ಹರಪನಹಳ್ಳಿ : ರೈತರಿಗೆ ಎರೆಹುಳು ಗೊಬ್ಬರ ತಯಾರಿಕೆಯನ್ನು
ಉತ್ತೇಜಿಸುವ ದೃಷ್ಟಿಯಿಂದ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ
ಯೋಜನೆಯಡಿ ಆ.15 ರಿಂದ ಆಕ್ಟೋಬರ್ 15ರವರೆಗೆ 2 ತಿಂಗಳ ಅವಧಿಯಲ್ಲಿ
ಹರಪನಹಳ್ಳಿ ತಾಲ್ಲೂಕು ಪಂಚಾಯತ್ ಮತ್ತು ಕೃಷಿ ಇಲಾಖೆ ಸಹಯೋಗದಲ್ಲಿ
ರೈತ ಬಂಧು ಅಭಿಯಾನ ಹಮ್ಮಿಕೊಂಡಿದ್ದು, ನರೇಗಾದಡಿ ಪ್ರತಿ ಗ್ರಾಮ
ಪಂಚಾಯಿತಿಗೆ 50ರಂತೆ ಎರೆಹುಳು ತೊಟ್ಟಿ ನಿರ್ಮಿಸಲು ಉದೇಶಿಸಲಾಗಿದೆ, ಎಂದು
“ರೈತ ಬಂಧು” ಅಭಿಯಾನಕ್ಕೆ ಚಾಲನೆ ನೀಡಿದ ತಾಲ್ಲೂಕು ಪಂಚಾಯತ್
ಕಾರ್ಯನಿರ್ವಾಹಕ ಅಧಿಕಾರಿ ಕೆ.ಪ್ರಕಾಶ್ ತಿಳಿಸಿದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು, ಭೂಸುಧಾರಣಾ
ಕುಟುಂಬಗಳು, ಪ್ರಧಾನ ಮಂತ್ರಿ ಅವಾಸ್ ಯೋಜನೆ ಫಲಾನುಭವಿಗಳು,
ಅಲೆಮಾರಿ ಜನಾಂಗದವರು, ಬಿಪಿಎಲ್ ಕುಟುಂಬಗಳು, ಸ್ತ್ರೀ ಪ್ರಧಾನ
ಕುಟುಂಬಗಳು, ಸಣ್ಣ ಮತ್ತು ಅತೀ ಸಣ್ಣ ರೈತರು, ವಿಕಲಚೇತನ ಪ್ರಧಾನ
ಕುಟುಂಬಗಳು, ಅನುಸೂಚಿತ ಬುಡಕಟ್ಟುಗಳು ಮತ್ತು ಪಾರಂಪರಿಕ ಅರಣ್ಯ
ವಾಸಿಗಳು, ಈ ಕಾಮಗಾರಿ ಸೌಲಭ್ಯ ಪಡೆಯಬಹುದಾಗಿದೆ, ಎಂದು ಅವರು ವಿವರಿಸಿದರು.
ಎರೆಹುಳು ತೊಟ್ಟಿ ನಿರ್ಮಾಣಕ್ಕೆ ಸಲ್ಲಿಸಬೇಕಾದ ದಾಖಲೆಗಳೆಂದರೆ : ನರೇಗಾ
ಉದ್ಯೋಗ ಚೀಟಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ಪಹಣಿ, ಜಾತಿ ಪ್ರಮಾಣ ಪತ್ರ,
(ಪ.ಜಾತಿ / ಪ.ಪಂಗಡದ ರೈತರಿಗೆ) ನಮೂನೆ 24/ಸಣ್ಣ ಹಿಡುವಳಿದಾರರ ಪತ್ರ
(ಸಾಮಾನ್ಯ ವರ್ಗದವರಿಗೆ) ನಮೂನೆ-6 (ಗ್ರಾಮ ಪಂಚಾಯಿತಿಯಿಂದ) ಪಡೆದು
ಆಸಕ್ತ ರೈತರು ಗ್ರಾಮ ಪಂಚಾಯತ್‍ಗೆ ಸಲ್ಲಿಸಬೇಕು.
ಕಾಯಕ ಮಿತ್ರ : ಆಪ್ ಮೊಬೈಲ್ ಆಪ್ ಮೂಲಕವು ಅರ್ಜಿ ಸಲ್ಲಿಸಬಹುದು, ಉಚಿತ
ಸಹಾಯವಾಣಿ ಸಂಖ್ಯೆ 1800-425-8666 ಮೂಲಕ ಬೇಡಿಕೆ ಸಲ್ಲಿಸಬಹುದಾಗಿದೆ ಎಂದು
ಮಾಹಿತಿ ಶಿಕ್ಷಣ ಸಂವಹನ ಸಂಯೋಜಕರು ಫಾಜೀಲ್ ಅಹಮ್ಮದ್ ಹೊದಿಗೆರೆ
ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ತಾಲ್ಲೂಕು ಪಂಚಾಯಿತಿ ಮಾಹಿತಿ ಶಿಕ್ಷಣ ಸಂವಹನ (ಐ.ಇ.ಸಿ)
ಸಂಯೋಜಕರು, ಗ್ರಾಮ ಪಂಚಾಯಿತಿ ಹಂತದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ,
ಹಾಗೂ ಸಹಾಯಕ ಕೃಷಿ ನಿರ್ದೇಶಕರನ್ನು ಸಂಪರ್ಕಿಸಬಹುದಾಗಿದೆ.
ಎರೆಹುಳು ತೊಟ್ಟಿ ನಿರ್ಮಾಣದ ಉದ್ದೇಶಗಳು : ಆರ್ಥಿಕ ಸ್ಥಿರತೆ-ರಾಸಾಯನಿಕ
ಗೊಬ್ಬರದ ಬದಲಾಗಿ ಎರೆಹುಳು ಗೊಬ್ಬರದ ಉಪಯೋಗದಿಂದ ಉತ್ಪಾದನೆ
ವೆಚ್ಚ ಕಡಿಮೆಯಾಗುವುದರಿಂದ ರೈತರು ಆದಾಯ ಹೆಚ್ಚಿಸಲು
ಅನುಕೂಲವಾಗುತ್ತದೆ. ತ್ಯಾಜ್ಯ ವಸ್ತುಗಳ ಸದ್ಬಳಕೆಯಿಂದ (ಕೃಷಿ ಡೈರಿ)
ಪರಿಸರ ಮಾಲಿನ್ಯ ಕಡಿಮೆಗೊಳಿಸಿ ಸ್ವಚ್ಚ ಪರಿಸರ ಸೃಷ್ಟಿಸಲು
ಅನುಕೂಲವಾಗುತ್ತದೆ. ರಾಸಾಯನಿಕ ಗೊಬ್ಬರ ಕೀಟನಾಶಕ ಹಾಗೂ ಶೀಲಿಂದ್ರ
ನಾಶಕಗಳ ಯಥೇಚ್ಛ ಬಳಕೆಯಿಂದ ಮಣ್ಣಿನ ಫಲವತ್ತತೆ
ಕ್ಷೀಣಿಸುತ್ತದೆ. ಇದರಿಂದ ವಾತಾವರಣ ಕಲುಷಿತವಾಗುತ್ತದೆ, ಕೃಷಿ
ಉತ್ಪನ್ನಗಳಲ್ಲಿ ರಾಸಾಯನಿಕ ಉಳಿಯುವಿಕೆಯಿಂದ ಉತ್ಷನ್ನಗಳ ಗುಣಮಟ್ಟ
ಕಡಿಮೆಯಾಗುತ್ತದೆ. ಹೊಲಕ್ಕೆ ಹಾಕಿದರೆ “ಎರೆಹುಳ ಗೊಬ್ಬರ ಫಸಲು
ಆದೀತು ಪ್ರಬಲ” ಎನ್ನುವಂತೆ ತಾಲ್ಲೂಕಿನಲ್ಲಿರುವ ರೈತ ಸಮುದಾಯ ಹೆಚ್ಚಿನ
ಸಂಖ್ಯೆಯಲ್ಲಿ ಎರೆಹುಳ ತೊಟ್ಟಿಗಳನ್ನು ನಿರ್ಮಿಸಲು ಮುಂದಾಗಬೇಕು. ಈ
ಮೂಲಕ ರಾಸಾಯನಿಕ ಗೊಬ್ಬರ ಬಳಸುವುದನ್ನು ಕಡಿಮೆಗೊಳಿಸಿ ಯೋಜನೆ
ಲಾಭ ಪಡೆದುಕೊಳ್ಳಬೇಕು. ಕಾರ್ಯಕ್ರಮದಲ್ಲಿ ಸಹಾಯಕ
ನಿರ್ದೇಶಕರು (ಗ್ರಾ ಉ), ತಾಲ್ಲೂಕು ಐ.ಇ.ಸಿ.ಸಂಯೋಜಕರು, ತಾಲ್ಲೂಕು
ತಾಂತ್ರಿಕ ಸಂಯೋಜಕರ, ಪಿ.ಡಿ.ಒ.ರವರು ಭಾಗವಹಿಸಿದ್ದರು.