ದಾವಣಗೆರೆ ಡಿ.23
ಕಳೆದ ಐದು ದಿನಗಳಿಂದ ಜಿಲ್ಲೆಯಲ್ಲಿ ಯಾವುದೇ ಕೊರೋನ
ಹೊಸ ಪ್ರಕರಣಗಳು ವರದಿಯಾಗಿಲ್ಲ ಹಾಗೂ ಕಳೆದೊಂದು
ತಿಂಗಳಿನಿಂದ ಕೊರೋನಾದಿಂದಾಗಿ ಯಾವುದೇ ಸಾವಿನ ಪ್ರಕರಣ
ವರದಿಯಾಗದಿರುವುದು ಜಿಲ್ಲಾಡಳಿತ ಕೊರೋನ ನಿಯಂತ್ರಣದಲ್ಲಿ
ಬಹುವಾಗಿ ಶ್ರಮಿಸುತ್ತಿರುವುದು ಕಂಡುಬರುತ್ತಿದೆ ಎಂದು ಜಿಲ್ಲಾ
ಉಸ್ತುವಾರಿ ಕಾರ್ಯದರ್ಶಿಗಳು, ಸಹಕಾರ ಇಲಾಖೆ ಪ್ರಧಾನ
ಕಾರ್ಯದರ್ಶಿ ಹಾಗೂ ಜಿಲ್ಲೆಯ ಮತದಾರರ ಪಟ್ಟಿಯ ವೀಕ್ಷಕ
ಅಧಿಕಾರಿಗಳಾದ ಎಸ್.ಆರ್.ಉಮಾಶಂಕರ್ ಹೇಳಿದರು.
ಜಿಲ್ಲಾಡಳಿತ ಭವನದಲ್ಲಿ ಕೋವಿಡ್ ನಿಯಂತ್ರಣ, ಬೆಳೆ ಹಾನಿ ಹಾಗೂ
ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ಗುರುವಾರ ನಡೆದ
ಸಭೆಯಲ್ಲಿ ಮಾತನಾಡಿದ ಅವರು, ಕೊರೋನ ನಿಯಂತ್ರಣದಲ್ಲಿ ಎಲ್ಲಾ
ಅಧಿಕಾರಿಗಳು ಒಂದು ತಂಡದಂತೆ ಕಾರ್ಯನಿರ್ವಹಿಸಿದ ಪರಿಣಾಮವಾಗಿ
ಜಿಲ್ಲೆ ಉತ್ತಮ ಸ್ಥಿತಿಯಲ್ಲಿದ್ದು, ಪಾಸಿಟಿವಿಟಿ ದರ ಪ್ರಸ್ತುತ
ಶೇ0.04ರಷ್ಟಿದೆ, ಪಾಸಿಟಿವ್ ಬಂದ ಪ್ರಕರಣಗಳಲ್ಲಿಯೂ ಕಡಿಮೆ
ತೀವ್ರತೆಯ ರೋಗ ಲಕ್ಷಣಗಳಿದ್ದು ಚೇತರಿಸಿಕೊಳ್ಳುತಿದ್ದಾರೆ.
ಲಸಿಕೆ ನೀಡಿಕೆಯಲ್ಲಿ ಜಿಲ್ಲೆಯಲ್ಲಿ ಮೊದಲ ಡೋಸ್ ಪಡೆದವರು ಶೇ 99
ರ ಸನಿಹದಲ್ಲಿದ್ದು, ಎರಡನೇ ಡೋಸನ್ನು ಶೇ 75 ರಷ್ಟು
ಪಡೆದಿದು, ಲಸಿಕೆ ನೀಡಿಕೆಯಲ್ಲಿ ರಾಜ್ಯದ ಸರಾಸರಿಗಿಂತ ಮೇಲಿದ್ದೇವೆ.
ಹಾಗಾಗಿ ಇದೇ ರೀತಿ ನಿಯಂತ್ರಣದಲ್ಲಿದ್ದರೆ ಮೂರನೇ ಅಲೆಯಲ್ಲಿ
ಬರುತ್ತಿರುವ ಒಮಿಕ್ರಾನ್ ವೈರಾಣುವನ್ನು ಪರಿಣಾಮಕಾರಿಯಾಗಿ
ಎದುರಿಸಬಹುದಾಗಿದ್ದು, 3 ನೇ ಅಲೆ ತಡೆಯುವ ನಿಟ್ಟಿನಲ್ಲಿ ಅಗತ್ಯ
ಆಕ್ಸಿಜನ್, ಔಷಧಿ, ಬೆಡ್ ಮುಂತಾದವುಗಳನ್ನು ಸಜ್ಜುಗೊಳಿಸಿಕೊಂಡು
ಖಾಸಗಿ ಮೆಡಿಕಲ್ ಕಾಲೇಜುಗಳ ಸಹಕಾರದೊಂದಿಗೆ ಸಿದ್ಧರಾಗಿರುವಂತೆ
ಸೂಚಿಸಿದರು.
ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ, ಈಗಾಗಲೆ ಆಕ್ಸಿಜನ್
ಪ್ಲಾಂಟ್ ನಿರ್ವಹಣೆಗೆ 11 ಟೆಕ್ನೀಷಿಯನ್ ಗಳನ್ನು
ನೇಮಿಸಿಕೊಳ್ಳಲಾಗಿದೆ. ಬೆಡ್ ಗಳ ವ್ಯವಸ್ಥೆ, ಮಾನವ ಸಂಪನ್ಮೂಲ
ಸೇರಿದಂತೆ ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ ಎಂದರು.
ಮತದಾರರ ಪಟ್ಟಿ ಪರಿಷ್ಕರಣೆಯ ಬಗೆಗೆ ಮಾಹಿತಿ ಪಡೆದ
ಕಾರ್ಯದರ್ಶಿಗಳು, ಹೊಸದಾಗಿ ನೋಂದಣಿಗೆ ಅರ್ಜಿ ಸಲ್ಲಿಸಿರುವ 18 ರಿಂದ
21 ವರ್ಷದೊಳಗಿನ ಅರ್ಜಿಗಳನ್ನು ವಿವಿಧ ಹಂತಗಳಲ್ಲಿ ಪರಿಶಿಲಿಸಿ,
ಯಾವ ಅರ್ಹ ಮತದಾರರೂ ಪಟ್ಟಿಯಿಂದ ಬಿಟ್ಟು ಹೋಗದಂತೆ
ನೋಡಿಕೊಳ್ಳಲಾಗಿದೆ ಮತ್ತು ಪರಿಷ್ಕರಣೆ ಸುಸೂತ್ರವಾಗಿ ಆಗಿದೆ.
ನಾನು ಕೆಲವನ್ನ ಪರಿಶಿಲಿಸಿದ್ದೇನೆ ಎಂದರು. ಯಾವುದೇ ಮತದಾರರ
ಹೆಸರನ್ನು ಪಟ್ಟಿಯಿಂದ ತೆಗೆಯುವಾಗ ಅವರಿಗೆ ನೊಟೀಸ್ ನೀಡಿ, ಅವರ
ಅಹವಾಲು, ಕುಂದು ಕೊರತೆಗಳನ್ನ ಆಲಿಸಿ ಶೇ. ನೂರರಷ್ಟು
ಪರಿಶೀಲನೆಗೊಳಪಡಿಸಲಾಗಿದೆ. ಕಳೆದ ಐದಾರು ವರ್ಷಗಳಿಂದ
ಚುನಾವಣಾ ಆಯೋಗ ಜಿಲ್ಲೆಗಳಿಗೆ ವೀಕ್ಷಕರನ್ನು ನೇಮಿಸಿ, ಬಹಳ
ಕಟ್ಟುನಿಟ್ಟಾಗಿ ಮತದಾರರ ಪಟ್ಟಿ ಪರಿಷ್ಕರಣೆಗೆ ಆದ್ಯತೆ ನೀಡಿದೆ.
ಎರಡು ಕಡೆ ಹೆಸರಿರುವುದು, ಅಕ್ಕಪಕ್ಕದ ಜಿಲ್ಲೆಯಲ್ಲಿ
ಮತದಾರರ ಪಟ್ಟಿಯಲ್ಲಿರುವಂತಹ ಪ್ರಕರಣಗಳು ಆದಷ್ಟು
ಕಡಿಮೆಯಾಗಿವೆ. ಅರ್ಹ ಮತದಾರರಿಗೆ ಜನವರಿ 25 ರೊಳಗೆ
ಮತದಾರರ ಗುರುತಿನ ಪತ್ರ ನೀಡಲಾಗುವುದು ಎಂದರು.
ಅತಿವೃಷ್ಠಿಯಿಂದಾಗಿ ನವೆಂಬರ್ ನಲ್ಲಿ ವಾಡಿಕೆಗಿಂತ ಶೇ.400 ರಷ್ಟು ಹೆಚ್ಚಿನ
ಮಳೆಯಾಗಿದ್ದು, 15,862 ಹೆ ಕ್ಟೇರ್‍ನಲ್ಲಿ ವಿವಿಧ ಬೆಳೆಗಳು
ನಾಶವಾಗಿವೆ. ಈ ಸಂಬಂಧ ಜಂಟಿ ಸಮೀಕ್ಷೆ ನಡೆಸಿ 13.74 ಕೋಟಿ ರೂ.
ಪರಿಹಾರಕ್ಕೆ ಬೇಡಿಕೆ ಸಲ್ಲಿಸಲಾಗಿದೆ. ಈಗಾಗಲೆ 19,921 ರೈತರಿಗೆ 9.33
ಕೋಟಿ ರೂ. ಪರಿಹಾರ ಆಯಾ ರೈತರ ಖಾತೆಗಳಿಗೆ ಸಂದಾಯವಾಗಿದೆ.
ಅದೇ ರೀತಿ ತೋಟಗಾರಿಕೆ ಬೆಳೆಗಳಿಗೆ ಪರಿಹಾರವಾಗಿ 8217 ರೈತರಿಗೆ 25
ಕೋಟಿ ರೂ. ಸಂದಾಯವಾಗಿದೆ.
ಹಿಂಗಾರು ಬೆಳೆಗೆ ಹೆಚ್ಚು ರೈತರಿಂದ ವಿಮೆ ಕಟ್ಟಿಸಲು ಜಾಗೃತಿ
ಮೂಡಿಸಿ, ರೈತರು ಶೇ.2 ರಷ್ಟು ವಿಮೆ ಪಾವತಿಸುತ್ತಾರೆ. ಉಳಿದ ಶೇ.98
ರಷ್ಟು ವಂತಿಗೆಯನ್ನು ಸರ್ಕಾರ ಪಾವತಿಸುತ್ತದೆ ಹಾಗಾಗಿ ರೈತರಿಗೆ
ಬೆಳೆ ವಿಮೆ ಮಾಡಿಸುವುದರಿಂದ ಆರ್ಥಿಕ ನಷ್ಟವಾಗುವುದಿಲ್ಲವೆಂದರು.
ಮನೆ ಹಾನಿ ಪ್ರಕರಣಗಳಲ್ಲಿ 01 ಮನೆ ಪೂರ್ಣಗೊಂಡಿದ್ದು, ಉಳಿದ 74
ರಲ್ಲಿ 40 ಮನೆಗಳು ಆರಂಭ ಹಂತದಲ್ಲಿವೆ ಎಂದು ಅಧಿಕಾರಿಗಳು
ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ,ಬಿ. ರಿಷ್ಯಂತ್, ಜಿ.ಪಂ. ಸಿಇಒ ಡಾ.
ವಿಜಯ್ ಮಹಾಂತೇಶ್ ದಾನಮ್ಮನವರ್, ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ
ಪ್ರಭು, ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್, ಡಿಹೆಚ್‍ಒ ಡಾ.
ನಾಗರಾಜು, ಕೃಷಿ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸ್ ಚಿಂತಾಲ್, ಪಶು
ಸಂಗೋಪನ ಇಲಾಖೆ ಉಪ ನಿರ್ದೇಶಕ ಡಾ. ಚಂದ್ರಶೇಖರ್ ಸುಂಕದ್
ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳಿದ್ದರು.