ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ ಸರ್ಕಾರಿ
ಅಥವಾ ಖಾಸಗಿ ಆಸ್ಪತ್ರೆಗಳಲ್ಲಿ ಬಿಪಿಎಲ್ ಕುಟುಂಬಗಳಿಗೆ ಉಚಿತವಾಗಿ
ವೈದ್ಯಕೀಯ ಚಿಕಿತ್ಸೆ ಹಾಗೂ ಸೇವೆ ನೀಡುವ ಯೋಜನೆ ಈಗಾಗಲೆ
ಜಾರಿಯಲ್ಲಿದ್ದು, ಪ್ರತಿ ತಿಂಗಳು ಜಿಲ್ಲೆಯಲ್ಲಿ ಕನಿಷ್ಟ 80 ಸಾವಿರ ಜನರಿಗೆ
ಎಬಿಎಆರ್‍ಕೆ ಕಾರ್ಡ್ ವಿತರಿಸುವ ಕಾರ್ಯ ಆಗಬೇಕು ಎಂದು ಜಿಲ್ಲಾಧಿಕಾರಿ
ಮಹಾಂತೇಶ್ ಬೀಳಗಿ ಅವರು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ
ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಎಬಿಎಆರ್‍ಕೆ
ಯೋಜನೆ ಕುರಿತ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆ ಹಾಗೂ
ಕುಂದುಕೊರತೆ ಪರಿಹಾರ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ
ಅವರು ಮಾತನಾಡಿದರು.
ಎಬಿಎಆರ್‍ಕೆ ಯೋಜನೆಯಡಿ ಬಿಪಿಎಲ್ ಕುಟುಂಬಗಳಿಗೆ ಸರ್ಕಾರಿ ಅಥವಾ
ಯೋಜನೆ ವ್ಯಾಪ್ತಿಗೆ ಸೇರ್ಪಡೆಗೊಂಡಿರುವ ಖಾಸಗಿ ಆಸ್ಪತ್ರೆಗಳಲ್ಲಿ
ಉಚಿತವಾಗಿ ವೈದ್ಯಕೀಯ ಚಿಕಿತ್ಸೆ ಹಾಗೂ ಸೇವೆ ನೀಡುವ
ಯೋಜನೆಯನ್ನು ಬಡವರ ಅನುಕೂಲಕ್ಕಾಗಿ ಸರ್ಕಾರ ಜಾರಿಗೊಳಿಸಿದೆ.
ಈ ಮೊದಲು ಯೋಜನೆಯಡಿ ಸೌಲಭ್ಯ ಪಡೆಯಲು, ಎಬಿಎಆರ್‍ಕೆ ಕಾರ್ಡ್
ಜೊತೆಗೆ ಬಿಪಿಎಲ್ ಕಾರ್ಡ್, ಆಧಾರ್ ಕಾರ್ಡ್ ಮೊದಲಾದ ದಾಖಲೆಗಳನ್ನು
ಸಲ್ಲಿಸಬೇಕಿತ್ತು. ಆದರೆ ಯೋಜನೆಯನ್ನು ಸರಳೀಕರಣಗೊಳಿಸಿ,
ಸೌಲಭ್ಯವನ್ನು ಬಡವರು ಸುಲಭವಾಗಿ ಪಡೆಯುವಂತಾಗಲು,
ಕೇವಲ ಎಬಿಎಆರ್‍ಕೆ ಕಾರ್ಡ್ ಮಾತ್ರ ಸಲ್ಲಿಸಿದರೆ ಸಾಕು, ಉಳಿದ ಯಾವುದೇ
ದಾಖಲೆಯನ್ನು ಸಲ್ಲಿಸುವ ಅವಶ್ಯಕತೆ ಇಲ್ಲ ಎಂದು ಸರ್ಕಾರ
ಇತ್ತೀಚೆಗಷ್ಟೇ ಆದೇಶ ಹೊರಡಿಸಿದೆ. ಈ ಆದೇಶದಂತೆ ಸಾರ್ವಜನಿಕರು
ಎಬಿಎಆರ್‍ಕೆ ಯೋಜನೆಯ ಸೌಲಭ್ಯ ಪಡೆಯಲು, ಆಸ್ಪತ್ರೆಗಳಲ್ಲಿ
ಸರ್ಕಾರಿ ವೈದ್ಯರ ಶಿಫಾರಸು ಪತ್ರದ ಜೊತೆಗೆ ಕೇವಲ ಎಬಿಎಆರ್‍ಕೆ
ಕಾರ್ಡ್ ಮಾತ್ರ ದಾಖಲೆಯಾಗಿ ಸಲ್ಲಿಸಿದರೆ ಸಾಕು. ಯೋಜನೆ ವ್ಯಾಪ್ತಿಗೆ
ಒಳಪಡುವ ಎಲ್ಲ ಖಾಸಗಿ ಆಸ್ಪತ್ರೆಗಳು ಈ ಆದೇಶವನ್ನು ತಪ್ಪದೆ
ಪಾಲಿಸಬೇಕು. ವಿನಾಕಾರಣ, ಯಾರನ್ನೂ ಇತರೆ ದಾಖಲೆ ಕೋರಿ
ಅಲೆದಾಡಿಸುವುದಾಗಲಿ, ಸೇವೆಯನ್ನು ನಿರಾಕರಿಸುವುದಾಗಲಿ
ಮಾಡುವಂತಿಲ್ಲ. ಅಲ್ಲದೆ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ
ಪ್ರಮುಖ ಸ್ಥಳದಲ್ಲಿ ಎಬಿಎಆರ್‍ಕೆ ಯೋಜನೆಗೆ ಸಂಬಂಧಿಸಿ
ಸಂಪರ್ಕಿಸಬೇಕಾದ ಆರೋಗ್ಯ ಮಿತ್ರನ ಸಂಪರ್ಕ ಸಂಖ್ಯೆ ಹಾಗೂ
ವಿವರವನ್ನು ದೊಡ್ಡ ಬೋರ್ಡ್‍ನಲ್ಲಿ ನಮೂದಿಸಿ ಪ್ರದರ್ಶಿಸಬೇಕು
ಎಂದು ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಈವರೆಗೆ ಕೇವಲ 3.90 ಲಕ್ಷ ಜನರಿಗೆ ಮಾತ್ರ ಎಬಿಎಆರ್‍ಕೆ
ಕಾರ್ಡ್ ವಿತರಣೆ ಮಾಡಲಾಗಿದ್ದು, ರಾಜ್ಯ ಮಟ್ಟದಲ್ಲಿ ಜಿಲ್ಲೆಯು 25ನೇ
ಸ್ಥಾನದಲ್ಲಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ
ಜಿಲ್ಲಾಧಿಕಾರಿಗಳು, 30 ನೇ ಸ್ಥಾನಕ್ಕೆ ಯಾವಾಗ ಬರುತ್ತೀರಿ ಎಂದು
ವ್ಯಂಗ್ಯವಾಗಿ ಆರೋಗ್ಯ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿದರು.
ಬಡವರ ಅನುಕೂಲಕ್ಕಾಗಿ ಇರುವ ಸರ್ಕಾರದ ಯೋಜನೆ
ತಲುಪಿಸುವಲ್ಲಿ ಯಾವುದೇ ಕಾರಣಕ್ಕೂ ಹಿಂದೆ ಬೀಳಬಾರದು. ಪ್ರತಿ
ತಿಂಗಳು ಕನಿಷ್ಟ 80 ಸಾವಿರದಿಂದ 01 ಲಕ್ಷದವರೆಗೆ ಎಬಿಎಆರ್‍ಕೆ ಕಾರ್ಡ್
ವಿತರಣೆಯಾಗಬೇಕು. ಜಿಲ್ಲಾ, ತಾಲ್ಲೂಕು ಹಾಗೂ ಗ್ರಾಮ ಮಟ್ಟದಲ್ಲಿ
ವಿಶೇಷ ಶಿಬಿರವನ್ನು ಆಯೋಜಿಸಿ, ಎಲ್ಲ ಅರ್ಹ ಕುಟುಂಬಗಳಿಗೂ ತಪ್ಪದೆ
ಎಬಿಎಆರ್‍ಕೆ ಕಾರ್ಡ್ ತಯಾರಿಸಿ, ವಿತರಿಸಬೇಕು ಎಂದು ಡಿಸಿ ಅಧಿಕಾರಿಗಳಿಗೆ
ಸೂಚನೆ ನೀಡಿದರು.
ತಿರಸ್ಕøತ ಮನವಿಗಳನ್ನು ಪುನರ್‍ಪರಿಶೀಲಿಸಿ : ಎಬಿಎಆರ್‍ಕೆ
ಯೋಜನೆಯಡಿ ವೈದ್ಯಕೀಯ ನೆರವಿಗಾಗಿ ಮನವಿ ಸಲ್ಲಿಸಿದ ಸುಮಾರು
2000 ಪ್ರಕರಣಗಳಲ್ಲಿ, ಎಬಿಎಆರ್‍ಕೆ ಕಾರ್ಡ್ ಸಲ್ಲಿಸಿದಾಗ್ಯೂ, ವಿವಿಧ
ದಾಖಲೆಗಳನ್ನು ಸಲ್ಲಿಸಿಲ್ಲ ಎಂಬ ಕಾರಣ ತಿಳಿಸಿ, ತಿರಸ್ಕರಿಸಿರುವ ಸುಮಾರು
1000 ಕ್ಕೂ ಹೆಚ್ಚು ಪ್ರಕರಣಗಳಿವೆ ಎಂಬುದಾಗಿ ತಿಳಿದುಬಂದಿದೆ. ಕೇವಲ
ಎಬಿಎಆರ್‍ಕೆ ಕಾರ್ಡ್ ಸಲ್ಲಿಸಿದರೆ ಸಾಕು ಎಂಬುದಾಗಿ ಸರ್ಕಾರ ಹೊಸದಾಗಿ
ಹೊರಡಿಸಿರುವ ಆದೇಶದಂತೆ, ಅಂತಹ ಪ್ರಕರಣಗಳನ್ನು ಪುನರ್
ಪರಿಶೀಲಿಸಿ, ಇಂತಹ ಮನವಿಗಳ ಪೈಕಿ ನಿಜಕ್ಕೂ ಅರ್ಹವಿರುವ
ಪ್ರಕರಣಗಳನ್ನು ಗುರುತಿಸಿ, ಅಂತಹವರಿಗೆ ಯೋಜನೆಯಡಿ
ಉಚಿತವಾಗಿ ವೈದ್ಯಕೀಯ ಚಿಕಿತ್ಸೆ ದೊರಕಿಸಲು ಸಂಬಂಧಪಟ್ಟ
ಆಸ್ಪತ್ರೆಗಳು ಕ್ರಮ ವಹಿಸಬೇಕು. ಇದಕ್ಕೆ ಆರೋಗ್ಯ ಇಲಾಖೆ
ಅಧಿಕಾರಿಗಳು ಸಮನ್ವಯ ಮಾಡಬೇಕು ಎಂದು ಜಿಲ್ಲಾಧಿಕಾರಿಗಳು
ಸೂಚನೆ ನೀಡಿದರು.
ಬಾಕಿ ಮೊತ್ತ ಪಾವತಿಸಲು ಕ್ರಮ : ಎಬಿಎಆರ್‍ಕೆ ಯೋಜನೆ ವ್ಯಾಪ್ತಿಗೆ
ಸೇರಿರುವ ಬಹಳಷ್ಟು ಖಾಸಗಿ ಆಸ್ಪತ್ರೆಗಳು ಯೋಜನೆಯಡಿ
ಬಡವರಿಗೆ ವೈದ್ಯಕೀಯ ಚಿಕಿತ್ಸೆ ಕಲ್ಪಿಸಿದ್ದು, ಇದಕ್ಕೆ ಸಂಬಂಧಿಸಿದಂತೆ
ಯೋಜನೆಯಡಿ ಸರ್ಕಾರದಿಂದ ಪಾವತಿಸಲು ಬಾಕಿ ಇರುವ
ಮೊತ್ತವನ್ನು ಶೀಘ್ರ ಪಾವತಿಸಲು ಅಧಿಕಾರಿಗಳು ಕ್ರಮ
ಕೈಗೊಳ್ಳಬೇಕು. ಪ್ರಮುಖವಾಗಿ ಎಸ್‍ಎಸ್ ಆಸ್ಪತ್ರೆಗೆ ಈವರೆಗೆ 8.51
ಕೋಟಿ ರೂ. ಪಾವತಿಸಲಾಗಿದ್ದು, 5.65 ಕೋಟಿ ರೂ. ಪಾವತಿಸುವುದು
ಬಾಕಿ ಇದೆ. ಅದೇ ರೀತಿ ಬಾಪೂಜಿ ಆಸ್ಪತ್ರೆಗೆ 5.66 ಕೋಟಿ ರೂ.
ಪಾವತಿಯಾಗಿದ್ದು, 2.66 ಕೋಟಿ ರೂ. ಬಾಕಿ ಇದೆ. ಎಸ್‍ಎಸ್ ನಾರಾಯಣ ಹಾರ್ಟ್
ಸೆಂಟರ್‍ಗೆ 13.57 ಕೋಟಿ ರೂ. ಪಾವತಿಯಾಗಿದ್ದು, 2.72 ಕೋಟಿ ಬಾಕಿ ಇದೆ.
ಸುಕ್ಷೇಮಾ ಆಸ್ಪತ್ರೆಗೆ 4.72 ಕೋಟಿ ರೂ. ಪಾವತಿಯಾಗಿದ್ದು, 76
ಲಕ್ಷ ರೂ. ಬಾಕಿ ಇದೆ. ಜಿಲ್ಲೆಯಲ್ಲಿ 2018 ರಿಂದ ಈವರೆಗೆ ಎಬಿಎಆರ್‍ಕೆ
ಯೋಜನೆಯಡಿ ವಿವಿಧ ಆಸ್ಪತ್ರೆಗಳಿಗೆ ಒಟ್ಟು 48.16 ಕೋಟಿ
ರೂ.ಗಳನ್ನು ಪಾವತಿಸಲಾಗಿದ್ದು, 16.12 ಕೋಟಿ ರೂ. ಪಾವತಿ ಬಾಕಿ ಇದೆ.
ಬಾಕಿ ಇರುವ ಮೊತ್ತವನ್ನು ಸಂಬಂಧಪಟ್ಟ ಆಸ್ಪತ್ರೆಗಳಿಗೆ
ಪಾವತಿಸುವಂತೆ ಸರ್ಕಾರಕ್ಕೆ ಹಾಗೂ ಆರೋಗ್ಯ ಇಲಾಖೆ
ಆಯುಕ್ತರಿಗೆ ಪ್ರತ್ಯೇಕವಾಗಿ ಪತ್ರ ಬರೆದು
ಕೋರಲಾಗುವುದು ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಹೆಚ್ಚುವರಿ ಮೊತ್ತ ಮರುಪಾವತಿಸಲು ಸೂಚನೆ : ಎಬಿಎಆರ್‍ಕೆ
ಯೋಜನೆಯಡಿ ವಿವಿಧ ಫಲಾನುಭವಿಗಳು ಸಲ್ಲಿಸಿದ ದೂರುಗಳಿಗೆ
ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು ಕುಂದುಕೊರತೆಗಳನ್ನು
ಆಲಿಸಿದರು. ಕೋವಿಡ್ ಸೋಂಕಿನ ಎರಡನೆ ಅಲೆ ಸಂದರ್ಭದಲ್ಲಿ ವಿವಿಧ
ಖಾಸಗಿ ಆಸ್ಪತ್ರೆಗಳು ಸರಿಯಾಗಿ ಚಿಕಿತ್ಸೆ ನೀಡದೇ ಇರುವುದು,
ಹೆಚ್ಚು ಹಣ ವಸೂಲಿ ಮಾಡಿರುವುದು, ನಿಗದಿತ ಸಮಯಕ್ಕೆ ಚಿಕಿತ್ಸೆ
ನೀಡದಿರುವುದು ಸೇರಿದಂತೆ ವಿವಿಧ ಬಗೆಯ ದೂರುಗಳು
ಸಲ್ಲಿಕೆಯಾಗಿದ್ದವು. ಪ್ರಕರಣಗಳ ಕುರಿತು ಸಂಬಂಧಪಟ್ಟ
ದೂರುದಾರರು ಹಾಗೂ ಆಸ್ಪತ್ರೆಗಳೊಂದಿಗೆ ದಾಖಲೆಗಳ ಸಹಿತ
ವಿಚಾರಣೆ ನಡೆಸಿದ ಜಿಲ್ಲಾಧಿಕಾರಿಗಳು, 03 ಪ್ರಕರಣಗಳಲ್ಲಿ
ಹೆಚ್ಚುವರಿಯಾಗಿ ವಸೂಲಿ ಮಾಡಿರುವ 30 ಸಾವಿರ, 50 ಸಾವಿರ ಹಾಗೂ 75
ಸಾವಿರ ರೂ. ಗಳನ್ನು ಸಂಬಂಧಪಟ್ಟ ಫಲಾನುಭವಿಗಳಿಗೆ ಮರು
ಪಾವತಿಸುವಂತೆ ಆದೇಶಿಸಿದರು.
1.86 ಕೋಟಿ ರೂ. ವೆಚ್ಚದ ತನಿಖೆಗೆ ಸೂಚನೆ : ಚಿಗಟೇರಿ ಜಿಲ್ಲಾ
ಆಸ್ಪತ್ರೆಯಲ್ಲಿ ಎಬಿಎಆರ್‍ಕೆ ಯೋಜನೆಯಡಿ ವಿವಿಧ ಕಾರ್ಯಗಳಿಗಾಗಿ
ಸುಮಾರು 1.86 ಕೋಟಿ ರೂ. ಗಳನ್ನು ವೆಚ್ಚ ಮಾಡಲಾಗಿದೆ.
ನಿಯಮಾನುಸಾರ ವೆಚ್ಚ ಮಾಡುವ ಮುನ್ನ ಜಿಲ್ಲಾಧಿಕಾರಿಗಳ
ಅನುಮೋದನೆ ಪಡೆಯಬೇಕಿದ್ದು, ಆಸ್ಪತ್ರೆಯ ಜಿಲ್ಲಾ
ಅಧೀಕ್ಷಕರು ಜಿಲ್ಲಾಧಿಕಾರಿಗಳ ಗಮನಕ್ಕೆ ತಾರದೆ ವೆಚ್ಚ
ಮಾಡಿದ್ದಾರೆ, ಯೋಜನೆಯಡಿ ಯಾವ ಕಾರ್ಯಗಳಿಗೆ ವೆಚ್ಚ
ಮಾಡಿದ್ದಾರೆ, ವೆಚ್ಚಕ್ಕೆ ಅನುಸರಿಸಿರುವ ನಿಯಮಗಳೇನು ಎಂಬುದರ
ಬಗ್ಗೆ ಡಿಹೆಚ್‍ಒ ಹಾಗೂ ಲೆಕ್ಕ ಪರಿಶೋಧಕರು ತನಿಖೆ ನಡೆಸಿ, ಒಂದು
ದಿನಗಳ ಒಳಗಾಗಿ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳು ಸೂಚನೆ
ನೀಡಿದರು.
ಸಭೆಯಲ್ಲಿ ಜಿ.ಪಂ. ಸಿಇಒ ಡಾ. ವಿಜಯ ಮಹಾಂತೇಶ್ ದಾನಮ್ಮನವರ್,
ಡಿಹೆಚ್‍ಒ ಡಾ. ನಾಗರಾಜ್, ಮಹಾನಗರಪಾಲಿಕೆ ಆಯುಕ್ತ ವಿಶ್ವನಾಥ
ಮುದಜ್ಜಿ, ಐಎಂಎ ಅಧ್ಯಕ್ಷ ಡಾ. ಸೋಮಶೇಖರ್, ಚಿಗಟೇರಿ ಜಿಲ್ಲಾಸ್ಪತ್ರೆ
ಅಧೀಕ್ಷಕ ಡಾ. ಜಯಪ್ರಕಾಶ್ ಸೇರಿದಂತೆ ವಿವಿಧ ಖಾಸಗಿ ವೈದ್ಯಕೀಯ
ಸಂಸ್ಥೆಗಳ ಪ್ರತಿನಿಧಿಗಳು, ಯೋಜನೆಯ ಫಲಾನುಭವಿಗಳು
ಉಪಸ್ಥಿತರಿದ್ದರು.