ಕೆಂಪು ಹಂಚಿನ ಭವನದ ಸುತ್ತಲು ಹಸಿರು ಹೊದಿಕೆಯ
ಭವ್ಯ ಉದ್ಯಾನ, ಇದರ ಮಧ್ಯೆ ಬಾಪೂಜಿ ಧ್ಯಾನದಲ್ಲಿ ಮಗ್ನರಾಗಿರುವ
ಕಲಾಕೃತಿ, ಒಳಭಾಗದಲ್ಲಿರುವ ಗ್ರಾನೈಟ್ ಕಲ್ಲಿನ ಭವ್ಯ ಪ್ರತಿಮೆ,
ಗಾಂಧಿ ನಡೆಸಿದ ದಂಡಿ ಯಾತ್ರೆ ಹೀಗೆ ವಿವಿಧ ಬಗೆಯ ಸುಂದರ
ಕಲಾಕೃತಿಗಳ ವೈಭವದೊಂದಿಗೆ ಸುಮಾರು 3 ಕೋಟಿ ರೂ.
ವೆಚ್ಚದಲ್ಲಿ ದಾವಣಗೆರೆಯಲ್ಲಿ ನಿರ್ಮಾಣಗೊಂಡಿರುವ ಗಾಂಧಿ ಭವನ
ಸತ್ಯ ಮೇವ ಜಯತೇ ಎಂಬ ಬರಹದಿಂದ ಜನಮಾನಸವನ್ನು
ಸ್ವಾಗತಿಸುತ್ತಿದ್ದು, ಸೆ. 02 ರಂದು ಲೋಕಾರ್ಪಣೆಗೊಳ್ಳಲಿದೆ.
ದಾವಣಗೆರೆಗೂ ಮಹಾತ್ಮ ಗಾಂಧೀಜಿಗೂ ಇರುವ ವಿಶೇಷ ನಂಟು
ಮತ್ತು ಅವರ ಜೀವನಾದರ್ಶಗಳನ್ನು, ಮೌಲ್ಯಗಳನ್ನು ವಿವಿಧ
ರೀತಿಯಾಗಿ ನಿರಂತರವಾಗಿ ಇಂದಿನ ಯುವ ಪೀಳಿಗೆಗೆ
ಪ್ರಚುರಪಡಿಸುವ ನಿಟ್ಟಿನಲ್ಲಿ ನಿರ್ಮಾಣವಾಗಿರುವ ಗಾಂಧಿ ಭವನದ
ಉದ್ಘಾಟನೆಗೆ ಇನ್ನೂ ಕ್ಷಣಗಣನೆ ಮಾತ್ರ ಉಳಿದಿದೆ.
ಹೌದು., ಇದೇ ಸೆಪ್ಟೆಂಬರ್ 2 ರಂದು ಉದ್ಘಾಟನೆಗೊಳ್ಳಲಿರುವ ಗಾಂಧಿ
ಭವನ ನಗರದ ಎಸ್.ಎಸ್.ಆಸ್ಪತ್ರೆಯ ಬಳಿ ಇರುವ ಆವರಗೆರೆ
ಗ್ರಾಮದ ಸರ್ವೆ ನಂಬರ್ 213 ರಲ್ಲಿ (ರಾಮನಗರ) 01 ಎಕರೆ
ವಿಸ್ತೀರ್ಣದಲ್ಲಿ ನೂತನ ವಿನ್ಯಾಸದೊಂದಿಗೆ ಸುಂದರ ಕಲಾಕೃತಿ ಹಾಗೂ
ವೈಭವದಿಂದ ಕಂಗೊಳಿಸುತ್ತಿದೆ.
ಸರ್ಕಾರದ ಆದೇಶದಂತೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ
ಇಲಾಖೆಯಡಿ ಗಾಂಧಿ ಭವನದ ನಿರ್ಮಾಣವಾಗಿದ್ದು, ಒಟ್ಟು 280 ಲಕ್ಷ ರೂ
ಅನುದಾನದಡಿ ಗಾಂಧಿ ಭವನದ ಕಾಮಗಾರಿಯನ್ನು ನಿರ್ಮಿತಿ
ಕೇಂದ್ರಕ್ಕೆ ವಹಿಸಲಾಗಿದ್ದು, ಕಟ್ಟಡದ ಹಿಂಭಾಗದಲ್ಲಿ ಆಕರ್ಷಕ
ಉದ್ಯಾನವನ ನಿರ್ಮಾಣಗೊಂಡಿದೆ. ಅಂಗವಿಕಲರಿಗೆ ರ್ಯಾಂಪ್ ವ್ಯವಸ್ಥೆ,
ಮಹಿಳೆಯರಿಗೆ, ಪುರುಷರಿಗೆ ಮತ್ತು ಅಂಗವಿಕಲರಿಗೆ ಪ್ರತ್ಯೇಕ
ಶೌಚಾಲಯ ವ್ಯವಸ್ಥೆ ಮಾಡಲಾಗಿದೆ.
ಭವನದಲ್ಲಿ ಏನೇನು?
100/100 ಅಡಿ ವಿಸ್ತೀರ್ಣದಲ್ಲಿ ಕರಾವಳಿ ಶೈಲಿಯಲ್ಲಿ ಗಾಂಧಿಭವನ ತಲೆ
ಎತ್ತಿದ್ದು, ಒಳ ಹೋಗುತ್ತಿದ್ದ ಹಾಗೆ, ಕೆಂಪು ಹಂಚಿನ ಭವನದ
ಸುತ್ತಲು ಹಸಿರು ಹೊದಿಕೆಯ ಭವ್ಯ ಉದ್ಯಾನವಿದೆ. ಹೊರಾಂಗಣದಲ್ಲಿ
ಚರಕ ಜನರನ್ನು ಸ್ವಾಗತಿಸಿದರೆ, ಒಳಗೆ ಕಾಲಿಡುತ್ತಿದ್ದಂತೆ ಗಾಂಧಿ
ಪ್ರತಿಮೆ ಎದುರುಗೊಳ್ಳುತ್ತಿದೆ. ಜಿಲ್ಲೆಯಲ್ಲಿ ಗಾಂಧಿ ಭೇಟಿ ನೀಡಿದ
ಸ್ಥಳಗಳು ಹಾಗೂ ದಾವಣಗೆರೆಯೊಂದಿಗೆ ಗಾಂಧಿಯ ನಂಟು,
ಶಾಶ್ವತ ಗಾಂಧಿ ಸಾಹಿತ್ಯ ಕಲಾ ವಸ್ತು ಪ್ರದರ್ಶನ ಕೊಠಡಿ,
ಮ್ಯೂಸಿಯಂ, 100 ಜನ ಕುಳಿತುಕೊಳ್ಳಬಲ್ಲ ಸುಂದರ ಸಭಾಂಗಣ,
ಆಡಳಿತ ಕಚೇರಿ, ಇದರೊಂದಿಗೆ ಗಾಂಧಿಜಿಯವರ ಸ್ವಾತಂತ್ರ್ಯ
ಹೋರಾಟದ ಹೆಜ್ಜೆಗಳು, ವಿಚಾರಧಾರೆಗಳನ್ನು ಪ್ರತಿಬಿಂಬಿಸುವ
ವಿಷಯಗಳು, ಅವರ ಜೀವನ ಚರಿತ್ರೆ
ತಿಳಿದುಕೊಳ್ಳಬಯಸುವವರಿಗೆ ಸುಂದರ ಗ್ರಂಥಾಲಯ ಸೇರಿದಂತೆ
ಅಲ್ಲಿರುವ ಸುಂದರ ಕಲಾಕೃತಿಗಳು ಗಮನ ಸೆಳೆಯುತ್ತಿವೆ.
ಸುಂದರ ಕಲಾಕೃತಿಗಳ ಅನಾವರಣ:
ಶಿವಮೊಗ್ಗ ಮೂಲದ ಕಲಾವಿದರಾದ ಪರಶುರಾಮ ಹಾಗೂ
ಹೊನ್ನಮ್ಮನವರು ಸೇರಿದಂತೆ ಅವರ ಸಹಾಯಕರು
ನಿರ್ಮಿಸಿರುವಂತಹ ಗಾಂಧೀಜಿ ಧ್ಯಾನದಲ್ಲಿ ಮಗ್ನರಾಗಿರುವ ಕಲಾಕೃತಿ,
ಭವನದ ಒಳ ಹೋಗುತ್ತಿದ್ದಂತೆ ಗ್ರಾನೈಟ್ ಕಲ್ಲಿನಿಂದ ಭವ್ಯ
ಪ್ರತಿಮೆಯುಳ್ಳ ಗಾಂಧೀಜಿ, ಗಾಂಧಿ ನಡೆಸಿದ ದಂಡಿ ಯಾತ್ರೆ,
ಮಕ್ಕಳನ್ನು ಓದಿಸುತ್ತಿರುವುದು, ರಾಷ್ಟ್ರದ ನೇತಾರರನ್ನು
ಪುಟ್ಟ ಮಕ್ಕಳು ನಡೆಸುತ್ತಿರುವುದು, ಗಾಂಧಿಜಿ ತಮ್ಮ ಮಡದಿ
ಕಸ್ತೂರಿ ಬಾರವರೊಂದಿಗೆ ಜೊತೆಯಲ್ಲಿ ಕೂತಿರುವುದು,
ಸಹಾಯಕಿಯರೊಂದಿಗೆ ನಡೆದು ಸಾಗುತ್ತಿರುವುದು, ಗಾಂಧೀಜಿ
ಚರಕ ತಿರುಗಿಸುತ್ತಿರುವ ಕಲಾಕೃತಿಗಳು ಜನರನ್ನು
ಆಕರ್ಷಿಸುವುದರಲ್ಲಿ ಎರಡು ಮಾತಿಲ್ಲ.
ಗಾಂಧಿ ಭವನದಲ್ಲೊಂದು ಫೋರಂ:
ಗಾಂಧಿ ಭವನ ಗಾಂಧಿ ಜಯಂತಿ ಮತ್ತು ಗಾಂಧಿ ಪುಣ್ಯಸ್ಮರಣೆಗೆ
ಮಾತ್ರ ಸೀಮಿತವಾಗದೆ ವರ್ಷವಿಡಿ ವಿವಿಧ ಕಾರ್ಯಕ್ರಮಗಳನ್ನು
ಹಮ್ಮಿಕೊಂಡು ಇಂದಿನ ಯುವಪೀಳಿಗೆಗೆ ಗಾಂಧೀಜಿಯವರ
ಜೀವನಾದರ್ಶಗಳನ್ನು, ವಿಚಾರಧಾರೆಗಳನ್ನು ತಿಳಿಸುವ ನಿಟ್ಟಿನಲ್ಲಿ
ಫೋರಂ ಸ್ಥಾಪಿಸಲು ಉದ್ದೇಶಿಸಲಾಗಿದೆ. ಗಾಂಧೀಜಿಯವರಿಗೆ
ಸಂಬಂಧಿಸಿದಂತೆ ಹಲವಾರು ಪುಸ್ತಕಗಳನ್ನು ಸಂಗ್ರಹಿಸಿಡಲು
ಯೋಜಿಸಲಾಗಿದೆ.
ಗಾಂಧೀಜಿ ಹಾಗೂ ದಾವಣಗೆರೆಗೆ ಇರುವ ನಂಟು:
1934ರ ಮಾರ್ಚ್ 2 ರಂದು ಮಹಾತ್ಮ ಗಾಂಧಿ ದಾವಣಗೆರೆಗೆ ಬಂದ
ಅವರು, ಸ್ವಾತಂತ್ರ್ಯ ಹೋರಾಟಗಾರರಲ್ಲಿ ಸ್ಪೂರ್ತಿ ತುಂಬಿ ತಮ್ಮ
ಕಾರ್ಯಕ್ರಮ ಮುಗಿಸಿ ಹೊರಡಲು ಸಿದ್ಧರಾದ ಅವರನ್ನು
ಇನ್ನೊಂದು ದಿನ ಇರಲೇಬೇಕೆಂದು ದಾವಣಗೆರೆಯ ಮುಖಂಡರು
ಒತ್ತಾಯಿಸಿದರು.
ಅದಕ್ಕೆ ಮಹಾತ್ಮ ಗಾಂಧಿ ಅವರು ದಾವಣಗೆರೆಯಲ್ಲಿ
ಉಳಿದುಕೊಳ್ಳಬೇಕೆಂದರೆ ನಗರದಲ್ಲಿ ಹರಿಜನ ವಿದ್ಯಾರ್ಥಿಗಳಿಗಾಗಿ
ಇಲ್ಲೊಂದು ಹಾಸ್ಟೆಲ್ ನಿರ್ಮಾಣ ಮಾಡಬೇಕು. ಅದಕ್ಕೆ ಸ್ಥಳ ದಾನ
ಮಾಡಬೇಕು. ಕಟ್ಟಡ ನಿರ್ಮಾಣ ಹಣ ಸಂಗ್ರಹಿಸಬೇಕು. ಹೀಗೆ
ಮಾಡಿದರೆ ಮಾತ್ರ ಉಳಿದುಕೊಳ್ಳುವೆ ಎಂಬ ಷರತ್ತನ್ನು ವಿಧಿಸಿದ
ಅವರು, ಇದು ಕಷ್ಟದ ಸವಾಲು, ತಕ್ಷಣಕ್ಕೆ ಒಪ್ಪಿಕೊಳ್ಳುವುದಿಲ್ಲ
ಸಾಧ್ಯವಿಲ್ಲ ಎಂದುಕೊಂಡಿದ್ದರು.
ಆದರೆ, ದಾನಿಗಳ ಊರು ದೇವನಗಿರಿಯ ಮಂದಿ ಗಾಂಧಿಜಿಯವರ
ಷರತ್ತನ್ನು ದೈವಾಜ್ಞೆಯಂತೆ ಸ್ವೀಕರಿಸಿದ ಅಂದಿನ ಮುಖಂಡರಾದ
ಕಾಸಲ್ ಶ್ರೀನಿವಾಸ ಶೆಟ್ಟಿ ಮತ್ತು ಚನ್ನಗಿರಿಯ ರಂಗಪ್ಪ ಹಾಸ್ಟೆಲ್
ನಿರ್ಮಾಣಕ್ಕೆ ತಯಾರಿ ನಡೆಸಿ, ವಿದ್ಯಾರ್ಥಿನಿಲಯದ ಸ್ಥಳದ ಜತೆಗೆ ಅಡಿಗಲ್ಲು
ಸಮಾರಂಭಕ್ಕೂ ವ್ಯವಸ್ಥೆ ಮಾಡಿದರು. ಗಾಂಧೀಜಿ ಅವರೇ ಇನ್ನೂರು
ಹೆಜ್ಜೆಗಳನ್ನು ಚೌಕಾಕಾರದಲ್ಲಿ ಅಳೆದು ಕೊಟ್ಟು ನಿವೇಶನ
ಗುರುತಿಸಿ ಅಡಿಗಲ್ಲು ಹಾಕಿದರು. ಮುಂದೆ ವಿದ್ಯಾರ್ಥಿನಿಲಯ ಲಕ್ಷಾಂತರ
ವಿದ್ಯಾರ್ಥಿಗಳಿಗೆ ಬದುಕು ಕಟ್ಟಿಕೊಟ್ಟಿತು. ಗಾಂಧೀಜಿ ಅವರ ನೆನಪಿಗಾಗಿ
ಇಂದಿಗೂ ಸಾಕ್ಷಿಯಾಗಿ ಈ ನಿಲಯ ತಲೆ ಎತ್ತಿ ನಿಂತಿದೆ.
ದಾನಿಗಳ ಮಹಾಪೂರ ದಾವಣಗೆರೆಯನ್ನು ನೋಡಿ ಬೆರಗಾದ
ಗಾಂಧೀಜಿಯವರ ನಂಟನ್ನು ಮುಂದಿನ ಪೀಳಿಗೆಗೂ ತಿಳಿಯಪಡಿಸುವ
ನಿಟ್ಟಿನಲ್ಲಿ ಗಾಂಧಿ ಭವನದ ನಿರ್ಮಾಣವಾಗಿರುವುದು ಸಂತಸಕರ.
ಇಲ್ಲಿ ಬಗೆದಷ್ಟೂ ಗಾಂಧಿಯ ವಿಚಾರಧಾರೆಗಳು, ನೋಡು
ನೋಡುವಷ್ಟು ಗಾಂಧಿಯವರ ತತ್ವ ಸಿದ್ಧಾಂತಗಳು
ಕಾಣಸಿಗುತ್ತವೆ. ಗಾಂಧಿ ಆಸಕ್ತರು ನೋಡಲೇಬೇಕಾದ ಸ್ಥಳ
ಇದಾಗಿದೆ.
ಗಾಂಧಿ ಭವನದ ಉದ್ಘಾಟನೆ ಸೆ. 02 ರಂದು ಮಧ್ಯಾಹ್ನ 3 ಗಂಟೆಗೆ
ನೆರವೇರಲಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ, ಮುಖ್ಯಮಂತ್ರಿ
ಬಸವರಾಜ ಬೊಮ್ಮಾಯಿ, ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ
ಬಿ.ಎ. ಬಸವರಾಜ ಸೇರಿದಂತೆ ಗಣ್ಯಾತಿಗಣ್ಯರು ಕಾರ್ಯಕ್ರಮದಲ್ಲಿ
ಭಾಗವಹಿಸಲಿದ್ದಾರೆ.