ನ್ಯಾಮತಿ : ಅಕ್ಟೋಬರ್ 19 ರಂದು ಪಟ್ಟಣದ ಬಾಲಕಿಯ ಪ್ರೌಢಶಾಲೆ ಆವರಣದಲ್ಲಿ ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಸೂಪರ್ ಕೊರೊನಾ ವಾರಿಯರ್ ಪ್ರಶಸ್ತಿ ನೀಡಿ ಗೌರವಿಸಲಾಗುವುದೆಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ತಿಳಿಸಿದರು.
ಪಟ್ಟಣದ ಬಾಲಕಿಯರ ಪ್ರೌಢಶಾಲೆಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದ ರೇಣುಕಾಚಾರ್ಯ ಅಂದು ಅವಳಿ ತಾಲೂಕಿನ ವಿವಿಧ ಇಲಾಖೆಗಳ ನಾಲ್ಕು ಸಾವಿರಕ್ಕೂ ಹೆಚ್ಚು ಕೊರೊನಾ ವಾರಿಯರ್ಸಗಳನ್ನು ಅಭಿನಂದಿಸಿ ಉಡುಗೊರೆ ನೀಡುವುದಾಗಿ ತಿಳಿಸಿದರು.
ಈ ಕಾರ್ಯಕ್ರಮಕ್ಕೆ ಆರೋಗ್ಯ ಸಚಿವ ಸುಧಾಕರ್,ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್, ಸಂಸದರಾದ ಜಿ.ಎಂ.ಸಿದ್ದೇಶ್ವರ್ ಪಾಲ್ಗೊಳ್ಳಲಿದ್ದಾರೆಂದ ರೇಣುಕಾಚಾರ್ಯ, ಯಡಿಯೂರಪ್ಪನವರು ಸಿಎಂ ಆಗಿದ್ದಾಗ ಕೋವಿಡ್ ಅನ್ನು ಸಮರ್ಪಕವಾಗಿ ನಿರ್ವಹಿಸಿದ ಹಿನ್ನೆಲೆಯಲ್ಲಿ ಅವರಿಗೆ ಬೆಸ್ಟ್ ಕೊರೊನಾ ವಾರಿಯರ್ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಇದೀಗ ಅವರ ಜನ ಪರ ಕಾಳಜಿಯನ್ನು ಮೆಚ್ಚಿ ಇದೇ ತಿಂಗಳ 19 ರಂದು ನ್ಯಾಮತಿಯಲ್ಲಿ ಯಡಿಯೂರಪ್ಪನವರಿಗೆ ಕೊರೊನಾ ಸೂಪರ್ ವಾರಿಯರ್ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದಾಗಿ ತಿಳಿಸಿದರು.
ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕಿನ ವಿವಿಧ ಇಲಾಖೆಗಳ ಸಿಬ್ಬಂದಿಗಳು ಕೋವಿಡ್ ಸಂದರ್ಭದಲ್ಲಿ ಜೀವದ ಹಂಗು ತೊರೆದು ಕೆಲಸ ಮಾಡಿದ್ದು, ಅವರನ್ನು ಅಭಿನಂದಿಸ ಬೇಕಂಬ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಈಗಾಗಲೇ ಕಾರ್ಯಕ್ರಮಕ್ಕೆ ಸಕಲ ಸಿದ್ದತೆ ಮಾಡಿಕೊಳ್ಳುತ್ತಿದ್ದು ಬಾಲಕಿಯರ ಪ್ರೌಢಶಾಲೆ ಆವರಣದಲ್ಲಿ ಬೃಹತ್ ವೇದಿಕೆ ನಿರ್ಮಾಣ ಮಾಡಲಾಗುವುದು ಎಂದರು.
ಸಂಗೀತ ಸಂಜೆ ಕಾರ್ಯಕ್ರಮ : ಅಕ್ಟೋಬರ್ 19ರ ಸಂಜೆ ಬಾಲಕಿಯರ ಪ್ರೌಢಶಾಲೆಯ ಆವರಣದಲ್ಲಿ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರ ನೇತೃತ್ವದಲ್ಲಿ ಸಂಗೀತ ಸಂಜೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ತಿಳಿಸಿದರು.
ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕುಗಳು ನನ್ನ ಎರಡು ಕಣ್ಣುಗಳು ಎಂದ ರೇಣುಕಾಚಾರ್ಯ ಹೊನ್ನಾಳಿಯಲ್ಲಿ ಕಳೆದ ವರ್ಷ ಕಾರ್ಯಕ್ರಮ ಮಾಡಿದ್ದು ಈ ವರ್ಷ ನ್ಯಾಮತಿ ಪಟ್ಟಣದಲ್ಲಿ ಬೃಃತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕಿನ ಸಾರ್ವಜನಿಕರು ಈ ಕಾರ್ಯಕ್ರಮಕ್ಕೆ ಕೈಜೋಡಿಸುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸ ಬೇಕೆಂದು ರೇಣುಕಾಚಾರ್ಯ ಸಾರ್ವಜನಿಕರಲ್ಲಿ ಮನವಿ ಮಾಡಿದರು..
ಈ ಸಂದರ್ಭ ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷ ಎಸ್.ಪಿ.ರವಿಕುಮಾರ್, ಸುರಹೊನ್ನೆ ಗ್ರಾ.ಪಂ ಅಧ್ಯಕ್ಷರಾದ ಹಾಲೇಶ್, ಉಪಾಧ್ಯಕ್ಷರು ಸದಸ್ಯರು ಸೇರಿದಂತೆ ಮುಖಂಡರಾದ ಕುಬೇರಪ್ಪ, ಅರಕೆರೆ ನಾಗರಾಜ್, ರಂಗನಾಥ್, ಅಜಯ್‍ರೆಡ್ಡಿ ಸೇರಿದಂತೆ, ತಹಶೀಲ್ದಾರ್ ತನುಜಾ ಟಿ ಸವದತ್ತಿ, ಉಪತಹಶೀಲ್ದಾರ್ ನಾಗರಾಜ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳಿದ್ದರು..

Leave a Reply

Your email address will not be published. Required fields are marked *