ಕೋವಿಡ್ ಸೋಂಕು ದೃಢಪಟ್ಟು, ಯಾವುದೇ ರೋಗ
ಲಕ್ಷಣಗಳು ಇಲ್ಲದಿರುವಂತಹ ರೋಗಿಗಳನ್ನು ಖಾಸಗಿ
ಆಸ್ಪತ್ರೆಗಳು ಅಡ್ಮಿಟ್ ಮಾಡಿಕೊಂಡು ಕೋವಿಡ್‍ಗಾಗಿ ಚಿಕಿತ್ಸೆ ನೀಡುವ
ಅಗತ್ಯವಿಲ್ಲ. ರೋಗಲಕ್ಷಣಗಳಿಲ್ಲದವರು ಹೋಂ ಐಸೋಲೇಷನ್‍ನ
ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿಕೊಂಡು, ವೈದ್ಯರ
ಸೂಚನೆಯಂತೆ ಔಷಧೋಪಚಾರಗಳೊಂದಿಗೆ ಮನೆಯಲ್ಲಿಯೇ
ಇರುವುದನ್ನು ಅಧಿಕಾರಿಗಳು ಖಾತ್ರಿಪಡಿಸಿಕೊಳ್ಳಬೇಕು ಎಂದು
ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದರು.
ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣ ಕುರಿತಂತೆ ಜಿಲ್ಲಾಡಳಿತ
ಭವನದ ತುಂಗಭದ್ರಾ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ
ತುರ್ತು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಜ್ಯದಲ್ಲಿ
ಕೋವಿಡ್‍ನ 03ನೇ ಅಲೆ ಕಂಡುಬರುತ್ತಿರುವುದು ದೃಢಪಟ್ಟಿದ್ದು,
ನಿಯಂತ್ರಣ ಸಂಬಂಧ ಸರ್ಕಾರ ಹಲವು ಮಾರ್ಗಸೂಚಿಗಳನ್ನು
ಹೊರಡಿಸಿದೆ. ಕೋವಿಡ್ 02ನೇ ಅಲೆ ಸಂದರ್ಭದಲ್ಲಿ ಖಾಸಗಿ
ಆಸ್ಪತ್ರೆಗಳು ಕೋವಿಡ್ ದೃಢಪಟ್ಟು, ಯಾವುದೇ
ರೋಗಲಕ್ಷಣಗಳು ಕಂಡುಬರದ ರೋಗಿಗಳನ್ನೂ ಕೂಡ
ಆಸ್ಪತ್ರೆಗೆ ದಾಖಲಿಸಿಕೊಂಡು, ಹಣ ಸುಲಿಗೆ ಮಾಡಿರುವುದು
ಕಂಡುಬಂದಿದೆ. ಇದು ಜನರ ರಕ್ತ ಹೀರುವ ಕಾಲವಲ್ಲ.
ತೊಂದರೆಗೊಳಗಾದವರಿಗೆ ನೆರವು ನೀಡಿ, ಅವರ ಬದುಕು
ಕಟ್ಟಿಕೊಡುವಂತಹ ಕಾಲವಾಗಿದೆ. ಆದರೆ ಜಿಲ್ಲೆಯಲ್ಲಿ ಖಾಸಗಿ
ಆಸ್ಪತ್ರೆಗಳು ನಿಯಮಗಳನ್ನು ಗಾಳಿಗೆ ತೂರಿ, ಜನರಿಂದ ಹಣ
ಸುಲಿಗೆ ಮಾಡಿದ್ದು ಕಂಡುಬಂದಿದೆ. ಅದೇ ತಪ್ಪನ್ನು ಈ ಬಾರಿ ಜಿಲ್ಲೆಯಲ್ಲಿ
ಆಗಲು ಬಿಡುವುದಿಲ್ಲ. ಸೋಂಕು ದೃಢಪಟ್ಟು, ರೋಗದ
ಯಾವುದೇ ಲಕ್ಷಣಗಳಿಲ್ಲದವರನ್ನು ಆಸ್ಪತ್ರೆಗೆ ಅಡ್ಮಿಟ್
ಮಾಡಿಕೊಂಡು, ಅನಗತ್ಯವಾಗಿ ಹಣ ಸುಲಿಗೆ ಮಾಡತಕ್ಕದ್ದಲ್ಲ. ಖಾಸಗಿ
ಆಸ್ಪತ್ರೆಗಳು ಕೂಡ ಜ್ವರ, ನೆಗಡಿ, ಕೆಮ್ಮು ಮುಂತಾದ ರೋಗ
ಲಕ್ಷಣ ಹೊಂದಿರುವವರಿಗೆ ಕಡ್ಡಾಯವಾಗಿ ಆರ್‍ಟಿಪಿಸಿಆರ್ ಪರೀಕ್ಷೆಗೆ
ಶಿಫಾರಸು ಮಾಡಬೇಕು, ಹಾಗೂ ದಿನನಿತ್ಯ ಈ ಕುರಿತ ವರದಿಯನ್ನು
ಆರೋಗ್ಯ ಇಲಾಖೆಗೆ ಸಲ್ಲಿಸಬೇಕು. ಸಾರ್ವಜನಿಕರೂ ಕೂಡ,
ಸೋಂಕು ದೃಢಪಟ್ಟಿದ್ದರೂ, ಯಾವುದೇ ರೋಗ ಲಕ್ಷಣಗಳು
ಇಲ್ಲದಿದ್ದಲ್ಲಿ, ವೈದ್ಯರ ಸಲಹೆ, ಸೂಚನೆಯಂತೆ ಔಷಧೋಪಚಾರ
ಪಡೆದು, ಮನೆಯಲ್ಲಿಯೇ ಹೋಂ ಐಸೋಲೇಷನ್ ಆಗಿರಬೇಕು.

ಇಂತಹವರ ಮನೆಗೆ ಹೋಂ ಐಸೋಲೇಷನ್ ಸ್ಟಿಕ್ಕರ್‍ಗಳನ್ನು
ಅಧಿಕಾರಿಗಳು ಅಂಟಿಸಿ, ಮನೆಯಲ್ಲಿಯೇ ಅವರು ಕಡ್ಡಾಯವಾಗಿ
ಇರುವಂತೆ ನಿಗಾ ವಹಿಸಬೇಕು. ಒಂದು ವೇಳೆ ಮನೆಯಿಂದ
ಹೊರಗಡೆ ಅಡ್ಡಾಡುವುದು ಕಂಡುಬಂದಲ್ಲಿ, ಅಂತಹವರ ಮೇಲೆ
ಸಾಂಕ್ರಾಮಿಕ ರೋಗ ನಿಯಂತ್ರಣ ಕಾಯ್ದೆಯನುಸಾರ ಪ್ರಕರಣ
ದಾಖಲಿಸಲು ಕ್ರಮ ವಹಿಸಬೇಕು. ರೋಗ ಲಕ್ಷಣಗಳಿದ್ದಲ್ಲಿ ಮಾತ್ರ
ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯಬೇಕು.
ಸುಖಾಸುಮ್ಮನೆ ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗಿ ಹಣ
ಕಳೆದುಕೊಳ್ಳಬೇಡಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡ
ಜಿಲ್ಲಾಧಿಕಾರಿಗಳು, ಖಾಸಗಿ ಆಸ್ಪತ್ರೆಗಳು, ಸರ್ಕಾರ ನಿಗದಿಪಡಿಸಿರುವ
ದರ ಮಾತ್ರ ಪಡೆಯಬೇಕು. ಹೆಚ್ಚಿನ ಹಣ ವಸೂಲಿ ಮಾಡಿದಲ್ಲಿ,
ಅಂತಹವರ ವಿರುದ್ಧ ಕಾನೂನಾತ್ಮಕ ಕ್ರಮ ಕೈಗೊಳ್ಳುವ
ಜೊತೆಗೆ, ಅಂತಹ ಆಸ್ಪತ್ರೆಗಳನ್ನು ಬಂದ್ ಮಾಡಿಸಲಾಗುವುದು
ಎಂದು ಇದೇ ಸಂದರ್ಭದಲ್ಲಿ ಎಚ್ಚರಿಕೆ ನೀಡಿದರು.
ಕೋವಿಡ್ ಟೆಸ್ಟ್ ಹೆಚ್ಚಿಸಿ : ಕೋವಿಡ್ ಸೋಂಕು ದೃಢಪಟ್ಟವರ
ಪ್ರಾಥಮಿಕ ಹಾಗೂ ದ್ವಿತೀಯ ಹಂತದ ಸಂಪರ್ಕಿತರನ್ನು
ಪತ್ತೆಹಚ್ಚಿ, ಅವರೆಲ್ಲರಿಗೂ ಕೋವಿಡ್ ಟೆಸ್ಟ್ ತಪ್ಪದೆ ಮಾಡಬೇಕು.
ಆದರೆ ಜಿಲ್ಲೆಯಲ್ಲಿ ಸೋಂಕಿತ ವ್ಯಕ್ತಿಗಳ ಸಂಪರ್ಕಿತರ ಪತ್ತೆ
ಕಾರ್ಯ ಸಮರ್ಪಕವಾಗಿ ನಡೆಯುತ್ತಿಲ್ಲ ಎಂಬ ಮಾಹಿತಿ ಇದೆ. ಇದರಲ್ಲಿ
ನಿರ್ಲಕ್ಷ್ಯ ತೋರುವವರ ವಿರುದ್ಧ ಶಿಸ್ತು ಕ್ರಮ
ಜರುಗಿಸಲಾಗುವುದು. ಇಲ್ಲದಿದ್ದರೆ, ಸೋಂಕಿತರು ಎಲ್ಲೆಂದರಲ್ಲಿ
ಅಡ್ಡಾಡಿ, ಜಿಲ್ಲೆಯಲ್ಲಿ ಕೋವಿಡ್ ಸೋಂಕು ಕಾಡ್ಗಿಚ್ಚಿನಂತೆ ಹರಡುವ ಎಲ್ಲ
ಸಾಧ್ಯತೆಗಳಿವೆ. ಹೀಗಾಗಿ ಅಧಿಕಾರಿಗಳು ಇದನ್ನು ಗಂಭೀರವಾಗಿ
ಪರಿಗಣಿಸಬೇಕು. ಆಯಾ ತಾಲೂಕು ನೋಡಲ್ ಅಧಿಕಾರಿಗಳು, ನಿತ್ಯ
ವರದಿ ಸಲ್ಲಿಸಬೇಕು. ಅಲ್ಲದೆ ಆಯಾ ತಾಲ್ಲೂಕಿನ ವೈದ್ಯಕೀಯ
ವ್ಯವಸ್ಥೆಯ ಸಿದ್ಧತೆ ಕುರಿತಂತೆಯೂ ವರದಿ ಸಲ್ಲಿಸಬೇಕು ಎಂದು
ಜಿಲ್ಲಾಧಿಕಾರಿಗಳು ತಾಕಿತು ಮಾಡಿದರು.
ಖಾಸಗಿ ಆಸ್ಪತ್ರೆ, ಮೆಡಿಕಲ್ ಕಾಲೇಜುಗಳ ಸಹಕಾರ : ಜಿಲ್ಲೆಯಲ್ಲಿ
ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್ ಪ್ರಕರಣಗಳು ಕಂಡುಬಂದಲ್ಲಿ
ಜಿಲ್ಲಾಸ್ಪತ್ರೆಯನ್ನು ಸಂಪೂರ್ಣ ಕೋವಿಡ್
ಆಸ್ಪತ್ರೆಯನ್ನಾಗಿಸಲಾಗುವುದು. ಈ ವೇಳೆ ಜಿಲ್ಲಾ ಆಸ್ಪತ್ರೆಗೆ
ಕೋವಿಡ್ ಹೊರತುಪಡಿಸಿ, ಇತರೆ ಖಾಯಿಲೆಗಳಿಗಾಗಿ ಬರುವ
ರೋಗಿಗಳನ್ನು ಖಾಸಗಿ ಆಸ್ಪತ್ರೆಗಳಿಗೆ ಶಿಫಾರಸು
ಮಾಡಲಾಗುವುದು. ಅಂತಹ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡುವ
ಮೂಲಕ ಖಾಸಗಿ ಆಸ್ಪತ್ರೆಗಳು, ವೈದ್ಯಕೀಯ ಕಾಲೇಜುಗಳು
ಸಹಕರಿಸಬೇಕು. ಸರ್ಕಾರದ ಆದೇಶದಂತೆ ಖಾಸಗಿ ಆಸ್ಪತ್ರೆಗಳು
ಶೇ. 50 ರಷ್ಟು ಹಾಗೂ ಖಾಸಗಿ ಮೆಡಿಕಲ್ ಕಾಲೇಜುಗಳು ಶೇ. 75
ರಷ್ಟು ಬೆಡ್‍ಗಳನ್ನು ಸರ್ಕಾರಕ್ಕೆ ಬಿಟ್ಟುಕೊಡಬೇಕು. ಈ ಬಗ್ಗೆ
ಯಾವುದೇ ರಾಜಿ ಇಲ್ಲ. ಸರ್ಕಾರಿ ವೈದ್ಯರಿಂದ ಶಿಫಾರಸು ತರುವ
ರೋಗಿಗಳಿಗೆ ಎಬಿಎಆರ್‍ಕೆ ಯೋಜನೆಯಡಿ ದಾಖಲಿಸಿ, ಉಚಿತವಾಗಿ ಚಿಕಿತ್ಸೆ
ಕೊಡಬೇಕು, ಸರ್ಕಾರದ ಸೂಚನೆಯಂತೆ ಎಬಿಎಆರ್‍ಕೆ ಕಾರ್ಡ್
ಹೊರತುಪಡಿಸಿ, ರೋಗಿಗಳಿಂದ ಯಾವುದೇ ದಾಖಲೆ ಕೇಳಬಾರದು
ಅಲ್ಲದೆ, ಇಂತಹವರಿಂದ ಯಾವುದೇ ಬಗೆಯ ಮುಂಗಡ ಹಣ
ಪಾವತಿಸಿಕೊಳ್ಳುವಂತಿಲ್ಲ. ಕಳೆದ ಬಾರಿ ಇಂತಹ ಅನೇಕ
ದೂರುಗಳು ಬಂದಿವೆ ಎಂದು ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದರು.
ಶಬರಿಮಲೆ ಯಾತ್ರಿಗಳ ಬಗ್ಗೆ ನಿಗಾ : ಸಂಕ್ರಾಂತಿ ನಿಮಿತ್ತ ಶಬರಿಮಲೆ
ಯಾತ್ರೆ ಕೈಗೊಳ್ಳುವವರ ಸಂಖ್ಯೆ ಅಧಿಕವಾಗಿದ್ದು, ಅದರ
ಜೊತೆಗೆ ತಮಿಳುನಾಡಿಗೂ ಓಂ ಶಕ್ತಿ ಪೂಜೆ ಯಾತ್ರಾರ್ಥಿಗಳು
ಹೋಗಿ ಬರುತ್ತಿರುವುದು ಕಂಡುಬಂದಿದೆ. ಕೇರಳ, ಮಹಾರಾಷ್ಟ್ರ,
ತಮಿಳುನಾಡು ರಾಜ್ಯಗಳಿಂದ ಬಂದವರ ಬಗ್ಗೆ ನಿಗಾ ವಹಿಸುವುದು

ಅಗತ್ಯವಾಗಿದೆ. ಎಲ್ಲ ಯಾತ್ರಾರ್ಥಿಗಳಿಗೆ ಆರ್‍ಟಿಪಿಸಿಆರ್ ಪರೀಕ್ಷೆ
ಮಾಡಬೇಕು. 72 ಗಂಟೆಗಳ ಅವಧಿಯಲ್ಲಿನ ನೆಗೆಟಿವ್ ವರದಿ
ಇರುವುದನ್ನು ಖಚಿತಪಡಿಸಿಕೊಳ್ಳಬೇಕು. ಆರ್‍ಟಿಒ ಅಧಿಕಾರಿಗಳು,
ಟ್ರಾವೆಲ್ ಏಜೆನ್ಸಿಯವರೊಂದಿಗೆ ಸಂಪರ್ಕ ಸಾಧಿಸಿ, ಟ್ರಾವೆಲ್
ಏಜೆನ್ಸಿಗಳು, ಕೇರಳ, ಮಹಾರಾಷ್ಟ್ರ, ತಮಿಳುನಾಡಿಗೆ
ಹೋಗಿಬರುವುದಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡುವಂತಾಗಬೇಕು.
ಇದೇ ರೀತಿ ಜಿಲ್ಲೆಯ ಎಲ್ಲ ನಗರ, ಸ್ಥಳೀಯ ಸಂಸ್ಥೆಗಳ
ಮುಖ್ಯಾಧಿಕಾರಿಗಳು ಮಾಹಿತಿ ಸಂಗ್ರಹಿಸಿ ಜಿಲ್ಲಾಡಳಿತಕ್ಕೆ ಸಲ್ಲಿಸಬೇಕು
ಎಂದರು. ಮಾಹಿತಿ ನೀಡದ ಟ್ರಾವೆಲ್ಸ್‍ಗಳ ಅಂತರರಾಜ್ಯ ಓಡಾಟದ
ಪರವಾನಗಿ ರದ್ದುಪಡಿಸಲು ಕ್ರಮ ಕೈಗೊಳ್ಳಬೇಕು ಎಂದು
ಜಿಲ್ಲಾಧಿಕಾರಿಗಳು ಹೇಳಿದರು. ಎಸ್‍ಪಿ ಸಿ.ಬಿ. ರಿಷ್ಯಂತ್ ಮಾತನಾಡಿ, ಈ ಕುರಿತು
ಟ್ರಾವೆಲ್ ಏಜೆನ್ಸಿಯವರೊಂದಿಗೆ ಸಭೆ ನಡೆಸಿ ತಾಕೀತು
ಮಾಡಲಾಗುವುದು ಎಂದರು.
ಕೋವಿಡ್ ಕೇರ್ ಸೆಂಟರ್ ಪ್ರಾರಂಭಕ್ಕೆ ಸಿದ್ಧತೆ : ಜಿಲ್ಲೆಯಲ್ಲಿ ಕೋವಿಡ್
3ನೇ ಅಲೆ ಎದುರಿಸಲು ಜಿಲ್ಲಾಡಳಿತ ಸಕಲ ರೀತಿಯಲ್ಲಿ ಸಜ್ಜಾಗಿದೆ. ಜಿಲ್ಲಾ
ಆಸ್ಪತ್ರೆ ಸೇರಿದಂತೆ ಎಲ್ಲ ತಾಲ್ಲೂಕು ಆಸ್ಪತ್ರೆಗಳನ್ನು ಈಗಾಗಲೆ
ಸಜ್ಜುಗೊಳಿಸಲಾಗಿದೆ. ಆಕ್ಸಿಜನ್ ಘಟಕಗಳು ಕಾರ್ಯಾರಂಭವಾಗಿದ್ದು,
ಯಾವುದೇ ಕೊರತೆ ಈ ಬಾರಿ ಬಾಧಿಸದು ಎಂಬ ವಿಶ್ವಾಸವಿದೆ. ಅಲ್ಲದೆ
ಆಸ್ಪತ್ರೆಗಳಲ್ಲಿ ಆಕ್ಸಿಜನ್, ವೆಂಟಿಲೇಟರ್, ಮಾನಿಟರ್, ಐಸಿಯುಗಳು, ಆಕ್ಸಿಜನ್
ಕಾನ್ಸ್‍ಂಟರೇಟರ್‍ಗಳು ಸಹ ಎಲ್ಲವೂ ಸಿದ್ಧವಾಗಿವೆ. ಅಗತ್ಯ ಮಾನವ
ಸಂಪನ್ಮೂಲ, ಔಷಧಿಗಳು ಕೂಡ ವ್ಯವಸ್ಥೆಗೊಳಿಸಲಾಗುತ್ತಿದೆ.
ಸದ್ಯ ಜಿಲ್ಲೆಯಲ್ಲಿ ಕಂಡುಬರುವ ವರದಿಯನುಸಾರ ಮುಂದಿನ
ದಿನಗಳಲ್ಲಿ ದಿನಕ್ಕೆ ಒಂದು ಸಾವಿರ ಪ್ರಕರಣಗಳು ಕಂಡುಬರುವ
ಎಲ್ಲ ಸಾಧ್ಯಗಳಿದ್ದು, ಅಧಿಕಾರಿಗಳು ಸಮರೋಪಾದಿಯಲ್ಲಿ ತಮಗೆ
ವಹಿಸಿದ ಜವಾಬ್ದಾರಿಗಳನ್ನು ನಿಭಾಯಿಸಬೇಕು. ತುರ್ತು ಸಂದರ್ಭಕ್ಕಾಗಿ
ಎಎನ್‍ಎಂ ತರಬೇತಿ ಕೇಂದ್ರವನ್ನು ಕೋವಿಡ್ ಕೇರ್ ಸೆಂಟರ್ ಆಗಿ
ಪ್ರಾರಂಭಿಸುವಂತೆ ಸೂಚನೆ ನೀಡಿದರು. ಅಗತ್ಯ ಕಂಡುಬಂದಲ್ಲಿ,
ಕಳೆದ ಬಾರಿಯಂತೆ ಹಾಸ್ಟೆಲ್‍ಗಳನ್ನು ಕೋವಿಡ್ ಕೇರ್
ಸೆಂಟರ್‍ಗಳನ್ನಾಗಿಸಲು ಸಿದ್ಧವಾಗಿರಬೇಕು ಎಂದು ಸೂಚನೆ ನೀಡಿದ
ಜಿಲ್ಲಾಧಿಕಾರಿಗಳು, ವಿವಿಧ ಟ್ರಸ್ಟ್‍ಗಳು, ಚಾರಿಟಿಗಳು, ಸಂಘ
ಸಂಸ್ಥೆಗಳು ಕಳೆದ ಬಾರಿ ಕೋವಿಡ್ ಕೇರ್ ಸೆಂಟರ್‍ಗಳನ್ನು ತೆರೆದು,
ಸಾರ್ವಜನಿಕರಿಗೆ ಸೇವೆ ನೀಡಿದ್ದವು. ಈ ಪೈಕಿ ಕೆಲವರು ಪ್ರಚಾರಕ್ಕಾಗಿ
ಕೆಲಸ ಮಾಡಿ, ಬಳಿಕ ಖರ್ಚಾದ ಹಣವನ್ನು ನೀಡುವಂತೆ ಜಿಲ್ಲಾಡಳಿತಕ್ಕೆ ಬಿಲ್
ಸಲ್ಲಿಸಿದ್ದೂ ಇದೆ. ಸಮಾಜಮುಖಿ ಕೆಲಸ ಮಾಡುವವರನ್ನು ನಾವು
ಬೆಂಬಲಿಸುತ್ತೇವೆ. ಆದರೆ ಪ್ರಚಾರಕ್ಕಾಗಿ ಕೆಲಸ ಮಾಡಿ, ಬಳಿಕ ಹಣ
ನೀಡುವಂತೆ ಜಿಲ್ಲಾಡಳಿತಕ್ಕೆ ಬಿಲ್ ಸಲ್ಲಿಸುವಂತಹವರನ್ನು ಈ ಬಾರಿ
ಯಾವುದೇ ಕಾರಣಕ್ಕೂ ಬೆಂಬಲಿಸಬೇಡಿ ಎಂದು ಜಿಲ್ಲಾಧಿಕಾರಿಗಳು
ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪಾಸಿಟಿವಿಟಿ ಪ್ರಮಾಣ ಏರಿಕೆ : ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ರಾಘವನ್ ಮಾಹಿತಿ
ನೀಡಿ, ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವಿಟಿ ಪ್ರಮಾಣ ಪ್ರಸ್ತುತ ದಿನದಿಂದ
ದಿನಕ್ಕೆ ಏರಿಕೆ ಕಂಡುಬರುತ್ತಿದೆ. ಕಳೆದ ವಾರ 0.16 ಇದ್ದ ಪ್ರಮಾಣ
ಸದ್ಯ ಶೇ. 0.47 ಕ್ಕೆ ಬಂದಿದೆ. ಜಿಲ್ಲೆಯಲ್ಲಿ 77 ಸಕ್ರಿಯ ಕೋವಿಡ್
ಪ್ರಕರಣಗಳಿದ್ದು, 33 ಮಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ
ಪಡೆಯುತ್ತಿದ್ದಾರೆ, ಉಳಿದವರು ರೋಗ ಲಕ್ಷಣ ಇಲ್ಲದ ಕಾರಣ
ಹೋಂ ಐಸೋಲೇಷನ್‍ನಲ್ಲಿದ್ದಾರೆ. ಈವರೆಗೆ ವಿದೇಶಗಳಿಂದ ಜಿಲ್ಲೆಗೆ
196 ಜನ ಬಂದಿದ್ದು, ಅಪಾಯದಂಚಿನ ದೇಶಗಳಿಂದ ಒಟ್ಟು 77 ಜನ
ಆಗಮಿಸಿದ್ದಾರೆ. ಎಲ್ಲ 77 ಜನರ ವರದಿ ನೆಗೆಟಿವ್ ಬಂದಿದೆ. 57 ಜನ
ಕ್ವಾರಂಟೈನ್ ಅವಧಿ ಮುಗಿಸಿದ್ದು, 20 ಜನ ಇನ್ನೂ
ಕ್ವಾರಂಟೈನ್‍ನಲ್ಲಿದ್ದಾರೆ. ಕಳೆದ ಎರಡೂವರೆ ತಿಂಗಳಿನಿಂದ
ಜಿಲ್ಲೆಯಲ್ಲಿ ಕೋವಿಡ್‍ನಿಂದ ಸಾವು ಸಂಭವಿಸಿಲ್ಲ ಎಂದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್, ಅಪರ
ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ, ಜಿ.ಪಂ. ಉಪಕಾರ್ಯದರ್ಶಿ ಆನಂದ್,
ಡಿಹೆಚ್‍ಒ ಡಾ. ನಾಗರಾಜ್, ಜಿಲ್ಲಾ ಆರ್‍ಸಿಹೆಚ್ ಅಧಿಕಾರಿ ಡಾ. ಮೀನಾಕ್ಷಿ ಸೇರಿದಂತೆ
ಆರೋಗ್ಯ ಇಲಾಖೆಯ ಎಲ್ಲ ಅನುಷ್ಠಾನಾಧಿಕಾರಿಗಳು, ತಾಲ್ಲೂಕು
ವೈದ್ಯಾಧಿಕಾರಿಗಳು, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು,
ಖಾಸಗಿ ಮೆಡಿಕಲ್ ಕಾಲೇಜುಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *