ಮೀನುಗಾರಿಕೆ ಇಲಾಖೆಯ ವಿವಿಧ ಯೋಜನೆಗಳಡಿ ಮೀನುಗಾರಿಕೆ
ವೃತ್ತಿ ಕೈಗೊಳ್ಳಲು ಉತ್ತೇಜನ ನೀಡಿ ಸ್ವಯಂ ಉದ್ಯೋಗ
ಸೃಷ್ಟಿಸಲು ಹೆಚ್ಚಿನ ಒತ್ತು ನೀಡಲಾಗುವುದು. ಈ ದಿಸೆಯಲ್ಲಿ
ರಾಜ್ಯದಲ್ಲಿನ ಮೀನುಮರಿ ಉತ್ಪಾದನಾ ಕೇಂದ್ರಗಳ ಅಭಿವೃದ್ಧಿಗೆ
ಆದ್ಯತೆ ನೀಡಲು ಯೋಜಿಸಲಾಗಿದೆ ಎಂದು ಮೀನುಗಾರಿಕೆ ಸಚಿವ ಎಸ್.
ಅಂಗಾರ ಹೇಳಿದರು.
ಶನಿವಾರದಂದು ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಕೊಂಡಜ್ಜಿ
ಗ್ರಾಮದ ಮೀನುಮರಿ ಉತ್ಪಾದನಾ ಕೇಂದ್ರಕ್ಕೆ ಭೇಟಿ ನೀಡಿದ ಬಳಿಕ
ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಪ್ರಧಾನ ಮಂತ್ರಿಯವರ ಆಶಯದಂತೆ ಆತ್ಮ ನಿರ್ಭರ್
ಭಾರತ್ ನಿರ್ಮಾಣಕ್ಕೆ ಮೀನುಗಾರಿಕೆ ಇಲಾಖೆಯು ಕೈ ಜೋಡಿಸಿದ್ದು,
ಕರಾವಳಿ ಹಾಗೂ ಒಳನಾಡು ಮೀನುಗಾರಿಕೆಯಲ್ಲಿ ಹೆಚ್ಚಿನ ಜನರು
ತೊಡಗಿಸಿಕೊಳ್ಳಲು ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಲಾಗುತ್ತಿದೆ.
ಮೀನುಗಾರಿಕೆಯಲ್ಲಿ ಜನರು ಸ್ವಉದ್ಯೋಗ ಕೈಗೊಂಡು ಆರ್ಥಿಕ
ಸ್ವಾವಲಂಬನೆ ಪಡೆಯಲು ಅವಕಾಶ ಕಲ್ಪಿಸಲಾಗುವುದು.
ಮೀನುಗಾರಿಕೆ ಸಚಿವರಾದ ಬಳಿಕ ಈಗಾಗಲೆ 12 ಜಿಲ್ಲೆಗಳಿಗೆ ಪ್ರವಾಸ
ಕೈಗೊಂಡು, ಅಲ್ಲಿನ ಮೀನುಮರಿ ಉತ್ಪಾದನಾ ಕೇಂದ್ರಗಳಿಗೆ ಭೇಟಿ
ನೀಡಿ ಪರಿಶೀಲನೆ ನಡೆಸಿದ್ದೇನೆ. ಹೀಗಾಗಿ ಅಲ್ಲಿನ ವಾಸ್ತವಿಕ ಸ್ಥಿತಿ-ಗತಿ,
ಅಭಿವೃದ್ಧಿಗೆ ಅವಶ್ಯವಿರುವ ಕಾರ್ಯಗಳ ಬಗ್ಗೆ ಮಾಹಿತಿ
ಪಡೆಯಲಾಗುತ್ತಿದೆ. ರಾಜ್ಯದಲ್ಲಿ ಮೀನುಮರಿ ಉತ್ಪಾದನಾ
ಕೇಂದ್ರಗಳ ಕೊರತೆಯ ಕಾರಣದಿಂದಾಗಿ ಆಂಧ್ರಪ್ರದೇಶ,
ಗುಜರಾತ್, ಮಹಾರಾಷ್ಟ್ರ ರಾಜ್ಯಗಳಿಂದ ಮೀನುಮರಿ ತರುವ ಪರಿಸ್ಥಿತಿ
ಇದೆ. ಇನ್ನು ಮುಂದೆ ಮೀನುಗಾರಿಕೆ ಇಲಾಖೆಯಡಿ ಕಟ್ಟಡ ನಿರ್ಮಾಣಕ್ಕೆ
ಅನುದಾನ ನೀಡುವ ಬದಲಾಗಿ, ಮೀನುಮರಿ ಉತ್ಪಾದನಾ ಕೇಂದ್ರಗಳ
ಅಭಿವೃದ್ಧಿ ಕೈಗೊಂಡು, ನಾವೇ ಮೀನುಮರಿಗಳನ್ನು ಹೆಚ್ಚಿನ
ಪ್ರಮಾಣದಲ್ಲಿ ಉತ್ಪಾದನೆ ಮಾಡುವ ಮೂಲಕ ಮೀನುಗಾರಿಕೆ
ಕೈಗೊಳ್ಳುವ ಕಾರ್ಮಿಕರಿಗೆ ಸ್ವಯಂ ಉದ್ಯೋಗ ನಡೆಸಲು
ಅವಕಾಶ ಕಲ್ಪಿಸಲು ಉದ್ದೇಶಿಸಲಾಗಿದೆ. ಒಳನಾಡು ಮೀನುಗಾರಿಕೆ
ನಡೆಸುವವರಿಗೆ ಸಹಾಯಧನ ನೀಡುವ ಯೋಜನೆಯ
ನಿಯಮಗಳನ್ನು ಬದಲಾಯಿಸಲು ಉದ್ದೇಶಿಸಲಾಗಿದೆ. ಪ್ರಸ್ತುತ 01
ಹೆಕ್ಟೇರ್‍ನಲ್ಲಿ ಮೀನುಗಾರಿಕೆ ಕೈಗೊಳ್ಳುವವರಿಗೆ ಸಹಾಯಧನ
ನೀಡಲಾಗುತ್ತಿದ್ದು, ಇದರಿಂದ ಸಣ್ಣ ಪ್ರಮಾಣದಲ್ಲಿ ಮೀನುಗಾರಿಕೆ
ಮಾಡುವವರಿಗೆ ಸಹಾಯಧನ ನೀಡಲು ತೊಂದರೆ ಇದೆ. ಹೀಗಾಗಿ
ಶೀಘ್ರದಲ್ಲಿಯೇ ಅಧಿಕಾರಿಗಳೊಂದಿಗೆ ಚರ್ಚಿಸಿ, ಈ ಕುರಿತು
ನಿಯಮಗಳ ಬದಲಾವಣೆ ಮಾಡಲಾಗುವುದು ಎಂದು ಸಚಿವರು
ಹೇಳಿದರು.
ಮಂಗಳೂರಿನಲ್ಲಿ ಮೀನುಗಾರಿಕೆ ವಿ.ವಿ. : ರಾಜ್ಯದಲ್ಲಿ ಸುಮಾರು 320
ಕಿ.ಮೀ. ಕರಾವಳಿ ಪ್ರದೇಶ ಹೊಂದಿದ್ದು, ಮೀನುಗಾರಿಕೆ ವಿಸ್ತರಣೆಗೆ
ಹೆಚ್ಚಿನ ಅವಕಾಶಗಳಿವೆ. ರಾಜ್ಯದಲ್ಲಿ ಮೀನುಗಾರಿಕೆ ಸಂಬಂಧಿಸಿದಂತೆ
ಯಾವುದೇ ವಿಶ್ವವಿದ್ಯಾಲಯಗಳು ಇಲ್ಲದ ಕಾರಣ ಕರಾವಳಿ ಭಾಗದ
ಜನರಿಗೆ ಮೀನುಗಾರಿಕೆಯ ಕೃಷಿಯಲ್ಲಿ ತುಂಬಾ ಸಮಸ್ಯೆಯಾಗಿದೆ.
ವಿಶ್ವವಿದ್ಯಾಲಯ ಸ್ಥಾಪನೆಯಾದರೆ ಮೀನುಗಾರಿಕೆ ಅಭಿವೃದ್ಧಿಯ
ಜೊತೆಗೆ ಪ್ರವಾಸೋದ್ಯಮ ಹಾಗೂ ಬಂದರು ಅಭಿವೃದ್ಧಿಗೂ
ಸಹಕಾರಿಯಾಗಲಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ
ಅವರ ಅವಧಿಯಲ್ಲಿಯೇ ಮಂಗಳೂರಿನಲ್ಲಿ ಮೀನುಗಾರಿಕೆ
ವಿಶ್ವವಿದ್ಯಾಲಯ ಸ್ಥಾಪನೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ವಿಶ್ವವಿದ್ಯಾಲಯ ಸ್ಥಾಪನೆಯಾದರೆ ಕರಾವಳಿ ಭಾಗದ ಮೀನುಗಾರಿಕೆ
ಹೆಚ್ಚು ವೃದ್ಧಿಯಾಗುವುದಲ್ಲದೆ ಉದ್ಯೋಗ ಮತ್ತು ಆದಾಯ
ಹೆಚ್ಚಳಕ್ಕೂ ಸಹಕಾರಿಯಾಗಲಿದೆ. ಈಗಾಗಲೆ 1200 ಕೋಟಿ ರೂ.
ಅಂದಾಜು ವೆಚ್ಚದಲ್ಲಿ ಮೀನುಗಾರಿಕೆ ಅಭಿವೃದ್ಧಿಗೆ ಸಾಗರಮಾಲ
ಮತ್ತು ಮತ್ಸ್ಯ ಸಂಪದ ಯೋಜನೆಗಳಡಿ ಕೇಂದ್ರ ಸರ್ಕಾರಕ್ಕೆ
ಪ್ರಸ್ತಾವನೆ ಸಲ್ಲಿಸಲಾಗಿದೆ. ಯಾವುದೇ ಸಮಸ್ಯೆಗಳು ಬಂದರೂ
ಅವುಗಳನ್ನು ಪರಿಹರಿಸಿ, ಮಂಗಳೂರಿನಲ್ಲಿ ಮೀನುಗಾರಿಕೆ
ವಿಶ್ವವಿದ್ಯಾಲಯ ಸ್ಥಾಪನೆಗೆ ಪ್ರಾಮಾಣಿಕ ಯತ್ನ
ಮಾಡಲಾಗುವುದು ಎಂದು ಸಚಿವ ಎಸ್. ಅಂಗಾರ ಹೇಳಿದರು.
ಮೀನುಗಾರಿಕೆ ಇಲಾಖೆ ಹರಿಹರದ ಸಹಾಯಕ ನಿರ್ದೇಶಕ
ಮಂಜುನಾಥ್ ಮಾತನಾಡಿ, ಕೊಂಡಜ್ಜಿ ಮೀನುಮರಿ ಪಾಲನಾ ಕೇಂದ್ರದ
ಅಭಿವೃದ್ಧಿಗೆ ಈಗಾಗಲೆ 73 ಲಕ್ಷ ರೂ. ಗಳ ಕ್ರಿಯಾ
ಯೋಜನೆಯನ್ನು ಸಿದ್ಧಪಡಿಸಿ ಮಂಜೂರಾತಿಗಾಗಿ ಸಲ್ಲಿಸಲಾಗಿದೆ ಎಂದರು.
ಮೀನುಗಾರಿಕೆ ಇಲಾಖೆ ಶಿವಮೊಗ್ಗದ ಜಂಟಿನಿರ್ದೇಶಕ ಉಮೇಶ್,
ದಾವಣಗೆರೆ ಉಪನಿರ್ದೇಶಕ ಗಣೇಶ್, ಚನ್ನಗಿರಿ ಸಹಾಯಕ ನಿರ್ದೇಶಕಿ
ದೀಪಶ್ರೀ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.