ಸಾಗರ ಜೂನ್ 10
ಅಭಿವೃದ್ಧಿ ಜಗತ್ತಿನ ಎಲ್ಲಾ ಜೀವರಾಶಿಗಳ ಮೂಲ ಸ್ರೋತವಾಗಿದೆ. ಅಭಿವೃದ್ಧಿ ಎಂದರೆ ಕೇವಲ ಬಹಿರಂಗದ ಅಭಿವೃದ್ಧಿಯಷ್ಟೇ ಅಲ್ಲದೆ ಅದು ಆಂತರಂಗದ ಅಭಿವೃದ್ಧಿಯೂ ಆಗಿರಬೇಕಾಗುತ್ತದೆ ಎಂದು ಜಡೆ ಹಿರೇಮಠ ಹಾಗೂ ಸೊರಬ ಕಾನುಕೇರಿ ಮಠದ ಘನಬಸವ ಅಮರೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.

ಅವರು ಸಾಗರ ಪಟ್ಟಣದ ಸಮೀಪ ಐತಿಹಾಸಿಕ ಇಕ್ಕೇರಿಯಲ್ಲಿ ಗಂಡಗರ್ತಿ ಬಸವೇಶ್ವರ ದೇವಾಲಯದ ಪುನಃಪ್ರತಿಷ್ಟೆಯನ್ನು ನೆರವೇರಿಸಿ ಆಶೀರ್ವಚನ ನೀಡುತ್ತಿದ್ದರು.

ದೇವಾಲಯಗಳಲ್ಲಿನ ದೇವರ ಮೂರ್ತಿಯನ್ನು ಪ್ರತಿಷ್ಟಾಪಿಸುತ್ತಾರೆ. ಅದಕ್ಕೆ ನಿತ್ಯವೋ ಅಥವಾ ನೈಮಿತ್ತಿಕವೋ ಪೂಜೆಯನ್ನು ಮಾಡುತ್ತಾರೆ. ಇದು ಪ್ರತಿಯೊಬ್ಬರೂ ಮಾಡುವ ಕೆಲಸವಾಗಿದೆ. ಆದರೆ ಇದನ್ನಷ್ಟೆ ಭಾರತೀಯ ಪರಂಪರೆಯಲ್ಲಿ ಹೇಳಿಲ್ಲ. ದೇವರನ್ನು ಅರ್ಚಿಸುವ ಪ್ರತಿಯೊಬ್ಬರೂ ದೇವರಂತೆಯೇ ಆಗಬೇಕು. ನನ್ನನ್ನು ಪೂಜಿಸುವ ಭಕ್ತನು ನನ್ನಂತೆಯೇ ಆಗಬೇಕೆಂಬುದು ಭಗವಂತನ ಆಶಯವಾಗಿದೆ.

ಭಗವಂತ ಎಂದರೆ ಐಶ್ವರ್ಯ, ಸಮಗ್ರತೆ, ಜ್ಞಾನ, ಯಶಸ್ಸು, ವೈರಾಗ್ಯ ಮತ್ತು ಧರ್ಮ ಈ ಆರು ಗುಣಗಳನ್ನು ಭಗ ಎಂದು ಕರೆಯುತ್ತಾರೆ. ಇದಕ್ಕೆ ಅನ್ ಪ್ರತ್ಯಯ ಸೇರಿದಾಗ ಭಗವಂತ ಎಂಬ ಸಂಸ್ಕೃತ ಶಬ್ಧ ಉತ್ಪತ್ತಿಯಾಗುತ್ತದೆ. ಹೇಗೆ ಭಗವಂತನಲ್ಲಿ ಈ ಆರೂ ಗುಣಗಳು ಇವೆಯೋ ಹಾಗೆಯೇ ಭಗವಂತ ನನ್ನು ಅರ್ಚಿಸುವ ಹಾಗೂ ಆರಾಧಿಸುವ ಎಲ್ಲರೂ ಈ ಆರೂ ಗುಣಗಳನ್ನು ಅನುಸರಿಸಬೇಕು.

ಅದನ್ನೆ ನಾನು ಆರೆಂದು ವಿಚಾರಿಸು ಎಂದು ಹೇಳಿರುವದು. ಉಪನಿಷತ್ತಿನ ಅಹಂ ಬ್ರಹ್ಮಾಸ್ಮಿಯೂ ಇದೆ ಸಾರವನ್ನು ಭೋಧಿಸುತ್ತದೆ. ಗಂಡುಗರ್ತಿ ಬಸವೇಶ್ವರ ನನ್ನು ಆರಾಧಿಸುವವರಿಗೆ ಗಂಡು ಫಲ ಸಿಗುತ್ತದೆ. ಗಂಡು ಎಂದರೆ ಬಲ, ಶಕ್ತಿ ಯಾಗಿದೆ. ಯಾರುಯಾರಿಗೆ ಬದುಕಿನಲ್ಲಿ ಯಶಸ್ಸುಅಥವಾ ಬಲ ಬೇಕಾಗಿದೆಯೊ ಅವರು ಈ ದೇವರಲ್ಲಿ ಪ್ರಾರ್ಥನೆ ಸಲ್ಲಿಸಬೇಕು.

ದೇವ – ಮಂದಿರಗಳು ಶಾರೀರಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡುವದಲ್ಲದೆ ಮನುಷ್ಯನಿಗೆ ಮಾನವೀಯ ಮೌಲ್ಯಗಳ ಪಾಲನೆಗೆ ಪ್ರೇರಣೆ ನೀಡುತ್ತವೆ. ಮುಂದಿನ ಪೀಳಿಗೆಯೂ ಇಂತಹ ಧರ್ಮಕಾರ್ಯಗಳನ್ನು ಮುಂದುವರೆಸಿಕೊಂಡು ಹೋಗಬೇಕೆಂದು ಸಲಹೆ ಇತ್ತರು.

ಸಾಗರದ ಉಡುಚಾಣದ ಪರಿವಾರದವರು ಸಂಪೂರ್ಣ ಉಸ್ತುವಾರಿ ಹಾಗೂ ಜವಾಬ್ದಾರಿಯೊಂದಿಗೆ ನಡೆದ ಪುನಃ ಪ್ರತಿಷ್ಟಾ ಕಾರ್ಯಕ್ರಮದ ಕರ್ಣಧಾರತ್ವವನ್ನು ಸಾಗರದ ಕೊಟ್ರೇಶಯ್ಯ ಶಾಸ್ತ್ರಿಗಳು ವಹಿಸಿದ್ದರು. ಇಕ್ಕೇರಿ ಅಘೋರೇಶ್ವರ ದೇವಾಲಯದ ಪ್ರಧಾನ ಅರ್ಚಕರಾದಿಯಾಗಿ ನಗರದ ಹಾಗೂ ಗ್ರಾಮದ ಸಕಲ ಸದ್ಭಕ್ತರು ಪಾಲ್ಗೊಂಡು ಪುಣ್ಯಶಾಲಿಗಳಾದರು.ಹುಬ್ಬಳ್ಳಿಯ ಹಿರಿಯ ವೈದ್ಯರಾದ ಡಾ ವಾಲಿ ದಂಪತಿಗಳನ್ನು ಸನ್ಮಾನಿಸಲಾಯಿತು. ಉಡುಚಾಣದ ಕುಟುಂಬದ ಸಿದ್ಧಲಿಂಗೇಶ್ವರ ಸಂಗಮೇಶ್ವರ, ಬಸವೇಶ್ವರ, ಡಾ ವಾಲಿ ದಂಪತಿಗಳು, ಸಿದ್ಧಲಿಂಗೇಶ್ವರ, ಹಾಗೂ ಸರ್ವ ಸಮಾಜದ ಮುಖಂಡರು ಸದ್ಭಕ್ತರೂ ಹಾಜರಿದ್ದರು. ಕಾರ್ಯಕ್ರಮದ ನಂತರ ಮಹಾಪ್ರಸಾದ ವಿತರಿಸಲಾಯಿತು.

Leave a Reply

Your email address will not be published. Required fields are marked *