1986 ರಲ್ಲಿ ಜನರು ಕಾಲಾರದಿಂದ ನರಳುತ್ತಿದ್ದ ಕಾಲದಿಂದ ಹಿಡಿದು
ಇಂದಿನ ಕೊರೊನಾ ಕಾಲದವರೆಗೂ ಲಸಿಕೆ ಹಾಕಿಸಿಕೊಳ್ಳಲು
ಹಿಂಜರಿಯುತ್ತಿದ್ದ ಜನರನ್ನು ಓಲೈಸಿ ಕರೆತಂದು ಲಸಿಕೆ ಹಾಕಬೇಕು.
ಹೆಣ್ಣುಮಕ್ಕಳು ಹೊರಗೆ ಹೋಗಿ ದುಡಿಯುವುದನ್ನು ಸಮಾಜ
ಕಡೆಗಣಿಸುತ್ತಿದ್ದ ಸಂದರ್ಭದಲ್ಲಿ ಕಾಲರಾ ತೀವ್ರತೆ ಹೆಚ್ಚಾಗಿದ್ದ
ವಾತಾವರಣದ ನಡುವೆ ಜೀವಗಳನ್ನು ಉಳಿಸಲು ದಣಿವರಿಯದೆ
ಕಾರ್ಯ ನಿರ್ವಹಿಸಿದವರು ದಾವಣಗೆರೆಯ ಕೆ.ಗಾಯತ್ರಿ ದೇವಿ.
ಸತತ 35 ವರ್ಷಗಳ ಇವರ ವಿಶಿಷ್ಟ ಸೇವೆಯನ್ನು ಪರಿಗಣಿಸಿದ
ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ
ಇಲಾಖೆಯ ಇಂಡಿಯನ್ ನರ್ಸಿಂಗ್ ಕೌನ್ಸಿಲ್ 2020 ರ ಸಾಲಿನ ರಾಷ್ಟ್ರೀಯ
ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿ ನೀಡಿ ಗೌರವಿಸಿದ್ದು, ಕೊರೊನ
ಕಾರಣದಿಂದ ಕಳೆದ ಸೆ.15 ರಂದು ರಾಷ್ಟ್ರಪತಿ ರಾಮನಾಥ ಕೋವಿಂದ್
ಅವರು ವರ್ಚುವಲ್ ಮೂಲಕ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. 2020 ರಲ್ಲಿ
ಜಿಲ್ಲಾಡಳಿತದಿಂದ ಗಣರಾಜ್ಯೋತ್ಸವದಂದು ಸರ್ವೋತ್ತಮ ಪ್ರಶಸ್ತಿ,
2006 ರಲ್ಲಿ ಚಳ್ಳಕೆರೆ ಲಯನ್ಸ್ ಕ್ಲಬ್ ವತಿಯಿಂದ ಉತ್ತಮ ಸೇವೆ
ಪ್ರಶಸ್ತಿ, 2019 ರಲ್ಲಿ ದಿ ನ್ಯೂಸ್‍ಪೇಪರ್ ಅಸೋಸಿಯೇಷನ್ ಆಫ್
ಕರ್ನಾಟಕ ಅವಾರ್ಡ್ ಗಳನ್ನು ಗಾಯತ್ರಿದೇವಿ ತಮ್ಮ
ಮುಡಿಗೇರಿಸಿಕೊಂಡಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಮದಕರಿಪುರ ಗ್ರಾಮದ
ಕೊಲ್ಲಾರಪ್ಪ ಹಾಗೂ ಗಂಗಮ್ಮ ಅವರ ಪುತ್ರಿಯಾಗಿ ಜನವರಿ 2, 1963
ರಂದು ಜನಿಸಿದ ಕೆ.ಗಾಯತ್ರಿದೇವಿ ಅವರು, ಪಿಯುಸಿ ಮುಗಿಸಿದ ಬಳಿಕ
ಎಎನ್‍ಎಮ್ ತರಬೇತಿ ಹಾಗೂ ಎಲ್‍ಹೆಚ್‍ವಿ ತರಬೇತಿಯನ್ನು ಪಡೆದರು.
1986 ರಲ್ಲಿ ಕಾಲಾರದಿಂದ ಜನರು ನರಳುತ್ತಿದ್ದ ಕಾಲದಲ್ಲಿ ಹಳ್ಳಿ ಹಳ್ಳಿಗೆ
ಹೋಗಿ ಕಾಲರಾ ಚುಚ್ಚುಮದ್ದು ಕೊಡುವಂತಹ ಸವಾಲಿನ
ಕೆಲಸವನ್ನೆ ಆಯ್ಕೆ ಮಾಡಿಕೊಂಡ ಅವರು ತಮ್ಮ ವೃತ್ತಿ ಜೀವನಕ್ಕೆ
ಕಾಲಿಟ್ಟಿದ್ದರು. ಮೊದಮೊದಲು ಬೆಂಬಲ ನೀಡದ ಅವರ
ಕುಟುಂಬದವರು ತದನಂತರ ಬೆನ್ನೆಲುಬಾಗಿ ಪ್ರೋತ್ಸಾಹಿಸಿದರು.
ಮಹಿಳೆ ಮತ್ತು ಮಕ್ಕಳ ಆರೋಗ್ಯ ಕ್ಷೇತ್ರದಲ್ಲಿ 20 ವರ್ಷ
ಸೇವೆ ಸಲ್ಲಿಸಿದ್ದಾರೆ. 1986 ರಿಂದ 1991 ರವರೆಗೆ ಚಳ್ಳಕೆರೆಯ
ತಳಕು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಿರಿಯ
ಮಹಿಳಾ ಆರೋಗ್ಯ ಸಹಾಯಕಿಯಾಗಿ, 1991 ರಿಂದ 2010 ರವರೆಗೆ
ಚಳ್ಳಕೆರೆಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸೇವೆ
ಸಲ್ಲಿಸಿದ್ದಾರೆ. ಈ ವೇಳೆ ಚಳ್ಳಕೆರೆ ತಿಪ್ಪೇಸ್ವಾಮಿ ಜಾತ್ರೆಯಲ್ಲಿ ಬಿಸಿಲಿನಲ್ಲಿ
ಕುಳಿತು ಮಕ್ಕಳಿಗೆ ಲಸಿಕೆ ನೀಡುವುದು ಇವರ ಕಾಯಕವಾಗಿತ್ತು.
2010ಕ್ಕೆ ದಾವಣಗೆರೆಗೆ ಕಾಲಿಟ್ಟ ಕೆ.ಗಾಯತ್ರಿದೇವಿ ಅವರು 2016
ರವರೆಗೆ ನಗರ ಕುಟುಂಬ ಕಲ್ಯಾಣ ಕೇಂದ್ರ-01, 2016 ರಿಂದ 2017
ರವರೆಗೆ ಆರ್.ಜಿ.ಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಿರಿಯ
ಮಹಿಳಾ ಆರೋಗ್ಯ ಸಹಾಯಕಿಯಾಗಿ ಸೇವೆ ಸಲ್ಲಿಸಿದ್ದಾರೆ. ಕಳೆದ
ನಾಲ್ಕು ವರ್ಷದಿಂದ ಅಂದರೆ 2017 ರಿಂದ ಈವರೆಗೂ ಚಿಗಟೇರಿ ಜಿಲ್ಲಾ
ಆಸ್ಪತ್ರೆಯಲ್ಲಿನ ಜಿಲ್ಲಾ ಕ್ಷಯರೋಗ ನಿರ್ಮೂಲನಾ ಕೇಂದ್ರದಲ್ಲಿ
ಹಿರಿಯ ಮಹಿಳಾ ಆರೋಗ್ಯ ಸಹಾಯಕಿ ಆಗಿ ಕಾರ್ಯನಿರ್ವಹಿಸುತ್ತಿದ್ದು,
ಕ್ಷಯ ರೋಗಿಗಳನ್ನು ಪರೀಕ್ಷೆಗೆ ಒಳಪಡಿಸಿ ದಾಖಲಿಸಿಕೊಂಡು
ಅವರಿಗೆ ಚಿಕಿತ್ಸೆ ನೀಡುತ್ತಿದ್ದಾರೆ.
ವೃತ್ತಿ ಜೀವನವನ್ನು ಹೊರತುಪಡಿಸಿ ಇಲಾಖಾ ಸಂಘ-
ಸಂಸ್ಥೆಗಳಲ್ಲೂ ಸಾಕಷ್ಟು ಸೇವೆ ಸಲ್ಲಿಸಿದ್ದು, ಜಿಲ್ಲೆ, ತಾಲ್ಲೂಕು,
ಹೋಬಳಿ ಮಟ್ಟದಲ್ಲಿ ಗರ್ಭಿಣಿ, ಬಾಣಂತಿ, ತಾಯಿ-ಮಗುವಿನ ಆರೈಕೆ, ಲಸಿಕಾ
ಕಾರ್ಯಕ್ರಮ, ಅಂಗನವಾಡಿ ಆರೋಗ್ಯ ಕಾರ್ಯಕ್ರಮ, ಶಾಲಾ
ಆರೋಗ್ಯ ಕಾರ್ಯಕ್ರಮ, ಜಂತು ಹುಳುವಿನ ಕಾರ್ಯಕ್ರಮ,
ರಕ್ತದಾನ, ಹೆಚ್.ಐ.ವಿ., ಮಲೇರಿಯಾ, ಕುಷ್ಠ ರೋಗ, ಡೆಂಗ್ಯೂ,
ಚಿಕನ್‍ಗುನ್ಯ ರೋಗಗಳ ಸಮೀಕ್ಷೆ ಹಾಗೂ ಆರೈಕೆ, ಗ್ರಾಮೀಣ
ಮತ್ತು ಕೊಳಚೆ ಪ್ರದೇಶಗಳ ಜನರ ಆರೋಗ್ಯ ಸುಧಾರಣಾ
ಕಾರ್ಯಕ್ರಮ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು
ನಿರ್ವಹಿಸುತ್ತಾ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.
ಹೋರಾಟಗಾರ, ಚಿಂತಕ ಹಾಗೂ ಗಾಯಕರಾದ ಕಂಪಾಲಿ
ತಿಪ್ಪೇಸ್ವಾಮಿ ಅವರನ್ನು ವಿವಾಹವಾದ ಕೆ.ಗಾಯತ್ರಿದೇವಿ ಅವರೊಡನೆ
ಸೇರಿ ಶೋಷಿತರ, ಬಡವರ ಪರ ಸೇವೆ ಸಲ್ಲಿಸುತ್ತಿದ್ದಾರೆ.
ರಾಷ್ಟ್ರೀಯ ನರ್ಸಿಂಗ್ ಕೌನ್ಸಿಲ್ ಫ್ಲಾರೆನ್ಸ್ ನೈಟಿಂಗೆಲ್ ಪ್ರಶಸ್ತಿ
ಮಹತ್ವ : ಶುಶ್ರೂಷೆ ಒಂದು ಕಲೆ. ಅದನ್ನು ಕಲೆಯಾಗಿ
ಮಾಡಬೇಕೆಂದರೆ ಓರ್ವ ಕಲಾವಿದ ಅಥವಾ ಶಿಲ್ಪಿಯಂತಹ ಸಮರ್ಪಣಾ
ಮನೋಭಾವ, ಪರಿಶ್ರಮದಾಯಕ ಸಿದ್ಧತೆ ಬೇಕು, ಇದು ಉನ್ನತ
ಕಲೆಗಳಲ್ಲಿ ಒಂದು. ಉನ್ನತ ಕಲೆಗಳಲ್ಲಿ ಉನ್ನತವಾದದ್ದು ಎಂಬ
ಸಾಲುಗಳನ್ನು ಬರೆದ ಲೇಡಿ ವಿತ್ ದಿ ಲ್ಯಾಂಪ್ ಎಂದೇ ಪ್ರಖ್ಯಾತರಾದ
ಫ್ಲಾರೆನ್ಸ್ ನೈಟಿಂಗೇಲ್ ಅವರ ನೆನಪಿಗಾಗಿ ರಾಷ್ಟ್ರದಾದ್ಯಂತ ನರ್ಸಿಂಗ್
ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ 50 ಜನರನ್ನು ಗುರುತಿಸಿ ಈ
ಪ್ರಶಸ್ತಿ ನೀಡಲಾಗುತ್ತಿದ್ದು, ಈ ಬಾರಿ ಗಾಯತ್ರಿದೇವಿಯೂ ಸೇರಿದಂತೆ
ಕರ್ನಾಟಕದ ಇಬ್ಬರಿಗೆ ಪ್ರಶಸ್ತಿ ಲಭಿಸಿದೆ. ಜಿಲ್ಲಾಡಳಿತದ ವತಿಯಿಂದ ಅ. 01
ರಂದು ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ
ಏರ್ಪಡಿಸಿದ ರಾಷ್ಟ್ರೀಯ ಸ್ವಯಂ ಪ್ರೇರಿತ ರಕ್ತದಾನ ದಿನಾಚರಣೆ
ಅಂಗವಾಗಿ, ರಾಷ್ಟ್ರೀಯ ಫ್ಲಾರೆನ್ಸ್ ನೈಟಿಂಗೇಲ್ ಪ್ರಶಸ್ತಿ ಪುರಸ್ಕøತ
ಕೆ. ಗಾಯತ್ರಿ ದೇವಿ ದಂಪತಿಗಳನ್ನು ಜಿಲ್ಲಾಧಿಕಾರಿ ಮಹಾಂತೇಶ್
ಬೀಳಗಿ, ಜಿಪಂ ಸಿಇಒ ಡಾ. ವಿಜಯಮಹಾಂತೇಶ್ ಸೇರಿದಂತೆ ವಿವಿಧ
ಅಧಿಕಾರಿಗಳು ಸನ್ಮಾನಿಸಿ ಗೌರವಿಸಿದರು.
ನೈಟಿಂಗಲ್ ಪ್ರಶಸ್ತಿ ನನ್ನ ಜೀವಮಾನದ ಸಾಧನೆ.
ಕಾಲರಾದಿಂದ ಹಿಡಿದು ಕೊರೊನದವರೆಗೆ
ಕೊಳಚೆಪ್ರದೇಶಗಳಲ್ಲಿರುವ ಬಡಜನರೊಂದಿಗೆ ಒಬ್ಬಳಾಗಿ
ನಿಂತು ರಜೆ ತೆಗೆದುಕೊಳ್ಳದೆ ಪ್ರಾಮಾಣಿಕವಾಗಿ ಸೇವೆ
ಸಲ್ಲಿಸುತ್ತಿದ್ದೇನೆ. ಎಂಸಿಹೆಚ್, ಎಫ್‍ಪಿ, ಆರ್‍ಎನ್‍ಟಿಸಿಪಿ, ಹೆಚ್‍ಐವಿ, ಏಡ್ಸ್, ಸೋಂಕು
ನಿವಾರಣೆ, ಐಇಸಿ, ಕೌನ್ಸಲಿಂಗ್‍ಗಳಲ್ಲಿ ಸೇವೆ ಸಲ್ಲಿಸಿದ್ದು, ಮಹಿಳಾ
ಮತ್ತು ಮಕ್ಕಳು, ಗರ್ಭಿಣಿ, ಬಾಣಂತಿಯರಿಗೆ ಸಲ್ಲಿಸಿದ
ಸೇವೆಯನ್ನು ಪರಿಗಣಿಸಿ ಸರ್ಕಾರ ನನ್ನನ್ನು ಈ ಪ್ರಶಸ್ತಿಗೆ
ಗುರುತಿಸಿದೆ.
– ಕೆ.ಗಾಯತ್ರಿದೇವಿ, ಹಿರಿಯ ಮಹಿಳಾ
ಆರೋಗ್ಯ ಸಹಾಯಕಿ
– ಪ್ರೀತಿ.ಟಿ.ಎಸ್, ದಾವಣಗೆರೆ