ಪ್ರತಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ಮೂರ್ನಾಲ್ಕು ಗ್ರಾಮಗಳಿಗೆ
ಅನುಕೂಲವಾಗುವಂತೆ ಒಂದೆಡೆ ಕರ್ನಾಟಕ ಪಬ್ಲಿಕ್ ಶಾಲೆ
ಮಾದರಿಯಲ್ಲಿ ಪೂರ್ಣ ಮಟ್ಟದ ಶಾಲೆಯನ್ನು ಪ್ರಾರಂಭಿಸಲು ಚಿಂತನೆ
ನಡೆಸಲಾಗಿದ್ದು, 2 ಕಿ.ಮೀ. ಗೂ ಹೆಚ್ಚು ದೂರವಿದ್ದರೆ, ಅಂತಹ
ಕಡೆಗಳಲ್ಲಿ ಮಕ್ಕಳಿಗೆ ಸಾರಿಗೆ ಬಸ್ ವ್ಯವಸ್ಥೆ ಕಲ್ಪಿಸಲು ಸಹ ಯೋಜನೆ
ರೂಪಿಸಲಾಗುತ್ತಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಬಿ.ಸಿ.
ನಾಗೇಶ್ ಹೇಳಿದರು.
ಚನ್ನಗಿರಿ ತಾಲ್ಲೂಕು ಬೆಳಲಗೆರೆ ಗ್ರಾಮದ ಸರ್ಕಾರಿ ಹಿರಿಯ
ಪ್ರಾಥಮಿಕ ಶಾಲೆ ಆವರಣದಲ್ಲಿ ಗುರುವಾರ ಶತಮಾನೋತ್ಸವ ಶಾಲಾ
ಕಟ್ಟಡದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಬೆಳಲಗೆರೆ ಗ್ರಾಮದಲ್ಲಿ ಒಂದು ಕೋಟಿ ರೂ. ವೆಚ್ಚದಲ್ಲಿ
ನೂತನವಾಗಿ ನಿರ್ಮಿಸಲಾಗಿರುವ ಶತಮಾನೋತ್ಸವ ಶಾಲಾ ಕಟ್ಟಡ
ಉತ್ತಮವಾಗಿ ನಿರ್ಮಾಣಗೊಂಡಿದ್ದು, ನೀಡಿರುವ ಅನುದಾನ ಸಂಪೂರ್ಣವಾಗಿ
ಸದ್ವಿನಿಯೋಗವಾಗಿದೆ. ಮಕ್ಕಳ ಶಿಕ್ಷಣಕ್ಕೆ ಶಾಲಾ ಕೊಠಡಿ ಕೇವಲ
ನಿಮಿತ್ತ ಮಾತ್ರ, ಶಾಲಾ ಆವರಣವೂ ಕೂಡ ಮಕ್ಕಳಿಗೆ ಹೊಸ ಹೊಸ
ಶಿಕ್ಷಣಕ್ಕೆ ಪೂರಕವಾಗಿ ಆಲೋಚನೆಗಳು ಬರುವಂತಿರಬೇಕು.
ರಾಜ್ಯದಲ್ಲಿ ಸುಮಾರು 48 ಸಾವಿರ ಶಾಲೆಗಳಿದ್ದು, ಅದರಲ್ಲಿ 29300
ಶಾಲೆಗಳು ಪರಿಪೂರ್ಣ ಉತ್ತಮ ಶಾಲೆಗಳಾಗಿವೆ, ಇನ್ನೂ 14 ಸಾವಿರ
ಶಾಲೆಗಳಲ್ಲಿ ಅಲ್ಪಸ್ವಲ್ಪ ಕೊರತೆಗಳಿದ್ದರೆ, 7-8 ಸಾವಿರ ಶಾಲೆಗಳಲ್ಲಿ
ಕೊರತೆಗಳು ಹೆಚ್ಚಿವೆ. ಖಾಸಗಿ ಶಾಲೆಗಳು ಕೇವಲ ಹಣಕ್ಕಾಗಿ ಶಿಕ್ಷಣ
ಸಂಸ್ಥೆಗಳನ್ನು ನಡೆಸುತ್ತಿವೆ. ಆದರೆ ಸರ್ಕಾರಿ ಶಾಲೆಗಳು ಕೇವಲ
ಒಬ್ಬ ಕಲಿಯುವ ವಿದ್ಯಾರ್ಥಿ ಇದ್ದರೂ ಶಾಲೆಗಳನ್ನು ನಡೆಸುತ್ತಿವೆ.
ಕರ್ನಾಟಕದಲ್ಲಿ ಸುಮಾರು 3000 ಶಾಲೆಗಳಲ್ಲಿ ಕೇವಲ
ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳು ಕಲಿಯುತ್ತಿದ್ದರೂ ಸಹ
ಶಾಲೆಗಳನ್ನು ನಡೆಸಲಾಗುತ್ತಿದೆ. ಶಾಲೆಯ ಅಭಿವೃದ್ಧಿಯಲ್ಲಿ
ಹಳೆಯ ವಿದ್ಯಾಥಿಗಳ ಕೊಡುಗೆ ಅಪಾರವಾದುದು. ಜೊತೆಗೆ
ಗ್ರಾಮಸ್ಥರ ಸಹಕಾರ ಹಾಗೂ ಎಸ್.ಡಿ.ಎಂ.ಸಿ ಸಮಿತಿಯ
ಸಮನ್ವಯತೆಯಿಂದ ಶಾಲೆಗಳು ಅಭಿವೃದ್ಧಿ ಪಥದತ್ತ
ಸಾಗುತ್ತಿವೆ. ಸರ್ಕಾರಿ ಶಾಲೆಗಳಲ್ಲಿ ಕಲಿಯುವುದು ಕೀಳರಿಮೆ ಎಂದು
ಭಾವಿಸದೇ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ದಾಖಲಿಸಿ
ಪ್ರೋತ್ಸಾಹಿಸಬೇಕು. ಇತ್ತೀಚೆಗೆ ನಡೆದ ಯು.ಪಿ.ಎಸ್.ಸಿ ಗೆ
ಆಯ್ಕೆಯಾದ ರಾಜ್ಯದ 38 ಅಭ್ಯರ್ಥಿಗಳಲ್ಲಿ ಸುಮಾರು 20
ಅಭ್ಯರ್ಥಿಗಳು ಸರ್ಕಾರಿ ಕನ್ನಡ ಶಾಲೆಗಳಲ್ಲಿ ಕಲಿತಿರುವುದು ಸರ್ಕಾರಿ
ಶಾಲೆಗಳ ಮೌಲ್ಯಕ್ಕೆ ಹಿಡಿದ ಕೈಗನ್ನಡಿ.    2000 ಇಸವಿಯಲ್ಲಿ ಈ ದೇಶದ

ಕಟ್ಟಕಡೆಯ ವ್ಯಕ್ತಿಗೆ ಶಿಕ್ಷಣ ತಲುಪಿಸಬೇಕು ಎಂಬ ಉದ್ದೇಶದೊಂದಿಗೆ
ಸರ್ವ ಶಿಕ್ಷಣ ಅಭಿಯಾನವನ್ನು ಅಟಲ್ ಬಿಹಾರಿ ವಾಜ್‍ಪೇಯಿ ಅವರು ದೇಶದ
ಉದ್ದಗಲಕ್ಕೆ ಶೈಕ್ಷಣಿಕ ಕ್ರಾಂತಿ ಆರಂಭಸಿದರು. ಉತ್ತಮ ಶಾಲೆ
ಕಟ್ಟಡ, ಶೌಚಾಲಯ, ಮಕ್ಕಳಿಗೆ ಶಿಕ್ಷಣಕ್ಕೆ ಪೂರಕ ವಾತಾವರಣ
ಕಲ್ಪಿಸುವಲ್ಲಿ ನೆರವಾಯಿತು ಎಂದರು.
ಗ್ರಾಮ ಪಂಚಾಯತ್ ಮಟ್ಟದಲ್ಲಿ ಮೂರ್ನಾಲ್ಕು ಗ್ರಾಮಗಳಿಗೆ
ಅನುಕೂಲವಾಗುವಂತೆ ಒಂದೆಡೆ ಕರ್ನಾಟಕ ಪಬ್ಲಿಕ್ ಶಾಲೆ
ಮಾದರಿಯಲ್ಲಿ ಉತ್ತಮವಾದ ಒಂದು ಪೂರ್ಣ ಮಟ್ಟದ ಶಾಲೆಯನ್ನು
ಪ್ರಾರಂಭಿಸಲು ಚಿಂತನೆ ನಡೆಸಲಾಗಿದ್ದು, ಇಂತಹ ಶಾಲೆಯನ್ನು
ಅತ್ಯಂತ ಸುಸಜ್ಜಿತ ಶಾಲೆಯಾಗಿ ರೂಪಿಸಲಾಗುವುದು, ಅಲ್ಲದೆ ಪ್ರತಿ
ಶಾಲೆಯ ತರಗತಿಗಳಿಗೂ ವಿಷಯವಾರು ಶಿಕ್ಷಕರನ್ನು ಕೂಡ
ನೇಮಿಸಲಾಗುವುದು. ಆದರೆ ಇದಕ್ಕೆ ಆಯಾ ಗ್ರಾಮಗಳಲ್ಲಿ
ಗ್ರಾಮ ಸಭೆ ನಡೆಸಿ, ಈ ಸಭೆಯಲ್ಲಿ ಸರ್ವರೂ ಒಪ್ಪಿಗೆ ಸೂಚಿಸಿ ಪತ್ರ
ನೀಡಿದರೆ, ಮುಂದಿನ ಶೈಕ್ಷಣಿಕ ಸಾಲಿನಲ್ಲಿಯೇ ಶಾಲೆ
ಪ್ರಾರಂಭವಾಗುವ ರೀತಿ ಕ್ರಮ ಕೈಗೊಳ್ಳಲಾಗುವುದು. 2
ಕಿ.ಮೀ. ಗಿಂತ ಹೆಚ್ಚು ದೂರವಿದ್ದರೆ, ಅಂತಹ ಕಡೆ ಮಕ್ಕಳಿಗೆ ಸಾರಿಗೆ
ಬಸ್ ವ್ಯವಸ್ಥೆ ಕಲ್ಪಿಸಲು ಯೋಜಿಸಲಾಗುವುದು, ಆದರೆ ಶಿಕ್ಷಣ
ಇಲಾಖೆಯಿಂದಲೇ ಬಸ್ ವ್ಯವಸ್ಥೆ ಮಾಡುವ ಯಾವುದೇ ಚಿಂತನೆ ಇಲ್ಲ, ಬಸ್
ವ್ಯವಸ್ಥೆಗೆ ಬೇರೆ ಬೇರೆ ಸ್ವರೂಪದ ಬಗ್ಗೆ ಯೋಜಿಸಲಾಗುವುದು.
ಗ್ರಾಮಸ್ಥರು ಎಲ್ಲೆಲ್ಲಿ ಕ್ರಿಯಾಶೀಲರಾಗಿದ್ದಾರೆಯೋ ಅಲ್ಲೆಲ್ಲ ಕಡೆ
ಸರ್ಕಾರಿ ಶಾಲೆಗಳು ಚೆನ್ನಾಗಿವೆ. ಹಳೆಯ ವಿದ್ಯಾರ್ಥಿಗಳನ್ನು
ವರ್ಷಕ್ಕೊಮ್ಮೆ ಸೇರಿಸಿ, ಆರ್ಥಿಕವಾಗಿ ಸಬಲರಾಗಿರುವವರಿಂದ ‘ನನ್ನ ಶಾಲೆ
ನನ್ನ ಕೊಡುಗೆ’ ಇಂತಹ ವ್ಯವಸ್ಥೆ ಮೂಲಕ ಸರ್ಕಾರಿ ಶಾಲೆಗಳಿಗೆ
ಕಂಪ್ಯೂಟರ್, ಸ್ಮಾರ್ಟ್‍ಕ್ಲಾಸ್, ಟೇಬಲ್, ಗ್ರಂಥಾಲಯ ಸೇರಿದಂತೆ ಬೇರೆ
ಬೇರೆ ಸೌಲಭ್ಯ ಪಡೆಯಲು ಅವಕಾಶಗಳಿವೆ. ರಾಜ್ಯದ ಅನೇಕ
ಕಡೆಗಳಲ್ಲಿ ಇಂತಹ ವ್ಯವಸ್ಥೆಯಿಂದ ಶಾಲೆಗಳು ಸುಸಜ್ಜಿತವಾಗಿ
ನಿರ್ಮಾಣಗೊಂಡು, ಮಕ್ಕಳಿಗೆ ಉತ್ತಮ ಶಿಕ್ಷಣ ದೊರಕುವಂತೆ
ಮಾಡಿರುವ ನಿದರ್ಶನಗಳಿವೆ. ರಾಷ್ಟ್ರೀಯ ನೂತನ ಶಿಕ್ಷಣ ನೀತಿ-
ಸ್ಕೂಲ್ ಕಾಂಪ್ಲೆಕ್ಸ್ ಇದು ಪ್ರಧಾನಿ ನರೇಂದ್ರ ಮೋದಿಯವರ
ಕಲ್ಪನೆಯ ಯೋಜನೆಯಾಗಿದ್ದು, ಇಂದಿನ ದಿನಗಳಲ್ಲಿ ಕಾಲೇಜು
ವಿದ್ಯಾರ್ಥಿಗಳು ತಾವು ಯಾವ ಕಾಲೇಜು, ಯಾವ ಕೋರ್ಸ್‍ಗೆ
ಸೇರುತ್ತೇವೆ ಎಂಬುದನ್ನು ಅವರೇ ನಿರ್ಧರಿಸುತ್ತಿದ್ದಾರೆ. ಶಿಕ್ಷಣ
ಕ್ಷೇತ್ರದಲ್ಲಿ ಎಲ್ಲ ಬದಲಾವಣೆ ಒಂದೇ ಬಾರಿ ಆಗುತ್ತದೆ ಎಂದಲ್ಲ, ಹಂತ
ಹಂತವಾಗಿ ಬದಲಾವಣೆ ಆಗಲಿದೆ ಎಂದು ಸಚಿವ ಬಿ.ಸಿ. ನಾಗೇಶ್ ಹೇಳಿದರು.
ಮಾಯಕೊಂಡ ಕ್ಷೇತ್ರದ ಶಾಸಕ ಪ್ರೊ.ಲಿಂಗಣ್ಣ ಮಾತನಾಡಿ, ಈ
ಮಾದರಿ ಶಾಲೆಯನ್ನು ಶಿಕ್ಷಣ ಸಚಿವರು ಉದ್ಘಾಟಿಸಿದ್ದು ಖುಷಿ ತಂದಿದೆ.
ಕೇವಲ ಮಾದರಿ ಶಾಲೆಯಿದ್ದರೆ ಸಾಲದು ಮಾದರಿ ಶಿಕ್ಷಕರಿರಬೇಕು. ಆಗ
ಮಾತ್ರ ಮಕ್ಕಳು ಶಾಲೆಗೆ ಸೇರಲು ಇಷ್ಟಪಡುತ್ತಾರೆ. ಶಿಕ್ಷಕರು
ಮಕ್ಕಳ ಬಗೆಗೆ ಕಾಳಜಿ ವಹಿಸಬೇಕು. ಮಕ್ಕಳ ಭವಿಷ್ಯ ಶಿಕ್ಷಕರ
ಕೈಯಲ್ಲಿದೆ. ಒಂದು ಶಾಲೆಯನ್ನು ಉಳಿಸಿ ಬೆಳೆಸುವುದು
ಗ್ರಾಮಸ್ಥರು ಮತ್ತು ಹಳೆಯ ವಿದ್ಯಾರ್ಥಿಗಳ ಕೈಯಲ್ಲಿದೆ.
ಶಿಕ್ಷಕರು ಮಕ್ಕಳಿಗೆ ಶಿಕ್ಷಣದ ಜೊತೆ ಸಂಸ್ಕಾರವನ್ನು ನೀಡಬೇಕು.
ಅನೇಕ ಶಾಲೆಗಳು ಇಂದು ದುರಸ್ಥಿ ಹಂತದಲ್ಲಿದ್ದು,
ದುರಸ್ತಿಯಾಗಬೇಕಿರುವ ಶಾಲೆಗಳ ಪಟ್ಟಿಯನ್ನು ಸಿದ್ಧಪಡಿಸಿ
ಪ್ರಸ್ತಾವನೆ ಸಲ್ಲಿಸಿದಲ್ಲಿ, ಬೇಡಿಕೆಗೆ ಅನುಸಾರವಾಗಿ ಹಂತ ಹಂತವಾಗಿ
ದುರಸ್ಥಿ ಕಾರ್ಯಕ್ಕೆ ಅನುದಾನ ದೊರಕಿಸಲು
ಯತ್ನಿಸಲಾಗುವುದು. ಜೊತೆಗೆ ಹಳೆ ವಿದ್ಯಾರ್ಥಿಗಳು
ಕೈಜೋಡಿಸಿದಲ್ಲಿ ಕೆಲಸ ಬಹುಬೇಗ ಸಾಧ್ಯವಾಗುತ್ತದೆ ಎಂದರು.
ವಿಧಾನಪರಿಷತ್ ಸದಸ್ಯ ಆರ್. ಪ್ರಸನ್ನಕುಮಾರ್ ಮಾತನಾಡಿ,
ಕೊರೊನಾ ಕಾರಣದಿಂದಾಗಿ ಶಿಥಿಲವಾಗಿದ್ದ ಶಾಲೆಗಳು, ನಿರ್ವಹಣೆ

ಇಲ್ಲದಂತಾಗಿ, ಇನ್ನಷ್ಟು ಹಾಳಾಗಿವೆ. ಕೊರೋನಾ ಕಾಲಾವಾಧಿಯಲ್ಲಿ
ಸರ್ಕಾರಿ ಶಾಲೆಗಳಿಗೆ ಹೆಚ್ಚಿನ ಮಕ್ಕಳು ದಾಖಲಾಗುತ್ತಿರುವುದು
ಕಂಡುಬಂದಿದೆ. ಇದರಿಂದಾಗಿ ಖಾಸಗಿ ಶಾಲೆಗಳಿಗೆ ಜನರು ಹೆಚ್ಚು ಹೆಚ್ಚು
ಹಣ ಖರ್ಚು ಮಾಡುವುದು ತಪ್ಪಿದಂತಾಗಿದೆ. ಪ್ರತಿ ಗ್ರಾ.ಪಂ. ಮಟ್ಟದಲ್ಲಿ
ನ್ಯಾಷನಲ್ ಪಬ್ಲಿಕ್ ಸ್ಕೂಲ್ ಮಾದರಿಯಲ್ಲಿ ಶಾಲೆಗಳು ಆಗಬೇಕು.
ಹೆಚ್ಚಿನ ಅನುದಾನವನ್ನು ಶಾಲೆಗಳ ಅಭಿವೃದ್ಧಿಗೆ ನೀಡಬೇಕು.
ದುಸ್ಥಿತಿಯಲ್ಲಿರುವ ಶಾಲಾ ಕಟ್ಟಡಗಳ ಅಭಿವೃದ್ಧಿಗೆ ಹೆಚ್ಚಿನ
ಅನುದಾನ ನೀಡುವಂತೆ ಮನವಿ ಮಾಡಿದರು.
ಜಿ.ಪಂ. ಮಾಜಿ ಸದಸ್ಯ ತೇಜಸ್ವಿ ವಿ. ಪಟೇಲ್ ಪ್ರಾಸ್ತಾವಿಕವಾಗಿ ಮಾತನಾಡಿ,
ಶಾಲಾ ಕಟ್ಟಡಗಳ ನಿರ್ಮಾಣ ಹೊಣೆಯನ್ನು ಎಸ್‍ಡಿಎಂಸಿ ಗೆ ವಹಿಸಬೇಕು,
ನಮ್ಮ ಗ್ರಾಮದ ಶಾಲೆ ಎಂಬ ಅಭಿಮಾನ ಬರುವುದರಿಂದ ಗುಣಮಟ್ಟದ
ಕಟ್ಟಡಗಳು ನಿರ್ಮಾಣವಾಗುತ್ತವೆ. ಶಿಕ್ಷಣ ಕ್ಷೇತ್ರಕ್ಕೆ
ಸಂಬಂಧಿಸಿದಂತೆ ಯಾವುದೇ ನೀತಿ ನಿಯಮಗಳನ್ನು ರೂಪಿಸುವಾಗ
ಕೇವಲ ಸರ್ಕಾರ, ಕಾರ್ಯದರ್ಶಿಗಳ ಮಟ್ಟದಲ್ಲಿ ಮಾತ್ರವಲ್ಲ, ಶಿಕ್ಷಕ
ಸಮುದಾಯದಿಂದಲೂ ಅಭಿಪ್ರಾಯ, ಸಲಹೆಗಳನ್ನು ಪಡೆದಾಗ
ಮಾತ್ರ ನೀತಿ ನಿಯಮಗಳು ಪರಿಣಾಮಕಾರಿಯಾಗಬಲ್ಲವು ಎಂದರು.
ಸಮಾರಂಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಜಯಪ್ಪ
ದೇವೀರಿ, ಎಸ್‍ಡಿಎಂಸಿ ಅಧ್ಯಕ್ಷ ನಾಗರಾಜ್, ಡಿಡಿಪಿಐ ಸಿ.ಆರ್. ಪರಮೇಶ್ವರಪ್ಪ,
ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಉಪನಿರ್ದೇಶಕ (ಅಭಿವೃದ್ಧಿ)
ಹೆಚ್.ಕೆ. ಲಿಂಗರಾಜ್, ಬಿಇಒ ಕೆ. ಮಂಜುನಾಥ್, ಗಣ್ಯರಾದ ಅನಿತ್‍ಕುಮಾರ್, ಬಾತಿ
ನಾಗರಾಜಪ್ಪ, ಸೇರಿದಂತೆ ಗ್ರಾಮ ಪಂಚಾಯತಿ ಸದಸ್ಯರುಗಳು,
ವಿವಿಧ ಅಧಿಕಾರಿಗಳು, ಗ್ರಾಮದ ಮುಖಂಡರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *