ಯಡಿಯೂರಪ್ಪ ನವರು ಮುಖ್ಯಮಂತ್ರಿಗಳಾಗಿದ್ದಾಗ 12 ಕಾರಿಡಾರ್ ರಸ್ತೆಗಳನ್ನು ಅಭಿವೃದ್ಧಿ ಮಾಡಲು ಮಹಾನಗರ ಪಾಲಿಕೆಯಿಂದ ಎಸ್ಟಿಮೇಟ್ ತಯಾರು ಮಾಡಿದ್ದರು.
ಅದರಲ್ಲಿ ಬಳ್ಳಾರಿ ರಸ್ತೆ, ಚಾಲುಕ್ಯ ರಸ್ತೆ, ಹಳೆ ಮದ್ರಾಸ್ ರಸ್ತೆ, ವಿಮಾನ ನಿಲ್ದಾಣ ರಸ್ತೆ, ಸರ್ಜಾಪುರ ರಸ್ತೆ, ಬನ್ನೇರುಘಟ್ಟ ರಸ್ತೆ, ಕನಕಪುರ ರಸ್ತೆ, ಮೈಸೂರು ರಸ್ತೆ ಸೇರಿದಂತೆ 12 ರಸ್ತೆ ಅಭಿವೃದ್ಧಿಗೆ ಸಚಿವ ಸಂಪುಟದಲ್ಲಿ ಅನುಮೋದನೆ ನೀಡಲಾಯಿತು.
ಮಹಾನಗರ ಪಾಲಿಕೆಯಲ್ಲಿ ಬೇಡ, ಕೆಆರ್ ಡಿಎಲ್ ಮೂಲಕ ಮಾಡಬೇಕು ಎಂದು ತೀರ್ಮಾನಿಸಿದರು. ರಸ್ತೆಗಳನ್ನು ಮಾಡಲಿ ಯಾರು ಬೇಡ ಎನ್ನುವುದಿಲ್ಲ. ಆದರೆ ಇವರ ಆಯ್ಕೆಯ ಬಹುತೇಕ ರಸ್ತೆಗಳು ಪಾಲಿಕೆ ಹಾಗೂ ಕೆಆರ್ ಡಿಎಲ್ ಜತೆ ಹಂಚಿಕೊಂಡಿದ್ದವು. ಆಗ ನಮ್ಮ ಪಕ್ಷದ ರಾಮಚಂದ್ರಪ್ಪ ಅವರು ಹಾಗೂ ಮನೋಹರ್ ಅವರು ಲೋಕಾಯುಕ್ತಕ್ಕೆ ಹೋಗಿ ದೂರು ನೀಡಿದ್ದರು. ನಂತರ ಅದು ಸ್ಥಗಿತವಾಗಿತ್ತು ಎಂದು ಭಾವಿಸಿದ್ದೆವು.
ಈ 12 ರಸ್ತೆಗಳ ಪೈಕಿ 191 ಕಿ.ಮೀ ರಸ್ತೆಗೆ ₹1120 ಕೋಟಿಗೆ ಅಂದಾಜು ವೆಚ್ಚ ಹಾಗೂ 5 ವರ್ಷ ನಿರ್ವಹಣೆಗೆ ಹೆಚ್ಚುವರಿಯಾಗಿ ₹787 ಕೋಟಿ ನಿಗದಿ ಮಾಡಿದ್ದಾರೆ. ಮೂಗಿಗಿಂತ ಮೂಗುತ್ತಿ ಭಾರ ಎನ್ನುವಂತೆ ₹335 ಕೋಟಿ ರಸ್ತೆಗಳಿಗೆ ವೆಚ್ಚವಾದರೆ ಅದರ ನಿರ್ವಹಣೆಗೆ ₹787 ಕೋಟಿ ನಿಗದಿ ಮಾಡಲಾಗಿದೆ.
ಯಾವುದೇ ಇಲಾಖೆ ಕಾಮಗಾರಿ ಆದರೂ 2 ವರ್ಷ ಗುತ್ತಿಗೆದಾರರೆ ನಿರ್ವಹಣೆ ಮಾಡಬೇಕು ಎಂದು ಗುತ್ತಿಗೆ ಕರಾರಿನಲ್ಲಿದೆ. ಕೆಲವೆಡೆ 3 ವರ್ಷ ಇರುತ್ತೆ. ಆದರೆ ಇಲ್ಲಿ ಸರ್ಕಾರ ಮೊದಲ ವರ್ಷದಿಂದಲೇ ನಿರ್ವಹಣೆಗೆ ಹಣ ನೀಡುತ್ತಿದೆ ಎಂದು ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು.
ನಾವು ಲೋಕಾಯುಕ್ತಕ್ಕೆ ದೂರು ಕೊಟ್ಟ ನಂತರ ಇದು ಸ್ಥಗಿತವಾಗಿದ್ದು, ಈಗ ಮುಖ್ಯಮಂತ್ರಿಗಳು ಇದರ ಫೈಲ್ ತರಿಸಿಕೊಂಡಿದ್ದಾರೆ ಎಂದು ಬಲ್ಲ ಮೂಲಗಳಿಂದ ಮಾಹಿತಿ ಬಂದಿದೆ.
ಹಿಂದೆ ಟೀಕೆ ವ್ಯಕ್ತವಾದಾಗ 1120 ಕೋಟಿಯ ಅಂದಾಜು ವೆಚ್ಚವನ್ನು ಕಡಿಮೆ ಮಾಡಬೇಕು ಎಂದು ಸೂಚನೆ ನೀಡಲಾಗಿತ್ತು. ಆದರೆ ಈಗ ಮುಖ್ಯಮಂತ್ರಿಗಳು ಯಾವ ತೀರ್ಮಾನ ಕೈಗೊಳ್ಳುತ್ತಾರೆ ಎಂದು ಕಾಡುನೋಡಬೇಕು. ಅವರು ಇದನ್ನೇ ಮುಂದುವರಿಸಿದರೆ ಕಾಂಗ್ರೆಸ್ ಪಕ್ಷ ವಿರೋಧಿಸಲಿದೆ.
ಯೋಜನೆಗೆ 335 ಕೋಟಿ ಅಗತ್ಯ ಬಿದ್ದರೆ ವೆಚ್ಚ ಮಾಡಲಿ. ಆದರೆ ಈ ಹಿಂದೆಯೂ ಮಳೆ ಬಂದಾಗ, ಇತರೆ ಇಲಾಖೆ ಯೋಜನೆ ವೇಳೆ ರಸ್ತೆ ಗುಂಡಿ ಬೀಳುತ್ತಿದೆ. ಆದರೆ ಈಗ ರಸ್ತೆ ಗುಂಡಿಗಳಿಗೆ ಲೆಕ್ಕವೇ ಇಲ್ಲವಾಗಿದೆ. ಬೆಂಗಳೂರಿನ ಹೊರವಲಯದಲ್ಲಿ ರಸ್ತೆಗಳೇ ಇಲ್ಲವಾದಂತಾಗಿದೆ.
ಇತ್ತೀಚೆಗೆ ಈ ರಸ್ತೆ ಗುಂಡಿಯಿಂದ 3 ಸಾವಾಗಿದೆ. ನಿನ್ನೆ ಕೂಡ ಒಬ್ಬ ವ್ಯಕ್ತಿ ಸತ್ತಿದ್ದಾನೆ. ಹೀಗಾಗಿ ಸಿಎಂ ಎಲ್ಲೆಲ್ಲಿ ರಸ್ತೆ ಹಾಳಾಗಿ, ಗುಂಡಿ ಬಿದ್ದಿದೆಯೋ ಅಲ್ಲಿ ಸರಿಪಡಿಸಬೇಕು. ಬೆಂಗಳೂರು ನಗರದಲ್ಲಿ 7 ಸಚಿವರಿದ್ದರು. ಸಿಎಂ ಬೆಂಗಳೂರು ನಗರಾಭಿವೃದ್ಧಿ ಖಾತೆ ಹೊಂದಿದ್ದಾರೆ. ಹೀಗಾಗಿ ಉತ್ತಮ ಕೆಲಸ ಆಗುವ ನಿರೀಕ್ಷೆ ಇತ್ತು. ಅವರು 2 ದಿನ ನಗರ ಪ್ರದಕ್ಷಿಣೆ ಹಾಕಿದ್ದಾರೆ. 2 ಕಟ್ಟಡ, ಒಂದು ಕೆರೆ ವೀಕ್ಷಿಸಿ ಹೋದರು.
ಕೇವಲ ಎರಡು ಕ್ಷೇತ್ರ ಬಿಟ್ಟರೆ ಉಳಿದ 26 ಕ್ಷೇತ್ರಗಳ ಬಗ್ಗೆ ಅವರು ತಲೆಕೆಡಿಸಿಕೊಂಡಿಲ್ಲ. ಉಳಿದ ಸಚಿವರಿಗೆ ಉಸ್ತುವಾರಿಯಾದರೂ ನೀಡಲಿ. ಇಲ್ಲ ಅವರೇ ತಿಂಗಳಿಗೆ ಒಂದೆರಡು ದಿನ ಓಡಾಡಿದರೆ ರಸ್ತೆ ಗುಂಡಿಗಳಾದರೂ ಸರಿ ಹೋಗಬಹುದು. 2020-2021ರಲ್ಲಿ 198 ವಾರ್ಡ್ ಗಳಲ್ಲಿ ಒಂದು ವಾರ್ಡಿಗೂ ನಯಾಪೈಸೆ ಬಿಡುಗಡೆ ಮಾಡಿಲ್ಲ. 2021-22 ಸಾಲಿಗೆ ಪ್ರತಿ ವಾರ್ಡ್ ಗೆ 60 ಲಕ್ಷ ಕೊಟ್ಟಿದ್ದಾರೆ. ಇನ್ನು ಕೋಡ್ ಆಗಿಲ್ಲ. ಅದರಲ್ಲಿ ಬೋರ್ ವೆಲ್, ರಸ್ತೆ ಗುಂಡಿ ನಿರ್ವಹಣೆಗೆ ಎಂದು 20 ಲಕ್ಷ ನೀಡಿದ್ದಾರೆ. ಅದು ಕನ್ನಡಿಯೊಳಗಿನ ಗಂಟಾಗಿದೆ.
ನೂರಾರು ರಸ್ತೆ ಓಡಾಡುವ ಯೋಗ್ಯತೆ ಇಲ್ಲ. ಸಿಎಂ 335 ಕೋಟಿ ರೂ ಅನ್ನು ರಸ್ತೆ ಗುಂಡಿ ಮುಚ್ಚಲು ಬಳಸಲಿ. ಈ ಯೋಜನೆಯನ್ನು ಕೈಬಿಡಲಿ.
ಸಿಎಂ ಈ ಯೋಜನೆ ತೆಗೆದುಕೊಳ್ಳಲಿ ಎಂದು ಯಾರು ಒತ್ತಡ ಹಾಕುತ್ತಿದ್ದಾರೋ ಗೊತ್ತಿಲ್ಲ. ಜನರ ಹಣ ಪೋಲಾಗಬಾರದು. 335 ಕೋಟಿ ಯೋಜನೆಗೆ 787 ಕೋಟಿ ನಿರ್ವಹಣೆ ನೀಡುವುದರಲ್ಲಿ ಅರ್ಥವಿಲ್ಲ.
ನಮ್ಮ ಸರ್ಕಾರವಿದ್ದಾಗ ಚಾಲುಕ್ಯ ವೃತ್ತದಿಂದ ಹೆಬ್ಬಾಳದವರೆಗೆ ಪ್ಲೈ ಓವರ್ ಮಾಡುವ ಯೋಜನೆಗೆ ವಿರೋಧ ವ್ಯಕ್ತಪಡಿಸಿದರು. ಆದರೆ ಇಂದು ಎಷ್ಟು ಟ್ರಾಫಿಕ್ ಇದೆ. ಸ್ಟೀಲ್ ಬ್ರಿಡ್ಜ್ ಬೇಡವಾಗಿದ್ದರೆ ಸಿಮೆಂಟ್ ಬ್ರಿಡ್ಜ್ ಮಾಡಿ ಎಂದು ಸಲಹೆ ನೀಡಬಹುದಿತ್ತಲ್ಲವೇ?
ಹಿಂದೆ 2008ರಲ್ಲಿ ಜಯನಗರ ಕ್ಷೇತ್ರ ಬಿಟ್ಟು ಬಿಟಿಎಂ ಕ್ಷೇತ್ರಕ್ಕೆ ಬಂದೆ. ಆಗ ಜಯನಗರದಲ್ಲಿ ಒಂದು ರಸ್ತೆ ಗುಂಡಿ ಕಾಣಿಸುತ್ತಿರಲಿಲ್ಲ. ಬಿಬಿಎಂಪಿಯಿಂದ ಹಣ ಬಿಡುಗಡೆಯಾಗುತ್ತಿಲ್ಲ. ಇವರಿಗೆ ಆಡಳಿತ ಬರುವುದಿಲ್ಲ, ಬೆಂಗಳೂರು ಜನರ ಬಗ್ಗೆ ಕಾಳಜಿ ಇಲ್ಲ.
ಹಿಂದೆ ಬಿಜೆಪಿ ಸರ್ಕಾರ ಇದ್ದಾಗ 110 ಹಳ್ಳಿಗಳನ್ನು ಬಿಬಿಎಂಪಿ ವ್ಯಾಪ್ತಿಗೆ ಸೇರಿಸಿದರು. ಅವರು ಅಭಿವೃದ್ಧಿ ಮಾಡಿದರಾ? ಇಲ್ಲ. ನಂತರ ಸಿದ್ದರಾಮಯ್ಯ ಅವರ ಸರ್ಕಾರ ಬಂದಮೇಲೆ ವಿಶೇಷ ಅನುದಾನ ನೀಡಿ ನೀರು ಸರಬರಾಜು, ಚರಂಡಿ ವ್ಯವಸ್ಥೆ ಮಾಡಲಾಯಿತು. ಬಿಜೆಪಿಯಿಂದ ನೀವು ಏನನ್ನೂ ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಅವರು 14 ಕಟ್ಟಡ ಅಡವಿಟ್ಟು, 8 ಸಾವಿರ ಕೋಟಿ ಸಾಲ ಇತ್ತು ಹೋಗಿದ್ದರು.
ಮುಖ್ಯಮಂತ್ರಿಗಳು ಈ ಯೋಜನೆಗೆ 335 ಕೋಟಿ ಅಗತ್ಯವಿದೆಯೇ ಪರಿಶೀಲಿಸಲಿ. ಇಲ್ಲವಾದರೆ ಅದನ್ನು ರಸ್ತೆ ಗುಂಡಿ ಮುಚ್ಚಿಸಲು ಬಳಸಲಿ. ಇದನ್ನು ಮಾಡಿದರೆ ಇದರಲ್ಲಿ ದೊಡ್ಡ ಭ್ರಷ್ಟಾಚಾರ ಅಡಗಿದೆ ಎಂದು ಭಾವಿಸಬೇಕಾಗುತ್ತದೆ.
ಅವೈಜ್ಞಾನಿಕ, ಆಡಳಿತಾತ್ಮಕವಾಗಿ ಕಾರ್ಯಸಾಧುವಲ್ಲದ ವಾರ್ಡ್ ವಿಂಗಡಣೆ:
ಬಿಬಿಎಂಪಿಯಲ್ಲಿ 198 ವಾರ್ಡ್ ಗಳಿದ್ದು, ಬೆಂಗಳೂರಿಗೆ ವಿಶೇಷ ಕಾಯ್ದೆ ಬೇಕು ಎಂದು ಪಾಲಿಕೆ ಚುನಾವಣೆ ಮುಂದೂಡಿದರು. ಅದಕ್ಕೆ ನಾವು ಸಹಕರಿಸಿದೆವು. ನಂತರ 243 ವಾರ್ಡ್ ಮಾಡಲು ನಿರ್ಧರಿಸಿದರು. ಕಳೆದ ಸೆಪ್ಟೆಂಬರ್ ನಲ್ಲಿ ಚುನಾವಣೆ ನಡೆಯಬೇಕಿತ್ತು. ಆದರೆ ಈಗ ಒಂದು ವರ್ಷ ಮೂರುತಿಂಗಳಾಗಿದೆ. ಈಗ ಡಿಲಿಮಿಟೇಶನ್ ಮಾಡುವುದಾಗಿ ಹೊರಟಿದ್ದಾರೆ. ಇದಕ್ಕೆ ವಿಶೇಷ ಆಯುಕ್ತರು ವಾರ್ಡ್ ಪುನರ್ ವಿಂಗಡಣೆ ಆಯೋಗದ ಅಧ್ಯಕ್ಷರಾಗಿರುತ್ತಾರೆ.
ಇವರು ಸರಿಯಾಗಿ ಕಾರ್ಯನಿರ್ವಹಣೆ ಮಾಡುತ್ತಿಲ್ಲ. ಇವರು ಬಿಜೆಪಿ ಶಾಸಕರಿರುವ ಕಡೆ ಅವರು ಹೇಳಿದಂತೆ ಕೆಲಸ ಮಾಡುತ್ತಿದ್ದಾರೆ. ಉಳಿದ ಕಡೆ ಬಿಜೆಪಿ ಮುಖಂಡರು ಹೇಳಿದಂತೆ ಮನಸ್ಸಿಗೆ ಬಂದಂತೆ ಅವೈಜ್ಞಾನಿಕವಾಗಿ ಮಾಡುತ್ತಿದ್ದಾರೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದು ತೀರಾ ಬೇಸರ. ಹಳೆ ಬೆಂಗಳೂರಿಗೆ ಕ್ಷೇತ್ರಗಳ ಕೊರತೆ ಬರುತ್ತದೆ. ಇದನ್ನು 2011ರ ಜನಗಣತಿ ಆಧಾರದ ಮೇಲೆ ಮಾಡಬೇಕು. ಈಗ 2021ರ ಜನಗಣತಿ ಇಲ್ಲ. ಯಾವಾಗ ಮಾಡಬೇಕಾದರೂ ಅದರ ಹಿಂದಿನ ಜನಗಣತಿ ಆಧಾರವಾಗಿ ತೆಗೆದುಕೊಳ್ಳಬೇಕು. ಆದರೆ ಬಿಜೆಪಿ ವೈಯಕ್ತಿಕ ಲಾಭಕ್ಕೆ ಪ್ರೊಜೆಕ್ಟೆಡ್ ಪಾಪುಲೇಶನ್ ಎಸ್ಟಿಮೇಟ್ ಆಧಾರದ ಮೇಲೆ ಈ ರೀತಿ ಮಾಡಲಾಗಿದೆ. ಇದು ವೈಜ್ಞಾನಿಕ ಪ್ರಕ್ರಿಯೆ ಅಲ್ಲ.
2008ರಲ್ಲಿ ಕೇಂದ್ರ ಸರ್ಕಾರ ಲೋಕಸಭಾ ಮತ್ತು ವಿಧಾನಸಭಾ ಕ್ಷೇತ್ರ ಪುನರ್ ವಿಂಗಡಣೆಗೆ ಸಮಿತಿ ಮಾಡಿತ್ತು. ಈ ಸಮಿತಿಯಲ್ಲಿ ದೇವೇಗೌಡರು, ಅನಂತ ಕುಮಾರ್, ಖರ್ಗೆ ಅವರು ಸೇರಿ ಎಲ್ಲ ಪಕ್ಷದ ನಾಯಕರನ್ನು ಒಳಗೊಂಡಿತ್ತು. ಈಗಲೂ ಅದೇ ರೀತಿ ಎಲ್ಲ ಪಕ್ಷದ ನಾಯಕರು, ಸಾರ್ವಜನಿಕರ ಅಭಿಪ್ರಾಯ ಪಡೆಯಬೇಕು.
ಎಲ್ಲ ಪಕ್ಷದ ನಾಯಕರನ್ನು ಒಳಗೊಂಡ ಸಮಿತಿ ರಚಿಸಿ ತೀರ್ಮಾನ ಕೈಗೊಳ್ಳಬೇಕಾಗಿತ್ತು. ಆದರೆ ಏಕಪಕ್ಷೀಯವಾಗಿ ನಿರ್ಧಾರ ಕೈಗೊಳ್ಳುತ್ತಿದ್ದಾರೆ. ಈ ವಿಚಾರವಾಗಿ ನಾವು ನಮ್ಮ ಮನವಿ ನೀಡಿದ್ದು, ಯಾವ ಕ್ರಮ ಕೈಗೊಳ್ಳುತ್ತಾರೆ ಎಂದು ಕಾದುನೋಡಿ ನಂತರ ನಮ್ಮ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ.
10 ವರ್ಷಕ್ಕೊಮ್ಮೆ ಡಿಲೀಮಿಟೇಶನ್ ಆಗಬೇಕು. ನಾವು ಇದಕ್ಕೆ ಯಾರನ್ನು ಮುಖ್ಯಸ್ಥರನ್ನಾಗಿ ಮಾಡಿದ್ದೇವೆ? ಮುಖ್ಯ ಆಯುಕ್ತರನ್ನು ಮಾಡಿದ್ದೇವೆ. ಅವರು ತಮ್ಮ ಅಧಿಕಾರಿಗಳನ್ನು ಸೇರಿಸಿಕೊಂಡು ಸಮಿತಿ ಮಾಡಿದ್ದಾರೆ. ಆದರೆ ಇವರು ಈ ಪ್ರಕ್ರಿಯೆ ಮಾಡುತ್ತಿಲ್ಲ. ಬಿಜೆಪಿ ನಾಯಕರು, ಶಾಸಕರು ಮಾಡಿ ಕೊಟ್ಟಿದ್ದನ್ನು ಇವರು ಜಾರಿಗೆ ತರಲು ಪ್ರಯತ್ನಿಸುತ್ತಿದ್ದಾರೆ. ಇದಕ್ಕೆ ನಮ್ಮ ವಿರೋಧ. ಈ ಸಮಿತಿ ಇದುವರೆಗೂ ಕೇವಲ ಒಂದು ಬಾರಿ ಮಾತ್ರ ಸಭೆ ಮಾಡಿದೆ. ಈ ಆಯೋಗ ಬಿಜೆಪಿ ಕೈಗೊಂಬೆಯಾಗಿದೆ. ರಾಜಕೀಯ ಪಕ್ಷಕ್ಕೆ ಅನುಕೂಲವಾಗುವಂತೆ ಮಾಡುತ್ತಿದ್ದಾರೆ. ಇದನ್ನು ನಾವು ವಿರೋಧಿಸುತ್ತೇವೆ. ಅಧಿಕಾರಿಗಳು ವೈಜ್ಞಾನಿಕವಾಗಿ ಮಾಡಲಿ ನಾವು ಸ್ವೀಕರಿಸುತ್ತೇವೆ.
ಆರಂಭದಲ್ಲಿ ಸರ್ಕಾರ ನೂತನ ಕಾಯ್ದೆ ಜಾರಿ ಮಾಡುತ್ತೇವೆ ಎಂದಾಗ ನಾವು ಸಹಕಾರ ಕೊಟ್ಟೆವು. ಆ ಸಮಿತಿಯಲ್ಲಿ ನಾವು ಇದ್ದೆವು, ನಮ್ಮ ಸಲಹೆ ಕೊಟ್ಟೆವು. 198 ಕ್ಷೇತ್ರಗಲ್ಲೇ ಚುನಾವಣೆ ಮಾಡಬಹುದಿತ್ತಲ್ಲವೇ? 243 ವಾರ್ಡ್ ಮಾಡುತ್ತೇವೆ ಎಂದರು. ಅದಾದರೂ ಮಾಡಿ ನಾವು ಸಿದ್ಧವಿದ್ದೇವೆ ಎಂದು ಹೇಳುತ್ತಿದ್ದೇವೆ.
198 ವಾರ್ಡ್ ನಿಯಂತ್ರಣ ಮಾಡಲು ಆಯುಕ್ತರು ಮಹಾಪೌರರಿಂದ ಸಾಧ್ಯವಿಲ್ಲ. ಇನ್ನು ದೊಡ್ಡದಾಗಿ ಮಾಡುತ್ತೇವೆ ಎಂದರೆ ಪರಿಸ್ಥಿತಿ ಇನ್ನೂ ಹಾಳಾಗುತ್ತದೆಯೇ ಹೊರತು ಸುಧಾರಿಸುವುದಿಲ್ಲ. ಈ ಬಗ್ಗೆ ನಾವು ಈಗ ಮಾತನಾಡುವುದಿಲ್ಲ.
ಸಿಎಂ ಅವರ ಬಳಿ ಬೆಂಗಳೂರು ನಗರಾಭಿವೃದ್ಧಿ ಸಚಿವಾಲಯ ಇದ್ದು, ಅವರು ಸರಿಯಾಗಿ ಸಮಯ ಕೊಟ್ಟರೆ ಅದಕ್ಕಿಂತ ಉತ್ತಮವಾದುದಿಲ್ಲ. ಸಮಯ ನೀಡದಿದ್ದರೆ ಪರಿಸ್ಥಿತಿ ಸುಧಾರಿಸುವುದಿಲ್ಲ. ಹಿಂದೆ ನಾನು ಸಚಿವನಾಗಿದ್ದಾಗ ಎಲ್ಲೇ ತಪ್ಪಾದರೂ ನಾನು ಕ್ರಮ ಕೈಗೊಳ್ಳುತ್ತಿದ್ದೆ. ವಾರಕ್ಕೆ ಮೂರು ಬಾರಿ ರೌಂಡ್ಸ್ ಹಾಕುತ್ತಿದ್ದೆ. ಸಿಎಂ ಅಧಿಕಾರಕ್ಕೆ ಬಂದು 120 ದಿನಗಳಾಗಿದ್ದು ಕೇವಲ 2 ದಿನ 2 ಕ್ಷೇತ್ರಗಲ್ಲಿ 2 ತಾಸು ಭೇಟಿ ನೀಡಿದ್ದಾರೆ ಅಷ್ಟೇ. 7 ಕಡೆ ಸಚಿವರಿರುವಾಗ ಸಿಎಂ ಕೂತ ಕಡೆ ಕೆಲಸ ತೆಗೆದುಕೊಳ್ಳಬಹುದು.
ಯೋಜನಾಬದ್ಧವಾಗಿಲ್ಲ ಎಂದರೆ ಹಳೇ ಬೆಂಗಳೂರು ಪ್ರದೇಶ ಏನು ಮಾಡಬೇಕು ಎಂದಿದ್ದಾರೆ? ಅತಿವೃಷ್ಟಿ ಪ್ರಾಕೃತಿಕ ವಿಕೋಪ ಆಗೋದು ಸಹಜ. ಆದರೆ ಸರ್ಕಾರ ಅತಿವೃಷ್ಟಿ ಬಂದ ನಂತರ ಯಾವ ಕ್ರಮ ತೆಗೆದುಕೊಳ್ಳುತ್ತದೆ ಎಂಬುದು ಮುಖ್ಯ. 2013ರಲ್ಲಿ ಬೆಂಗಳೂರಿನ ಎಲ್ಲ ರಸ್ತೆಗಳು ಹಾಳಾಗಿತ್ತು. ನಾನು ಸಚಿವನಾದ ನಂತರ ಕೇವಲ 3 ತಿಂಗಳಲ್ಲಿ ಇಡೀ ಬೆಂಗಳೂರಿನ ರಸ್ತೆಗಳನ್ನು ಸಮರ್ಪಕವಾಗಿ ಸಿದ್ಧ ಪಡಿಸಿದೆವು. ನಮಗೆ ಕೆಲಸ ಆಗಬೇಕು. ಸಿಎಂ ಬಹಳ ಪ್ರಭಾವಿಗಳಾಗಿರುತ್ತಾರೆ. ಅವರ ಬಳಿಯೇ ಸಚಿವಾಲಯ ಇರಲಿ, ಆದರೆ ಬೆಂಗಳೂರು ಉತ್ತಮವಾಗಬೇಕು ಎಂಬ ಇಚ್ಚಾಶಕ್ತಿ ಬೇಕು.
ಸಿಎಂ ಬಳಿ ಈ ಸಚಿವಾಲಯ ಇದ್ದರೆ ಹೆಚ್ಚಿನ ಅನುದಾನ ಸಿಗುತ್ತದೆ. ಅಧಿಕಾರಿಗಳು ಭಯದಲ್ಲಿ ಕೆಲಸ ಮಾಡುತ್ತಾರೆ. ಕೆಲಸ ಚೆನ್ನಾಗಿ ಆಗುತ್ತದೆ. ಅವರು ಗಮನ ಹರಿಸಬೇಕು. ಅವರಿಂದ ಸಾಧ್ಯವಾಗದಿದ್ದರೆ ಬೇರೆಯವರಿಗೆ ನೀಡಲಿ.
ಬೆಂಗಳೂರಿನ ಸಚಿವರುಗಳು ಒಟ್ಟಾಗಿ ಸೇರಿದ್ದನ್ನೇ ನಾನು ನೋಡಿಲ್ಲ. 7 ಜನ 7 ದಿಕ್ಕಿಗೆ ಹೋಗಿದ್ದಾರೆ. ಅತಿಯಾದ ಮಳೆ ಸುರಿದಾಗ ಈ ಸಚಿವರು ತಮ್ಮ ಕ್ಷೇತ್ರ ಬಿಟ್ಟು ಹೊರಗೆ ಬರಲಿಲ್ಲ. ಅವರು ತಮ್ಮ ಕ್ಷೇತ್ರಕ್ಕೆ ಮಾತ್ರ ಸಚಿವರಾಗಿದ್ದಾರೆ. ಅವರು ಬೇರೆ ಕಡೆ ಭೇಟಿ ನೀಡಿದ್ದನ್ನು ನಾವಂತೂ ನೋಡಲಿಲ್ಲ. ನೀವು ನೋಡಿದ್ದರೆ ಹೇಳಿ.