ಜಿಲ್ಲೆಯಲ್ಲಿ ಪ್ರತಿದಿನ ಕನಿಷ್ಠ 30 ರಿಂದ 40 ಸಾವಿರ ಲಸಿಕೆ
ನೀಡಲು ಕ್ರಮ: ಮಹಾಂತೇಶ ಬೀಳಗಿ
ಮನೆ ಮನೆಗೂ ಹೋಗಿ ಜಾಗೃತಿ ಮೂಡಿಸಿದರೂ ಕೂಡ ಅನೇಕ
ಜನರು ತಮ್ಮ ತಪ್ಪು ಕಲ್ಪನೆಯಿಂದ ಲಸಿಕೆ ಪಡೆಯಲು ಈಗಲೂ
ಹಿಂಜರಿಯುತಿದ್ದಾರೆ. ವಾಸ್ತವ ಸತ್ಯವನ್ನು ತಿಳಿಸುವ ಸಲುವಾಗಿ ಮತ್ತು
ಇಡೀ ನಗರವನ್ನು ಜಾಗೃತಿಗೊಳಿಸುವ ಸಲುವಾಗಿ ಅ.11 ರಿಂದ 13
ರವರಗೆ ಮೂರು ದಿನಗಳ ಕಾಲ ವಿಶೇಷ ಲಸಿಕಾ ಅಭಿಯಾನವನ್ನು
ಹಮ್ಮಿಕೊಳ್ಳಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.
ನಗರದ ಗಡಿಯಾರಕಂಬ ವೃತ್ತದಲ್ಲಿ ಜಿಲ್ಲಾಡಳಿತ,
ಮಹಾನಗರಪಾಲಿಕೆ ಹಾಗೂ ಆರೋಗ್ಯ ಇಲಾಖೆಯ ಸಹಯೋಗದಲ್ಲಿ
ಸೋಮವಾರ ಆಯೋಜಿಸಲಾಗಿದ್ದ ವಿಶೇಷ ಲಸಿಕಾ ಅಭಿಯಾನಕ್ಕೆ ಚಾಲನೆ
ನೀಡಿ ಮಾತನಾಡಿದ ಅವರು, ಜಿಲ್ಲೆಗೆ ಸುಮಾರು 12 ಲಕ್ಷ ಕೋವಿಡ್ ಲಸಿಕೆ
ನೀಡುವ ಗುರಿ ನೀಡಲಾಗಿತ್ತು. ಈಗಾಗಲೇ ಸುಮಾರು 9.40 ಲಕ್ಷ ಲಸಿಕೆ
ನೀಡಲಾಗಿದ್ದು, ಇನ್ನು ಸುಮಾರು 3 ಲಕ್ಷ ಜನರಿಗೆ ಮೊದಲ ಹಂತದ
ಲಸಿಕೆ ಹಾಗೂ 1.66 ಲಕ್ಷ ಜನರಿಗೆ 2 ನೇ ಡೋಸ್ ಲಸಿಕೆ ನೀಡುವುದು ಬಾಕಿ
ಇದೆ. ಇದರಲ್ಲಿ ಬಹುಪಾಲು ಹಳೆ ದಾವಣಗೆರೆ ಭಾಗದಲ್ಲಿ ಹೆಚ್ಚಿನ ಜನರು
ಲಸಿಕೆ ಪಡೆಯಲು ಹಿಂಜರಿಯುತಿದ್ದಾರೆ. ಆದ್ದರಿಂದ ವಿಶೇಷವಾಗಿ ಈ
ಭಾಗದಲ್ಲಿ ಲಸಿಕಾ ಜಾಗೃತಿ ಹಮ್ಮಿಕೊಳ್ಳಲಾಗಿದೆ. ಅ.13 ರವರಗೆ
ಪ್ರತಿದಿನ ಕನಿಷ್ಠ 30 ರಿಂದ 40 ಸಾವಿರ ಲಸಿಕೆ ನೀಡುವ ಗುರಿ ಹೊಂದಲಾಗಿದೆ.
ಈಗಾಗಲೇ ಲಸಿಕಾ ಕೇಂದ್ರವನ್ನು ಸ್ಥಾಪಿಸಲಾಗಿದ್ದು, ನಗರದಲ್ಲಿ
ಸುಮಾರು 60 ರಿಂದ 70 ಲಸಿಕಾ ಕೇಂದ್ರಗಳನ್ನು ತೆರೆಯಲಾಗಿದೆ
ಸಾರ್ವಜನಿಕರು ತಮ್ಮ ಹತ್ತಿರದ ಲಸಿಕಾ ಕೇಂದ್ರಕ್ಕೆ ಭೇಟಿ ನೀಡಿ ಲಸಿಕೆ
ಪಡೆಯಬೇಕು ಎಂದರು.
ಕೋವಿಡ್-19 ಲಸಿಕೆ ಪಡೆದು ನಿಮ್ಮನ್ನು ನೀವು ರಕ್ಷಿಸಿಕೊಳ್ಳಲು
ಎಲ್ಲರೂ ಕಡ್ಡಾಯವಾಗಿ ಲಸಿಕೆ ಪಡೆದುಕೊಳ್ಳಬೇಕು. ಹಳೆ
ದಾವಣಗೆರೆಯಲ್ಲಿ ಜನ ಲಸಿಕೆ ಪಡೆಯಲು ಆಸಕ್ತಿ ತೋರುತ್ತಿಲ್ಲ.
ಆದ್ದರಿಂದ ವಿಶೇಷವಾಗಿ ಈ ಭಾಗದಲ್ಲಿ ಜಾಗೃತಿ ಅಭಿಯಾನಕ್ಕೆ ಚಾಲನೆ
ನೀಡಲಾಗುತ್ತಿದೆ. ನಿತ್ಯ ಬೆಳಿಗ್ಗೆ ಮತ್ತು ಸಂಜೆ ಜನರಿಗೆ ತಿಳಿಸುವ
ಪ್ರಯತ್ನವನ್ನು ಈ ಮೂಲಕ ಮಾಡಲಾಗುತ್ತಿದೆ. ಎಲ್ಲರೂ ಜಾಗೃತಿ
ಅಭಿಯಾನಕ್ಕೆ ಕೈಜೋಡಿಸಿ ಸಹಕರಿಸಬೇಕು. ಲಸಿಕೆ ಪಡೆದರೆ
ಮಕ್ಕಳಾಗುವುದಿಲ್ಲ ಎಂಬುದು ತಪ್ಪು ಕಲ್ಪನೆ. ಎಲ್ಲರೂ ಲಸಿಕೆ
ಹಾಕಿಸಿಕೊಳ್ಳಬೇಕು ಲಸಿಕೆ ಪಡೆದರೆ ಕೋವಿಡ್ ಬಂದರೂ ಸಾವಿನ
ಸಂಭಾವ್ಯತೆಯನ್ನು ಶೇ.95 ರಷ್ಟು ಯಶಸ್ವಿಯಾಗಿ
ತಡೆಯಬಹುದು. ಸಾವಿನಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಲು ಲಸಿಕೆ
ಪಡೆಯಿರಿ. ಇಂದು ಜಿಲ್ಲೆಯಲ್ಲಿ ಲಕ್ಷಕಿಂತ ಮಿಗಿಲಾಗಿ ಕೋವಿಡ್ ಲಸಿಕೆ
ಲಭ್ಯವಿದೆ. ಸಾರ್ವಜನಿಕರು ತಡಮಾಡದೆ ಲಸಿಕೆ ಪಡೆದು ನಿಮ್ಮ
ಜೀವವನ್ನು ರಕ್ಷಿಸಿಕೊಳ್ಳಬೇಕು. ಈಗಾಗಲೆ ಮುಸಲ್ಮಾನ
ಧರ್ಮಗುರುಗಳ ಸಭೆ ಮಾಡಿ ಮಸೀದಿಗಳಲ್ಲಿ ಅಜಾನ್
ಸಮಯದಲ್ಲಿ ಕೋವಿಡ್ ಲಸಿಕೆ ಪಡೆಯುವಂತೆ ಸೂಚಿಸಬೇಕು
ಮತ್ತು ಭಿತ್ತಿ ಪತ್ರಗಳನ್ನು ಉರ್ದು ಭಾಷೆಯಲ್ಲಿ ಮುದ್ರಿಸಿ
ಮಸೀದಿಗಳ ಗೋಡೆ ಮತ್ತು ಅಂಗಡಿಗಳ ಮುಂದೆ ಸಾರ್ವಜನಿಕರಿಗೆ
ಕಾಣುವಂತೆ ಅಂಟಿಸಬೇಕು ಎಂದು ಅವರಲ್ಲಿ ಮನವಿ ಮಾಡಲಾಗಿದೆ
ಎಂದರು.
ನಾವು ಬೀದಿಗಿಳಿದು ಜಾಗೃತಿ ಮೂಡಿಸಲು ಮುಖ್ಯ ಕಾರಣ ಜನರು
ಲಸಿಕೆ ಪಡೆಯಲು ಮುಂದೆ ಬರುತ್ತಿಲ್ಲ. ಸುಮಾರು 3 ಲಕ್ಷ ಜನ
ಇನ್ನು ಲಸಿಕೆ ಪಡೆಯುವುದು ಬಾಕಿ ಇರುವುದರಿಂದ ಅ.11 ರಿಂದ
ಮೂರು ದಿನ ವಿಶೇಷ ಕ್ಯಾಂಪ್ ರಚಿಸಿ ಜನರಲ್ಲಿ ಜಾಗೃತಿ
ಮೂಡಿಸಬೇಕಾಗಿದೆ. ಲಸಿಕೆ ಪಡೆದಲ್ಲಿ ಸಂಭಾವ್ಯ ಮೂರನೇ ಕೋವಿಡ್
ಅಲೆಯಿಂದ ನಿಮ್ಮನ್ನು ಹಾಗೂ ನಿಮ್ಮ ಕುಟುಂಬವನ್ನು
ರಕ್ಷಿಸಿಕೊಳ್ಳಬಹುದು ಎಂದರು. ಲಸಿಕೆ ಪಡೆಯದವರ
ಪಟ್ಟಿಯನ್ನು ಅಂಗನವಾಡಿ ಕಾರ್ಯಕರ್ತೆಯರು,
ಆಶಾಕಾರ್ಯಕರ್ತೆಯರು ಹಾಗೂ ಆರೋಗ್ಯಾಧಿಕಾರಿಗಳಿಗೆ
ನೀಡಲಾಗಿದ್ದು, ಅವರನ್ನು ಕರೆತಂದು ಲಸಿಕೆ ನೀಡುವ ಮಹಾನ್
ಅಭಿಯಾನವನ್ನು ಇಂದಿನಿಂದ ಹಮ್ಮಿಕೊಳ್ಳಲಾಗಿದೆ. ಸಾಮಾಜಿಕ
ಜಾಲತಾಣಗಳಲ್ಲಿ ಹರಡಿರುವ ಸುಳ್ಳು ವದಂತಿಗಳನ್ನು
ನಂಬಬಾರದು. ಇದು ಕೇವಲ ದಾರಿ ತಪ್ಪಿಸುವ ಕೆಲಸ. ಲಸಿಕೆ ಪಡೆದಲ್ಲಿ
ಕೋವಿಡ್ ಬಂದರೂ ಹೆಚ್ಚಿನ ತೊಂದರೆಯಾಗದೆ ನಿಮ್ಮನ್ನು ನೀವು
ಸಾವಿನಿಂದ ರಕ್ಷಿಸಿಕೊಳ್ಳಬಹುದು. ಅಂಜಿಕೆಯಿಂದ ಲಸಿಕೆ ಪಡೆಯದೆ,
ಸೋಂಕಿಗೆ ತುತ್ತಾದರೆ ಆರೋಗ್ಯಕ್ಕೆ ತೀವ್ರ ತೊಂದರೆಯಾಗಿ
ಸಾವು ಸಂಭವಿಸಬಹುದು ಎಂದರು.
ಲಸಿಕಾ ಅಭಿಯಾನದಲ್ಲಿ ಜಿಲ್ಲಾಧಿಕಾರಿ ಮತ್ತು
ಉಪವಿಭಾಗಧಿಕಾರಿಗಳು ಲಗಾಯೇಂಗೆ ಲಗಾಯೇಂಗೆ ಕೋವಿಡ್ ಲಸಿಕಾ
ಲಗಾಯೇಂಗೆ ಘೋಷಣೆ ಕೂಗುತ್ತಾ ಗಡಿಯಾರ ಕಂಬ,
ಕಾಳಿಕಾದೇವಿ ರಸ್ತೆ, ಅಹಮದ್ ನಗರ, ಹರಳೀಮರ ವೃತ್ತ ಹಾಗೂ
ಆಜಾದ್ ನಗರಗಳಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತ
ಸಾಗಿದರು.
ಈ ಸಂದರ್ಭದಲ್ಲಿ ಉಪ ವಿಭಾಗಾಧಿಕಾರಿ ಮಮತ ಹೊಸಗೌಡರ್,
ಡಿವೈಎಸ್‍ಪಿ ಬಿ.ಎಸ್.ಬಸವರಾಜ್, ಅಲ್ಪಸಂಖ್ಯಾತರ ಕಲ್ಯಾಣ ಅಧಿಕಾರಿ ಅಮಿತ್ ಬಿದರಿ,
ಆರ್‍ಸಿಹೆಚ್ ಅಧಿಕಾರಿ ಡಾ.ಮೀನಾಕ್ಷಿ ಹಾಗೂ ಸ್ಥಳೀಯ ಮುಖಂಡರು
ಭಾಗವಹಿಸಿದ್ದರು.