ಸಾಲ ತೆಗೆದುಕೊಳ್ಳುವಾಗ ಇರುವ ಹುರುಪು, ಹುಮ್ಮಸ್ಸು ಸಾಲ
ತೀರಿಸುವಾಗ ಇರುವುದಿಲ್ಲ. ಸಾಲ ಪಡೆದುಕೊಳ್ಳುವವರ ಪೈಕಿ
ಯಾರು ಅದರ ಸದ್ಭಳಕೆ ಮಾಡಿಕೊಂಡು ಸಾಲ ತೀರಿಸುತ್ತಾರೋ
ಅವರು ಉನ್ನತ ಮಟ್ಟದಲ್ಲಿ ಬೆಳೆಯುತ್ತಾರೆ. ಯಾರು ಸಾಲ ಪಡೆದ
ಉದ್ದೇಶ ಮರೆತು, ಸದ್ಬಳಕ್ಕೆ ಮಾಡಿಕೊಳ್ಳದೇ ಹಣ ವ್ಯಯ
ಮಾಡುತ್ತಾರೋ ಅವರು ದಿವಾಳಿಯಾಗುವ ಜೊತೆಗೆ ಅವರ ಕುಟುಂಬ
ಮತ್ತು ದೇಶದ ಆರ್ಥಿಕ ಸ್ಥಿತಿಯನ್ನು ಹದಗೆಡಿಸುತ್ತಾರೆ ಎಂದು
ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ನಗರದ
ತೊಗಟವೀರ ಸಮುದಾಯ ಭವನದಲ್ಲಿ ಕರ್ನಾಟಕ ರಾಜ್ಯ ಮಟ್ಟದ
ಬ್ಯಾಂಕರುಗಳ ಸಮಿತಿ, ಬೆಂಗಳೂರು, ಜಿಲ್ಲಾ ಮಟ್ಟದ ಲೀಡ್ ಬ್ಯಾಂಕ್
ಕಚೇರಿ ಸಹಯೋಗದಲ್ಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಾಲ
ಸಂಪರ್ಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದ ಆರ್ಥಿಕ ಪರಿಸ್ಥಿತಿ ಕೋವಿಡ್ ಸಂಕಷ್ಟದ ಬಳಿಕ, ಇತ್ತೀಚೆಗೆ
ಸುಧಾರಿಸಿಕೊಳ್ಳುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ನಾಗರಿಕರು ಸಹಕಾರ
ನೀಡಬೇಕು. ಬ್ಯಾಂಕ್‍ಗಳಲ್ಲಿ ಪಡೆದ ಸಾಲ ಮರುಪಾವತಿ
ಮಾಡಬೇಕು. ದೇಶದ ಅಭಿವೃದ್ಧಿ ಸಮಾಜದ ಕಟ್ಟ ಕಡೆಯ
ವ್ಯಕ್ತಿಯ ಜವಾಬ್ದಾರಿಯಾಗಿದ್ದು, ಎಲ್ಲಾ ನಾಗರಿಕರು ಸಹಕರಿಸಬೇಕು.
ಕೇಂದ್ರ ಸರ್ಕಾರವು ಬ್ಯಾಂಕ್‍ಗಳಿಗಾಗಿ ಅನೇಕ ಯೋಜನೆಗಳನ್ನು
ರೂಪಿಸಿ ರೂ.250 ಕೋಟಿ ಅನುದಾನ ಬಿಡುಗಡೆ ಮಾಡಿದ್ದು,
ಸಾರ್ವಜನಿಕರು ಈ ಯೋಜನೆಗಳ ಸದುಪಯೋಗ
ಪಡೆದುಕೊಳ್ಳಬೇಕು ಎಂದು ತಿಳಿಸಿದರು.
       ಜಿಲ್ಲಾ ಪಂಚಾಯತ್ ಸಿಇಓ ಡಾ. ವಿಜಯ ಮಹಾಂತೇಶ ಅವರು
ಮಾತನಾಡಿ, ಸಾಲ ಕೊಡುವುದು ಮತ್ತು ಪಡೆಯುವಂತಹ ಪದ್ಧತಿ
ಪ್ರಾಚೀನ ಕಾಲದಿಂದ ಪ್ರಾರಂಭವಾಗಿದ್ದು, ಸಾಲ ತೆಗೆದುಕೊಳ್ಳುವ
ಕ್ರಮ, ಇದರಿಂದ ಆಗುವ ಸಮಸ್ಯೆಗಳು ಹೀಗೆ ಅನೇಕ ವಿಚಾರಗಳ
ಕುರಿತು ಮನುಸ್ಮøತಿಯಲ್ಲಿ ತಿಳಿಸಲಾಗಿದೆ. ಸಾಲ ಪಡೆದುಕೊಂಡು
ಒಂದು ವೇಳೆ ಸಾವನ್ನಪ್ಪಿದರೆ ಅದು ಅವರ ಮಕ್ಕಳಿಗೆ
ಮುಂದುವರಿಯುವ ಪದ್ಧತಿ ಪಾರಂಪರಿಕವಾಗಿ ಬಂದಿದ್ದರಿಂದ ರೈತರು
ಸಾಲದಲ್ಲೆ ಹುಟ್ಟಿ, ಬೆಳೆದು, ಸಾವನ್ನಪ್ಪುತ್ತಿದ್ದಾರೆ. ಆರ್ಥಿಕ
ಸುಧಾರಣೆಯೊಂದಿಗೆ ಬ್ಯಾಂಕ್‍ಗಳ ಸುಧಾರಣೆ ಕುರಿತು ಇಂದಿನ
ದಿನಮಾನಗಳಲ್ಲಿ ಹೆಚ್ಚು ಚರ್ಚೆಗಳಾಗುತ್ತಿದ್ದು, ಸಾಕಷ್ಟು
ಸುಧಾರಣೆಯಾಗಿದೆ. ಸ್ವಾತಂತ್ರ್ಯ ನಂತರ ದೇಶದಲ್ಲಿ

ಮೂಲಭೂತ ಸೌಕರ್ಯಗಳನ್ನು ಉಪಯೋಗಿಸಿಕೊಂಡು ದೇಶ
ಸಾಕಷ್ಟು ಅಭಿವೃದ್ಧಿ ಹೊಂದಿದ್ದು, ಇದರಲ್ಲಿ ಬ್ಯಾಂಕ್‍ಗಳ ಕೊಡುಗೆ
ಅಪಾರವಾಗಿದೆ. ಈ ಹಿಂದೆ ಬ್ಯಾಂಕ್ ಖಾತೆ ತೆರೆಯಲು ಕಷ್ಟವಾಗುತ್ತಿತ್ತು.
ಆದರೆ ಇಂದು ರೈತರು ಹಾಗೂ ಸಾಮಾನ್ಯ ಜನರಿಗೆ ನೆಟ್ ಬ್ಯಾಂಕಿಂಗ್
ವ್ಯವಸ್ಥೆ, ಎಟಿಎಂ, ಅಕೌಂಟ್ ಟ್ರ್ಯಾನ್ಸ್‍ಫರ್, ಮೊಬೈಲ್ ಹಾಗೂ ಡಿಜಿಟಲ್
ಬ್ಯಾಂಕಿಂಗ್ ಬಗ್ಗೆ ಪರಿಕಲ್ಪನೆ ಮೂಡಿಸಲಾಗುತ್ತಿದೆ ಎಂದರು.


       ಭಾರತದಲ್ಲಿ ಶತಕೋಟಿಗೂ ಹೆಚ್ಚು ಜನಸಂಖ್ಯೆ ಇದ್ದು,
ದೇಶದ ಆರ್ಥಿಕ ಪ್ರಗತಿಯಲ್ಲಿ ಎಲ್ಲಾ ಜನರು ತೊಡಗಿಸಿಕೊಳ್ಳಲು
ಸಾಧ್ಯವಿಲ್ಲ. ಕೆಲವೆ ಜನರು ಮಾತ್ರ ಪ್ರಗತಿಯ ಭಾಗವಾಗಿದ್ದಾರೆ.
ಅನೇಕರಿಗೆ ಬ್ಯಾಂಕ್‍ನಿಂದ ಸಿಗುವ ಸಾಲ ಸೌಲಭ್ಯಗಳು ಸಿಗದ ದುಸ್ಥಿತಿ
ಇದೆ. ಅಮೆರಿಕದಲ್ಲಿ ಈ ರೀತಿಯ ಸಮಸ್ಯೆಗಳಿಗೆ ಪರಿಹಾರ
ಕಂಡುಹಿಡಿಯಲು ರೀಚ್ ಎಂಬ ಕಾರ್ಯಕ್ರಮ ಹಮ್ಮಿಕೊಂಡಿದ್ದು,
ರಾಷ್ಟ್ರ ಮತ್ತು ಸ್ಥಳೀಯ ಮಟ್ಟದಲ್ಲಿ ಬದಲಾವಣೆ ತರುವ
ಮೂಲಕ ಸಾಮಾನ್ಯ ಜನರಿಗೆ ಸಾಲ ನೀಡಲು ಅನುಕೂಲವಾಗುವ ಎಲ್ಲಾ
ರೀತಿಯ ಪ್ರಯತ್ನಗಳ ಕುರಿತು ಹಿರಿಯ ತಜ್ಞರೊಂದಿಗೆ ಚರ್ಚಿಸಿ
ಹಲವು ಯೋಜನೆಗಳನ್ನು ರೂಪಿಸುತ್ತಿದ್ದಾರೆ. ಹೀಗೆ ನಮ್ಮ
ದೇಶದಲ್ಲೂ ಕಟ್ಟ ಕಡೆಯ ವ್ಯಕ್ತಿಗೂ ಸಾಲ ಕೊಡುವಲ್ಲಿ ಎಲ್ಲಾ
ಬ್ಯಾಂಕ್‍ಗಳು ಪ್ರಯತ್ನಿಸಬೇಕು ಎಂದರು.
       ಬ್ಯಾಂಕ್‍ಗಳು ಗ್ರಾಹಕರಿಗೆ ಸಾಲ ಕೊಡುವಾಗ ಕಾನೂನಾತ್ಮಕ
ಕ್ರಮಗಳನ್ನು ಅನುಸರಿಸುವುದರೊಂದಿಗೆ ಸಣ್ಣ ಪುಟ್ಟ
ವರ್ಗದವರಿಗೆ ತಿರಸ್ಕಾರ ಮಾಡದೆ ಸಾಲ ನೀಡಿ, ಕಟ್ಟ ಕಡೆಯ
ವ್ಯಕ್ತಿಗೂ ಬ್ಯಾಂಕಿನ ಎಲ್ಲಾ ಸೌಲಭ್ಯಗಳು ತಲುಪವಲ್ಲಿ
ಸಹಕರಿಸಬೇಕು ಎಂದು ಸಿಇಓ ಹೇಳಿದರು.  
ಕೆನರಾ ಬ್ಯಾಂಕ್ ಕ್ಷೇತ್ರೀಯ ಕಾರ್ಯಾಲಯದ ಸಹಾಯಕ
ಮಹಾ ಪ್ರಬಂಧಕ ಹೆಚ್.ರಘುರಾಜ ಕಾರ್ಯಕ್ರಮದ ಅಧ್ಯಕ್ಷತೆ
ವಹಿಸಿ ಮಾತನಾಡಿ, ಗ್ರಾಹಕರಿಗೆ ಬ್ಯಾಂಕಿನಲ್ಲಿರುವ ಸಾಲ ಸೌಲಭ್ಯ, ಸರ್ಕಾರಿ
ಯೋಜನೆಗಳಿಗೆ ದೊರೆಯುವ ಸಾಲಗಳ ಮಾಹಿತಿ ತಿಳಿಸಲು ವಿಶೇಷ
ಕಾರ್ಯಕ್ರಮ ಹಮ್ಮಿಕೊಂಡು ಅರಿವು ಮೂಡಿಸಲಾಗುತ್ತಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಹಲವು ಯೋಜನೆಗಳು, ವಿವಿಧ
ಸ್ವಯಂ ಉದ್ಯೋಗಾಧಾರಿತ ತರಬೇತಿಗಳ ಬಗೆಗೆ ಜಾಗೃತಿ
ಮೂಡಿಸಲಾಗುತ್ತಿದೆ. ಸಾರ್ವಜನಿಕರ ಹಕ್ಕು ಹಾಗೂ ಜವಾಬ್ದಾರಿ ಕುರಿತು
ತಿಳಿಸಲಾಗುವುದು. ಗ್ರಾಹಕರು ಕಾರ್ಯಕ್ರಮದ
ಸದುಪಯೋಗ ಪಡೆಯಬೇಕು ಎಂದು ತಿಳಿಸಿದರು.
ಕರ್ನಾಟಕ ಗ್ರಾಮೀಣ ಬ್ಯಾಂಕ್ ಪ್ರಾದೇಶಿಕ ಕಚೇರಿ ಸಹಾಯಕ
ಮಹಾ ಪ್ರಬಂಧಕ ನಾಗೇಶ್ ಪ್ರಭು ಮಾತನಾಡಿ, ಕಾನೂನುಬದ್ಧವಾಗಿ
ಮಾಡುವ ಎಲ್ಲಾ ಚಟುವಟಿಕೆಗಳಿಗೂ ಹಾಗೂ ಮೂಲಭೂತ
ಸೌಲಭ್ಯಗಳಿಗೂ ಬ್ಯಾಂಕ್‍ಗಳಲ್ಲಿ ಗ್ರಾಹಕರನ್ನು ಪ್ರೋತ್ಸಾಹಿಸುವ
ಮೂಲಕ ಸಾಲ ನೀಡಲಾಗುವುದು. ಸಾರ್ವಜನಿಕರು ಪಡೆದ ಸಾಲವನ್ನು
ಮರುಪಾವತಿ ಮಾಡುವ ಮೂಲಕ ಎಲ್ಲಾ ಬ್ಯಾಂಕ್‍ಗಳನ್ನು
ಬೆಳೆಸಬೇಕು ಎಂದರು.
ಕಾರ್ಯಕ್ರಮದ ಅಂಗವಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ,
ಕೆನರಾ ಬ್ಯಾಂಕ್, ಕರ್ನಾಟಕ ಬ್ಯಾಂಕ್, ಕರ್ನಾಟಕ ಗ್ರಾಮೀಣ ಬ್ಯಾಂಕ್,
ಯೂನಿಯನ್ ಬ್ಯಾಂಕ್, ಐಸಿಐಸಿಐ, ಬ್ಯಾಂಕ್ ಆಫ್ ಬರೋಡ ಸೇರಿದಂತೆ
ಇನ್ನಿತರ ಬ್ಯಾಂಕ್‍ಗಳ ಮಳಿಗೆಗಳನ್ನು ತೆರೆದು, ಆಗಮಿಸಿದ
ಗ್ರಾಹಕರಿಗೆ ಆಯಾ ಬ್ಯಾಂಕ್‍ನಲ್ಲಿ ಸಿಗುವ ಸೌಲಭ್ಯಗಳ ಕುರಿತು
ಮಾಹಿತಿ ಒದಗಿಸಲಾಯಿತು. ಸಾಲದ ಜೊತೆಯಲ್ಲಿ ಪ್ರಧಾನಮಂತ್ರಿ
ಸುರಕ್ಷಾ ವಿಮಾ ಯೋಜನೆ, ಅಪಘಾತ ವಿಮಾ ಯೋಜನೆ,
ಪ್ರಧಾನಮಂತ್ರಿ ಜೀವನ ಜ್ಯೋತಿ ಭಿಮಾ ಯೋಜನೆ, ಅಟಲ್ ಪಿಂಚಣಿ
ಯೋಜನೆ, ಮಹಿಳೆಯರಿಗೆ ಸಾಲ ಸೌಲಭ್ಯ, ಹೊಸ ಉದ್ಯಮ

ಸ್ಥಾಪಿಸುವವರಿಗೆ 10 ಲಕ್ಷದಿಂದ 1 ಕೋಟಿಯವರೆಗೆ ಸಾಲ ಸೇರಿದಂತೆ
ಅನೇಕ ವಿಷಯಗಳ ಕುರಿತು ಅರಿವು ಮೂಡಿಸಲಾಯಿತು.
ಇದೇ ವೇಳೆ ಈ ಹಿಂದೆ ಸಾಲಕ್ಕಾಗಿ ಅರ್ಜಿ ಸಲ್ಲಿಸಿದ್ದ ಉದ್ದಿಮೆದಾರರು,
ಬೀದಿಬದಿ ವ್ಯಾಪಾರಿಗಳಿಗೆ ಸಾಲ, ಕೆನರಾ ಎಂಎಸ್‍ಎಂಇ ಸಾಲ, ಮುದ್ರಾ ಸಾಲ, ಪಿಎಂಇಜಿಪಿ
ಸಾಲ, ವಾಹನ ಸಾಲ, ಗೃಹ ಸಾಲ ಸೇರಿದಂತೆ ಇತರೆ ಸಾಲಗಳ ಮಂಜೂರಾತಿ
ಪತ್ರಗಳನ್ನು ವಿತರಿಸಲಾಯಿತು.
ಡಿಡಿಎಂ ನಬಾರ್ಡ್‍ನ ವಿ.ರವೀಂದ್ರ, ಡಿಸಿಸಿ ಬ್ಯಾಂಕ್ ಸಿಇಓ ತಾವರ್ಯಾ ನಾಯ್ಕ, ಲೀಡ್
ಬ್ಯಾಂಕ್ ಕಚೇರಿ ವಿಭಾಗೀಯ ಪ್ರಬಂಧಕ ಸುಶೃತ್.ಡಿ.ಶಾಸ್ತ್ರಿ, ಡಿಸಿಸಿ
ಬ್ಯಾಂಕ್‍ನ ಅಧ್ಯಕ್ಷ ವೇಣುಗೋಪಾಲ ರೆಡ್ಡಿ, ಕೆ.ರಾಘವೇಂದ್ರ ನಾಯರಿ,
ಗಣೇಶ್ ರಾವ್, ಎನ್.ರಾಮಮೂರ್ತಿ ಸೇರಿದಂತೆ ಮತ್ತಿತರರು
ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *