ಎಲ್ಲ ಮುಖ್ಯ ಅಧೀಕ್ಷಕರುಗಳು, ಶಿಕ್ಷಕರು, ಸಿಬ್ಬಂದಿ
ಕಡ್ಡಾಯವಾಗಿ ಅನುಸರಿಸಬೇಕು ಎಂದರು.
ಪರೀಕ್ಷಾ ಕೇಂದ್ರದ ಸುತ್ತ 200 ಮೀಟರ್ ವ್ಯಾಪ್ತಿಯಲ್ಲಿ 144 ಸೆಕ್ಷನ್
ಜಾರಿಗೊಳಿಸಿದ್ದು, ನಿಷೇಧಿತ ಪ್ರದೇಶದಲ್ಲಿ ಜೆರಾಕ್ಸ್ ಅಂಗಡಿ, ಸೈಬರ್ ಕೆಫೆ,
ಕಂಪ್ಯೂಟರ್ ಕೇಂದ್ರಗಳನ್ನು ಮುಚ್ಚಿಸಬೇಕು. ಎಲ್ಲಾ ಹಂತದಲ್ಲೂ
ಕೂಡ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು
ಕಡ್ಡಾಯವಾಗಿರುತ್ತದೆ. ವಿದ್ಯಾರ್ಥಿಗಳು ತಮ್ಮೊಂದಿಗೆ ನೀರಿನ ಬಾಟಲ್,
ವೈಯಕ್ತಿಕ ಊಟದ ಡಬ್ಬಿ ತರಬಹುದು ಎಂದು ತಿಳಿಸಿದರು.
ವಿದ್ಯಾರ್ಥಿಗಳಿಗೆ ಪರೀಕ್ಷೆ ಕುರಿತ ಭಯ ಬೇಡ. ಕೋವಿಡ್ ಬಂದ
ನಂತರ ಪರೀಕ್ಷೆಗಳನ್ನು ನಡೆಸದೆಯೇ ಪಾಸ್ ಮಾಡಲಾಗುತ್ತಿದೆ.
ಪರೀಕ್ಷೆ ಬರೆಯುವ ವಿದ್ಯಾರ್ಥಿಗಳನ್ನು ಪಾಸ್ ಮಾಡಲಾಗುವುದು.
ಆದ್ದರಿಂದ ಎಲ್ಲಾ ವಿದ್ಯಾರ್ಥಿಗಳು ಪರೀಕ್ಷೆಯ ಭಯವಿಲ್ಲದೇ ಪರೀಕ್ಷೆ
ಬರೆಯಿರಿ ಎಂದರು.
ಡಿಡಿಪಿಐ ಪರಮೇಶ್ವರಪ್ಪ ಮಾತನಾಡಿ, ಪರೀಕ್ಷಾ ಕೇಂದ್ರಗಳಲ್ಲಿ 120
ಮೊಬೈಲ್ ಸ್ವಾಧಿನಾಧಿಕಾರಿಗಳನ್ನು ನೇಮಿಸಲಾಗಿದ್ದು, ಎಲ್ಲಾ ಸಿಬ್ಬಂದಿಗಳು
ಹಾಗೂ ವಿದ್ಯಾರ್ಥಿಗಳು ಮೊಬೈಲ್ ಗಳನ್ನು ಅವರಿಗೆ ನೀಡಬೇಕು.
ಅದರಲ್ಲೂ ವಿದ್ಯಾರ್ಥಿಗಳು ಕೊಠಡಿಯೊಳಗೆ ಮೊಬೈಲ್
ತೆಗೆದುಕೊಂಡು ಹೋಗದಂತೆ ಎಚ್ಚರವಹಿಸಬೇಕು. ಜಿಲ್ಲೆಯ ಎಲ್ಲಾ
ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳ ಸುರಕ್ಷತಾ ದೃಷ್ಟಿಯಿಂದ
ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಒಂದು ಕೊಠಡಿಗೆ ಗರಿಷ್ಠ 12
ವಿದ್ಯಾರ್ಥಿಗಳಂತೆ 6 ಅಡಿ ಅಂತರದೊಂದಿಗೆ ಆಸನ ವ್ಯವಸ್ಥೆ ಹಾಗೂ
ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗಿದೆ. ಜಿಲ್ಲೆಯಲ್ಲಿ ಎಸ್‍ಎಸ್‍ಎಲ್‍ಸಿ
ಪರೀಕ್ಷೆಗೆ ಶಿಕ್ಷಕರು, ನೌಕರರಿಗೆ ಸಂಬಂಧಿಸಿದಂತೆ ಒಟ್ಟು 2647 ಜನರನ್ನು
ಕರ್ತವ್ಯಕ್ಕೆ ನಿಯೋಜಿಸಲಾಗಿದ್ದು, ಈ ಪೈಕಿ 1868 ಜನ ಮೊದಲನೆ ಡೋಸ್
ಲಸಿಕೆ ಹಾಗೂ 736 ಜನ ಎರಡೂ ಡೋಸ್ ಲಸಿಕೆ ಪಡೆದಿದ್ದಾರೆ. ಇನ್ನೂ 43 ಜನ
ಲಸಿಕೆ ಪಡೆದಿಲ್ಲ. ಲಸಿಕೆ ಪಡೆಯದವರಿಗೆ ಇನ್ನೂ 2-3 ದಿನದೊಳಗಾಗಿ ಲಸಿಕೆ
ಹಾಕಲಾಗುತ್ತದೆ. ಹಾಗೂ ಪರೀಕ್ಷಾ ಕಾರ್ಯದಲ್ಲಿ ಪಾಲ್ಗೊಳ್ಳುವ
ಅಧಿಕಾರಿಗಳು, ಶಿಕ್ಷಕರು ಮತ್ತು ಸಿಬ್ಬಂದಿಯವರಿಗೆ ಕೋವಿಡ್-19 ಆರ್.ಎ.ಟಿ
ಅಥವಾ ಆರ್.ಟಿ.ಪಿ.ಸಿ.ಆರ್ ಟೆಸ್ಟ್ ಮಾಡಿಸಿಕೊಳ್ಳಬೇಕು. ಕರ್ತವ್ಯಕ್ಕೆ ಬರುವಾಗ
ಕೋವಿಡ್ ನೆಗೆಟಿವ್ ರಿಪೋರ್ಟ್ ನ್ನು ಕಡ್ಡಾಯವಾಗಿ ತರಬೇಕು. ಒಂದು
ವೇಳೆ ಪಾಸಿಟಿವ್ ಬಂದರೆ ಅಂತಹವರಿಗೆ ಪರೀಕ್ಷೆ ವೇಳೆ ಕರ್ತವ್ಯಕ್ಕೆ
ಹಾಜರಾಗುವಂತಿಲ್ಲ.
ಸರ್ಕಾರ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಜು.14 ಮತ್ತು 15 ರಂದು
ಅಣಕು ಪರೀಕ್ಷೆ ನಡೆಸಲು ಸೂಚಿಸಲಾಗಿದ್ದು, ಅಣಕು ಪರೀಕ್ಷೆ
ಕಡ್ಡಾಯವಲ್ಲ ಎಂಬುದನ್ನು ಸೂಚಿಸಿದೆ. ಆದ್ದರಿಂದ ಸ್ವಯಂ ಆಸಕ್ತಿಯಿಂದ
ಪರೀಕ್ಷೆ ಬರೆಯಲು ಮುಂದೇ ಬರುವ ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು
ಬರೆಸಲಾಗುವುದು ಎಂದರು.
ಜಿಲ್ಲೆಯಲ್ಲಿ ಒಟ್ಟು 444 ಪ್ರೌಢಶಾಲೆಗಳು, 120 ಪರೀಕ್ಷಾ
ಕೇಂದ್ರಗಳು ಹಾಗೂ 2,260 ಕೊಠಡಿಗಳನ್ನು
ನೇಮಕಮಾಡಲಾಗಿದ್ದು, ಒಟ್ಟು 21,720 ವಿದ್ಯಾರ್ಥಿಗಳು ಪರೀಕ್ಷೆಗೆ
ಹಾಜರಾಗಲಿದ್ದಾರೆ. ಪರೀಕ್ಷಾ ಕೇಂದ್ರಗಳಿಗೆ 45 ಮಾರ್ಗಗಳಿಂದ
ಪ್ರಶ್ನೆಪತ್ರಿಕೆ ವಿತರಣೆ ಮಾಡಲಾಗುತ್ತದೆ. ಕೋವಿಡ್
ನಿಯಮಾನುಸಾರ 40 ಹೊಸ ಪರೀಕ್ಷಾ ಕೇಂದ್ರಗಳನ್ನು ರಚಿಸಲಾಗಿದೆ
ಎಂದು ಮಾಹಿತಿ ನೀಡಿದರು.
ಡಿಹೆಚ್‍ಒ ಡಾ.ನಾಗರಾಜ್ ಮಾತನಾಡಿ, ಪ್ರತೀ ಪರೀಕ್ಷಾ ಕೇಂದ್ರಕ್ಕೆ
ಆರೋಗ್ಯ ತಪಾಸಣೆ ಕೌಂಟರ್ ತೆರೆಯಲಾಗಿದ್ದು, ಇಬ್ಬರು ಅರೆ
ವೈದ್ಯಕೀಯ, ಆಶಾ ಕಾರ್ಯಕರ್ತೆಯರು, ಇತರೆ ಸಿಬ್ಬಂದಿಗಳನ್ನು
ನಿಯೋಜಿಸಲಾಗಿದೆ. ಇವರು ಥರ್ಮಲ್ ಸ್ಕ್ಯಾನರ್, ಪಲ್ಸ್ ಆಕ್ಸಿಮೀಟರ್ ಹಾಗೂ
ಪ್ರಥಮ ಚಿಕಿತ್ಸಾ ಪೆಟ್ಟಿಗೆಯೊಂದಿಗೆ ಹಾಜರಿದ್ದು ತಪಾಸಣಾ ಕಾರ್ಯ
ನಿರ್ವಹಿಸಲು ಸೂಚಿಸಲಾಗಿದೆ. ಪ್ರತಿ ವಿದ್ಯಾರ್ಥಿಗೂ ಮಾಸ್ಕ್ ನೀಡಲಾಗುತ್ತದೆ.
ಹಾಗೂ ವಿದ್ಯಾರ್ಥಿಗಳು ತಮ್ಮ ಕೈಗಳನ್ನು ಸ್ಯಾನಿಟೈಸ್
ಮಾಡಿಕೊಳ್ಳುವಂತೆ ನೋಡಿಕೊಳ್ಳಲಾಗುವುದು. ಪ್ರತಿ ತಾಲ್ಲೂಕು
ಹಂತದಲ್ಲಿ ತುರ್ತು ಸಂದರ್ಭಕ್ಕಾಗಿ ಇಲಾಖಾ ವತಿಯಿಂದ ಒಂದು ಆಂಬ್ಯುಲೆನ್ಸ್
ಕಾಯ್ದಿರಿಸಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ, ಡಿವೈಎಸ್‍ಪಿ
ಬಸವರಾಜ್, ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯ ಸಹನಿರ್ದೇಶಕ ಮಂಜುನಾಥ್
ಹೆಚ್., ಜಿಲ್ಲಾ ಖಜಾನೆ ಉಪನಿರ್ದೇಶಕಿ ಪ್ರಭಾವತಿ ಎಸ್., ಪ್ರಾಚಾರ್ಯ ಲಿಂಗರಾಜು
ಹೆಚ್.ಕೆ., ಉಪನಿರ್ದೇಶಕರ ಕಚೇರಿ ಸಾ.ಶಿ. ಇಲಾಖೆ ಶಿಕ್ಷಣಾಧಿಕಾರಿ ಜಗದೀಶ್ವರ
ಬಿ.ಎಸ್., ಸಿ.ಆರ್.ಪರಮೇಶ್ವರಪ್ಪ ಸೇರಿದಂತೆ ಮತ್ತಿತರರು
ಪಾಲ್ಗೊಂಡಿದ್ದರು.