ಬೇಸಿಗೆ ಹಂಗಾಮಿನಲ್ಲಿ ಬೆರಕೆ ಭತ್ತ ನಿರ್ವಹಣೆ ಕ್ರಮಗಳ
ಬಗ್ಗೆ ಕೃಷಿ ಇಲಾಖೆಯು ರೈತರಿಗೆ ಸಲಹೆಗಳನ್ನು ನೀಡಿದೆ. ದಾವಣಗೆರೆ
ಜಿಲ್ಲೆಯಾದ್ಯಂತ ಬೇಸಿಗೆ ಹಂಗಾಮಿನಲ್ಲಿ ವಿವಿಧ ನೀರಾವರಿ ಮೂಲಗಳಿಂದ
ಸುಮಾರು 50,000 ಹೆಕ್ಟೇರ್ ಪ್ರದೇಶದಲ್ಲಿ ಭತ್ತ
ಬೆಳೆಯಲಾಗುತ್ತದೆ. ಈ ಸಮಯದಲ್ಲಿ ರೈತರು ಸಸಿ ಮಡಿ
ತಯಾರಿಸುವ ತಯಾರಿಯಲ್ಲಿದ್ದಾರೆ. ಈ ಸಮಯದಲ್ಲಿ ಬೆರಕೆ ಭತ್ತ
ನಿರ್ವಹಣೆ ಬಗ್ಗೆ ನಿಗಾ ವಹಿಸುವುದು ತುಂಬಾ ಮುಖ್ಯವಾಗಿರುತ್ತದೆ.
ಮುಂಗಾರು ಹಂಗಾಮಿನಲ್ಲಿ ವಿವಿಧ ತಳಿಗಳನ್ನು ರೈತರು ನಾಟಿ
ಮಾಡಿದ್ದು, ಭತ್ತದ ಬೆಳೆಯನ್ನು ಕಾಲಾವಧಿಗನುಗುಣವಾಗಿ
ನವೆಂಬರ್ ತಿಂಗಳ ಅಂತ್ಯದಿಂದ ಡಿಸೆಂಬರ್ವರೆಗೂ ಕಟಾವು ಮಾಡಿದ್ದಾರೆ.
ಈಗ ಬಹುತೇಕ ಭತ್ತದ ಕೊಯ್ಲನ್ನು ಯಂತ್ರದ ಮೂಲಕ
ಮಾಡುವುದರಿಂದ ಸಾಕಷ್ಟು ಪ್ರಮಾಣದ ಭತ್ತದ ಬೀಜಗಳು
ಗದ್ದೆಯಲ್ಲಿ ಉದುರುತ್ತವೆ. ಹೀಗೆ ಉದುರಿದ ಕಾಳುಗಳು ಬೇಸಿಗೆ
ಹಂಗಾಮಿನಲ್ಲಿ ಬೆಳೆದು ನಿಂತು ಇತರೆ ತಳಿಯೊಂದಿಗೆ
ಬೆರಕೆಯಾಗುತ್ತವೆ.
ಬೆರಕೆ ಭತ್ತ ಗದ್ದೆಯಲ್ಲಿ ಇದ್ದಲ್ಲಿ ಬೇಸಾಯ ಹಾಗೂ ಕೊಯಿಲಿನ
ನಿರ್ವಹಣೆ ಏರು ಪೇರಾಗುತ್ತದೆ. ಹೀಗಾಗಿ ಮುಂಜಾಗ್ರತೆ ಕ್ರಮವಾಗಿ
ಉತ್ತಮ ಭೂಮಿ ಸಿದ್ಧತೆ ಅತ್ಯಗತ್ಯ. ಮುಂಗಾರಿನಲ್ಲಿ ಬೆಳೆದ
ತಳಿಯನ್ನೇ ಬೇಸಿಗೆಯಲ್ಲಿ ಬೆಳೆದಲ್ಲಿ ಸಮಸ್ಯೆಯಾಗುವುದಿಲ್ಲ.
ಆದರೆ ಇತರೆ ತಳಿಗಳನ್ನು ಬೆಳೆಯವುದಾದರೆ ಮುಂಜಾಗ್ರತೆ
ವಹಿಸಬೇಕಾಗುತ್ತದೆ.
ಮುಂಗಾರು ಹಂಗಾಮಿನ ಭತ್ತ ಕಟಾವು ಮಾಡಿದ ತಕ್ಷಣ
ಗದ್ದೆಯಲ್ಲಿರುವ ತೇವಾಂಶ ಬಳಸಿಕೊಂಡು ನೇಗಿಲು ಅಥವಾ
ಟ್ರಾಕ್ಟರ್ನಿಂದ ಒಂದು ಸಾರಿ ಉಳುಮೆ ಮಾಡಿ ನಂತರ 8-10
ದಿನದವರೆಗಾದರೂ ನೀರು ನಿಲ್ಲಿಸಿ ಕೊಳೆಯಲು ಬಿಡಬೇಕು, ಹೀಗೆ
ಮಾಡುವುದರಿಂದ ಮುಂಗಾರು ಹಂಗಾಮಿನಲ್ಲಿ ಗದ್ದೆಯಲ್ಲಿ ಉದುರಿದ
ಬೀಜಗಳು ಸುಪ್ತಾವಸ್ಥೆ ಮುಗಿಸಿ ಮೊಳಕೆಯೊಡೆಯುತ್ತವೆ.
ನಂತರ ಮತ್ತೊಮ್ಮೆ ಟ್ರ್ಯಾಕ್ಟರ್ ನಿಂದ ರೊಳ್ಳೆ ಹೊಡೆದು
ಮೊಳಕೆಯೊಡೆದ ಭತ್ತವನ್ನು ಭೂಮಿಗೆ ಸೇರಿಸುವುದರಿಂದ
ಬೆರಕೆ ಭತ್ತ ಸಮಸ್ಯೆಯನ್ನು ನಿರ್ವಹಿಸಬಹುದು ಎಂದು ಜಂಟಿ ಕೃಷಿ
ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.