ಜಿಲ್ಲೆಯಲ್ಲಿ ಹೆಚ್ಚಿನ ಮಳೆಯಿಂದ ಉಂಟಾದ ಅತಿವೃಷ್ಟಿ ಹಾಗೂ
ಪ್ರವಾಹ ಕಾರಣಗಳಿಗೆ ಕೃಷಿ, ತೋಟಗಾರಿಕೆ ಬೆಳೆ ಹಾನಿ, ಜನ
ಜಾನುವಾರುಗಳ ಪ್ರಾಣಹಾನಿ ಹಾಗೂ ರಸ್ತೆ, ಸೇತುವೆ,
ಕಟ್ಟಡಗಳಿಗೆ ಉಂಟಾದ ಹಾನಿ ಕುರಿತ ಸಮಗ್ರ ವರದಿಯನ್ನು
ತಾಲ್ಲೂಕುವಾರು ಸಿದ್ಧಪಡಿಸಿ ತ್ವರಿತವಾಗಿ ಸಲ್ಲಿಸುವಂತೆ ಉಸ್ತುವಾರಿ
ಸಚಿವ ಬಿ.ಎ. ಬಸವರಾಜ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲೆಯ ಅತಿವೃಷ್ಟಿ, ಪ್ರವಾಹ ಮತ್ತು ಪರಿಹಾರ
ಕಾರ್ಯಗಳ ಕುರಿತು ಹಾಗೂ ಕೊರೋನಾ 3ನೇ ಅಲೆ
ತಡೆಗಟ್ಟಲು ತೆಗೆದುಕೊಳ್ಳುವ ಸಿದ್ದತೆ ಕುರಿತಂತೆ
ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ
ಶುಕ್ರವಾರ ಏರ್ಪಡಿಸಿದ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ
ಅವರು ಮಾತನಾಡಿದರು.
ಸಭೆಯ ಆರಂಭದಲ್ಲಿ ಜಿಲ್ಲೆಯಲ್ಲಿನ ಮಳೆ, ಬೆಳೆ ಕುರಿತು
ಮಾಹಿತಿ ನೀಡಿದ ಜಂಟಿಕೃಷಿ ನಿರ್ದೇಶಕರು, ಪ್ರಸಕ್ತ
ಮುಂಗಾರು ಹಂಗಾಮಿನಲ್ಲಿ ವಾಡಿಕೆಗಿಂತಲೂ ಶೇ. 52 ರಷ್ಟು
ಹೆಚ್ಚು ಮಳೆಯಾಗಿದೆ. ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ
ವಾಡಿಕೆಗಿಂತಲೂ ಹೆಚ್ಚು ಮಳೆಯಾಗಿದ್ದು, ಜುಲೈ
ತಿಂಗಳೊಂದರಲ್ಲೇ ಶೇ. 97 ರಷ್ಟು ವಾಡಿಕೆಗಿಂತಲೂ ಹೆಚ್ಚು
ಮಳೆಯಾಗಿದೆ. 2.45 ಲಕ್ಷ ಹೆ. ಬಿತ್ತನೆ ಗುರಿ ಎದುರಿಗೆ ಈಗಾಗಲೆ
1.48 ಲಕ್ಷ ಹೆ. ಬಿತ್ತನೆಯಾಗಿದ್ದು, ಭತ್ತದ ನಾಟಿ ಕಾರ್ಯ
ಈಗಷ್ಟೇ ಪ್ರಾರಂಭವಾಗಿದೆ. ಜಿಲ್ಲೆಯಲ್ಲಿ ಸದ್ಯ ಯಾವುದೇ
ಗೊಬ್ಬರ, ಬಿತ್ತನೆ ಬೀಜದ ಕೊರತೆ ಉಂಟಾಗಿಲ್ಲ ಎಂದರು.
ಸಚಿವರು ಪ್ರತಿಕ್ರಿಯಿಸಿ ಕಳಪೆ ಗೊಬ್ಬರ, ಬೀಜ ಪೂರೈಕೆ,
ಗೊಬ್ಬರವನ್ನು ಕಾಳಸಂತೆಯಲ್ಲಿ ಅಥವಾ ನಿಗದಿತ ದರಕ್ಕಿಂತ
ಹೆಚ್ಚಿನ ದರದಲ್ಲಿ ಮಾರಾಟ ಮಾಡುವುದು ಕಂಡುಬಂದಲ್ಲಿ,
ಅಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ
ಕಾನೂನು ರೀತ್ಯ ಕ್ರಮ ಜರುಗಿಸಬೇಕು ಜಿಲ್ಲಾಧಿಕಾರಿ
ಮಹಾಂತೇಶ್ ಬೀಳಗಿ ಮಾತನಾಡಿ, ಹೆಚ್ಚಿನ ಮಳೆಯಿಂದಾಗಿ
ಜಿಲ್ಲೆಯಲ್ಲಿ 972 ಹೆ. ಕೃಷಿ ಹಾಗೂ 975 ಹೆ. ತೋಟಗಾರಿಕೆ ಬೆಳೆ
ಹಾನಿಯಾಗಿದ್ದು, ಜಂಟಿ ಸಮೀಕ್ಷೆ ನಡೆಸಿ ವರದಿ ಸಲ್ಲಿಸಲಾಗಿದೆ.
ಅಲ್ಲದೆ ಪರಿಹಾರ್ ತಂತ್ರಾಂಶದಲ್ಲಿಯೂ ರೈತರು ಹಾಗೂ ಸರ್ವೆ
ನಂ. ವಾರು ಮಾಹಿತಿಯನ್ನು ಅಳವಡಿಸಲಾಗಿದೆ. ವ್ಯಾಪಕ ಮಳೆ
ಹಾಗೂ ಪ್ರವಾಹದಿಂದಾಗಿ ಜಿಲ್ಲೆಯಲ್ಲಿ ವಿವಿಧ ರಸ್ತೆಗಳು,
ಸೇತುವೆ, ಶಾಲೆ ಮತ್ತಿತರ ಸರ್ಕಾರಿ ಕಟ್ಟಡಗಳು
ಹಾನಿಗೊಳಗಾಗಿದ್ದು, 38.23 ಕೋಟಿ ರೂ. ಗಳ ನಷ್ಟದ
ಅಂದಾಜು ಮಾಡಲಾಗಿದೆ. ಭದ್ರಾ ಜಲಾಶಯ ಈಗಾಗಲೆ ಗರಿಷ್ಟ
186 ಮೀ. ಬದಲಿಗೆ 185 ಮೀ. ನಷ್ಟು ತುಂಬಿದ್ದು, ಕ್ರಸ್ಟ್
ಗೇಟ್ನಿಂದ ನೀರು ಬಿಡಲಾಗಿದೆ. ನದಿ ಪಾತ್ರದ ಜನರಿಗೆ ಈಗಾಗಲೆ
ಎಚ್ಚರಿಕೆ ನೀಡಲಾಗಿದ್ದು, ತೊಂದರೆ ಎದುರಿಸುವ
ಕುಟುಂಬಗಳನ್ನು ಗುರುತಿಸಿ ಸ್ಥಳಾಂತರಿಸಲು ಕ್ರಮ
ಕೈಗೊಂಡಿದೆ, ಅಲ್ಲದೆ ಕಾಳಜಿ ಕೇಂದ್ರ ತೆರೆಯಲೂ ಸಹ
ವ್ಯವಸ್ಥೆ ಮಾಡಲಾಗಿದೆ. ಜುಲೈ ತಿಂಗಳಲ್ಲಿ ಸುರಿದ ಹೆಚ್ಚು
ಮಳೆಯಿಂದ ಪ್ರವಾಹ ಬಂದ ಸಂದರ್ಭದಲ್ಲಿಯೂ ಕಾಳಜಿ
ಕೇಂದ್ರ ತೆರೆದು 38 ಕುಟುಂಬಗಳ 180 ಜನರಿಗೆ ಕಾಳಜಿ
ಕೇಂದ್ರದಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಅಗತ್ಯ ಬಂದಲ್ಲಿ,
ಇನ್ನಷ್ಟು ಕಾಳಜಿ ಕೇಂದ್ರ ತೆರೆದು ಅಗತ್ಯ ಊಟೋಪಹಾರ
ಹಾಗೂ ವಾಸ್ತವ್ಯಕ್ಕೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಕಾಳಜಿ ಕೇಂದ್ರಗಳಲ್ಲಿ
ಅತ್ಯುತ್ತಮ ಗುಣಮಟ್ಟದ ಊಟೋಪಹಾರ, ವಾಸ್ತವ್ಯ ಹಾಗೂ
ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕು. ಈ ಬಗ್ಗೆ
ಯಾರಿಂದಲೂ ಯಾವುದೇ ಬಗೆಯ ಅಪಸ್ವರಗಳು
ಕೇಳಿಬರಬಾರದು. ಪ್ರಾಣ ಹಾನಿಗೆ ಸಂಬಂಧಿಸಿದಂತೆ ಸಂಬಂಧಪಟ್ಟ
ಕುಟುಂಬಗಳಿಗೆ ತಕ್ಷಣ ಪರಿಹಾರ ದೊರಕಬೇಕು. ಜನ,
ಜಾನುವಾರುಗಳ ಜೀವ ಹಾನಿ ಹಾಗೂ ಬೆಳೆ ಹಾನಿಗೆ ಸಂಬಂಧಿಸಿದಂತೆ
ಯಾವುದೇ ಸಂತ್ರಸ್ತರು ಪರಿಹಾರದಿಂದ
ವಂಚಿತರಾಗಬಾರದು. ಅತಿವೃಷ್ಟಿ ಹಾಗೂ ಪ್ರವಾಹದಿಂದ ಉಂಟಾದ
ಹಾನಿಗೆ ಸಂಬಂಧಿಸಿದಂತೆ ಇಲಾಖಾವಾರು ನಷ್ಟದ ವರದಿಯನ್ನು
ಸಿದ್ಧಪಡಿಸಿ ತ್ವರಿತವಾಗಿ ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಸಚಿವರು
ಸೂಚನೆ ನೀಡಿದರು.
ಮನೆ ಹಾನಿ ವರದಿ : ಮಳೆಯಿಂದಾಗಿ ಈ ವರ್ಷ ಏಪ್ರಿಲ್ನಿಂದ ಈವರೆಗೆ
ಜಿಲ್ಲೆಯಲ್ಲಿ ಒಟ್ಟು 23 ಮನೆಗಳು ಸಂಪೂರ್ಣ ಹಾನಿಗೊಂಡಿದ್ದು,
583 ಮನೆಗಳು ಭಾಗಶಃ ಹಾನಿಗೆ ಒಳಗಾಗಿವೆ. ಈವರೆಗೆ 19
ಲಕ್ಷ ರೂ. ಪರಿಹಾರ ನೀಡಲಾಗಿದ್ದು, ಇನ್ನೂ 35 ಲಕ್ಷ ರೂ.
ಪರಿಹಾರ ನೀಡಬೇಕಿದೆ ಎಂದು ಜಿಲ್ಲಾಧಿಕಾರಿಗಳು ಮಾಹಿತಿ
ನೀಡಿದರು. ಚನ್ನಗಿರಿ ಶಾಸಕ ಮಾಡಾಳ್ ವಿರುಪಾಕ್ಷಪ್ಪ
ಮಾತನಾಡಿ, ಮನೆ ಹಾನಿ ವರದಿ ನೀಡುವ ಸಂದರ್ಭದಲ್ಲಿ ಮನೆಯ
ಒಂದು ಭಾಗದ ಗೋಡೆ ಸಂಪೂರ್ಣವಾಗಿ ಬಿದ್ದುಹೋಗಿ, ಆ
ಮನೆಯನ್ನು ಕೆಡವಿಯೇ ಪುನಃ ಮನೆ
ಕಟ್ಟಬೇಕಿರುತ್ತದೆ. ಆದರೆ ಅಧಿಕಾರಿಗಳು ಅಂತಹ
ಪ್ರಕರಣದಲ್ಲಿ ಭಾಗಶಃ ಹಾನಿ ಎಂದು ವರದಿ ಸಲ್ಲಿಸುತ್ತಿದ್ದು,
ಇದರಿಂದ ಸಂತ್ರಸ್ತರಿಗೆ ಅಲ್ಪ ಪರಿಹಾರ ಸಿಗುತ್ತಿದೆ ಎಂದು
ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಸ್ಪಂದಿಸಿದ ಸಚಿವರು,
ಮನೆಯನ್ನು ಕೆಡವಿಯೇ ಮತ್ತೆ ಮನೆ ಕಟ್ಟುವ ಹಾಗೆ,
ಮನೆ ಕುಸಿತಗೊಂಡಿದ್ದಲ್ಲಿ, ಅಧಿಕಾರಿಗಳು ಅದನ್ನು ಮನೆಯ
ಪೂರ್ಣ ಹಾನಿ ಎಂದೇ ಪರಿಗಣಿಸಿ ವರದಿ ಸಲ್ಲಿಸಬೇಕು.
ತಹಸಿಲ್ದಾರರು ಮನೆ ಹಾನಿ ಸ್ಥಳಕ್ಕೆ ಖುದ್ದು ಭೇಟಿ ನೀಡಿಯೇ
ವರದಿ ಸಲ್ಲಿಸಬೇಕು. ಉಪವಿಭಾಗಾಧಿಕಾರಿಗಳು ಈ ಬಗ್ಗೆ
ಮೇಲ್ವಿಚಾರಣೆ ಕೈಗೊಂಡು, ಪ್ರತಿ ತಾಲ್ಲೂಕಿಗೂ ಭೇಟಿ ನೀಡಿ
ವರದಿ ಪರಿಶೀಲಿಸಿ, ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು
ಎಂದು ಸೂಚನೆ ನೀಡಿದರು. ಹರಿಹರ ಶಾಸಕ ರಾಮಪ್ಪ
ಮಾತನಾಡಿ, ಪ್ರತಿವರ್ಷ ಮಳೆ ಹೆಚ್ಚಾದಾಗ, ಪ್ರವಾಹ
ಸಂದರ್ಭದಲ್ಲಿ ಗಂಗಾನಗರ ಮುಳುಗಡೆಯಾಗಿ ಜನರು
ತೊಂದರೆ ಎದುರಿಸುತ್ತಿದ್ದಾರೆ, ಇದಕ್ಕೆ ಶಾಶ್ವತ ಪರಿಹಾರ
ಕಲ್ಪಿಸಬೇಕು ಎಂದರು. ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ,
ಹರಿಹರ ತಾಲ್ಲೂಕು ಗಂಗಾನಗರ ಹಾಗೂ ಹೊನ್ನಾಳಿ
ತಾಲ್ಲೂಕಿನ ಬಾಲರಾಜ್ ಘಾಟ್ ಪ್ರದೇಶದಲ್ಲಿ ಜನರು
ಅನಧಿಕೃತವಾಗಿ ಮನೆಗಳನ್ನು ಕಟ್ಟಿಕೊಂಡಿದ್ದು, ಇದಕ್ಕೆ
ಪರಿಹಾರ ಒದಗಿಸಲು ನಿಯಮಗಳಲ್ಲಿ ಅವಕಾಶವಿಲ್ಲ. ಆದಾಗ್ಯೂ
ಪ್ರವಾಹ ಸಂದರ್ಭದಲ್ಲಿ ಅಲ್ಲಿನ ಜನರಿಗಾಗಿ ಕಾಳಜಿ ಕೇಂದ್ರ
ತೆರೆದು ಊಟೋಪಹಾರ, ವಾಸ್ತವ್ಯಕ್ಕೆ ಅವಕಾಶ
ಮಾಡಿಕೊಡಲಾಗುತ್ತಿದೆ. ಆಶ್ರಯ ಯೋಜನೆಯಡಿ ಮನೆ
ಒದಗಿಸಲು ಸರ್ಕಾರ ಸಿದ್ಧವಿದ್ದು, ಈ ನಿಟ್ಟಿನಲ್ಲಿ ಜಮೀನು ಗುರುತಿಸಿ,
ಅಂತಹವರಿಗೆ ಆದ್ಯತೆ ಮೇರೆಗೆ ಮನೆ ಒದಗಿಸಲಾಗುವುದು
ಎಂದರು.
ಕೋವಿಡ್ 3ನೇ ಅಲೆ ತಡೆಗೆ ಮುಂಜಾಗ್ರತೆ ಅಗತ್ಯ :
ಜಿಲ್ಲೆಯಲ್ಲಿ ಸದ್ಯ 249 ಸಕ್ರಿಯ ಕೋವಿಡ್ ಪ್ರಕರಣಗಳಿದ್ದು,
ಜಿಲ್ಲೆ ಸಂಪೂರ್ಣ ಕೋವಿಡ್ ಮುಕ್ತವಾಗಬೇಕು ಎನ್ನುವುದೇ
ನಮ್ಮ ಆಶಯವಾಗಿದೆ. ಹೀಗಾಗಿ ದಿನನಿತ್ಯ ಕೈಗೊಳ್ಳುವ
ಟೆಸ್ಟಿಂಗ್ ಪ್ರಮಾಣ ಹೆಚ್ಚಿಸಬೇಕು. ಕೋವಿಡ್ ವ್ಯಾಪಕವಾಗಿರುವ
ಭಾಗದಿಂದ ಜಿಲ್ಲೆಗೆ ಬರುವವರಿಗೆ ಕಡ್ಡಾಯವಾಗಿ ಕೋವಿಡ್ ಟೆಸ್ಟ್
ಮಾಡಬೇಕು, ಇದರ ಜೊತೆಗೆ ಲಸಿಕೆ ನೀಡಿಕೆ ಕಾರ್ಯಕ್ಕೆ
ಹೆಚ್ಚಿನ ವೇಗ ನೀಡಬೇಕು. ಜಿಲ್ಲೆಯಲ್ಲಿ ಆದಷ್ಟು
ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು
ಸಚಿವ ಬಿ.ಎ. ಬಸವರಾಜ ಹೇಳಿದರು. ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.
ರಾಘವನ್ ಮಾಹಿತಿ ನೀಡಿ, ಎರಡನೆ ಅಲೆಯಲ್ಲಿ 484 ಮಕ್ಕಳು
ಸೋಂಕಿಗೆ ಒಳಗಾಗಿ, ಎಲ್ಲರೂ ಗುಣಮುಖರಾದರು. 3ನ
ಅಲೆಯಲ್ಲಿ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರುವ
ಎಚ್ಚರಿಕೆ ತಜ್ಞರು ನೀಡಿದ್ದು, ಕೋವಿಡ್ ತಡೆಗಟ್ಟುವ ನಿಟ್ಟಿನಲ್ಲಿ
ಈಗಾಗಲೆ ಜಿಲ್ಲೆಯ ಎಲ್ಲ ಮಕ್ಕಳ ತಜ್ಞ ವೈದ್ಯರೊಂದಿಗೆ 4 ಬಾರಿ
ಸಭೆ ನಡೆಸಿ ಚರ್ಚಿಸಲಾಗಿದೆ. ನರ್ಸ್, ಹಾಗೂ ಅಗತ್ಯ ಸಿಬ್ಬಂದಿಗಳಿಗೆ
ತರಬೇತಿ ಕೊಡಿಸಲಾಗಿದೆ. ಅಗತ್ಯವಿರುವ ಐಸಿಯು, ವೆಂಟಿಲೇಟರ್,
ಆಕ್ಸಿಜನ್, ವೈದ್ಯಕೀಯ ಉಪಕರಣಗಳು, ಔಷಧಿಗಳ
ಪೂರೈಕೆ ಕುರಿತಂತೆ ಎಲ್ಲ ಮುಂಜಾಗ್ರತಾ ಕ್ರಮಗಳನ್ನು
ಪ್ರಾರಂಭಿಸಲಾಗಿದೆ ಎಂದರು. ಜಿಲ್ಲಾಧಿಕಾರಿ ಮಾತನಾಡಿ, ಜಿಲ್ಲೆಗೆ
ಅಗತ್ಯವಿರುವ ವೈದ್ಯಕೀಯ ಉಪಕರಣಗಳು,
ಮಾನವಸಂಪನ್ಮೂಲ ಸೇರಿದಂತೆ ಎಲ್ಲ ಅಗತ್ಯತೆಗಳನ್ನು
ಪಡೆಯಲು ಈಗಾಗಲೆ ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಕ್ರಮ
ಕೈಗೊಳ್ಳಲಾಗಿದೆ. ಸಿಎಸ್ಆರ್ ನಿಧಿಯಡಿ ವಿವಿಧ ಪರಿಕರ
ಪಡೆಯಲು ಬೇರೆ ಬೇರೆ ಸಂಸ್ಥೆಗಳೊಂದಿಗೆ ಮಾತನಾಡಿ
ಪ್ರಯತ್ನ ನಡೆಸಲಾಗಿದೆ. ಆಕ್ಸಿಜನ್ ಘಟಕಗಳು ಎಲ್ಲವೂ
ಕಾರ್ಯಾರಂಭಗೊಳ್ಳಲು ಅಗತ್ಯ ಕ್ರಮ
ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ
ಈಗಾಗಲೆ ರಾತ್ರಿ ಕಫ್ರ್ಯೂ ಜಾರಿಗೊಳಿಸಿದ್ದು,
ದೇವಾಲಯಗಳಲ್ಲಿ ದರ್ಶನ ಹೊರತುಪಡಿಸಿ ಎಲ್ಲ ಸೇವೆ
ನಿಷೇಧಿಸಿದೆ. ಶನಿವಾರ ಭಾನುವಾರ ಭಕ್ತರು
ದೇಗುಲದೊಳಗೆ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ
ಎಂದರು. ಚನ್ನಗಿರಿ ಶಾಸಕ ಮಾಡಾಳ್ ವಿರುಪಾಕ್ಷಪ್ಪ ಮಾತನಾಡಿ,
ಈ ಸಂದರ್ಭದಲ್ಲಿ ತಾಲ್ಲೂಕು ಆಸ್ಪತ್ರೆಗಳನ್ನು
ಅಭಿವೃದ್ಧಿಗೊಳಿಸಿ ಬಲಪಡಿಸುವ ನಿಟ್ಟಿನಲ್ಲಿ ಅಗತ್ಯ ಪರಿಕರಗಳು
ಹಾಗೂ ಸಂಪನ್ಮೂಲ ಒದಗಿಸಿದಲ್ಲಿ, ತಾಲ್ಲೂಕು ಮಟ್ಟದಲ್ಲಿಯೇ
ಜನರಿಗೆ ಉತ್ತಮ ಚಿಕಿತ್ಸೆ ದೊರೆತು ಜಿಲ್ಲಾ ಆಸ್ಪತ್ರೆ ಮೇಲಿನ
ಒತ್ತಡ ಕಡಿಮೆ ಮಾಡಲು ಸಹಕಾರಿಯಾಗಲಿದೆ ಎಂದರು.
ಸಚಿವರು ಪ್ರತಿಕ್ರಿಯಿಸಿ, ಕೋವಿಡ್ನಿಂದ ಮೃತಪಟ್ಟ ವ್ಯಕ್ತಿಗಳ
ಬಗ್ಗೆ ವೈದ್ಯರು ಸಮರ್ಪಕವಾಗಿ ವರದಿ ನೀಡಬೇಕು.
ಕೋವಿಡ್ನಿಂದ ಮೃತಪಟ್ಟ ಕುಟುಂಬಗಳಿಗೆ 1 ಲಕ್ಷ ರೂ.
ಪರಿಹಾರ ನೀಡಲು ಸರ್ಕಾರ ಘೋಷಿಸಿದ್ದು, ಈ ನಿಟ್ಟಿನಲ್ಲಿ ಯಾರೂ
ಕೂಡ ಪರಿಹಾರದಿಂದ ವಂಚಿತರಾಗಬಾರದು. ಎಲ್ಲ
ತಾಲ್ಲೂಕುಗಳಲ್ಲಿಯೂ ಈಗಾಗಲೆ ಆಕ್ಸಿಜನ್ ಘಟಕಗಳು
ಸ್ಥಾಪನೆಗೊಂಡಿದ್ದು, ಎಲ್ಲವೂ ಕಾರ್ಯಾರಂಭಗೊಳ್ಳಲು
ಯಾವುದೇ ಅಡ್ಡಿಯಿದ್ದಲ್ಲಿ 10 ದಿನಗಳ ಒಳಗಾಗಿ
ನಿವಾರಣೆಗೊಂಡು, ಎಲ್ಲವೂ ಆಕ್ಸಿಜನ್ ಪೂರೈಕೆಗೆ
ಸಕ್ಷಮವಾಗಿರುವಂತೆ ಡಿಹೆಚ್ಒ ಕ್ರಮ ವಹಿಸಬೇಕು, ತಪ್ಪಿದಲ್ಲಿ
ಇದರ ಹೊಣೆಯನ್ನು ಅವರೇ ಹೊರಬೇಕಾಗುತ್ತದೆ ಎಂದು
ಎಚ್ಚರಿಕೆ ನೀಡಿದರು.
ಶೇ. 57 ರಷ್ಟು ಲಸಿಕಾಕರಣ : ಜಿಲ್ಲೆಯಲ್ಲಿ 18 ವರ್ಷ ಮೇಲ್ಪಟ್ಟ
ಒಟ್ಟು 12.44 ಲಕ್ಷ ಜನರಿದ್ದು, ಈ ಪೈಕಿ 5.72 ಲಕ್ಷ ಜನರಿಗೆ ಒಂದು
ಡೋಸ್ ಲಸಿಕೆ ನೀಡಿದ್ದು, 1.38 ಲಕ್ಷ ಜನರು 2 ಡೋಸ್ ಲಸಿಕೆ
ಪಡೆದಿದ್ದಾರೆ. ಒಟ್ಟಾರೆ ಜಿಲ್ಲೆಯಲ್ಲಿ ಶೇ. 57 ರಷ್ಟು
ಸಾಧನೆಯಾಗಿದೆ. 14727 ಅಂಗವಿಲರಿಗೆ ಲಸಿಕೆ ನೀಡಿದ್ದು, ಶೇ. 95
ರಷ್ಟು ಸಾಧನೆಯಾಗಿದೆ. ಅಪೌಷ್ಠಿಕ ಮಕ್ಕಳ ಪೋಷಕರ
ಪೈಕಿ 10263 ಜನರಿಗೆ ಲಸಿಕೆ ನೀಡಿದ್ದು, ಖಾಸಗಿ ಆಸ್ಪತ್ರೆಗಳಲ್ಲಿ
ಈವರೆಗೆ 34566 ಜನರಿಗೆ ಮಾತ್ರ ಲಸಿಕೆ ನೀಡಿಕೆಯಾಗಿದೆ. 5.57
ಲಕ್ಷ ಡೋಸ್ ಕೋವಿಶೀಲ್ಡ್ ಹಾಗೂ 0.82 ಲಕ್ಷ ಡೋಸ್
ಕೋವ್ಯಾಕ್ಸಿನ್ ಲಸಿಕೆ ನೀಡಲಾಗಿದೆ. ಈಗಾಗಲೆ ವಿದ್ಯಾರ್ಥಿಗಳು ಹಾಗೂ
ಕಾಲೇಜು ಸಿಬ್ಬಂದಿಗಳಿಗೂ ಲಸಿಕೆ ನೀಡಿಕೆ ಕಾರ್ಯ ನಡೆದಿದ್ದು,
ಜಿಲ್ಲೆಗೆ ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ದೊರೆತಲ್ಲಿ, ಲಸಿಕಾಕರಣಕ್ಕೆ
ಇನ್ನಷ್ಟು ವೇಗ ನೀಡಲಾಗುವುದು ಎಂದು ಜಿಲ್ಲಾ ಆರ್ಸಿಹೆಚ್
ಅಧಿಕಾರಿ ಡಾ. ಮೀನಾಕ್ಷಿ ಹೇಳಿದರು. ಸಚಿವರು ಸ್ಪಂದಿಸಿ, ಇನ್ನೂ
ಸಚಿವರುಗಳಿಗೆ ಖಾತೆ ಹಂಚಿಕೆಯಾಗಿಲ್ಲ, ಆರೋಗ್ಯ ಖಾತೆ
ಪಡೆಯುವ ಸಚಿವರೊಂದಿಗೆ ಚರ್ಚಿಸಿ, ಜಿಲ್ಲೆಗೆ ಹೆಚ್ಚಿನ ಪ್ರಮಾಣದ
ಲಸಿಕೆ ಪಡೆಯಲು ಎಲ್ಲ ಯತ್ನ ಮಾಡಲಾಗುವುದು ಎಂದರು.
ಸಭೆಯಲ್ಲಿ ಜಗಳೂರು ಶಾಸಕ ಎಸ್.ವಿ. ರಾಮಚಂದ್ರಪ್ಪ,
ದಾವಣಗೆರೆ ಉತ್ತರ ಕ್ಷೇತ್ರ ಶಾಸಕ ಎಸ್.ಎ. ರವೀಂದ್ರನಾಥ್,
ದಾವಣಗೆರೆ ಮಹಾನಗರಪಾಲಿಕೆ ಮೇಯರ್ ಎಸ್.ಟಿ. ವೀರೇಶ್, ಜಿಲ್ಲಾ
ಪಂಚಾಯತ್ ಸಿಇಒ ಡಾ. ವಿಜಯ ಮಹಾಂತೇಶ್, ಜಿಲ್ಲಾ ಪೊಲೀಸ್
ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಸೇರಿದಂತೆ ವಿವಿಧ ಇಲಾಖೆಗಳ
ಅಧಿಕಾರಿಗಳು ಉಪಸ್ಥಿತರಿದ್ದರು.