ದೌರ್ಜನ್ಯಕ್ಕೆ ಒಳಗಾಗುವ ಮಹಿಳೆಯರು ಹಾಗೂ
ಮಕ್ಕಳ ನೆರವಿಗೆ ಧಾವಿಸುವ ಸಹಾಯವಾಣಿ, ಸಾಂತ್ವನ
ಕೇಂದ್ರ ಸೇರಿದಂತೆ ಲಭ್ಯವಿರುವ ವಿವಿಧ ಸೌಲಭ್ಯಗಳ ಬಗೆಗೆ
ತಾಲೂಕು ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ವ್ಯಾಪಕವಾಗಿ
ಅರಿವು ಮೂಡಿಸುವಂತೆ ಜಿಲ್ಲಾ ಪಂಚಾಯತ್ ಮುಖ್ಯ
ಕಾರ್ಯನಿರ್ವಾಹಕ ಅಧಿಕಾರಿ ವಿಜಯ ಮಹಾಂತೇಶ
ದಾನಮ್ಮನವರ್ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಸೋಮವಾರ ನಡೆದ
ಸಾಂತ್ವನ ಯೋಜನೆ, ಸ್ತ್ರೀ ಶಕ್ತಿ ಯೋಜನೆ ಮತ್ತು
ಮಹಿಳೆಯರ ಮತ್ತು ಮಕ್ಕಳ ಸಾಗಾಣಿಕೆ ತಡೆಗಟ್ಟುವ
ತಡೆಗಟ್ಟುವ ಕಾವಲು ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ
ಅವರು ಮಾತನಾಡಿದರು.
ಕೌಟುಂಬಿಕ ಕಲಹ, ವರದಕ್ಷಿಣೆ, ಲೈಂಗಿಕ ಕಿರುಕುಳ,
ಮಹಿಳೆಯರ ಮತ್ತು ಮಕ್ಕಳ ಸಾಗಣಿಕೆ ತಡೆಗಟ್ಟುವ
ನಿಟ್ಟಿನಲ್ಲಿ ಹಲವು ಕಾನೂನುಗಳನ್ನು ರೂಪಿಸಲಾಗಿದೆ. ಗ್ರಾಮೀಣ
ಭಾಗಗಳಲ್ಲಿ ಮಹಿಳೆಯರ ನೆರವಿಗೆ ಸ್ವಯಂ ಸೇವಾ
ಸಂಸ್ಥೆಗಳಿಂದ ನಿರ್ವಹಣೆಯಾಗುತ್ತಿರುವ ಸಾಂತ್ವನ, ಮಹಿಳಾ
ಸಹಾಯವಾಣಿ ಕೇಂದ್ರಗಳ ಮಾಹಿತಿಯನ್ನು ಹೆಚ್ಚು
ಪ್ರಚಾರಮಾಡಬೇಕು ಎಂದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ
ವಿಜಯಕುಮಾರ್ ಪ್ರತಿಕ್ರಿಯಿಸಿ, ಮಹಿಳೆಯರ ನೆರವಿಗಾಗಿ
ಈಗಾಗಲೇ ಕರಪತ್ರ, ಪ್ರದರ್ಶನ ಫಲಕಗಳನ್ನು
ಗ್ರಾಮ ಪಂಚಯಿತಿಗಳಲ್ಲಿ ನೀಡಲಾಗಿದ್ದು, ಅಂಗನವಾಡಿ
ಕಾರ್ಯಕರ್ತೆಯರ ಸಹಕಾರ ಪಡೆದು ಪ್ರಚಾರ
ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ
ನಿರ್ವಹಿಸುತ್ತಿದ್ದೇವೆ. ಹಾಗೂ ಪ್ರಕರಣಗಳು ದಾಖಲಾದಾಗ
ಆಯಾ ಹಿರಿಯರು, ಪ್ರಕರಣದಲ್ಲಿ ಭಾಗಿಯಾದವರನ್ನು
ಕರೆಯಿಸಿ ಆಪ್ತ ಸಮಾಲೋಚನೆ ಸಂಧಾನದ ಮೂಲಕ
ಇತ್ಯರ್ಥ ಮಾಡಲು ಪ್ರಯತ್ನಿಸುತ್ತಿದ್ದೇವೆ. ಪ್ರಕರಣ
ಗಂಭೀರ ಸ್ವರೂಪದ್ದಾಗಿದ್ದಾರೆ ಮುಂದಿನ ಕ್ರಮಕ್ಕೆ
ಸಾಂತ್ವನ ಕೇಂದ್ರಗಳಿಗೆ ಶಿಫಾರಸು ಮಾಡುತ್ತೇವೆ.
ಯಾವುದೇ ಅನ್ಯಾಯಕ್ಕೆ ಅವಕಾಶವಾಗದಂತೆ ಮಹಿಳೆಯರಿಗೆ
ರಕ್ಷಣೆ, ಪರಿಹಾರ ಲಭಿಸಲು ಅವಶ್ಯವಿರುವ ಎಲ್ಲಾ ಸಕಾರಾತ್ಮಕ
ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು
ತಿಳಿಸಿದರು.
ಮುಂದುವರೆದು ಸಾಂತ್ವನ ಯೋಜನೆಯಡಿ
ಜಗಳೂರು ತಾಲ್ಲೂಕಿನಲ್ಲಿ 24, ಚನ್ನಗಿಇ 68, ಹರಿಹರ 51,
ಹೊನ್ನಾಳಿ 26 ಸೇರಿದಂತೆ ಒಟ್ಟು 169 ಮಹಿಳೆಯರು ಕೌಟುಂಬಿಕ
ಸಲಹೆ ಪಡೆದುಕೊಂಡಿದ್ದು, ಈ ಪೈಕಿ ಹರಿಹರ ತಾಲ್ಲೂಕಿನ 8
ಮಹಿಳೆಯರಿಗೆ ಆರ್ಥಿಕ ಪರಿಹಾರ ದೊರಕಿದೆ. ಅದರಲ್ಲಿ
ಹೊನ್ನಾಳಿಯ ಒಬ್ಬರಿಗೆ ಉದ್ಯೋಗ ಲಭಿಸಿದೆ. ಒಟ್ಟು ಸಾಂತ್ವನ
ಯೋಜನೆಯಡಿ ಒಟ್ಟು 178 ಜನರು ವಿವಿಧ ಸೌಲಭ್ಯ ಅಥವಾ
ಪರಿಹಾರವನ್ನು ಪಡೆದಿದ್ದಾರೆ ಎಂದು ಮಾಹಿತಿ ನೀಡಿದರು.
ಸಿಇಓ ಮಾತನಾಡಿ, ಸ್ವಾತಂತ್ರ್ಯ ಸಿಕ್ಕು ಇಷ್ಟು ವರ್ಷ ಆದರೂ
ನಿಮಿಷಕ್ಕೊಂದು ಅತ್ಯಚಾರವಾಗುತ್ತಿದೆ. ಗ್ರಾಮೀಣ ಭಾಗದಲ್ಲಿ
ಮರ್ಯಾದೆಗೆ ಅಂಜಿ ಪ್ರಕರಣ ಬಯಲು ಮಾಡಲು ಮುಂದೆ
ಬರುವುದಿಲ್ಲ. ಈ ಕುರಿತು ಸಮಗ್ರ ತನಿಖೆ ನಡೆಸಬೇಕು.
ಹಾಗೂ ಅವರಿಗೆ ಇಷ್ಟವಿರದಿದ್ದರೆ ಒತ್ತಾಯಿಸುವುದು ಬೇಡ.
ಆದಷ್ಟು ಕಾನೂನಿನ ಕುರಿತು ಜಾಗೃತಿ ಮೂಡಿಸಿ ಎಂದರು.
ವಿಜಯ್‍ಕುಮಾರ್ ಮಾತನಾಡಿ, ಸಾಂತ್ವನ ಯೋಜನೆಯಡಿ
ಜಗಳೂರು ತಾಲ್ಲೂಕಿನಲ್ಲಿ 29 ಕೇಸ್ ದಾಖಲಾಗಿದ್ದು 24
ಕೇಸ್‍ಗಳು ಇತ್ಯರ್ಥಗೊಂಡಿವೆ. ಇನ್ನೂ 5 ಕೇಸ್‍ಗಳು ಬಾಕಿ
ಉಳಿದಿವೆ. ಚನ್ನಗಿರಿಯಲ್ಲಿ 71 ಕೇಸ್ ದಾಖಲಾಗಿದ್ದು 69 ಕೇಸ್‍ಗಳು
ಇತ್ಯರ್ಥವಾಗಿದೆ. 2 ಕೇಸ್‍ಗಳು ಬಾಕಿ ಉಳಿದಿದೆ. ಹರಿಹರದಲ್ಲಿ 63 ಕೇಸ್
ದಾಖಲಾಗಿದ್ದು 61 ಕೇಸ್ ಇತ್ಯರ್ಥವಾಗಿದೆ. 2 ಕೇಸ್ ಬಾಕಿ ಉಳಿದಿದೆ.
ಹೊನ್ನಾಳಿಯಲ್ಲಿ 29 ಕೇಸ್ ದಾಖಲಾಗಿದ್ದು, 16 ಕೇಸ್
ಇತ್ಯರ್ಥಗೊಂಡಿದೆ. 13 ಕೇಸ್ ಬಾಕಿ ಉಳಿದಿದೆ ಎಂದ ಅವರು,
ಜಿಲ್ಲೆಯಲ್ಲಿ ಮಹಿಳೆಯರು ಮತ್ತು ಮಕ್ಕಳ ಅಕ್ರಮ
ಸಾಗಾಣಿಕೆ ತಡೆಗಟ್ಟಲು ಜಿಲ್ಲಾ ಮಟ್ಟದಲ್ಲಿ 196 ಕಾವಲು
ಸಮಿತಿಯನ್ನು ರಚಿಸಲಾಗಿದ್ದು, ಅಕ್ರಮವಾಗಿ ಸಾಗಾಣಿಕೆ
ಮಾಡಿರುವ ಯಾವುದೇ ಪ್ರಕರಣಗಳು ಕಂಡುಬಂದಿಲ್ಲ
ಎಂದು ತಿಳಿಸಿದರು.
ಇದಕ್ಕೆ ಸಿಇಓ ಪ್ರತಿಕ್ರಿಯಿಸಿ, ಈ ಸಮಿತಿಯಲ್ಲಿ ಕಾಣೆಯಾಗಿರುವ
ಹೆಣ್ಣುಮಕ್ಕಳ ವರದಿಯ ಕುರಿತು ಮಾಹಿತಿ ನೀಡಬೇಕು.
ಕೋವಿಡ್ ಕಾರಣದಿಂದಾಗಿ 6 ತಿಂಗಳು ಕಳೆದರು ಯಾವುದೇ
ಸಭೆಯನ್ನು ಹಮ್ಮಿಕೊಳ್ಳದೇ ಇರುವುದರಿಂದ
ಸಮಸ್ಯೆಗಳು ಉಳಿದುಕೊಂಡಿವೆ. ಹೀಗಾಗಿ ಸಂಬಂಧಪಟ್ಟ ಎಲ್ಲಾ
ಕಾರ್ಯಕರ್ತೆಯರನ್ನೊಳಗೊಂಡು ಸಭೆ ಮಾಡಬೇಕು.
ಗ್ರಾ.ಪಂ ಮಟ್ಟದಲ್ಲಿ ಕಾವಲು ಸಮಿತಿ ತಂಡಗಳ ಜೊತೆಗೆ
ಮಕ್ಕಳ ಸಹಾಯವಾಣಿ ತಂಡವನ್ನು ಸೇರಿಸಿಕೊಂಡು 3
ತಿಂಗಳಿಗೊಮ್ಮೆ ಸಭೆ ಮಾಡಬೇಕು ಎಂದು ಸೂಚಿಸಿದರು.
ವಿಜಯ್‍ಕುಮಾರ್ ಮಾತನಾಡಿ, ಜಿಲ್ಲೆಯ ಬಾಡಾ ಕ್ರಾಸ್ ಬಳಿ
ಮಂಗಳಮುಖಿಯರ ಹಾವಳಿ ಹೆಚ್ಚಾಗಿದ್ದು, ಸುತ್ತಮುತ್ತ
ಶಾಲಾ-ಕಾಲೇಜುಗಳು ಹೆಚ್ಚಾಗುವುದರಿಂದ ವಿದ್ಯಾರ್ಥಿಗಳ
ಮೇಲೆ ಪರಿಣಾಮ ಬೀರುವ ಸಾಧ್ಯತೆಗಳು ಹೆಚ್ಚಿದೆ. ಹಾಗೂ
ರಾತ್ರಿಯ ಸಮಯದಲ್ಲಿ ಅವರ ಹಾವಳಿಯನ್ನು ತಪ್ಪಿಸಲು
ಸಾಧ್ಯವಾಗುತ್ತಿಲ್ಲ. ಪೊಲೀಸ್ ವಾಹನಗಳು ಸಮೀಪಿಸುತ್ತಿದ್ದಂತೆ
ತಪ್ಪಿಸಿಕೊಳ್ಳುತ್ತಾರೆ. ತದನಂತರ ಇದೇ ಸಮಸ್ಯೆ
ಇರುತ್ತದೆ. ಬೀದಿ ದೀಪ ಅಳವಡಿಸಿದರೆ ಅದನ್ನು ಹೊಡೆದು
ಹಾಕುತ್ತಾರೆ. ಅಲ್ಲಿರುವವರು ಬೆಂಗಳೂರಿನಿಂದ ಬಂದಂತಹವರೆ
ಹೆಚ್ಚಿರುವುದರಿಂದ ಮಾತು ಕೇಳುತ್ತಿಲ್ಲ. ಈ
ಸಮಸ್ಯೆಯನ್ನು ಶೀಘ್ರವಾಗಿ ಇತ್ಯರ್ಥ ಪಡಿಸಬೇಕು ಎಂದರು.
ಮುಂದುವರೆದು, ಜಿಲ್ಲೆಯಲ್ಲಿ ಅಲೆಮಾರಿ ಜನರು
ಹೆಚ್ಚಾಗಿದ್ದು, ಇವರ ಪೈಕಿ ಹೆಚ್ಚಿನ ಜನ ಮಾದಕ
ವ್ಯಸನಿಗಳಾಗುತ್ತಿದ್ದು, ಇದರಿಂದ ಇವರ ಮಕ್ಕಳ ಮೇಲೆ
ಹೆಚ್ಚು ಪರಿಣಾಮ ಬೀರುವ ಸಾಧ್ಯತೆಗಳು ಹೆಚ್ಚಾಗಿದೆ. ಈ
ಕುರಿತು ಸಮಗ್ರ ತನಿಖೆ ಆಗಬೇಕು. ಹಾಗೂ ಕೋವಿಡ್
ಪರಿಣಾಮದಿಂದ ಶಾಲೆಗಳಿಲ್ಲದೇ ಯಾರು ಭಿಕ್ಷಾಟನೆ
ಮಾಡುತ್ತಿದ್ದಾರೆ, ಯಾರು ಬಾಲ ಕಾರ್ಮಿಕರಾಗಿ ಕಾರ್ಯ
ನಿರ್ವಹಿಸುತ್ತಿದ್ದಾರೆ ಎಂಬುದರ ಕುರಿತು ಖಚಿತ ಮಾಹಿತಿ ಇರಲಿಲ್ಲ.
ಆದರೂ ಇಂತಹ ಪ್ರಕರಣಗಳಲ್ಲಿ ಸಿಕ್ಕ ಮಕ್ಕಳ ಪೈಕಿ
ಗಂಡು ಮಕ್ಕಳನ್ನು ತುರ್ಚಘಟ್ಟದ ಪುನರ್ವಸತಿ
ಕೇಂದ್ರಕ್ಕೆ, ಹೆಣ್ಣು ಮಕ್ಕಳನ್ನು ಚಿತ್ರದುರ್ಗದ
ಪುನರ್ವಸತಿ ಕೇಂದ್ರಕ್ಕೆ ದಾಖಲಿಸಲಾಗಿದೆ. 6 ವರ್ಷದ ಒಳಗಿನ
ಅಲೆಮಾರಿ ಮಕ್ಕಳಿಗೆ ಫುಡ್ ಕಿಟ್ ನೀಡಿ, ಅವರನ್ನು
ದಾಖಲಾಗಿಸಲಾಗುತ್ತಿದೆ ಎಂದರು.
ಸಭೆಯಲ್ಲಿ ಡಿಹೆಚ್‍ಓ ಡಾ.ನಾಗರಾಜ್, ಪಶು ಸಂಗೋಪನೆ
ಇಲಾಖೆಯ ಉಪನಿರ್ದೇಶಕ ಚಂದ್ರಶೇಖರ್ ಸುಂಕದ್, ಕೃಷಿ
ಇಲಾಖೆಯ ನಿರ್ದೇಶಕ ಶ್ರೀನಿವಾಸ್ ಚಿಂತಾಲ್, ಮಕ್ಕಳ
ಸಹಾಯವಾಣಿ ಕೇಂದ್ರದ ಅಧಿಕಾರಿ ಕೊಟ್ರೇಶ್.ಟಿ.ಎಂ ಸೇರಿದಂತೆ
ತಾಲ್ಲೂಕು ಮಟ್ಟದ ಎಲ್ಲಾ ಸಿಡಿಪಿಓ ಅಧಿಕಾರಿಗಳು, ಸಿಬ್ಬಂದಿಗಳು
ಉಪಸ್ಥಿತರಿದ್ದರು.
ಸರ್ಕಲ್‍ಗಳಲ್ಲಿ ಭಿಕ್ಷಾಟನೆ – ಮಾಹಿತಿ ಕಲೆಹಾಕಿ
ನಗರದ ಪ್ರಮುಖ ಸರ್ಕಲ್‍ಗಳಲ್ಲಿ ಪುಟ್ಟ ಪುಟ್ಟ
ಮಕ್ಕಳನ್ನು ಕಂಕುಳಲ್ಲಿ ಇಟ್ಟುಕೊಂಡು ಹಲವಾರು
ಮಹಿಳೆಯರು ಭಿಕ್ಷಾಟನೆಯಲ್ಲಿ ತೊಡಗಿರುವುದು ಸರ್ವೇ
ಸಾಮಾನ್ಯವಾಗಿದ್ದು, ಆ ಪುಟ್ಟ ಮಕ್ಕಳ ನೈಜ್ಯ ಪೋಷಕರು
ಅವರುಗಳೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಸಮಾಜ
ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ
ಹಾಗೂ ಮಹಿಳಾ ಹಾಗೂ ಮಕ್ಕಳ ವಿಷಯದಲ್ಲಿ
ಕಾರ್ಯನಿರ್ವಹಿಸುವ ಸ್ವಯಂ ಸೇವಾ ಸಂಸ್ಥೆಗಳು ಈ ಮಾಹಿತಿ
ಕಲೆ ಹಾಕಬೇಕು.
- ಸಿಇಓ ವಿಜಯ ಮಹಾಂತೇಶ್