ದಾವಣಗೆರೆ ಜಿಲ್ಲೆಯಲ್ಲಿಯೂ ಕಳೆದ ಹತ್ತು ದಿನಗಳಿಂದೀಚೆಗೆ
ಪಾಸಿಟೀವ್ ಪ್ರಮಾಣ ಏರು ಗತಿಯಲ್ಲಿ ಸಾಗಿದ್ದು, ಸರ್ಕಾರದ
ಸೂಚನೆಯಂತೆ ಜಿಲ್ಲೆಯ ಎಲ್ಲ ಹಾಸ್ಟೆಲ್‍ಗಳಲ್ಲಿನ ವಿದ್ಯಾರ್ಥಿಗಳು
ಹಾಗೂ ಸಿಬ್ಬಂದಿಗಳಿಗೆ ಆರ್‍ಟಿಪಿಸಿಆರ್ ಪರೀಕ್ಷೆಯನ್ನು ಎರಡು ದಿನಗಳ
ಒಳಗಾಗಿ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ
ಅವರು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಡಳಿತ ಭವನದ ಕಚೇರಿ ಸಭಾಂಗಣದಲ್ಲಿ ಮಂಗಳವಾರ
ಏರ್ಪಡಿಸಿದ ಕೋವಿಡ್ ನಿರ್ವಹಣೆ ಕುರಿತ ತುರ್ತು ಸಭೆ ಹಾಗೂ
ವೈದ್ಯಕೀಯ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು
ಮಾತನಾಡಿದರು.
ಜಿಲ್ಲೆಯಲ್ಲಿ ಕಳೆದ ಹತ್ತುದಿನಗಳಿಂದೀಚೆಗೆ ಕೋವಿಡ್ ಪಾಸಿಟಿವ್
ಪ್ರಕರಣಗಳ ಪ್ರಮಾಣ ಏರುತ್ತಾ ಸಾಗಿದೆ. ಕಳೆದ ಹತ್ತು
ದಿನಗಳ ಹಿಂದೆ 0.06 ಇದ್ದ ಪ್ರಮಾಣ, ಐದು ದಿನಗಳ ಬಳಿಕ 0.09 ಹಾಗೂ
ಡಿ. 06 ರ ವೇಳೆಗೆ 0.13 ಗೆ ಏರಿಕೆ ಕಂಡಿದೆ. ಹೀಗಾಗಿ ಇದು ಕೋವಿಡ್
ಪ್ರಕರಣಗಳ ಸಂಖ್ಯೆ ಜಿಲ್ಲೆಯಲ್ಲಿ ಹೆಚ್ಚಳವಾಗುವ ಎಲ್ಲ
ಸಾಧ್ಯತೆಗಳು ಕಂಡುಬರುತ್ತಿವೆ. ಕೋವಿಡ್‍ನ ಮೊದಲನೆ ಮತ್ತು
ಎರಡನೆ ಅಲೆಯಲ್ಲಿ ಜಿಲ್ಲೆಯಲ್ಲಿ ಉತ್ತಮವಾಗಿ ನಿರ್ವಹಣೆ ಮಾಡಿ
ಅನುಭವವಿರುವ ಅಧಿಕಾರಿಗಳ ತಂಡ ಜಿಲ್ಲೆಯಲ್ಲಿ ಇದ್ದು, ಎಂತಹದೇ
ಪರಿಸ್ಥಿತಿ ಬಂದರೂ, ಅದನ್ನು ಸಮರ್ಥವಾಗಿ ನಿಭಾಯಿಸುವ ವಿಶ್ವಾಸವಿದೆ.
ಕೋವಿಡ್‍ನ 3ನೇ ಅಲೆ ಸಮರ್ಥವಾಗಿ ಎದುರಿಸಲು ನಾವು ಈಗಿನಿಂದಲೇ
ಸನ್ನದ್ಧರಾಗಬೇಕಿದೆ. ಪ್ರತಿನಿತ್ಯ 1500 ರಿಂದ 2000 ಟೆಸ್ಟ್
ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ. ಕೇರಳ ಮತ್ತು
ಮಹಾರಾಷ್ಟ್ರ ರಾಜ್ಯದಿಂದ ಆಗಮಿಸುವವರು 72 ಗಂಟೆಯೊಳಗಿನ
ಆರ್‍ಟಿಪಿಸಿಆರ್ ನೆಗೆಟಿವ್ ವರದಿ ಹೊಂದಿರುವುದು ಕಡ್ಡಾಯವಾಗಿದ್ದು,
ದಾವಣಗೆರೆ ಜಿಲ್ಲೆಯನ್ನು ರಿಸ್ಕ್‍ಗೆ ಒಳಪಡಿಸಲು ನಾವು ಸಿದ್ಧವಿಲ್ಲ, ಹೀಗಾಗಿ
ದಾವಣಗೆರೆ ಮತ್ತು ಹರಿಹರದ ರೈಲ್ವೆ ನಿಲ್ದಾಣ ಹಾಗೂ ರಾಷ್ಟ್ರೀಯ
ಹೆದ್ದಾರಿಯಿಂದ ಜಿಲ್ಲೆಯೊಳಗೆ ಪ್ರವೇಶಿಸುವ ಪ್ರದೇಶಗಳಲ್ಲಿ
ಚೆಕ್‍ಪೋಸ್ಟ್ ಹಾಕಿ, ಪರಿಶೀಲಿಸುವಂತೆ ಪೊಲೀಸ್ ಇಲಾಖೆ ಹಾಗೂ ಆರೋಗ್ಯ
ಇಲಾಖೆಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಹಾಸ್ಟೆಲ್ ವಿದ್ಯಾರ್ಥಿ, ಸಿಬ್ಬಂದಿಗಳಿಗೆ ಟೆಸ್ಟ್ ಕಡ್ಡಾಯ : ಜಿಲ್ಲೆಯಲ್ಲಿನ
ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ ಸೇರಿದಂತೆ ಹಿಂದುಳಿದ
ವರ್ಗ, ಅಲ್ಪಸಂಖ್ಯಾತರ, ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಗೆ ಬರುವ
ಪ್ರತಿಯೊಂದು ಹಾಸ್ಟೆಲ್‍ಗಳು ಅಲ್ಲದೆ, ಖಾಸಗಿ ವಸತಿಯುತ
ಶಾಲೆಗಳಲ್ಲಿನ ವಿದ್ಯಾರ್ಥಿಗಳು, ಶಿಕ್ಷಕರು, ಉಪನ್ಯಾಸಕರು,

ಸಿಬ್ಬಂದಿಗಳು, ಅಡುಗೆಯವರು. ನರ್ಸಿಂಗ್, ಪ್ಯಾರಾಮೆಡಿಕಲ್,
ವೈದ್ಯಕೀಯ ವಿದ್ಯಾರ್ಥಿಗಳು, ಸಿಬ್ಬಂದಿಗಳು, ಅಂಗನವಾಡಿ ಸಹಾಯಕಿ
ಮತ್ತು ಮೇಲ್ವಿಚಾರಕರು ಎಲ್ಲರಿಗೂ ಆರ್‍ಟಿಪಿಸಿಆರ್ ಪರೀಕ್ಷೆಯನ್ನು
ಎರಡ್ಮೂರು ದಿನಗಳ ಒಳಗಾಗಿ ಕೈಗೊಳ್ಳಲೇಬೇಕು. ಇದರ
ಜೊತೆಗೆ ಆರೋಗ್ಯ ಇಲಾಖೆಯು ಹೆಚ್ಚು ರಿಸ್ಕ್ ವಲಯದಲ್ಲಿ ಬರುವ
ಡ್ರೈವರ್, ಕಂಡೆಕ್ಟರ್, ಹೋಟೆಲ್, ರೆಸ್ಟೋರೆಂಟ್, ಹೆಚ್ಚು
ಜನಸಂದಣಿ ಇರುವೆಡೆ ಕೆಲಸ ಮಾಡುವ ಹಮಾಲರು
ಮುಂತಾದವರಿಗೂ ಆರ್‍ಟಿಪಿಸಿಆರ್ ಟೆಸ್ಟ್ ಮಾಡಬೇಕು. ಇದು ಜಿಲ್ಲೆಯ
ಎಲ್ಲ ತಾಲ್ಲೂಕು ಮಟ್ಟದಲ್ಲೂ ಕೂಡ ಪರೀಕ್ಷೆ ನಡೆಯಬೇಕು
ಎಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಜಿಲ್ಲೆಯ ಎಲ್ಲ ಖಾಸಗಿ ವಸತಿಯುತ ಶಾಲೆಗಳಿಗೆ ಕೂಡಲೆ ಭೇಟಿ ನೀಡಿ,
ವಿದ್ಯಾರ್ಥಿಗಳ ಹಾಗೂ ಶಿಕ್ಷಕರು, ಸಿಬ್ಬಂದಿಗಳ ಆರೋಗ್ಯ
ವಿವರವನ್ನು ಖುದ್ದು ಸಂಗ್ರಹಿಸಿ, ಜಿಲ್ಲಾಧಿಕಾರಿಗಳ ಕಚೇರಿಗೆ ವರದಿ
ಸಲ್ಲಿಸುವಂತೆ ಡಿಡಿಪಿಐ ಅವರಿಗೆ ಸೂಚನೆ ನೀಡಿದರು.
ಹೋಂ ಐಸೋಲೇಷನ್ ಇಲ್ಲ : ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವ್ ಬಂದ
ಸೋಂಕಿತರಿಗೆ ಯಾವುದೇ ಕಾರಣಕ್ಕೂ ಹೋಂ
ಐಸೋಲೇಷನ್‍ನಲ್ಲಿರಲು ಯಾರಿಗೂ ಅವಕಾಶ ಇರುವುದಿಲ್ಲ. ರೋಗ
ಲಕ್ಷಣ ಇರಲಿ, ಇಲ್ಲದಿರಲಿ ಕಡ್ಡಾಯವಾಗಿ ಆಸ್ಪತ್ರೆಯಲ್ಲಿಯೇ ದಾಖಲಾಗಿ
ಚಿಕಿತ್ಸೆ ಪಡೆಯಬೇಕು. ಕಳೆದ ಮೊದಲ ಮತ್ತು ಎರಡನೆ
ಅಲೆಯಲ್ಲಿ ಮಾಡಿದ ತಪ್ಪನ್ನು ಈ ಬಾರಿ ಮಾಡುವುದಿಲ್ಲ. ಸೋಂಕಿತರು
ಎಷ್ಟೇ ಪ್ರಭಾವಿಗಳಾಗಿದ್ದರೂ, ಎಲ್ಲರನ್ನೂ ತಪ್ಪದೆ ಆಸ್ಪತ್ರೆಗೆ
ದಾಖಲಿಸಿಯೇ ಚಿಕಿತ್ಸೆ ನೀಡಬೇಕು ಎಂದು ಜಿಲ್ಲಾಧಿಕಾರಿಗಳು
ಅಧಿಕಾರಿಗಳಿಗೆ ತಾಕೀತು ಮಾಡಿದರು. ದಾವಣಗೆರೆಯಲ್ಲಿ ಒಂದೇ
ಕುಟುಂಬದ ನಾಲ್ವರಿಗೆ ಕೋವಿಡ್ ಪಾಸಿಟಿವ್ ಬಂದಿದ್ದು, ನಿಯಮಾನುಸಾರ,
ಆರ್‍ಟಿಪಿಸಿಆರ್‍ಗೆ ಸಂಗ್ರಹಿಸಿದ ಮಾದರಿಯನ್ನು ಹಾಸನಕ್ಕೆ ಜಿನೋಮಿಕ್
ಸೀಕ್ವೆನ್ಸ್‍ಗಾಗಿ ಕಳುಹಿಸಿಕೊಡುವಂತೆ ಡಿಸಿ ಸೂಚನೆ ನೀಡಿದರು.
ವೈದ್ಯಕೀಯ ವ್ಯವಸ್ಥೆ ಸಿದ್ಧತೆಯಲ್ಲಿರಲಿ : ಕೋವಿಡ್ ಮೊದಲ
ಮತ್ತು ಎರಡನೆ ಅಲೆ ಸಂದರ್ಭದಲ್ಲಿ ಸಾಕಷ್ಟು ದಾನಿಗಳು
ಹಲವಾರು ಬೆಡ್, ವೈದ್ಯಕೀಯ ಉಪಕರಣಗಳು, ವೆಂಟಿಲೇಟರ್
ಮುಂತಾದ ಉಪಕರಣಗಳನ್ನು ಆಸ್ಪತ್ರೆಗಳಿಗೆ ದಾನ ಮಾಡಿದ್ದು,
ಅವೆಲ್ಲವೂ ಸುಸ್ಥಿತಿಯಲ್ಲಿರುವಂತೆ ಸಂಬಂಧಪಟ್ಟ ಆಸ್ಪತ್ರೆಗಳ
ಅಧಿಕಾರಿಗಳು ನೋಡಿಕೊಳ್ಳಬೇಕು. ಡಿಹೆಚ್‍ಒ ಅವರು ಇದರ
ಸಮಗ್ರ ವರದಿಯನ್ನು ಸಲ್ಲಿಸಬೇಕು. ತಾಲ್ಲೂಕುಗಳಿಗೆ ಭೇಟಿ
ನೀಡಿದ ಸಂದರ್ಭದಲ್ಲಿ ಆಸ್ಪತ್ರೆಗೆ ತೆರಳಿ, ಉಪಕರಣಗಳ ದಾಸ್ತಾನು
ವಹಿ ಪರಿಶೀಲಿಸಲಾಗುವುದು. ಜಿಲ್ಲಾಸ್ಪತ್ರೆ ಸೇರಿದಂತೆ ಎಲ್ಲ ತಾಲ್ಲೂಕು
ಆಸ್ಪತ್ರೆಗಳಲ್ಲಿ ಅಳವಡಿಸಿರುವ ಆಕ್ಸಿಜನ್ ಪ್ಲಾಂಟ್‍ಗಳು
ಸುಸ್ಥಿತಿಯಲ್ಲಿದ್ದು, ಬಳಕೆಗೆ ಲಭ್ಯವಿರುವಂತೆ
ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಈ ಸಂದರ್ಭದಲ್ಲಿ
ಹೇಳಿದರು.
ಮಾಸ್ಕ್ ಧರಿಸದವರಿಗೆ ದಂಡ : ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್
ಮಾತನಾಡಿ, ಕೋವಿಡ್ ನಿಯಂತ್ರಣಕ್ಕಾಗಿ ಸರ್ಕಾರದ ಸೂಚನೆಯಂತೆ
ಮಹಾನಗರಪಾಲಿಕೆ ಮತ್ತು ಸ್ಥಳೀಯ
ಸಂಸ್ಥೆಗಳು/ಪ್ರಾಧಿಕಾರಗಳು, ನಗರಪಾಲಿಕೆ ಪ್ರದೇಶಗಳಲ್ಲಿ
ರೂ.250 ಮತ್ತು ಇನ್ನಿತರೆ ಪ್ರದೇಶಗಳಲ್ಲಿ ರೂ.100 ದಂಡವನ್ನು
ವಿಧಿಸುವಂತೆ ಸೂಚನೆ ನೀಡಿದ್ದು, ಇದನ್ನು ಜಿಲ್ಲೆಯಲ್ಲಿ ಕಟ್ಟುನಿಟ್ಟಾಗಿ
ಪಾಲಿಸಲಾಗುವುದು. ತಕ್ಷಣದಿಂದಲೇ ಇದನ್ನು ಜಾರಿಗೊಳಿಸುವಂತೆ
ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಹಾಗೂ ಸ್ಥಳೀಯ ಸಂಸ್ಥೆಗಳ
ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಸಾರ್ವಜನಿಕರು ಕೋವಿಡ್
ತಡೆಗಟ್ಟಲು ಸಂಪೂರ್ಣವಾಗಿ ಸಹಕರಿಸಬೇಕು. ದಂಡ ವಿಧಿಸಲು

ಅವಕಾಶ ನೀಡದೆ, ಪ್ರತಿಯೊಬ್ಬರೂ ತಪ್ಪದೆ ಮಾಸ್ಕ್ ಧರಿಸಬೇಕು
ಎಂದು ಹೇಳಿದರು.


ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಡಿಹೆಚ್‍ಒ ಡಾ.
ನಾಗರಾಜ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ರಾಘವನ್, ಆರ್‍ಸಿಹೆಚ್ ಅಧಿಕಾರಿ ಡಾ.
ಮೀನಾಕ್ಷಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ
ಉಪನಿರ್ದೇಶಕ ವಿಜಯಕುಮಾರ್, ಮಹಾನಗರಪಾಲಿಕೆ ಆಯುಕ್ತ
ವಿಶ್ವನಾಥ ಮುದಜ್ಜಿ ಸೇರಿದಂತೆ ಆರೋಗ್ಯ ಇಲಾಖೆಯ ಅನುಷ್ಠಾನ
ಅಧಿಕಾರಿಗಳು, ವಿವಿಧ ವೈದ್ಯಕೀಯ ಸಂಸ್ಥೆಗಳ ತಜ್ಞ ವೈದ್ಯರು,
ವೈದ್ಯಕೀಯ ಸಲಹಾ ಸಮಿತಿಯ ಸದಸ್ಯರು ಭಾಗವಹಿಸಿದ್ದರು.
ಬಾಕ್ಸ್-01 : ಜಿಲ್ಲೆಯಲ್ಲಿ ಕೋವಿಡ್ ನಿರೋಧಕ ಲಸಿಕಾಕರಣದಲ್ಲಿ
ಮೊದಲನೆ ಡೋಸ್‍ನಲ್ಲಿ ಶೇ. 96 ರಷ್ಟು ಹಾಗೂ ಎರಡನೆ ಡೋಸ್‍ನಲ್ಲಿ
ಶೇ. 61 ರಷ್ಟು ಸಾಧನೆಯಾಗಿದ್ದು, ರಾಜ್ಯದಲ್ಲಿಯೇ ದಾವಣಗೆರೆ ಜಿಲ್ಲೆ
ಮುಂಚೂಣಿಯಲ್ಲಿದೆ. ಕೆಲವೆಡೆ ಜನರಿಂದ ಎಷ್ಟೇ ವಿರೋಧ
ಬಂದರೂ, ಅಧಿಕಾರಿ, ಸಿಬ್ಬಂದಿಗಳು ಅವಮಾನ ಎದುರಿಸಿದರೂ,
ದಕ್ಷತೆಯಿಂದ, ಬದ್ಧತೆಯಿಂದ, ಜನರ ಮನವೊಲಿಸಿ ಕೋವಿಡ್
ನಿರೋಧಕ ಲಸಿಕಾಕರಣವನ್ನು ಯಶಸ್ವಿಯಾಗಿಸಿದ್ದಾರೆ.
ಲಸಿಕಾಕರಣದ ತಂಡದ ಉತ್ತಮ ಕಾರ್ಯವೈಖರಿ
ಶ್ಲಾಘನೀಯವಾಗಿದ್ದು, ಅವರೆಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ.
ಇನ್ನೂ ಬಾಕಿ ಉಳಿದಿರುವೆಡೆ ಎಸ್‍ಪಿ, ಜಿಪಂ ಸಿಇಒ ಸೇರಿದಂತೆ ನಾನೇ ಖುದ್ದಾಗಿ,
ಜನರ ಮನೆ ಮನೆಗೆ ತೆರಳಿ ಲಸಿಕೆ ಹಾಕಿಸಲು ಕ್ರಮ
ಕೈಗೊಳ್ಳುತ್ತೇನೆ.

-ಮಹಾಂತೇಶ್ ಬೀಳಗಿ, ಜಿಲ್ಲಾಧಿಕಾರಿಗಳು
ಬಾಕ್ಸ್-02 : ರಾಜ್ಯದಲ್ಲಿ ಸದ್ಯ ಹೆಚ್ಚು ಕೇಳಿಬರುತ್ತಿರುವ ಕೋವಿಡ್‍ನ
ಒಮಿಕ್ರಾನ್ ತಳಿಯ ಸೋಂಕು ಅತ್ಯಂತ ಹೆಚ್ಚು ವೇಗವಾಗಿ
ಹರಡುವ ಸಾಮಥ್ರ್ಯ ಹೊಂದಿದ್ದು, ಸದ್ಯ ಕೋವಿಡ್ ತಡೆಗಾಗಿ
ನೀಡಲಾಗುತ್ತಿರುವ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಎರಡೂ
ಲಸಿಕೆಗಳು, ಒಮಿಕ್ರಾನ್ ತಳಿಯ ಕೋವಿಡ್ ಸೋಂಕು ತಡೆಗಟ್ಟಲು
ಸಾಕಷ್ಟು ಪರಿಣಾಮಕಾರಿಯಾಗಿದೆ ಎಂಬುದಾಗಿ ತಿಳಿದುಬಂದಿದೆ. ಹೀಗಾಗಿ
ಇದುವರೆಗೂ ಮೊದಲ ಮತ್ತು ಎರಡನೆ ಡೋಸ್ ಲಸಿಕೆ ಪಡೆಯದೇ
ಇರುವವರು, ಕೂಡಲೆ ಲಸಿಕೆ ಪಡೆದುಕೊಳ್ಳಲು
ಮುಂದಾಗಬೇಕು.

  • ಡಾ. ನಾಗರಾಜ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ

Leave a Reply

Your email address will not be published. Required fields are marked *