ತಹಶೀಲ್ದಾರರ ಕಾರ್ಯಗಳು:
ತಾಲ್ಲೂಕಿನಲ್ಲಿ ತಹಶೀಲ್ದಾರರು ಸರಕಾರದ ಮುಖ್ಯ ಆಡಳಿತಾಧಿಕಾರಿಯಾಗಿರುತ್ತಾರೆ. ಇವರು ಉಪವಿಭಾಗಾಧಿಕಾರಿಗಳಿಗೆ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಾರೆ.
ತಹಶೀಲ್ದಾರರು ಭೂಕಂದಾಯವನ್ನು ಸಂಗ್ರಹಿಸುವುದು ಮತ್ತು ಗ್ರಾಮಲೆಕ್ಕಾಧಿಕಾರಿಗಳು ಹಾಗೂ ಕಂದಾಯ ನಿರೀಕ್ಷಕರು ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿದ್ದಾರೆಯೇ ಎಂಬುದನ್ನು ಗಮನಿಸಬೇಕು ಹಾಗೂ ಗ್ರಾಮದ ಪ್ರತಿಯೊಂದು ಕಡತವನ್ನು ಸರಿಯಾಗಿ ಕಾದಿಡಬೇಕು. ಕಾಲ ಕಾಲಕ್ಕೆ ನಡೆಯುವ ಬದಲಾವಣೆಯನ್ನು ಅರಿತು ಜನರಿಗೆ ಮನವರಿಕೆ ಮಾಡಿಕೋಡಬೇಕು ಮತ್ತು ವಿವಾದಾದ್ಮಕ ಸಂದರ್ಭಗಳಲ್ಲಿ ಆದೇಶಗಳನ್ನು ಮಾಡುವ ಅಧಿಕಾರ ಹಾಗೂ ಹಕ್ಕು ಪತ್ರಗಳನ್ನು, ಬೆಳೆ ದಾಖಲೆಗಳನ್ನು ಪರೀಕ್ಷಿಸ ಬೇಕು. ಹಾಗೂ ಭೂಕಂದಾಯ ರಶೀದಿಗಳನ್ನು, ಪಟ್ಟಾ (Patta) ಪುಸ್ತಕಗಳನ್ನು ಕಾಲ ಕಾಲಕ್ಕೆ ಪರಿಶೀಲಿಸ ಬೇಕು. ಗ್ರಾಮ ನಿವೇಶನಗಳ ಕುರಿತು ಪರಿಶೀಲನೆ ನಡೆಸಬೇಕು. ಅತಿಕ್ರಮಣಾದಾರರನ್ನು ಹೊರದೂಡಲು ವಿಶೇಷ ಗಮನ ನೀಡಬೇಕು.
ಭೂಸುಧಾರಣಾ ಕಾಯ್ದೆಯ ಅಡಿಯಲ್ಲಿ ನಿಯಮ ಉಲ್ಲಂಘನೆ ಮಾಡಿದವರ ಮೇಲೆ ಕ್ರಮ ಜರುಗಿಸುವ ಅಧಿಕಾರ ಮತ್ತು ಭೂ ಅಭಿವೃದ್ಧಿ ಸಾಲಗಳನ್ನು ನೀಡಿರುವುದರ ಕುರಿತು ಪರಿಶೀಲನೆ. ಹಕ್ಕು ಪತ್ರಗಳನ್ನು ಸಮರ್ಪಕವಾಗಿ ನೋಡಿಕೊಳ್ಳುವ ಅಧಿಕಾರಿಯಾಗಿರುವ ಅವರು ತಾಲೂಕಿನಲ್ಲಿ ಪ್ರವಾಸ ಮಾಡುವ ಸಂದರ್ಭದಲ್ಲಿ ಕಂದಾಯ ನಿರೀಕ್ಷಕರು ಮತ್ತು ಗ್ರಾಮ ಲೆಕ್ಕಿಗರು ತಮ್ಮ ಕರ್ತವ್ಯ ಮಾಡುವಲ್ಲಿ ಸಫಲರಾಗಿದ್ದಾರೆಯೇ ಎಂಬುದನ್ನು ಪರಿಶೀಲಿಸ ಬೇಕು. ಗ್ರಾಮ ಭೇಟಿಯ ಬಳಿಕ, ಕಂದಾಯ ನಿರೀಕ್ಷಕರಿಗೆ ಅಥವಾ ಗ್ರಾಮ ಲೆಕ್ಕಿಗರಿಗೆ ತಾವು ನೀಡಿದ ಆದೇಶಗಳನ್ನು ದಾಖಲಿಸ ಬೇಕು, ಸಾರ್ವಜನಿಕ ವಿತರಣೆ ಸಮರ್ಪಕವಾಗಿ ಆಗುವುದರ ಜವಾಬ್ದಾರಿಯನ್ನು ಹೊಂದಿರುವ ಇವರು ಆಗಾಗ್ಗೆ ತಾಲೂಕಿನಲ್ಲಿರುವ ಸರಕಾರಿ ಗೊದಾಮುಗಳಲ್ಲಿರುವ ಅಗತ್ಯ ವಸ್ತುಗಳನ್ನು ಪರಿಶೀಲಿಸಬೇಕು. ಅಕ್ರಮಗಳ ಕುರಿತಾಗಿ ಸ್ಥಳೀಯವಾಗಿ ತನಿಖೆನಡೆಸಿ ಪರಿಶೀಲಿಸಬೇಕು. ಅಪರಾಧ ದಂಡ ಪ್ರಕ್ರಿಯಾ ಸಂಹಿತೆ ಪ್ರಕಾರ ತಹಶೀಲ್ದಾರರು ತಾಲ್ಲೂಕು ಕಾರ್ಯನಿರ್ವಾಹಕ ದಂಡಾಧಿಕಾರಿಯಾಗಿರುತ್ತಾರೆ. ಇವರು ತಮ್ಮ ತಾಲೂಕಿನ ಚುನಾವಣಾಧಿಕಾರಿಯೂ ಆಗಿರುತ್ತಾರೆ. ಹಾಗೂ ವಿಧಾನಸಭಾ ಕ್ಷೇತ್ರಗಳಿಗೆ ಸಹಾಯಕ ಚುನಾವಣಾಧಿಕಾರಿಯಾಗಿರುತ್ತಾರೆ.ಭೂಸುಧಾರಣಾ ಕಾಯ್ದೆಗಳಿಗೆ ಸಂಬಂಧಿಸಿದ ನ್ಯಾಯ ಪಂಚಾಯತಿಗಳಲ್ಲಿ ವಿಶೇಷ ತಹಶೀಲ್ದಾರ್ ಇಲ್ಲದ ಸಂದರ್ಭದಲ್ಲಿ ಇವರೇ ನ್ಯಾಯ ಪಂಚಾಯತಿಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಾರೆ.
ಪ್ರತೀ ತಾಲೂಕಿನಲ್ಲಿಯೂ ತಹಶೀಲ್ದಾರರಿಗೆ ಸಹಾಯಮಾಡಲು ಶಿರಸ್ತೇದಾರ/ ಉಪ ತಹಶೀಲ್ದಾರರನ್ನು ನೇಮಿಸಲಾಗುತ್ತದೆ. 1966ರ ಕರ್ನಾಟಕ ಭೂಕಂದಾಯ ನಿಯಮ 43 ಮತ್ತು 67 ರಂತೆ ಶಿರಸ್ತೇದಾರ ಅಥವಾ ಕಂದಾಯ ವಿಭಾಗದ ಯಾವುದೇ ಸಮಾನ ಹುದ್ದೆಯ ಅಧಿಕಾರಿಗಳು ಅಥವಾ ತನಗಿಂತ ಹಿರಿಯ ಶ್ರೇಣಿಯ ಅಧಿಕಾರಿಗಳು ಹಕ್ಕು ಪತ್ರವನ್ನು ತಯಾರಿಸುವ ಹಂತದಲ್ಲಿ ವಿವಾದಗಳನ್ನು ತಿಳಿಯುವ ಮತ್ತು ಆದೇಶಗಳನ್ನು ಹೊರಡಿಸಲು ಜವಾಬ್ದಾರರಾಗಿರುತ್ತಾರೆ. ಉಪ ತಹಶೀಲ್ದಾರರು ಕೂಡ ಸೆಕ್ಷನ್-94 ರ ಪ್ರಕಾರ ಸರಕಾರಿ ಜಾಗವನ್ನು ಅತಿಕ್ರಮಣ ಮಾಡಿದ ಕುರಿತಾದ ವಿವಾದಗಳನ್ನ ಬಗೆಹರಿಸುವುದಕ್ಕೆ ಹೊಣೆಗಾರರಾಗಿರುತ್ತಾರೆ.
ಸರಕಾರದ ವಿವಿಧ ಕಾಯ್ದೆಯನ್ವಯ ತಹಶೀಲ್ದಾರರ ಅಧಿಕಾರಿಗಳು ಮತ್ತು ಕರ್ತವ್ಯಗಳು ಈ ಕೆಳಕಂಡಂತಿವೆ
- ಕರ್ನಾಟಕ ಕೃಷಿ ಮತ್ತು ಪತ್ತಿನ ವ್ಯವಹಾರಗಳು ಮತ್ತು ಇನ್ನಿತರ ಹೊಣೆಗಾರಿಕೆ ಕಾಯ್ದೆ 1974 ನಿಯಮ 1975
- ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ನಿಯಂತ್ರಣ ಕಾಯಿದೆ 1966
- ಕರ್ನಾಟಕ ಜಾನುವಾರು ಸಾಗಾಣಿಕೆ ಕಾಯಿದೆ 1966
- ಕರ್ನಾಟಕ ಕೆಲವು ಇಮಾಮ್ ರದ್ದತಿ ಕಾಯಿದೆ 1965
- ಕರ್ನಾಟಕ ನೀರಾವರಿ ಕಾಯಿದೆ 1965
- ಕರ್ನಾಟಕ ಹನಿ ನೀರಾವರಿ ಸುಂಕ ಕಾಯಿದೆ 1965
- ಕರ್ನಾಟಕ ಕಾನೂನು ಸಹಾಯದ ಜಿಲ್ಲಾ ಮತ್ತು ತಾಲ್ಲೂಕು ಸಮಿತಿಗಳ ಸ್ಕೀಮ್ 1983
- ಕರ್ನಾಟಕ ಸಾರ್ವಜನಿಕ ಆಸ್ತಿಯನ್ನು ಅತಿಕ್ರಮಣದಾರರಿಂದ ಸಂರಕ್ಷಿಸುವ ಕಾಯಿದೆ 1974 ಮತ್ತು ನಿಯಮ
- ಕರ್ನಾಟಕ ಭೂಸುಧಾರಣಾ ಕಾಯಿದೆ ಮತ್ತು ನಿಯಮಗಳು
- ಕರ್ನಾಟಕ ನಗರ ಸಭೆಗಳ ಕಾಯಿದೆ 1964
- ಕರ್ನಾಟಕ ಭೂಕಂದಾಯ ಕಾಯಿದೆ 1964 ಮತ್ತು ನಿಯಮ 1966
- ಕರ್ನಾಟಕ ಸಾಲ ಮಂಜೂರಾತಿ ಕಾಯಿದೆ 1976
- ಕರ್ನಾಟಕ ಹಿರಿಯ ನಾಗರಿಕರ ಪಿಂಚಣಿ ನಿಯಮ 1955
- ಕರ್ನಾಟಕ ವಿಧವಾ ವೇತನ ನಿಯಮಾವಳಿಗಳು 1984
ಮೇಲಿನವುಗಳು ವಿವರಣಾತ್ಮಕವೇ ಹೊರತು ಸಮಗ್ರವಲ್ಲ
ಡಿ.ಎಂ.ಹಾಲಾರಾಧ್ಯ
ವರದಿಗಾರರು
ಪ್ರಜಾವಾಣಿ ದಿನಪತ್ರಿಕೆ
ನ್ಯಾಮತಿ