ಶಾಶ್ವತ ಪರಿಹಾರ – ಮಹಾಂತೇಶ್ ಬೀಳಗಿ

ಹರಿಹರ ತಾಲ್ಲೂಕು ಚಿಕ್ಕಬಿದರಿ ಗ್ರಾಮಕ್ಕೆ ಸಕ್ಕರೆ ಹಾಗೂ ಡಿಸ್ಟಿಲರಿ
ಕಾರ್ಖಾನೆಗಳಿಂದ ಉಂಟಾಗುವ ಪರಿಸರ ಮಾಲಿನ್ಯ ತಡೆಗೆ
ಕಾರ್ಖಾನೆಯವರು ಹೊಸ ತಂತ್ರಜ್ಞಾನಗಳನ್ನು
ಅಳವಡಿಸಿಕೊಂಡು ಶಾಶ್ವತ ಪರಿಹಾರ ಕಂಡುಕೊಳ್ಳಲು ಜಿಲ್ಲಾಧಿಕಾರಿ
ಮಹಾಂತೇಶ್ ಬೀಳಗಿ ಅವರು ಆಯಾ ಕಾರ್ಖಾನೆಗಳಿಗೆ ಕಾಲಮಿತಿ
ನಿಗದಿಪಡಿಸಿ ಸೂಚನೆ ನೀಡಿದರು.
ಚಿಕ್ಕಬಿದರಿ ಗ್ರಾಮದ ಸುತ್ತಮುತ್ತ ಸಕ್ಕರೆ ಕಾರ್ಖಾನೆ ಹಾಗೂ
ಡಿಸ್ಟಿಲರಿ ಕಾರ್ಖಾನೆಯಿಂದ ಉಂಟಾಗುತ್ತಿರುವ ಪರಿಸರ ಮಾಲಿನ್ಯ
ತಡೆಗಟ್ಟುವ ಕುರಿತಂತೆ ಕಾರ್ಖಾನೆಯವರು, ಪರಿಸರ
ಅಧಿಕಾರಿಗಳು, ಗ್ರಾಮಸ್ಥರೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿ
ಸಭಾಂಗಣದಲ್ಲಿ ಗುರುವಾರ ಏರ್ಪಡಿಸಲಾದ ಸಭೆಯ ಅಧ್ಯಕ್ಷತೆ ವಹಿಸಿ
ಅವರು ಮಾತನಾಡಿದರು.
ಶಾಮನೂರು ಶುಗರ್ಸ್ ಹಾಗೂ ಶ್ಯಾಮ್‍ಸನ್ ಡಿಸ್ಟಿಲರಿ ಕಾರ್ಖಾನೆಯಿಂದ
ಹಾರುಬೂದಿ ಹಾಗೂ ತ್ಯಾಜ್ಯ ನೀರು ಬಿಡುಗಡೆಯ ಕಾರಣದಿಂದಾಗಿ
ಚಿಕ್ಕಬಿದರಿ ಗ್ರಾಮ ವ್ಯಾಪ್ತಿಯಲ್ಲಿ ಗಾಳಿ, ನೀರಿನ ಮಲಿನವಾಗುತ್ತಿದ್ದು, ಜನ
ಜೀವನ ಅಲ್ಲದೆ ಜಾನುವಾರುಗಳಿಗೂ ತೀವ್ರ
ತೊಂದರೆಯಾಗುತ್ತಿದೆ. ಹಾರುಬೂದಿಯಿಂದಾಗಿ ಜಮೀನುಗಳಲ್ಲಿ ಬೆಳೆ
ಸರಿಯಾಗಿ ಆಗುತ್ತಿಲ್ಲ ಎಂಬುದಾಗಿ ಇಲ್ಲಿನ ಗ್ರಾಮಸ್ಥರಿಂದ ಹಲವು
ದೂರುಗಳು ಕೇಳಿಬರುತ್ತಿವೆ. ಹೀಗಾಗಿ ವಿಜಯನಗರ ಜಿಲ್ಲೆ ಹಾಗೂ
ದಾವಣಗೆರೆ ಜಿಲ್ಲೆಯ ಪರಿಸರ ಅಧಿಕಾರಿಗಳು ಕೈಗೊಂಡ
ಕ್ರಮಗಳೇನು ಎಂದು ಜಿಲ್ಲಾಧಿಕಾರಿಗಳು ಪ್ರಶ್ನಿಸಿದರು.
ವಿಜಯನಗರ ಜಿಲ್ಲೆ ಪರಿಸರ ಅಧಿಕಾರಿ ರಾಜು ಅವರು ಮಾತನಾಡಿ,
ಈಗಾಗಲೆ ಎರಡೂ ಕಾರ್ಖಾನೆಗಳಿಗೆ ಮೂರು ಬಾರಿ ಭೇಟಿ ನೀಡಿ ಪರಿಶೀಲನೆ
ನಡೆಸಲಾಗಿದ್ದು, ಮಾಲಿನ್ಯ ತಡೆಗೆ ಕಾರ್ಖಾನೆಗಳು ಕೈಗೊಂಡ
ಕ್ರಮಗಳ ಕುರಿತೂ ತಪಾಸಣೆ ನಡೆಸಲಾಗಿದೆ. ಎರಡೂ
ಕಾರ್ಖಾನೆಗಳಿಂದ ಪರಿಸರ ಮಾಲಿನ್ಯವಾಗುತ್ತಿರುವುದು, ಇಲ್ಲಿನ ಗಾಳಿ
ಹಾಗೂ ಜಲ ಮಾಲಿನ್ಯವಾಗುತ್ತಿರುವುದು ಕಂಡುಬಂದಿದೆ. ಮಾಲಿನ್ಯ
ಪ್ರಮಾಣ ನಿಗದಿತ ಸರಾಸರಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿರುವುದು
ದಾಖಲಾಗಿದೆ. ಡಿಸ್ಟಿಲರಿಯಿಂದ ಮೂರು ಹಂತದಲ್ಲಿ ತ್ಯಾಜ್ಯ ನೀರನ್ನು
ಶುದ್ಧೀಕರಿಸಿ ಹೊಳೆಗೆ ಹರಿಸಬೇಕಿದೆ. ಆದರೆ ಹೊಳೆ ಮತ್ತು ನದಿಗೆ
ಸೇರಿತ್ತಿರುವ ತ್ಯಾಜ್ಯ ನೀರನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು,
ಇಲ್ಲಿಯೂ ಕೂಡ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಜಲ
ಮಾಲೀನ್ಯವಾಗುತ್ತಿರುವುದು ಕಂಡುಬಂದಿದೆ. ಶಿಫಾರಸು

ಕ್ರಮಗಳನ್ನು ಕೈಗೊಳ್ಳಲಿದ್ದಲ್ಲಿ, ಕಾರ್ಖಾನೆ ಮುಚ್ಚುವ
ಎಚ್ಚರಿಕೆ ನೋಟಿಸನ್ನು ಕೂಡ ನೀಡಲಾಗಿದೆ. ಮಾಲಿನ್ಯ ತಡೆಗಟ್ಟಲು
ಹಲವು ಸುಧಾರಣಾ ಕ್ರಮಗಳನ್ನು ಕೈಗೊಳ್ಳುವಂತೆ ಎರಡೂ
ಕಾರ್ಖಾನೆಗಳಿಗೆ ಶಿಫಾರಸು ಮಾಡಲಾಗಿದೆ. ಅಲ್ಲದೆ ಕ್ರಮ
ಕೈಗೊಳ್ಳಲು 03 ತಿಂಗಳು ಗಡುವು ನೀಡಲಾಗಿತ್ತು.
ಕಾರ್ಖಾನೆಗಳು ಕೈಗೊಂಡ ಕ್ರಮಗಳನ್ನು ಪರಿಶೀಲಿಸುವ
ಸಲುವಾಗಿ ಪರಿಸರ ತಜ್ಞರು, ಅಧಿಕಾರಿಗಳನ್ನೊಳಗೊಂಡ
ಸಮಿತಿಯನ್ನು ರಚಿಸಲಾಗಿದ್ದು, ಸಮಿತಿಯು ಒಂದು ವಾರದ ಒಳಗೆ
ಕಾರ್ಖಾನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ವರದಿ ಸಲ್ಲಿಸಲಿದೆ ಎಂದರು.
ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ ಕಾರ್ಖಾನೆಗಳನ್ನು
ಮುಚ್ಚುವುದರಿಂದ ಸಮಸ್ಯೆ ಪರಿಹಾರವಾಗುವುದಿಲ್ಲ. ಇದನ್ನೇ
ನೆಚ್ಚಿಕೊಂಡು ನೂರಾರು ಕುಟುಂಬಗಳು ಜೀವನ ಕಟ್ಟಿಕೊಂಡಿವೆ.
ಆದರೆ ಕಾರ್ಖಾನೆಗಳೂ ಕೂಡ ಜನರ ಬದುಕಿಗೆ ತೊಂದರೆ ಉಂಟು
ಮಾಡುತ್ತಿರುವುದನ್ನೂ ಕೂಡ ಒಪ್ಪಲು ಸಾಧ್ಯವಿಲ್ಲ.
ಕಾರ್ಖಾನೆಗಳು ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು,
ಮಾಲಿನ್ಯ ರಹಿತ ಉದ್ಯಮ ನಡೆಸಬೇಕು. ಪರಿಸರಕ್ಕೆ, ಜನ-
ಜಾನುವಾರುಗಳ ಬದುಕಿಗೆ ಧಕ್ಕೆಯಾಗದ ರೀತಿ
ಕ್ರಮಗಳನ್ನು ಕೈಗೊಳ್ಳಬೇಕು, ಜನರ ಆರೋಗ್ಯ
ಕಾಪಾಡುವುದು ಅತಿಮುಖ್ಯವಾಗಿದ್ದು, ಪರಿಸರ ಇಲಾಖೆ ನೀಡುವ
ಶಿಫಾರಸುಗಳನ್ನು ಚಾಚುತಪ್ಪದೆ ಪಾಲಿಸಿ, ಹೊಸ ತಂತ್ರಜ್ಞಾನ
ಅಳಡಿಸಿಕೊಂಡು, ಪರಿಸರ ಮಾಲಿನ್ಯಕ್ಕೆ ಶಾಶ್ವತ ಪರಿಹಾರ
ಕಂಡುಕೊಳ್ಳಬೇಕು ಎಂದು ತಾಕೀತು ಮಾಡಿದರು.
ಡಿಸ್ಟಲರಿ ಕಾರ್ಖಾನೆಯ ಜನರಲ್ ಮ್ಯಾನೇಜರ್ ಶಿವಕುಮಾರ್
ಮಾತನಾಡಿ, ಕಾರ್ಖಾನೆಯ ಚಿಮಣಿಯಿಂದ ಪರಿಸರ ಸಮಸ್ಯೆ
ಉಂಟಾಗುತ್ತಿದ್ದು, ಪರಿಸರ ಇಲಾಖೆ ಶಿಫಾರಸ್ಸಿನಂತೆ ಹೊಸ
ತಂತ್ರಜ್ಞಾನ ಅಳವಡಿಸಿಕೊಂಡು ಹೊಸ ಚಿಮಣಿ ಸ್ಥಾಪಿಸಲಾಗುತ್ತಿದೆ.
ಇದಕ್ಕಾಗಿ ಅಗತ್ಯವಿರುವ ಶೇ. 80 ರಷ್ಟು ಸಾಮಗ್ರಿಯನ್ನು
ಖರೀದಿಸಲಾಗಿದ್ದು, ಇದರ ಅಳವಡಿಕೆಗೆ ಸಮಯಾವಕಾಶದ ಅಗತ್ಯವಿದೆ
ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ಆಗಸ್ಟ್ 2022
ರವರೆಗೆ ತಮಗೆ ಕಾಲಾವಕಾಶ ನೀಡಲಾಗುವುದು.
ಅಷ್ಟರೊಳಗೆ ಹೊಸ ಚಿಮಣಿ ಸ್ಥಾಪಿಸಿ ಸಮಸ್ಯೆಗೆ ಶಾಶ್ವತ ಪರಿಹಾರ
ಕಂಡುಕೊಳ್ಳಬೇಕು ಎಂದು ಕಾಲಮಿತಿ ನಿಗದಿಪಡಿಸಿದರು. ಅದೇ ರೀತಿ
ಶಾಮನೂರು ಶುಗರ್ಸ್ ಅವರಿಗೂ ಕೂಡ ಜುಲೈ ಒಳಗಾಗಿ ಪರಿಸರ
ಮಾಲಿನ್ಯ ತಡೆಗೆ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು,
ಪರಿಸರ ಇಲಾಖೆಯ ಸೂಚನೆಯಂತೆ ತಾತ್ಕಾಲಿಕವಾಗಿ ಮಲ್ಟಿ
ಸೈಕ್ಲೋನ್ ಡಸ್ಟ್ ಕಲೆಕ್ಟರ್ ಅಳವಡಿಸುವಂತೆ ತಾಕೀತು ಮಾಡಿದರು.
ಇದಕ್ಕೆ ಉಭಯ ಕಾರ್ಖಾನೆಯ ಪ್ರತಿನಿಧಿಗಳು ಸಮ್ಮತಿ
ಸೂಚಿಸಿದರು.
ಅಪರ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ ಅವರು ಮಾತನಾಡಿ,
ಕಾರ್ಖಾನೆಗಳಿಂದ ಚಿಕ್ಕಬಿದರಿ ಗ್ರಾಮದ ಜನಜೀವನದ ಮೇಲೆ
ಗಂಭೀರ ಪರಿಣಾಮ ಬೀರಿರುವುದು ದೃಢವಾಗಿದೆ. ಜನರ
ಬದುಕನ್ನು ಕಸಿದುಕೊಳ್ಳುವ ಹಕ್ಕು ಯಾರಿಗೂ ಇಲ್ಲ.
ದುಡಿಯುವ ಶಕ್ತಿಯೇ ಇಲ್ಲವೆಂದ ಮೇಲೆ ಉದ್ಯೋಗ
ಇಟ್ಟುಕೊಂಡು ಗ್ರಾಮಸ್ಥರು ಏನು ಮಾಡಬೇಕು. ವಿಜಯನಗರ
ಹಾಗೂ ದಾವಣಗೆರೆ ಜಿಲ್ಲೆಯ ಪರಿಸರ ಅಧಿಕಾರಿಗಳು, ಮುಂದಿನವಾರ
ಕಾರ್ಖಾನೆ ಸ್ಥಳಗಳಿಗೆ ಭೇಟಿ ನೀಡಿ, ಸಮಗ್ರ ಪರಿಶೀಲನೆ ನಡೆಸಿ,
ವೈಜ್ಞಾನಿಕ ಆಧಾರದಲ್ಲಿ ವಸ್ತುನಿಷ್ಠ ವರದಿ ಸಲ್ಲಿಸಬೇಕು ಎಂದು
ಸೂಚಿಸಿದರು.
ಸಭೆಯಲ್ಲಿ ಭಾಗವಹಿಸಿದ್ದ ಗ್ರಾಮ ಪಂಚಾಯಿತಿ ಸದಸ್ಯ
ಮಹಾಂತೇಶ್ ಹೆಚ್.ಬಿ. ಮಾತನಾಡಿ ಫ್ಯಾಕ್ಟರಿಯಿಂದ 1 ಕಿಮೀ

ಅಂತರದಲ್ಲಿರುವ ಚಿಕ್ಕಬಿದರಿಯಲ್ಲಿ ಜೀವನ ನಡೆಸಲು ಆಗುತ್ತಿಲ್ಲ.
ಫ್ಯಾಕ್ಟರಿಯಿಂದ ಬರುತ್ತಿರುವ ಧೂಳಿನಿಂದ ಊಟ ನೀರು ಸೇವಿಸಲು
ಆಗುತ್ತಿಲ್ಲ, ಬೆಳೆದ ಬೆಳೆಗಳು ಸರಿಯಾದ ಫಸಲು ನೀಡುತ್ತಿಲ್ಲ,
ಮುಂದಿನ ಪೀಳಿಗೆಗೆ ಅನುಕೂಲವಾಗುವಂತೆ ಶಾಶ್ವತ ಪರಿಹಾರ ರೂಪಿಸಿ
ಎಂದು ತಮ್ಮ  ಅಳಲನ್ನು ಹಂಚಿಕೊಂಡರು.
     ಮತ್ತೊಬ್ಬ ಗ್ರಾಮಸ್ಥ ಬಸಪ್ಪ ಮಾತನಾಡಿ ಇಪ್ಪತ್ತು
ವರ್ಷಗಳಿಂದಲೂ ಈ ಸಮಸ್ಯೆ ಅನುಭವಿಸುತ್ತಿದ್ದೇವೆ ಇಲ್ಲಿನ ಮಕ್ಕಳ
ಹಾಗೂ ವೃದ್ದರ ಆರೋಗ್ಯ ಹದಗೆಡುತ್ತಿದೆ. ಕಾರ್ಖಾನೆ
ಮುಚ್ಚುವ ಉದ್ದೇಶ ನಮ್ಮದಲ್ಲ ಆದರೆ, ಸರಿಯಾದ ಪರಿಹಾರ ಒದಗಿಸಿ
ಹಾಗೂ ರೈತರಿಗೂ ತೊಂದರೆ ಆಗದಂತೆ ಸೂಕ್ತ ಕ್ರಮ
ಕೈಗೊಳ್ಳಿ ಎಂದು ಮನವಿ ಮಾಡಿಕೊಂಡರು.
     ಹಾಲೇಶ್ ಜಿ ಮಾತನಾಡಿ ಪ್ರಾಣಿಗಳು ಸಹ ಬದುಕುವುದು
ಕಷ್ಟಕರವಾಗಿದೆ, ಕಾರ್ಖಾನೆಯ ಕಲುಷಿತ ನೀರು ಸೇವಿಸಿ ಎಮ್ಮೆ, ಕುರಿ,
ಆಡು, ಎತ್ತುಗಳು ಸೇರಿದಂತೆ ಅನೇಕ ಪ್ರಾಣಿಗಳು ಜೀವ ಬಿಟ್ಟಿವೆ. 10
ಎಕರೆಯಲ್ಲಿ ಬೆಳೆದ ಕರಿಬೇವು ಈ ಬಾರಿ ಕಾರ್ಖಾನೆಯ ಬೂದಿಯಿಂದ
ಮಾರಾಟವಾಗಿಲ್ಲ, ಬೂದಿ ನಿಲ್ಲಿಸುವಂತೆ ಕಾರ್ಖಾನೆಯವರಿಗೆ ಸಾಕಷ್ಟು ಬಾರಿ
ಮನವಿ ಮಾಡಿಕೊಂಡರು ಯಾವುದೇ ಪ್ರಯೋಜನವಾಗಿಲ್ಲ
ಎಂದರು.
ಸ್ವಾಮಿ ಅವರು ಮಾತನಾಡಿ, ಕಾರ್ಖಾನೆಗಳು ನಿಯಮ ಹಾಗೂ
ಕಾನೂನು ಬದ್ಧವಾಗಿ, ನಿಗದಿತ ಮಾರ್ಗಸೂಚಿ ಅನುಸರಿಸಿ ನಡೆಸಬೇಕು.
ಆದರೆ ಸಕ್ಕರೆ ಮತ್ತು ಡಿಸ್ಟಿಲರಿ ಕಾರ್ಖಾನೆಗಳಿಂದ ಇದು ಆಗುತ್ತಿಲ್ಲ
ಎಂದು ಆರೋಪಿಸಿದರು.
     ಮಾರುತಿ ಮಾತನಾಡಿ  ಯಾವುದೇ ಒಂದು ಊರಿಗೆ ಕಾರ್ಖಾನೆ ಬಂದರೆ
ಜನರಿಗೆ ಉದ್ಯೋಗ ದೊರೆಯವ ಜೊತೆಗೆ ಜೀವನಕ್ಕೆ ಭದ್ರತೆ
ಸಿಗುತ್ತದೆ. ಆದರೆ ನಮ್ಮೂರಿನ ಕಾರ್ಖಾನೆಯಿಂದ ಬರೀ ಅನಾರೋಗ್ಯದ
ಸಮಸ್ಯೆ ಕಾಡುತ್ತಿದೆ, ಶಾಲೆಯ ಬಿಸಿ ಊಟದ ಸಮಯದಲ್ಲಿ ಮಕ್ಕಳ
ತಟ್ಟೆಯಲ್ಲಿ ಬೂದಿ ಬೀಳುತ್ತಿದೆ, ಕಾರ್ಖಾನೆಯಿಂದ ಹೊರ ಬರುವ
ಕಲುಷಿತ ನೀರು ಶುದ್ದೀಕರಿಸದೇ ಹಳ್ಳ-ಕೊಳ್ಳಗಳ ಮಾರ್ಗದಿಂದ
ರೈತರ ಹೊಲದಲ್ಲಿ ಶೇಖರಣೆಯಾಗುತ್ತಿದ್ದು ರೈತರ
ಭೂಮಿಗಳು ಬಂಜರು ಭೂಮಿಯಾಗುತ್ತಿವೆÉ ಇಲ್ಲಿನ ಕಾರ್ಖಾನೆ
ಮಾಲೀಕರು ತಾತ್ಸರ ಮನೋಭಾವ ತೋರುತ್ತಿದ್ದಾರೆ ಕಾರ್ಖಾನೆ
 ಸ್ಥಾಪನೆಯಾಗಿ ಕಳೆದ 20 ವರ್ಷಗಳು ಕಳೆದರು ಇದೇ ಸಮಸ್ಯೆ
ಕಾಡುತ್ತಿದೆ ಎಂದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್, ಅಪರ
ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ, ಉಪವಿಭಾಗಾಧಿಕಾರಿ ಮಮತಾ
ಹೊಸಗೌಡರ್, ಡಿಹೆಚ್‍ಒ ಡಾ. ನಾಗರಾಜ್, ಮಹಿಳಾ ಮತ್ತು ಮಕ್ಕಳ
ಅಭಿವೃದ್ಧಿ ಇಲಾಖೆ ವಿಜಯಕುಮಾರ್, ಸೇರಿದಂತೆ ಹರಪನಹಳ್ಳಿ
ತಾಲ್ಲೂಕು ತಹಸಿಲ್ದಾರ್, ಹರಿಹರ ತಹಸಿಲ್ದಾರ್, ತಾ.ಪಂ.
ಕಾರ್ಯನಿರ್ವಾಹಕ ಅಧಿಕಾರಿಗಳು, ಪೊಲೀಸ್ ಇಲಾಖೆ ಅಧಿಕಾರಿಗಳು
ಅಲ್ಲದೆ ಚಿಕ್ಕಬಿದರಿ ಗ್ರಾಮಸ್ಥರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *