ಹೊನ್ನಾಳಿ : ಕಳೆದೊಂದು ವಾರದಿಂದ ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನಾದ್ಯಂತ ಸುರಿಯುತ್ತಿರುವ ಮಳೆಯಿಂದಾಗಿ ಸಾಕಷ್ಟು ಬೆಳೆಗಳಿಗೆ ಹಾನಿಯಾಗಿದ್ದು ಅಧಿಕಾರಿಗಳಿಗೆ ಜಂಟಿ ಸರ್ವೇ ಮಾಡಲು ಸೂಚನೆ ನೀಡಿದ್ದು,ಇನ್ನೇರಡು ದಿನಗಳಲ್ಲಿ ಬೆಳೆಹಾನಿಯ ಸಮಗ್ರ ಮಾಹಿತಿ ಲಭ್ಯವಾಗಲಿದೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ತಾಲೂಕಿನ ದೊಡ್ಡೇರಹಳ್ಳಿ, ಹತ್ತೂರು, ಮಾದೇನಹಳ್ಳಿ ಗ್ರಾಮಗಳ ಬೆಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು.
ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನಾದ್ಯಂತ 21 ಸಾವಿರ ಹೆಕ್ಟೇರ್ ಮೆಕ್ಕೆಜೋಳ,1200 ಹೆಕ್ಟೇರ್ ಹತ್ತಿ, 780 ಹೆಕ್ಟೇರ್ ಶೇಂಗಾ, 100 ಹೆಕ್ಟೇರ್ ತೊಗರಿ, ಒಂದು ಸಾವಿರ ಹೆಕ್ಟೇರ್ ನಲ್ಲಿ ಇತರ ಬೆಳೆಗಳನ್ನು ಬಿತ್ತನೆ ಮಾಡಲಾಗಿದ್ದು, ಅತಿಯಾದ ಮಳೆಯಿಂದ ಸಾಕಷ್ಟು ಬೆಳೆಗಳಿಗೆ ಹಾನಿಯಾಗಿದ್ದು ಈಗಾಗಲೇ ಅಧಿಕಾರಿಗಳಿಗೆ ಜಂಟಿ ಸರ್ವೇ ಮಾಡಲು ಸೂಚಿಸಿದ್ದೇನೆಂದರು.
ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನಾಧ್ಯಂತ 9 ಮನೆಗಳಿಗೆ ತೀರ್ವಹಾನಿಯಾಗಿದ್ದು, 39 ಮನೆಗಳಿಗೆ ಭಾಗಶಃ ಹಾನಿಯಾಗಿದ್ದು, ಇನ್ನು ಸಾಕಷ್ಟು ಮನೆಗಳಿಗೆ ಹಾನಿಯಾಗಿದ್ದು ಈ ಬಗ್ಗೆ ಸಮಗ್ರ ವರದಿ ನೀಡಲು ಅಧಿಕಾರಿಗಳಿಗೆ ಸೂಚಿಸಿದ್ದೇನೆಂದರು.
ಈಗಾಗಲೇ ಹೊನ್ನಾಳಿ ನಗರದ ಬಾಲರಾಜ್ ಘಾಟ್‍ನಲ್ಲಿ ಕಾಳಜಿ ಕೇಂದ್ರ ತೆರೆದಿದ್ದು 23 ಕುಟುಂಬಗಳ 111 ಜನರಿಗೆ ಅಲ್ಲಿ ವಸತಿ ಕಲ್ಪಿಸಲಾಗಿದ್ದು, ಮನೆಗಳಿಗೆ ನೀರು ನುಗ್ಗಿದ 13 ಕುಟುಂಬಗಳಿಗೆ ತಲಾ ಹತ್ತು ಸಾವಿರದ ಚೆಕ್‍ಗಳನ್ನು ವಿತರಿಸಲಾಗಿದೆ ಎಂದರು.
ಇನ್ನು ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನಲ್ಲಿ ಮೂರು ಕಡೆ ಕಾಳಜಿ ಕೇಂದ್ರ ತೆರೆಯಲು ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಿದ್ದು ಈಗಾಗಲೇ ಸಖಲ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದರು.
ತುಂಗಭದ್ರಾ ನದಿಯು ಅಪಾಯಮಟ್ಟ 11 ಮೀಟರ್ ಇದ್ದು ಪ್ರಸ್ತುತ 10.09 ಮೀಟರ್ ಇದ್ದು ನದಿಯಲ್ಲಿ ನೀರಿನ ಪ್ರಮಾಣ ತಗ್ಗಿದೇಯಾದರೂ ನದಿ ಪಾತ್ರದ ಹಳ್ಳಿಯ ಜನರು ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಿದರು.
ಹೊನ್ನಾಳಿ ತಾಲೂಕಿನಲ್ಲಿ 248.3 ಮಿಮೀ ವಾಡಿಕೆ ಮಳೆಯಿದ್ದು, 585.5 ಮಿಮೀ ನಷ್ಟು ಮಳೆಯಾಗಿದ್ದು 136 ರಷ್ಟು ಅಧಿಕ ಮಳೆಯಾಗಿದ್ದರೇ, ನ್ಯಾಮತಿ ತಾಲೂಕಿನಲ್ಲಿ 303.2 ಮಿಮೀ ವಾಡಿಕೆ ಮಳೆ ಇದ್ದು, 653.7 ಮಿಮೀ ಮಳೆಯಾಗಿದ್ದು, 94 ರಷ್ಟು ಅಧಿಕ ಮಳೆಯಾಗಿದೆ ಎಂದು ಶಾಸಕರು ಮಾಹಿತಿ ನೀಡಿದರು.
ಅವಳಿ ತಾಲೂಕಿನಲ್ಲಿ ನಿರಂತರವಾಗಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ನಾನು ಚಿಂತನ ಸಭೆಗೆ ಗೈರಾಗಿದ್ದೇನೆಂದ ಶಾಸಕರು, ಮುಖ್ಯಮಂತ್ರಿಗಳು ಹಾಗೂ ರಾಜ್ಯಾಧ್ಯಕ್ಷರಿಗೆ ಅವಳಿ ತಾಲೂಕಿನ ಚಿತ್ರಣವನ್ನು ಹೇಳಿ ಅವರಿಗೆ ಅನುಮತಿ ಪಡೆದಿದ್ದು, ನನಗೆ ಭಾನುವಾರದ ಸಂಜೆವರೆಗೆ ವಿನಾಯಿತಿ ನೀಡಿದ್ದಾರೆಂದರು.
ಕಳೆದೊಂದು ವಾರದಿಂದ ಅವಳಿ ತಾಲೂಕಿನಾಧ್ಯಂತ ರಾತ್ರಿ ಹಗಲು ಎನ್ನದೇ ಮಳೆಹಾನಿ ಪರಿಶೀಲನೆ ನಡೆಸುವುದರ ಜೊತೆಗೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅಧಿಕಾರಿಗಳು ರಜೆ ಹಾಕದೇ ಮಳೆ ಹಾನಿಯ ಬಗ್ಗೆ ಸಮಗ್ರ ಮಾಹಿತಿ ಪಡೆಯುವಂತೆ ಕಟ್ಟು ನಿಟ್ಟಿನ ಸೂಚನೆ ನೀಡಿದ್ದೇನೆಂದ ಶಾಸಕರು, ಹಾನಿಗೊಳದವರಿಗೆ ಸರ್ಕಾರದಿಂದ ಸೂಕ್ತ ಪರಿಹಾರ ಕೊಡಿಸುವ ಬರವಸೆ ನೀಡಿದರು.
ಈ ಸಂದರ್ಭ ತಹಶೀಲ್ದಾರ್ ರಶ್ಮಿ, ಕೃಷಿ ಅಧಿಕಾರಿ ಪ್ರತಿಮಾ, ಗ್ರಾ.ಪಂ.ಅಧ್ಯಕ್ಷರಾದ ಕುಬೇರಪ್ಪ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳಿದ್ದರು.